ದರ್ಶನ್​ಗೆ ದೊಡ್ಡ ಸಂಕಷ್ಟ; ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಪರಿಗಣಿಸಲು ಕೋರ್ಟ್ ನಕಾರ – Kannada News | Renukaswamy Case Big Shock to Darshan as Court Rejects objection against Pradosh becoming Approver

ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರು. ಇದರ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಆದ ದಿನ ಏನೆಲ್ಲ ನಡೆಯಿತು ಎಂಬುದನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಪ್ರದೋಷ್ (Pradosh) ಮುಂದಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ಪರ ವಾದವನ್ನು ಕೇಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲು ಇಂದು (ಆಗಸ್ಟ್ 10) ವಿಚಾರಣೆ ಮಾಡಲಾಯಿತು. ಬಳಿಕ ಕೋರ್ಟ್ ಈ ಆದೇಶ ನೀಡಿದೆ. ದರ್ಶನ್ (Darshan) ಹಾಗೂ ಇನ್ನುಳಿದ ಆರೋಪಿಗಳ ಆಕ್ಷೇಪಣೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಇದರಿಂದಾಗಿ ದರ್ಶನ್ ಅವರಿಗೆ ದೊಡ್ಡ ಹಿನ್ನಡೆ ಆಗಿದೆ. ಪ್ರದೋಷ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರೆ ಆರೋಪಿಗಳ ವಾದ ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಪ್ರದೋಷ್​ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಕಾನೂನಿನ ಪ್ರಕಾರ ಅದು ತೀರ್ಮಾನ ಆಗಲಿದೆ ಎಂದು ಜಡ್ಜ್ ಸುಜಾತಾ ಮಡಿವಾಳಪ್ಪ ಹೇಳಿದ್ದಾರೆ.

ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೂಡ ಆಲಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಇನ್ನುಳಿದ ಆರೋಪಿಗಳ ಪರ ವಕೀಲರು ಕೂಡ ಅರ್ಜಿ ಹಾಕಿದ್ದರು. ಆದರೆ ಈಗ ದರ್ಶನ್ ಹಾಗೂ ಸಹ ಆರೋಪಿಗಳ ವಕೀಲರ ಮನವಿ ತಿರಸ್ಕೃತ ಆಗಿರುವ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಶಾಕ್ ಎದುರಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶಾಕ್ ಮೇಲೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳ ವಾದವನ್ನು ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲು ಏರುತ್ತಾರಾ ಅಥವಾ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕಾಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಮಾಫಿ ಸಾಕ್ಷಿಯಾಗಿ ಪ್ರದೋಷ್​ನನ್ನು ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಕೋರ್ಟ್ ತೀರ್ಮಾನ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆಗಳು ನಡೆಯುವುದು ಬಾಕಿ ಇದೆ. ಆ ತೀರ್ಮಾನ ಅಂತಿಮವಾದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಪ್ರದೋಷ್​ಗೆ​ ಮಾಫಿಸಾಕ್ಷಿಯಾಗಲು ಅವಕಾಶ ಸಿಕ್ಕರೆ ಆತನ ಹೇಳಿಕೆಯಿಂದ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗಳ PPF ಹಣ ಹಿಂಪಡೆದ ತಂದೆ: ಬಡ್ಡಿ ಸಮೇತ ಮರಳಿಸಲು ಕೋರ್ಟ್ ಆದೇಶ; ಏನಿವೆ ಪಿಪಿಎಫ್ ನಿಯಮಗಳು? – Kannada News | Father withdraws his daughter’s PPF account, court directs him to return the corpus

ನವದೆಹಲಿ, ಆಗಸ್ಟ್ 10: ತಮ್ಮ ಮಗಳ ಹೆಸರಲ್ಲಿದ್ದ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು ಖಾತೆ ಮುಚ್ಚಿದ್ದ ತಂದೆಗೆ ದೆಹಲಿ ಹೈಕೋರ್ಟ್ ಆಘಾತ ನೀಡಿದೆ. ಹಿಂಪಡೆದ ಸಂಪೂರ್ಣ ಮೊತ್ತವನ್ನು ಮಗಳಿಗೆ ವಾಪಸ್ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ಮೊದಲು ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ದೆಹಲಿ ಉಚ್ಚನ್ಯಾಯಾಲಯ ಎತ್ತಿಹಿಡಿದಿದೆ. ಮಗಳಿಗಾಗಿ ಮಾಡಿದ ಹೂಡಿಕೆಯನ್ನು ಅಪ್ಪನಾದನವನು ತಾನು ವಿತ್​ಡ್ರಾ ಮಾಡಿ ತನಗಾಗಿ ಬಳಕೆ ಮಾಡುವಂತಿಲ್ಲ ಎಂಬುವಂತಹ ತೀರ್ಪನ್ನು ಕೋರ್ಟ್ ನೀಡಿದೆ.

ಏನಿದು ಪ್ರಕರಣ?

1999 ರಲ್ಲಿ ಸುಧೀರ್ ಕವಾತ್ರ ಎಂಬುವವರು ತಮ್ಮ ಅಪ್ರಾಪ್ತ ಮಗಳು ಶ್ಯಾಮ್ಲಿ ಕವಾತ್ರ ಹೆಸರಿನಲ್ಲಿ PPF ಖಾತೆಯನ್ನು ತೆರೆದಿದ್ದರು. ಅದಾದ ಬಳಿಕ ಗಂಡ ಮತ್ತು ಹೆಂಡತಿ ಬೇರೆಯಾಗಿದ್ದಾರೆ. ಶ್ಯಾಮ್ಲಿ ಅವರು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಸುಧೀರ್ ಅವರು ಪತ್ನಿ ಮತ್ತು ಮಗಳಿಗೆ ನಿಯಮಿತವಾಗಿ ಜೀವನಾಂಶ ನೀಡುತ್ತಿದ್ದಾರೆ.

ಇದೇ ವೇಳೆ, 2016 ರಲ್ಲಿ, ಮಗಳ ಶಿಕ್ಷಣ ಮತ್ತು ಯೋಗಕ್ಷೇಮಕ್ಕಾಗಿ ಹಣ ಬಳಸುವುದಾಗಿ ಬ್ಯಾಂಕ್‌ಗೆ ಬರೆದುಕೊಟ್ಟು, ಖಾತೆಯಲ್ಲಿದ್ದ ₹8 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ತಂದೆ ಹಿಂಪಡೆದು ಖಾತೆಯನ್ನು ಕ್ಲೋಸ್ ಮಾಡಿದ್ದರು. 2017ರಲ್ಲಿ ಖಾತೆ ಮೆಚ್ಯೂರ್ ಆಗುವುದಕ್ಕೆ ಮುನ್ನವೇ ಮುಚ್ಚಲಾಗಿತ್ತು.

ಸತ್ಯಾಂಶ ಗೊತ್ತಾಗಿ ಕೋರ್ಟ್ ಮೆಟ್ಟಿಲೇರಿದ ಶ್ಯಾಮ್ಲಿ

2017 ರಲ್ಲಿ PPF ಮೆಚ್ಯೂರಿಟಿ ಅವಧಿ ಮುಗಿದಾಗ ಶ್ಯಾಮ್ಲಿ ಬ್ಯಾಂಕ್‌ಗೆ ತೆರಳಿದಾಗ, ಖಾತೆಯಲ್ಲಿದ್ದ ಹಣವನ್ನು ತಂದೆ ಮುಂಚಿತವಾಗಿಯೇ ಹಿಂಪಡೆದಿರುವುದು ಬೆಳಕಿಗೆ ಬಂದಿದೆ. ಪೋಷಕರ ನಡುವಿನ ಕೌಟುಂಬಿಕ ಕಲಹದಿಂದಾಗಿ ತಾಯಿಯೊಂದಿಗೆ ವಾಸಿಸುತ್ತಿದ್ದ ಶ್ಯಾಮ್ಲಿ, ಉನ್ನತ ಶಿಕ್ಷಣದ ವೆಚ್ಚಕ್ಕಾಗಿ ಹಣವಿಲ್ಲದೆ ತೊಂದರೆಗೊಳಗಾಗಿ ತಂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು.

ಇದನ್ನೂ ಓದಿ: UPI ಮೇಲಿನ MDR; ಶೇಕಡಾವಾರು ಆಧಾರಿತವಾಗಿ ಶುಲ್ಕ ಬೇಡ, ಗರಿಷ್ಠ ಮಿತಿ ಇರಲಿ: ದೀಪಕ್ ಶೆಣೈ

ಶ್ಯಾಮ್ಲಿ ಪರವಾಗಿ ಜಿಲ್ಲಾ ಕೋರ್ಟ್ ತೀರ್ಪು

ಶ್ಯಾಮ್ಲಿ ಅವರು ಮೊದಲು ಹೋಗಿದ್ದ ಜಿಲ್ಲಾ ನ್ಯಾಯಾಲಯದ ಬಳಿ. ಅಲ್ಲಿ ಆಕೆಯ ಪರವಾಗಿ ತೀರ್ಪು ಬಂದಿತು. ವಿತ್​ಡ್ರಾ ಮಾಡಲಾದ ಪಿಪಿಎಫ್ ಹಣವೆಲ್ಲವನ್ನೂ ಬಡ್ಡಿಸಮೇತವಾಗಿ (ಶೇ. 8ರ ದರ) ನೀಡುವಂತೆ ಆದೇಶಿಸಿತು. ಇದನ್ನು ಪ್ರಶ್ನಿಸಿ ಸುಧೀರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಉಚ್ಚ ನ್ಯಾಯಾಲಯ ಕೂಡ ಜಿಲ್ಲಾ ಕೋರ್ಟ್ ಆದೇಶವನ್ನೇ ಎತ್ತಿ ಹಿಡಿದು ತೀರ್ಪು ಕೊಟ್ಟಿತು.

ದೆಹಲಿ ಹೈಕೋರ್ಟ್ ತೀರ್ಪು

ತಂದೆ ಸುಧೀರ್ ಕವಾತ್ರ ಅವರು, “ನಾನು ಮಗಳು ಮತ್ತು ಆಕೆಯ ತಾಯಿಗೆ ಜೀವನಾಂಶವಾಗಿ (Maintenance) ನೀಡಿದ ಹಣದಲ್ಲಿ ಇದನ್ನು ಸರಿದೂಗಿಸಲಾಗಿದೆ” ಎಂದು ವಾದಿಸಿದ್ದರು. ಆದರೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ಈ ವಾದವನ್ನು ವಜಾಗೊಳಿಸಿ ಕೆಳಗಿನ ಮುಖ್ಯ ಅಂಶಗಳನ್ನು ಉಲ್ಲೇಖಿಸಿದೆ:

ರಕ್ಷಕನಾಗಿ ಮಾತ್ರ: ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣವು ಆಕೆಗೆ ಮಾತ್ರ ಸೇರಿದ್ದು. ತಂದೆ ಕೇವಲ ಒಬ್ಬ ರಕ್ಷಕನಾಗಿ (Guardian) ಖಾತೆಯನ್ನು ನಿರ್ವಹಿಸಬಹುದೇ ಹೊರತು ಆ ಹಣದ ಮೇಲೆ ಸ್ವಂತ ಹಕ್ಕು ಹೊಂದಲು ಸಾಧ್ಯವಿಲ್ಲ.

ಜೀವನಾಂಶ ಬೇರೆ, ಹೂಡಿಕೆ ಬೇರೆ: ಮಗಳು ಮತ್ತು ಬೇರ್ಪಟ್ಟ ಹೆಂಡತಿಗೆ ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಮಗಳ ಹೆಸರಿನಲ್ಲಿರುವ ಹೂಡಿಕೆಯ ಹಣದೊಂದಿಗೆ ಸರಿದೂಗಿಸಲು (Offset) ಸಾಧ್ಯವಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ

PPF ನಲ್ಲಿ ಏನಿವೆ ನಿಯಮಗಳು?

ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ನಿಯಮಾವಳಿಗಳ ಪ್ರಕಾರ:

  • ಅಪ್ರಾಪ್ತ ವಯಸ್ಕರ ಖಾತೆ: ತಂದೆ ಅಥವಾ ತಾಯಿ ಒಬ್ಬ ಅಪ್ರಾಪ್ತನ/ಅಪ್ರಾಪ್ತೆಯ ಹೆಸರಿನಲ್ಲಿ PPF ಖಾತೆ (Minor Account) ತೆರೆಯಬಹುದು. ಆದರೆ ಪೋಷಕರು ಕೇವಲ ‘ಪಾಲಕ’ (Guardian) ಆಗಿ ಕಾರ್ಯನಿರ್ವಹಿಸುತ್ತಾರೆ.
  • ಹಣ ಹಿಂಪಡೆಯುವ ನಿಯಮ: ಅಪ್ರಾಪ್ತ ವಯಸ್ಕರ PPF ಖಾತೆಯಿಂದ ಭಾಗಶಃ ಅಥವಾ ಪೂರ್ಣ ಹಣ ಹಿಂಪಡೆಯಬೇಕಾದರೆ (Withdrawal Rules), “ಈ ಹಣವನ್ನು ಕೇವಲ ಅಪ್ರಾಪ್ತ ಮಗ/ಮಗಳ ಯೋಗಕ್ಷೇಮ ಮತ್ತು ಅವರ ಪ್ರಯೋಜನಕ್ಕಾಗಿ ಮಾತ್ರ ಬಳಸಲಾಗುವುದು” ಎಂದು ಪೋಷಕರು ಖಾತೆ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಮುಚ್ಚಳಿಕೆ ಪತ್ರ (Declaration) ನೀಡಬೇಕಾಗುತ್ತದೆ.
  • ಮಾಲೀಕತ್ವದ ಹಕ್ಕು: PPF ಖಾತೆಯಲ್ಲಿದ್ದ ಹಣದ ನಿಜವಾದ ಮಾಲೀಕರು ಆ ಮಗು ಮಾತ್ರ. ಮಗು 18 ವರ್ಷ ತುಂಬಿ (Major) ವಯಸ್ಕರಾದ ತಕ್ಷಣ, ಖಾತೆಯ ಸಂಪೂರ್ಣ ನಿರ್ವಹಣೆ ಮತ್ತು ಹಣ ಹಿಂಪಡೆಯುವ ಹಕ್ಕು ಆ ಮಗುವಿಗೆ ವರ್ಗಾವಣೆಯಾಗುತ್ತದೆ. ಪೋಷಕರು ಆ ಹಣವನ್ನು ತಮ್ಮ ಸ್ವಂತ ಬಳಕೆಗೆ ಅಥವಾ ಇತರ ಸಾಲ/ಜೀವನಾಂಶ ಪಾವತಿಗೆ ಬಳಸಿಕೊಳ್ಳುವುದು ಕಾನೂನುಬಾಹಿರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ – Kannada News | Cauvery water dispute: SC to hear on August 13 pleas urging direction to Karnataka to release water to Tamil Nadu

ನವದೆಹಲಿ, (ಆಗಸ್ಟ್ 10): ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಂತೆ ತಕ್ಷಣವೇ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು(Tamil Nadu) ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ (ಆ.13) ನಡೆಸಲು ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ. ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುನ್ನೆಲೆಗೆ ತಂದು ತುರ್ತು ವಿಚಾರಣೆಗೆ ಮನವಿ ಮಾಡಿದರು. ಈ ಮನವಿಯನ್ನು ಆಲಿಸಿದ ನ್ಯಾಯಪೀಠವು ಗುರುವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಜುಲೈ 30 ರಂದು ನಡೆದ ಸಭೆಯಲ್ಲಿ ದಿನಕ್ಕೆ 3,500 ಕ್ಯೂಸೆಕ್‌ನಂತೆ 15 ದಿನಗಳ ಕಾಲ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿತ್ತು. ಆದ್ರೆ, ಇದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಮಳೆ ಇಲ್ಲದ ಕಾರಣ ಕಾವೇರಿ ಜಲಾಶಯದಲ್ಲಿ ನೀರಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಆಗಸ್ಟ್ 3 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂ ಡಿಕೆ ಶಿವಕುಮಾರ್​​ಗೆ ದೇವೇಗೌಡ ಪ್ರಶ್ನೆ – Kannada News | Former PM Deve Gowda sparks DK Shivakumar Over Bidadi Township Project

ರಾಮನಗರ, ಆಗಸ್ಟ್​ 10: ‘ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು. ಯಾರಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಆದ 60 ದಿನದಲ್ಲಿ ಮಾಡಲು ಏಕೆ ಹೊರಟಿದ್ದಾರೆ’ ಎಂದು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಅವರು ಸಿಎಂ ಡಿಕೆ ಶಿವಕುಮಾರ್​​ಗೆ ಪ್ರಶ್ನೆ ಮಾಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ಟಿವಿ9 ಜೊತೆಗೆ ಮಾತನಾಡಿದ ದೇವೇಗೌಡರು, ‘ಡಿಕೆ ಶಿವಕುಮಾರ್​ ಡಿಸಿಎಂ ಆಗಿದ್ದಾಗ ಅವರೇ ಉಸ್ತುವಾರಿ, ಆಗ ಏಕೆ ಮಾಡಿಲ್ಲ. ಇಷ್ಟು ವರ್ಷ ಇಲ್ಲದ ಟೌನ್​ಶಿಪ್​ನ್ನು ಈಗ ಏಕೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 20,000ಕ್ಕಿಂತ ಹೆಚ್ಚು ಬಿಡಿಎ ಸೈಟ್​ ಖಾಲಿ ಬಿದ್ದಿದೆ. ಹೆಚ್​.ಡಿ.ಕುಮಾರಸ್ವಾಮಿ ಟೌನ್​ಶಿಪ್​ ಯೋಜನೆ ಘೋಷಣೆ ಮಾಡಿದ್ದರು. ನಾವು ಈಗ ಮುಂದುವರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಟೌನ್​ಶಿಪ್​ ಕೂಸನ್ನು ಅಬಾರ್ಷನ್ ಮಾಡಿದ್ದು ಕಾಂಗ್ರೆಸ್’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಮಗಳ ಹುಟ್ಟುಹಬ್ಬಕ್ಕೆ ಟ್ರಕ್ ಒಳಗೆ ಅಲಂಕರಿಸಿ ಸರ್ಪ್ರೈಸ್ ನೀಡಿದ ತಂದೆ – Kannada News | Father surprises daughter by decorating the inside of a truck for her birthday

ಅಪ್ಪ (father) ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ಅಪ್ಪಂದಿರು ಕೂಡ ತಮ್ಮ ಮಗಳ ಖುಷಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾನೆ. ಈ ತಂದೆ ಮಗಳ ಸಂಬಂಧವನ್ನು ವಿವರಿಸಲು ಪದಗಳಿಲ್ಲ. ಇದೀಗ ಟ್ರಕ್ ಓಡಿಸಿ ಜೀವನ ನಡೆಸುವ  ವ್ಯಕ್ತಿಯೊಬ್ಬ ತನ್ನ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ತನ್ನ ಟ್ರಕ ಒಳಗೆ ಸುಂದರವಾಗಿ ಅಲಂಕರಿಸಿ ಮಗಳಿಗೆ ಸರ್ಪ್ರೈಸ್ ನೀಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆಯ ಪ್ರೀತಿ ಸಾರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಚೀನಾ ಟ್ರಾವೆಲ್ ಜಾಯ್ (Chinatraveljoy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮಗಳ ಹುಟ್ಟುಹಬ್ಬಕ್ಕೆ ತಂದೆಯೊಬ್ಬ ತನ್ನ ಟ್ರಕನ್ನು ಅಲಂಕಾರ ಮಾಡಿ ಸರ್ಪ್ರೈಸ್ ನೀಡಿದ್ದಾನೆ. ಟ್ರಕ್‌ನ ಒಳಗೆ ಆಕಾಶಬುಟ್ಟಿಗಳು, ದೀಪಗಳಿಂದ ಅಲಂಕರಿಸಲಾಗಿದೆ. ಮಗಳಿಗಾಗಿ ಉಡುಗೊರೆಗಳನ್ನು ತಂದು ಇಟ್ಟಿರುವುದನ್ನು ಕಾಣಬಹುದು.  ಮಗಳು ಟ್ರಕ್ ಹಿಂದೆ ಬಂದು ನಿಂತುಕೊಂಡಿದ್ದು, ಈ ವ್ಯಕ್ತಿ  ಟ್ರಕ್ ಹಿಂಬದಿ ಬಾಗಿಲು ತೆರೆದು ಸರ್ಪ್ರೈಸ್ ನೀಡಿರುವುದನ್ನು ನೀವು ನೋಡಬಹುದು. ಆ ಬಳಿಕ ಪುಟ್ಟ ಮಗಳನ್ನು ಮೇಲೆತ್ತಿ ಟ್ರಕ್ ಒಳಗೆ ಬಿಟ್ಟಿದ್ದು, ತಂದೆಯ ಸರ್ಪ್ರೈಸ್ ನೋಡಿ ಮಗಳು ಖುಷಿ ಪಟ್ಟಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಂದೆಯ ಬರ್ತ್ಡೇಗೆ ಬಾಲ್ಯದ ಸ್ನೇಹಿತರನ್ನೇ ಮನೆಗೆ ಆಹ್ವಾನಿಸಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ಮಗಳು

ಈ ವಿಡಿಯೋ ಹನ್ನೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಂದೇ ಒಂದು ಪದ ಸಾಕು ಅದುವೇ ವಾವ್ಹ್ ಎಂದಿದ್ದಾರೆ. ಇನ್ನೊಬ್ಬರು, ಮಗಳ ಖುಷಿಗಾಗಿ ತಂದೆ ಏನು ಬೇಕಾದ್ರೂ ಮಾಡ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ದೃಶ್ಯ ನೋಡಿ ನನ್ನ ಅಪ್ಪ ನೆನಪಾದ್ರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:56 pm, Mon, 10 August 26

Source link

ನರೇಂದ್ರ, ನರೇಂದ್ರ, ನರೇಂದ್ರ..; ಈ ಹೆಸರು ನನಗೆ ಸ್ವಲ್ಪನೂ ಇಷ್ಟವಿಲ್ಲ ಎಂದ ಪಾಕ್ ಬಾಕ್ಸರ್ – Kannada News | PM Modi Meets CWG Medalists; Boxer Narender Berwal Shares Hilarious Pakistani Boxer Story

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಭಾರತದ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿದರು. ಅನೇಕ ಪ್ರಮುಖ ಕ್ರೀಡೆಗಳ ಅನುಪಸ್ಥಿತಿಯ ಹೊರತಾಗಿಯೂ, ಭಾರತೀಯ ಆಟಗಾರರು 39 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಪದಕ ವಿಜೇತರಿಗೆ ದೇಶದಲ್ಲಿ ಅದ್ಧೂರಿ ಸ್ವಾಗತ ಕೂಡ ನೀಡಲಾಯಿತು. ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಮಯದಲ್ಲಿ ಕ್ರೀಡಾಪಟುಗಳು ಪ್ರಧಾನಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಬಾಕ್ಸರ್ ನರೇಂದ್ರ ಬರ್ವಾಲ್ ( Narender Berwal) ಹಂಚಿಕೊಂಡ ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಸಂವಾದ ಅಲ್ಲಿದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಪಾಕ್ ಬಾಕ್ಸರ್ ವಿರುದ್ಧ ಸ್ಪರ್ಧೆ

2015 ರಲ್ಲಿ ನಡೆದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಕಿಸ್ತಾನಿ ಬಾಕ್ಸರ್ ಜೊತೆಗಿನ ಪಂದ್ಯ ಹಾಗೂ ಸಮಯದಲ್ಲಿ ಇಬ್ಬರ ನಡುವೆ ನಡೆದ ಮಾತುಕತೆಯ ವಿವರನ್ನು ಪ್ರಧಾನಿಯವರೊಂದಿಗೆ ನರೇಂದ್ರ ಬರ್ವಾಲ್ ಹಂಚಿಕೊಂಡರು. ಸರ್, ‘2015 ರಲ್ಲಿ ನಡೆದ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ನನ್ನ ಮೊದಲ ಸುತ್ತಿನ ಪಂದ್ಯ ಪಾಕಿಸ್ತಾನದ ವಿರುದ್ಧವಾಗಿತ್ತು. ನೀನು ಪಾಕಿಸ್ತಾನಿ ಬಾಕ್ಸರ್ ಎದುರು ಸೋಲುವಂತಿಲ್ಲ ಎಂದು ನನಗೆ ನನ್ನ ಮಿಲಿಟರಿ ಸಹೋದ್ಯೋಗಿಗಳು ಎಚ್ಚರಿಸಿದ್ದರು. ಅದರಂತೆ ನಾನು ಆ ಪಂದ್ಯವನ್ನು ಗೆದ್ದೆ. ಆದರೆ ಆ ಪಂದ್ಯದ ಸಮಯದಲ್ಲಿ ಇಬ್ಬರಿಗೂ ಗಾಯಗಳಾಗಿದ್ದವು. ಆ ಗಾಯಗಳಿಗೆ ಹೊಲಿಗೆಗಳನ್ನು ಹಾಕಿಸಿಕೊಳ್ಳಲು ಇಬ್ಬರು ಆಸ್ಪತ್ರೆಗೆ ತೆರಳಿದ್ದವು

ನರೇಂದ್ರ ಹೆಸರು ನನಗೆ ಇಷ್ಟವಿಲ್ಲ; ಪಾಕ್ ಬಾಕ್ಸರ್

ಇದೇ ವೇಳೆ ನನ್ನ ಜೊತೆ ಮಾತನಾಡಿದ ಪಾಕಿಸ್ತಾನಿ ಬಾಕ್ಸರ್, ‘ಬಾಯ್ ನಿಮ್ಮ ಹತ್ತಿರ ಒಂದು ಮಾತು ಹೇಳಲ, ಆಪ್ಕಾ ನಾಮ್ ನರೇಂದರ್ ಹೈ, ಆಪ್ಕೆ ಕೋಚ್ ಕಾ ನಾಮ್ ನರೇಂದರ್ ಹೈ, ಆಪ್ಕೆ ಪ್ರಧಾನ ಮಂತ್ರಿ ಕಾ ನಾಮ್ ನರೇಂದ್ರ ಹೈ. ಮುಝೆ ನರೇಂದ್ರ ನಾಮ್ ಸೆ ನಫ್ರತ್ ಹೋ ಗಯಿ ಹೈ’ (ನಿಮ್ಮ ಹೆಸರು ನರೇಂದ್ರ, ನಿಮ್ಮ ತರಬೇತುದಾರರ ಹೆಸರು ನರೇಂದ್ರ, ನಿಮ್ಮ ಪ್ರಧಾನಿಯ ಹೆಸರು ನರೇಂದ್ರ. ನನಗೆ ಈ ನರೇಂದ್ರ ಎಂಬ ಹೆಸರು ಇಷ್ಟವಿಲ್ಲ) ಎಂದಿದ್ದ’ ಎಂಬುದನ್ನು ಪ್ರಧಾನಿ ಮುಂದೆ ವಿವರಿಸಿದರು. ಇದನ್ನು ಕೇಳಿದೊಡನೆ ಪ್ರಧಾನಿ ಜೊತೆಗೆ ಅಲ್ಲಿ ನೆರೆದಿದ್ದ ಇತರ ಪದಕ ವಿಜೇತರು ನಗೆಗಡಲಲ್ಲಿ ತೇಲಿದರು.

ಬೆಳ್ಳಿ ಪದಕ ಗೆದ್ದ ಬೆರ್ವಾಲ್

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 90 ಕೆಜಿ ವಿಭಾಗದಲ್ಲಿ ಬಾಕ್ಸರ್ ಬೆರ್ವಾಲ್ ಬೆಳ್ಳಿ ಪದಕ ಗೆದ್ದರು. ಇಂಗ್ಲೆಂಡ್‌ನ ಡಮರ್ ಥಾಮಸ್ ವಿರುದ್ಧದ ಚಿನ್ನದ ಪದಕ ಪಂದ್ಯದಲ್ಲಿ 0-5 ಅಂತರದಿಂದ ಸೋತ ಬೆರ್ವಾಲ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಮೂಲಕ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 10 ನೇ ಪದಕವನ್ನು ಗೆದ್ದುಕೊಟ್ಟರು. ಇನ್ನು ಬಾಕ್ಸಿಂಗ್‌ನಲ್ಲಿ ಭಾರತದ ಪ್ರದರ್ಶನ ಅಮೋಘವಾಗಿತ್ತು. ಈ ಸ್ಪರ್ಧೆಯಲ್ಲಿ ಭಾರತ ಏಳು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಕೋರ್ಟ್ ಬಿಗ್ ರಿಲೀಫ್ – Kannada News | Karnataka High Court Stay On Minister Nagendra Bail condition In Valmiki Corporation Scam Case

ಬೆಂಗಳೂರು, (ಆಗಸ್ಟ್ 10):  ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.  ಅನುಮತಿಯಿಲ್ಲದೆ ರಾಜ್ಯ (ಕರ್ನಾಟಕ) ಬಿಟ್ಟು ತೆರಳದಂತೆ ವಿಧಿಸಿದ್ದ ಷರತ್ತಿಗೆ ಕರ್ನಾಟಕ ಹೈಕೋರ್ಟ್ (Karnataka High Court) ತಡೆ ನೀಡಿದೆ. ದೆಹಲಿಗೆ ತೆರಳಲು ಅನುಮತಿ ಕೋರಿದ್ದ ಬಿ.ನಾಗೇಂದ್ರ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತಿಗೆ ತಡೆ ನಿಡಿದ್ದು, ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ಷರತ್ತು ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಇಡಿಗೆ ಆ.12ರವರೆಗೆ ಕಾಲಾವಕಾಶ ನೀಡಿದೆ.

ಜೈಲು ಸೇರಿದ್ರೂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿರೋ ನಾಗೇಂದ್ರ ಇಡಿ ತನಿಖೆ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಭೇಟಿ ನೀಡಿದ್ದಾರೆ. ಅನುಮತಿಯನ್ನೇ ಪಡೆಯದೆ ನಾಗೇಂದ್ರ ಅವರು ಕಳೆದ ಜುಲೈ 17ರಂದು ದೆಹಲಿಗೆ ಹೋಗಿದ್ದರ ಮಾಹಿತಿ ಲಭ್ಯವಾಗಿದೆ. ಸಂಬಂಧ ವಿಪಕ್ಷ ಬಿಜೆಪಿ  ಧ್ವನಿ ಎತ್ತಿದ್ದು, ಕೋರ್ಟ್ ಷರತ್ತು ಉಲ್ಲಂಘಿಸಿದ ನಾಗೇಂದ್ರರನ್ನು ಕ್ಯಾಬಿನೆಟ್​​​​ನಿಂದ ವಜಾ ಮಾಡುವಂತೆ ಆಗ್ರಹಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು – Kannada News | Hoskote Shock: Newly Hired Nepali Domestic Help and Guard Rob Employer’s House

ಮನೆಯಲ್ಲಿ ಕಳ್ಳತನ ನಡೆದಿರುವುದುImage Credit source: Tv9 Kannada

ದೇವನಹಳ್ಳಿ, ಆಗಸ್ಟ್​​ 10: 2 ತಿಂಗಳಿಂದ ಮನೆ ಮಂದಿಯಂತ್ತಿದ್ದ ಕೆಲಸದವರೇ ಮಾಲೀಕ ಊರಿಗೆ ಹೋಗ್ತಿದ್ದಂತೆ ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿ ಎಸ್ಕೇಪ್​​ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲ ಎಂಬ ಮಾಹಿತಿ ಗೊತ್ತಿದ್ದ ಹಿನ್ನೆಲೆ ಮಧ್ಯರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೊಸಕೋಟೆ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್ ವಿಲ್ಲಾ ಬಡಾವಣೆಯಲ್ಲಿ ಕುಟುಂಬ ಸಮೇತ ಹಲವು ವರ್ಷಗಳಿಂದ ವಾಸವಿದ್ದ ರವಿ ರಾಜನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇತ್ತೀಚೆಗೆ ಬಡಾವಣೆಗೆ ಬಂದಿದ್ದ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಒಬ್ಬ ಪತ್ನಿಗೆ ಮನೆಯಲ್ಲಿ ಕೆಲಸವಿದ್ದರೆ ಕೊಡಿ. ನಿತ್ಯ ಕಾರುಗಳನ್ನ ತೊಳೆದು ಮನೆ ಕ್ಲೀನ್ ಮಾಡಿಕೊಡ್ತಾರೆ ಎಂದು ಕೇಳಿಕೊಂಡಿದ್ದ. ಆತನ ಮಾತು ಕೇಳಿ ರವಿ ರಾಜನ್ ಕೂಡ ಕೆಲಸ ನೀಡಿದ್ದರು. ಈ ನಡುವೆ ನಾವು ಊರಿಗೆ ಹೋಗಿಬರುತ್ತೇಬೆ. ಮನೆಕಡೆ ಹುಷಾರು ಎಂದು ಹೇಳಿ ಕುಟುಂಬ ತೆರಳಿತ್ತು. ಇದೇ ಸರಿಯಾದ ಸಮಯ ಎಂದು ಅಲರ್ಟ್​​ ಆದ ಆರೋಪಿಗಳು, ಮಧ್ಯರಾತ್ರಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಕಿ ಬಿಗ್‌ ಬೇಟೆ: 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಸೆರೆ!

ಕುಟುಂಬಸ್ಥರಿಗೆ ಕಾದಿತ್ತು ಆಘಾತ

ಊರಿಂದ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಕುಟುಂಬಸ್ಥರಿಗೆ ಬಡಾವಣೆಯ ನೆರೆ ಹೊರೆಯವರು ಸೆಕ್ಯೂರಿಟಿ ಗಾರ್ಡ್ ಒಬ್ಬ ನಾಪತ್ತೆಯಾಗಿದ್ದು ಮನೆಯಲ್ಲಿ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗೆ ಮನೆ ಒಳಗಡೆ ಹೋಗಿ ನೋಡಿದಾಗ ಬಾಗಿಲು ಒಡೆದು ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಕಂಡು ಬಂದಿದೆ. ಜೊತೆಗೆ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಮನೆ ಒಳಗಡೆ ರಾಡ್ ಹಿಡಿದು ನುಗ್ಗಿ ಒಡಾಡಿ ಕಳ್ಳತನ ಮಾಡಿರುವ ದೃಶ್ಯಗಳು ಅದರಲ್ಲಿ ಸೆರೆಯಾಗಿವೆ. ಇದರ ಆಧಾರದಲ್ಲಿ ಕುಟುಂಬಸ್ಥರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ​​ ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮತ್ತೆ ಬಂದ ಲಾಯರ್ ‘ಸಿಎಸ್‌ಪಿ’: ಡಿಜಿಟಲ್ ಅಂಗಳಕ್ಕೆ ಸೀತಾರಾಮ್ ಪಾದಾರ್ಪಣೆ – Kannada News | TN Seetharam Returns with New Web Series Mundina Adhyaya on YouTube

ಕನ್ನಡ ಕಿರುತೆರೆಯ ಟ್ರೆಂಡ್ ಸೆಟ್ಟರ್, ಖ್ಯಾತ ನಿರ್ದೇಶಕ ಹಾಗೂ ನಟ ಟಿ. ಎನ್. ಸೀತಾರಾಮ್ (TN Seetharam) ತಮ್ಮ ನೆಚ್ಚಿನ ವೀಕ್ಷಕರಿಗಾಗಿ ‘ಮುಂದಿನ ಅಧ್ಯಾಯ’ ಎಂಬ ನೂತನ ವೆಬ್ ಸರಣಿಯೊಂದಿಗೆ ಬರಲು ಸಜ್ಜಾಗಿದ್ದಾರೆ. ಇದು ಯಾವ ಒಟಿಟಿಯಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಒಂದು ಖುಷಿ ಸುದ್ದಿ ಇದೆ. ಇದು ಯೂಟ್ಯೂಬ್​​ನಲ್ಲಿ ಉಚಿತವಾಗಿ ಸಿಗಲಿದೆ. ‘ಮಾಯಾಮೃಗ’, ‘ಮುಕ್ತ’, ‘ಮನ್ವಂತರ’, ‘ಮಹಾ ಪರ್ವ’ ಹಾಗೂ ‘ಮಗಳು ಜಾನಕಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಅವರ ‘ಸಿಎಸ್‌ಪಿ’ ಪಾತ್ರ ಈ ಹೊಸ ವೆಬ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.

ಈ ವೆಬ್ ಸರಣಿಗೆ ನಿರ್ದೇಶನವನ್ನು ಚಂದನ್ ಶಂಕರ್ ಮಾಡುತ್ತಿದ್ದು, ಟಿ.ಎನ್. ಸೀತಾರಾಮ್ ಅವರೇ ಪ್ರಧಾನ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ಅರ್ಧಕ್ಕೆ ನಿಂತುಹೋಗಿದ್ದರಿಂದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಅದೇ ಅಭಿಮಾನಿಗಳ ಒತ್ತಾಯ ಹಾಗೂ ಬೇಡಿಕೆಯನ್ನು ಪರಿಗಣಿಸಿ, ಸೀತಾರಾಮ್ ಅವರು ಸಿಎಸ್‌ಪಿ ಪಾತ್ರದ ಜೊತೆಗೆ ಹಲವು ಹೊಸ ಹಾಗೂ ಹಳೆಯ ಪಾತ್ರಗಳನ್ನು ಜೋಡಿಸಿಕೊಂಡು ಈ ಹೊಸ ಪ್ರಯತ್ನ ಮಾಡುತ್ತಿದ್ದಾರೆ.

‘ಮುಂದಿನ ಅಧ್ಯಾಯ’ ಸರಣಿಯು ಕಿರುತೆರೆಯ ಧಾರಾವಾಹಿಗಳಂತೆಯೇ ದಿನನಿತ್ಯ ನಿಗದಿತ ಸಮಯಕ್ಕೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ. ಪ್ರತಿ ಸೀಸನ್ ಮುಗಿದ ನಂತರ ವೀಕ್ಷಕರು ಎಲ್ಲಾ ಸಂಚಿಕೆಗಳನ್ನು ಒಟ್ಟಿಗೇ ವೀಕ್ಷಿಸಬಹುದಾಗಿದೆ. ಈ ಹೊಸ ಅಧ್ಯಾಯದಲ್ಲಿ ಶ್ಯಾಮಲತ್ತೆ, ಭಾರ್ಗಿ, ಶಂಕರ್ ಮೂರ್ತಿ, ಶಾರ್ದೂಲ್ ಹಾಗೂ ಗುರುದಾಸ್ ಅಂತಹ ಪಾತ್ರ ಇರಲಿದೆ.
ಭಾಗಿ ಪಾತ್ರ ಮಾಡುತ್ತಿದ್ದ ಹಿರಿಯ ನಟ ಮಂಡ್ಯ ರವಿ ನಿಧನ ಹೊಂದಿದ್ದು ಅವರ ಜಾಗದಲ್ಲಿ ಹನುಮಂತೇಗೌಡ ಅವರು ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಶೂಟಿಂಗ್ ಕಾರ್ಯಗಳು ಆರಂಭವಾಗಿದ್ದು, ಶೀಘ್ರದಲ್ಲೇ ಪ್ರಸಾರ ದಿನಾಂಕ ಹೊರಬೀಳಲಿದೆ.

ಇದನ್ನೂ ಓದಿ: ‘ದಿ ಡೈಲಿ ಡ್ರಾಪ್’ ಕೋರ್ಟ್ ರೂಮ್ ಸೀರೀಸ್​ಗೆ ಟಿಎನ್‌ ಸೀತಾರಾಮ್‌ ಪುತ್ರಿ ಅಶ್ವಿನಿ ನಿರ್ದೇಶನ

ಒಂದು ಸೀಸನ್​ನಿಂದ ಮತ್ತೊಂದು ಸೀಸನ್​ಗೆ ಕನೆಕ್ಷನ್ ಇರಲಿದೆ. ಕಥೆಯಲ್ಲಿ ಹೆಚ್ಚು ಬದಲಾವಣೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆ. ಸದ್ಯಕ್ಕೆ ಶೂಟಿಂಗ್ ಆರಂಭ ಆಗಿದ್ದು, ಮೊದಲ ಸೀಸನ್ ಪ್ರಸಾರ ಕಾಣಲಿದೆ. ಆ ಬಳಿಕ ಎರಡನೇ ಸೀಸನ್ ಪ್ರಸಾರ ಆಗಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ವಿಪಕ್ಷಗಳು ಗದ್ದಲ ಎಬ್ಬಿಸಬಾರದು’; ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್​ನಲ್ಲಿ ಭಾಷಣಕ್ಕೆ ಅಮಿತ್ ಶಾ ಸಿದ್ಧ – Kannada News | Amit Shah to speak on Student Protest in Parliament Government says Opposition should Listen

ನವದೆಹಲಿ, ಆಗಸ್ಟ್ 10: ದೆಹಲಿ ಪೊಲೀಸ್ ಕಾರ್ಯಾಚರಣೆ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪವಾಗಲಿರುವ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸಿದ್ಧರಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಆ ಸಂದರ್ಭದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ತಿಳಿಸಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ವೇಳೆ ದೆಹಲಿಯಲ್ಲಿ ಪೆಲೆಟ್ ಗನ್‌ಗಳ ಬಳಕೆ ಮತ್ತು ಬಿಹಾರದಲ್ಲಿ ಎಕೆ-47 ಬಳಕೆಯ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿಗೆ ಆಗಮಿಸಿ ವಿವರಣೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು.

ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಬಿಸಿನೆಸ್ ಅಡ್ವೈಸರಿ ಕಮಿಟಿ’ (BAC) ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ವಿದ್ಯಾರ್ಥಿಗಳ ವಿಚಾರದ ಕುರಿತು ಚರ್ಚೆಗೆ ಆಹ್ವಾನ ನೀಡಿದರು. “ಕೇಂದ್ರ ಗೃಹ ಸಚಿವರು ಈ ಚರ್ಚೆಗೆ ಪ್ರತ್ಯುತ್ತರ ನೀಡಲಿದ್ದಾರೆ” ಎಂದು ಕಿರಣ್ ರಿಜಿಜು ಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಪ್ರತಿಪಕ್ಷಗಳ ಮನವಿ ಪರಿಗಣಿಸಲು ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ

ಕಳೆದ 2 ವಾರಗಳಿಂದ ಎರಡೂ ಸದನಗಳ ಕಲಾಪಕ್ಕೆ ಅಡ್ಡಿಯಾಗಿದ್ದ ಮತ್ತು ಗದ್ದಲದ ನಡುವೆಯೇ ಹಲವು ವಿಧೇಯಕಗಳು ಅಂಗೀಕಾರಗೊಳ್ಳಲು ಕಾರಣವಾಗಿದ್ದ ಸಂಸತ್ತಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಜುಲೈ 20ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಾಳಿ ಹಾಗೂ ಕಾರ್ಯಾಚರಣೆಯ ಕುರಿತು ಅಮಿತ್ ಶಾ ಅವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದರು.

ಇಂದು ಬೆಳಿಗ್ಗೆ ನಡೆದ ವಿಪಕ್ಷಗಳ ತಂತ್ರಗಾರಿಕೆ ಸಭೆಯಲ್ಲಿ, ಅಮಿತ್ ಶಾ ಅವರಿಂದ ಹೇಳಿಕೆ ಪಡೆಯಲು ಪ್ರತಿಭಟನೆಯನ್ನು ಮುಂದುವರಿಸಲು ವಿರೋಧ ಪಕ್ಷಗಳ ನಾಯಕರು ತೀರ್ಮಾನಿಸಿದ್ದರು. ಅದರ ಬೆನ್ನಲ್ಲೇ ಅಮಿತ್ ಶಾ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಗದ್ದಲ ಸೃಷ್ಟಿಸಬೇಡಿ ಎಂದ ಸರ್ಕಾರ:

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ರಿಜಿಜು, “ವಿದ್ಯಾರ್ಥಿ ಚಳವಳಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ಪೂರ್ಣ ಪ್ರಮಾಣದ ಸುದೀರ್ಘ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಚರ್ಚೆ ನಡೆದು ಉತ್ತರ ನೀಡುವಾಗ ಗೃಹ ಸಚಿವರ ಹೇಳಿಕೆಗೆ ತಡೆಯೊಡ್ಡುವ ರೀತಿಯಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಬಾರದು ಎಂಬುದು ವಿಪಕ್ಷಗಳಿಗೆ ನನ್ನ ಮನವಿ. ಅವರು ಗೃಹ ಸಚಿವರು ಮತ್ತು ಸರ್ಕಾರದ ಉತ್ತರವನ್ನು ಆಲಿಸಬೇಕು. ಒಮ್ಮೆ ಚರ್ಚೆ ಪ್ರಾರಂಭವಾದರೆ, ನಾವು ಕೂಲಂಕುಷವಾಗಿ ಚರ್ಚಿಸಬೇಕಾಗುತ್ತದೆ” ಎಂದು ರಿಜಿಜು ಹೇಳಿದರು.

ಇದನ್ನೂ ಓದಿ: ‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

ಸರ್ಕಾರದ ತಂತ್ರ ಎಂದ ವಿರೋಧ ಪಕ್ಷಗಳು:

ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳನ್ನು ಒಡೆಯುವ ತಂತ್ರವಾಗಿದೆ ಎಂದು ಕೆಲವು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಏಕೆಂದರೆ ‘ಇಂಡಿಯಾ’ (INDIA) ಕೂಟದ ಎರಡನೇ ಅತಿದೊಡ್ಡ ಮಿತ್ರಪಕ್ಷವಾದ ಸಮಾಜವಾದಿ ಪಕ್ಷವು ಆಯೋಧ್ಯೆಯ ದೇಣಿಗೆ ಕಳವು ಆರೋಪದ ಕುರಿತು ಚರ್ಚಿಸಲು ಉತ್ಸುಕವಾಗಿದೆ. ಆದರೆ, ವಿದ್ಯಾರ್ಥಿಗಳ ಸಮಸ್ಯೆ ಮತ್ತು ಅಯೋಧ್ಯೆಯ ದೇಣಿಗೆ ಕಳವು ಎರಡೂ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾದ ಗೌರವ್ ಗೋಗೋಯ್ ಮತ್ತು ಕೆ. ಸುರೇಶ್ ‘ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.

“ಯಾವುದಾದರೂ ಒಂದು ವಿಷಯವನ್ನು ಕೈಬಿಡಬಹುದು ಎಂದು ನಾವು ಎಂದಿಗೂ ಹೇಳಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ರಾಮಮಂದಿರದ ದೇಣಿಗೆ ವಿವಾದದ ವಿಚಾರಗಳು ನಮಗೆ ಪ್ರಮುಖ ವಿಷಯಗಳಾಗಿವೆ ಎಂಬುದನ್ನು ನಾವು ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇವೆ” ಎಂದು ಕಾಂಗ್ರೆಸ್‌ನ ಮುಖ್ಯ ಸಚೇತಕ ಗೌರವ್ ಗೋಗೋಯ್ ಹೇಳಿದ್ದಾರೆ. ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ವಿಪಕ್ಷಗಳು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಇದು ಕಲಾಪದ ತಡೆ ಹಾಗೂ ಮುಂದೂಡಿಕೆಗೆ ಕಾರಣವಾಗಿದೆ. ಈ ಮುಂಗಾರು ಅಧಿವೇಶನವು ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version