‘ಓಜಿ 2’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಪವನ್ ಕಲ್ಯಾಣ್; ಫ್ಯಾನ್ಸ್ ಕಾಯೋದು ಅನಿವಾರ್ಯ – Kannada News

ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ‘ಓಜಿ’ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಅತ್ಯಂತ ಸ್ಟೈಲಿಶ್ ಆಗಿ ಬೆಳ್ಳಿಪರದೆ ಮೇಲೆ ತೋರಿಸಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಿದ ನಿರ್ದೇಶಕ ಸುಜೀತ್. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಸಿನಿಮಾ, ಸ್ವತಃ ಪವನ್ ಕಲ್ಯಾಣ್ ಅವರಿಗೂ ಭಾರಿ ಖುಷಿ ಕೊಟ್ಟಿತ್ತು. ಒಂದು ವೇಳೆ ಒಳ್ಳೆಯ ಲೈನ್ ಸಿಕ್ಕರೆ ಸೀಕ್ವೆಲ್ ಮಾಡಲು ಸಿದ್ಧ ಎಂದು ಪವನ್ ಆಗಲೇ ಆಸಕ್ತಿ ತೋರಿಸಿದ್ದರು. ಅಂದಿನಿಂದಲೂ ಫ್ಯಾನ್ಸ್ ‘ಓಜಿ 2’ ಅಪ್‌ಡೇಟ್‌ಗಾಗಿ ಕಾದು ಕುಳಿತಿದ್ದಾರೆ.

ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದರೂ, ಸಿನಿಮಾ ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳಿದ್ದರು. ಇದಕ್ಕೆ ಪೂರಕವೆಂಬಂತೆ ಪವನ್ ಕಲ್ಯಾಣ್ ಅವರ ಸ್ವಂತ ಪ್ರೊಡಕ್ಷನ್ ಹೌಸ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಬಿಗ್ ಹಿಂಟ್ ನೀಡಿದೆ. ನಿರ್ದೇಶಕ ಸುಜೀತ್ ಸದ್ಯ ವಿದೇಶದಲ್ಲಿದ್ದು, ಅವರು ಮರಳಿದ ತಕ್ಷಣ ಪವನ್ ಕಲ್ಯಾಣ್ ಅವರೊಂದಿಗೆ ‘ಓಜಿ 2’ ಚಿತ್ರದ ಶೂಟಿಂಗ್ ಟೈಮ್‌ಲೈನ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರೊಡಕ್ಷನ್ ಹೌಸ್ ತಿಳಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರಂತೂ ಸಿನಿಮಾ ಈ ವರ್ಷವೇ ಶುರುವಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ಆದರೆ ಕಾಯೋದು ಗ್ಯಾರಂಟಿ; ಕಾರಣಗಳೇನು?

ಸಿನಿಮಾ ಅನೌನ್ಸ್ ಆಗಿದ್ದರೂ, ಸದ್ಯಕ್ಕೆ ಶೂಟಿಂಗ್ ಆರಂಭವಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

ರಾಜಕೀಯ ಜವಾಬ್ದಾರಿ: ಪವನ್ ಕಲ್ಯಾಣ್ ಅವರಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ರಾಜ್ಯದ ಕಲ್ಯಾಣ ಮತ್ತು ರಾಜಕೀಯ ಕೆಲಸಗಳೇ ಮೊದಲ ಆದ್ಯತೆ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಪೂರ್ಣ ಪ್ರಮಾಣದಲ್ಲಿ ಶೂಟಿಂಗ್‌ಗೆ ಡೇಟ್ಸ್ ಕೊಡುವುದು ಸದ್ಯಕ್ಕೆ ಅಸಾಧ್ಯ.

ಸುಜೀತ್ ಅವರ ಮುಂದಿನ ಪ್ರಾಜೆಕ್ಟ್: ನಿರ್ದೇಶಕ ಸುಜೀತ್ ಕೇವಲ ಪವನ್ ಕಲ್ಯಾಣ್ ಅವರಿಗಾಗಿ ಕಾಯುತ್ತಾ ಕೂತಿಲ್ಲ. ಅವರು ಈಗಾಗಲೇ ನ್ಯಾಚುರಲ್ ಸ್ಟಾರ್ ನಾನಿ ಜೊತೆ ‘ಬ್ಲಡಿ ರೋಮಿಯೋ’ ಎಂಬ ದೊಡ್ಡ ಬಜೆಟ್ ಚಿತ್ರವನ್ನು ಅಧಿಕೃತವಾಗಿ ಲೈನ್-ಅಪ್ ಮಾಡಿಕೊಂಡಿದ್ದಾರೆ.

ಮತ್ತೊಂದು ಕಮಿಟ್‌ಮೆಂಟ್: ಇನ್ನೊಂದೆಡೆ, ಪವನ್ ಕಲ್ಯಾಣ್ ಅವರು ಮುಂದಿನ ದಿನಗಳಲ್ಲಿ ನಿರ್ದೇಶಕ ಸುರೇಂದರ್ ರೆಡ್ಡಿ ಜೊತೆಗೂ ಸಿನಿಮಾ ಮಾಡುವುದಾಗಿ ಮಾತು ಕೊಟ್ಟಿದ್ದಾರೆ.

ಸುಜೀತ್ ವಿದೇಶದಿಂದ ಬಂದ ನಂತರ ಇಬ್ಬರೂ ಕೂತು ಸ್ಕ್ರಿಪ್ಟ್ ಫೈನಲ್ ಮಾಡಬೇಕಿದೆ. ಪವನ್ ಕಲ್ಯಾಣ್ ಬಿಡುವಿನ ವೇಳೆಯಲ್ಲಿ ಶೂಟಿಂಗ್ ಮಾಡಲು ಒಪ್ಪಿಕೊಂಡರೂ, ಅವರ ಲಭ್ಯತೆಯ ಆಧಾರದ ಮೇಲೆ ಚಿತ್ರೀಕರಣ ತಡವಾಗುತ್ತಾ ಸಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?

‘OG 2’ ಸಿನಿಮಾ ತಾಂತ್ರಿಕವಾಗಿ ಕನ್ಫರ್ಮ್ ಆಗಿದೆ ಮತ್ತು ಕೊಟ್ಟ ಮಾತಿನಂತೆ ಸಿನಿಮಾ ಮೂಡಿಬರಲಿದೆ ಎಂದು ಪ್ರೊಡಕ್ಷನ್ ಹೌಸ್ ಭರವಸೆ ನೀಡಿದೆ. ಆದರೆ ಬಿಡುಗಡೆ ಯಾವಾಗ ಎಂಬುದಕ್ಕೆ ಸದ್ಯಕ್ಕೆ ಗ್ಯಾರಂಟಿ ಇಲ್ಲ. ಹಾಗಾಗಿ, ಅಲ್ಟಿಮೇಟ್ ಗ್ಯಾಂಗ್‌ಸ್ಟರ್ ಬ್ಯಾಂಗ್ ನೋಡಲು ಫ್ಯಾನ್ಸ್ ಇನ್ನು ದೀರ್ಘಕಾಲ ಕಾಯಲೇಬೇಕಿದೆ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಿ ವೆಡ್ಡಿಂಗ್ ಫೋಟೊಶೂಟ್ ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಸಾವು – Kannada News

ಜೈಪುರ, ಜೂನ್ 12: ಪ್ರಿ ವೆಡ್ಡಿಂಗ್ ಫೋಟೊಶೂಟ್(Photoshoot) ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚಿತ್ತೋರ್‌ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ತಮ್ಮ ವಿವಾಹ ಪೂರ್ವ ಫೋಟೋ ಶೂಟ್‌ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಗೋರಿ ಧಾಮ್‌ಗೆ ಭೇಟಿ ನೀಡಿದ್ದರು.

ಬೆಟ್ಟಗಳ ನಡುವೆ ದೇವಾಲಯದ ಆವರಣದ ಬಳಿ ಚಿಕ್ಕಪ್ಪ ವಿಶ್ರಮಿಸುತ್ತಿದ್ದರೆ, ಈ ಜೋಡಿ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಬೆಟ್ಟದ ಕೆಳಗಿನ ಸರೋವರದ ತೀರಕ್ಕೆ ತೆರಳಿದ್ದರು. ಸರೋವರದ ಸೌಂದರ್ಯಕ್ಕೆ ಮನಸೋತ ಅರ್ಜುನ್, ಫೋಟೋ ಶೂಟ್ ನಡುವೆಯೇ ಸ್ನಾನ ಮಾಡಲು ನೀರಿನ ಹತ್ತಿರ ತೆರಳಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಕಾಲು ಜಾರಿ ಅವರು ಸರೋವರದ ಆಳವಾದ ಕಂದಕದಂತಹ ನೀರಿಗೆ ಬಿದ್ದಿದ್ದಾರೆ. ಕಣ್ಣೆದುರೇ ತನ್ನ ಭಾವಿ ಪತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಆ ಯುವತಿ ಆಘಾತಕ್ಕೊಳಗಾಗಿ, ಜೋರಾಗಿ ಕೂಗುತ್ತಾ ನೆರವಿಗಾಗಿ ಯತ್ನಿಸಿದ್ದಾರೆ. ಆಕೆಯ ಆಕ್ರಂದನ ಕೇಳಿ ಧಾವಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿ ಶೋಧ ಕಾರ್ಯ ಆರಂಭಿಸಿದರೂ, ಸರೋವರದ ಅತಿ ಆಳ ಮತ್ತು ಕತ್ತಲೆಯ ಕಾರಣದಿಂದಾಗಿ ಮಂಗಳವಾರದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಉದಯಪುರದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ವಿಶೇಷ ತಜ್ಞರ ತಂಡವನ್ನು ಕರೆಸಲಾಯಿತು.

ಮತ್ತಷ್ಟು ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಬುಧವಾರ ಮುಂಜಾನೆ, ಎಸ್​ಡಿಆರ್​ಎಫ್​ ಮತ್ತು ರಾಜ್‌ಸಮಂದ್ ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಬೆಟ್ಟದ ಕಡಿದಾದ ಮತ್ತು ದುರ್ಗಮ ಹಾದಿಯಾಗಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು. ಕೊನೆಗೆ ಹಲವಾರು ಗಂಟೆಗಳ ಕಠಿಣ ಶ್ರಮದ ನಂತರ ಅರ್ಜುನ್ ಅವರ ದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

ವಿಡಿಯೋ

ಈ ಕಷ್ಟದ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ಪಡೆಗಳು ತೋರಿದ ಮಾನವೀಯತೆ ಶ್ಲಾಘನೀಯ. ಕಣಿವೆಯಂತಹ ಸರೋವರದ ಆಳದಿಂದ ಕಡಿದಾದ ಬೆಟ್ಟದ ತುದಿಯವರೆಗೆ ಅರ್ಜುನ್ ಅವರ ಮೃತದೇಹವನ್ನು ಹೊತ್ತು ತರಲು ಗ್ರಾಮಸ್ಥರು ಪೊಲೀಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಸದ್ಯ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಇಡೀ ಕುಟುಂಬ ಆಘಾತದಲ್ಲಿ ಮುಳುಗಿದೆ.

ಫೋಟೋ ಶೂಟ್‌ಗಳ ನೆಪದಲ್ಲಿ ನಿಸರ್ಗದ ಆಕರ್ಷಣೆಗೆ ಒಳಗಾಗುವಾಗ ಸುರಕ್ಷತೆಯನ್ನು ಮರೆಯಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕನ ಶವಯಾತ್ರೆ ನೋಡುವಂತಾದದ್ದು ವಿಧಿಯ ಕ್ರೂರ ವೈಪರೀತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೆಲೆಬ್ರಿಟಿಗಳ ಹೆಸರಲ್ಲಿ ಸೃಷ್ಟಿಯಾಗುತ್ತಿದೆ ನಕಲಿ ಪೋಸ್ಟ್​; ಶೇರ್ ಮಾಡೋ ಮುನ್ನ ಎಚ್ಚರ – Kannada News

ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಎಷ್ಟು ಸಹಾಯಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ‘ಫೇಕ್’ ಹಾಗೂ ‘ಎಡಿಟೆಡ್’ ಸ್ಟೋರಿಗಳನ್ನು ಹರಿಬಿಡುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ‘ಆ ಸೆಲೆಬ್ರಿಟಿ ಹಾಗೆ ಅಂದರು, ಈ ಸ್ಟಾರ್ ಹೀಗೆ ಹೇಳಿದರು’ ಎಂದರು ಎಂಬ ಇನ್​​ಸ್ಟಾ ಸ್ಟೋರಿಗಳನ್ನು ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿವೆ.

ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನಿಜವಾದ ಸ್ಟೋರಿ ಯಾವುದು ಮತ್ತು ಎಡಿಟ್ ಮಾಡಿದ ಸ್ಟೋರಿ ಯಾವುದು ಎಂದು ಗುರುತಿಸುವುದೇ ನೆಟ್ಟಿಗರಿಗೆ ದೊಡ್ಡ ಸವಾಲಾಗಿದೆ. ಫೋಟೋಶಾಪ್ ಹಾಗೂ ಎಐ ಟೂಲ್‌ಗಳನ್ನು ಬಳಸಿ ಸೆಲೆಬ್ರಿಟಿಗಳ ಅಧಿಕೃತ ಖಾತೆಗಳಿಂದಲೇ ಪೋಸ್ಟ್ ಮಾಡಿದ್ದಾರೇನೋ ಎಂಬಂತೆ ಇನ್‌ಸ್ಟಾ ಸ್ಟೋರಿಗಳನ್ನು ಸೃಷ್ಟಿಸಲಾಗುತ್ತಿದೆ. ದುರದೃಷ್ಟವಶಾತ್, ಇದರ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸದ ಲಕ್ಷಾಂತರ ನೆಟ್ಟಿಗರು ಇದನ್ನು ನಿಜವೆಂದೇ ನಂಬಿ, ಶೇರ್ ಮಾಡುತ್ತಿದ್ದಾರೆ.

ಪರಿಣಾಮವೇನು?

ಇಂತಹ ನಕಲಿ ಪೋಸ್ಟ್‌ಗಳು ಕೇವಲ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ, ಬದಲಿಗೆ ವರ್ಷಗಳ ಕಾಲ ಕಷ್ಟಪಟ್ಟು ದುಡಿದ ಸೆಲೆಬ್ರಿಟಿಗಳ ಗೌರವ ಮತ್ತು ಘನತೆಗೆ ಧಕ್ಕೆ ತರುತ್ತಿವೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ಅನಗತ್ಯ ವಿವಾದ, ದ್ವೇಷ ಹಾಗೂ ಗೊಂದಲಗಳಿಗೆ ಕಾರಣವಾಗುತ್ತಿವೆ. ಸೆಲೆಬ್ರಿಟಿ ವಾರ್​​ಗಳು ಕೂಡ ಹೆಚ್ಚುತ್ತಿವೆ.

ನುಸ್ರತ್ ಫೇಕ್ ಇನ್​​ಸ್ಟಾ ಸ್ಟೇಟಸ್

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

ಈ ಗಂಭೀರ ಸಮಸ್ಯೆಗೆ ಬ್ರೇಕ್ ಹಾಕಲು ಕೇವಲ ಸೆಲೆಬ್ರಿಟಿಗಳ ಸ್ಪಷ್ಟನೆ ಮಾತ್ರ ಸಾಲದು. ಸಾಮಾಜಿಕ ಜಾಲತಾಣದ ಬಳಕೆದಾರರಾದ ತಾವು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಯಾವುದೇ ಸೆನ್ಸೇಷನಲ್ ಸ್ಟೋರಿ ಕಂಡ ತಕ್ಷಣ ಅದನ್ನು ನಂಬುವ ಮುನ್ನ, ಆಯಾ ಸೆಲೆಬ್ರಿಟಿಗಳ ಅಧಿಕೃತ ಪ್ರೊಫೈಲ್ ಪರಿಶೀಲಿಸುವುದು ಉತ್ತಮ. ಸೈಬರ್ ಕ್ರೈಂ ವಿಭಾಗ ಮತ್ತು ಇನ್‌ಸ್ಟಾಗ್ರಾಮ್ ಸಂಸ್ಥೆಯು ಇಂತಹ ಫೇಕ್ ಕಂಟೆಂಟ್ ಕ್ರಿಯೇಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಇತ್ತೀಚೆಗೆ ನಡೆದಿತ್ತು ಘಟನೆ

ನುಸ್ರತ್ ಬರೂಚಾ ಅವರು ಇತ್ತೀಚೆಗೆ ಅನಗತ್ಯ ವಿವಾದ ಒಂದರಲ್ಲಿ ಸಿಲುಕಿದ್ದರು. ಆರ್​​ಸಿಬಿ ಗೆದ್ದ ವೇಳೆ ಅವರು ಮಾಡಿದ್ದ ಪೋಸ್ಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಗೆಲುವಿನ ದೃಶ್ಯವನ್ನು ನುಸ್ರತ್ ಪೋಸ್ಟ್ ಮಾಡಿದ್ದರು. ಆಗ ಹಿನ್ನೆಲೆಯಲ್ಲಿ ಶ್ವಾನ ವಿಚಿತ್ರವಾಗಿ ಕೂಗುತ್ತಿತ್ತು. ಈ ಶಬ್ದವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು. ಆ ಬಳಿಕ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂಬ ರೀತಿಯಲ್ಲಿ ನಂಬಿಸುವ ಇನ್​​ಸ್ಟಾ ಸ್ಟೋರಿಯೊಂದು ವೈರಲ್ ಆಗಿತ್ತು. ಇದನ್ನು ಅವರು ಫೇಕ್ ಎಂದು ಈಗ ನಾನಾ ಪಾಟೇಕರ್ ಹೆಸರಲ್ಲಿ ಸ್ಟೋರಿಯೊಂದು ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:30 am, Fri, 12 June 26

Source link

Bengaluru Air Quality: ಇಂದು ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ: ಬೆಂಗಳೂರಿನ AQI ಮಟ್ಟದಲ್ಲಿ ಸುಧಾರಣೆ!! – Kannada News

ಬೆಂಗಳೂರು, ಜೂನ್ 12: ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಅತ್ಯಂತ ಸಮಾಧಾನಕರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವ ಮತ್ತು ಶುದ್ಧ ಗಾಳಿಯ ಕಾರಣದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಮುಖ್ಯಾಂಶಗಳು

  • ಮುಂಗಾರು ಮಳೆಯ ಪ್ರಭಾವದಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದೆ.
  • ಸಿಲಿಕಾನ್ ಸಿಟಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 23-29 ದಾಖಲಾಗಿದೆ.
  • ಮಂಡ್ಯ ಮತ್ತು ಮೈಸೂರು ನಗರಗಳಲ್ಲಿ ಅತ್ಯಂತ ಶುದ್ಧ ಗಾಳಿ ವರದಿಯಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಉತ್ತಮ ವಿಭಾಗದಲ್ಲಿದೆ. ನಗರದ ಸರಾಸರಿ AQI ಪ್ರಮಾಣವು 23 ರಿಂದ 29ರ ಆಸುಪಾಸಿನಲ್ಲಿ ದಾಖಲಾಗಿದೆ. PM2.5 ಕಣಗಳ ಪ್ರಮಾಣ 17 µg/m³ ಮತ್ತು PM10 ಕಣಗಳ ಪ್ರಮಾಣ 21 µg/m³ ನಷ್ಟಿದ್ದು, ಇವು ಸುರಕ್ಷಿತ ಮಿತಿಗಿಂತ ತುಂಬಾ ಒಳಗಿವೆ.

ಬಿಟಿಎಂ ಲೇಔಟ್, ಜಯನಗರ ಮತ್ತು ಸಿಲ್ಕ್ ಬೋರ್ಡ್‌ಗಳಂತಹ ಸದಾ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲೂ ಇಂದು ಮಳೆಯ ಕಾರಣದಿಂದಾಗಿ AQI ಮಟ್ಟವು 55 ಕ್ಕಿಂತ ಕಡಿಮೆ (ಸಾಧಾರಣ) ದಾಖಲಾಗಿದೆ. ಇದು ನಗರದ ಜನರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲದೆ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಇಂದಿನ ವಾಯು ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿದೆ. ಇಡೀ ರಾಜ್ಯದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿಯನ್ನು ಹೊಂದಿರುವ ನಗರಗಳಲ್ಲಿ ಮಂಡ್ಯ ಮುಂಚೂಣಿಯಲ್ಲಿದ್ದು, ಇಲ್ಲಿನ AQI ಕೇವಲ 15ರಷ್ಟು ದಾಖಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಕರಾವಳಿಯ ಮಂಗಳೂರಿನಲ್ಲಿ ಇಂದಿನ AQI 25 ರಿಂದ 30ರ ಆಸುಪಾಸಿನಲ್ಲಿದ್ದು, ಸಂಪೂರ್ಣ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಹೊಂದಿದೆ. ಉತ್ತರ ಕರ್ನಾಟಕದ ಈ ಪ್ರಮುಖ ವಾಣಿಜ್ಯ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು 35 ರಿಂದ 45 ರಷ್ಟಿದ್ದು, ಉತ್ತಮ ಶ್ರೇಣಿಯಲ್ಲೇ ಮುಂದುವರಿದಿದೆ.

ಒಟ್ಟಾರೆಯಾಗಿ, ಜೂನ್ ತಿಂಗಳ ಈ ಮುಂಗಾರು ಅವಧಿಯಲ್ಲಿ ಸುರಿಯುತ್ತಿರುವ ಸತತ ಮಳೆ ಮತ್ತು ಬೀಸುತ್ತಿರುವ ಬಲವಾದ ಗಾಳಿಯು ಕರ್ನಾಟಕದ ನಗರಗಳಲ್ಲಿದ್ದ ಧೂಳು ಮತ್ತು ಹಾನಿಕಾರಕ ಕಣಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ. ಶ್ವಾಸಕೋಶದ ತೊಂದರೆ ಇರುವವರು ಹಾಗೂ ಮಕ್ಕಳು ಯಾವುದೇ ಆತಂಕವಿಲ್ಲದೆ ಇಂದಿನ ಹಿತಕರವಾದ ವಾತಾವರಣವನ್ನು ಆನಂದಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಲ್ಫಾ’ ಟೀಸರ್‌ಗೆ ಆರ್‌ಆರ್‌ಆರ್‌ ನಿರ್ದೇಶಕ ರಾಜಮೌಳಿ ಫಿದಾ; ಆಲಿಯಾ ಆ್ಯಕ್ಷನ್ ಅವತಾರಕ್ಕೆ ಭಾರಿ ಮೆಚ್ಚುಗೆ – Kannada News

ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ, ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರ ‘ಆಲ್ಫಾ’ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ ಟೀಸರ್ ಭಾರಿ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ರಗಡ್ ಲುಕ್‌ಗೆ ಸಿನಿರಸಿಕರು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಕೂಡ ಮನಸೋತಿದ್ದಾರೆ. ಈ ಸಾಲಿನಲ್ಲಿ ಈಗ ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸೇರಿಕೊಂಡಿದ್ದು, ಆಲ್ಫಾ ಟೀಸರ್ ನೋಡಿ ಮೆಚ್ಚುಗೆಯ ಸುರಿಮಳೆ ಗರೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಲ್ಫಾ ಟೀಸರ್ ಹಂಚಿಕೊಂಡಿರುವ ರಾಜಮೌಳಿ, ‘ಆಲಿಯಾ ಯಾವಾಗಲೂ ಅದ್ಭುತವಾಗಿ ನಟಿಸುತ್ತಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಆಕೆಯ ನಟನೆ ಅತ್ಯುತ್ತಮ ಮತ್ತು ಭೀಕರವಾಗಿದೆ. #AlphaTeaser ಪ್ರಾಮಿಸಿಂಗ್ ಆಗಿ ಕಾಣಿಸುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ.

ರಾಜಮೌಳಿ ಮಾತ್ರವಲ್ಲದೆ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ದುಲ್ಕರ್ ಸಲ್ಮಾನ್ ಅವರಂತಹ ಪ್ರಮುಖ ಸ್ಟಾರ್‌ಗಳು ಆಲಿಯಾ ಭಟ್ ಅವರ ಈ ಹೊಸ ಮಾಸ್ ಅವತಾರವನ್ನು ಕೊಂಡಾಡಿದ್ದಾರೆ.

ಆರ್‌ಆರ್‌ಆರ್‌ ಒಡನಾಟ ನೆನೆದ ಅಭಿಮಾನಿಗಳು:

ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಆಲಿಯಾ ಭಟ್ ನಡುವೆ ಉತ್ತಮ ವೃತ್ತಿಪರ ಒಡನಾಟವಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಬ್ಲಾಕ್‌ಬಸ್ಟರ್ ಚಿತ್ರ ‘ಆರ್‌ಆರ್‌ಆರ್‌’ (RRR) ನಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಆಲಿಯಾ ಭಟ್ (ಸೀತಾ ಪಾತ್ರದಲ್ಲಿ) ನಟಿಸಿದ್ದರು. ಈ ಸಿನಿಮಾದ ಮೂಲಕ ಇಬ್ಬರ ನಡುವೆ ಬೆಳೆದ ಆತ್ಮೀಯ ಬಾಂಧವ್ಯ ಈಗಲೂ ಮುಂದುವರಿದಿದ್ದು, ಆಲಿಯಾ ಅವರ ಹೊಸ ಸಾಹಸಮಯ ಹೆಜ್ಜೆಗೆ ರಾಜಮೌಳಿ ಬೆನ್ನುತಟ್ಟಿದ್ದಾರೆ.

ತಂದೆ-ಮಗಳ ಹೈ-ಸ್ಟೇಕ್ ಮಿಷನ್ ಕಥೆ:

ಶಿವ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಶಾರ್ವರಿ ವಾಗ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಾರತದ ಮುಂದಿನ ಪೀಳಿಗೆಯ ಎಲೈಟ್ ಸೈನಿಕರನ್ನು ಸಿದ್ಧಪಡಿಸುವ ‘ಆಲ್ಫಾ’ ಎಂಬ ರಹಸ್ಯ ತರಬೇತಿ ಕಾರ್ಯಕ್ರಮದ ಸುತ್ತ ಚಿತ್ರದ ಕಥೆ ಸಾಗಲಿದ್ದು, ಬಾಬಿ ಡಿಯೋಲ್ ಇಲ್ಲಿ ಆಲಿಯಾ ಅವರ ತಂದೆಯಾಗಿ (ಬಾಬಾ), ಕಠಿಣ ಹಾಗೂ ಅಪಾಯಕಾರಿ ಮಿಷನ್ ನೀಡುವ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ

ಇನ್ನು ಒಂದೆಡೆ ಸೆಲೆಬ್ರಿಟಿಗಳು ಟೀಸರ್‌ ಅನ್ನು ಮುಕ್ತಕಂಠದಿಂದ ಹೊಗಳುತ್ತಿದ್ದರೆ, ಮತ್ತೊಂದೆಡೆ ಸೋಶಿಯಲ್ ಮೀಡಿಯಾದ ಕೆಲವು ನೆಟ್ಟಿಗರು ಇತ್ತೀಚೆಗೆ ಬಿಡುಗಡೆಯಾಗಿದ್ದ ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಟೀಸರ್ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಟ್ರೋಲ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಬಿಡುಗಡೆ ದಿನಾಂಕವನ್ನು ಬದಲಾಯಿಸಿಕೊಂಡಿದ್ದ ‘ಆಲ್ಫಾ’ ಅಂತಿಮವಾಗಿ 2026ರ ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೋಕಾರ್ಪಣೆಗೆ ಸಜ್ಜಾಗ್ತಿದೆ ದೇಶದ ಅತಿ ಎತ್ತರದ ಜಯದೇವ ಮೆಟ್ರೋ ಸ್ಟೇಷನ್: 155 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ – Kannada News

ಪಂಚಸ್ತರದ ಜಯದೇವ ಮೆಟ್ರೋ ನಿಲ್ದಾಣImage Credit source: tv9

ಬೆಂಗಳೂರು, ಜೂನ್ 12: ಬೆಂಗಳೂರಿನ ವಾಹನ ಸವಾರರು ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದಲ್ಲೇ ಅತಿ ಎತ್ತರದ ಹಾಗೂ ವಿಶಿಷ್ಟ ತಂತ್ರಜ್ಞಾನದ ಇಂಟರ್‌ಚೇಂಜ್ ನಿಲ್ದಾಣ ಎಂದೇ ಖ್ಯಾತಿ ಪಡೆದಿರುವ ಜಯದೇವ ಆಸ್ಪತ್ರೆ ಮೆಟ್ರೋ ಸ್ಟೇಷನ್ (Jayadeva Metro Station) ಇದೇ ಆಗಸ್ಟ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಒಟ್ಟು ಐದು ಸ್ತರಗಳಲ್ಲಿ (5-Tier) ನಿರ್ಮಾಣವಾಗಿರುವ ದೇಶದ ಮೊದಲ ಮೆಟ್ರೋ ನಿಲ್ದಾಣ ಇದಾಗಿದ್ದು, ಇದರ ಆರಂಭದಿಂದ ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳ ದಶಕದ ಟ್ರಾಫಿಕ್ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆಯಲಿದೆ.

ಮುಖ್ಯಾಂಶಗಳು

  • ಆಗಸ್ಟ್‌ನಲ್ಲಿ ದೇಶದ ಅತಿ ಎತ್ತರದ ಸ್ಟೇಷನ್ ಓಪನ್.
  • ₹155 ಕೋಟಿ ವೆಚ್ಚದಲ್ಲಿ ಪಂಚಸ್ತರದ ನಿಲ್ದಾಣ ನಿರ್ಮಾಣ.
  • ಗುಲಾಬಿ-ಹಳದಿ ಮಾರ್ಗಗಳ ಇಂಟರ್‌ಚೇಂಜ್ ಕನೆಕ್ಷನ್.

ದೇಶದಲ್ಲೇ ಮೊದಲ ಬಾರಿಗೆ 5 ಸ್ತರದ ಅದ್ಭುತ ಮೆಟ್ರೋ ಸ್ಟೇಷನ್ ನಿರ್ಮಾಣ

ಸುಮಾರು 155 ಕೋಟಿ ರೂ. ಭಾರಿ ವೆಚ್ಚದಲ್ಲಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ಸ್ಟೇಷನ್‌ನ ವಿನ್ಯಾಸವೇ ಅತ್ಯಂತ ರೋಚಕವಾಗಿದ್ದು, ಇಂಜಿನಿಯರಿಂಗ್ ಅದ್ಭುತ ಎನ್ನಲಾಗಿದೆ. ನೆಲದ ಕೆಳಗೆ ಅಂಡರ್‌ಪಾಸ್ (Underpass), ಅದರ ಮೇಲೆ ಸಾಮಾನ್ಯ ರಸ್ತೆ, ಮೂರನೇ ಸ್ತರದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ (Double Decker Flyover), ನಾಲ್ಕನೇ ಸ್ತರದಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಹಾಗೂ ಎಲ್ಲದಕ್ಕಿಂತ ಮೇಲಿನ ಅಂದರೆ ಐದನೇ ಸ್ತರದಲ್ಲಿ ಪಿಂಕ್ ಲೈನ್ (Pink Line) ಹಾದು ಹೋಗುತ್ತದೆ. ಸದ್ಯ ಆಗಸ್ಟ್‌ನಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಆರು ಮೆಟ್ರೋ ನಿಲ್ದಾಣಗಳ ಮಾರ್ಗವನ್ನು ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಭರದಿಂದ ಸಿದ್ಧತೆ ನಡೆಸುತ್ತಿದೆ.

ಪ್ರಯಾಣಿಕರಿಗೆ ಸುಲಭ ಮಾರ್ಗ ಬದಲಾವಣೆ ಸೌಲಭ್ಯ

ಕಳೆದ ವರ್ಷವೇ ಆ‌ರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಉದ್ಘಾಟನೆಯಾಗಿದ್ದರೂ, ಜಯದೇವ ಮೆಟ್ರೋ ನಿಲ್ದಾಣ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಆಗಸ್ಟ್‌ನಲ್ಲಿ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ-ತಾವರೆಕೆರೆ ನಡುವೆ ಮೆಟ್ರೋ ಸಂಚಾರ ಆರಂಭವಾದರೆ, ಪ್ರಯಾಣಿಕರು ಸುಲಭವಾಗಿ ಮಾರ್ಗ ಬದಲಾಯಿಸಬಹುದು. ಬನ್ನೇರುಘಟ್ಟ ರಸ್ತೆಯಿಂದ ಬರುವವರು ಜಯದೇವ ನಿಲ್ದಾಣದಲ್ಲಿ ಇಳಿದು ಹಳದಿ ಮಾರ್ಗದ ಮೂಲಕ ಆ‌ರ್‌.ವಿ. ರಸ್ತೆ ತಲುಪಬಹುದು. ಅಲ್ಲಿಂದ ನೇರವಾಗಿ ಮೆಜೆಸ್ಟಿಕ್ ಹಾಗೂ ಹಸಿರು ಮಾರ್ಗದ (Green Line) ಸಿಲ್ಕ್ ಇನ್ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಸುತ್ತಮುತ್ತಲಿನ ಜನತೆಗೆ ನಿಟ್ಟುಸಿರು

ಈ ನೂತನ ಇಂಟರ್‌ಚೇಂಜ್ ನಿಲ್ದಾಣದ ಕಾರ್ಯಾಚರಣೆಯಿಂದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (IIMB), ಜೆ.ಪಿ. ನಗರ ಹಾಗೂ ತಾವರೆಕೆರೆ ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ಆನೆ ಬಲ ಬಂದಂತಾಗಲಿದೆ. ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡುತ್ತಿದ್ದಂತೆ ಪ್ರಯಾಣಿಕರು ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್‌ಗಳಿಗೆ ಸುಲಭವಾಗಿ ಕನೆಕ್ಟ್ ಮಾಡಿಕೊಂಡು ನಗರದ ಯಾವುದೇ ಮೂಲೆಗಾದರೂ ನಿರಾಯಾಸವಾಗಿ ಸಂಚರಿಸಬಹುದಾಗಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್: ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ಸುಸಜ್ಜಿತ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ – Kannada News

ಗಾಂಧಿನಗರ, ಜೂನ್ 12: ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ(Air India) AI-171 ವಿಮಾನ ದುರಂತದ ಕಹಿ ನೆನಪಿಗೆ ಈಗ ಒಂದು ವರ್ಷ ತುಂಬಿದೆ. ಈ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಂತ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದೆ. 260 ಮಂದಿ ಪ್ರಾಣ ಕಳೆದುಕೊಂಡ ದುರಂತದ ಆ ಜಾಗವನ್ನು ಈಗ ಭವಿಷ್ಯದ ವೈದ್ಯರನ್ನು ರೂಪಿಸುವ, ಜೀವ ಉಳಿಸುವ ಪವಿತ್ರ ಶೈಕ್ಷಣಿಕ ಕೇಂದ್ರವನ್ನಾಗಿ ಮರು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.

ಬಿಜೆ ವೈದ್ಯಕೀಯ ಕಾಲೇಜಿನ ಹಳೆಯ ಹಾಸ್ಟೆಲ್ ಸಂಕೀರ್ಣಕ್ಕೆ ವಿಮಾನ ಡಿಕ್ಕಿ ಹೊಡೆದಿದ್ದ ಸ್ಥಳದಲ್ಲಿ, ಹಳೆಯ ಶಿಥಿಲಗೊಂಡ ರಚನೆಗಳನ್ನು ಕೆಡವಿ ಹೊಸ ಆಧುನಿಕ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಜತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಭೆಯ ವಿವರಗಳನ್ನು ಹಂಚಿಕೊಂಡ ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ, ಆ ಸ್ಥಳದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಪವಿತ್ರ ಕೆಲಸವಾಗಿದೆ. ಭವಿಷ್ಯದಲ್ಲಿ ಇಲ್ಲಿ ಸಾವಿರಾರು ವೈದ್ಯರು ವಿದ್ಯಾಭ್ಯಾಸ ಮಾಡಿ ರೋಗಿಗಳ ಸೇವೆ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಇದಕ್ಕಿಂತ ಉತ್ತಮ ಗೌರವ ಬೇರೊಂದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ:
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

ಏಳು ಹೊಸ ಬ್ಲಾಕ್‌ಗಳ ಆಧುನಿಕ ಸಂಕೀರ್ಣ
ಮೇ 27 ರಂದು ಔಪಚಾರಿಕವಾಗಿ ಘೋಷಿಸಲಾದ ಈ ಪುನರಾಭಿವೃದ್ಧಿ ಯೋಜನೆಯಡಿ, ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು.

ವಸತಿ ಸೌಕರ್ಯ: ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಏಳು ಹೊಸ ಕಟ್ಟಡಗಳ (Blocks) ಹಾಸ್ಟೆಲ್ ಸಂಕೀರ್ಣ.

ಇತರ ಸೌಲಭ್ಯಗಳು: ವಿಶಾಲವಾದ ಡೈನಿಂಗ್ ಮೆಸ್, ಆಧುನಿಕ ಜಿಮ್ನಾಷಿಯಂ, ಮನರಂಜನಾ ಪ್ರದೇಶಗಳು ಮತ್ತು ಆಕರ್ಷಕ ರಸ್ತೆ ಹಾಗೂ ತೋಟದ ವಿನ್ಯಾಸ. ಈ ಬೃಹತ್ ಯೋಜನೆಗೆ ಏರ್ ಇಂಡಿಯಾ ಆರ್ಥಿಕ ನೆರವು ನೀಡುತ್ತಿದ್ದು, ಗುಜರಾತ್ ಸರ್ಕಾರವು ಹೆಚ್ಚುವರಿ ಹಣವನ್ನು ಒದಗಿಸುತ್ತಿದೆ.

ವಿಧಿವಿಜ್ಞಾನ ಮತ್ತು ವೈದ್ಯಕೀಯ ತಂಡಗಳ ಶ್ಲಾಘನೀಯ ಸೇವೆ
ದುರಂತದ ನಂತರದ ಕಠಿಣ ದಿನಗಳಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಮತ್ತು ವಿಧಿವಿಜ್ಞಾನ ತಂಡಗಳು ತೋರಿದ ಕರ್ತವ್ಯನಿಷ್ಠೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದ್ದಾಗ, ಈ ತಂಡಗಳು ಹಗಲಿರುಳು ಶ್ರಮಿಸಿ ಡಿಎನ್‌ಎ (DNA) ಪರೀಕ್ಷೆಗಳ ಮೂಲಕ ಅತ್ಯಂತ ಸೂಕ್ಷ್ಮವಾಗಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕಾರ್ಯ ಮಾಡಿದ್ದವು.

ವಾರ್ಷಿಕೋತ್ಸವದ ಅಂಗವಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಅಗಲಿದ ಆತ್ಮಗಳ ಚಿರಶಾಂತಿಗಾಗಿ ವಿಶೇಷ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ. ಒಂದು ಕಡೆ ಅಪಘಾತದ ತನಿಖೆ ಮತ್ತು ಪರಿಹಾರ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಮತ್ತೊಂದೆಡೆ ದುರಂತ ಸಂಭವಿಸಿದ ಜಾಗದಲ್ಲೇ ನೂರಾರು ಜೀವಗಳನ್ನು ಉಳಿಸುವ ವೈದ್ಯರ ವಸತಿ ನಿಲಯ ತಲೆಯೆತ್ತುತ್ತಿರುವುದು ಜಗತ್ತಿಗೆ ಮಾನವೀಯತೆಯ ವಿಶಿಷ್ಟ ಸಂದೇಶವನ್ನು ಸಾರುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ! – Kannada News

ನಟ ಪ್ರಕಾಶ್ ರಾಜ್ ಹಾಗೂ ಪೊಲೀಸ್ ಜತೆ ಚಿನ್ನಯ್ಯImage Credit source: TV9 Network

ಬೆಂಗಳೂರು, ಜೂನ್ 12: ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಕೇಸ್‌ಗೆ (Dharmasthala Skull Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಚಿನ್ನಯ್ಯ (Chinnayya) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ SIT ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾನೆ. ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ (Prakash Raj) ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲೇನಿದೆ?

‘ವಿಠಲ್ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್‌ ಮಾಡಲಾಗಿದೆ. ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳಲು ನಿರ್ದೇಶಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ಹಣ ನೀಡುತ್ತಿದ್ದರು. ನಂತರ ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ವಕೀಲರ ಕಚೇರಿಗೆ ಕರೆದೊಯ್ದು ಅಲ್ಲಿ ಸಹಿ ಪಡೆದರು. ನಂತರ ಸುಜಾತಾ ಭಟ್‌ ಅವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ದೆಹಲಿಗೆ ಸುಪ್ರೀಂಕೋರ್ಟ್‌ಗೆ ಕರೆದೊಯ್ದರು. ನಂತರ ಉಜಿರೆಗೆ ತೆರಳಿದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ವಕೀಲರು ಹೇಳಿದಂತೆ ಕೋರ್ಟ್‌ಗೆ ಹೇಳದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿ ಬೆದರಿಸಿದ್ದರು. ಸಮೀರ್ ಎಂ.ಡಿ. ಅಜಯ್ ಅವರ ಯೂಟ್ಯೂಬ್ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಭರವಸೆ ನೀಡಿದ್ದರು’
ಎಂದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ.

ಹೀಗೆ, ಬುರುಡೆ ಗ್ಯಾಂಗ್‌ನ ಷಡ್ಯಂತ್ರವನ್ನು ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮತ್ತೊಂದು ಸ್ಫೋಟಕ ಹೆಸರನ್ನು ಬಯಲಿಗೆ ತಂದಿದ್ದಾನೆ. ಬಹುಭಾಷಾ ಖ್ಯಾತ ನಟ ಪ್ರಕಾಶ್‌ ರಾಜ್‌ ಹೆಸರನ್ನೂ ಸಹ ಚಿನ್ನಯ್ಯ ಉಲ್ಲೇಖ ಮಾಡಿದ್ದಾನೆ.

ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ

ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ರಾತ್ರಿ 8 ಗಂಟೆಗೆ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಅರ್ಜಿದಾರರಿಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು. ತಾವು 29 ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು. ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದಾಗ ಸಂಭ್ರಮಿಸಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತೆಂದು ಸಂಭ್ರಮಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಬಂಗ್ಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು SITಗೆ ತೋರಿಸುವಂತೆ ಸೂಚಿಸಿ, ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆದರೆ ಅಲ್ಲಿ ಯಾವುದೇ ಶವದ ಅವಶೇಷ ಸಿಗಲಿಲ್ಲ. ಧರ್ಮಸ್ಥಳದ ವಿರುದ್ಧ ಇವರ ಷಡ್ಯಂತ್ರದಿಂದ ಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ SIT ಮುಂದೆ ಷಡ್ಯಂತ್ರದ ಹೇಳಿಕೆ ನೀಡಿದೆ ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ

ಹೀಗೆ, ಇಡೀ ಪ್ರಕರಣದಲ್ಲಿ ಸ್ಫೋಟಕ ತಿರುವು ಎಂಬಂತೆ ಪ್ರಕಾಶ್‌ ರಾಜ್‌ ಹೆಸರನ್ನೂ ಚಿನ್ನಯ್ಯ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ. ತಾವು ಹೇಳಿಕೆ ನೀಡಿದ ಬಳಿಕ ಷಡ್ಯಂತ್ರ ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರ, ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಚಿನ್ನಯ್ಯ ಕೋರಿದ್ದಾನೆ. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ SITಗೆ ನೋಟಿಸ್ ಜಾರಿಗೊಳಿಸಿದೆ. ಜೂನ್ 29 ರೊಳಗೆ SIT ತನಿಖೆಯ ಸ್ಥಿತಿಗತಿ ಬಗ್ಗೆ ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಹೆಣ್ಣುಮಕ್ಕಳಂತೆ ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇದನ್ನು ಕರ್ಣವೇದ ಸಂಸ್ಕಾರ ಎಂದು ಕರೆಯಲಾಗುತ್ತದೆ. ಇದು ಕೇವಲ ಅಲಂಕಾರ ಅಥವಾ ಫ್ಯಾಷನ್ ಆಗಿರದೆ, ಅನೇಕ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರಯೋಜನಗಳನ್ನು ಹೊಂದಿದೆ.

ಸಾಮಾನ್ಯವಾಗಿ ಉಪನಯನ ಸಮಯದಲ್ಲಿ ಅಥವಾ 21 ವರ್ಷದ ಒಳಗಿನ ಮಕ್ಕಳಿಗೆ ಕಿವಿ ಚುಚ್ಚಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕವಾಗಿ, ಇದು ದೇಹವನ್ನು ಋಣಾತ್ಮಕ ಶಕ್ತಿಗಳಿಂದ ಮತ್ತು ರಾಹು-ಕೇತುಗಳ ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಿವಿ ಚುಚ್ಚಿಸಿದಾಗ ದೇಹವು ಭಿನ್ನ ಆಗಿ, ಕೆಟ್ಟ ಶಕ್ತಿಗಳ ಆವಾಹನೆಯಾಗುವುದಿಲ್ಲ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today: ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 12, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ದ್ವಾದಶಿ, ಭರಣಿ ನಕ್ಷತ್ರ, ಅತಿಗಂಡ ಯೋಗ, ತೈತಿಲಕರಣವನ್ನು ಒಳಗೊಂಡಿದೆ. ರಾಹುಕಾಲವು ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:18 ರವರೆಗೆ ಇರಲಿದ್ದು, ಶುಭಕಾಲವು ಮಧ್ಯಾಹ್ನ 12:19 ರಿಂದ 1:56 ರವರೆಗೆ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಶುಕ್ರವಾರವು ಶ್ರೀ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತ ದಿನವಾಗಿದ್ದು, ಪ್ರದೋಷದ ಕಾಲವೂ ಇದಾಗಿದೆ. ಅಂತರಾಷ್ಟ್ರೀಯವಾಗಿ ವಿಶ್ವ ಬಾಲ ಕಾರ್ಮಿಕರ ದಿನಾಚರಣೆಯೂ ಇಂದೇ. ಗ್ರಹಗಳ ಸಂಚಾರದಂತೆ, ರವಿಯು ವೃಷಭ ರಾಶಿಯಲ್ಲಿ ಹಾಗೂ ಚಂದ್ರನು ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

Exit mobile version