UPSC Recruitment 2026: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 34 ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | UPSC Recruitment 2026: Apply Online for 34 Vacancies Before August 28

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುವ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 28 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇಲಾಖಾವಾರು ಖಾಲಿ ಹುದ್ದೆಗಳ ವಿವರಗಳು:

ಈ ನೇಮಕಾತಿ ಅಭಿಯಾನದ ಮೂಲಕ ವಿಭಿನ್ನ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಸಿವಿಲ್): 01 ಹುದ್ದೆ
  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್): 09 ಹುದ್ದೆಗಳು
  • ಸಹಾಯಕ ನಿರ್ದೇಶಕ (ಎಂಜಿನಿಯರಿಂಗ್): 01 ಹುದ್ದೆ
  • ಸೂಪರಿಂಟೆಂಡೆಂಟ್ ಅನುವಾದ (ಹಿಂದಿ ಶಾಖೆ): 01 ಹುದ್ದೆ
  • ಸಂಶೋಧನಾ ಅಧಿಕಾರಿ: 11 ಹುದ್ದೆಗಳು
  • ತೋಟಗಾರಿಕೆ ಅಭಿವೃದ್ಧಿ ಅಧಿಕಾರಿ: 04 ಹುದ್ದೆಗಳು
  • ಮಣ್ಣು ಸಂರಕ್ಷಣಾ ಸಹಾಯಕ: 07 ಹುದ್ದೆಗಳು

ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವ:

ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳು ಬದಲಾಗುತ್ತವೆ. ಸಂಬಂಧಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ, ಬಿ.ಎಸ್ಸಿ., ಎಂ.ಎಸ್ಸಿ., ಎಲ್ಎಲ್ಬಿ., ಎಲ್ಎಲ್ಎಂ. ಇತ್ಯಾದಿ ವಿದ್ಯಾರ್ಹತೆ ಹೊಂದಿರಬೇಕು. ಇದರೊಂದಿಗೆ ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವವೂ (Work Experience) ಅಗತ್ಯವಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ಅರ್ಹತೆಯ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ವಯೋಮಿತಿ ಮತ್ತು ಸಡಿಲಿಕೆ ವಿವರಗಳು:

UPSC ವಿಧಿಸಿರುವ ವಯೋಮಿತಿಯ ಪ್ರಕಾರ, ಸಹಾಯಕ ನಿರ್ದೇಶಕ (ಎಂಜಿನಿಯರಿಂಗ್) ಹುದ್ದೆಗಳಿಗೆ ಗರಿಷ್ಠ 30 ವರ್ಷಗಳು, ತೋಟಗಾರಿಕೆ ಅಭಿವೃದ್ಧಿ ಅಧಿಕಾರಿ ಹಾಗೂ ಮಣ್ಣು ಸಂರಕ್ಷಣಾ ಸಹಾಯಕ ಹುದ್ದೆಗಳಿಗೆ 40 ವರ್ಷಗಳು ಮತ್ತು ಇತರ ಹುದ್ದೆಗಳಿಗೆ 35 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹ ವರ್ಗಗಳ ಅಭ್ಯರ್ಥಿಗಳಿಗೆ (SC, ST, OBC, PwBD) ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಶುಲ್ಕದ ಮಾಹಿತಿ:

ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ವರ್ಗಗಳಿಗೆ ಸೇರಿದ ಪುರುಷ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ ರೂ. 25 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷಾ ಶುಲ್ಕವಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಮೊದಲಿಗೆ ಪರಿಶೀಲಿಸಿ ಶಾರ್ಟ್‌ಲಿಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಬಂದಿರುವ ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಸ್ಕ್ರೀನಿಂಗ್ ಅಥವಾ ನೇಮಕಾತಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ (Interview) ಕರೆಯಲಾಗುತ್ತದೆ. ಅಂತಿಮವಾಗಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಹೋಟೆಲ್‌ಗಳ ಬೆನ್ನಲ್ಲೇ ನಕಲಿ ಕಾಸ್ಮೆಟಿಕ್ಸ್ ಮೇಲೆ ಸರ್ಕಾರದ ಹದ್ದಿನ ಕಣ್ಣು! – Kannada News | After Hotels, Karnataka Drugs Control Board to Raid Fake Cosmetics Network in Bengaluru

ಬೆಂಗಳೂರು, ಆಗಸ್ಟ್ 09: ನಗರದ ಹೋಟೆಲ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳ ಕಿಚನ್ ಮೇಲೆ ಸರಣಿ ದಾಳಿ ನಡೆಸಿ ಶಾಕ್ ನೀಡಿದ್ದ ಆರೋಗ್ಯ ಇಲಾಖೆ, ಈಗ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತಿರುವ ಮತ್ತೊಂದು ದಂಧೆಯ ಮೇಲೆ ಮುಗಿಬೀಳಲು ಸಜ್ಜಾಗಿದೆ.  ಬೆಂಗಳೂರಿನಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ಕಳಪೆ ಹಾಗೂ ನಕಲಿ ಸೌಂದರ್ಯವರ್ಧಕಗಳ (Fake Cosmetics) ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಲು ಡ್ರಗ್ಸ್ ಕಂಟ್ರೋಲ್ ಬೋರ್ಡ್ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದೆ.

ಬ್ರಾಂಡೆಡ್ ವಸ್ತುಗಳ ನಕಲಿ ಜಾಲ; ಲ್ಯಾಬ್ ಟೆಸ್ಟ್‌ಗೆ ಸ್ಯಾಂಪಲ್ಸ್

ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಪ್ರಮುಖ ಅಂತರರಾಷ್ಟ್ರೀಯ ಹಾಗೂ ದೇಶಿ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಲಿಪ್‌ಸ್ಟಿಕ್, ಪೌಡರ್, ಫೇಶಿಯಲ್ ಕ್ರೀಮ್, ಸ್ಕಿನ್ ಸೆರಮ್ ಸೇರಿದಂತೆ ವಿವಿಧ ಸೌಂದರ್ಯವರ್ಧಕಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ನಗರದಾದ್ಯಂತ ವಿಶೇಷ ಜಾಗೃತಿ ಮತ್ತು ತಪಾಸಣಾ ಡ್ರೈವ್ ಕೈಗೊಳ್ಳಲಿದೆ. ದಾಳಿಯ ವೇಳೆ ವಶಪಡಿಸಿಕೊಳ್ಳುವ ಕಾಸ್ಮೆಟಿಕ್ಸ್ ಸ್ಯಾಂಪಲ್‌ಗಳನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಲ್ಯಾಬ್ ವರದಿಯಲ್ಲಿ ಇವುಗಳು ಸುರಕ್ಷಿತವಲ್ಲ ಎಂದು ಸಾಬೀತಾದರೆ, ಅಂತಹ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ದುಡ್ಡು ಕೊಟ್ಟರೂ ಜನರಿಗೆ ಮೋಸ ಯಾಕೆ? ಆರೋಗ್ಯ ಸಚಿವ ಆಕ್ರೋಶ

ಬೆಂಗಳೂರಿನಲ್ಲಿ ಹೋಟೆಲ್ ದಾಳಿಗಳು ಹಾಗೂ ಕಾಸ್ಮೆಟಿಕ್ಸ್ ದಂಧೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, “ಆಹಾರ ಮತ್ತು ಕಾಸ್ಮೆಟಿಕ್ಸ್ ಎರಡೂ ಅತ್ಯಂತ ದೊಡ್ಡ ವ್ಯವಹಾರ ಕ್ಷೇತ್ರಗಳು. ಕೋವಿಡ್‌ನಂತಹ ಯಾವುದೇ ಸಂಕಷ್ಟ ಬಂದರೂ ಇವುಗಳ ಬ್ಯುಸಿನೆಸ್ ಎಂದಿಗೂ ಕುಗ್ಗುವುದಿಲ್ಲ. ಆದರೆ, ಜನರು ಕಷ್ಟಪಟ್ಟು ದುಡಿದ ಹಣ ನೀಡಿದರೂ ಅವರಿಗೆ ಕಳಪೆ ವಸ್ತುಗಳನ್ನು ನೀಡಿ ಮೋಸ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಕಿಡ್ನಿ ವೈಫಲ್ಯ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹೆಚ್ಚಾಗಲು ಇಂತಹ ಕಲಬೆರಕೆ ಹಾಗೂ ಕಳಪೆ ವಸ್ತುಗಳೇ ಕಾರಣವಾಗುತ್ತಿವೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು. ಕೇವಲ ಸಣ್ಣ ಪುಟ್ಟ ವ್ಯಾಪಾರಿಗಳಷ್ಟೇ ಅಲ್ಲ, ಪಂಚತಾರಾ ಹೋಟೆಲ್‌ಗಳೂ ಸಹ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ತಪ್ಪು ಮಾಡಿದವರು ಎಷ್ಟೇ ಪ್ರಭಾವಿಯಾಗಿದ್ದರೂ ಸರ್ಕಾರ ಯಾರನ್ನೂ ಕ್ಷಮಿಸುವುದಿಲ್ಲ. ತಪಾಸಣೆ ನಮ್ಮ ಜವಾಬ್ದಾರಿಯಾಗಿದ್ದು, ಈ ದಾಳಿಗಳು ನಿರಂತರವಾಗಿ ಮುಂದುವರಿಯಲಿವೆ” ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು – Kannada News | Kashmiri Pandit employees face terror threat, security on high alert at valley

ಕಾಶ್ಮೀರಿ ಭದ್ರತಾ ಪಡೆ ಸಿಬ್ಬಂದಿImage Credit source: PTI

ಶ್ರೀನಗರ, ಆಗಸ್ಟ್ 9: ಮೂರ್ನಾಲ್ಕು ದಶಕದ ಹಿಂದೆ ಕಾಶ್ಮೀರದಲ್ಲಿ ಪಂಡಿತ (Kashmiri Pandit) ಸಮುದಾಯದವರು ತಮ್ಮ ಊರು, ರಾಜ್ಯ ತೊರೆದು ವಲಸೆ ಹೋಗುವಂತೆ ಮಾಡಿದ ರೀತಿಯ ವಿದ್ಯಮಾನಗಳು ನಡೆಯುತ್ತಿರುಂತೆ ತೋರುತ್ತಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಆನ್‌ಲೈನ್ ಮೂಲಕ ಹೊಸದಾಗಿ ಉಗ್ರರ ಬೆದರಿಕೆಗಳು ಬಂದಿದ್ದು, ಭದ್ರತಾ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ.

‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಮತ್ತು ‘ಕಾಶ್ಮೀರ್ ಫೈಟ್’ (Kashmir Fight) ಎಂಬ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಪ್ಲಾಟ್​ಫಾರ್ಮ್​ಗಳು ಈ ಬೆದರಿಕೆ ಸಂದೇಶಗಳನ್ನು ಹಾಗೂ ಉದ್ಯೋಗಿಗಳ ವಿವರಗಳನ್ನು ಹಂಚಿಕೊಂಡಿವೆ ಎಂದು ಝೀನ್ಯೂಸ್​ನಲ್ಲಿ ವರದಿಯಾಗಿದೆ.

ವೈಯಕ್ತಿಕ ವಿವರಗಳ ಸೋರಿಕೆ: ಉಗ್ರರ ಚಾನಲ್‌ಗಳು ಕೆಲ ಕಾಶ್ಮೀರಿ ಪಂಡಿತ್ ಉದ್ಯೋಗಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ಅವರ ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ಅವರ ಆಸ್ತಿ ಹಾಗೂ ಮನೆಗಳನ್ನು ಗುರಿಯಾಗಿಸುವಂತೆ ಉಗ್ರರ ಬೆಂಬಲಿಗರಿಗೆ ಕರೆ ನೀಡಿವೆ.

ಇದನ್ನೂ ಓದಿ: ಕೇರಳದಲ್ಲಿ ವಿವಾದ ಸೃಷ್ಟಿಸಿದ ಕ್ವಿಜ್​​ನಲ್ಲಿ ಸಾವರ್ಕರ್​​ ಕುರಿತ ಪ್ರಶ್ನೆ: ತನಿಖೆಗೆ ಆದೇಶ

ವರ್ಕ್ ಫ್ರಮ್ ಹೋಮ್ ಸೂಚನೆ: ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿ ಕೆಲವು ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಆಗಸ್ಟ್ 20 ರವರೆಗೆ ಮನೆಯಿಂದಲೇ ಕೆಲಸ ಮಾಡಲು (Work from Home) ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಆದೇಶವನ್ನು ಭದ್ರತಾ ಪಡೆಗಳು ಅಧಿಕೃತವಾಗಿ ಇನ್ನೂ ದೃಢಪಡಿಸಬೇಕಿದೆ.

ಯುಎಲ್‌ಸಿ ಮೇಲೆ ಭದ್ರತಾ ಪಡೆಗಳ ಕಣ್ಣು

‘ಯುನೈಟೆಡ್ ಲಿಬರೇಶನ್ ಕೌನ್ಸಿಲ್’ (ULC) ಎಂಬ ಹೊಸ ಸಂಘಟನೆ ಕೂಡ ಭದ್ರತಾ ಸಂಸ್ಥೆಗಳ ನಿಗಾದಲ್ಲಿದೆ. ಜುಲೈನಲ್ಲಿ ಅನಂತನಾಗ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಒಬ್ಬರ ಹತ್ಯೆಯ ಹೊಣೆಯನ್ನು ಈ ಗುಂಪು ವಹಿಸಿಕೊಂಡಿತ್ತು. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಮತ್ತೊಂದು ಮುಖವಾಣಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡಿದ ರಹಸ್ಯ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್

ತನಿಖೆ ತೀವ್ರ: ಆನ್‌ಲೈನ್‌ನಲ್ಲಿ ಭೀತಿ ಹುಟ್ಟಿಸುವ ಮತ್ತು ಕಾಶ್ಮೀರಿ ಪಂಡಿತರ ಪುನರ್ವಸತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗುತ್ತಿದೆ. ಭದ್ರತಾ ಪಡೆಗಳು ಮತ್ತು ರಾಜ್ಯ ತನಿಖಾ ಸಂಸ್ಥೆ (SIA) ಡಿಜಿಟಲ್ ನೆಟ್‌ವರ್ಕ್‌ಗಳ ಮೇಲೆ ನಿಗಾ ವಹಿಸಿದ್ದು, ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಚುರುಕುಗೊಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

110 ರನ್​ಗಳ ಗುರಿ… 94 ರನ್​ಗಳಿಸಿ ಗೆದ್ದ TKR​! – Kannada News | St Kitts and Nevis Patriots vs Trinbago Knight Riders Highlights

ಕೆರಿಬಿಯನ್ ಪ್ರೀಮಿಯರ್ ಲೀಗ್​ನ (CPL 2026) 2ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಕೇವಲ 94 ರನ್​ಗಳಿಸುವ ಮೂಲಕ. ಕಿಂಗ್ಸ್​ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಅಕೀಲ್ ಹೊಸೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಟಿಕೆಆರ್​ ಬೌಲರ್​ಗಳ ಮಾರಕ ದಾಳಿ ಮುಂದೆ ರನ್​ಗಳಿಸಲು ಪರದಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್  20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 109 ರನ್​ಗಳಿಸಲಷ್ಟೇ ಶಕ್ತವಾಯಿತು.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡದ ಪರ ಕೆವಿನ್ ವಿಕಾಮ್ (38 ರನ್, 44 ಎಸೆತ) ಏಕಾಂಗಿ ಹೋರಾಟ ನಡೆಸಿದರೆ, ಉಳಿದ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟ್ರಿನ್‌ಬಾಗೊ ಪರ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಿದ ಸುನಿಲ್ ನರೈನ್ ಕೇವಲ 7 ರನ್ ನೀಡಿ 3 ಪ್ರಮುಖ ವಿಕೆಟ್ ಉರುಳಿಸಿದರೆ, ಟೆರೆನ್ಸ್ ಹಿಂಡ್ಸ್ 33 ರನ್‌ಗಳಿಗೆ 3 ವಿಕೆಟ್ ಪಡೆದು ಸಾಥ್ ನೀಡಿದರು.

ಮಳೆ ತಂದ ಮುನ್ನಡೆ, ಟಿಕೆಆರ್​​ಗೆ ಜಯ:

110 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಿತು. ಮ್ಯಾಥ್ಯೂ ಬ್ರೀಟ್ಝ್​ಕೆ ಅಜೇಯ 35 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಈ ಮೂಲಕ ಟಿಕೆಆರ್​ ತಂಡವು 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದಾಗ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸಿತು.

ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಫಲಿತಾಂಶ ನಿರ್ಧಾರಕ್ಕಾಗಿ ಡಿಎಲ್​ಎಸ್​ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ನಿಗದಿತ ಪಾರ್ ಸ್ಕೋರ್‌ಗಿಂತ 19 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ ಅಧಿಕೃತವಾಗಿ ವಿಜೇತರೆಂದು ಘೋಷಿಸಲಾಯಿತು.

ಅಂದರೆ 110 ರನ್​ಗಳ ಗುರಿ ಪಡೆದಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಪಂದ್ಯ ಸ್ಥಗಿತಗೊಂಡಾಗ 94 ರನ್​ಗಳಿಸಿದ್ದರೂ ಡಿಎಲ್​ಎಸ್ ನಿಯಮದ ಪ್ರಕಾರ ವಿಜಯಿಯಾಗಿ ಹೊರಹೊಮ್ಮಿದರು. ಈ ಮೂಲಕ ಟ್ರಿನ್‌ಬಾಗೊ ನೈಟ್ ರೈಡರ್ಸ್ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪ್ಲೇಯಿಂಗ್ 11: ಜಾನ್ಸನ್ ಚಾರ್ಲ್ಸ್ , ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್ ), ಕೈಲ್ ಮೇಯರ್ಸ್ , ಅಲಿಕ್ ಅಥನಾಝ್ , ಜೇಸನ್ ಹೋಲ್ಡರ್ (ನಾಯಕ) , ಕೆವಿನ್ ವಿಕ್ಹ್ಯಾಮ್ , ನವೀನ್ ಬಿದೈಸಿ , ಆಶ್ಮೀದ್ ನೆಡ್ , ಓಬೆಡ್ ಮೆಕಾಯ್ , ಸೌರಭ್ ನೇತ್ರವಲ್ಕರ್ , ವಕಾರ್ ಸಲಾಂಖೈಲ್.

ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!

ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಅಲೆಕ್ಸ್ ಹೇಲ್ಸ್ , ಕಾಲಿನ್ ಮನ್ರೋ , ಮ್ಯಾಥ್ಯೂ ಟ್ರಂಪ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಮ್ಯಾಥ್ಯೂ ಬ್ರೀಟ್ಝ್​​ಕೆ, ಟೆರೆನ್ಸ್ ಹಿಂದ್ಸ್ , ಅಕೀಲ್ ಹೊಸೈನ್ (ನಾಯಕ) , ಸುನಿಲ್ ನರೈನ್ , ಡೊಮಿನಿಕ್ ಡ್ರೇಕ್ಸ್ , ಜೈದ್ ಗೂಲಿ , ಡೆಕ್ಸ್ಟರ್ ಸ್ವೀನ್.

Source link

‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ – Kannada News | Geethu Mohandas emotional speech at Toxic movie event

ನಿನ್ನೆ ನಡೆದ ‘ಟಾಕ್ಸಿಕ್’ (Toxic) ಸಿನಿಮಾ ಟ್ರೈಲರ್​​ನಲ್ಲಿ ನಿರ್ದೇಶಕಿ ಗೀತು ಮೋಹನ್​​ದಾಸ್ ಮಾತುಗಳು ಗಮನ ಸೆಳೆದವು. ನಿರ್ದೇಶಕಿಯೊಬ್ಬರು ಇಷ್ಟು ದೊಡ್ಡ ಕಮರ್ಶಿಯಲ್ ಸಿನಿಮಾ ಮಾಡಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲೇನೋ. ಗೀತೂ ಮೋಹನ್​​ದಾಸ್ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದರು. ಎಲ್ಲ ಕಲಾವಿದರ ಬಗ್ಗೆಯೂ ಮಾತನಾಡಿದರು. ಆದರೆ ಯಶ್ ಬಗ್ಗೆ ಮಾತನಾಡುವಾಗ ಮಾತ್ರ ತುಸು ಭಾವುಕರಾದರು. ಕನ್ನಡದಲ್ಲಿ ಕೆಲ ಸಾಲುಗಳನ್ನು ಮಾತನಾಡಿದ ಗೀತೂ ಮೋಹನ್​​ದಾಸ್, ‘ನನ್ನ ಕನಸುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದವರು’ ಎಂದರು. ಗೀತೂ ಮೋಹನ್​​ದಾಸ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Onam 2026: ಓಣಂ ಹಬ್ಬದ ಹಿನ್ನೆಲೆ ಕೇರಳಕ್ಕೆ ತೆರಳುವ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿಯಿಂದ 90 ವಿಶೇಷ ಬಸ್‌ಗಳ ವ್ಯವಸ್ಥೆ! – Kannada News | Onam Special: KSRTC to Run 90 Extra Buses from Bengaluru to Kerala

ಬೆಂಗಳೂರು, ಆಗಸ್ಟ್ 09: ಮಲಯಾಳಿ ಬಾಂಧವರ ಪ್ರಮುಖ ಹಬ್ಬವಾದ ‘ಓಣಂ’ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ತೆರಳುವ ಸಾರ್ವಜನಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಕೊಡುಗೆ ನೀಡಿದೆ. ಹಬ್ಬದ ದಿನಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕೇರಳದ ಪ್ರಮುಖ ನಗರಗಳಿಗೆ ಹೆಚ್ಚುವರಿಯಾಗಿ 90 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ.

ಕೇರಳದ ಪ್ರಮುಖ ನಗರಗಳಿಗೆ ವಿಶೇಷ ಸಾರಿಗೆ ಸಂಪರ್ಕ

ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಸ್ಯಾಟಲೈಟ್ ಬಸ್ ನಿಲ್ದಾಣ (ಮೈಸೂರು ರಸ್ತೆ) ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ಕೇರಳದ ಕಣ್ಣೂರು, ಕೊಚ್ಚಿನ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್ ಹಾಗೂ ತಿರುವನಂತಪುರಂ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಈ ವಿಶೇಷ ಬಸ್‌ಗಳು ಸಂಚರಿಸಲಿವೆ. ಐಷಾರಾಮಿ ಮಲ್ಟಿ-ಆಕ್ಸಲ್ ವೋಲ್ವೋ, ಇವಿ ಪವರ್ ಪ್ಲಸ್, ಸ್ಲೀಪರ್ ಹಾಗೂ ರಾಜಹಂಸ ಬಸ್‌ಗಳನ್ನು ಈ ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಮುಂಗಡ ಬುಕ್ಕಿಂಗ್‌ಗೆ ಅವಕಾಶ; ವೆಬ್‌ಸೈಟ್ ಪರಿಶೀಲಿಸಲು ಕೋರಿಕೆ

ಹಬ್ಬದ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸಲು ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿದೆ. ನಿಯಮಿತ ಬಸ್‌ಗಳ ಟಿಕೆಟ್‌ಗಳು ಈಗಾಗಲೇ ಭರ್ತಿಯಾಗುತ್ತಿರುವುದರಿಂದ, ಹೆಚ್ಚುವರಿ ಬಸ್‌ಗಳ ವೇಳಾಪಟ್ಟಿ ಮತ್ತು ಮಾರ್ಗಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ashada Amavasya 2026: ಆಷಾಢ ಅಮಾವಾಸ್ಯೆ; ದಿನಾಂಕ, ತಿಥಿ ಸಮಯ, ಪಿತೃ ತರ್ಪಣ ವಿಧಿ ಮತ್ತು ಪೂಜಾ ಮಹತ್ವ – Kannada News | Ashada Amavasya 2026: Date, Tithi Timings, Pitru Tarpan Rituals and Significance

ದಕ್ಷಿಣ ಭಾರತೀಯ ಸಂಪ್ರದಾಯದಲ್ಲಿ ಆಷಾಢ ಅಮಾವಾಸ್ಯೆಗೆ ಅತ್ಯಂತ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಈ ಪವಿತ್ರ ದಿನವನ್ನು ಹಿರಿಯರನ್ನು ಹಾಗೂ ಪೂರ್ವಜರನ್ನು (ಪಿತೃಗಳನ್ನು) ಸ್ಮರಿಸಿ, ಅವರಿಗೆ ತರ್ಪಣ ಮತ್ತು ನೈವೇದ್ಯವನ್ನು ಅರ್ಪಿಸಲು ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ದಕ್ಷಿಣಾಯನ ಅವಧಿಯಲ್ಲಿ ಬರುವ ಈ ಅಮಾವಾಸ್ಯೆಯಂದು ಪಿತೃ ಕಾರ್ಯಗಳನ್ನು ಮಾಡುವುದರಿಂದ ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಹಾಗೂ ಪಿತೃ ದೋಷಗಳು ನಿವಾರಣೆಯಾಗುತ್ತವೆ ಎಂಬ ದೃಢವಾದ ನಂಬಿಕೆಯಿದೆ.

ಆಷಾಢ ಅಮಾವಾಸ್ಯೆ ತಿಥಿ ಹಾಗೂ ಸಮಯಗಳು:

2026ರಲ್ಲಿ ಈ ಅಮಾವಾಸ್ಯೆಯ ತಿಥಿಯು ಆಗಸ್ಟ್ 12 ರಂದು ಬೆಳಗಿನ ಜಾವ 02:11 ಕ್ಕೆ ಪ್ರಾರಂಭವಾಗಿ, ಆಗಸ್ಟ್ 13 ರಂದು ಬೆಳಗಿನ ಜಾವ 12:16 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ, ಈ ಅಮಾವಾಸ್ಯೆಯ ಪಿತೃ ತರ್ಪಣ ಹಾಗೂ ಪೂಜಾ ಆಚರಣೆಗಳನ್ನು ಆಗಸ್ಟ್ 12, ಬುಧವಾರದಂದು ನೆರವೇರಿಸಲಾಗುತ್ತದೆ. ದಕ್ಷಿಣಾಯನ ಅವಧಿಯಲ್ಲಿ ಬರುವ ಈ ಅಮಾವಾಸ್ಯೆಯು ಪೂರ್ವಜರ ಪೂಜೆಗೆ ಅತ್ಯಂತ ಶುಭಪ್ರದವಾಗಿದೆ.

ಆದಿ ಅಮಾವಾಸ್ಯೆಯ ಆಧ್ಯಾತ್ಮಿಕ ಹಾಗೂ ಪೌರಾಣಿಕ ಮಹತ್ವ:

ಹಿಂದೂ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ದಕ್ಷಿಣಾಯನವು ಪಿತೃ ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲವಾಗಿದೆ. ಈ ಸಮಯದಲ್ಲಿ ಬರುವ ಮೊದಲ ಅಮಾವಾಸ್ಯೆಯಂದು ಪೂರ್ವಜರನ್ನು ಭಕ್ತಿಯಿಂದ ಪೂಜಿಸಿದರೆ, ಅವರ ಆಶೀರ್ವಾದವು ಸಂಪೂರ್ಣ ಕುಟುಂಬಕ್ಕೆ ಲಭಿಸುತ್ತದೆ. ಈ ದಿನ ಕಪ್ಪು ಎಳ್ಳು ಬೆರೆಸಿದ ನೀರಿನಿಂದ ತರ್ಪಣ ಅರ್ಪಿಸಿ, ನೈವೇದ್ಯ ಮಾಡಿ ದಾನ ಧರ್ಮಗಳನ್ನು ಮಾಡುವುದರಿಂದ ಪಿತೃ ಋಣ ತೀರುತ್ತದೆ. ಜೊತೆಗೆ ಕುಟುಂಬದಲ್ಲಿ ಸಂತಾನ, ವಿವಾಹ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಎದುರಾಗುವ ಅಡೆತಡೆಗಳು ಈ ದಿನದ ಪೂಜೆಯಿಂದ ದೂರವಾಗುತ್ತವೆ.

ಮನೆಯಲ್ಲಿಯೇ ಅಮವಾಸ್ಯೆ ಪೂಜೆ ಮಾಡುವುದು ಹೇಗೆ?

ಪವಿತ್ರ ನದಿ ಅಥವಾ ಪುಣ್ಯಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿಯೇ ಭಕ್ತಿಯಿಂದ ಪೂಜೆ ಸಲ್ಲಿಸಬಹುದು. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಮಡಿ ಉಡುಪನ್ನು ಧರಿಸಿ, ಮನಸ್ಸಿನಲ್ಲಿಯೇ ಪೂರ್ವಜರನ್ನು ಸ್ಮರಿಸಿಕೊಂಡು ಎಳ್ಳು ಮತ್ತು ನೀರನ್ನು ಬಳಸಿ ತರ್ಪಣ ಅರ್ಪಿಸಬೇಕು. ನಂತರ ಪೂರ್ವಜರಿಗೆ ಪ್ರಿಯವಾದ ಸಾಂಪ್ರದಾಯಿಕ ಆಹಾರವನ್ನು ತಯಾರಿಸಿ ನೈವೇದ್ಯ ಮಾಡಿ, ಅಗತ್ಯವಿರುವವರಿಗೆ ಆಹಾರ, ಬಟ್ಟೆ ಅಥವಾ ಧನ ಸಹಾಯ ಮಾಡುವುದು ಅತ್ಯಂತ ಶ್ರೇಷ್ಠವೆಂದು ಹೇಳಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕಾಗೆಗಳಿಗೆ ಆಹಾರ ನೀಡುವುದರ ಮಹತ್ವವೇನು?

ಹಿಂದೂ ಸಂಪ್ರದಾಯದಲ್ಲಿ ಕಾಗೆಗಳನ್ನು ಪಿತೃ ದೇವತೆಗಳ ವಾಹನ ಅಥವಾ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಆಷಾಢ ಅಮಾವಾಸ್ಯೆಯ ದಿನದಂದು ಪೂಜೆಯ ನಂತರ ತಯಾರಿಸಿದ ನೈವೇದ್ಯವನ್ನು ಕಾಗೆಗಳಿಗೆ ಹಾಗೂ ಇತರ ಪ್ರಾಣಿ-ಪಕ್ಷಿಗಳಿಗೆ ನೀಡುವುದು ಕಡ್ಡಾಯವಾಗಿದೆ. ಕಾಗೆಗಳು ಈ ಆಹಾರವನ್ನು ಸ್ವೀಕರಿಸಿದರೆ, ನಮ್ಮ ಪೂರ್ವಜರು ತೃಪ್ತರಾಗಿ ಕುಟುಂಬವನ್ನು ಆಶೀರ್ವದಿಸಿದ್ದಾರೆ ಎಂಬ ನಂಬಿಕೆ ಸಾಂಪ್ರದಾಯಿಕವಾಗಿ ಬಂದಿದೆ.

ಸಂಜೆ ದೀಪ ಬೆಳಗುವ ವಿಧಾನ:

ಸಂಜೆ ಸೂರ್ಯಾಸ್ತದ ನಂತರ ಮನೆಯ ಪೂಜಾ ಕೋಣೆಯಲ್ಲಿ ಹಾಗೂ ಮುಖ್ಯದ್ವಾರದ ಬಳಿ ದೀಪವನ್ನು ಹಚ್ಚಿ ಪೂರ್ವಜರನ್ನು ಸ್ಮರಿಸಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬದ ಸದಸ್ಯರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಲಭಿಸಲಿ ಎಂದು ಪ್ರಾರ್ಥಿಸಬೇಕು. ಆಷಾಢ ಅಮಾವಾಸ್ಯೆಯು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ನಮಗೆ ಜನ್ಮ ನೀಡಿ ಬೆಳೆಸಿದ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ! – Kannada News | Rahane Tells Agarkar To Assure Rohit Sharma Of WC Spot

ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಬಿಸಿಸಿಐ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಿತಿಗೆ ಅತ್ಯಂತ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 2027ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಮಂಡಳಿಯು ಸ್ಪಷ್ಟ ನಿಲುವು ತಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರನನ್ನು ಸರಣಿಯಿಂದ ಸರಣಿಗೆ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಅವರಿಗೆ 2027ರ ವಿಶ್ವಕಪ್‌ವರೆಗೆ ತಂಡದಲ್ಲಿ ಸಂಪೂರ್ಣ ಭರವಸೆ ನೀಡಬೇಕು,” ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ರೋಹಿತ್ ಶರ್ಮಾ ಅವರ ಅಪಾರ ಅನುಭವ ಮತ್ತು ನಾಯಕತ್ವ ಗುಣಗಳು 2027ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅತ್ಯಂತ ಅಗತ್ಯವಾಗಿವೆ. ಪ್ರತಿ ಸರಣಿಯ ಪ್ರದರ್ಶನದ ಆಧಾರದ ಮೇಲೆ ರೋಹಿತ್ ಭವಿಷ್ಯ ನಿರ್ಧರಿಸುವ ನೀತಿಯು ಆಟಗಾರನ ಮಾನಸಿಕ ನೆಮ್ಮದಿಗೆ ಧಕ್ಕೆ ತರುತ್ತದೆ ಎಂದು ರಹಾನೆ ಎಚ್ಚರಿಸಿದ್ದಾರೆ.

ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾಗೆ ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಅವರ ಸ್ಥಾನದ ಬಗ್ಗೆ ಭರವಸೆ ನೀಡಬೇಕು. ಇದರಿಂದ ಅವರು ಯಾವುದೇ ಗೊಂದಲವಿಲ್ಲದೆ ಮುಂದಿನ ಸಿದ್ಧತೆ ನಡೆಸಬಹುದು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಆಯ್ಕೆ ಸಮಿತಿ Vs ಬಿಸಿಸಿಐ ಬಿಕ್ಕಟ್ಟು:

ಕಳೆದ ಕೆಲವು ದಿನಗಳಿಂದ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಆಯ್ಕೆ ಮಂಡಳಿಯಲ್ಲಿ ಗೊಂದಲಗಳು ಉಂಟಾಗಿದ್ದವು. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು 2026ರ ಇಂಗ್ಲೆಂಡ್ ಸರಣಿಯ ನಂತರ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು ಎನ್ನಲಾಗಿತ್ತು.

ಆದರೆ, ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 110 ಎಸೆತಗಳಲ್ಲಿ 138 ರನ್‌ಗಳ ಭರ್ಜರಿ ಶತಕ ಸಿಡಿಸಿ ತಮ್ಮ ಫಾರ್ಮ್ ಮತ್ತು ದಕ್ಷತೆಯನ್ನು ಸಾಬೀತುಪಡಿಸಿದರು. ಇದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, “ರೋಹಿತ್ ಶರ್ಮಾ ತಂಡದ ಖಾಯಂ ಸದಸ್ಯರಾಗಿದ್ದು, ಅವರು ಆಡಲು ಬಯಸುವವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ” ಎಂದು ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಆಯ್ಕೆ ಸಮಿತಿಯ ಆಲೋಚನೆಗೆ ಬ್ರೇಕ್ ಹಾಕಿದ್ದರು.

ಅಗರ್ಕರ್ ಸ್ಥಾನಕ್ಕೆ ಕುತ್ತು?

ಈ ಆಂತರಿಕ ಭಿನ್ನಾಭಿಪ್ರಾಯ ಮತ್ತು ಮಾಹಿತಿ ಸೋರಿಕೆಯಿಂದಾಗಿ ಬಿಸಿಸಿಐ, ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯ ನಡೆಗೆ ಅಸಮಾಧಾನಗೊಂಡಿದೆ ಎಂದು ವರದಿಗಳು ತಿಳಿಸಿವೆ. ಸೆಪ್ಟೆಂಬರ್ 2026 ರಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (AGM) ಅಜಿತ್ ಅಗರ್ಕರ್ ಅವರ ಒಪ್ಪಂದವನ್ನು ನವೀಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಅವರ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಒಟ್ಟಾರೆಯಾಗಿ ಹೇಳುವುದಾದರೆ, ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರನನ್ನು ‘ಸರಣಿಯಿಂದ ಸರಣಿಗೆ’ ಕೇವಲ ತಾತ್ಕಾಲಿಕವಾಗಿ ಪರಿಗಣಿಸುವುದು ಭಾರತೀಯ ಕ್ರಿಕೆಟ್‌ನ ಸ್ಥಿರತೆಗೆ ಧಕ್ಕೆ ತರಬಹುದು. 2027ರ ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ವರ್ಷಗಳು ಬಾಕಿ ಇರುವಾಗ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಮಂಡಳಿಯು ರೋಹಿತ್ ಶರ್ಮಾಗೆ ಅವರ ಸ್ಥಾನದ ಕುರಿತು ಸಂಪೂರ್ಣ ಸ್ಪಷ್ಟತೆ ನೀಡಬೇಕು ಎಂದು ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ.

Source link

ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು? – Kannada News | Tragedy at Nandi Hills Monsoon Marathon: 31 Year Old Bengaluru Man Collapses and Dies

ದುರಂತ ಅಂತ್ಯಕಂಡ ಕ್ರೀಡಾಪಟುImage Credit source: Tv9 Kannada

ಚಿಕ್ಕಬಳ್ಳಾಪುರ, ಆಗಸ್ಟ್​ 09: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ಕ್ರೀಡಾಪಟು ಓರ್ವ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಮನ್ ದೀಪ್ ಸಿಂಗ್ ಜಗಡೆ(31) ಮೃತ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಅಸುನೀಗರುವ ಸಾಧ್ಯತೆ ಅಂದಾಜಿಸಲಾಗಿದೆ. 21 ಕಿಲೋಮೀಟರ್‌ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದ ಅಮನ್​, ನಂದಿಗಿರಿಧಾಮದ ಬೆಟ್ಟದ ಮೇಲೆ ಕುಸಿದುಬಿದ್ದಿದ್ದಾರೆ. ತಕ್ಷಣ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಅಮನ್ ದೀಪ್ ಸಿಂಗ್ ಪಂಜಾಬ್​​ ಮೂಲದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್​ ಪಾರ್ಕ್​ನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಎಂಬುದು ತಿಳಿದುಬಂದಿದೆ.

ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದ ಅಮನ್ ದೀಪ್

ಅಮನ್ ದೀಪ್ ಸಿಂಗ್, 21 ಕೀಲೊ ಮೀಟರ್ ಕ್ರಮಿಸಬೇಕಿದ್ದ ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​​ನ ಅರ್ಧದಷ್ಟು ಮಾತ್ರ ಓಡಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಮೃತನ ಪತ್ನಿ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದು, ಮೃತದೇಹ ಸದ್ಯ ಆಸ್ಪತ್ರೆಯಲ್ಲಿಯೇ ಇದೆ. ಇನ್ನು ಮ್ಯಾರಥಾನ್​​ ಸಂಬಂಧ ಇನ್ಸ್ಟಾಗ್ರಾಮ್​​ ಪೋಸ್ಟ್​​ ಮಾಡಿದ್ದ ಅಮನ್ ದೀಪ್ ಸಿಂಗ್ 21 ಕೀಲೋ ಮೀಟರ್ ರನ್ನಿಂಗ್​​ನಲ್ಲಿ ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದರು ಎಂಬುದೂ ಗೊತ್ತಾಗಿದೆ.

ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

4,500ಕ್ಕೂ ಹೆಚ್ಚುಮಂದಿ ಭಾಗಿ

https://www.youtube.com/watch?v=NzyRQ3xQeZU

10 ಕಿಲೋಮೀಟರ್ ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ಈ ಮ್ಯಾರಥಾನ್‌ ನಡೆದಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಮತ್ತು ಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿ ಪ್ರವಾಸ: ಸಚಿವ ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ! – Kannada News | Valmiki Corporation Scam: R Ashoka Slams Congress Over Minister Nagendra’s Alleged Bail Violation

ಆರ್. ಅಶೋಕ್

ಬೆಂಗಳೂರು, ಆಗಸ್ಟ್ 09: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಆರೋಪ-ಪ್ರತ್ಯಾರೋಪಗಳ ಕಿಡಿ ಹೊತ್ತಿಕೊಂಡಿದೆ. ಈ ಪ್ರಕರಣದಲ್ಲಿ ಇ.ಡಿ (ED) ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ಕೋರ್ಟ್ ಅನುಮತಿ ಪಡೆಯದೇ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾಗೇಂದ್ರ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಆರ್. ಅಶೋಕ್ ಪೋಸ್ಟ್​ನಲ್ಲೇನಿದೆ?

ತಮ್ಮ ಪೋಸ್ಟ್‌ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಆರ್. ಅಶೋಕ್, “ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಅವರು, ಜುಲೈ 15 ಮತ್ತು ಜುಲೈ 26ರಂದು ನಾಗೇಂದ್ರ ಅವರು ನಡೆಸಿದ್ದಾರೆನ್ನಲಾದ ದೆಹಲಿ ಪ್ರವಾಸದ ಕುರಿತು ಜಾರಿ ನಿರ್ದೇಶನಾಲಯವು (ED) ಈಗಾಗಲೇ ಸಿಸಿಟಿವಿ ದೃಶ್ಯಗಳು ಹಾಗೂ ವಿಮಾನ ನಿಲ್ದಾಣದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.

ಒಂದೆಡೆ ಇ.ಡಿ ತನಿಖೆಗೆ ಕಾಲಾವಕಾಶ ಕೋರುತ್ತಾ, ಇನ್ನೊಂದೆಡೆ ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಪ್ರಯಾಣ ಬೆಳೆಸುವುದು ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಮತ್ತು ನ್ಯಾಯಾಲಯಗಳ ಮೇಲಿರುವ ಅಸಲಿ ಗೌರವವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

“ನಿಮಗೆ ನ್ಯಾಯಾಲಯ ದೊಡ್ಡದೋ, ಹೈಕಮಾಂಡ್ ದೊಡ್ಡದೋ?”

ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದಿರುವ ಅಶೋಕ್, ಅಧಿಕಾರದಲ್ಲಿರುವವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಎಂಬ ಕಾಂಗ್ರೆಸ್ಸಿಗರ ಮನಸ್ಥಿತಿ ಈಗ ಬಯಲಾಗಿದೆ ಎಂದಿದ್ದಾರೆ. ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಶ್ನೆ ಎಸೆದಿರುವ ಅವರು, “ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಲಯದ ಆದೇಶ ದೊಡ್ಡದೋ, ಇಲ್ಲ ನಿಮ್ಮ ಹೈಕಮಾಂಡ್ ಆದೇಶ ದೊಡ್ಡದೋ? ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ರಾಜಕೀಯ ಅಭಯ ನೀಡುವುದೇ ನಿಮ್ಮ ಪಾರದರ್ಶಕ ಆಡಳಿತವೇ?” ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಗಂಭೀರ ಬೆಳವಣಿಗೆಯ ಬಗ್ಗೆ ತಕ್ಷಣವೇ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಹಾಗೂ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಕಳಂಕಿತ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆರ್. ಅಶೋಕ್ ಪ್ರಬಲವಾಗಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version