Category Archives: Blog

Your blog category

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ – Kannada News | Union Minister HD Kumaraswamy Begins Sabarimala Pilgrimage After Wearing Ayyappa Mala

ಬೆಂಗಳೂರು, ಜೂನ್​​ 15: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಗಿನ ಜಾವವೇ ಕೊಚ್ಚಿನ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸಚಿವರು, ನಂತರ ದೇಗುಲದಲ್ಲಿಯೇ ಇರುಮುಡಿ ಒತ್ತು ಶಬರಿಮಲೆಗೆ ಯಾತ್ರೆ ಹೊರಟಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಪಂಪಾ ನದಿ ತೀರವನ್ನು ತಲುಪಲಿರುವ ಸಚಿವರು ಹಾಗೂ ಅವರೊಡನೆ ತೆರಳಿರುವ ಭಕ್ತರ ತಂಡ, ಪುಣ್ಯ ಸ್ನಾನ ಮಾಡಿ ಶಬರಿಮಲೆಯತ್ತ ಸಾಗಲಿದೆ. ಸಂಜೆ ಅಯ್ಯಪ್ಪ ಸನ್ನಿಧಿಯಲ್ಲಿ ಪಡಿ ಪೂಜೆಯಲ್ಲಿ ಪಾಲ್ಗೊಳಿರುವ ಸಚಿವರು ನಂತರ ಅಯ್ಯಪ್ಪ ಸ್ವಾಮಿಗೆ ಪುಷ್ಪ ಅಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ನಂತರ ಶಬರಿಮಲೆಗೆ ಕೈಗೊಂಡ ಮೊದಲ ಯಾತ್ರೆ ಇದಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡರ, ಶಾಸಕರಾದ ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಜನರ ತಂಡದೊಂದಿಗೆ ಹೆಚ್ಡಿಕೆ​​ ಯಾತ್ರೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಂತ್ರಾಲಯದಲ್ಲಿ ವರುಣನ ಅಬ್ಬರಕ್ಕೆ ಭಕ್ತರು ಕಂಗಾಲು: ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೂ ಪರದಾಟ – Kannada News | Heavy Rains Lash Mantralaya, Devotees Witness Waterlogged Temple Town

ರಾಯಚೂರು, ಜೂನ್​​ 15: ಧಾರಾಕಾರ ಮಳೆಗೆ ಮಂತ್ರಾಲಯ ತತ್ತರಿಸಿದ್ದು, ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಪರಿಣಾಮ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಹಸ್ರಾರು ಭಕ್ತರು ಪರದಾಟ ನಡೆಸಿದ್ದಾರೆ. ಮಳೆಯಾರ್ಭಟಕ್ಕೆ ರಸ್ತೆಗಳು ಹೊಳೆಯಂತಾಗಿದ್ದು, ಹರಿಯುವ ನೀರಿನಲ್ಲಿಯೇ ತೆರಳಿ ಭಕ್ತರು ರಾಯರ ದರ್ಶನ ಮಾಡಿದ್ದಾರೆ. ಮಠದ ಆಡಳಿತ ಮಂಡಳಿಯು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತುರ್ತು ಕ್ರಮಗಳನ್ನು ಕೈಗೊಂಡಿದ್ದ ಹಿನ್ನೆಲೆ ಹೆಚ್ಚಿನ ಸಮಸ್ಯೆ ತಪ್ಪಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Breaking News Today Live: ಅಮೆರಿಕ-ಇರಾನ್ ಯುದ್ಧಕ್ಕೆ ಕೊನೆಗೂ ವಿರಾಮ: ಕಚ್ಚಾ ತೈಲ ಬೆಲೆ ಇಳಿಕೆ, ಷೇರು ಮಾರುಕಟ್ಟೆ ಚೇತರಿಕೆ – Kannada News | Breaking News 15 June 2026 Live; Monsoon Forecast, Legislative Council Election, US Iran Deal, Crude Oil Price Latest Updates

Breaking News 15 June 2026 Live Updates in Kannada: ಜಗತ್ತನ್ನೇ ತಲ್ಲಣಗೊಳಿಸಿದ್ದ ಅಮೆರಿಕ-ಇರಾನ್ ಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಯುದ್ಧವಿರಾಮದ ನಿಟ್ಟಿನಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಜೂನ್ 19ರಂದು ಜಿನಿವಾದಲ್ಲಿ ಸಹಿ ಹಾಕಲಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಸಹ ವಿಶ್ವದ ಎಲ್ಲ ದೇಶಗಳ ಹಡಗು ಸಂಚಾರಕ್ಕೆ ಮುಕ್ತವಾಗಲಿದೆ. ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಒಂದೇ ದಿನ ಶೇ 4 ರಷ್ಟು ಇಳಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ನಿರೀಕ್ಷೆ ಇದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪರಿಷತ್ ಚುನಾವಣೆಯ ರಾಜಕೀಯ ಕಾವೇರಿದೆ. ಅಡ್ಡಮತದಾನದ ಭೀತಿ ಹಿನ್ನೆಲೆ ರೆಸಾಟರ್ಟ್ ರಾಜಕೀಯ ಶುರುವಾಗಿದೆ. ದಿನದ ಪ್ರಮುಖ ವಿದ್ಯಮಾನಗಳ ತಾಜಾ ಅಪ್​ಡೇಟ್ ಪಡೆಯಲು ಈ ಪುಟವನ್ನು ಆಗಾಗ್ಗೆ ರಿಫ್ರೆಷ್ ಮಾಡುತ್ತಿರಿ.

Source link

ಸದ್ಗುರು ‘ಕಾವೇರಿ ಕೂಗು’ ಆಂದೋಲನದ ಭಾಗವಾಗಿ ಬೃಹತ್ ಸಮಾವೇಶ, 6 ಸಾವಿರಕ್ಕೂ ಹೆಚ್ಚು ರೈತರ ದಂಡು – Kannada News | Sadguru’s Cauvery Calling: 600 Plus Farmers Embrace Tree Based Farming in Tiruchy

ತಿರುಚಿರಾಪಳ್ಳಿ, ಜೂನ್ 14: ಕಳೆದ ಏಳು ದಶಕಗಳಲ್ಲಿ ಶೇ. 40ರಷ್ಟು ಬತ್ತಿಹೋಗಿರುವ ಕಾವೇರಿ ನದಿಯ ಪುನಃಶ್ಚೇತನಕ್ಕಾಗಿ ಕಾವೇರಿ ಕೂಗು(Cauvery Calling) ಅಭಿಯಾನವನ್ನು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಆರಂಬಿಸಿದ್ದಾರೆ. ಸದ್ಗುರು ಅವರ ಸೇವ್ ಸಾಯಿಲ್(ಮಣ್ಣು ಉಳಿಸಿ), ಕಾವೇರಿ ಕಾಲಿಂಗ್(ಕಾವೇರಿ ಕೂಗು) ಆಂದೋಲನದ ಭಾಗವಾಗಿ ತಿರುಚಿರಾಪಳ್ಳಿಯ ಎಸ್​ಆರ್​ಎಂ ವಿಶ್ವವಿದ್ಯಾಲಯದ ಆವರಣದಲ್ಲಿ ‘ಫುಡ್ ಫಾರೆಸ್ಟ್​ ಕಲ್ಟಿವೇಷನ್ ಆ್ಯಂಡ್ ಸೌತ್ ಇಂಡಿಯನ್ ಫ್ರೂಟ್ ಫೆಸ್ಟಿವಲ್’ ಬೃಹತ್ ಸಮಾವೇಶ ನಡೆಯಿತು. ಪ್ರಕೃತಿ ಸ್ನೇಹಿ ಕೃಷಿಯತ್ತ ಹೊಸ ಕ್ರಾಂತಿ ಸೃಷ್ಟಿಸಿರುವ ಈ ಸಮಾವೇಶದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಗತಿಪರ ರೈತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮರ ಆಧಾರಿತ ಕೃಷಿ ಮತ್ತು ಆಹಾರ ಅರಣ್ಯಗಳ ನಿರ್ಮಾಣವು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಕೃಷಿ ವಿಜ್ಞಾನಿಗಳು ಏಕಕಂಠದಿಂದ ಪ್ರತಿಪಾದಿಸಿದರು.

‘ಆಗ್ರೋಫಾರೆಸ್ಟ್ರಿ’ ಇನ್ಮುಂದೆ ‘ಮರ ಆಧಾರಿತ ಕೃಷಿ
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾವೇರಿ ಕೂಗು ಆಂದೋಲನದ ಸಂಯೋಜಕ ತಮಿಳ್‌ಮಾರನ್, ನಮ್ಮ ಆಂದೋಲನದ ಮೂಲಕ ರೈತರಲ್ಲಿ ಮರ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಮಣ್ಣಿನ ಫಲವತ್ತತೆ, ಅಂತರ್ಜಲ ವೃದ್ಧಿ ಮತ್ತು ನದಿಗಳ ಆರೋಗ್ಯವನ್ನು ಸುಧಾರಿಸುತ್ತಿದೆ. ಇತ್ತೀಚೆಗೆ ಹೊಸೂರಿನಲ್ಲಿ ನಡೆದ ಕೃಷಿ ಸಮಾವೇಶದಲ್ಲಿ ನಾವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ‘ಅಗ್ರೋಫಾರೆಸ್ಟ್ರಿ’ ಎಂಬ ಹೆಸರನ್ನು ‘ಮರ ಆಧಾರಿತ ಕೃಷಿ’ (Tree-Based Agriculture) ಎಂದು ಮರುನಾಮಕರಣ ಮಾಡಲು ವಿನಂತಿಸಿದ್ದೆವು. ಈ ಮನವಿಯನ್ನು ಪುರಸ್ಕರಿಸಿದ ಸಚಿವರು, ಶೀಘ್ರದಲ್ಲೇ ಈ ಹೆಸರು ಬದಲಾವಣೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ” ಎಂದು ಹರ್ಷ ಹಂಚಿಕೊಂಡರು.

ಮಧುಮೇಹಿಗಳಿಗಾಗಿ ಬಂತು ವಿಶೇಷ ‘ಕಾವೇರಿ’ ಬಾಳೆಹಣ್ಣು!
ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ (NRCB) ನಿರ್ದೇಶಕರಾದ ಡಾ. ಸೆಲ್ವರಾಜನ್ ಅವರು ಮಾತನಾಡುತ್ತಾ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು, ಮರ ಆಧಾರಿತ ಕೃಷಿ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ತಮ್ಮ ಸಂಶೋಧನಾ ಕೇಂದ್ರವು ಸಂಪೂರ್ಣವಾಗಿ ಸುಕ್ರೋಸ್-ಮುಕ್ತ (Sucrose-free) ಹೊಂದಿರುವ, ಮಧುಮೇಹ (Diabetic) ರೋಗಿಗಳಿಗೂ ಸೂಕ್ತವಾದ ‘ಕಾವೇರಿ’ ಎಂಬ ಹೊಸ ತಳಿಯ ಬಾಳೆಹಣ್ಣನ್ನು ಅಭಿವೃದ್ಧಿಪಡಿಸಿದೆ ಎಂದು  ಹೇಳಿದರು. ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ (Value-added products) ಮೂಲಕ ರೈತರು ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಮತ್ತಷ್ಟು ಓದಿ: ಕಾವೇರಿ ಪುನರುಜ್ಜೀವನಕ್ಕೆ ‘ಕಾವೇರಿ ಕೂಗು’ ಮಹಾ ಸಂಕಲ್ಪ: 1.2 ಕೋಟಿ ಹೊಸ ಸಸಿ ನೆಡಲು ಸಜ್ಜಾದ 2.6 ಲಕ್ಷ ರೈತರು

ತೆಂಗಿನ ತೋಟದಲ್ಲಿ ಕೋಟಿ ಆದಾಯ
ತೆಂಗಿನ ತೋಟಗಳಲ್ಲಿ ಬಹು ಬೆಳೆ ಆಧಾರಿತ ಕೃಷಿ ಮಾಡುವ ಕುರಿತು ಕೃಷಿ ತಜ್ಞ ಬಾಲಮೋಹನ್ ಮಹತ್ವದ ಮಾಹಿತಿ ನೀಡಿದರು. ಒಂದು ಎಕರೆ ತೆಂಗಿನ ತೋಟದಲ್ಲಿ ಹೆಚ್ಚಿನ ಜಾಗ ಬಳಕೆಯಾಗದೆ ಉಳಿಯುತ್ತದೆ. ಬಹು ಬೆಳೆಗಳನ್ನು ಬೆಳೆಯಬಹುದು. ಇದು ಸೂರ್ಯನ ಬೆಳಕನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೆರವಾಗುತ್ತದೆ. ಎಲೆಗಳ ತ್ಯಾಜ್ಯಗಳು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದಿಟ್ಟುಕೊಳ್ಳುತ್ತವೆ ಮತ್ತು ಮಣ್ಣಿನ ಜೈವಿಕ ಇಂಗಾಲದ ಮಟ್ಟವನ್ನು ಹೆಚ್ಚಿಸಿ, ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಸೃಷ್ಟಿಸುತ್ತವೆ ಎಂದರು.

ವಿಶ್ವಸಂಸ್ಥೆಯ (UN) ಪ್ರಶಸ್ತಿ ವಿಜೇತ ಕೊಯಮತ್ತೂರಿನ ಪ್ರಗತಿಪರ ರೈತ ವಲ್ಲುವನ್ ಮಾತನಾಡಿ,ನಾನು ಕೇವಲ ತೆಂಗು ಬೆಳೆಯುತ್ತಿದ್ದೆ. ಸದ್ಗುರು ಮಾರ್ಗದರ್ಶನದ ನಂತರ, ಈಗ ನನ್ನ ತೋಟದಲ್ಲಿ ಮಾವು, ಹಲಸು, ಬಾಳೆ, ಸಪೋಟ, ಜಾಜಿಕಾಯಿ, ಕಾಳುಮೆಣಸು ಸೇರಿದಂತೆ 14 ವಿಭಿನ್ನ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದೇನೆ. ಸಾಮಾನ್ಯ ರೈತನಾಗಿದ್ದ ನನ್ನನ್ನು ವಿಶ್ವಸಂಸ್ಥೆಯ ವೇದಿಕೆಯವರೆಗೆ ಕರೆದೊಯ್ದ ಈಶಾ ಮತ್ತು ಸದ್ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.

ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಪದ್ಮಶ್ರೀ ಪುರಸ್ಕೃತ ಕಲೀಮ್ ಉಲ್ಲಾ ಖಾನ್ (ಭಾರತದ ಹೆಮ್ಮೆಯ ‘ಮ್ಯಾಂಗೋ ಮ್ಯಾನ್’) ಭಾಗವಹಿಸಿದ್ದರು. ಒಂದೇ ಮರದಲ್ಲಿ 300 ವಿವಿಧ ತಳಿಯ ಮಾವಿನಹಣ್ಣುಗಳನ್ನು ಬೆಳೆದು ಜಾಗತಿಕ ದಾಖಲೆ ಬರೆದಿರುವ ಅವರು, ಮಾವು ಕೃಷಿಯಲ್ಲಿ ಯಶಸ್ಸು ಗಳಿಸುವ ತಂತ್ರಗಳನ್ನು ರೈತರೊಂದಿಗೆ ಹಂಚಿಕೊಂಡರು.

ಬರೋಬ್ಬರಿ 60ಕ್ಕೂ ಹೆಚ್ಚು ತಳಿಯ ಬಾಳೆಹಣ್ಣುಗಳ ಪ್ರದರ್ಶನ, ತಲಾ 100ಕ್ಕೂ ಹೆಚ್ಚು ತಳಿಯ ವೈವಿಧ್ಯಮಯ ಮಾವು ಮತ್ತು ಹಲಸಿನ ಹಣ್ಣುಗಳ ಅನಾವರಣ. ಮಾವು, ಹಲಸು, ಆವಕಾಡೊ (ಬೆಣ್ಣೆಹಣ್ಣು), ಆಪಲ್ ಮತ್ತು ವಿವಿಧ ಹಣ್ಣುಗಳ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ನಡೆಯಿತು.

ಐಸಿಎಆರ್ (ICAR) ಮತ್ತು ತಂಜಾವೂರಿನ ನಿಫ್ಟೆಮ್ (NIFTEM) ಸೇರಿದಂತೆ ದೇಶದ 4 ಪ್ರಮುಖ ಕೃಷಿ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಹಣ್ಣುಗಳ ಕೃಷಿ, ಮಾರುಕಟ್ಟೆ ಅವಕಾಶ ಮತ್ತು ತಾಂತ್ರಿಕ ಮೌಲ್ಯವರ್ಧನೆಯ ಕುರಿತು ರೈತರಿಗೆ ನೇರ ತರಬೇತಿ ನೀಡಿದರು. ಸದ್ಗುರುಗಳ ಈ ಕ್ರಾಂತಿಕಾರಿ ಆಂದೋಲನವು ದಕ್ಷಿಣ ಭಾರತದ ಕೃಷಿ ವಲಯವನ್ನು ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಮೈಲಿಗಲ್ಲಾಗಿದೆ.

ಆಂದೋಲನದ ಮೂಲಕ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಲ್ಲಿರುವ ಕಾವೇರಿ ನದಿ ಪಾತ್ರದ ರೈತರು 242 ಕೋಟಿ ಮರಗಳನ್ನು ಬೆಳೆಸಲು ಸಸಿಗಳನ್ನು ನೆಡಲು ಸಾಧ್ಯವಾಗಿಸುತ್ತದೆ. ಈ ರೀತಿಯ ಸಮಗ್ರ ಅರಣ್ಯೀಕರಣ ಪ್ರಯತ್ನವು ಬತ್ತಿ ಹೋಗುತ್ತಿರುವ ಕಾವೇರಿ ನದಿಯಲ್ಲಿ ಮುಂದಿನ ಒಂದು ದಶಕದಲ್ಲಿ ಪುನಃ ನೀರು ತುಂಬಿ ಹರಿಯುವಂತೆ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ.

ಕೃಷಿಯು ವಾಣಿಜ್ಯವಾಗಿ ಲಾಭದಾಯಕ ಎಂದು ಸಾಬೀತಾಗಿದ್ದು, ಕಾವೇರಿ ಕೂಗು ಅಭಿಯಾನವು ಅಂತಹ ನಾವಿನ್ಯತೆಯನ್ನು ಒದಗಿಸುತ್ತದೆ. ಇಂತಹ ಕೃಷಿ ಮಾದರಿಯು ಮಣ್ಣಿನ ಫಲವತ್ತತೆ ಹೆಚ್ಚಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಿರುವುದಲ್ಲದೇ ಐದರಿಂದ ಎಂಟು ವರ್ಷಗಳ ಅವಧಿಯಲ್ಲಿ ಕೃಷಿಕರ ಆರ್ಥಿಕ ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:12 am, Mon, 15 June 26

Source link

ಶಿವಮೊಗ್ಗ: ಶಾಲೆಯಲ್ಲಿ ಆಟವಾಡುತ್ತಿದ್ದಾಗ ಆರು ವರ್ಷದ ಬಾಲಕ ಸಾವು, ಹೃದಯಾಘಾತ ಶಂಕೆ – Kannada News | Shivamogga Tragedy: 6 Year Old Class 1 Student Collapses and Dies While Playing at Govt School in Sagara; Heart Attack Suspected

ಶಿವಮೊಗ್ಗ, ಜೂನ್ 15: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಹಾಳಸಸಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರು ವರ್ಷದ ಬಾಲಕ ತ್ರಿಲೋಕ್ ಜೈನ್ ಹಠಾತ್ ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಒಂದನೇ ತರಗತಿಯ ವಿದ್ಯಾರ್ಥಿಯಾಗಿದ್ದ ತ್ರಿಲೋಕ್ ಜೈನ್, ಕೊಡನವಳ್ಳಿ ಗೌತಮ್ ಮತ್ತು ಶಿಲ್ಪಾ ದಂಪತಿಯ ಪುತ್ರನಾಗಿದ್ದಾನೆ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಪುಟ್ಟ ಬಾಲಕ ಏಕಾಏಕಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯದಲ್ಲೇ ತ್ರಿಲೋಕ್ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಇದು ಹೃದಯಾಘಾತದಿಂದ ಸಂಭವಿಸಿದ ಹಠಾತ್ ನಿಧನವೋ ಅಥವಾ ತ್ರಿಲೋಕ್‌ಗೆ ಈ ಹಿಂದೆ ಯಾವುದಾದರೂ ಹೃದಯ ಸಂಬಂಧಿ ಕಾಯಿಲೆ ಇತ್ತೇ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

BBL ಆಡಲು ಆಸ್ಟ್ರೇಲಿಯಾ ಆಟಗಾರರ ಹೊಸ ಡಿಮ್ಯಾಂಡ್..! – Kannada News | Australia Players Block BBL Privatisation Drive Amid Pay Dispute

ಆಸ್ಟ್ರೇಲಿಯಾದ ಟಿ20 ಟೂರ್ನಿಯಾದ ಬಿಗ್ ಬ್ಯಾಷ್ ಲೀಗ್ (BBL) ಅನ್ನು ಖಾಸಗೀಕರಣಗೊಳಿಸುವ ಕ್ರಿಕೆಟ್ ಆಸ್ಟ್ರೇಲಿಯಾ (CA) ಯೋಜನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹೀಗೆ ಬ್ರೇಕ್ ಹಾಕಿರುವುದು ಮತ್ಯಾರೂ ಅಲ್ಲ, ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA).

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಆಟಗಾರರ ಸಂಘಟನೆಯ ಒಪ್ಪಿಗೆಯಿಲ್ಲದೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್​ ಅನ್ನು ಖಾಸಗೀಕರಣಗೊಳಿಸುವ ಯೋಜನೆಗೆ ತಡೆ ನೀಡಿದೆ.

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್​ ನಿರ್ಧಾರಕ್ಕೆ ಮುಖ್ಯ ಕಾರಣ ಆಟಗಾರರ ವೇತನ ತಾರತಮ್ಯ ಮತ್ತು ಜಾಗತಿಕ ಟಿ20 ಮಾರುಕಟ್ಟೆಯಲ್ಲಿನ ಸಂಭಾವನೆ.

ಆಸೀಸ್ ಆಟಗಾರರ ಅಸಮಾಧಾನ:

ಬಿಬಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ತಮ್ಮ ವೇತನ ವಿಷಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ…

  • ವೇತನ ವ್ಯತ್ಯಾಸ: ಬಿಬಿಎಲ್ ಡ್ರಾಫ್ಟ್ ಮೂಲಕ ಬರುವ ವಿದೇಶಿ ಆಟಗಾರರಿಗೆ ಗರಿಷ್ಠ ಅಂದಾಜು 4.20 ಲಕ್ಷ ಆಸ್ಟ್ರೇಲಿಯನ್ ಡಾಲರ್ (AU$) ವರೆಗೆ ವೇತನ ಸಿಗುತ್ತಿದೆ. ಆದರೆ, ಅದೇ ತಂಡವನ್ನು ಮುನ್ನಡೆಸುವ ಹಾಗೂ ಪಂದ್ಯ ಗೆಲ್ಲಿಸಿಕೊಡುವ ಆಸ್ಟ್ರೇಲಿಯಾದ ಪ್ರಮುಖ ದೇಶಿ ಆಟಗಾರರ ಗರಿಷ್ಠ ವೇತನ ಕೇವಲ 2 ಲಕ್ಷ ಆಸ್ಟ್ರೇಲಿಯನ್ ಡಾಲರ್ ಆಸುಪಾಸಿನಲ್ಲಿದೆ.
  • ಜಾಗತಿಕ ಲೀಗ್‌ಗಳ ಪೈಪೋಟಿ: ಸೌತ್ ಆಫ್ರಿಕಾ ಟಿ20 ಲೀಗ್ ಮತ್ತು ಯುಎಇಯ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಗಳಲ್ಲಿ ಆಟಗಾರರಿಗೆ ಭಾರಿ ಪ್ರಮಾಣದ ಹಣವನ್ನು ಆಫರ್ ಮಾಡುತ್ತಿವೆ. ಉದಾಹರಣೆಗೆ, SA20 ಲೀಗ್‌ನಲ್ಲಿ ಆಡುವ ಪ್ರಮುಖ ಆಟಗಾರರು 13 ಲಕ್ಷ ಆಸ್ಟ್ರೇಲಿಯನ್ ಡಾಲರ್ ವರೆಗೆ ಸಂಪಾದಿಸುತ್ತಿದ್ದಾರೆ. ಇದು ಬಿಬಿಎಲ್‌ನಲ್ಲಿ ಸಿಗುವ ವೇತನಕ್ಕಿಂತ 4 ರಿಂದ 5 ಪಟ್ಟು ಹೆಚ್ಚಾಗಿದೆ.

ಆಸ್ಟ್ರೇಲಿಯನ್ನರ ಡಿಮ್ಯಾಂಡ್:

ಬಿಗ್ ಬ್ಯಾಷ್ ಲೀಗ್​ನ ವೇತನದ ಮಿತಿಯನ್ನು ಹೆಚ್ಚಿಸದಿದ್ದರೆ, ಆಸ್ಟ್ರೇಲಿಯಾದ ಯುವ ಮತ್ತು ಅನುಭವಿ ಆಟಗಾರರು ಡಿಸೆಂಬರ್-ಜನವರಿ ಅವಧಿಯಲ್ಲಿ ಬಿಬಿಎಲ್ ಬಿಟ್ಟು ವಿದೇಶಿ ಲೀಗ್‌ಗಳ ಕಡೆ ಮುಖ ಮಾಡಲಿದ್ದಾರೆ. ಹೀಗಾಗಿ ಬಿಬಿಎಲ್​ ಖಾಸಗೀಕರಣಕ್ಕೂ ಮುನ್ನವೇ ಆಟಗಾರರ ವೇತನದ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್​ ಆಗ್ರಹಿಸಿದೆ.

ಬಿಬಿಎಲ್​ ಖಾಸಗೀಕರಣದ ಯೋಜನೆ ಏನು?

ಬಿಗ್ ಬ್ಯಾಷ್ ಲೀಗ್​ನ ತಂಡಗಳನ್ನು ಇಷ್ಟು ವರ್ಷ ಆಯಾ ಕ್ರಿಕೆಟ್ ಮಂಡಳಿಗಳು ನಡೆಸುತ್ತಿಸುತ್ತಿದ್ದರು. ಉದಾಹರಣೆಗೆ, ಮೆಲ್ಬೋರ್ನ್​​ ಸ್ಟಾರ್ಸ್ ಫ್ರಾಂಚೈಸಿಯ ಮಾಲೀಕರು ಕ್ರಿಕೆಟ್ ವಿಕ್ಟೋರಿಯಾ. ಇದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಅಧಿಕೃತ ಕ್ರಿಕೆಟ್ ಮಂಡಳಿಯಾಗಿದೆ.

ಇದೀಗ ಮಂಡಳಿಗಳು ತಮ್ಮ ಫ್ರಾಂಚೈಸಿಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಂತೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲಾ ತಂಡಗಳ ಮಾರಾಟಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ.

ಬಿಬಿಎಲ್ ಫ್ರಾಂಚೈಸಿಗಳ ಮಾಲೀಕತ್ವದ ಪಾಲನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ 60 ರಿಂದ 80 ಕೋಟಿ ಆಸ್ಟ್ರೇಲಿಯನ್ ಡಾಲರ್ ಬಂಡವಾಳ ಸಂಗ್ರಹಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ಯೋಜನೆಯಾಗಿದೆ.

ಖಾಸಗಿ ಹೂಡಿಕೆ ಬಂದರೆ, ಬಿಬಿಎಲ್ ಮತ್ತು ಡಬ್ಲ್ಯೂಬಿಬಿಎಲ್ (WBBL) ತಂಡಗಳ ಒಟ್ಟು ವೇತನ ಮಿತಿಯನ್ನು ತಲಾ 20 ಲಕ್ಷ ಆಸ್ಟ್ರೇಲಿಯನ್ ಡಾಲರ್ ಹೆಚ್ಚಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಭರವಸೆ ನೀಡಿದೆ.

ಮುಂದಿನ ದಿನಗಳಲ್ಲಿ ವೇತನ ಜಾಸ್ತಿ ಮಾಡುವ ಭರವಸೆ ಸಿಕ್ಕಿದ್ದರೂ, ಆಸ್ಟ್ರೇಲಿಯಾ ಆಟಗಾರರ ಸಂಘಟನೆ (ACA) ಮತ್ತು ಪ್ರಮುಖ ರಾಜ್ಯ ಕ್ರಿಕೆಟ್ ಮಂಡಳಿಗಳು ಈ ಯೋಜನೆಯನ್ನು ಒಪ್ಪುತ್ತಿಲ್ಲ.

ಇದಕ್ಕೆ ಮುಖ್ಯ ಕಾರಣ, ಒಮ್ಮೆ ತಂಡದ ಮಾಲೀಕತ್ವವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದರೆ ಅದನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ವಿದೇಶಿ ಅಥವಾ ಖಾಸಗಿ ಮಾಲೀಕರು ಸ್ಥಳೀಯ ಕ್ರಿಕೆಟ್‌ನ ಅಭಿವೃದ್ಧಿಗಿಂತ ತಮ್ಮ ಲಾಭಕ್ಕಷ್ಟೇ ಆದ್ಯತೆ ನೀಡಬಹುದು ಎಂಬ ಆತಂಕ ಆಟಗಾರರದ್ದಾಗಿದೆ.

ಇನ್ನು ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿಗಳು ಈ ಸಂಪೂರ್ಣ ಮಾರಾಟ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿವೆ. ಕೇವಲ ವಿಕ್ಟೋರಿಯಾದಂತಹ ಕೆಲವು ರಾಜ್ಯಗಳು ಮಾತ್ರ ಆಸಕ್ತಿ ತೋರಿಸಿರುವುದರಿಂದ ಇಡೀ ಯೋಜನೆ ಗೊಂದಲದಲ್ಲಿದೆ.

ಮುಂದಿನ ನಡೆಯೇನು?

ಆಸ್ಟ್ರೇಲಿಯಾ ಆಟಗಾರರ ಸಂಘಟನೆಯು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವಿವಿಧ ರಾಜ್ಯಗಳ ಕ್ರಿಕೆಟ್ ಮಂಡಳಿಗಳೊಂದಿಗೆ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಿದೆ. ಮುಂದಿನ ಬಿಬಿಎಲ್ ಸೀಸನ್ ಆರಂಭವಾಗುವ ಮೊದಲು ಆಟಗಾರರ ವೇತನ ಮತ್ತು ಹಕ್ಕುಗಳನ್ನು ರಕ್ಷಿಸುವ ಹೊಸ ಒಪ್ಪಂದಕ್ಕೆ ಬರಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: 100 ಓವರ್​, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!

ಜಾಗತಿಕ ಕ್ರಿಕೆಟ್ ಮಾರುಕಟ್ಟೆಯಲ್ಲಿ ಬಿಬಿಎಲ್ ತನ್ನ ಮೌಲ್ಯವನ್ನು ಉಳಿಸಿಕೊಳ್ಳಬೇಕಾದರೆ, ಸ್ಥಳೀಯ ಆಟಗಾರರ ಬೇಡಿಕೆಗಳನ್ನು ಈಡೇರಿಸುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಅನಿವಾರ್ಯವಾಗಿದೆ. ಹೀಗಾಗಿ ಬಿಬಿಎಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಹೊಸ ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ.

Source link

ಗೃಹಲಕ್ಷ್ಮಿಯರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ: ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್​​ – Kannada News | Major Jolt to Gruhalakshmi Beneficiaries: Karnataka Government Removes 3.89 Lakh Ineligible Women From the Scheme

ಬೆಂಗಳೂರು, ಜೂನ್​​ 15: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿಗೆ ರಾಜ್ಯ ಸರ್ಕಾರ ಮೇಜರ್​​ ಸರ್ಜರಿ ಮಾಡಿದೆ. ಯೋಜನೆಯ ದುರುಪಯೋಗ ಕಂಡು ಬಂದಿರುವ ಹಿನ್ನೆಲೆ ಪರಿಷ್ಕರಣೆ ನಡೆದಿದ್ದು, ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕೆಂದು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್​​ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ 1.30 ಕೋಟಿ ಗೃಹಲಕ್ಷ್ಮಿಯರ ಪೈಕಿ 3.89 ಲಕ್ಷ ಫಲಾನುಭವಿಗಳಿಗೆ ಭರ್ಜರಿ ಶಾಕ್​​ ಕೊಟ್ಟಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವದ ಪರಿಷ್ಕರಣೆ ಕೈಗೊಂಡಿದ್ದು, ನೋಂದಣಿಯಾಗಿದ್ದ 1.30 ಕೋಟಿ ಫಲಾನುಭವಿಗಳ ಪೈಕಿ 3.89 ಲಕ್ಷ ಮಂದಿಗೆ ಭಾರೀ ಆಘಾತ ಎದುರಾಗಿದೆ. ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ಅವರ ಖಾತೆಗಳಿಗೆ ಹಣ ವರ್ಗಾವಣೆ ಸ್ಥಗಿತಗೊಳಿಸಿದೆ. ಇಲಾಖೆಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಮತ್ತು GST ಪಾವತಿಸುವ 1.94 ಲಕ್ಷ ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ. ಜೊತೆಗೆ, ಮೃತಪಟ್ಟ 1.95 ಲಕ್ಷ ಫಲಾನುಭವಿಗಳ ಹೆಸರಿನಲ್ಲಿದ್ದ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಅಂತಹ ಖಾತೆಗಳಿಗೆ ಸಹ ಹಣ ವರ್ಗಾವಣೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ; ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ

ಅನರ್ಹ ಗೃಹಲಕ್ಷ್ಮಿಯರಿಗೆ ಶಾಕ್

ಜಿಲ್ಲೆ ಐಟಿ/ಜಿಎಸ್ಟಿ ಪಾವತಿದಾರರು ಮರಣ ಹೊಂದಿದವರು ಒಟ್ಟು
ಬೆಂಗಳೂರು ನಗರ 33,833 14,038 47,871
ಬೆಳಗಾವಿ 16,432 15,850 32,282
ದಕ್ಷಿಣ ಕನ್ನಡ 10,495 6,159 16,654
ಮೈಸೂರು 9,139 11,541 20,680
ತುಮಕೂರು 7,898 12,139 20,037
31 ಜಿಲ್ಲೆಗಳಿಂದ 1,94,560 1,95,224 3,89,784

ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಅನರ್ಹ ಫಲಾನುಭವಿಗಳ ಪೈಕಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 47,871 ಗೃಹಲಕ್ಷ್ಮಿಯರನ್ನ ಕೈಬಿಡಲಾಗಿದೆ. ತದನಂತರ ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳೂ ಅನರ್ಹರ ಪರಿಷ್ಕರಣೆಯಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿವೆ.

ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯ

ಮಾರ್ಚ್ ತಿಂಗಳಲ್ಲೇ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ, ವಿವಿಧ ಸರ್ಕಾರಿ ದತ್ತಾಂಶಗಳನ್ನು ಪರಸ್ಪರ ಹೊಂದಾಣಿಕೆ ಮಾಡಿ ಈ ಪರಿಷ್ಕರಣೆ ಕೈಗೊಂಡಿದೆ. ಅನರ್ಹರಿಗೆ ಹಣ ಪಾವತಿಯಾಗುವುದನ್ನು ತಡೆಯುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲೂ ಸಿದ್ಧತೆ ನಡೆಸಿದೆ. ಈ ಕ್ರಮದಿಂದ ತಾಂತ್ರಿಕ ಲೋಪಗಳು ಮತ್ತು ನಕಲಿ ಫಲಾನುಭವಿಗಳ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಈ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂ. ಉಳಿತಾಯವಾಗಲಿದೆ.

ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ – Kannada News | Bengaluru Airport Drug Bust: Customs Seizes Rs 13.14 Crore Hydroponic Ganja from Bangkok Passengers; 6 Detained

13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿImage Credit source: tv9

ಬೆಂಗಳೂರು, ಜೂನ್ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದೆ. ಕಸ್ಟಮ್ಸ್ ಇಲಾಖೆಯ ತಪಾಸಣೆ ವೇಳೆ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು

  • 13.14 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ.
  • ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮ ತೈಲ ಸಾಗಣೆ ಜಾಲ.
  • ಲಗೇಜ್ ಬ್ಯಾಗ್‌ಗಳಲ್ಲಿ ಅಡಗಿಸಿದ್ದ 6 ಮಂದಿ ಅರೆಸ್ಟ್.

ಮೊದಲ ಜಂಟಿ ಕಾರ್ಯಾಚರಣೆ ಜೂನ್ 11ರಂದು ಐವರ ಬಂಧನ

ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಜೂನ್ 11, 2026ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ 5 ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಕಳ್ಳಸಾಗಣೆ ಬೆಳಕಿಗೆ ಬಂದಿದೆ. ಈ ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಬಚಾವಾಗಲು ತಮ್ಮ ಚೆಕ್-ಇನ್ ಬ್ಯಾಗೇಜ್‌ಗಳ (Checked-in baggage) ಒಳಗೆ ಅತ್ಯಂತ ಚಾಣಾಕ್ಷತನದಿಂದ ಗಾಂಜಾವನ್ನು ಅಡಗಿಸಿಟ್ಟಿದ್ದರು. ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು 24.8 ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 8.68 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಐದೂ ಜನರನ್ನು ತಕ್ಷಣವೇ ಬಂಧಿಸಲಾಗಿದೆ.

ಜೂನ್ 13ರಂದು ಮತ್ತೊಬ್ಬ ಅರೆಸ್ಟ್

ಜೂನ್ 13, 2026ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿತ್ತು. ಬೆಂಗಳೂರಿಗೆ ಬಂದಿಳಿದ ಓರ್ವ ಶಂಕಿತ ಪ್ರಯಾಣಿಕನನ್ನು ತಡೆದು ಆತನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಮತ್ತೊಂದು ಶಾಕ್ ಕಾದಿತ್ತು. ಈತನ ಬ್ಯಾಗ್‌ನಲ್ಲೂ ಕೂಡ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿಬಿದ್ದಿದೆ. ಇದರ ಒಟ್ಟು ಮೌಲ್ಯ 4.74 ಕೋಟಿ ರೂ. ಆಗಿದೆ.

NDPS ಕಾಯ್ದೆಯಡಿ ಮೊಕದ್ದಮೆ

ಈ ಎರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಕಸ್ಟಮ್ಸ್ ಇಲಾಖೆಯು ಒಟ್ಟು 13.14 ಕೋಟಿ ರೂ. ಬೆಲೆಬಾಳುವ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಂತಾಗಿದೆ. ಬಂಧಿತ 6 ಜನ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಾದ ಎನ್‌ಡಿಪಿಎಸ್ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಹಿಂದೆ ಬೆಂಗಳೂರಿನಲ್ಲಿ ಯಾರ್ಯಾರು ಇದ್ದಾರೆ ಮತ್ತು ಈ ಮಾದಕ ವಸ್ತುವನ್ನು ನಗರದ ಯಾವ ಭಾಗಗಳಿಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬುದನ್ನು ತಿಳಿಯಲು ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐತಿಹಾಸಿಕ ಅಮೆರಿಕ-ಇರಾನ್ ಒಪ್ಪಂದದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಪುನಃ ತೆರೆಯಲು ದಿನಗಣನೆ – Kannada News | Hormuz Strait Reopens: US Iran Peace Deal Ends Blockade, Stabilizing Global Oil

ಟೆಹ್ರಾನ್, ಜೂನ್ 15: ವಿಶ್ವದ ಅತಿ ದೊಡ್ಡ ಕಡಲ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ತಿಂಗಳುಗಳ ಸಂಘರ್ಷಕ್ಕೆ ಕೊನೆಗೂ ಐತಿಹಾಸಿಕ ತಾರ್ಕಿಕ ಅಂತ್ಯ ಸಿಕ್ಕಿದೆ. ಉಭಯ ದೇಶಗಳು ಜಾಗತಿಕ ಶಾಂತಿ ಒಪ್ಪಂದದ ಅಂತಿಮ ಚೌಕಟ್ಟನ್ನು ಸಿದ್ಧಪಡಿಸಿದ್ದು, ಇದರ ಭಾಗವಾಗಿ ವಿಶ್ವದ ಅತ್ಯಂತ ನಿರ್ಣಾಯಕ ಜಲಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Hormuz Strait)ಶೀಘ್ರದಲ್ಲೇ ವಾಣಿಜ್ಯ ಮತ್ತು ತೈಲ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ. ವಿಶ್ವದ ಒಟ್ಟು ತೈಲ ಸಾಗಣೆಯ ಸರಿಸುಮಾರು ಶೇ. 20 ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತಿನ ಬಹುಪಾಲು ಜವಾಬ್ದಾರಿ ಹೊತ್ತಿರುವ ಈ ಜಲಮಾರ್ಗವು ಪುನಃ ತೆರೆಯುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಅಮೆರಿಕದಿಂದ ನೌಕಾ ದಿಗ್ಬಂಧನ ತಕ್ಷಣ ವಾಪಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಹೇಳುತ್ತಾ, ಜಾಗತಿಕ ಹಡಗು ಸಂಸ್ಥೆಗಳಿಗೆ ಸಂದೇಶ ನೀಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಯಾವುದೇ ಶುಲ್ಕವಿಲ್ಲದೆ ಮುಕ್ತಗೊಳಿಸಲು ಮತ್ತು ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಲು ನಾನು ಸಂಪೂರ್ಣ ಅಧಿಕಾರ ನೀಡುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ಜಲಸಂಧಿಯಲ್ಲಿ ವಾಣಿಜ್ಯ ಸಂಚಾರವು ಹಂತ-ಹಂತವಾಗಿ ಸಂಪೂರ್ಣ ಸಹಜ ಸ್ಥಿತಿಗೆ ಮರಳಲಿದೆ. ಜೂನ್ 19ರ ಶುಕ್ರವಾರ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಪ್ಪಂದಕ್ಕೆ ಅಧಿಕೃತ ಸಹಿ ಬಿದ್ದ ತಕ್ಷಣವೇ, ಮೊದಲ ಹಂತವಾಗಿ ಜಲಮಾರ್ಗದಲ್ಲಿ ಅಳವಡಿಸಲಾಗಿರುವ ಕಡಲ ಮೈನ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಲಿದೆ.

ಇದಾದ ನಂತರ ಮೂಲಸೌಕರ್ಯ ದುರಸ್ತಿ ಮತ್ತು ಉನ್ನತ ಭದ್ರತಾ ವ್ಯವಸ್ಥೆಗಳನ್ನು ಖಾಲಿ ಮಾಡಲಾಗುವುದು. ಈ ವ್ಯವಸ್ಥಿತ ತ್ವರಿತ ಕ್ರಮಗಳು ಮುಂಬರುವ ದಿನಗಳಲ್ಲಿ ತೈಲ ಮತ್ತು ವಾಣಿಜ್ಯ ಹಡಗುಗಳು ಜಲಸಂಧಿಯ ಎರಡೂ ತುದಿಗಳಿಂದ ಅತ್ಯಂತ ಸುರಕ್ಷಿತವಾಗಿ ಚಲಿಸಲು ದಾರಿ ಮಾಡಿಕೊಡಲಿವೆ.

ಮತ್ತಷ್ಟು ಓದಿ: ಹಲವು ತಿಂಗಳ ಯುದ್ಧದ ಬಳಿಕ ಜಗತ್ತಿಗೆ ಶುಭ ಸುದ್ದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮ, ಹೊರ್ಮುಝ್ ತೆರವು

ಅಮೆರಿಕವು ತನ್ನ ಭರವಸೆಯಂತೆ ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕುವ ಮತ್ತು ಸ್ಥಗಿತಗೊಂಡ ಇರಾನಿನ ಸ್ವತ್ತುಗಳನ್ನು ಬಿಡುಗಡೆ ಮಾಡುವ ಬದ್ಧತೆಗಳನ್ನು ಪೂರೈಸಿದ ತಕ್ಷಣವೇ, ಮುಂದಿನ ಪ್ರಕ್ರಿಯೆಗಳಿಗಾಗಿ 60 ದಿನಗಳ ರಚನಾತ್ಮಕ ಮಾತುಕತೆ ಅವಧಿ ಪ್ರಾರಂಭವಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಇದು ಉಭಯ ದೇಶಗಳ ನಡುವೆ ದೀರ್ಘಕಾಲೀನ ನಂಬಿಕೆಯನ್ನು ಗಟ್ಟಿಗೊಳಿಸಲಿದೆ.

ಒಪ್ಪಂದದ ಪ್ರಮುಖ ಸಕಾರಾತ್ಮಕ ಅಂಶಗಳು
ಎರಡೂ ಕಡೆಯವರು  ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಒಪ್ಪಿಕೊಂಡಿದ್ದಾರೆ. ಮಾತುಕತೆಯಲ್ಲಿದ್ದ ಅತ್ಯಂತ ಜಟಿಲವಾದ ಲೆಬನಾನ್‌ನ ಬಿಕ್ಕಟ್ಟಿನ ವಿಷಯವನ್ನೂ ಸಹ ಒಪ್ಪಂದದ ಚೌಕಟ್ಟಿನೊಳಗೆ ತಂದು ಯಶಸ್ವಿಯಾಗಿ ಬಗೆಹರಿಸಲಾಗಿದೆ. ಒಪ್ಪಂದದ ಯಶಸ್ವಿ ಅನುಷ್ಠಾನಕ್ಕಾಗಿ ಮಧ್ಯವರ್ತಿಗಳು ಮುಂದಿನ ದಿನಗಳಲ್ಲಿ ತಾಂತ್ರಿಕ ಚರ್ಚೆಗಳನ್ನು ನಡೆಸಲಿದ್ದು, ಜೂನ್ 19 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತ ಸಹಿ ಸಮಾರಂಭ ಜರುಗಲಿದೆ.

ಈ ಐತಿಹಾಸಿಕ ಶಾಂತಿ ಒಪ್ಪಂದವು ಜಾಗತಿಕ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಗೆಲುವಾಗಿದೆ. ಹಾರ್ಮುಜ್ ಜಲಸಂಧಿ ಪುನಾರಂಭಗೊಳ್ಳುತ್ತಿರುವುದರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಗಣನೀಯವಾಗಿ ನಿಯಂತ್ರಣಕ್ಕೆ ಬರಲಿದ್ದು, ಜಾಗತಿಕ ಆರ್ಥಿಕತೆಗೆ ಭಾರಿ ದೊಡ್ಡ ಆಸರೆ ಸಿಕ್ಕಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ರಾಜ್ಯದ ಕಾಂಗ್ರೆಸ್​​ ಶಾಸಕರು ನಾಳೆ ರೆಸಾರ್ಟ್​​ಗೆ – Kannada News | Resort Politics Returns to Karnataka: Congress Shifts MLAs to Bidadi Resort Amid Cross Voting Fears in MLC Polls

ಬೆಂಗಳೂರು, ಜೂನ್​​ 15: ಭಾರಿ ಕುತೂಹಲ ಮೂಡಿಸಿರುವ ವಿಧಾನ ಪರಿಷತ್​​ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ​ ಶಾಸಕರು ನಾಳೆ ಬಿಡದಿಯ ವಂಡರ್​ಲಾ ರೆಸಾರ್ಟ್​​ಗೆ ಶಿಫ್ಟ್​​ ಆಗಲಿದ್ದು, ರೆಸಾರ್ಟ್​ನಲ್ಲಿ ಒಟ್ಟು 140 ರೂಂ ಬುಕ್ಕಿಂಗ್ ಆಗಿದೆ. ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರು ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಪರಿಷತ್​​ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ
  • ವಂಡರ್​ಲಾ ರೆಸಾರ್ಟ್​​ಗೆ ನಾಳೆ ಕಾಂಗ್ರೆಸ್​​ ಶಾಸಕರು ಶಿಫ್ಟ್​​
  • ನಾಳೆ, ನಾಡಿದ್ದು ಇಲ್ಲಿಯೇ ಕಾಂಗ್ರೆಸ್​​ ಶಾಸಕರ ವಾಸ್ತವ್ಯ

ಕಾಂಗ್ರೆಸ್​ನ 14 ಶಾಸಕರಿಗೆ ಜೆಡಿಎಸ್ ಸಂಪರ್ಕ ಮಾಡಿರುವ ಮಾಹಿತಿ ಹಿನ್ನೆಲೆ ಅಡ್ಡ ಮತದಾನದ ಭೀತಿ ಶುರುವಾಗಿರುವ ಹಿನ್ನೆಲೆ ರೆಸಾರ್ಟ್​​ಗೆ ಶಾಸಕರನ್ನು ಶಿಫ್ಟ್​​ ಮಾಡಲಾಗುತ್ತಿದೆ. ಪಕ್ಷೇತರ ಶಾಸಕರನ್ನು ಕೂಡ ಹೆಚ್​ಡಿಕೆ ಸಂಪರ್ಕ ಮಾಡಿದ್ದಾರೆಂಬ ಅನುಮಾನ ಹಿನ್ನೆಲೆ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕಸರತ್ತು ಶುರುವಾಗಿದೆ. ಜೂ.18ರಂದು ತಂಡ ತಂಡವಾಗಿ ತೆರಳಲಿರುವ ಕಾಂಗ್ರೆಸ್​​ ಶಾಸಕರು, ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ?

ನಾಳೆ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ

ಡಿ.ಕೆ.ಶಿವಕುಮಾರ್​ ಸಿಎಂ ಆದ ಬಳಿಕ ಮೊದಲ ಸಿಎಲ್​ಪಿ ಸಭೆ ನಾಳೆ ಸಂಜೆ 6 ಗಂಟೆಗೆ ಬಿಡದಿಯ ವಂಡರ್​ಲಾ ರೆಸಾರ್ಟ್​ನಲ್ಲಿಯೇ ನಡೆಯಲಿದೆ. ಸಿಎಲ್​ಪಿ ಸಭೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಶಾಸಕರಿಗೆ ವಿವರವಾದ ತರಬೇತಿ ನಡೆಯಲಿದ್ದು, ಒಂದೇ ಒಂದು ಮತವೂ ತಪ್ಪಾಗದಂತೆ ಎಚ್ಚರ ವಹಿಸಿ ಟ್ರೈನಿಂಗ್​​ ತಯಾರಿ ನಡೆದಿದೆ. ಅಡ್ಡ ಮತದಾನ, ಮತಗಳ ಅಸಿಂಧು, ಯಾರಿಗೆ ಮತ ಹಾಕಬೇಕೆಂಬ ಗೊಂದಲಗಳನ್ನು ತಪ್ಪಿಸಲು ರೆಸಾರ್ಟ್ ಪಾಲಿಟಿಕ್ಸ್​​ಗೆ ಕಾಂಗ್ರೆಸ್​​ ಮುಂದಾಗಿರುವ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link