ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ – Kannada News | Last Ashada Friday: Huge Devotee Crowd at Chamundeshwari Temple in Mysuru

ಮೈಸೂರು, ಆಗಸ್ಟ್ 7: ಮೈಸೂರಿನ ನಾಡದೇವಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಭಕ್ತಸಾಗರವೇ ಹರಿದುಬಂದಿದೆ. ಆಷಾಢ ಶುಕ್ರವಾರಕ್ಕೆ ವಿಶೇಷ ಮಹತ್ವವಿರುವುದರಿಂದ, ಈ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಚಾಮುಂಡೇಶ್ವರಿಗೆ ಮಹಾಲಕ್ಷ್ಮಿ ಅಲಂಕಾರವನ್ನು ಮಾಡಲಾಗಿದೆ. ದೇವಿಗೆ ಆಕಾಶ ನೀಲಿ ಬಣ್ಣದ ಸೀರೆಯನ್ನು ಹೊದಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು, ಮತ್ತು ಉದ್ಯಮಿಗಳು ಬೆಳ್ಳಂಬೆಳಗ್ಗೆಯೇ ಆಗಮಿಸಿ ದೇವಿಯ ದರ್ಶನ ಪಡೆದರು. ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರವು ಕ್ರಮ ಕೈಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾಫಿ ಸಾಕ್ಷಿ’ ಭೀತಿ; ಜೈಲಿನಲ್ಲಿ ಊಟ, ನಿದ್ರೆಯಿಲ್ಲದೆ ಕಳೆದ ನಟ ದರ್ಶನ್‌ – Kannada News | Actor Darshan Panics Over Close Aide Pradoosh Approver Plea in Renukaswamy Case

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ, ದರ್ಶನ್ ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿದೆ. ಈ ವಿಚಾರ ಸದ್ಯ ಜೈಲಿನಲ್ಲಿರುವ ದರ್ಶನ್ ನಿದ್ದೆಗೆಡಿಸಿದೆ.

ಆಪ್ತನ ಅರ್ಜಿಯಿಂದ ಜೈಲಿನಲ್ಲಿ ಶುರುವಾಯ್ತು ನಡುಕ

ಪ್ರಕರಣದಲ್ಲಿ ದರ್ಶನ್ ಜೊತೆ ಜೈಲು ಪಾಲಾಗಿರುವ ಅವರ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ ದರ್ಶನ್ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ಎದೆಯಲ್ಲಿ ಆತಂಕ ಶುರುವಾಗಿದೆ. ಸ್ವತಃ ಆಪ್ತನೇ ಸಾಕ್ಷಿಯಾಗಿ ಬದಲಾದರೆ, ಕೇಸ್‌ನ ಭವಿಷ್ಯ ಏನಾಗಬಹುದು? ತಮ್ಮ ವಿರುದ್ಧವೇ ಸಾಕ್ಷ್ಯಗಳು ಗಟ್ಟಿಯಾಗುತ್ತವೆಯೇ ಎಂಬ ಭಯ ದರ್ಶನ್ ಅವರನ್ನು ತೀವ್ರವಾಗಿ ಕಾಡಲಾರಂಭಿಸಿದೆ.

ಊಟ ತೊರೆದು, ಮೌನಕ್ಕೆ ಶರಣಾದ ನಟ

ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ದರ್ಶನ್ ಜೈಲಿನಲ್ಲಿ ವಿಲವಿಲ ಒದ್ದಾಡುವಂತಾಗಿದೆ. ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಸಹ ಬಂಧಿಗಳ ಜೊತೆಗೂ ಯಾವುದೇ ಮಾತುಕತೆ ನಡೆಸದೆ, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿರುವ ದರ್ಶನ್‌ಗೆ, ಪ್ರದೋಷ್ ಮಾಫಿ ಸಾಕ್ಷಿಯಾಗುವ ನಿರ್ಧಾರ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶಾಕ್: ರೇಣುಕಾಸ್ವಾಮಿ ಕೇಸ್​​ನಲ್ಲಿ ಮಾಫಿ ಸಾಕ್ಷಿ ಮಾಡಿ; ಕೋರ್ಟ್​​ಗೆ ಎ14 ಪ್ರದೋಶ್ ಮನವಿ

ಬೆಳಗಿನ ಜಾವ ಪತ್ರಿಕೆ ನೋಡಿ ಮತ್ತೆ ಚಿಂತೆ

ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ತಮ್ಮ ಬ್ಯಾರಕ್‌ನಲ್ಲೇ ವಾಕ್ ಮಾಡಿದ ದರ್ಶನ್, ನಂತರ ದೇವರ ಫೋಟೋಗೆ ಕೈಮುಗಿದು ಕಾಫಿ ಕುಡಿದು ಕುಳಿತಿದ್ದರು. ಬಳಿಕ ದಿನಪತ್ರಿಕೆಯನ್ನು ತರಿಸಿ, ಅದರಲ್ಲಿ ಬಂದಿದ್ದ ಮಾಫಿ ಸಾಕ್ಷಿ ಕುರಿತ ಸುದ್ದಿಯನ್ನು ಓದಿದ ಡಿ-ಬಾಸ್, ಮತ್ತೆ ತೀವ್ರ ಆತಂಕಕ್ಕೆ ಒಳಗಾಗಿ ಮೌನಕ್ಕೆ ಜಾರಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಆಪ್ತನ ಈ ನಡೆ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟ ತಂದೊಡ್ಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ವಂಚನೆ: ಕನ್ನಡಿಗರನ್ನು ನಿಂದಿಸಿ ಠಾಣೆ ಮುಂಭಾಗವೇ ಕ್ಷಮೆ ಕೇಳಿದ ಮಹಿಳೆ! – Kannada News | Bengaluru Stock Market Fraud: Woman Apologizes for Abusing Kannadigas at Peenya Police Station

ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ವಂಚನೆ

ಬೆಂಗಳೂರು, ಆಗಸ್ಟ್ 07: ಸ್ಟಾಕ್ ಮಾರ್ಕೆಟ್‌ನಲ್ಲಿ(Stock market) ಹೂಡಿಕೆ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಇದರ ಬೆನ್ನಲ್ಲೇ, ವಂಚನೆ ಬಗ್ಗೆ ಪ್ರಶ್ನಿಸಲು ಹೋದ ಹೂಡಿಕೆದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನ್ನಡ ಭಾಷೆಯ ಕುರಿತು ಉದ್ಧಟತನ ಪ್ರದರ್ಶಿಸಿದ್ದ ಮಹಿಳೆಯೊಬ್ಬಳು ಕೊನೆಗೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕನ್ನಡಿಗರ ಕ್ಷಮೆ ಕೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಿಂದನೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಕಂಪನಿಯಿಂದ ವಂಚನೆಗೊಳಗಾದ ಹಲವಾರು ಹೂಡಿಕೆದಾರರು ಒಟ್ಟಾಗಿ ಸಂಸ್ಥೆಯ ಪ್ರತಿನಿಧಿಗಳನ್ನು ಪ್ರಶ್ನಿಸಲು ತೆರಳಿದ್ದರು. ಈ ವೇಳೆ ಅಲ್ಲಿಯೇ ಇದ್ದ ಪ್ರಿಯಾಂಕ ಎಂಬ ಮಹಿಳೆ ಹೂಡಿಕೆದಾರರೊಂದಿಗೆ ತೀವ್ರ ಗಲಾಟೆ ಆರಂಭಿಸಿದ್ದಾಳೆ. ಸಂತ್ರಸ್ತರು ಆಕೆಗೆ “ಕನ್ನಡದಲ್ಲಿ ಮಾತನಾಡು” ಎಂದು ಹೇಳಿದ್ದಕ್ಕೆ ಆಕೆ ತೀವ್ರವಾಗಿ ಆಕ್ರೋಶಗೊಂಡಿದ್ದಾಳೆ. ಅಲ್ಲದೆ, “ನನಗೆ ಕನ್ನಡ ಗೊತ್ತಿಲ್ಲ,ಏನ್ ಮಾಡ್ತಿರಾ ಮಾಡ್ಕೊಳಿ” ಎಂದು ಅತ್ಯಂತ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕನ್ನಡಿಗರನ್ನು ನಿಂದಿಸಿದ್ದಾಳೆ.

ಠಾಣೆ ಮುಂಭಾಗದಲ್ಲೇ ಕ್ಷಮೆಯಾಚನೆ

ಮಹಿಳೆಯ ಈ ಉದ್ಧಟತನ ಮತ್ತು ಸ್ಥಳದಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೀಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಾನೂನು ಕ್ರಮ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಆರೋಪಿ ಮಹಿಳೆ ಪ್ರಿಯಾಂಕ, ಕೊನೆಗೆ ಪೀಣ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾಳೆ. “ಮುಂದೆ ಎಂದಿಗೂ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿಚಾರದಲ್ಲಿ ಇಂತಹ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲ” ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಮತ್ತೊಂದೆಡೆ, ಸ್ಟಾಕ್ ಮಾರ್ಕೆಟ್ ಹೆಸರಿನಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ವಂಚನೆ ಹಗರಣದ ಕುರಿತು ಪೀಣ್ಯ ಠಾಣಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Boss Movie Review: ಶಿವಸ್ವಾಮಿ ಕೊಲೆ ರಹಸ್ಯದ ಕಥೆ ‘ಬಾಸ್’ ಹೇಗಿದೆ? ಇಲ್ಲಿದೆ ವಿಮರ್ಶೆ – Kannada News | Boss Movie Review: Controversial Thriller Inspired by High Profile Crime Case Movie Rating

ಒಂದು ಕೊಲೆ ನಡೆದು, ಅದರಲ್ಲಿ ಸೆಲೆಬ್ರಿಟಿಯ ಪಾತ್ರವಿದೆ ಎಂದಾಗ ಅದರಲ್ಲೂ ಆ ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವಾಗ ಆ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಹಾಗೆಯೇ ಆಯಿತು. ಏಕೆಂದರೆ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ನಟ ದರ್ಶನ್. ಇದೇ ಕಥೆಯನ್ನು ಆಧರಿಸಿ ‘ಬಾಸ್’ ಸಿದ್ಧವಾಗಿದೆ ಎನ್ನಲಾಗಿತ್ತು. ನಿಜಕ್ಕೂ ಸಿನಿಮಾ ಹಾಗೆಯೇ ಇದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಾಸ್ ಸಿನಿಮಾ ಕಥೆ ಏನು?

ಬೆಂಗಳೂರಿನ ಮೋರಿ ಪಕ್ಕದಲ್ಲಿ ಒಂದು ಹೆಣ ಸಿಗುತ್ತದೆ. ನಾಯಿಗಳು ಅದನ್ನು ಕಚ್ಚಿ ತಿನ್ನುತ್ತಾ ಇರುತ್ತವೆ. ಆ ಬಗ್ಗೆ ಅಪಾರ್ಟ್​​ಮೆಂಟ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ಬಂದು ಶವವನ್ನು ತೆಗೆದುಕೊಂಡು ಹೋಗುತ್ತಾರೆ. ಹೆಣವಾಗಿದ್ದು ಯಾರು ಎಂದು ಪೊಲೀಸರು ಚಿಂತಿಸುವಾಗಲೇ ನಾಲ್ಕು ಜನ ಬಂದು ಸರೆಂಡರ್ ಆಗುತ್ತಾರೆ. ನಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ.

ಇದೇ ಸಮಯಕ್ಕೆ ಪೊಲೀಸರಿಗೆ ಮಂತ್ರಿಯೊಬ್ಬರಿಂದ ಕರೆ ಬರುತ್ತದೆ. ಅಸಲಿ ವಿಷಯ ಬೇರೆಯೇ ಇದೆ ಎಂದು ಹೇಳುತ್ತಾರೆ. ಸರೆಂಡರ್ ಆದವರಿಗೆ ಸರಿಯಾಗಿ ಬೆಂಡೆತ್ತಿದಾಗ ಖ್ಯಾತ ಕ್ರಿಕೆಟರ್ ಬಾಸ್ (ತನುಷ್ ಶಿವಣ್ಣ) ಹೆಸರು ಹೊರಬರುತ್ತದೆ. ಆ ಕೊಲೆ ಹೇಗೆ ನಡೆಯಿತು? ಅದನ್ನು ಅಸಲಿಗೆ ಮಾಡಿದ್ದು ಯಾರು ಎಂಬಿತ್ಯಾದಿ ವಿಷಯಗಳನ್ನು ‘ಬಾಸ್’ ಸಿನಿಮಾದಲ್ಲಿ ಹೇಳಲಾಗಿದೆ.

ವಿವಾದಾತ್ಮಕ ವಿಷಯವೇ ಸಿನಿಮಾ ಆದಾಗ

‘ಬಾಸ್’ ಒಂದು ವಿವಾದಾತ್ಮಕ ವಿಷಯ. ಇದನ್ನು ಹೇಳುವ ರಿಸ್ಕ್​ ಅನ್ನು ಲವ ಅವರು ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಸಾಕಷ್ಟು ಅಡೆತಡೆ ಎದುರಿಸಿದ್ದಾರೆ. ಆದರೆ, ಸಿನಿಮಾ ನೋಡಿದ ಬಳಿಕ ಈ ಸಾಹಸ ಮಾಡುವ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಂಚಿಂಚು ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದೇ ಕಥೆಯನ್ನು ಶಿವಸ್ವಾಮಿ ಕೊಲೆ ಪ್ರಕರಣವಾಗಿ ಮಾಡುತ್ತೇನೆ ಎಂಬ ಸಾಹಸವೇಕೆ ಎಂದು ಸಿನಿಮಾ ನೋಡಿದ ಬಳಿಕ ಕೆಲವರಿಗೆ ಅನಿಸಬಹುದು.

‘ಬಾಸ್’ ಸಿನಿಮಾದ ಮೊದಲಾರ್ಧ ರೋಚಕವಾಗಿದೆ. ಕೊಲೆಗೂ ಮೊದಲು ಏನೆಲ್ಲ ಆಯಿತು, ಕೊಲೆಯ ಹಿಂದೆ ಏನೆಲ್ಲ ನಡೆದವು ಎಂಬುದನ್ನು ಇಂಚಿಂಚು ಬಿಚ್ಚಿಟ್ಟಿದ್ದಾರೆ. ಈ ತಂಡ ಕಥೆಯನ್ನು ಕೇವಲ ಕಾಲ್ಪನಿಕ ಎಂದು ಹೇಳಿದೆ. ಆದರೆ, ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇದು ಕಾಲ್ಪನಿಕ ಕಥೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಅಸಲಿ ವಿಷಯ ಯಾವುದು? ಕಾಲ್ಪನಿಕ ಯಾವುದು ಎಂದು ಜಡ್ಜ್ ಮಾಡೋದು ಕಷ್ಟ. ಅದರಲ್ಲೂ ಪ್ರಕರಣ ಕೋರ್ಟ್​​ನಲ್ಲಿ ವಿಚಾರಣೆಯಲ್ಲಿರುವಾಗ ಬಾಸ್ ಪಾತ್ರ ಇದರಲ್ಲಿ ಏನೂ ಇಲ್ಲ ಎಂಬ ಜಡ್ಜ್​​ಮೆಂಟ್ ಕೊಡುವ ಪ್ರಯತ್ನದ ಬಗ್ಗೆಯೂ ಕೆಲವರಿಗೆ ಅಸಮಾಧಾನ ಮೂಡಬಹುದು.

ಸಂಗೀತ ಇನ್ನಷ್ಟು ಉತ್ತಮವಾಗಿ ಮೂಡಿ ಬಂದಿದ್ದರೆ ‘ಬಾಸ್’ ಸಿನಿಮಾದ ಮತ್ತಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿತ್ತು. ಈ ಚಿತ್ರದಲ್ಲಿ ಬರೋ ಎಲ್ಲ ಪಾತ್ರಗಳು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಭಾಗಿ ಆದ ಪಾತ್ರಗಳನ್ನೇ ಹೋಲುತ್ತವೆ. ಹೀಗಾಗಿ, ಹೆಜ್ಜೆ ಹೆಜ್ಜೆಗೂ ರೇಣುಕಾಸ್ವಾಮಿ ಕೊಲೆ ಕೇಸ್​ ಅನ್ನು ಇದು ನೆನಪಿಸುತ್ತದೆ.

ಇದನ್ನೂ ಓದಿ: ‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು

ಈ ಸಿನಿಮಾದಲ್ಲಿ ತನುಷ್ ಶಿವಣ್ಣ ಬಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಂ ಕಥೆಯೇ ಹೆಚ್ಚು ಸಾಗೋದರಿಂದ ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ. ವಂದಿತಾ ಗೌಡ ಅವರು ಶೀಲಾ ಗೌಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತು ತೆರೆಮೇಲೆ ಬರುತ್ತಾರೆ. ಪಾಯಲ್ ಚೆಂಗಪ್ಪ ಬಾಸ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:14 am, Fri, 7 August 26

Source link

ಗದಗ: ಹುಳು ಬಿದ್ದ ಆಹಾರ ಸರಬರಾಜು; ರಕ್ತ ಹೀರುವ ತಿಗಣೆ ಕಾಟಕ್ಕೆ ವಿದ್ಯಾರ್ಥಿಗಳು ವಿಲವಿಲ – Kannada News | Gadag Hostel Mismanagement: Students Suffer from Unhygienic Conditions, Demand Action

ಸರ್ಕಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ತೀವ್ರ ಅವ್ಯವಸ್ಥೆ

ಗದಗ ಆ. 7: ಓದಿ ಮುಂದೆ ಬರಬೇಕು, ಸಾಧನೆ ಮಾಡಬೇಕು ಎಂಬ ನೂರಾರು ಕನಸು ಹೊತ್ತು ಸರ್ಕಾರಿ ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಗಳಿಗೆ ಅವ್ಯವಸ್ಥೆಯ ಬಿಸಿ ತಟ್ಟಿದೆ. ಗದಗ ನಗರದ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವು ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಹಾಸ್ಟೆಲ್‌ನಲ್ಲಿ ತಿಗಣೆಗಳ ಕಾಟ, ಕಳಪೆ ಆಹಾರ ಸರಬರಾಜು ಹಾಗೂ ಶುದ್ಧ ಕುಡಿಯುವ ನೀರಿನ ಅಭಾವದಿಂದ ಬೇಸತ್ತ ವಿದ್ಯಾರ್ಥಿಗಳು, ವಸತಿ ನಿಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿ ತಿಗಣೆಗಳ ಕಾಟ ವಿಪರೀತವಾಗಿದ್ದು, ರಾತ್ರಿಯಿಡೀ ವಿದ್ಯಾರ್ಥಿಗಳು ನಿದ್ರೆಯಿಲ್ಲದೆ ಕಳೆಯುವಂತಾಗಿದೆ. ಕ್ರಿಮಿನಾಶಕ ಸಿಂಪಡಿಸಿ ತಿಗಣೆಗಳನ್ನು ನಿಯಂತ್ರಿಸಿ ಎಂದು ಮನವಿ ಮಾಡಿದರೂ ವಾರ್ಡನ್ ಕನಿಷ್ಠ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿದ್ದುಕೊಂಡು ಹೊಟ್ಟೆತುಂಬ ಊಟ ಮಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹುಳು ಬಿದ್ದಿರುವ ಜೋಳ ಹಾಗೂ ಗೋಧಿಯನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಹಾಸ್ಟೆಲ್‌ನಲ್ಲಿ ಸುಮಾರು 100 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ಹಾಸ್ಟೆಲ್ ‘ತಿಪ್ಪೆಗುಂಡಿ’ಯಂತೆ ಇರುತ್ತದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ತಪಾಸಣೆಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ಮೇಲ್ನೋಟಕ್ಕೆ ಸುಣ್ಣ-ಬಣ್ಣ ಬಳಿದು ಸ್ವಚ್ಛಗೊಳಿಸುವ ನಾಟಕವಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಹಾಗೂ ಉತ್ತಮ ಆಹಾರ ಒದಗಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹಾಸ್ಟೆಲ್‌ನಲ್ಲಿರುವ ಮೂಲಭೂತ ಅವ್ಯವಸ್ಥೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ವಿದ್ಯಾರ್ಥಿಗಳು ಒಮ್ಮತದಿಂದ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥನೆ – Kannada News | Chamundi Hills Last Ashada Friday: Devotee Rush for Mahalakshmi Darshan, Prayers for Prosperity

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಈ ವಿಶೇಷ ದಿನದಂದು ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಮಹಾಲಕ್ಷ್ಮಿ ಅಲಂಕಾರದಲ್ಲಿ ಸುಂದರವಾಗಿ ಅಲಂಕರಿಸಲಾಗಿದೆ. ವಿವಿಧ ಪುಷ್ಪಗಳಿಂದ ಮಂಟಪವನ್ನು ಶೃಂಗರಿಸಲಾಗಿದ್ದು, ವಿಶೇಷವಾಗಿ ಶೇಷನಾಗದ ಆಕಾರದ ಮೊಗ್ಗಿನ ಜೊಡೆ ಅಲಂಕಾರ ಭಕ್ತರ ಗಮನ ಸೆಳೆದಿದೆ.

ಬೆಳಗಿನ ಜಾವ 3:30ರಿಂದಲೇ ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ನೆರವೇರಿಸಲಾಯಿತು. ನಾಡಿಗೆ ಸುಭಿಕ್ಷೆ, ಶಾಂತಿ ನೆಲೆಸಲಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಅರ್ಚಕರು ಪ್ರಾರ್ಥಿಸಿದರು. ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಕುಟುಂಬ ಸಮೇತರಾಗಿ ಪೂಜಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಕೊನೆಯ ಶುಕ್ರವಾರ ಭಕ್ತರ ಸಂಖ್ಯೆ ದುಪ್ಪಟ್ಟಾದ ಕಾರಣ, ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ, ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಮಾಡಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತಿಪೂರ್ವಕವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Source link

‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ! – Kannada News | Bengaluru Fraud Case: Techie Couple Arrested for Multi Crore Work From Home Packing Scam

‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ದೇವನಹಳ್ಳಿ ಪೊಲೀಸರ ವಶ!

ದೇವನಹಳ್ಳಿ, ಆಗಸ್ಟ್ 07: ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ (Work From Home) ಕೆಲಸದ ಆಸೆ ತೋರಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಮತ್ತು ಆತನ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ಈ ದಂಪತಿ ‘ಕಾಳಿಕಾ ದೇವಿ ಎಂಟರ್ ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ತೆರೆದು ಸಾವಿರಾರು ಜನರಿಗೆ ಮೋಸ ಮಾಡಿದ್ದಾರೆ.

ರೀಲ್ಸ್ ಮೂಲಕ ಬಲೆ

ಆರೋಪಿ ಕಿರಣ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಮನೆಬಾಗಿಲಿಗೇ ಕೆಲಸ ನೀಡುವುದಾಗಿ ಜಾಹೀರಾತು ನೀಡುತ್ತಿದ್ದ. ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಮಾಡುವ ಸುಲಭದ ಕೆಲಸ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ. ಕಚ್ಚಾ ಪದಾರ್ಥಗಳ ಪ್ಯಾಕಿಂಗ್ ಕೆಲಸಕ್ಕಾಗಿ ಒಮ್ಮೆ 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ, ಪ್ರತಿ ತಿಂಗಳು 23 ಸಾವಿರ ರೂಪಾಯಿ ಸಂಬಳ ಕೊಡುವುದಾಗಿ ಆಮಿಷ ಒಡ್ಡಿದ್ದ.

ಲಕ್ಷ ಲಕ್ಷ ಹಣ ಪಡೆದು ವಂಚನೆ

ದಂಪತಿಯ ಮಾತುಗಳನ್ನು ಸತ್ಯವೆಂದು ನಂಬಿದ ಸಾರ್ವಜನಿಕರು, ಸಾಲ ಸೂಲ ಮಾಡಿ ಒಬ್ಬೊಬ್ಬರಿಂದ 2 ಲಕ್ಷದಿಂದ ಹಿಡಿದು ಬರೋಬ್ಬರಿ 20 ಲಕ್ಷ ರೂಪಾಯಿವರೆಗೂ ಹಣವನ್ನು ಡೆಪಾಸಿಟ್ ಮಾಡಿದ್ದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಹಾಗೂ ಕೋಲಾರ ಸೇರಿದಂತೆ ಹಲವು ಭಾಗಗಳ ನೂರಾರು ಜನರು ಈ ದಂಪತಿಯ ಮಾಯದ ಬಲೆಗೆ ಬಿದ್ದಿದ್ದಾರೆ. ಹಣ ಪಡೆದ ಬಳಿಕ ದಂಪತಿ ಕೆಲಸವನ್ನೂ ನೀಡದೆ, ಠೇವಣಿ ಹಣವನ್ನೂ ಮರುಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದರು.

ಕಳೆದ ಕೆಲವು ತಿಂಗಳಿಂದ ಕೆಲಸವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಕಂಗಾಲಾಗಿದ್ದ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಂದ ದೋಚಲಾದ ಕೋಟಿ ಕೋಟಿ ಹಣದ ಲೇವಾದೇವಿ ಕುರಿತು ಪೊಲೀಸರು ಸದ್ಯ ತೀವ್ರ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈಲ್ಯಾಂಡ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ, ಶಿಕ್ಷಕ ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ – Kannada News | Thailand School Shooting: Student Kills Teacher, Injures 15 in Bangkok Attack

ಬ್ಯಾಂಕಾಕ್, ಆಗಸ್ಟ್ 07: ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಬಳಿಯ ಪ್ರಸಿದ್ಧ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ಹಾಗೂ ಶಿಕ್ಷಕರ ಮೇಲೆ ದಿಢೀರ್ ಗುಂಡಿನ ದಾಳಿ(Firing) ನಡೆಸಿದ್ದಾನೆ. ಈ ದಾರುಣ ಘಟನೆಯಲ್ಲಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಕನಿಷ್ಠ 15 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವಿದ್ಯಾರ್ಥಿಯು ಕೃತ್ಯದ ಬೆನ್ನಲ್ಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.

ಬ್ಯಾಂಕಾಕ್ ಸಮೀಪದ ನೊಂಥಬುರಿಯ ಬ್ಯಾಂಗ್ ಕ್ರುವಾಯಿ ಜಿಲ್ಲೆಯಲ್ಲಿರುವ ದೇಬ್ಸಿರಿನ್ ನೊಂಥಬುರಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ತರಗತಿಗಳು ಆರಂಭವಾಗುವ ವೇಳೆಗೆ ಈ ಭೀಕರ ಘಟನೆ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ ಬಂದೂಕಿನೊಂದಿಗೆ ಶಾಲೆಗೆ ಆಗಮಿಸಿ ದಿಢೀರನೆ ಗುಂಡಿನ ಸುರಿಮಳೆ ಗೈದಿದ್ದಾನೆ. ಗುಂಡೇಟಿನಿಂದ ಶಿಕ್ಷಕರೊಬ್ಬರು ಕೊನೆಯುಸಿರೆಳೆದಿದ್ದು, ಗಾಯಗೊಂಡ 15 ಜನರಲ್ಲಿ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರವಾಗಿದೆ.

ಆತ್ಮಹತ್ಯೆ ಮಾಡಿಕೊಂಡ ದಾಳಿಕೋರ: ಘಟನೆಯ ಬಳಿಕ ಭದ್ರತಾ ಪಡೆಗಳು ಶಾಲೆಯನ್ನು ಸುತ್ತುವರೆಯುತ್ತಿದ್ದಂತೆ, ದಾಳಿಕೋರ ವಿದ್ಯಾರ್ಥಿಯು ಶಾಲಾ ಆವರಣದಲ್ಲೇ ತನ್ನ ಮೇಲೆ ಗುಂಡು ಹಾರಿಸಿಕೊಂಡು ಶವವಾಗಿದ್ದಾನೆ. ಪ್ಲೈ ಬ್ಯಾಂಗ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಶಾಲಾ ಕ್ಯಾಂಪಸ್‌ಗೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Video: ಎಎಪಿ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಕೊಲೆ

ಶಾಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಮಾಧ್ಯಮಗಳು ಘಟನೆಯ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೇರ ಪ್ರಸಾರ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕಿರಿಯ ವಯಸ್ಸಿನ ವಿದ್ಯಾರ್ಥಿ ಬಂದೂಕನ್ನು ಹೇಗೆ ಪಡೆದುಕೊಂಡ ಮತ್ತು ದಾಳಿ ನಡೆಸಲು ಇದ್ದ ಮಾನಸಿಕ ಅಥವಾ ವೈಯಕ್ತಿಕ ಉದ್ದೇಶವೇನು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ್ನೇಯ ಏಷ್ಯಾದ ದೇಶಗಳ ಪೈಕಿ ಥೈಲ್ಯಾಂಡ್‌ನಲ್ಲಿ ಸಾರ್ವಜನಿಕರಲ್ಲಿ ಬಂದೂಕು ಹೊಂದುವ ಪ್ರಮಾಣ ಹೆಚ್ಚಾಗಿದೆ. ಕಾನೂನುಬದ್ಧ ಹಾಗೂ ಅಕ್ರಮ ಬಂದೂಕುಗಳು ಸುಲಭವಾಗಿ ಸಿಗುವುದೇ ಇಂತಹ ದುರಂತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪೋಸ್ಟ್​

2022 ರಲ್ಲಿ ಥೈಲ್ಯಾಂಡ್‌ನ ಮಕ್ಕಳ ಆರೈಕೆ ಕೇಂದ್ರವೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ನಡೆಸಿದ ಮಾರಣಾಂತಿಕ ದಾಳಿಯಲ್ಲಿ 24ಮಕ್ಕಳು ಸೇರಿದಂತೆ 36 ಜನರು ಮೃತಪಟ್ಟಿದ್ದರು. ಆ ಘಟನೆಯ ನಂತರ ಬಂದೂಕು ಕಾಯ್ದೆಯನ್ನು ಕಠಿಣಗೊಳಿಸಲಾಗಿದ್ದರೂ, ಶಾಲಾ ಮಟ್ಟದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ದೇಶಾದ್ಯಂತ ಭಾರಿ ಆತಂಕ ಮೂಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳ ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ; ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ವಾಗ್ದಾಳಿ – Kannada News | Koppal Congress Rift: Iqbal Ansari Hits Out at Shivraj Tangadagi, Basavaraj Rayareddy

ಇಕ್ಬಾಲ್ ಅನ್ಸಾರಿ (ಸಂಗ್ರಹ ಚಿತ್ರ)Image Credit source: tv9

ಕೊಪ್ಪಳ, ಆಗಸ್ಟ್ 7: ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಚಿವ ಶಿವರಾಜ್ ತಂಗಡಗಿ, ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಆಡಿಯೋ ಮೂಲಕ ಮಾತನಾಡಿರುವ ಅನ್ಸಾರಿ, ತಮ್ಮ ಸೋಲಿಗೆ ಈ ನಾಯಕರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಶಿವರಾಜ್ ತಂಗಡಗಿ, ‘ಇತರರ ಬಗ್ಗೆ ಮಾತನಾಡುವ ಬದಲು ಇಕ್ಬಾಲ್ ಅನ್ಸಾರಿ ಜನರ ಮಧ್ಯೆ ಹೋಗಿ ಗೆದ್ದು ತೋರಿಸಲಿ’ ಎಂದು ನೀಡಿದ್ದ ಹೇಳಿಕೆಗೆ ಅನ್ಸಾರಿ ತಿರುಗೇಟು ನೀಡಿದ್ದಾರೆ. ಗಂಗಾವತಿಗೆ ಬಂದು ಮಾಧ್ಯಮಗೋಷ್ಠಿ ನಡೆಸಿ ತಮ್ಮ ವಿರುದ್ಧ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಅವರು, ‘ಬಹಿರಂಗ ವೇದಿಕೆಗೆ ಬನ್ನಿ, ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಸವಾಲು ಹಾಕಿದ್ದಾರೆ.

ನನ್ನ ಸೋಲಿಗೆ ನೀವೇ ಕಾರಣ: ಇಕ್ಬಾಲ್ ಅನ್ಸಾರಿ

ತಮ್ಮ ಸೋಲಿಗೆ ರಾಘವೇಂದ್ರ ಹಿಟ್ನಾಳ, ಅವರ ಕುಟುಂಬ, ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ್ ತಂಗಡಗಿ ಕಾರಣ ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಯಾರು ಕೆಲಸ ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದಿರುವ ಅವರು, ಹಿಂದೆ ಬಸವರಾಜ ರಾಯರೆಡ್ಡಿ ಅವರ ಬಗ್ಗೆ ಗೌರವವಿತ್ತು ಎಂದು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರಕ್ಕೆ ಬಾರದಂತೆ ರಾಯರೆಡ್ಡಿ ಮಾಡಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ. ತಾವು ರಾಯರೆಡ್ಡಿ ಅವರ ಕ್ಷೇತ್ರದಲ್ಲಿ ಮತ ಹಾಕಿಸಿದ್ದರೂ, ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಮತ ಹಾಕುವಂತೆ ಸಮಾಜದವರನ್ನು ಪ್ರೇರೇಪಿಸಲಾಗಿದೆ ಎಂದು ದೂರಿದ್ದಾರೆ.

‘ಅಧಿಕಾರಿಗಳ ವರ್ಗಾವಣೆಯಲ್ಲಿ ಕಮಿಷನ್ ಆರೋಪ’

ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಪಡೆದು ತಮ್ಮ ಮಾತನ್ನು ಅಧಿಕಾರಿಗಳು ಕೇಳದಂತೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಅನ್ಸಾರಿ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಎಸ್‌ಪಿಗೆ ಸೂಚಿಸಲಾಗಿತ್ತು ಎಂದು ಹೇಳಿರುವ ಅವರು, ‘ಎಸ್‌ಪಿ ಅವರು ಸರ್ಕಾರದ ಪ್ರತಿನಿಧಿಯೋ ಅಥವಾ ನಿಮ್ಮ ಪ್ರತಿನಿಧಿಯೋ’ ಎಂದು ತಂಗಡಗಿಯನ್ನು ಪ್ರಶ್ನಿಸಿದ್ದಾರೆ.

ಗಂಗಾವತಿ ಕ್ಷೇತ್ರದ ನಿಗಮ-ಮಂಡಳಿಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ನೇಮಕ ಮಾಡಲಾಗಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ಪದ್ಧತಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ತಂಗಡಗಿಗೆ ತಿರುಗೇಟು ನೀಡಿದ್ದಾರೆ.

‘58 ಸಾವಿರ ಮತ ಬಂದಿದ್ದು ಹೇಗೆ?’

ತಾವು ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಇದ್ದಿದ್ದರೆ 58 ಸಾವಿರ ಮತಗಳು ಹೇಗೆ ಬರುತ್ತಿದ್ದವು ಎಂದು ಪ್ರಶ್ನಿಸಿರುವ ಅನ್ಸಾರಿ, ತಮ್ಮ ಸೋಲಿನ ಬಗ್ಗೆ ಮಾತನಾಡಿದಾಗ ತಂಗಡಗಿಗೆ ಉರಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ಬಗ್ಗೆ ಮಾತನಾಡುವಾಗ ತಂಗಡಗಿ ಬೆವರಿಕೊಂಡು ಮಾತನಾಡಿದ್ದಾರೆ ಎಂದೂ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನನಗೆ 2 ಸೆಕೆಂಡ್ ಸಾಕು, ಮಸೀದಿಗೆ ಒಂದು ಪತ್ರ ಬರೆದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ

ಇದು ತಮ್ಮ ಮೊದಲ ಎಪಿಸೋಡ್ ಎಂದು ಹೇಳಿರುವ ಅನ್ಸಾರಿ, ತಂಗಡಗಿ ಸಣ್ಣ ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ನಡೆದ ವಿಚಾರಗಳ ಬಗ್ಗೆ ಮುಂದಿನ ಎಪಿಸೋಡ್‌ನಲ್ಲಿ ಮಾತನಾಡುವುದಾಗಿ ಎಚ್ಚರಿಸಿದ್ದಾರೆ. ಮುಂದಿನ ಎಲ್ಲ ವಿಚಾರಗಳನ್ನು ಜನರ ಮುಂದೆ ಬಹಿರಂಗಪಡಿಸುವುದಾಗಿ ಹೇಳಿರುವ ಅವರು, ‘ಮುಂದೆ ನಿಮಗೆ ತಕ್ಕ ಪಾಠ ಕಲಿಸುತ್ತೇನೆ’ ಎಂದು ಆಡಿಯೋ ಮೂಲಕ ಗುಡುಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಆ.9ರಿಂದ 15ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ – Kannada News | Aug 9 15: Weekly Love Horoscope for All Zodiacs – Your Relationship Predictions!

​ಆಗಸ್ಟ್​​ 09ರಿಂದ 15ರ ತನಕದ ಎರಡನೇ ವಾರದಲ್ಲಿ ಪ್ರೀತಿಯ ರೀತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪೂರ್ವಭಾವೀ ಆಲೋಚ‌ನೆಯಿಲ್ಲದೇ ಮುಂದೆಹೋಗಿ ದುಃಖಿಸಬೇಕಾಗುವುದು. ಪ್ರಯಾಣದಿಂದ ಪ್ರಯಾಸ ಸಾಧ್ಯತೆ ಇದೆ. ಎಲ್ಲರ ಪ್ರೇಮವೂ ಸಫಲವಾಗಲಿ.

​ಮೇಷ ರಾಶಿ :

ನಿಮ್ಮ ರಾಶ್ಯಧಿಪತಿ ಮಂಗಳ ಮಿಥುನದಲ್ಲಿದ್ದರೆ, ಶನಿ ಮೀನದಲ್ಲಿದ್ದಾನೆ. ಇದರಿಂದ ಪ್ರೇಮ ಸಂಬಂಧದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ.

​ವೃಷಭ ರಾಶಿ :

ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರು ಒಟ್ಟಾಗಿರುವುದರಿಂದ ನಿಮ್ಮ ಪ್ರೇಮ ಜೀವನ ಅತ್ಯಂತ ಸುಂದರವಾಗಿರಲಿದೆ. ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರಲಿವೆ. ಪ್ರೇಮಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ.

​ಮಿಥುನ ರಾಶಿ :

ಮಂಗಳ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಸ್ವಭಾವದಲ್ಲಿ ಕೊಂಚ ಉಗ್ರತೆ ಅಥವಾ ಚಂಚಲತೆ ಕಾಣಿಸಬಹುದು. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಸಂಶಯ ಮತ್ತು ಮನಸ್ತಾಪಗಳನ್ನು ದೂರ ಮಾಡುತ್ತದೆ.

​ಕರ್ಕಾಟಕ ರಾಶಿ :

ಗುರು, ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲಿ ಒಟ್ಟಾಗಿರುವುದರಿಂದ ಪ್ರೇಮ ಮತ್ತು ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಂಬಂಧದಲ್ಲಿ ಪರಸ್ಪರ ಬೆಂಬಲ ಸಿಗಲಿದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ಮನಸ್ಸಿನಲ್ಲಿ ಕಾರಣವಿಲ್ಲದೆ ಆತಂಕ ಅಥವಾ ಗೊಂದಲ ಮೂಡಬಹುದು. ಪ್ರೇಮ ಜೀವನದಲ್ಲಿ ಸ್ಪಷ್ಟತೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಪ್ರೀತಿಯಲ್ಲಿ ಆಪ್ತತೆ ಹೆಚ್ಚಾಗುತ್ತದೆ.

​ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಹಾಗೂ ಚಂದ್ರರ ಶುಭ ಸಂಯೋಜನೆ ಇದೆ. ಪ್ರೇಮಿಗಳಿಗೆ ಇದು ಅತ್ಯಂತ ರೋಮಾಂಚನಕಾರಿ ಸಮಯ. ನವ ಜೋಡಿಗಳ ನಡುವೆ ಮಧುರವಾದ ಕ್ಷಣಗಳು ಸೃಷ್ಟಿಯಾಗಲಿವೆ. ಹಳೆಯ ಮನಸ್ತಾಪಗಳು ಕಳೆದು ಪ್ರೀತಿ ಚಿಗುರೊಡೆಯುತ್ತದೆ.

​ತುಲಾ ರಾಶಿ :

ನಿಮ್ಮ ರಾಶ್ಯಧಿಪತಿ ಶುಕ್ರ ೧೨ನೇ ಮನೆಯಲ್ಲಿ ಚಂದ್ರನೊಂದಿಗೆ ಇರುವುದರಿಂದ ಪ್ರೇಮ ವಿಷಯದಲ್ಲಿ ಕೊಂಚ ಭಾವನಾತ್ಮಕ ಒತ್ತಡವಿರಬಹುದು. ಸಂಗಾತಿಯ ಆರೋಗ್ಯ ಅಥವಾ ಅವರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಬಹುದು. ಕಾಳಜಿ ವಹಿಸುವುದು ಒಳಿತು.

​ವೃಶ್ಚಿಕ ರಾಶಿ :

ಕರ್ಕಾಟಕದ ಗುರು ಹಾಗೂ ಕನ್ಯೆಯ ಶುಕ್ರನ ಶುಭ ದೃಷ್ಟಿಯಿಂದ ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರೀತಿಯಲ್ಲಿರುವವರಿಗೆ ಮನೆಯವರಿಂದ ಸಮ್ಮತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳಲು ಇದು ಅನುಕೂಲಕರ ಸಮಯ.

​ಧನು ರಾಶಿ :

ವೃತ್ತಿ ಜೀವನದ ಒತ್ತಡದಿಂದಾಗಿ ಪ್ರೇಮ ಜೀವನಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರಬಹುದು. ಆದಾಗ್ಯೂ, ಸಂಗಾತಿಯು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲವಾಗಿ ನಿಲ್ಲುತ್ತಾರೆ. ಸಣ್ಣ ಸಣ್ಣ ಗಿಫ್ಟ್‌ಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ :

ಪ್ರೇಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಅಥವಾ ದೂರದ ಪ್ರಯಾಣ ಬೆಳೆಸುವ ಯೋಗವಿದೆ. ದೂರದಲ್ಲಿದ್ದ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಹಾಗೂ ಸಂಬಂಧವನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶ ಸಿಗಲಿದೆ.

​ಕುಂಭ ರಾಶಿ :

ನಿಮ್ಮ ರಾಶಿಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಶುಕ್ರ-ಚಂದ್ರರ ಪ್ರಭಾವವಿರುವುದರಿಂದ ಸಂಬಂಧದಲ್ಲಿ ಅನಗತ್ಯ ಅನುಮಾನಗಳಿಗೆ ಆಸ್ಪದ ನೀಡಬೇಡಿ. ಮೂರನೇ ವ್ಯಕ್ತಿಯ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಒಳಿತಲ್ಲ. ಪಾರದರ್ಶಕತೆ ಕಾಯ್ದುಕೊಳ್ಳಿ.

​ಮೀನ ರಾಶಿ :

ಇದೇ ರಾಶಿಯಲ್ಲಿ ಶನಿ ಹಾಗೂ ಸಪ್ತಮ ರಾಶಿಯಲ್ಲಿ ಶುಕ್ರ, ಚಂದ್ರರ ಸಂಚಾರವಿರುವುದರಿಂದ ದಾಂಪತ್ಯ ಮತ್ತು ಪ್ರೇಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಬಂದರೂ ಪ್ರೀತಿಯ ಗಾಂಭೀರ್ಯ ಕಡಿಮೆಯಾಗುವುದಿಲ್ಲ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version