Category Archives: Blog

Your blog category

Horoscope Today 10 February : ಇಂದು ಈ ರಾಶಿಯವರು ಆಸ್ತಿಯು ಶಾಶ್ವತವಾಗಿ ಉಳಿಯದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಮಂಗಳವಾರ ಒಪ್ಪಿಗೆ, ಕುಶಲತೆ, ಸ್ಪಂದನೆ, ಸೇವೆಯ ಮನಸ್ಸು, ಹಣದ ಹೂಡಿಕೆ, ಮಾರಾಟದ ಲಾಭ ಇವೆಲ್ಲ ಇರಲಿದೆ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಗಂಡ, ಕರಣ : ಬಾಲವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು 08:18 – 09:45, ಯಮಗಂಡ ಕಾಲ 11:12 – 12:39, ಗುಳಿಕ ಕಾಲ 14:05 – 15:32

ಮೇಷ ರಾಶಿ :

ಪ್ರಾಪಂಚಿಕ ಸುಖದ ಮೇಲೆ ಆಸಕ್ತಿಯು ಕಡಿಮೆ ಆದೀತು. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದೆ. ದ್ವೇಷಿಸುವವರನ್ನು ಇಷ್ಟಪಡುವಿರಿ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಮಾತನ್ನು ಕೇಳಿಲ್ಲ ಎಂದ ಮಾತ್ರಕ್ಕೆ ನಿಷ್ಠುರವಾಗಿ ಸಂಬಂಧವನ್ನು ಹಾಳುಮಾಡಿಕೊಳ್ಳುವುದು ಬೇಡ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಯಾವ ಸಂದರ್ಭವನ್ನೂ ಎದುರಿಸುವ ಮಾನಸಿಕತೆ ಇರಲಿದೆ.

ವೃಷಭ ರಾಶಿ :

ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡು ಆಗುವ ಕಲಹವೂ ತಪ್ಪಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಗುರಿಗೆ ಹಾದಿಯು ಸ್ಪಷ್ಟವಾಗಿ ಇರದೇ ಹೋಗಬಹುದು. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಆತ್ಮೀಯರಿಂದ ನೀವು ಕೆಲವು ಸಲಹೆಯನ್ನು ಪಡೆಯುವಿರಿ. ಸಂಸಾರದ ಖರ್ಚನ್ನು ಸರಿದೂಗಿಸಿಕೊಳ್ಳಲು ಆಗದು.

ಮಿಥುನ ರಾಶಿ :

ಸ್ನೇಹಿತರು ನಿಮ್ಮಿಂದ ಅಲ್ಪ ಧನಸಹಾಯವನ್ನು ನಿರೀಕ್ಷಿಸುವರು. ಜೊತಡಗಿರುವವರು ಹುದ್ದೆಯಿಂದ ಕೆಳಗೆ ಹಾಕಲು ನೋಡಬಹದು. ಎಲ್ಲರ ಜೊತೆ ವಿನಾಕಾರಣ ಸಿಟ್ಟಾಗುವಿರಿ. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಜಾಣತನದಿಂದ ಮಾಡಿಸಿಕೊಳ್ಳುವಿರಿ. ಹಣದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಪ್ತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದದ ಕಾರಣ ಸಂತೋಷದ ಕ್ಷಣವನ್ನು ನಷ್ಟ ಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ :

ಕೆಲಸಕ್ಕೆ ಹೆಚ್ಚುವರಿ ಜವಾಬ್ದಾರಿ ನೀಡುವಿರಿ. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ನಿಮ್ಮದಾದ ಗೌಪ್ಯ ಸಂಗತಿಗಳನ್ನು ಇತರರು ತಿಳಿದುಕೊಂಡಾರು. ಮನೋಭಿಲಾಷೆಯನ್ನು ಸರಿಯಾದ ಜನರ ಜೊತೆ ಹೇಳಿ. ಸಾಮಾಜಿಕ ವಲಯಗಳಲ್ಲಿ ಸ್ಥಾನಮಾನವು ಲಭ್ಯವಾಗುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಕಣ್ಣಿನ ತೊಂದರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ವಿವಾಹ ಸಂಬಂಧದಿಂದ ಕಿರಿಕಿರಿ ಆಗಬಹುದು. ಕಛೇರಿಯಲ್ಲಿ ಕೆಲಸವು ಮಂದಗತಿಯಲ್ಲಿ ಇರುವುದು.

ಸಿಂಹ ರಾಶಿ :

ನಿಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿಷಯಗಳನ್ನು ಕ್ರಮವಾಗಿ ಇರಿಸಿ. ಅಪರಿಚಿತರಿಂದ ಕಪಾಲಮೋಕ್ಷವಾಗಬಹುದು. ಅತಿ‌ಜಾಣತನವನ್ನು ತೋರಿಸುವುದು ಬೇಡ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಮೌಲ್ಯಮಾಪನ ಸಿಗಬಹುದು. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ಸಂಗಾತಿಯ ಮಾತುಗಳು ನಿಮಗೆ ಬಲವನ್ನು ಕೊಡಬಹುದು.

ಕನ್ಯಾ ರಾಶಿ :

ಮನೆಯ ಬದಲಾವಣೆಯಿಂದ ನೆಮ್ಮದಿ ಇಲ್ಲದಂತೆ ಅನುಭವಕ್ಕೆ ಬರುವುದು. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಏನಾದರೂ ಮಾಡಬೇಕು ಎಂಬ ಇಚ್ಛೆಯು ಅಧಿಕವಾಗುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಎಲ್ಲ ಕಾರ್ಯಗಳಿಗೂ ಉತ್ಸಾಹ ಭಂಗವಾಗುವುದು. ಇತರರ ತಪ್ಪಿಗೆ ನಿಮ್ಮನ್ನು ಗುರಿಮಾಡುವರು. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವರು. ಆರ್ಥಿಕ ವಿಚಾರದಲ್ಲಿ ಸಖ್ಯವು ಏರ್ಪಡುವುದು.

ತುಲಾ ರಾಶಿ :

ಸಂಬಂಧದ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿ. ನಿರುಪಯೋಗ ವಸ್ತುಗಳನ್ನು ಮನೆಯಿಂದ ಹೊರಗುಡುವಿರಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು. ನಿಮ್ಮ ನಂಬಿಕೆಗೆ ಆಪ್ತರಿಂದ ಘಾಸಿಯಾಗಬಹುದು. ನಿಮ್ಮ ವ್ಯಾವಹಾರಿಕ ಓಡಾಟವು ವ್ಯರ್ಥವಾದೀತು. ಸಾಲ ಮಾಡಲು ಇಷ್ಟವಿಲ್ಲದಿದ್ದರೂ ಮಾಡಬೇಕಾಗಬಹುದು.

ವೃಶ್ಚಿಕ ರಾಶಿ :

ವೃತ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹೊಸ ಆದಾಯದ ಮೂಲಗಳನ್ನು ಹುಡುಕಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೋಯಿಸಬೇಡಿ. ಪರರ ಬೇಡಿಕೆಗೆ ಸ್ಪಂದ‌ನೆ ಇರಲಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅವರಿಂದ ಏನಾದರೂ ತೊಂದರೆ ಆದೀತು. ಅಪಾಯದ ಮುನ್ಸೂಚನೆ ಸಿಕ್ಕಾಗ ಅದನ್ನು ಉಪಾಯದಿಂದ ಸರಿಮಾಡಿಕೊಳ್ಳಲು ಪ್ರಯತ್ನಿಸಿ.

ಧನು ರಾಶಿ :

ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ನಿಮ್ಮ ಸಮಯಕ್ಕೆ ಸಿಗಬೇಕಾದುದು ಸಿಗದು, ಮನಸ್ತಾಪ ಹೆಚ್ಚು. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ನಾಯಕತ್ವದ ಗುಣವನ್ನು ನೀವು ಗೊತ್ತಿಲ್ಲದಂತೆ ಬೆಳೆಸಿಕೊಳ್ಳುವಿರಿ.

ಮಕರ ರಾಶಿ :

ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ಉದ್ವೇಗಕ್ಕೆ ಸಿಗದೇ ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ಇದರಿಂದ ನಿಮ್ಮ ಸಂಬಂಧವೂ ಸಹ ಬಲವಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪರಿಸರ ಅನುಕೂಲವಿರುವುದು. ಹಣದ ಹೂಡಿಕೆಗೆ ನಿಮಗೆ ಆಸಕ್ತಿಯು ಹೆಚ್ಚಿರಲಿದೆ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು.

ಕುಂಭ ರಾಶಿ :

ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಇರುತ್ತಾರೆ. ಇಂದು ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಕೆಲವು ಜನರು ಕುಟುಂಬ ಪ್ರವಾಸವನ್ನು ಯೋಜಿಸಬಹುದು ಮತ್ತು ಕುಟುಂಬದೊಂದಿಗೆ ಮೋಜು ತುಂಬಿದ ಕ್ಷಣಗಳನ್ನು ಆನಂದಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಕುತೂಹಲವು ಇರಲಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾಗುವುದು.

ಮೀನ ರಾಶಿ :

ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಂಡಾಗ ಸಾಧ್ಯ. ಯಂತ್ರೋಪಕರಣದ ಮಾರಾಟದಿಂದ ಲಾಭ ಕಡಿಮೆ. ಸ್ನೇಹಿತರ ಸಹಾಯದಿಂದ, ನಿಮ್ಮ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಅತಿಯಾದ ವ್ಯಾಯಾಮದಿಂದ ದೇಹಕ್ಕೆ ತೊಂದರೆಯನ್ನು ತಂದುಕೊಳ್ಳುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

BCCI Central Contracts: 6 ಆಟಗಾರರಿಗೆ ಹಿಂಬಡ್ತಿ; 8 ಪ್ಲೇಯರ್ಸ್​ಗೆ ಗೇಟ್​ಪಾಸ್..! – Kannada News | BCCI New Player Contracts: Grade Changes for Kohli, Rohit; Shreyanka Patil Misses Out

ಬಿಸಿಸಿಐ (BCCI) ತನ್ನ ನೂತನ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅಳೆದು ತೂಗಿ ಆಟಗಾರರಿಗೆ ಗ್ರೇಡ್‌ ನೀಡಿದೆ. ಈ ಬಾರಿಯ ಕೇಂದ್ರ ಒಪ್ಪಂದದಲ್ಲಿ ಮುಂಬಡ್ತಿ ಪಡೆದವರಿಗಿಂತ ಹಿಂಬಡ್ತಿ ಪಡೆದವರ ಸಂಖ್ಯೆಯೇ ಹೆಚ್ಚಿದೆ. ಇದರ ಜೊತೆಗೆ ಕಳೆದ ಬಾರಿ ಕೇಂದ್ರ ಒಪ್ಪಂದಕ್ಕೆ ಒಳಪಟ್ಟಿದ್ದ ಕೆಲವು ಆಟಗಾರರನ್ನು ಈ ಬಾರಿ ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಇದರರ್ಥ ಹಿಂಬಡ್ತಿ ಪಡೆದ ಆಟಗಾರರು ಈ ಹಿಂದೆ ವಾರ್ಷಿಕವಾಗಿ ಪಡೆಯುತ್ತಿದ್ದ ವೇತನದಲ್ಲಿ ಇಳಿಕೆ ಕಂಡಿದ್ದರೆ, ಕೇಂದ್ರ ಒಪ್ಪಂದದಿಂದ ಕೈಬಿಟ್ಟಿರುವ ಆಟಗಾರರು ವಾರ್ಷಿಕ ವೇತನದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ಈ ಒಪ್ಪಂದಕ್ಕೊಳಪಡದ ಆಟಗಾರರು ತಂಡದ ಪರ ಪಂದ್ಯವನ್ನಾಡಿದರೆ, ಮಾದರಿಗನುಗುಣವಾಗಿ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ.

6 ಆಟಗಾರರಿಗೆ ಹಿಂಬಡ್ತಿ

ಬಿಸಿಸಿಐ ಹಿಂಬಡ್ತಿ ನೀಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರದ್ದು ಪ್ರಮುಖ ಹೆಸರು. ಇವರಿಬ್ಬರು ಪ್ರಸ್ತುತ ಏಕದಿನ ಮಾದರಿಯಲ್ಲಿ ಆಡುತ್ತಿರುವುದರಿಂದ ಇವರಿಬ್ಬರಿಗೆ ಎ+ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಅದೇ ರೀತಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರನ್ನು ಸಹ ಎ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಇದರರ್ಥ ಈ ಬಾರಿ ಈ ಆರು ಆಟಗಾರರ ವೇತನದಲ್ಲಿ ಇಳಿಕೆ ಕಂಡುಬರಲಿದೆ. ಈ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಾರ್ಷಿಕವಾಗಿ ತಲಾ 4 ಕೋಟಿ ರೂಗಳನ್ನು ಕಳೆದುಕೊಂಡರೆ, ಉಳಿದ ನಾಲ್ವರು ಆಟಗಾರರು ತಲಾ 2 ಕೋಟಿ ರೂ. ಕಡಿಮೆ ವೇತನ ಪಡೆಯಲಿದ್ದಾರೆ.

ಐವರಿಗೆ ಗೇಟ್​ಪಾಸ್

6 ಆಟಗಾರರಿಗೆ ಹಿಂಬಡ್ತಿ ನೀಡಿದ್ದರೆ, ಇನ್ನು ಕೆಲವು ಆಟಗಾರರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಪ್ರಸ್ತುತ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ಇಶಾನ್ ಕಿಶನ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ, ಕಳೆದ ಆವೃತ್ತಿಯಲ್ಲಿ ಕಿಶನ್ ತಂಡದ ಭಾಗವಾಗಿರಲಿಲ್ಲ. ಉಳಿದಂತೆ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಕೂಡ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಫಾರ್ಮ್, ಲಭ್ಯತೆ ಮತ್ತು ತಂಡದಲ್ಲಿನ ಪಾತ್ರವನ್ನು ಆಧರಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ವರು ಆಟಗಾರರು ಸಹ ಬಹಳ ಸಮಯದಿಂದ ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡಿಲ್ಲ.

ಕೇಂದ್ರ ಒಪ್ಪಂದಕ್ಕೊಳಪಟ್ಟಿರುವ 51 ಆಟಗಾರರಿಗೆ ಬಿಸಿಸಿಐ ನೀಡುವ ವೇತನವೆಷ್ಟು?

ಕನ್ನಡತಿ ಶ್ರೇಯಾಂಕಗೂ ಸ್ಥಾನವಿಲ್ಲ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದ ಪಟ್ಟಿಗೆ ಸೇರ್ಪಡೆಗೊಂಡ ಆಟಗಾರ್ತಿಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಆವೃತ್ತಿಯಲ್ಲಿ ಕೇವಲ 16 ಮಹಿಳಾ ಆಟಗಾರ್ತಿಯರು ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದರೆ, ಈ ಆವೃತ್ತಿಯಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದ ನೀಡಲಾಗಿದೆ. ಆದಾಗ್ಯೂ, ಪೂಜಾ ವಸ್ತ್ರಕರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಮತ್ತು ಟೈಟಾಸ್ ಸಾಧು ಕೇಂದ್ರ ಒಪ್ಪಂದದಿಂದ ವಂಚಿತರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:55 pm, Mon, 9 February 26

Source link

ಕೇಂದ್ರ ಒಪ್ಪಂದಕ್ಕೊಳಪಟ್ಟಿರುವ 51 ಆಟಗಾರರಿಗೆ ಬಿಸಿಸಿಐ ನೀಡುವ ವೇತನವೆಷ್ಟು? – Kannada News | BCCI Central Contracts 2025 26: Full Player List, Grades and Salaries for Men and Women

2026 ರ ಆವೃತ್ತಿಯ ನೂತನ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಸಿಸಿಐ (BCCI Central Contracts 2025-26) ಇಂದು ಪ್ರಕಟಿಸಿದೆ. ಕೇಂದ್ರ ಒಪ್ಪಂದಕ್ಕೆ ಒಟ್ಟು 51 ಆಟಗಾರರು ಒಳಪಟ್ಟಿದ್ದು, ಇದರಲ್ಲಿ 30 ಪುರುಷ ಆಟಗಾರರು ಮತ್ತು 20 ಮಹಿಳಾ ಆಟಗಾರ್ತಿಯರು ಸೇರಿದ್ದಾರೆ. ಈ 51 ಆಟಗಾರರನ್ನು ಎ,ಬಿ ಮತ್ತು ಸಿ ಎಂಬ ಮೂರು ಗ್ರೇಡ್​​ಗಳಲ್ಲಿ ವಿಂಗಡಿಸಲಾಗಿದೆ. ಈ ಹಿಂದೆ ಪುರುಷರ ಒಪ್ಪಂದದಲ್ಲಿ ಎ+ ಗ್ರೇಡ್ ಅನ್ನು ಜಾರಿಗೆ ತಂದಿದ್ದ ಬಿಸಿಸಿಐ, ಈ ಗ್ರೇಡ್​ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ ವಾರ್ಷಿಕವಾಗಿ 7 ಕೋಟಿ ರೂ. ಎ ಗ್ರೇಡ್‌ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ 5 ಕೋಟಿ ರೂ. ಬಿ ಗ್ರೇಡ್‌ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ 3 ಕೋಟಿ ರೂ. ಮತ್ತು ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆಯುವ ಆಟಗಾರರಿಗೆ 1 ಕೋಟಿ ರೂ. ವೇತನ ನೀಡುತ್ತಿತ್ತು. ಆದರೆ ಈ ಬಾರಿ ಎ+ ಗ್ರೇಡ್ ಅನ್ನು ಬಿಸಿಸಿಐ ರದ್ದುಗೊಳಿಸಿದೆ. ಉಳಿದಂತೆ ಪ್ರಸ್ತುತ ಜಾರಿಯಲ್ಲಿರುವ ಈ 3 ಗ್ರೇಡ್‌ನಲ್ಲಿ ಯಾವ ಆಟಗಾರರಿಗೆ ಸ್ಥಾನ ಸಿಕ್ಕಿದೆ ಮತ್ತು ಅವರಿಗೆ ಸಿಗುವ ವೇತನವೆಷ್ಟು ಎಂಬುದನ್ನು ನೋಡುವುದಾದರೆ..

ಪುರುಷರ ಆಟಗಾರರ ಸಂಬಳ

ಎ ಗ್ರೇಡ್: ಶುಭ್​ಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಎ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ವರದಿಗಳ ಪ್ರಕಾರ ಈ ಮೂವರಲ್ಲಿ ಬುಮ್ರಾ ಮಾತ್ರ 7 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಉಳಿದಂತೆ ಶುಭ್​ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ತಲಾ 5 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ.

ಬಿ ಗ್ರೇಡ್: ಒಟ್ಟು 11 ಆಟಗಾರರು ಬಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್​ಗೆ ವಾರ್ಷಿಕವಾಗಿ 3 ಕೋಟಿ ರೂ. ವೇತನ ನೀಡಲಾಗುತ್ತದೆ.

ಸಿ ಗ್ರೇಡ್: ಒಟ್ಟು 17 ಆಟಗಾರರು ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್ ಸೇರಿದ್ದು ಈ ಆಟಗಾರರಿಗೆ ವಾರ್ಷಿಕವಾಗಿ 1 ಕೋಟಿ ರೂ. ವೇತನ ಸಿಗಲಿದೆ.

ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟಿಸಿದ ಬಿಸಿಸಿಐ

ಮಹಿಳಾ ಆಟಗಾರ್ತಿಯರ ಸಂಬಳ

ಎ ಗ್ರೇಡ್: ಪುರುಷ ಕ್ರಿಕೆಟಿಗರಿಗೆ ಸಿಗುವ ವೇತನಕ್ಕೆ ಹೋಲಿಸಿದರೆ ಮಹಿಳಾ ಆಟಗಾರ್ತಿಯರು ಕಡಿಮೆ ಮೊತ್ತದ ವೇತನ ಪಡೆಯುತ್ತಾರೆ. ಅದರಂತೆ ಈ ಬಾರಿ ಬಿಸಿಸಿಐ 21 ಮಹಿಳಾ ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದದಲ್ಲಿ ಸ್ಥಾನ ನೀಡಿದೆ. ಇದರಲ್ಲಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ಎ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದು, ಈ ನಾಲ್ವರು ಆಟಗಾರ್ತಿಯರು ವಾರ್ಷಿಕವಾಗಿ 50 ಲಕ್ಷ ರೂ. ವೇತನ ಪಡೆಯುತ್ತಾರೆ.

ಬಿ ಗ್ರೇಡ್: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ, ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ ಮತ್ತು ಅರುಂಧತಿ ರೆಡ್ಡಿ ಗ್ರೇಡ್ ಬಿ ನಲ್ಲಿ ಸ್ಥಾನ ಪಡೆದಿದ್ದು, ಇವರಿಗೆ ವಾರ್ಷಿಕವಾಗಿ 30 ಲಕ್ಷ ರೂ. ವೇತನ ಸಿಗಲಿದೆ.

ಸಿ ಗ್ರೇಡ್: ಸಿ ಗ್ರೇಡ್‌ನಲ್ಲಿ ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಸೇರಿದ್ದು, ಇವರಿಗೆ ವಾರ್ಷಿಕ 10 ಲಕ್ಷ ರೂ. ವೇತನ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:20 pm, Mon, 9 February 26

Source link

ಕಾಶಿಯಲ್ಲಿ ಮುಗಿಯಿತು ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ – Kannada News | Chikkanna new Kannada movie Lakshmiputra shooting in Kashi

ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ‘ಲಕ್ಷ್ಮಿಪುತ್ರ’ (Lakshmiputra) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಎಪಿ ಅರ್ಜುನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಅನೇಕ ಹೊಸ ಹೀರೋಗಳ ಜೊತೆ ಕೆಲಸ ಮಾಡಿದ ಎ.ಪಿ. ಅರ್ಜುನ್ ಅವರು ಈಗ ಚಿಕ್ಕಣ್ಣ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಎಪಿ ಅರ್ಜುನ್ ಅವರೇ ಕಥೆ ಬರೆದಿದ್ದಾರೆ. ಅವರದ್ದೇ ಬ್ಯಾನರ್​​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಚಿಕ್ಕಣ್ಣ (Chikkanna) ಜೊತೆ ಅನೇಕ ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ.

‘ಎಪಿ ಅರ್ಜುನ್ ಫಿಲ್ಮ್’ ಬ್ಯಾನರ್ ಮೂಲಕ ಎ.ಪಿ. ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾದ ಶೂಟಿಂಗ್ ಬಗ್ಗೆ ಹೊಸ ಅಪ್​ಡೇಟ್ ನೀಡಲಾಗಿದೆ. ‘ಲಕ್ಷ್ಮಿಪುತ್ರ’ ಸಿನಿಮಾಗೆ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಕಾಶಿಯಲ್ಲಿ ಅದ್ದೂರಿಯಾಗಿ ನಡೆದಿದೆ.

ಮೂರು ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಾಯಕ ನಟ ಚಿಕ್ಕಣ್ಣ ಜೊತೆ ಹಿರಿಯ ನಟಿ ತಾರಾ ಕೂಡ ಭಾಗಿ ಆಗಿದ್ದಾರೆ. ಅವರ ಜೊತೆ ಅರವತ್ತಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ಕಾಶಿಯ ಮಣಿಕರ್ಣಿಕಾ ಘಾಟ್, ಬನರಾಸ್, ಗಂಗಾ‌ನದಿ ತೀರ, ಕಾಶಿ ಪ್ರಮುಖ ಬೀದಿಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಆ ಮೂಲಕ ನಿರೀಕ್ಷೆ ಮೂಡಿಸಲಾಗಿದೆ.

ಇನ್ನು, ಈ ಸಿನಿಮಾಗೆ ಎರಡು ದಿನದ ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಹಾಡುಗಳ ಚಿತ್ರೀಕರಣವನ್ನು ಚಿತ್ರತಂಡ ಕೈಗೆತ್ತಿಕೊಳ್ಳಲಿದೆ. ಮೇ ಅಥವಾ ಜೂನ್ ತಿಂಗಳಲ್ಲಿ ‘ಲಕ್ಷ್ಮಿಪುತ್ರ’ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಗುರಿ ಇಟ್ಟುಕೊಳ್ಳಲಾಗಿದೆ. ವಿಜಯ್ ಸ್ವಾಮಿ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗೆ ವಂದಿತಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಆ ಮಾತಿನಿಂದ ದರ್ಶನ್ ಮುಖಭಾವವೇ ಬದಲಾಗಿತ್ತು’; ಚಿಕ್ಕಣ್ಣ ಹೇಳಿಕೆಯಲ್ಲೇನಿದೆ?

‘ಲಕ್ಷ್ಮಿಪುತ್ರ’ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಎ.ಪಿ. ಅರ್ಜುನ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಮಾಸ್ ಮಾದ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಿರೀಶ್ ಆರ್. ಗೌಡ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಧರ್ಮಣ್ಣ, ಕುರಿ ಪ್ರತಾಪ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?

ಬೆಂಗಳೂರು, ಫೆಬ್ರವರಿ 09: ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಳೆ ನಡೆಯಬೇಕಿರುವ ಬಜೆಟ್ ಪೂರ್ವಭಾವಿ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಗೈರುಹಾಜರಾಗುತ್ತಿರುವುದು ಸದ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಇಲಾಖೆಗಳಂತಹ ದೊಡ್ಡ ಖಾತೆಗಳನ್ನು ಹೊಂದಿರುವ ಡಿ.ಕೆ.ಶಿವಕುಮಾರ್​​ ನಾಳೆಯ ಸಭೆ ಬಿಟ್ಟು ದೆಹಲಿಗೆ ತೆರಳುತ್ತಿದ್ದಾರೆ. ಕೇಂದ್ರ ಸಚಿವರು ಮತ್ತು ಹೈಕಮಾಂಡ್ ಸದಸ್ಯರು ತಮ್ಮನ್ನು ಕರೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದು, ಭೇಟಿ ಮಾಡುತ್ತಿರುವ ನಾಯಕರ ಹೆಸರು ಹೇಳಲು ಆಗಲ್ಲ ಎಂದು ಹೇಳಿದ್ದಾರೆ. ಜೊತೆಗೆ ದೆಹಲಿ ಭೇಟಿ ಬಗ್ಗೆ ಸಿಎಂ ಬಳಿ ಅನುಮತಿ ಪಡೆಯುವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹಲವು ಇಂಧನದ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ – Kannada News | Foreign secretary Vikram Misri clarification about Russian oil imports Amid India US Trade Deal

ನವದೆಹಲಿ, ಫೆಬ್ರವರಿ 9: ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ (Trade Deal) ಭಾಗವಾಗಿ ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದೆ ಎಂಬ ಕುರಿತಾಗಿ ಹರಿದಾಡುತ್ತಿರುವ ವಿವಾದದ ನಡುವೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯಾವುದೇ ಒಂದು ಇಂಧನ ಪೂರೈಕೆದಾರರನ್ನು ಅವಲಂಬಿಸುವ ಬದಲು ಹಲವು ಇಂಧನ ಆಮದುಗಳ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರವಾಗಿದೆ. ಭಾರತವು ಕೇವಲ ರಷ್ಯಾದಿಂದ ಮಾತ್ರವಲ್ಲ, ಇತರೆ ಡಜನ್​ಗಟ್ಟಲೆ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದೊಂದಿಗೆ ಇತ್ತೀಚೆಗೆ ಘೋಷಿಸಲಾದ ವ್ಯಾಪಾರ ಒಪ್ಪಂದದ ನಂತರ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆಯೇ ಎಂಬ ಪ್ರಶ್ನೆಗಳು ಮುಂದುವರಿದಿದ್ದರೂ ಸಹ, ತನ್ನ ಇಂಧನ ಆಮದು ನೀತಿಯು ರಾಷ್ಟ್ರೀಯ ಹಿತಾಸಕ್ತಿ, ಗ್ರಾಹಕರ ಕೈಗೆಟುಕುವಿಕೆ ಮತ್ತು ಪೂರೈಕೆ ಸುರಕ್ಷತೆಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ವಿಕ್ರಮ್ ಮಿಶ್ರಿ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

“ಭಾರತವು ರಷ್ಯಾದ ಕಚ್ಚಾ ತೈಲವನ್ನು ಹೇಗೆ ಪಡೆಯುತ್ತಿದೆ ಎಂಬುದರ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಮತ್ತು ತೈಲ ಮತ್ತು ಅನಿಲದ ಪ್ರಮುಖ ನಿವ್ವಳ ಆಮದುದಾರ ರಾಷ್ಟ್ರವಾಗಿ ಭಾರತವು ಸ್ಥಿರ ಮತ್ತು ಕೈಗೆಟುಕುವ ಇಂಧನ ಪೂರೈಕೆಗೆ ಆದ್ಯತೆ ನೀಡಬೇಕು” ಎಂದು ಹೇಳಿದ್ದಾರೆ. ನಮ್ಮ ದೇಶ ಬೇರೆ ದೇಶದಿಂದ ಆಮದು ಮಾಡಿಕೊಂಡ ಇಂಧನದ ಮೇಲೆ ಶೇ. 80-85ರಷ್ಟು ಅವಲಂಬಿತರಾಗಿರುವಾಗ ಇಂಧನ ವೆಚ್ಚಗಳಿಂದ ಉಂಟಾಗುವ ಹಣದುಬ್ಬರದ ಬಗ್ಗೆ ಕಳವಳಗಳು ಸಹಜ. ಹೀಗಾಗಿ, ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ಭಾರತವು ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವುದಿಲ್ಲ ಎಂಬ ಷರತ್ತಿನ ಮೇಲೆ ಭಾರತೀಯ ರಫ್ತಿನ ಮೇಲಿನ ಶೇ. 25ರಷ್ಟು ದಂಡದ ಸುಂಕವನ್ನು ತೆಗೆದುಹಾಕುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೊರಡಿಸಿದ್ದರು. ಇದಾದ ನಂತರ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಭಾರತದ ಮೊದಲ ಅಧಿಕಾರಿ ವಿಕ್ರಮ್ ಮಿಶ್ರಿ.

“ನಾವು ಯಾವುದೇ ಒಂದು ಮೂಲದ ಮೇಲೆ ಅವಲಂಬಿತವಾಗಿಲ್ಲ ಅಥವಾ ಅವಲಂಬಿತರಾಗಲು ಉದ್ದೇಶಿಸಿಲ್ಲ. ಮಾರುಕಟ್ಟೆಯ ಪರಿಸ್ಥಿತಿಗಳನ್ನು ಅವಲಂಬಿಸಿ ಮೂಲಗಳ ಮಿಶ್ರಣವು ಕಾಲಕಾಲಕ್ಕೆ ಬದಲಾಗಬಹುದು. ಹೆಚ್ಚಿನ ವೈವಿಧ್ಯೀಕರಣವು ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತದೆ” ಎಂದು ಮಿಶ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 pm, Mon, 9 February 26

Source link

ಮುಡಾ ಹಗರಣ: ಲೋಕಾಯುಕ್ತ ತನಿಖಾಧಿಕಾರಿಗಳ ಮೇಲೆಯೇ ಸ್ಪೋಟಕ ಆರೋಪ – Kannada News | Muda Scam Case: snehamayi krishna Complaints In Court Against Lokayukta over Bribery

ಮೈಸೂರು, (ಫೆಬ್ರವರಿ 09): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತವೇ (Lokayukta) ಆರೋಪಕ್ಕೆ ಗುರಿಯಾಗಿದ್ದು, ಮುಡಾದ ಹಿಂದಿನ ಆಯುಕ್ತರಿಂದ ಕೋಟಿ ಕೋಟಿ ರೂಪಾಯಿ ಲಂಚ (Bribe) ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿ ಕೋಟಿ ಹಣ ಲಂಚ ಕೊಡಲಾಗಿದೆ ಎಂದು ದೂರುದಾರ ಸ್ನೇಹಮಯಿ‌ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಾದ
ಜಿ.ಟಿ. ದಿನೇಶ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೋಷಾರೋಪಣ ಪತ್ರ ಸಲ್ಲಿಸಿರುವ ತನಿಖಾಧಿಕಾರಿ. ಮತ್ತೊಬ್ಬ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಯಾವುದೇ ಅಂತಿಮ ವರದಿಯೂ ಸಲ್ಲಿಸಿಲ್ಲ. ಇದಕ್ಕಾಗಿ ಡಿ.ಬಿ. ನಟೇಶ್ 4 ಕೋಟಿ 35 ಲಕ್ಷ ರೂ, ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಡಿ.ಬಿ. ನಟೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು ನಾಲ್ಕು ಕೋಟಿ ಮುವತ್ತೈದು ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎನ್ನುವ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅದೇ ಹಣದ ಕಾರಣಕ್ಕೆ ತನಿಖಾಧಿಕಾರಿ ನಟೇಶ್ ಅವರನ್ನು ರಕ್ಷಿಸುವಂತೆ ನಡೆದುಕೊಂಡಿದ್ದಾರೆ ಅನ್ನೋದು ಅವರ ವಾದ

ಸ್ನೇಹಮಯಿ ಕೃಷ್ಣ ಅವರ ಕೈಗೆ ಸಿಕ್ಕಿರುವ ದಾಖಲೆಗಳಲ್ಲಿ “DCM” ಎಂಬ ಪದದ ಮುಂದೆ ಹನ್ನೆರಡು ಕೋಟಿ ಐವತ್ತು ಲಕ್ಷ ರೂಪಾಯಿ ಹಣ ನೀಡಿರುವ ಉಲ್ಲೇಖವೂ ಇದೆ. ಇದನ್ನು ಕಂಪನಿಯ ಹೆಸರು ಎಂದು ಹೇಳಲಾಗಿದೆಯಾದರೂ, DCM” ಅಂದರೆ ಏನು? ಯಾರ ಸೂಚನೆ? ಯಾರಿಗೆ ಹಣ? ಎಂಬ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ.

ಇದನ್ನೂ ಓದಿ; ಮುಡಾ ಹಗರಣ: ಲೋಕಾಯುಕ್ತ ತನಿಖಾ ವರದಿಯಲ್ಲಿ ಮಹತ್ವದ ಅಂಶ ಉಲ್ಲೇಖ

ಈ ಎಲ್ಲಾ ಅಂಶಗಳನ್ನು ಆಧರಿಸಿ ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ನ್ಯಾಯಾಲಯವೂ ಸಹ ಸ್ವೀಕರಿಸಿದೆ. ಈ ಸಂಬಂಧ ಫೆಬ್ರವರಿ 20ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಮುಡಾ ಹಗರಣ ಈಗ ಭೂ ಹಂಚಿಕೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಲೋಕಾಯುಕ್ತ ತನಿಖೆಯ ನೈಜತೆಯನ್ನೇ ಪ್ರಶ್ನಿಸುವ ಹಂತಕ್ಕೆ ಬಂದಿದೆ. ನ್ಯಾಯಾಲಯದ ವಿಚಾರಣೆ ಈ ಗಂಭೀರ ಆರೋಪಗಳಿಗೆ ಉತ್ತರ ನೀಡುತ್ತಾ? ಅಥವಾ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತವೋ? ಇಡೀ ರಾಜ್ಯದ ಗಮನ ಈಗ ಫೆಬ್ರವರಿ 20ರ ಮೇಲೆ‌ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ? – Kannada News | How much petroleum reserves India have, and how many days they last in case of emergency

ನವದೆಹಲಿ, ಫೆಬ್ರುವರಿ 9: ಯೂರೋಪ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲಿಯಂ ಸಂಗ್ರಹದ ಗುರಿ ಹೊಂದಿವೆ. ಅಕಸ್ಮಾತ್ ಜಾಗತಿಕ ಪ್ರಕ್ಷುಬ್ದತೆಯ ಪರಿಸ್ಥಿತಿ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಕನಿಷ್ಠ 90 ದಿನಗಳಿಗಾಗುವಷ್ಟಾದರೂ ಪೆಟ್ರೋಲ್ ಲಭ್ಯ ಇರಬೇಕು ಎನ್ನುವುದು ಈ ಗುರಿಯ ಉದ್ದೇಶ. ಹಾಗಾದರೆ, ಭಾರತದಲ್ಲಿ ಪೆಟ್ರೋಲಿಯಂ ಸಂಗ್ರಹ (Strategic Petroleum Reserves) ಎಷ್ಟಿದೆ? ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ (Hardeep Singh Puri) ಸೋಮವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹರ್ದೀಪ್ ಸಿಂಗ್ ಪುರಿ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್​ಗಳಷ್ಟು (ಎಂಎಂಟಿ) ಕಚ್ಚಾ ತೈಲ ಸಂಗ್ರಹ ಇದೆ. ಕರ್ನಾಟಕ ಮತ್ತು ಆಂಧ್ರದಲ್ಲಿ ಮೂರು ಸ್ಥಳಗಳಲ್ಲಿ ಪೆಟ್ರೋಲಿಯಂ ಸಂಗ್ರಹ ಇದೆ. ಕರ್ನಾಟಕದಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ತೈಲ ಸಂಗ್ರಹ ಇರಿಸಲಾಗಿದೆ. ಈ ಮೂರು ಕಡೆಯಲ್ಲಿ ಕಚ್ಚಾ ತೈಲ ಸಂಸ್ಕರಣೆ ಮಾಡಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ತೈಲ ಸಂಗ್ರಹವು 74 ದಿನಗಳ ಬಳಕೆಗೆ ಆಗುವಷ್ಟು ಇದೆ. ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಸಂಗ್ರಹವನ್ನು 90 ದಿನಗಳ ಬಳಕೆಗೆ ಆಗುವಷ್ಟು ಹೆಚ್ಚಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ವಿಶ್ವದಲ್ಲಿ ಅತಿಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನ ಪಡೆಯುತ್ತದೆ. ಅತಿಹೆಚ್ಚು ಕಚ್ಚಾ ತೈಲ ಸಂಸ್ಕರಿಸುವ ನಾಲ್ಕನೇ ದೇಶ ಭಾರತವಾಗಿದೆ. ಪ್ರತೀ ವರ್ಷ 260 ಎಂಎಂಟಿಯಷ್ಟು ತೈಲ ಸಂಸ್ಕರಣೆ ಮಾಡಲಾಗುತ್ತಿದೆ. ಹೀಗೆ ಸಂಸ್ಕರಣೆ ಮಾಡಿ ತಯಾರಿಸಲಾದ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯ ಬಳಕೆಗೂ ಹಾಗೂ ರಫ್ತಿಗೂ ಉಪಯೋಗಿಸಲಾಗುತ್ತದೆ. ಈ ರೀತಿಯಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಅತಿಹೆಚ್ಚು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ.

ಬೇರೆ ಬೇರೆ ದೇಶಗಳಲ್ಲಿ ಪೆಟ್ರೋಲಿಯಂ ರಿಸರ್ವ್ಸ್ ಎಷ್ಟಿದೆ?

ತುರ್ತು ಸಂದರ್ಭ ಬಂದರೆ ಪೆಟ್ರೋಲ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರತೀ ದೇಶವೂ ಯೋಜನೆಗಳನ್ನು ಹಾಕಿದೆ. ಹೆಚ್ಚಿನ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲ್ ಸಂಗ್ರಹ ಹೊಂದುವ ಗುರಿ ಇಟ್ಟಿವೆ. ಯೂರೋಪಿಯನ್ ಯೂನಿಯನ್​ನ ನಿಯಮದಲ್ಲೇ ಈ ಗುರಿ ಇದೆ.

ಇನ್ನು ಕೆಲ ದೇಶಗಳು ಪರಸ್ಪರ ಇಂಧನ ಪೂರೈಕೆಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಉದಾಹರಣೆಗೆ, ಜಪಾನ್ ಮತ್ತು ಸೌತ್ ಕೊರಿಯಾ ಜೊತೆ ನ್ಯೂಜಿಲ್ಯಾಂಡ್ ಒಪ್ಪಂದ ಮಾಡಿಕೊಂಡಿದೆ. ತುರ್ತು ಸಂದರ್ಭ ಬಂದರೆ ಮಾರುಕಟ್ಟೆ ಬೆಲೆಗೆ ಜಪಾನ್, ಕೊರಿಯಾ ದೇಶಗಳು ತಮ್ಮಲ್ಲಿರುವ ಪೆಟ್ರೋಲಿಯಂ ಅನ್ನು ನ್ಯೂಜಿಲ್ಯಾಂಡ್​ಗೆ ಮಾರಬೇಕು. ಜಪಾನ್​ನಲ್ಲಿ ತೈಲ ಸಂಗ್ರಹ ಸಮೃದ್ಧವಾಗಿದೆ. 224 ದಿನಗಳು ಬಳಕೆಗೆ ಸಾಕಾಗುವಷ್ಟು ಪೆಟ್ರೋಲಿಯಂ ಸಂಗ್ರಹ ಆ ದೇಶದಲ್ಲಿ ಇದೆ. ಹೀಗಾಗಿ, ತುರ್ತು ಸಂದರ್ಭ ಬಂದರೆ ಬೇರೆ ಕೆಲ ದೇಶಗಳಿಗೆ ಅದನ್ನು ಮಾರಲು ಶಕ್ಯವಾಗಿರುತ್ತದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಹಾಗೆಯೇ, ಅಮೆರಿಕ ಜೊತೆ ಇಸ್ರೇಲ್ ಒಪ್ಪಂದ ಮಾಡಿಕೊಂಡಿದೆ. ತುರ್ತು ಸಂದರ್ಭದಲ್ಲಿ ಇಸ್ರೇಲ್​ಗೆ ಐದು ವರ್ಷದವರೆಗೂ ಅಮೆರಿಕ ತೈಲ ಪೂರೈಕೆ ಮಾಡಬೇಕೆನ್ನುವ ಒಪ್ಪಂದ ಇದು.

ಕೆಲ ದೇಶಗಳು ಒಂದು ವಾರದ ಬಳಕೆಗೆ ಆಗುವಷ್ಟು ಪೆಟ್ರೋಲಿಯಂ ರಿಸರ್ವ್ ಹೊಂದಿವೆ. ಪಾಕಿಸ್ತಾನದಲ್ಲಿ 20 ದಿನಗಳಿಗೆ ಆಗುವಷ್ಟು ಸಂಗ್ರಹ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​: ಬಲಿಯಾಗಿದ್ದು 2 ಜೀವ – Kannada News | Mandya Tragedy: Mother, Daughter Die by Suicide Over Teen’s Love Affair with Married Man

ಮೃತ ಮಗಳು ಮತ್ತು ತಾಯಿImage Credit source: Tv9 Kannada

ಮಂಡ್ಯ, ಫೆಬ್ರವರಿ 09: 19 ವರ್ಷದ ಯುವತಿ ಮತ್ತು ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ವಿವಾಹಿತ ಪುರುಷನ ಜೊತೆಗಿನ ಆಕೆಯ ಪ್ರೇಮವೇ ಘಟನೆಗೆ ಕಾರಣ ಎನ್ನಲಾಗಿದೆ.

ಹೌದು, ಕೋಡಿಹಳ್ಳಿ ಗ್ರಾಮದನೇ ಆದ 34 ವರ್ಷದ ಮುತ್ತುರಾಜ್​​ ಎಂಬವನ ಜೊತೆ ಪ್ರಿಯಾಂಕಾಗೆ ಲವ್​​ ಆಗಿತ್ತು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಈತ ಕೂಡ ಪ್ರಿಯಾಂಕಾಳ ಹಿಂದೆ ಬಿದ್ದಿದ್ದ. ಮುತ್ತುರಾಜ್​​ ಪ್ರತಿದಿನವೂ ಪ್ರಿಯಾಂಕಾ ಮನೆಗೆ ಬರುತ್ತಿದ್ದ. ಇವರ ಪ್ರೀತಿಯ ವಿಷಯ ತಿಳಿಯದ ಮನೆಯವರು ಇದು ಸಾಮಾನ್ಯ ಎಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಪ್ರೀತಿ ಮಾಡ್ತಿರುವ ವಿಚಾರ ಪ್ರಿಯಾಂಕಾ ಪೋಷಕರಿಗೆ ಗೊತ್ತಾಗಿತ್ತು. ಬಳಿಕ ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಹೀಗಿದ್ದರೂ ಸಹ ವಿವಾಹಿತ ಮುತ್ತುರಾಜ್ ಪ್ರಿಯಾಂಕಾಳನ್ನು ಪೀಡಿಸುತ್ತಿದ್ದ. ಹಾಗಾಗಿ ಮರ್ಯಾದೆಗೆ ಹೆದರಿ ತಾಯಿ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಸಂಬಂಧದಲ್ಲೇ ಮದುವೆಗೆ ನಡೆದಿತ್ತು ತಯಾರಿ

ಇನ್ನು ಪ್ರಿಯಾಂಕಾ ಮತ್ತು ಮುತ್ತುರಾಜ್​​ ಪ್ರೇಮದ ವಿಷಯ ಮೊದಲು ಶಕುಂತಲಾದೇವಿ ಅವರಿಗೆ ಗೊತ್ತಾಗಿತ್ತು. ಬಳಿಕ ಅವರು ಈ ಬಗ್ಗೆ ತಮ್ಮ ಪತಿಗೆ ತಿಳಿಸಿದ್ದರು ಎನ್ನಲಾಗಿದೆ. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ವಿಷಯ ತಿಳಿದು ಆಘಾತವಾಗಿದೆ. ಮಗಳು ತನ್ನ ಪ್ರೀತಿಯ ವಿಚಾರದ ಬಗ್ಗೆ ಮೊದಲು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಇಷ್ಟೆಲ್ಲ ನಡೆದು ಹೋಗಿದೆ ಎಂದು ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆ ಬಗ್ಗೆ ಹಲಗೂರು ಠಾಣೆಗೆ ಶಕುಂತಲಾದೇವಿ ಪತಿ ಮಹೇಶ್​​ ನೀಡಿರುವ ದೂರಿನ ಅನ್ವಯ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮುತ್ತುರಾಜ್​​

ಪ್ರಿಯಾಂಕಾಗೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದ ವಿಚಾರ ತಿಳಿದು ಆಕೆಯನ್ನು ಹೆದರಿಸಲು ಮುತ್ತುರಾಜ್​ ಮೂರು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ಬಳಿಕ ತಾಯಿ ಶಂಕುತಲಾ ಮತ್ತು ಮಗಳು ಪ್ರಿಯಾಂಕಾ ಇನ್ನಷ್ಟು ಗಾಬರಿಗೊಂಡಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:35 pm, Mon, 9 February 26

Source link

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ – Kannada News | Chitradurga: Bhadra Project Delay Sparks Farmers Bandh Call on February 10

ಭದ್ರಾ ಮೇಲ್ದಂಡೆ ಯೋಜನೆ, ರೈತರಿಂದ ಪ್ರತಿಭಟನೆ

ಚಿತ್ರದುರ್ಗ, ಫೆಬ್ರವರಿ 09: ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸಿಡಿದೆದ್ದ ಚಿತ್ರದುರ್ಗದ ರೈತರು ನಾಳೆ ಅಂದರೆ ಫೆಬ್ರವರಿ 10ರಂದು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳ ಬಂದ್​ಗೆ (Bandh) ಕರೆ ನೀಡಿದ್ದಾರೆ.

ಪೂರ್ಣಗೊವಾದ ಯೋಜನೆ 

ಚಿತ್ರದುರ್ಗದ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಗಿದೆ. ಆದರೆ ಯೋಜನೆಗೆ ಚಾಲನೆ ಸಿಕ್ಕು ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಮುತ್ತಿನಕೊಪ್ಪದಿಂದ ಭದ್ರಾ ಡ್ಯಾಂವರೆಗೆ ಶೇ 25ರಷ್ಟು ಕಾಮಗಾರಿ ಬಾಕಿಯಿದೆ. ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಡೆ ಟವರ್ ಹಾಕುವ ಕೆಲಸ ಬಾಕಿಯಿದೆ.

ಇದನ್ನೂ ಓದಿ: ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ: ಸಿದ್ದರಾಮಯ್ಯ, ಸಿಎಂ

ಅಲ್ಲದೆ ಸೂಕ್ಷ್ಮ ಹನಿ ನೀರಾವರಿ ಯೋಜನೆಗೆ ಹೊಳಲ್ಕೆರೆ ಕೈಬಿಡಲಾಗಿದೆ. ಹೀಗಾಗಿ ತಾರತಮ್ಯ ಬಿಟ್ಟು ಜಿಲ್ಲೆಯ ಎಲ್ಲೆಡೆ ನೀರು ಹರಿಸುವವರೆಗೆ ಟ್ರಯಲ್ ಟೆಸ್ಟ್​ಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈಗಾಗಲೇ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ಫೆಬ್ರವರಿ 4ರಿಂದ ಧರಣಿ ನಡೆಸಲಾಗುತ್ತಿದೆ. ಫೆಬ್ರವರಿ 10ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕು ಕೇಂದ್ರಗಳ ಬಂದ್​​ಗೆ ಕರೆ ನೀಡಿದ್ದೇವೆ. ಫೆಬ್ರವರಿ 12ಕ್ಕೆ ಚಳ್ಳಕೆರೆ ಪಟ್ಟಣ ಬಂದ್ ಮಾಡಲಾಗುವುದು. ಫೆಬ್ರವರಿ 13ಕ್ಕೆ ಚಿತ್ರದುರ್ಗ ನಗರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಗ್ಗೆ ಮತ್ತಷ್ಟು ವಿವರ ಕೇಳಿದ ಕೇಂದ್ರ; ಕಿಡಿಕಾರಿದ ಟಿ.ಬಿ.ಜಯಚಂದ್ರ

ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿಸಿದೆದ್ದಾರೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ ಅನುದಾನ ಘೋಷಿಸಿದ್ದು ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೂ ಭದ್ರಾ ಯೋಜನೆಗೆ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪರಿಣಾಮ ಬಯಲು ಸೀಮೆಯ ಜನರ ಕನಸಾದ ಭದ್ರಾ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, ರೈತಾಪಿ ವರ್ಗ ಹೈರಾಣಾಗಿದ್ದಾರೆ. ಹೀಗಾಗಿ, ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link