ಮುಖ್ಯಮಂತ್ರಿಯಾದ ಬಳಿಕ ‘ದಳಪತಿ’ ವಿಜಯ್​ಗೆ ಮೊದಲ ಜನ್ಮದಿನ; ನಟನ ಆಸ್ತಿ ಎಷ್ಟು? – Kannada News | CM Vijay’s Birthday: From Kollywood Star to Political Powerhouse, Net Worth and Lavish Lifestyle

ಕಾಲಿವುಡ್ ಚಿತ್ರರಂಗದಲ್ಲಿ ಅಧಿಪತ್ಯ ಸ್ಥಾಪಿಸಿ, ಇತ್ತೀಚೆಗಷ್ಟೇ ತಮಿಳುನಾಡಿನ ಗದ್ದುಗೆ ಏರಿದ ಜನಪ್ರಿಯ ನಟ, ಪ್ರಸ್ತುತ ಸಿಎಂ ವಿಜಯ್ ಅವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿರುವುದರಿಂದ ಇಡೀ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಇದೇ ಸುದಿನದ ಅಂಗವಾಗಿ ‘ಜನ ನಾಯಗನ್’ ರಿಲೀಸ್ ಬಗ್ಗೆ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಗಳಿಕೆಯಲ್ಲಿ ವಿಜಯ್ ನಂಬರ್ ಒನ್

ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಡಿಮ್ಯಾಂಡ್ ಹೊಂದಿರುವ ಅಗ್ರ ಐದು ತಾರೆಯರ ಪಟ್ಟಿಯಲ್ಲಿ ವಿಜಯ್ ಮುಂಚೂಣಿಯಲ್ಲಿದ್ದಾರೆ. ವರ್ಷಕ್ಕೆ ಕೇವಲ ಒಂದೆರಡು ಪ್ರಾಜೆಕ್ಟ್‌ಗಳಿಗೆ ಮಾತ್ರ ಸಹಿ ಹಾಕುವ ಇವರು, ಪ್ರತಿ ಸಿನಿಮಾಗೆ ನೂರು ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಚಾರ್ಜ್ ಮಾಡುತ್ತಾರೆ. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವುದು ಇವರಿಗೆ ಸಲೀಸಾಗಿದ್ದು, ನಿರ್ಮಾಪಕರು ಕೂಡ ಇವರ ತಾರಾಮೌಲ್ಯಕ್ಕೆ ತಕ್ಕಂತೆ ಹಣ ಹೂಡಲು ಹಿಂದೆಮುಂದೆ ನೋಡುವುದಿಲ್ಲ.

ಸದ್ಯದ ಲೆಕ್ಕಾಚಾರಗಳ ಪ್ರಕಾರ ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 500 ಕೋಟಿ ರೂಪಾಯಿಗಳನ್ನು ದಾಟುತ್ತದೆ. ಕೇವಲ ಬಣ್ಣದ ಪ್ರಪಂಚ ಮಾತ್ರವಲ್ಲದೆ ಬೇರೆ ಬೇರೆ ಬಿಸಿನೆಸ್‌ಗಳಲ್ಲೂ ಹೂಡಿಕೆ ಮಾಡಿರುವ ಇವರ ವಾರ್ಷಿಕ ಸಂಪಾದನೆ 300 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ. ತಾವು ಗಳಿಸುವ ಕೋಟ್ಯಂತರ ರೂಪಾಯಿಗಳಲ್ಲಿ ದೊಡ್ಡ ಮೊತ್ತವನ್ನು ಸಾಮಾಜಿಕ ಸೇವೆಗಳಿಗಾಗಿ ವಿನಿಯೋಗಿಸುತ್ತಾರೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ನಿಧಿ ಸ್ಥಾಪಿಸಿರುವ ಇವರು, ಅಂಗವಿಕಲ ಹಾಗೂ ಪ್ರತಿಭಾವಂತ ಮಕ್ಕಳಿಗೆ ಆಸರೆಯಾಗಿದ್ದಾರೆ. ಜನರ ಮೇಲಿರುವ ಇದೇ ಕಾಳಜಿ ಇಂದು ಅವರನ್ನು ಸಿಎಂ ಕುರ್ಚಿಯವರೆಗೆ ತಂದು ನಿಲ್ಲಿಸಿದೆ.

ಗ್ಯಾರೇಜ್‌ನಲ್ಲಿವೆ ದುಬಾರಿ ಕಾರುಗಳು

ವೈಯಕ್ತಿಕ ಜೀವನದಲ್ಲಿ ಸಾದಾಸೀದಾ ಉಡುಪು ಧರಿಸಿ, ಸರಳ ಊಟ ಇಷ್ಟಪಡುವ ವಿಜಯ್ ಅವರಿಗೆ ಐಷಾರಾಮಿ ಕಾರುಗಳ ಕ್ರೇಜ್ ಹೆಚ್ಚಿದೆ. ಇವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್, ಬಿಎಂಡಬ್ಲು 5 ಸೀರೀಸ್, ಫೋರ್ಡ್ ಮಸ್ತಾಂಗ್ ಹಾಗೂ ಆಡಿ ಎ8 ನಂತಹ ಅತ್ಯಂತ ದುಬಾರಿ ಬ್ರ್ಯಾಂಡ್‌ಗಳ ಕಾರುಗಳಿವೆ. ಈ ಹಿಂದೆ ಇವರ ರೋಲ್ಸ್ ರಾಯ್ಸ್ ಕಾರಿನ ತೆರಿಗೆ ವಿನಾಯಿತಿ ವಿಚಾರದಲ್ಲಿ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು ಭಾರಿ ಚರ್ಚೆಯಾಗಿತ್ತು. ಇದರ ಜೊತೆಗೆ ಬಿಎಂಡಬ್ಲು 7 ಸೀರೀಸ್, ಎಕ್ಸ್ 6, ಬೆಂಜ್ ಜಿಎಲ್‌ಎ, ವೋಲ್ವೋ ಎಕ್ಸ್‌ಸಿ 90 ಹಾಗೂ ಇನ್ನೋವಾ ವೆಲ್‌ಫೈರ್ ವಾಹನಗಳೂ ಇವರ ಬಳಿ ಇವೆ.

ಚೆನ್ನೈನಲ್ಲಿದೆ ಹಾಲಿವುಡ್ ಶೈಲಿಯ ಬಂಗ್ಲೆ

ಚೆನ್ನೈನ ಕಾಸುವರೈನ್ ಡ್ರೈವ್ ರಸ್ತೆಯಲ್ಲಿ ವಿಜಯ್ ಅವರಿಗೆ ಸೇರಿದ ಸುಂದರವಾದ ಸಮುದ್ರ ತೀರದ ಬಂಗ್ಲೆ ಇದೆ. ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರ ಬೀಚ್ ಸೈಡ್ ಮನೆಯಿಂದ ಪ್ರೇರಣೆ ಪಡೆದು ವಿಜಯ್ ಈ ಐಷಾರಾಮಿ ನಿವಾಸವನ್ನು ವಿನ್ಯಾಸಗೊಳಿಸಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲೂ ಭಾರಿ ಹೂಡಿಕೆ ಮಾಡಿರುವ ಇವರ ಇದೇ ನಿವಾಸದ ಮೇಲೆ 2020ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮಾಡಲು ಬಿಡಲ್ಲ: ವಾಟಾಳ್ ಕ್ಯಾತೆ

‘ಜನ ನಾಯಗನ್’ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ತಮ್ಮ ನೆಚ್ಚಿನ ನಟ ಹಾಗೂ ಪ್ರೀತಿಯ ಮುಖ್ಯಮಂತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರದ ಹೊಸ ಅಪ್‌ಡೇಟ್ ನೋಡಲು ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ – Kannada News | Monsoon Failure Hits North Karnataka: Farmers Stressed over Crop Damage, Water Crisis Grips Gadag Village

ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆಯು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಮಳೆಗಾಲ ಆರಂಭವಾಗಿ 15 ದಿನಗಳೇ ಕಳೆದರೂ ವಾಡಿಕೆಯಂತೆ ಮಳೆಯಾಗದೆ, ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಬಾಗಲಕೋಟೆ, ಧಾರವಾಡ, ವಿಜಯಪುರ ಮತ್ತು ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಆಕಾಶ ನೋಡುವಂತಾಗಿದೆ.

ಇದರ ಜೊತೆಗೆ, ಗದಗ ತಾಲೂಕಿನ ತಗಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೂವತ್ತಕ್ಕೂ ಹೆಚ್ಚು ಮನೆಗಳಿರುವ ಈ ಪುಟ್ಟ ಗ್ರಾಮಕ್ಕೆ ಒಂದೇ ಬೋರ್‌ವೆಲ್ ಆಸರೆಯಾಗಿದೆ. ಆದರೆ, ಈ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು, ಇದನ್ನು ಕುಡಿಯಲು ಮಕ್ಕಳು ಮತ್ತು ವೃದ್ಧರು ಅನಾರೋಗ್ಯಕ್ಕೆ ತುತ್ತಾಗುವ ಆತಂಕವಿದೆ. ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮನೆ ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯೂ ಇಲ್ಲಿ ಜಾರಿಯಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಈ ಎರಡು ಜಲಸಂಕಷ್ಟಗಳನ್ನು ನಿವಾರಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ – Kannada News | Qatar Gas Plant Blast: 54 Injured, 18 Missing at Ras Laffan; Global Energy Market Impact Feared

ದೋಹಾ, ಜೂನ್ 22: ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ರಫ್ತು ರಾಷ್ಟ್ರವಾದ ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಅನಿಲ ಸ್ಥಾವರ(Gas Plant)ದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಥಾವರದಲ್ಲಿ ಹೊಸ ಕಾರ್ಯಾಚರಣೆ ಆರಂಭವಾಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಕನಿಷ್ಠ 54 ಜನರು ಗಾಯಗೊಂಡಿದ್ದಾರೆ ಹಾಗೂ 18 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಘಟನೆ ನಡೆದ ತಕ್ಷಣವೇ ಉನ್ನತ ಮಟ್ಟದ ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಸದ್ಯ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಬರ್ಜಾನ್ ಕಾರ್ಖಾನೆಯಲ್ಲಿ ಕೆಲಸ ಆರಂಭವಾಗುತ್ತಿದ್ದಂತೆಯೇ ಈ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ ‘ಕತಾರ್ ಎನರ್ಜಿ’ ಸಂಸ್ಥೆ ಅಧಿಕೃತವಾಗಿ ದೃಢಪಡಿಸಿದೆ.

ಸ್ಫೋಟದ ತೀವ್ರತೆಗೆ ಸಿಲುಕಿ ನಾಪತ್ತೆಯಾಗಿರುವ 18 ಜನರಿಗಾಗಿ ಅವಶೇಷಗಳ ನಡುವೆ ತೀವ್ರ ಹುಡುಕಾಟ ಮುಂದುವರೆದಿದೆ. ಸ್ಫೋಟಕ್ಕೆ ನಿಖರವಾದ ಕಾರಣವೇನೆಂಬುದನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ತಾಂತ್ರಿಕ ದೋಷವೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಮತ್ತಷ್ಟು ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಜಾಗತಿಕ ಇಂಧನ ಮಾರುಕಟ್ಟೆಗೆ ಹೊಸ ಆತಂಕ?
ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಭೀತಿ: ಹಾರ್ಮುಜ್ ಜಲಸಂಧಿಯ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಇತ್ತೀಚೆಗಷ್ಟೇ ಕತಾರ್ ತನ್ನ ಗ್ಯಾಸ್ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ಪರಿಸ್ಥಿತಿ ತಿಳಿಯಾಗಿ ಮರಳಿ ಸಹಜ ಸ್ಥಿತಿಗೆ ಬರುತ್ತಿರುವಾಗಲೇ ಈ ದುರಂತ ಸಂಭವಿಸಿದೆ. ವಿಶ್ವದ ಅತಿ ದೊಡ್ಡ ಅನಿಲ ಪೂರೈಕೆದಾರ ರಾಷ್ಟ್ರವಾಗಿರುವ ಕತಾರ್‌ನ ಈ ಪ್ರಮುಖ ಸ್ಥಾವರ ದೀರ್ಘಕಾಲದವರೆಗೆ ಬಂದ್ ಆದರೆ, ಜಾಗತಿಕವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಗ್ಯಾಸ್ ಮತ್ತು ತೈಲ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಆರ್ಥಿಕ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚೆಂಡೆಸೆದರೆ…. ಬ್ಯಾಟ್ ಎಸಿತೀನಿ: ಕೆರಳಿದ ಕೀರನ್ ಪೊಲಾರ್ಡ್​! – Kannada News | Kieron Pollard’s MLC Standoff Revives Memories of Iconic 2014 Starc Fight

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 5ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಜಿದ್ದಾಜಿದ್ದಿನೊಂದಿಗೆ ಎಲ್ಲರ ಗಮನ ಸೆಳೆದಿದ್ದು ಕೀರನ್ ಪೊಲಾರ್ಡ್ ಅವರ ಕೋಪ-ತಾಪ. ಈ ಕೋಪ-ತಾಪದೊಂದಿಗೆ ಪೊಲಾರ್ಡ್ 2014ರ ಐಪಿಎಲ್ ಘಟನೆಯನ್ನು ನೆನಪಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡದ ದಾಂಡಿಗರು 20 ಓವರ್​ಗಳಲ್ಲಿ 245 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಇತ್ತ ಪೊಲಾರ್ಡ್ ಅಬ್ಬರದಿಂದ ವಾಷಿಂಗ್ಟನ್ ಫ್ರೀಡಮ್ ತಂಡದ ಬೌಲರ್​ಗಳು ಕಂಗೆಟ್ಟಿದ್ದರು. ಇದರ ನಡುವೆ ವೇಗದ ಬೌಲರ್ ಆಸಿಫ್ ಮೆಹಮೂದ್  ಪೊಲಾರ್ಡ್ ಕಣ್ಣಿಗೆ ಕಣ್ಣಿಟ್ಟು ಕೆಣಕಲು ಯತ್ನಿಸಿದರು. ಇದರಿಂದ ಕೋಪಗೊಂಡ ಪೊಲಾರ್ಡ್  ತಮ್ಮ ಹಳೆಯ ರಗಡ್ ಶೈಲಿಯಲ್ಲೇ ಮರು ಜವಾಬು ನೀಡಿದ್ದಾರೆ.

ಅಂದರೆ ಕೆಣಕಲು ಬಂದ ಬೌಲರ್​ಗೆ ಚೆಂಡೆಸೆದರೆ ಬ್ಯಾಟ್ ಎಸಿತೀನಿ ಎಂದು ತೋರಿಸುವ ಮೂಲಕ ಪೊಲಾರ್ಡ್ ಪ್ರತ್ಯುತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ 2014 ಐಪಿಎಲ್​ ಜಗಳ ಕೂಡ ಮುನ್ನಲೆಗೆ ಬಂದಿದೆ.

ಪೊಲಾರ್ಡ್ vs ಸ್ಟಾರ್ಕ್:

2014ರ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದ ವೇಳೆ ಮಿಚೆಲ್ ಸ್ಟಾರ್ಕ್ ಎಸೆದ ತೀಕ್ಷ್ಣವಾದ ಬೌನ್ಸರ್ ಅನ್ನು ಪೊಲಾರ್ಡ್ ಆಡಲು ವಿಫಲರಾದರು.

ಈ ವೇಳೆ ಸ್ಟಾರ್ಕ್ ಬ್ಯಾಟರ್ ಕಡೆಗೆ ನೋಡಿ ಏನೋ ಅಸಭ್ಯ ಮಾತುಗಳನ್ನು ಆಡಿದರು. ಪೊಲಾರ್ಡ್ ಕೇವಲ ಕೈ ಸನ್ನೆ ಮಾಡಿ ಸುಮ್ಮನಿರಲು ಹೇಳಿದರು. ಅಷ್ಟೇ ಅಲ್ಲದೆ ಮುಂದಿನ ಎಸೆತವನ್ನು ಎಸೆಯಲು ಸ್ಟಾರ್ಕ್ ರನ್ನಿಂಗ್ ಆರಂಭಿಸಿದಾಗ, ಪೊಲಾರ್ಡ್ ಕ್ರೀಸ್‌ನಿಂದ ದಿಢೀರನೆ ಪಕ್ಕಕ್ಕೆ ಸರಿದು, ತಾವು ಸಿದ್ಧವಾಗಿಲ್ಲ ಎಂದು ಸನ್ನೆ ಮಾಡಿದರು.

ಇದರಿಂದ ಕೋಪೋದ್ರಿಕ್ತರಾದ ಮಿಚೆಲ್ ಸ್ಟಾರ್ಕ್, ಉದ್ದೇಶಪೂರ್ವಕವಾಗಿಯೇ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಪೊಲಾರ್ಡ್‌ರ ಕಾಲಿನ ಕಡೆಗೆ ಅತಿ ವೇಗವಾಗಿ ಚೆಂಡನ್ನು ಎಸೆದರು. ಆರ್​ಸಿಬಿ ವೇಗಿಯ ಈ ಅವರ ಈ ವರ್ತನೆಯಿಂದ ಕೆರಳಿದ ಪೊಲಾರ್ಡ್, ತಮ್ಮ ಕೈಯಲ್ಲಿದ್ದ ಬ್ಯಾಟ್ ಅನ್ನು ಸ್ಟಾರ್ಕ್ ಕಡೆಗೆ ಬಲವಾಗಿ ಎಸೆಯಲು ಮುಂದಾದರು.  ಆದರೆ ಬ್ಯಾಟ್ ಕೈಯಿಂದ ಜಾರಿ ಪಿಚ್‌ನ ಪಕ್ಕದಲ್ಲೇ ಬಿದ್ದಿತು.

ತಕ್ಷಣವೇ ಅಂಪೈರ್‌ಗಳು ಮತ್ತು ಆರ್‌ಸಿಬಿ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಅಂದು ನಿಯಮ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಪೊಲಾರ್ಡ್‌ಗೆ ಪಂದ್ಯ ಶುಲ್ಕದ ಶೇ. 75 ರಷ್ಟು ಹಾಗೂ ಸ್ಟಾರ್ಕ್‌ಗೆ ಶೇ. 50 ರಷ್ಟು ದಂಡವಾಗಿ ವಿಧಿಸಿದ್ದರು.

ಇದೀಗ ಅದೇ ಮಾದರಿಯಲ್ಲಿ ಬ್ಯಾಟ್ ಎಸಿತೀನಿ ಎಂದು ತೋರಿಸುವ ಮೂಲಕ ಕೀರನ್ ಪೊಲಾರ್ಡ್ 12 ವರ್ಷಗಳ ಹಳೆಯ ಕಹಿ ಘಟನೆಯನ್ನು ಮತ್ತೆ ನೆನಪಿಸಿದ್ದಾರೆ.

ಇದನ್ನೂ ಓದಿ: ಶತಕ ಸಿಡಿಸಿದರೂ… ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ!

ಇನ್ನು ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ನೀಡಿದ 245 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ಪರ ಕೀರನ್ ಪೊಲಾರ್ಡ್ 56 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ ಶತಕ ಸಿಡಿಸಿದರು. ಇದಾಗ್ಯೂ ಎಂಐ ನ್ಯೂಯಾರ್ಕ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು 215 ರನ್​ಗಳು ಮಾತ್ರ. ಈ ಮೂಲಕ ವಾಷಿಂಗ್ಟನ್ ಪ್ರೀಡಮ್ ತಂಡ 30 ರನ್​ಗಳ ಜಯ ಸಾಧಿಸಿದೆ.

Source link

ಬಲಿಷ್ಠ ಪಡೆಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತಿರುವ ಕೇಪ್ ವರ್ಡೆ..! – Kannada News | Fifa World Cup 2026: Cape Verde earn second remarkable draw

ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಆಫ್ರಿಕಾದ ಪುಟ್ಟ ದ್ವೀಪ ರಾಷ್ಟ್ರ ಕೇಪ್ ವರ್ಡೆ (Cape Verde) ತನ್ನ ಅಸಾಧಾರಣ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ವಿರುದ್ಧ 0-0 ಅಂತರದಿಂದ ಡ್ರಾ ಸಾಧಿಸಿದ್ದ ಕೇಪ್ ವರ್ಡೆ ಇದೀಗ ಉರುಗ್ವೆ ತಂಡದ ಪಾಲಿಗೂ ಕಂಟಕವಾಗಿ ಪರಿಣಮಿಸಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಆರಂಭದಿಂದಲೇ ಉರುಗ್ವೆ ತಂಡವು ಚೆಂಡಿನ ಮೇಲೆ ಶೇ. 66 ರಷ್ಟು ನಿಯಂತ್ರಣ ಸಾಧಿಸಿದ್ದರು. ಈ ನಿಯಂತ್ರಣದ ಹೊರತಾಗಿಯೂ ಕೇಪ್ ವರ್ಡೆ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಉರುಗ್ವೆ 44 ನಿಮಿಷಗಳನ್ನು ತೆಗೆದುಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಕೇಪ್ ವರ್ಡೆ ಮೊದಲ ಗೋಲು ದಾಖಲಿಸಿದ್ದರು ಎಂಬುದು ಉಲ್ಲೇಖಾರ್ಹ.

  • ಪಂದ್ಯದ 21ನೇ ನಿಮಿಷದಲ್ಲಿ ಕೇಪ್ ವರ್ಡೆ ತಂಡದ ಕೆವಿನ್ ಪಿನಾ 30 ಯಾರ್ಡ್​ ದೂರದಿಂದ ಅದ್ಭುತ ಲೋ-ಡ್ರಿಲ್ಡ್ ಫ್ರೀ-ಕಿಕ್ ಮೂಲಕ ಗೋಲು ಗಳಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕೇಪ್ ವರ್ಡೆ ಗಳಿಸಿದ ಮೊದಲ ಗೋಲು ಎಂಬುದು ವಿಶೇಷ.
  • ಮೊದಲಾರ್ಧ ಮುಗಿಯಲು ಕೆಲವೇ ಕ್ಷಣಗಳ ಮಾತ್ರ ಬಾಕಿ ಇರುವಾಗ ಉರುಗ್ವೆ ತಂಡದ ಮ್ಯಾಕ್ಸಿಮಿಲಿಯಾನೊ ಅರಾಜೊ 44ನೇ ನಿಮಿಷದಲ್ಲಿ  ಹೆಡರ್ ಮೂಲಕ ಗೋಲು ಬಾರಿಸಿ ಸಮಬಲ ತಂದರು.
  • ಇದರ ಬೆನ್ನಲ್ಲೇ, ಅಂದರೆ ಇಂಜುರಿ ಟೈಮ್​ನಲ್ಲಿ (45+2′ ನಿಮಿಷ) ಅರಾಜೊ ನೀಡಿದ ಪಾಸ್ ನೆರವಿನಿಂದ ಆಗಸ್ಟಿನ್ ಕ್ಯಾನೊಬಿಯೊ ಮತ್ತೊಂದು ಗೋಲು ಗಳಿಸಿ ಉರುಗ್ವೆಗೆ 2-1 ಮುನ್ನಡೆ ತಂದುಕೊಟ್ಟರು.

ಮೊದಲ 44 ನಿಮಿಷಗಳ ಕಾಲ ಕೇಪ್​ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಬೆವರಿಳಿಸಿದ್ದ ಉರುಗ್ವೆ ತಂಡವು ಆ ಬಳಿಕ ಬ್ಯಾಕ್ ಟು ಬ್ಯಾಕ್ ಗೋಲು ಗಳಿಸಿ ಮೊದಲಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡರು. ಹೀಗಾಗಿ ಈ ಪಂದ್ಯವನ್ನು ಉರುಗ್ವೆ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ದ್ವಿತೀಯಾರ್ಧದಲ್ಲೂ ಸಾಂಘಿಕ ಹೋರಾಟ ಪ್ರದರ್ಶಿಸಿದ ಕೇಪ್ ವರ್ಡೆ 61ನೇ ನಿಮಿಷದಲ್ಲಿ ತಿರುಗೇಟು ನೀಡಿತು.

  • ಉರುಗ್ವೆ ಡಿಫೆಂಡರ್ ಮಥಿಯಾಸ್ ಒಲಿವೆರಾ ಮತ್ತು ಗೋಲ್‌ಕೀಪರ್ ಫೆರ್ನಾಂಡೊ ಮುಸ್ಲೆರಾ ನಡುವಿನ ಸಂವಹನ ಕೊರತೆಯ ಲಾಭ ಪಡೆದ ಕೇಪ್ ವರ್ಡೆಯ ಹೆಲಿಯೊ ವರೆಲಾ ಗೋಲ್ ಪೋಸ್ಟ್​ಗೆ ಚೆಂಡನ್ನು ತಳ್ಳಿ 2-2 ಗೋಲುಗಳ ಸಮಬಲ ತಂದರು.

ಗೋಲುಗಳು ಸಮಬಲಗೊಳ್ಳುತ್ತಿದ್ದಂತೆ ಕೇಪ್ ವರ್ಡೆ ಮತ್ತೊಮ್ಮೆ ತನ್ನ ರಕ್ಷಣಾ ಕೋಟೆಯನ್ನು ಭದ್ರಪಡಿಸಿಕೊಂಡಿತು. ಉರುಗ್ವೆ ತಂಡವು ಸತತವಾಗಿ ಅಟ್ಯಾಕ್ ಮಾಡಿದರೂ, ಕೇಪ್ ವರ್ಡೆಯ ಡಿಫೆಂಡರ್​ಗಳು ಪಟ್ಟು ಬಿಡದೇ ಹೋರಾಡಿದ್ದು ವಿಶೇಷವಾಗಿತ್ತು.

ಅಂತಿಮವಾಗಿ ಕೇಪ್ ವರ್ಡೆ ಕೆಚ್ಚೆದೆಯ ಹೋರಾಟದ ಮುಂದೆ ಉರುಗ್ವೆ ತಂಡ ಶರಣಾಗಬೇಕಾಯಿತು. ಇದರೊಂದಿಗೆ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಈ ಸಮಬಲದೊಂದಿಗೆ ಕೇಪ್​ ವರ್ಡೆ ಗ್ರೂಪ್ ‘H’ ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!

ಒಂದು ವೇಳೆ ಜೂನ್ 26 ರಂದು ಸೌದಿ ಅರೇಬಿಯಾ ವಿರುದ್ಧ ಪಂದ್ಯದಲ್ಲಿ ಕೇಪ್ ವರ್ಡೆ ಜಯ ಸಾಧಿಸಿದರೆ ನೇರವಾಗಿ ಐತಿಹಾಸಿಕ ‘ರೌಂಡ್ ಆಫ್ 32’ ಹಂತಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಜೂನ್ 26 ರಂದು ಕೇಪ್ ವರ್ಡೆ ಕಡೆಯಿಂದ ಮತ್ತಷ್ಟು ರೋಚಕ ಪಂದ್ಯಾಟವನ್ನು ನಿರೀಕ್ಷಿಸಬಹುದು.

Published On – 8:52 am, Mon, 22 June 26

Source link

ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ – Kannada News | Ram Mandir Donation Scam: 40 Staff Fired as SIT Submits Report to CM Yogi

ಅಯೋಧ್ಯೆ, ಜೂನ್ 22: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಹಾಗೂ ಆಭರಣಗಳ ಎಣಿಕೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕಲಾಗಿದೆ.

ಬ್ಯಾಂಕ್ ಟ್ರಸ್ಟ್ ಈಗ ಅವರ ಜಾಗಕ್ಕೆ ಸಂಪೂರ್ಣ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಹಣ ಮತ್ತು ಆಭರಣಗಳ ಎಣಿಕೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಿಸಲಾಗಿದೆ. ಮತ್ತೊಂದೆಡೆ, ಆರು ದಿನಗಳ ಕಾಲ ಅಯೋಧ್ಯೆಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (SIT) ಇಂದು ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.

ಮೂವರು ಸದಸ್ಯರ ಎಸ್‌ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ಮಾಡುವ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ದೇವಸ್ಥಾನದ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ, ಇಂದು ಧ್ವಜಾರೋಹಣ, ದೇವಸ್ಥಾನದ ವೈಶಿಷ್ಟ್ಯವೇನು?

ತನಿಖೆ ಮುಗಿಯುವವರೆಗೆ ವಿಚಾರಣೆಗೆ ಒಳಗಾದ ಯಾರೂ ಕೂಡ ಅಯೋಧ್ಯೆ ನಗರವನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಎಸ್‌ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ದೀರ್ಘಕಾಲದ ಸಹಚರ ಎನ್ನಲಾದ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬಾತನನ್ನು ಎಸ್‌ಐಟಿ ಪದೇ ಪದೇ ವಿಚಾರಣೆ ನಡೆಸಿದೆ. ಈತನ ಆಪ್ತರು, ಸಂಬಂಧಿಕರು ಹಾಗೂ ಆಸ್ತಿಪಾಸ್ತಿಗಳ ವಿವರವನ್ನೂ ಕಲೆಹಾಕಲಾಗುತ್ತಿದೆ.

ಈ ತನಿಖೆಯು ಕೇವಲ ಕಾಣಿಕೆ ಹಣದ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಟ್ರಸ್ಟ್ ವಿವಿಧ ಹಂತಗಳಲ್ಲಿ ಮಾಡಿದ ಖರೀದಿಗಳು ಮತ್ತು ದೇವಸ್ಥಾನದ ನಿರ್ಮಾಣ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ವ್ಯವಹಾರಗಳ ಮೇಲೂ ತನಿಖೆ ನಡೆಯುತ್ತಿದೆ.

ವಂಚನೆ ಶುರುವಾಗಿದ್ದು ಯಾವಾಗ?
ಮೂಲಗಳ ಪ್ರಕಾರ, 2025 ರ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ‘ಮಹಾಕುಂಭ ಮೇಳ’ದ ಸಮಯದಲ್ಲಿ ಈ ದೊಡ್ಡ ವಂಚನೆ ನಡೆದಿದೆ. ಆ ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನ ಸುಮಾರು 10 ಲಕ್ಷ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದರು. ಭಕ್ತರ ದಟ್ಟಣೆ ಎಷ್ಟಿತ್ತೆಂದರೆ, ದೇವಸ್ಥಾನದ ದೇಣಿಗೆ ಪೆಟ್ಟಿಗೆಗಳು ಕೇವಲ ಎರಡು ಗಂಟೆಗಳಲ್ಲಿ ನೋಟುಗಳಿಂದ ತುಂಬಿ ಹೋಗುತ್ತಿದ್ದವು. ಇದೇ ಸಮಯವನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಯೋಗಿ ಅವರಿಗೆ ವರದಿ ಸಲ್ಲಿಕೆಯಾದ ಬಳಿಕ ತಪ್ಪು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ಬೈಕ್ ಮೇಲೆ 100 ಕೇಸ್: ರಿಯಾಯಿತಿ ಬಳಸಿ 27,500 ರೂ. ಟ್ರಾಫಿಕ್ ಫೈನ್ ಪಾವತಿಸಿದ ಸವಾರ – Kannada News | Bengaluru Rider Pays Rs 27500 Traffic Fine For 100 Pending Violations At Rajajinagar Under 50 Percent Discount

ಒಂದೇ ಬೈಕ್ ಮೇಲೆ 100 ಕೇಸ್Image Credit source: Bangalore Traffic Police

ಬೆಂಗಳೂರು, ಜೂನ್ 22: ಬೆಂಗಳೂರಿನಲ್ಲಿ (Bengaluru) ಸಂಚಾರ ನಿಯಮ ಉಲ್ಲಂಘಿಸುವ (Traffic Tules Violation) ವಾಹನ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ. ಇದರ ನಡುವೆ ವಾಹನಗಳ ಮೇಲಿನ ದಂಡ ಪಾವತಿಗೆ ಸರ್ಕಾರ ಘೋಷಿಸಿರುವ ರಿಯಾಯಿತಿ ಹಿನ್ನೆಲೆಯಲ್ಲಿ, ಬೈಕ್ ಸವಾರರೊಬ್ಬರು ಒಂದೇ ದ್ವಿಚಕ್ರ ವಾಹನದ ಮೇಲಿದ್ದ ಬರೋಬ್ಬರಿ 100 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಒಂದೇ ಬಾರಿಗೆ ಪಾವತಿಸಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ಸವಾರ, 100 ಪ್ರಕರಣಗಳಿಗೆ ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಒಟ್ಟು 27,500 ರೂಪಾಯಿ ದಂಡ ಪಾವತಿಸಿದ್ದು, ಇನ್ನು ಮುಂದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಪ್ರಮಾಣ ಮಾಡಿದ್ದಾರೆ.

ಮುಖ್ಯಾಂಶಗಳು

  • ಒಂದೇ ಬೈಕ್ ಮೇಲಿತ್ತು 100 ಕೇಸ್‌ಗಳು.
  • ರಿಯಾಯಿತಿಯಲ್ಲಿ 27,500 ರೂ. ದಂಡ ಪಾವತಿ.
  • ಡ್ರಂಕ್ ಅಂಡ್ ಡ್ರೈವ್: 669 ಪ್ರಕರಣ ದಾಖಲಿಸಿದ ಪೊಲೀಸರು.

ಮದ್ಯಪಾನ ಹಾಗೂ ಅತಿವೇಗದ ಚಾಲನೆಗೆ ಬ್ರೇಕ್: ವಿಶೇಷ ಕಾರ್ಯಾಚರಣೆ

ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಡ್ರಂಕ್ ಅಂಡ್ ಡ್ರೈವ್ ಮತ್ತು ಅತಿವೇಗದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ. ಜೂನ್ 15 ರಿಂದ ಜೂನ್ 26 ರವರೆಗೆ ನಗರದ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪರಿಶೀಲನೆ ನಡೆಯುತ್ತಿದೆ. ಕಾರ್ಯಾಚರಣೆಯ ಭಾಗವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಶಂಕೆಯ ಮೇಲೆ ಒಟ್ಟು 43,057 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಡ್ರಂಕ್ ಅಂಡ್ ಡ್ರೈವ್ ಮಾಡಿದ 669 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ 46 ಚಾಲಕರ ವಿರುದ್ಧ ಕೇಸ್ ದಾಖಲಿಸಿ, ಅವರಿಂದ ಒಟ್ಟು 46 ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಯಲಹಂಕದಲ್ಲಿ ಅಪಘಾತ: ಮೂವರ ಸ್ಥಿತಿ ಗಂಭೀರ

ನಗರದ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕಾರೊಂದು ಯು-ಟರ್ನ್ (U-Turn) ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಾಸಾಧುಗಳ ಸೋಗಿನಲ್ಲಿ ಬಂದು ಉಂಗುರ ಲಪಟಾಯಿಸಿದ ಖದೀಮರು!

ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನಾಗಾಸಾಧುಗಳ ಸೋಗಿನಲ್ಲಿ ಬಂದ ವೇಷಧಾರಿಗಳು ಸಾರ್ವಜನಿಕರಿಗೆ ವಂಚಿಸಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಅರುಣ್ ಶ್ರೀಪಾದ್ ಎಂಬುವರ ಬಳಿ ಬಂದ ಇಬ್ಬರು ನಕಲಿ ನಾಗಾಸಾಧುಗಳು ಕಾಶಿ ಮತ್ತು ಗಂಗಾ ಸ್ನಾನದ ಬಗ್ಗೆ ಪ್ರಸ್ತಾಪಿಸಿ ಅವರ ನಂಬಿಕೆ ಗಳಿಸಿದ್ದರು. ಬಳಿಕ ಆಶೀರ್ವಾದ ಮಾಡುವ ನೆಪದಲ್ಲಿ ಅರುಣ್ ಅವರ ಹಣೆಗೆ ತ್ರಿಶೂಲ ಇಟ್ಟು, ಅವರ ಕೈಯಲ್ಲಿದ್ದ ಬೆಲೆಬಾಳುವ ಚಿನ್ನದ ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ ಆರ್​ಟಿಒ 12 ವಿಶೇಷ ಕೌಂಟರ್! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ವಂಚಕರು ಹೋದ ಬಳಿಕ ಮನೆಗೆ ಬರುವವರೆಗೂ ಅರುಣ್‌ ಅವರಿಗೆ ಉಂಗುರ ಕಳುವಾಗಿರುವುದು ಗೊತ್ತೇ ಇರಲಿಲ್ಲ. ಮನೆಗೆ ಬಂದ ನಂತರ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಶ್ರೀಪಾದ್ ರಾವ್ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೂಗಲ್ ಮ್ಯಾಪ್ ನಂಬಿ ತಪ್ಪು ದಾರಿಯಲ್ಲಿ ಹೋಗಿ ಪರೀಕ್ಷೆಯಿಂದ ವಂಚಿತರಾದ ನೀಟ್ ವಿದ್ಯಾರ್ಥಿಗಳು – Kannada News | NEET Exam Missed: Google Maps Error Leads Students Astray in Moradabad

ಮೊರಾದಾಬಾದ್, ಜೂನ್ 22: ಗೂಗಲ್ ಮ್ಯಾಪ್(Google Map) ನಂಬಿ ತಪ್ಪು ದಾರಿಯಲ್ಲಿ ಹೋಗಿ ನೀಟ್ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಬಂದಿ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದಾರೆ. ನೀಟ್ ಯುಜಿ ಮರು ಪರೀಕ್ಷೆಯ ವೇಳೆ ಗೂಗಲ್ ಮ್ಯಾಪ್ ತೋರಿಸಿದ ತಪ್ಪು ಲೋಕೇಶನ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿ, ಪರೀಕ್ಷೆ ಬರೆಯುವ ಅವಕಾಶವನ್ನೇ ತಪ್ಪಿಸಿಕೊಂಡಿದ್ದಾರೆ.

ದೇಶಾದ್ಯಂತ ಸುಮಾರು 22.79 ಲಕ್ಷ ವಿದ್ಯಾರ್ಥಿಗಳು ಈ ಮರು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಗೂಗಲ್ ಆ್ಯಪ್‌ನ ತಾಂತ್ರಿಕ ದೋಷದಿಂದಾಗಿ ಕೆಲ ವಿದ್ಯಾರ್ಥಿಗಳ ಇಡೀ ವರ್ಷದ ಕಷ್ಟ ಮತ್ತು ಭವಿಷ್ಯ ಈಗ ಆತಂಕಕ್ಕೆ ಸಿಲುಕಿದೆ.

ಸಂಭಾಲ್ ನಿವಾಸಿಯಾದ ಫೈಜಾನ್ ಅಲಿ ಎಂಬ ವಿದ್ಯಾರ್ಥಿ ತನಗೆ ನಿಗದಿಯಾಗಿದ್ದ ‘ಆರ್‌ಎನ್ ಇಂಟರ್ ಕಾಲೇಜ್’ ಪರೀಕ್ಷಾ ಕೇಂದ್ರವನ್ನು ಹುಡುಕಲು ಗೂಗಲ್ ಮ್ಯಾಪ್ ಬಳಸಿದ್ದರು. ಆದರೆ ಆ್ಯಪ್ ಕಾಲೇಜಿನ ತಪ್ಪು ವಿಳಾಸವನ್ನು ತೋರಿಸಿದ್ದರಿಂದ ಆತ ಬೇರೆಡೆಯೇ ಹೋಗಿ ತಲುಪಿದ್ದ.

ತಪ್ಪು ದಾರಿಯಿಂದಾಗಿ ಗೊಂದಲಕ್ಕೊಳಗಾದ ಫೈಜಾನ್, ಬಳಿಕ ನಿಜವಾದ ಪರೀಕ್ಷಾ ಕೇಂದ್ರಕ್ಕೆ ಬರುವಷ್ಟರಲ್ಲಿ ನಿಗದಿತ ಸಮಯ ದಾಟಿಹೋಗಿತ್ತು. ಹೀಗಾಗಿ ಪರೀಕ್ಷಾ ನಿಯಮಗಳ ಪ್ರಕಾರ ಆತನಿಗೆ ಒಳಗಡೆ ಪ್ರವೇಶ ನಿರಾಕರಿಸಲಾಯಿತು.

ಮತ್ತಷ್ಟು ಓದಿ: ಗೂಗಲ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್​ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು

ಸಾರ್ಥಕ್ ಎಂಬ ಇನ್ನೊಬ್ಬ ವಿದ್ಯಾರ್ಥಿಯೂ ಸಹ ಗೂಗಲ್ ಮ್ಯಾಪ್‌ನ ತಪ್ಪು ಮಾರ್ಗಸೂಚಿಯಿಂದಾಗಿ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ತಲುಪಲಾಗದೆ ಪರೀಕ್ಷೆಯಿಂದ ವಂಚಿತನಾಗಿದ್ದಾನೆ.

ತಮ್ಮ ಮಗ ವರ್ಷಗಳಿಂದ ನೀಟ್ ಪರೀಕ್ಷೆಗೆ ಕಷ್ಟಪಟ್ಟು ತಯಾರಿ ನಡೆಸಿದ್ದ. ಕೇವಲ ಒಂದು ತಾಂತ್ರಿಕ ದೋಷದಿಂದಾಗಿ ಆತನ ಇಡೀ ಶೈಕ್ಷಣಿಕ ವರ್ಷವೇ ನಷ್ಟವಾಗುವ ಆತಂಕ ಎದುರಾಗಿದೆ. ಇದಕ್ಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಫೈಜಾನ್ ತಂದೆ ಇಕ್ರಾಮ್ ಒತ್ತಾಯಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಬಂದು ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಗೂಗಲ್ ಮ್ಯಾಪ್ ಜನರನ್ನು ಅನಾಹುತಕ್ಕೆ ತಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗ್ರೇಟರ್ ನೋಯ್ಡಾದ ಐದು ಜನರ ಕುಟುಂಬವೊಂದು ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ ಹಾಪುರ ಎಂಬಲ್ಲಿ ದೊಡ್ಡ ಚರಂಡಿಗೆ ಬಿದ್ದು, ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು.

ಇಂತಹ ಪ್ರಮುಖ ಪರೀಕ್ಷೆಗಳ ದಿನದಂದು ಕೇವಲ ಡಿಜಿಟಲ್ ನಕ್ಷೆಗಳನ್ನು ನಂಬುವ ಬದಲು, ಒಂದು ದಿನ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದ ಸರಿಯಾದ ವಿಳಾಸ ಮತ್ತು ದಾರಿಯನ್ನು ಖುದ್ದಾಗಿ ಪರಿಶೀಲಿಸಿಕೊಳ್ಳುವುದು ಒಳಿತು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶತಕ ಸಿಡಿಸಿದರೂ… ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ! – Kannada News | Why Yashasvi Jaiswal Dropped From India Squad

ಸೌತ್ ಆಫ್ರಿಕಾ ವಿರುದ್ಧ ಶತಕ, ಅಫ್ಘಾನಿಸ್ತಾನ್ ವಿರುದ್ಧ ಸೆಂಚುರಿ… ಹೀಗೆ ಮೊದಲ 6 ಪಂದ್ಯಗಳಲ್ಲಿ 2 ಏಕದಿನ ಶತಕಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟರ್​ ಎನಿಸಿಕೊಂಡಿರುವ ಯಶಸ್ವಿ ಜೈಸ್ವಾಲ್​ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಜೈಸ್ವಾಲ್ ಕೇವಲ 86 ಎಸೆತಗಳಲ್ಲಿ ಅಜೇಯ 110 ರನ್ ಚಚ್ಚಿದ್ದರು.

ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಸಿಕ್ಕಿಲ್ಲ ಎಂಬುದೇ ಅಚ್ಚರಿ. ಅತ್ಯುತ್ತಮ ಪ್ರದರ್ಶನ ನೀಡಿದರೂ ಜೈಸ್ವಾಲ್ ಅವರನ್ನು ಆಯ್ಕೆ ಮಾಡದಿರಲು ಕಾರಣವೇನು? ಎಂದು ನೋಡುವುದಾದರೆ…

ವಿರಾಟ್ ಕೊಹ್ಲಿಯ ಪುನರಾಗಮನ: ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯ ಕಾರಣ ಹೊರಗುಳಿದಿದ್ದರು. ಅವರ ಬದಲಿಗೆ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯ ಮೂಲಕ ಏಕದಿನ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಸಹಜವಾಗಿಯೇ ಜೈಸ್ವಾಲ್ ತಮ್ಮ ಸ್ಥಾನವನ್ನು ಹಿರಿಯ ಆಟಗಾರನಿಗೆ ಬಿಟ್ಟುಕೊಡಬೇಕಾಗಿ ಬಂದಿದೆ.

ಅಗ್ರ ಕ್ರಮಾಂಕದ ಪೈಪೋಟಿ: ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್ 3ನೇ ಕ್ರಮಾಂಕದ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಅಂದರೆ ಜೈಸ್ವಾಲ್​ಗಾಗಿ ಆರಂಭಿಕನ ಸ್ಥಾನವನ್ನು ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ತ್ಯಜಿಸಿದ್ದರು. ಇದೀಗ ಕೊಹ್ಲಿಯ ಆಗಮನದೊಂದಿಗೆ ಗಿಲ್ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಅಂದರೆ ಅಗ್ರ ಕ್ರಮಾಂಕದ ಸ್ಲಾಟ್​ಗಳು ತುಂಬಿರುವುದರಿಂದ ಯಶಸ್ವಿ ಜೈಸ್ವಾಲ್ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಇಶಾನ್ ಡಬಲ್ ರೋಲ್: ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಬಹುದಿತ್ತಲ್ಲವಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅತ್ತ ಮತ್ತೋರ್ವ ಆರಂಭಿಕನಾಗಿ ಇಶಾನ್ ಕಿಶನ್ ತಂಡದಲ್ಲಿದ್ದಾರೆ. ಇಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ + ಓಪನರ್ ಆಗಿರುವ ಕಾರಣ, ಆಯ್ಕೆ ಸಮಿತಿ ಯಶಸ್ವಿ ಜೈಸ್ವಾಲ್ ಬದಲಿಗೆ ಇಶಾನ್ ಅವರನ್ನು ಡಬಲ್ ರೋಲ್​ಗಾಗಿ ಆಯ್ಕೆ ಮಾಡಿದ್ದಾರೆ.

ಇವೆಲ್ಲದರ ಜೊತೆಗೆ ಇಂಗ್ಲೆಂಡ್​ನ ಪಿಚ್​ಗಳು  ವೇಗ ಮತ್ತು ಸ್ವಿಂಗ್ ಬೌಲಿಂಗ್​ಗೆ ಸಹಕಾರಿ. ಇಲ್ಲಿ ಕೇವಲ ಬ್ಯಾಟಿಂಗ್ ಆಳಕ್ಕಿಂತ ಹೆಚ್ಚಾಗಿ ಬೌಲಿಂಗ್ ಮತ್ತು ಆಲ್ ರೌಂಡರ್ ಸಮತೋಲನ ಮುಖ್ಯವಾಗುತ್ತದೆ. ಹೀಗಾಗಿ ಹೆಚ್ಚುವರಿ ಬ್ಯಾಟರ್ ಸ್ಥಾನವನ್ನು ಕಡಿತಗೊಳಿಸಿ ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಬೌಲಿಂಗ್​ ಆಲ್ ರೌಂಡರ್‌ಗಳಿಗೆ ಬಿಸಿಸಿಐ ಆದ್ಯತೆ ನೀಡಿದೆ. ಹೀಗಾಗಿಯೇ 3 ಪಂದ್ಯಗಳಲ್ಲಿ 2 ಸೆಂಚುರಿ ಸಿಡಿಸಿದರೂ ಯಶಸ್ವಿ ಜೈಸ್ವಾಲ್ ಅವಕಾಶ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಬಲಿಷ್ಠ ಪಡೆಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತಿರುವ ಕೇಪ್ ವರ್ಡೆ..!

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

Source link

Peacock Feather: ಪದೇ ಪದೇ ನಿಮ್ಮ ಕಣ್ಣಿಗೆ ನವಿಲು ಗರಿ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯ ಇಲ್ಲಿ ತಿಳಿಯಿರಿ! – Kannada News | Peacock Feather Meaning: What Repeated Sightings Signify in Astrology and Vastu

ಕೆಲವೊಮ್ಮೆ ನಮ್ಮ ಜೀವನದಲ್ಲಿ ವಿಚಿತ್ರ ಎನಿಸುವ ಕೆಲವು ಘಟನೆಗಳು ಜರುಗುತ್ತವೆ. ಅದರಲ್ಲಿ ಪ್ರಮುಖವಾದದ್ದು, ನಮಗೆ ಗೊತ್ತಿಲ್ಲದಂತೆ ಬೇರೆ ಬೇರೆ ಸ್ಥಳಗಳಲ್ಲಿ ಪದೇ ಪದೇ ನವಿಲು ಗರಿ (Peacock Feather) ಕಣ್ಣಿಗೆ ಬೀಳುವುದು. ಒಮ್ಮೆ ದೇವಸ್ಥಾನದಲ್ಲಿ, ಒಮ್ಮೆ ಯಾರದ್ದೋ ಮನೆಯ ಫೋಟೋದಲ್ಲಿ, ಮತ್ತೊಮ್ಮೆ ಹಠಾತ್ತನೆ ರಸ್ತೆಯಲ್ಲಿ ಹೋಗುವಾಗ ನವಿಲು ಗರಿ ಕಾಣಿಸಬಹುದು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಘಟನೆಗಳು ಕೇವಲ ಕಾಕತಾಳೀಯ ಅಥವಾ ಯದ್ವಾತದ್ವಾ ನಡೆಯುವ ವಿಷಯಗಳಲ್ಲ. ಇದರ ಹಿಂದೆ ಕೆಲವು ವಿಶೇಷವಾದ ದೈವಿಕ ಸಂಕೇತಗಳು ಅಡಗಿರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ನವಿಲು ಗರಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಹಾಗಿದ್ದರೆ, ಪದೇ ಪದೇ ನವಿಲು ಗರಿ ಕಾಣಿಸುವುದರ ಆಳವಾದ ಅರ್ಥವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರೀಕೃಷ್ಣ ಹಾಗೂ ಕಾರ್ತಿಕೇಯನ ದೈವಿಕ ಸಂಕೇತ:

ಸನಾತನ ಧರ್ಮದಲ್ಲಿ ನವಿಲು ಗರಿಯನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರ ವಸ್ತು ಎಂದು ಪರಿಗಣಿಸಲಾಗಿದೆ. ಸಾಕ್ಷಾತ್ ಜಗದೊಡೆಯನಾದ ಶ್ರೀಕೃಷ್ಣನು ತನ್ನ ಮುಕುಟದಲ್ಲಿ (ಕಿರೀಟ) ಯಾವಾಗಲೂ ನವಿಲು ಗರಿಯನ್ನು ಧರಿಸುತ್ತಾನೆ. ಇದು ಪ್ರೇಮ, ಸೌಂದರ್ಯ, ಜ್ಞಾನ ಮತ್ತು ದೈವಿಕತೆಯ ಸಂಕೇತವಾಗಿದೆ. ಇದರೊಂದಿಗೆ, ನವಿಲು ಗರಿಯು ಶಿವಕುಮಾರನಾದ ಕಾರ್ತಿಕೇಯನ (ಸುಬ್ರಹ್ಮಣ್ಯ) ವಾಹನವೂ ಹೌದು. ಆದ್ದರಿಂದ, ನವಿಲು ಗರಿ ಪದೇ ಪದೇ ಕಾಣಿಸುವುದೆಂದರೆ ನಿಮ್ಮ ಮೇಲೆ ದೈವಿಕ ಕೃಪೆ ಹಾಗೂ ಈಶ್ವರನ ಆಶೀರ್ವಾದವಿದೆ ಎಂದರ್ಥ. ಇದು ನಿಮ್ಮ ಆಧ್ಯಾತ್ಮಿಕ ಜಾಗೃತಿಯನ್ನು ಸೂಚಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಯ ಮಹತ್ವ:

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ನವಿಲು ಗರಿಯು ಧನಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುವ ಪ್ರಬಲ ಮಾಧ್ಯಮವಾಗಿದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ: ನಿಮಗೆ ಪದೇ ಪದೇ ನವಿಲು ಗರಿ ಕಾಣಿಸುತ್ತಿದ್ದರೆ, ನಿಮ್ಮ ಜೀವನದಲ್ಲಿ ಸದ್ಯದಲ್ಲೇ ಕೆಲವು ಒಳ್ಳೆಯ ಬದಲಾವಣೆಗಳು ಬರಲಿವೆ ಮತ್ತು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ ಎಂಬುದರ ಮುನ್ಸೂಚನೆ ಇದಾಗಿದೆ. ದೀರ್ಘಕಾಲದಿಂದ ನಿಂತುಹೋಗಿರುವ ಅಥವಾ ಅರ್ಧಕ್ಕೆ ನಿಂತಿರುವ ಕೆಲಸಗಳು ಶೀಘ್ರದಲ್ಲೇ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಇದು ನಿಮ್ಮ ಮನಸ್ಸಿನ ಆತಂಕ, ಗೊಂದಲ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ನೆಮ್ಮದಿಯನ್ನು ಕರುಣಿಸುವ ಶುಭ ಸಂಕೇತವಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ನಕಾರಾತ್ಮಕ ಶಕ್ತಿಯ ನಾಶ ಮತ್ತು ಮನೆಯಲ್ಲಿ ಇಡುವ ವಿಧಾನ:

ನವಿಲು ಗರಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ದೂರ ಓಡಿಸುವ ಶಕ್ತಿಯನ್ನು ಹೊಂದಿದೆ ಎಂದು ವಾಸ್ತು ತಜ್ಞರು ನಂಬುತ್ತಾರೆ. ಮನೆಯಲ್ಲಿ ಸುಖ, ಶಾಂತಿ ಮತ್ತು ಧನಾತ್ಮಕ ವಾತಾವರಣ ನೆಲೆಸಲು ನವಿಲು ಗರಿಯನ್ನು ಮನೆಯ ಪೂಜಾ ಕೊಠಡಿ, ಹಣ ಇಡುವ ತಿಜೋರಿ (ಬೀರು) ಅಥವಾ ಮನೆಯ ಮುಖ್ಯ ದ್ವಾರದ ಹತ್ತಿರ ಇಡುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.

ನಿಮಗೆ ಪದೇ ಪದೇ ನವಿಲು ಗರಿ ಕಾಣಿಸುತ್ತಿದ್ದರೆ, ನಿಮ್ಮ ಆಲೋಚನೆಗಳನ್ನು ಧನಾತ್ಮಕವಾಗಿ ಇಟ್ಟುಕೊಳ್ಳಿ, ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇಡಿ ಮತ್ತು ಸತ್ಕರ್ಮಗಳ ಹಾದಿಯಲ್ಲಿ ಮುನ್ನಡೆಯಿರಿ ಎಂದು ಜ್ಯೋತಿಷ್ಯ ಶಾಸ್ತ್ರವು ಸಲಹೆ ನೀಡುತ್ತದೆ. ಈ ನಂಬಿಕೆಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಶತಶತಮಾನಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ನವಿಲು ಗರಿಯನ್ನು ಸೌಭಾಗ್ಯ ಮತ್ತು ಸಮೃದ್ಧಿಯ ಸಂಕೇತವಾಗಿಯೇ ನೋಡಲಾಗುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version