Pat Cummins: ನಮ್ಮ ಎದುರಾಳಿಯಾಗಿದ್ದರೂ ಅಬ್ಬರಿಸಿದ್ದು ಆಸ್ಟ್ರೇಲಿಯಾದವ! – Kannada News | Pat Cummins said Good to see the Aussies do well

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 49ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 235 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ 59 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಇದಾಗ್ಯೂ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 33 ರನ್​ಗಳಿಂದ ಸೋಲನುಭವಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಕೂಪರ್ ಕೊನೊಲಿ ಅವರ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಇದು ಕೂಪರ್ ಕೊನೊಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರಿಗೆ ಉತ್ತಮ ಫಲಿತಾಂಶ. ಒಬ್ಬ ಆಸ್ಟ್ರೇಲಿಯನ್ ಆಟಗಾರ ಇಷ್ಟು ಅದ್ಭುತವಾಗಿ ಆಡುವುದನ್ನು ನೋಡುವುದು ಖುಷಿ ನೀಡುತ್ತದೆ. ಕೂಪರ್ ಕೊನೊಲಿ ಆಟ ಆಸ್ಟ್ರೇಲಿಯಾ ತಂಡಕ್ಕೂ ಶುಭ ಸಂಕೇತ” ಎಂದು ಪ್ಯಾಟ್ ಕಮಿನ್ಸ್ ಹಾಡಿ ಹೊಗಳಿದ್ದಾರೆ.

ಇಲ್ಲಿ ಕೂಪರ್ ಕೊನೊಲಿ ಎದುರಾಳಿ ತಂಡದ ಆಟಗಾರನಾಗಿದ್ದರೂ ಆಸ್ಟ್ರೇಲಿಯಾದವ ಅತ್ಯುತ್ತಮವಾಗಿ ಆಡಿರುವುದನ್ನು ನೋಡಿ ಪ್ಯಾಟ್ ಕಮಿನ್ಸ್​ಗೆ ಖುಷಿಯಾಗಿದೆ. ಏಕೆಂದರೆ ಕೊನೊಲಿ ಆಸ್ಟ್ರೇಲಿಯಾ ತಂಡದ ಭರವಸೆಯ ದಾಂಡಿಗ. ಇದೇ ರೀತಿ ಪ್ರದರ್ಶನ ನೀಡಿದರೆ ಅದರಿಂದ ಆಸ್ಟ್ರೇಲಿಯಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಕಮಿನ್ಸ್ ಅವರ ಅಭಿಮತ.

ಇದನ್ನೂ ಓದಿ: ಅಭಿಷೇಕ್ ಆರ್ಭಟಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಇನ್ನು ಈ ಪಂದ್ಯದಲ್ಲಿ ಶತಕ ಸಿಡಿಸುವುದರೊಂದಿಗೆ ಕೂಪರ್ ಕೊನೊಲಿ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆ ಯಾವುದೆಂದರೆ…

  •  ಕಿರಿಯ ಶತಕವೀರ: 22 ವರ್ಷದ ಕೊನೊಲಿ, ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಓವರ್‌ಸೀಸ್ ಆಟಗಾರ ಎನಿಸಿಕೊಂಡರು.
  • ಬ್ರಾಡ್‌ಮನ್ ಪ್ರಶಸ್ತಿ ವಿಜೇತ: ಈ ವರ್ಷದ ಆರಂಭದಲ್ಲೇ ‘ಬ್ರಾಡ್‌ಮನ್ ಯಂಗ್ ಕ್ರಿಕೆಟರ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದಿದ್ದ ಕೊನೊಲಿ, ಈಗ ಐಪಿಎಲ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
  • ಏಕಾಂಗಿ ಹೋರಾಟ: ಹೈದರಾಬಾದ್ ನೀಡಿದ್ದ 235 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಕೊನೊಲಿ ಒಬ್ಬರೇ ಹೋರಾಟ ನಡೆಸಿದರು. ಈ ಏಕಾಂಗಿ ಹೋರಾಟಕ್ಕೆ ಪ್ಯಾಟ್ ಕಮಿನ್ಸ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಅಗ್ರಸ್ಥಾನಕ್ಕೇರಿದ ಎಸ್​ಆರ್​​ಹೆಚ್​:

ಪಂಜಾಬ್ ಕಿಂಗ್ಸ್​ ವಿರುದ್ಧದ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಮುಂದಿನ 3 ಪಂದ್ಯಗಳಲ್ಲಿ ಎಸ್​ಆರ್​​ಹೆಚ್ ತಂಡ ಒಂದು ಗೆಲುವು ಸಾಧಿಸಿದರೆ ಪ್ಲೇಆಫ್ ಆಡುವುದು ಸಹ ಖಚಿತವಾಗಲಿದೆ.

Source link

ಪಿಣರಾಯಿ ವಿಜಯನ್ ಕೇರಳ ಸಿಎಂ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಹೆಸರಿಗೆ ಮತ್ತೊಂದು ದಾಖಲೆ! – Kannada News | CM Siddaramaiah Now India’s Oldest Chief Minister After Pinarayi Vijayan Resigns; Breaks Karnataka Records

ಬೆಂಗಳೂರು, ಮೇ 7: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ (LDF) ಪರಾಜಯಗೊಂಡ ಕಾರಣ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಣರಾಯಿ ವಿಜಯನ್ ನಿರ್ಗಮನದೊಂದಿಗೆ, ಕರ್ನಾಟಕದ ಮುಖ್ಯಮಂತ್ರಿ, 78 ವರ್ಷ ವಯಸ್ಸಿನ ಸಿದ್ದರಾಮಯ್ಯ (Siddaramaiah) ಈಗ ದೇಶದ ಅತ್ಯಂತ ಹಿರಿಯ (Oldest CM) ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಜೀವನದ ಮತ್ತೊಂದು ಮೈಲಿಗಲ್ಲು ಎನ್ನಬಹುದು.

ಮುಖ್ಯಾಂಶಗಳು

  • 78 ವರ್ಷ 9 ತಿಂಗಳ ಪ್ರಾಯದ ಸಿದ್ದರಾಮಯ್ಯ ಈಗ ಭಾರತದ ಅತ್ಯಂತ ಹಿರಿಯ ಮುಖ್ಯಮಂತ್ರಿ.
  • ಡಿ. ದೇವರಾಜ ಅರಸು ದಾಖಲೆ ಮುರಿದು ಕರ್ನಾಟಕದ ಸುದೀರ್ಘ ಕಾಲದ ಸಿಎಂ ಎಂಬ ಕೀರ್ತಿಗೆ ಈಗಾಗಲೇ ಭಾಜನರಾಗಿರುವ ಸಿದ್ದರಾಮಯ್ಯ.
  • 17 ಬಾರಿ ರಾಜ್ಯ ಬಜೆಟ್ ಮಂಡಿಸಿದ ಅಪರೂಪದ ದಾಖಲೆಯೂ ಸಿದ್ದರಾಮಯ್ಯ ಹೆಸರಿನಲ್ಲಿದೆ.

ವಯಸ್ಸಿನ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಮೊದಲಿಗ

ಪ್ರಸ್ತುತ ದೇಶದ ಮುಖ್ಯಮಂತ್ರಿಗಳ ಪಟ್ಟಿಯನ್ನು ಗಮನಿಸಿದರೆ, ಸಿದ್ದರಾಮಯ್ಯ (78) ಅವರ ನಂತರ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (75), ಮಿಜೋರಾಂನ ಲಾಲ್ದುಹೊಮಾ (74) ಮತ್ತು ನಾಗಾಲ್ಯಾಂಡ್‌ನ ನೆಫಿಯು ರಿಯೊ (74) ಅವರು ಹಿರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಇನ್ನು ಅರುಣಾಚಲ ಪ್ರದೇಶದ ಪೆಮಾ ಖಂಡು (46) ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು 1983 ರಲ್ಲಿ ತಮ್ಮ 36 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಅಂದಿನಿಂದ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಈಗ ಎರಡನೇ ಬಾರಿಗೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಡಿಯೂರಪ್ಪ ದಾಖಲೆ ಬ್ರೇಕ್

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅತಿ ಹಿರಿಯ ವಯಸ್ಸಿನಲ್ಲಿ ಸಿಎಂ ಹುದ್ದೆ ಅಲಂಕರಿಸಿದ ದಾಖಲೆಯೂ ಈಗ ಸಿದ್ದರಾಮಯ್ಯ ಅವರ ಪಾಲಾಗಿದೆ. ಈ ಹಿಂದೆ ಬಿಜೆಪಿ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ 2021 ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ 78 ವರ್ಷ 5 ತಿಂಗಳು ವಯಸ್ಸಾಗಿತ್ತು. ಈಗ ಸಿದ್ದರಾಮಯ್ಯಗೆ ಅದಕ್ಕಿಂತಲೂ ಹೆಚ್ಚಿನ ವಯಸ್ಸು. ಆ ಮೂಲಕ ಕರ್ನಾಟಕದ ಅತ್ಯಂತ ಹಿರಿಯ ಸಿಎಂ ಎನಿಸಿಕೊಂಡಿದ್ದಾರೆ. ಹೋಲಿಕೆ ಮಾಡಿದರೆ, ಎಸ್.ಎಂ. ಕೃಷ್ಣ 72ನೇ ವಯಸ್ಸಿನಲ್ಲಿ ಮತ್ತು ಜೆ.ಎಚ್. ಪಟೇಲ್ 69ನೇ ವಯಸ್ಸಿನಲ್ಲಿ ಅಧಿಕಾರದಿಂದ ನಿರ್ಗಮಿಸಿದ್ದರು. ಆರ್. ಗುಂಡೂರಾವ್ ಅವರು 43 ನೇ ವಯಸ್ಸಿನಲ್ಲಿ ರಾಜ್ಯದ ಅತ್ಯಂತ ಕಿರಿಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಸುದೀರ್ಘ ಕಾಲದ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರು ಕೇವಲ ವಯಸ್ಸಿನಲ್ಲಿ ಮಾತ್ರವಲ್ಲದೆ, ಅಧಿಕಾರಾವಧಿಯಲ್ಲೂ ದಾಖಲೆ ಬರೆದಿದ್ದಾರೆ. ಡಿ. ದೇವರಾಜ ಅರಸು ಅವರು ಒಟ್ಟು 7 ವರ್ಷ 239 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಪೂರ್ಣ ಅವಧಿ ಮುಗಿಸಿ, ಮೇ 2023 ರಿಂದ ಮತ್ತೆ ಅಧಿಕಾರದಲ್ಲಿದ್ದಾರೆ. ಈ ಮೂಲಕ ಅರಸು ಅವರ ಸುದೀರ್ಘ ಕಾಲದ ಅಧಿಕಾರಾವಧಿಯ ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದೊಂದು ಪೂರ್ವ ಯೋಜಿತ ಕೊಲೆ, ಆಪ್ತ ಚಂದ್ರನಾಥ್ ರಥ್ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಮಾತು – Kannada News | Suvendu Adhikari’s PA Murdered in West Bengal: Adhikari Calls it Pre Planned Killing

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಬಾರಿಸಿ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ರಥ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ಪೂರ್ವ ಯೋಜಿತ ಕೊಲೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಎರಡು-ಮೂರು ದಿನಗಳಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದರು.

ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಪ್ರದೇಶದ ದೊಹರಿಯಾದಲ್ಲಿ ಈ ಘಟನೆ ನಡೆದಿದೆ. 41 ವರ್ಷದ ಚಂದ್ರನಾಥ್ ರಥ್ ಅವರು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಚು ರೂಪಿಸಿದ್ದ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಥ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ತಮ್ಮ ಆಪ್ತ ಸಹಾಯಕರನ್ನು ಕಳೆದುಕೊಂಡ ಆಘಾತದಲ್ಲಿರುವ ಸುವೇಂದು ಅಧಿಕಾರಿ, ಇದೊಂದು ನಿರ್ದಯ ಮತ್ತು ಪೂರ್ವ ಯೋಜಿತ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಹಂತಕರು ಕಳೆದ 2-3 ದಿನಗಳಿಂದ ರಥ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು . ಕೊಲೆಗೆ ಸಂಪೂರ್ಣ ಸ್ಕೆಚ್ ಹಾಕಲಾಗಿತ್ತು. ಬಂಗಾಳ ಪೊಲೀಸ್ ಮಹಾನಿರ್ದೇಶಕರು (DGP) ಕೂಡ ಇದು ಯೋಜಿತ ಕೃತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ಕಿಡಿಕಾರಿದ ಸುವೇಂದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಇದು ಟಿಎಂಸಿಯ ಮಹಾಜಂಗಲ್ ರಾಜ್ಗೆ ಸಾಕ್ಷಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಅಪರಾಧಿಗಳನ್ನು ನಿರ್ನಾಮ ಮಾಡುವುದು ಖಚಿತ. ಆದರೆ, ಕಾರ್ಯಕರ್ತರು ಸಮಾಧಾನದಿಂದಿರಬೇಕು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.

ಈ ಹತ್ಯೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವೆ ಸುಕಾಂತ ಮಜುಂದಾರ್ ಈಗಾಗಲೇ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳದಲ್ಲಿ ಕೆಲವು ಪ್ರಮುಖ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

294 ಸ್ಥಾನಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಅಪ್ರತಿಮ ಬಹುಮತ ಸಾಧಿಸಿದೆ. ಟಿಎಂಸಿ 80 ಸ್ಥಾನಗಳಿಗೆ ಕುಸಿದಿದೆ. ಮೇ 9 ರಂದು ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲಿದೆ. ಸೋಲಿನ ಹೊರತಾಗಿಯೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದಾರೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಹತ್ಯೆ ನಡೆದಿರುವುದು ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಸ್ತೆ ಬದಿ ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಹಾಗಿದ್ರೆ ಈ ಸಿಸಿಟಿವಿ ವಿಡಿಯೋ ನೋಡಲೇಬೇಕು – Kannada News | Bengaluru Crime: Thieves Break Car Window, Steal Electronics and TV in Ashok Nagar; Incident Caught on CCTV

ಬೆಂಗಳೂರು, ಮೇ 7: ರಾಜಧಾನಿ ಬೆಂಗಳೂರಿನ ರಸ್ತೆ ಪಕ್ಕದಲ್ಲಿ ಕಾರು ಪಾರ್ಕ್ ಮಾಡಿ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿಯೇ ಬಿಟ್ಟು ಹೋಗುವವರು ಎಚ್ಚೆತ್ತುಕೊಳ್ಳಬೇಕಿದೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳೆದ ತಿಂಗಳು ನಡೆದ ಈ ಘಟನೆಯಲ್ಲಿ, ಕಾರಿನ ಮಾಲೀಕರು ರಾತ್ರಿ ಟಿವಿ ಹಾಗೂ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಾರಿನಲ್ಲೇ ಇಟ್ಟು ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿ ಮನೆಗೆ ತೆರಳಿದ್ದರು. ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ಕಾರಿನ ಗಾಜು ಒಡೆದಿರುವುದು ಹಾಗೂ ಒಳಗಿದ್ದ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಮತ್ತೊಂದು ಕಾರಿನಲ್ಲಿ ಬಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದು ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs RCB: ಐಪಿಎಲ್​ನಲ್ಲಿಂದು ಆರ್‌ಸಿಬಿ-ಲಕ್ನೋ ಮುಖಾಮುಖಿ: ಬೆಂಗಳೂರು ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಏನೆಲ್ಲ ಆಗಲಿದೆ? – Kannada News | Lucknow RCB clash in IPL 2026 today What will happen to the points table if Bengaluru wins?

ಬೆಂಗಳೂರು (ಮೇ. 07): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 50 ನೇ ಪಂದ್ಯವು ಗುರುವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ನಡುವೆ ನಡೆಯಲಿದೆ. ಈ ಹಿಂದೆ ಏಪ್ರಿಲ್ 15 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು, ಆ ಪಂದ್ಯದಲ್ಲಿ ಆರ್‌ಸಿಬಿ, ರಜತ್ ಪಾಟಿದಾರ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಎಲ್‌ಎಸ್‌ಜಿಯನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ಇಂದು ಮತ್ತೊಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಲಕ್ನೋ

ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಎಲ್​ಎಸ್​ಜಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಇದುವರೆಗಿನ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತಿದೆ. ಆರು ಪಂದ್ಯಗಳ ಸತತ ಸೋಲಿನ ನಂತರ ತಂಡ ಈ ಪಂದ್ಯವನ್ನು ಪ್ರವೇಶಿಸಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಆರು ವಿಕೆಟ್‌ಗಳ ಸೋಲು ಅನುಭವಿಸಿದೆ. ಪ್ಲೇಆಫ್ ತಲುಪುವ ಅವರ ಭರವಸೆ ಬಹುತೇಕ ಮುಗಿದಿರುವುದರಿಂದ, ತಂಡವು ಪ್ರವಾಸಿ ತಂಡದ ವಿರುದ್ಧ ಬಲಿಷ್ಠ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದೆ.

ಆರ್‌ಸಿಬಿ 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿದೆ

ಮತ್ತೊಂದೆಡೆ, ಆರ್‌ಸಿಬಿ ಪ್ಲೇಆಫ್ ತಲುಪಲು ಕೆಲವೇ ಹೆಜ್ಜೆಗಳ ದೂರದಲ್ಲಿದೆ. ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋತ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯವನ್ನು ಪ್ರವೇಶಿಸಲಿದೆ. ಲಕ್ನೋ ಸೂಪರ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ತಮ್ಮ ಮುನ್ನಡೆಯನ್ನು ಬಲಪಡಿಸುವ ಮತ್ತು ಪ್ಲೇಆಫ್‌ಗೆ ಹತ್ತಿರವಾಗುವ ಗುರಿಯನ್ನು ತಂಡ ಹೊಂದಿದೆ.

SRH vs PBKS: ಸತತ ಮೂರನೇ ಸೋಲು: ಪಂದ್ಯ ಸೋತಿದ್ದರಿಂದ ಕೋಪಗೊಂಡ ಶ್ರೇಯಸ್ ಅಯ್ಯರ್, ಏನು ಹೇಳಿದ್ರು ನೋಡಿ

ಲಕ್ನೋ ಮತ್ತು ಆರ್‌ಸಿಬಿಯ ಹೆಡ್ ಟು ಹೆಡ್ ದಾಖಲೆ

ಹೆಡ್-ಟು-ಹೆಡ್ ದಾಖಲೆಯಲ್ಲಿ ಆರ್‌ಸಿಬಿ ಎಲ್‌ಎಸ್‌ಜಿಗಿಂತ ಮೇಲುಗೈ ಸಾಧಿಸಿದೆ. ಬೆಂಗಳೂರು ಇಲ್ಲಿಯವರೆಗೆ ಪಂತ್ ಪಡೆಯ ವಿರುದ್ಧ ಏಳು ಪಂದ್ಯಗಳನ್ನು ಆಡಿದೆ, ಅವುಗಳಲ್ಲಿ ಐದು ಪಂದ್ಯಗಳನ್ನು ಆರ್​ಸಿಬಿ ಗೆದ್ದರೆ, ಸೂಪರ್ ಜೈಂಟ್ಸ್ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ.

ಪಂದ್ಯಕ್ಕೆ ಎರಡೂ ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜೋಶ್ ಹ್ಯಾಜಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರಸಿಖ್ ದಾರ್, ಭುವನೇಶ್ವರ್ ಕುಮಾರ್, ಜೋರ್ಡಾನ್ ಕಾಕ್ಸ್, ವೆಂಕಟ್ ಸಿಂಗ್, ಸುಯಶ್ ಲ್ಯೂನ್ ಕಾಕ್ಸ್, ವೆಂಕಟ್ ಸಿಂಗ್ ಶರ್ಮಾ, ಭುವನೇಶ್ವರ್ ಕುಮಾರ್ ಕಾನಿಷ್ಕ್ ಚೌಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ.

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಏಡೆನ್ ಮರ್ಕ್ರಾಮ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಮುಕುಲ್ ಚೌಧರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಅರ್ಶಿನ್ ಕುಲಕರ್ಣಿ, ವನಿಂದು ಹಸರಂಗ, ಅಯ್ ಖಾನ್ ಕುಲಕರ್ಣಿ, ಅಯ್ ಖಾನಮಿ ಬಸಾಮದ್ ಎಂ. ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್, ಅರ್ಜುನ್ ತೆಂಡೂಲ್ಕರ್, ಅನ್ರಿಚ್ ನಾರ್ಟ್ಜೆ, ನಮನ್ ತಿವಾರಿ, ಮಯಾಂಕ್ ಯಾದವ್, ಮೊಹ್ಸಿನ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಸರ್ಜರಿಗೆ ಒಳಗಾದ ಅಕ್ಷಯ್ ಕುಮಾರ್; ಅಂಥದ್ದೇನಾಯ್ತು? – Kannada News | Akshay Kumar Undergoes Eye Surgery; Takes Filming Break After Kerala Shoot

ಬಾಲಿವುಡ್‌ನ ನಟ ಅಕ್ಷಯ್ ಕುಮಾರ್ (Akshay Kumar) ಸದಾ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಒಂದು ದಿನವೂ ಬಿಡದೇ ಶೂಟ್ ಮಾಡುತ್ತಾರೆ. ಆದರೆ, ಈಗ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ಅವರು ಚಿತ್ರೀಕರಣದಿಂದ ವಿರಾಮ ಪಡೆದಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ‘ಭೂತ್ ಬಂಗ್ಲಾ’ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅಕ್ಷಯ್, ಒಂದು ಬ್ರೇಕ್ ಪಡೆದಿದ್ದಾರೆ. ಅನೀಸ್ ಬಾಜ್ಮಿ ನಿರ್ದೇಶನದ ಮುಂದಿನ ಚಿತ್ರದ ಶೂಟ್​​ಗೂ ಮೊದಲು ಅವರು ಈ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

1.ಮೇ 6ರಂದು ಅಕ್ಷಯ್ ಕುಮಾರ್‌ಗೆ ಕಣ್ಣಿನ ಶಸ್ತ್ರಚಿಕಿತ್ಸೆ

2.ಕೇರಳದಲ್ಲಿ ಅನೀಸ್ ಬಾಜ್ಮಿ ಚಿತ್ರದ ಶೂಟಿಂಗ್ ಮುಕ್ತಾಯ.

3. 15 ವರ್ಷಗಳಿಂದ ಸಮೋಸಾ ತ್ಯಜಿಸಿರುವ ‘ಖಿಲಾಡಿ’ ನಟ

ಮೇ 6ರ ಬೆಳಿಗ್ಗೆ ಅಕ್ಷಯ್ ಕುಮಾರ್ ಅವರಿಗೆ ದೃಷ್ಟಿ ದೋಷ ನಿವಾರಣೆಗಾಗಿ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕೇರಳದಲ್ಲಿ ನಡೆಯುತ್ತಿದ್ದ ಶೂಟಿಂಗ್ ಮುಗಿದ ಬಳಿಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ವೈದ್ಯರ ಸಲಹೆಯಂತೆ ಚೇತರಿಸಿಕೊಳ್ಳಲು ಅವರಿಗೆ ಕೆಲ ದಿನಗಳ ವಿಶ್ರಾಂತಿಯ ಅಗತ್ಯವಿದೆ. ಇತ್ತೀಚೆಗೆ ಕೆರಳದ ಗ್ಯಾಪ್ ರೋಡ್ ಅಲ್ಲಿ ಅವರು ಸಿನಿಮಾ ಶೂಟ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಶಸ್ತ್ರಚಿಕಿತ್ಸೆಗೆ ಒಂದು ದಿನ ಮೊದಲಷ್ಟೇ ಅಕ್ಷಯ್ ಕುಮಾರ್ ಅವರು ಕೇರಳದ ಶೂಟಿಂಗ್ ಪೂರ್ಣಗೊಂಡ ಬಗ್ಗೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ‘ಸುಂದರವಾದ ಜಾಗದಲ್ಲಿ ಒಳ್ಳೆಯ ಜನರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ನಿರ್ದೇಶಕ ಅನೀಸ್ ಬಾಜ್ಮಿ, ವಿದ್ಯಾ ಬಾಲನ್, ರಾಶಿ ಖನ್ನಾ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು.

ತಮ್ಮ ಶಿಸ್ತುಬದ್ಧ ಜೀವನಶೈಲಿಯ ಬಗ್ಗೆ ಮಾತನಾಡಿರುವ ಅಕ್ಷಯ್ ಕುಮಾರ್, ಕಳೆದ 15 ವರ್ಷಗಳಿಂದ ತಾವು ಸಮೋಸಾವನ್ನೇ ತಿಂದಿಲ್ಲ ಎಂಬ ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದರು. ಇದು ಅವರು ತಮ್ಮ ಫಿಟ್ನೆಸ್​​ಗೆ ಎಷ್ಟು ಒತ್ತು ಕೊಡುತ್ತಾರೆ ಎಂಬುದಕ್ಕೆ ಕೊಡಬಹುದಾದ ಒಳ್ಳೆಯ ಉದಾಹರಣೆ.

ಇದನ್ನೂ ಓದಿ: ಶೂಟಿಂಗ್ ವೇಳೆ ಕೆಟ್ಟದಾಗಿ ಪ್ರ್ಯಾಂಕ್ ಮಾಡಿ ನಟಿಗೆ ಆಘಾತ ಉಂಟುಮಾಡಿದ್ದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವರ ಬಳಿ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’ ಮತ್ತು ‘ಗೋಲ್‌ಮಾಲ್ 5’ ಚಿತ್ರಗಳು ಇವೆ. ಇತ್ತೀಚೆಗೆ ಅವರು ಬ್ಯಾಕ್​ ಟು ಬ್ಯಾಕ್ ಸೋಲು ಕಂಡಿದ್ದರು. ಅವರಿಗೆ ‘ಭೂತ್ ಬಂಗ್ಲಾ’ ಸಿನಿಮಾ ಕೊಂಚ ರಿಲೀಫ್ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:03 am, Thu, 7 May 26

Source link

ಸೋಲಿನ ನಡುವೆ ಹೊಸ ಚರಿತ್ರೆ ಬರೆದ ಕೂಪರ್ ಕೊನೊಲಿ! – Kannada News | Cooper Connolly Creates New History in IPL

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಸೋಲಿನ ನಡುವೆ. ಅಂದರೆ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟರ್ ಎಂಬ ದಾಖಲೆ ಪಂಜಾಬ್ ಕಿಂಗ್ಸ್​ ತಂಡದ ಯುವ ದಾಂಡಿಗ ಕೂಪರ್ ಕೊನೊಲಿ (Cooper Connolly) ಪಾಲಾಗಿದೆ. (PC: IPL)

ಹೈದರಾಬಾದ್​​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 49ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ  ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 235 ರನ್​​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. (PC: IPL)

ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೂಪರ್ ಕೊನೊಲಿ ಎಸ್​ಆರ್​​​ಹೆಚ್​ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಈ ಮೂಲಕ 57 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಸೆಂಚುರಿಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ವಿದೇಶಿ ಆಟಗಾರ ಎಂಬ ದಾಖಲೆ ಕೊನೊಲಿ ಪಾಲಾಯಿತು. (PC: IPL)

ಇದಕ್ಕೂ ಮುನ್ನ ಈ ದಾಖಲೆ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿತ್ತು. 2016 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್​) ಪರ ಕಣಕ್ಕಿಳಿದಿದ್ದ ಡಿಕಾಕ್ ಆರ್​ಸಿಬಿ ವಿರುದ್ಧ ಶತಕ ಸಿಡಿಸಿದ್ದರು. ಈ ವೇಳೆ ಅವರ ವಯಸ್ಸು 23 ವರ್ಷ, 122 ದಿನಗಳು. ಈ ಮೂಲಕ ಐಪಿಎಲ್​​ನಲ್ಲಿ ಸೆಂಚುರಿ ಬಾರಿಸಿದ ಅತೀ ಕಿರಿಯ ವಿದೇಶಿಗ ಎನಿಸಿಕೊಂಡಿದ್ದರು. (PC: IPL)

ಇದೀಗ 10 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಆಸ್ಟ್ರೇಲಿಯಾ ದಾಂಡಿಗ ಯಶಸ್ವಿಯಾಗಿದ್ದಾನೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ ಸೆಂಚುರಿ ಪೂರೈಸಿ 22 ವರ್ಷದ ಕೂಪರ್ ಕೊನೊಲಿ ಐಪಿಎಲ್​ನಲ್ಲಿ ಶತಕ ಸಿಡಿಸಿದ ಅತೀ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL)

ಈ ದಾಖಲೆಯ ಹೊರತಾಗಿಯೂ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೋಲನುಭವಿಸಿದೆ. ಎಸ್​ಆರ್​ಹೆಚ್ ನೀಡಿದ 236 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಕೂಪರ್ ಕೊನೊಲಿ 59 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್​​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 202 ರನ್​ಗಳಿಸಿ ಪಂಜಾಬ್ ಕಿಂಗ್ಸ್ 33 ರನ್​​ಗಳಿಂದ ಸೋಲೊಪ್ಪಿಕೊಂಡಿದೆ. (PC: IPL)

Published On – 8:52 am, Thu, 7 May 26

Source link

ಕೊಲೆ ಮಾಡಿದವನು ಒಬ್ಬ, ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡವನು ಇನ್ನೊಬ್ಬ! – Kannada News | Voter ID Misused for Murder: Bengaluru Man Gets Shocking Police Notice

ಬೆಂಗಳೂರು, ಮೇ 07: ಪ್ರತಿಯೊಬ್ಬ ಭಾರತೀಯ ಮತದಾರನಿಗೆ ವೋಟರ್ ಐಡಿ​ (Voter ID) ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರ​ ಮಾಹಿತಿಗಳನ್ನು ಗುರುತು-ಪರಿಚಯವಿಲ್ಲದವರ ಬಳಿ ಹಂಚಿಕೊಳ್ಳಬಾರದು ಎಂಬುದೂ ಎಲ್ಲರಿಗೂ ತಿಳಿದಿರುವ ವಿಷಯ. ಯಾಕೆಂದರೆ ದುಷ್ಕರ್ಮಿಗಳು ನಮ್ಮ ಐಡಿ ಬಳಸಿ ಯಾವುದೆ ಕ್ರಿಮಿನಲ್ ಚಟುವಟಿಕೆ ಎಸಗಿದರೆ ನಮಗೆ ಕಂಟಕ ಎದುರಾಗಬಹುದು. ಇದಕ್ಕೆ ಉದಾಹರಣೆಯೆಂಬಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್​ ಖರೀದಿಸಿ,ಅದನ್ನು ಕೊಲೆ ಕೃತ್ಯಕ್ಕೆ ಬಳಸಿಕೊಂಡ ಪ್ರಕರಣವೊಂದು ವರದಿಯಾಗಿದೆ.

ಮುಖ್ಯಾಂಶಗಳು

  • ಹಳೆಯ ವೋಟರ್ ಐಡಿ ಫೋಟೋ ಬದಲಿಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿ.
  • ಕೊಲೆ ಕೇಸಿನಲ್ಲಿ ಅಮಾಯಕನಿಗೆ ನೋಟಿಸ್ ನೀಡಿದ ಮರತಹಳ್ಳಿ ಉಪವಿಭಾಗದ ಪೊಲೀಸರು.
  • ಗುರುತಿನ ಚೀಟಿ ದುರುಪಯೋಗಪಡಿಸಿದ ಆರೋಪಿಗಳ ವಿರುದ್ಧ ಮತ್ತೊಂದು ಕ್ರಿಮಿನಲ್ ಕೇಸ್ ದಾಖಲು.

ನಡೆದಿದ್ದೇನು?

ಹೊಸಕೋಟೆ ತಾಲೂಕಿನ ಲಕ್ಕೊಂಡನಹಳ್ಳಿಯ ನಿವಾಸಿ ಎಲ್.ಎಸ್. ಪುನೀತ್ (36) ಎಂಬುವವರು ತಮ್ಮದೇನೂ ತಪ್ಪಿಲ್ಲದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. 2024ರಲ್ಲಿ ನಡೆದ ನಟೋರಿಯಸ್ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಉಪವಿಭಾಗದ ಪೊಲೀಸರು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪುನೀತ್‌ಗೆ ನೋಟಿಸ್ ನೀಡಿದ್ದರು.

ಈ ಕೊಲೆ ಪ್ರಕರಣವು ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣದ ಆರೋಪಿಗಳ ಮೊಬೈಲ್ ಕರೆಗಳ ವಿವರ (CDR) ಮತ್ತು ಸಿಮ್ ಕಾರ್ಡ್ ನೋಂದಣಿ ವಿಳಾಸವನ್ನು ಪರಿಶೀಲಿಸಿದಾಗ, ಅದು ಬೆಂಗಳೂರಿನ ವರ್ತೂರು ವಿಳಾಸಕ್ಕೆ ಲಿಂಕ್ ಆಗಿತ್ತು. ಈ ಆಧಾರದ ಮೇಲೆ ಪೊಲೀಸರು ಪುನೀತ್ ಮನೆಗೆ ತಲುಪಿದ್ದರು.

ವೋಟರ್ ಐಡಿ ದುರಪಯೋಗ!

2024ರ ಸೆಪ್ಟೆಂಬರ್ 18ರಂದು ವರ್ತೂರಿನ ಸುಲಿಕುಂಟೆ ಕಾಲೋನಿಯ ಎನ್. ರೇವಂತ್ ಕುಮಾರ್ (23) ಎಂಬುವವರನ್ನು ಒಂಬತ್ತು ಮಂದಿಯ ಗ್ಯಾಂಗ್ ಅಪಹರಿಸಿ ಕೊಲೆ ಮಾಡಿತ್ತು. ಈ ಕೊಲೆಗಾರರಲ್ಲಿ ಒಬ್ಬ ಮುತಾನಲ್ಲೂರು ಕ್ರಾಸ್ ಬಳಿಯ ಅಂಗಡಿಯೊಂದರಲ್ಲಿ ಪುನೀತ್ ಅವರ ಮತದಾರರ ಗುರುತಿನ ಚೀಟಿ (Voter ID) ಬಳಸಿ ಸಿಮ್ ಕಾರ್ಡ್ ಖರೀದಿಸಿದ್ದನು.

ಮೇ 2, 2026ರಂದು ಸ್ಟೇಶನ್​ಗೆ ಹಾಜರಾದ ಪುನೀತ್, ಪೊಲೀಸರು ತೋರಿಸಿದ ದಾಖಲೆಗಳನ್ನು ಗಮನಿಸಿ, ಆ ಮತದಾರರ ಗುರುತಿನ ಚೀಟಿ 2009ರಲ್ಲಿ ನಾನು ಪಡೆದಿದ್ದೆ. ಆದರೆ ಅದರಲ್ಲಿರುವ ಫೋಟೋ ಮಾತ್ರ ನನ್ನದಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಪುನೀತ್ ಅವರ ದಾಖಲೆಗೆ ಬೇರೊಬ್ಬರ ಫೋಟೋ ಅಂಟಿಸಿ ಫೋರ್ಜರಿ ಮಾಡಿರುವುದು ದೃಢಪಟ್ಟಿದೆ.

ಇದನ್ನೂ ಓದಿ ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ

ತಮ್ಮ ವೈಯಕ್ತಿಕ ದಾಖಲೆ ದುರುಪಯೋಗವಾಗಿರುವುದನ್ನು ಕಂಡು ಪುನೀತ್ ಅವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಈಗ ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಪರ್ಸನೇಶನ್ (Personation) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ರೇವಂತ್ ಕೊಲೆ ಆರೋಪಿಗಳಾದ ಒಂಭತ್ತು ಜನರ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಅಮೃತಹಳ್ಳಿಯಲ್ಲಿ ಪೊಲೀಸರ ಮೇಲೆಯೇ ಕಿಡಿಗೇಡಿಗಳಿಂದ ಹಲ್ಲೆ! ಇಬ್ಬರ ಬಂಧನ – Kannada News | Bengaluru Crime: Software Engineer and Student Arrested for Attacking Police Constables in Amruthahalli

ಬೆಂಗಳೂರು, ಮೇ 7: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನೈಟ್ ಬೀಟ್ ಮಾಡುವ ಪೊಲೀಸ್ ಸಿಬ್ಬಂದಿಗೇ ರಕ್ಷಣೆ ಇಲ್ಲದಂತಾಗಿದೆ. ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕರ್ತವ್ಯ ನಿರತ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಅಮೃತಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ಗಳಾದ ರುದ್ರಪ್ಪ ಮತ್ತು ಹನುಮಂತು ಅವರ ಮೇಲೆ ಹಲ್ಲೆ.
  • ಪಜೇರೋ ಕಾರಿನಲ್ಲಿ ನೈಟ್ ಔಟ್ ಹೊರಟು ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಯುವಕರು.
  • ಬಂಧಿತರಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಮತ್ತೊಬ್ಬ ಕಾಲೇಜು ವಿದ್ಯಾರ್ಥಿ.

ನಡುರಸ್ತೆಯಲ್ಲಿ ಅವಾಂತರ

ಮೇ 3ರ ತಡರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಆರ್ಯನ್ ಮತ್ತು ಹರ್ಷಾ ಎಂಬುವವರು ತಮ್ಮ ಇನ್ನಿಬ್ಬರು ಸ್ನೇಹಿತರೊಂದಿಗೆ ಪಜೇರೋ ಕಾರಿನಲ್ಲಿ ನೈಟ್ ಔಟ್ ಹೊರಟಿದ್ದರು. ಅಮೃತಹಳ್ಳಿ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಮದ್ಯಪಾನ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ನೈಟ್ ಬೀಟ್ ಸಿಬ್ಬಂದಿ ರುದ್ರಪ್ಪ ಮತ್ತು ಹನುಮಂತು ಇದನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಯುವಕರು ಪೊಲೀಸರ ಮೇಲೆಯೇ ದರ್ಪ ತೋರಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸರ ಅತಿಥಿಯಾದ ಕಿಡಿಗೇಡಿಗಳು

ಪೊಲೀಸರ ಮೇಲೆ ಹಲ್ಲೆ ಮಾಡಿದ ಹರ್ಷಾ ಮತ್ತು ಆರ್ಯನ್‌ನನ್ನು ಅಮೃತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಲ್ಲಿ ಹರ್ಷಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಆರ್ಯನ್ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ತಿಳಿಸಿದ್ದಾರೆ. ವಿದ್ಯಾವಂತ ಯುವಕರೇ ಇಂತಹ ಪುಂಡಾಟಿಕೆಯಲ್ಲಿ ತೊಡಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!

ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದು, ಅವರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ನಗರದ ಸುರಕ್ಷತೆ ಕಾಯುವ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸುಶಿಕ್ಷಿತರಿಂದಲೇ ಅಪಾಯ ಎದುರಾಗುತ್ತಿರುವುದು ನಾಗರೀಕ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs PBKS: ಸತತ ಮೂರನೇ ಸೋಲು: ಪಂದ್ಯ ಸೋತಿದ್ದರಿಂದ ಕೋಪಗೊಂಡ ಶ್ರೇಯಸ್ ಅಯ್ಯರ್, ಏನು ಹೇಳಿದ್ರು ನೋಡಿ – Kannada News | Shreyas iyer angry in Post match statement after SRH vs PBKS IPL 2026 Here what he said

ಬೆಂಗಳೂರು (ಮೇ. 07): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 33 ರನ್‌ಗಳ ಸೋಲು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ನಂತರ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ನಿರಾಶೆಗೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪಂದ್ಯದ ನಂತರ, ಅವರು ತಂಡದ ನ್ಯೂನತೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು, ಕಳಪೆ ಫೀಲ್ಡಿಂಗ್ ಮತ್ತು ಕೈಬಿಟ್ಟ ಕ್ಯಾಚ್‌ಗಳೇ ಸೋಲಿಗೆ ಕಾರಣ ಎಂದರು. ನಾವು ಉತ್ತಮ ಫೀಲ್ಡಿಂಗ್ ಮಾಡಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಅಯ್ಯರ್ ಹೇಳಿದರು.

ಕ್ಯಾಚ್ ಬಿಟ್ಟುಕೊಟ್ಟಿದ್ದು ದೊಡ್ಡ ಹೊಡೆತ – ಶ್ರೇಯಸ್ ಅಯ್ಯರ್

ಸೋಲನ್ನು ವಿಶ್ಲೇಷಿಸುತ್ತಾ, ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಅನ್ನು ದೂಷಿಸಿದರು. “ನಾವು ಆರಂಭದಲ್ಲಿ ಬಹಳಷ್ಟು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ಗುರಿ ಸ್ವಲ್ಪ ಹೆಚ್ಚಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಆ ಕ್ಯಾಚ್‌ಗಳನ್ನು ಪಡೆದಿದ್ದರೆ, ಅವರು ತಮ್ಮ ಸ್ಕೋರ್ ಅನ್ನು 30 ರಿಂದ 40 ರನ್‌ಗಳಿಗೆ ಸುಲಭವಾಗಿ ಸೀಮಿತಗೊಳಿಸಬಹುದಿತ್ತು. ಆಟ ಮುಂದುವರೆದಂತೆ, ವಿಕೆಟ್ ನಿಧಾನವಾಯಿತು ಮತ್ತು ಕಟ್ಟರ್ ಬಾಲ್‌ಗಳು ಸ್ಟಾಪ್‌ನೊಂದಿಗೆ ಬರುತ್ತಿದ್ದವು. ನಾವು ಫೀಲ್ಡಿಂಗ್, ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಮಗ್ರವಾಗಿರಲಿಲ್ಲ. ಹೈದರಾಬಾದ್ ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡಿತು ಮತ್ತು ಪಂದ್ಯಗಳನ್ನು ಹೇಗೆ ಗೆಲ್ಲುವುದು ಎಂದು ನಮಗೆ ತೋರಿಸಿತು.”

ತಂಡವು ಸತತ ಮೂರು ಪಂದ್ಯಗಳನ್ನು ಹೇಗೆ ಸೋತಿತು?

ಪಂದ್ಯಾವಳಿಯ ಆರಂಭವನ್ನು ನೆನಪಿಸಿಕೊಂಡ ಅಯ್ಯರ್, ತಂಡವು ಸಕಾರಾತ್ಮಕವಾಗಿರಲು ಸಲಹೆ ನೀಡಿದರು. ತಂಡದ ವಾತಾವರಣದ ಬಗ್ಗೆ ಮಾತನಾಡುತ್ತಾ, “ನಮ್ಮ ತಂಡದ ಮನಸ್ಥಿತಿ ಅತ್ಯುತ್ತಮವಾಗಿತ್ತು. ಈಗ, ಆ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಕಾರಾತ್ಮಕ ವಿಷಯಗಳಿಂದ ವಿಚಲಿತರಾಗುವುದು ಸುಲಭ, ಆದರೆ ನಾವು ಹಿಂತಿರುಗಿ ಕಳೆದ ಮೂರು ಪಂದ್ಯಗಳಲ್ಲಿ ಸರಿಯಾಗಿ ಮಾಡದಿದ್ದನ್ನು ಪ್ರತಿಬಿಂಬಿಸಬೇಕು. ನಾವು ಬಲಿಷ್ಠವಾಗಿ ಮರಳಬೇಕಾಗಿದೆ” ಎಂದು ಹೇಳಿದರು.

SRH vs PBKS: ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ ಹ್ಯಾಟ್ರಿಕ್ ಸೋಲಿಗೆ ಕೊರಳೊಡ್ಡಿದ ಪಂಜಾಬ್

ಕೂಪರ್ ಕೊನೊಲಿಗೆ ಭಾರಿ ಪ್ರಶಂಸೆ

ತಂಡ ಸೋತರೂ ಸಹ, ಅಯ್ಯರ್ ಯುವ ಆಟಗಾರ ಕೂಪರ್ ಕಾನೊಲಿಯ ಅವರನ್ನು ಶ್ಲಾಘಿಸಿದರು. ಅವರ ಹೋರಾಟದ ಮನೋಭಾವದ ಬಗ್ಗೆ ಮಾತನಾಡಿದ ನಾಯಕ, “ಅವರು (ಕಾನೊಲಿ) ಅದ್ಭುತ. ಅವರ ಮನಸ್ಥಿತಿ ಮತ್ತು ಮೈದಾನದಲ್ಲಿ ಅವರು ಪ್ರದರ್ಶಿಸುವ ಪಾತ್ರವು ಅತ್ಯುತ್ತಮವಾಗಿದೆ. ಇದು ಎಲ್ಲಾ ಆಟಗಾರರು ಅವರಿಂದ ಕಲಿಯಬಹುದಾದ ವಿಷಯ. ಅಲ್ಲದೆ, ಒತ್ತಡದಲ್ಲಿ ದೊಡ್ಡ ರನ್ ಗಳಿಸುವ ಕೌಶಲ್ಯ ಅವರಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಹಿಂದೆಯೂ ಇದನ್ನು ಮಾಡಿದ್ದಾರೆ ಮತ್ತು ಇಂದಿನ ಇನ್ನಿಂಗ್ಸ್ ಅದಕ್ಕೊಂದು ಪರಿಪೂರ್ಣ ಉದಾಹರಣೆ. ಅವರು ನಿರ್ಭೀತರಾಗಿದ್ದರು ಮತ್ತು ಎಡಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಅವರ ಆಟ ಅತ್ಯುತ್ತಮವಾಗಿತ್ತು” ಎಂದು ಹೇಳಿದರು.

ಚಹಾಲ್ ಮತ್ತು ಬೌಲಿಂಗ್ ತಂತ್ರದ ಬಗ್ಗೆ ವಿಷಾದ

ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯಲು ಯುಜ್ವೇಂದ್ರ ಚಾಹಲ್ ಅವರನ್ನು ಆಕ್ರಮಣಕಾರಿಯಾಗಿ ಬಳಸಲು ಪ್ರಯತ್ನಿಸಿದೆ ಎಂದು ಅಯ್ಯರ್ ವಿವರಿಸಿದರು, ಆದರೆ ಅದೃಷ್ಟ ಅವರ ಕಡೆ ಇರಲಿಲ್ಲ. “ಹೊಸ ಬ್ಯಾಟ್ಸ್‌ಮನ್‌ಗಳು ಬಂದಾಗ ಆಕ್ರಮಣಕಾರಿಯಾಗಿರಲು ನಾನು ಅವರಿಗೆ ಹೇಳಿದೆ, ಏಕೆಂದರೆ ಅವರು ಮೊದಲ ಎಸೆತದಿಂದಲೇ ಹೊಡೆಯುತ್ತಿದ್ದರು. ಆ ಹಂತದಲ್ಲಿ ವಿಕೆಟ್ ಪಡೆಯುವುದು ನಿರ್ಣಾಯಕವಾಗಿತ್ತು. ಆದರೆ ದುರದೃಷ್ಟವಶಾತ್, ನಮಗೆ ಕ್ಯಾಚ್‌ಗಳನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ. ಇಂದಿನ ಪಂದ್ಯದಲ್ಲಿ ಅದು ನಮಗೆ ದೊಡ್ಡ ಹೊಡೆತ ಎಂದು ನಾನು ಭಾವಿಸುತ್ತೇನೆ. ಇದು ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಬಲವಾಗಿ ಮರಳುವ ಸಮಯ” ಎಂದು ಅವರು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version