ಸಲ್ಮಾನ್ ಖಾನ್ ಸಂಭಾವನೆಯಲ್ಲಿ ಭಾರಿ ಇಳಿಕೆ; 120 ಕೋಟಿ ರೂಪಾಯಿ ಬದಲು 70 ಕೋಟಿ ರೂ.? – Kannada News | Salman Khan takes massive Pay Cut reduces Fees to 70 Crores for SVC 63 Vamsi Paidipally film

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಮತ್ತು ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಕೇಳಿಬಂದಿದೆ. ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ‘SVC63’ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಚಿತ್ರರಂಗದಲ್ಲಿ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಲ್ಮಾನ್ ಖಾನ್ ತೆಗೆದುಕೊಂಡಿರುವ ಸಂಭಾವನೆ (Salman Khan Remuneration) ಬಗ್ಗೆ ಸುದ್ದಿ ಆಗುತ್ತಿದೆ.

ಸಾಮಾನ್ಯವಾಗಿ ಒಂದು ಸಿನಿಮಾಗೆ 120 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುವ ಸಲ್ಮಾನ್ ಖಾನ್, ‘SVC63’ ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಅವರು ಕೇವಲ 70 ಕೋಟಿ ರೂಪಾಯಿ ಪಡೆಯಲು ಒಪ್ಪಿಕೊಂಡಿದ್ದಾರೆ.

ಸ್ನೇಹಕ್ಕಾಗಿ ಸಂಭಾವನೆ ಕಡಿತ?

ಚಿತ್ರರಂಗದ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅವರು ತಮ್ಮ ಇತ್ತೀಚಿನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಕಾರಣ ಹಾಗೂ ಮಾರ್ಕೆಟ್ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಚಿತ್ರದ ಲಾಭದಲ್ಲೂ ಅವರು ಪಾಲು ಪಡೆಯಬಹುದು ಎಂಬ ಮಾತು ಕೇಳಿಬಂದಿದೆ. ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಪ್ರಖ್ಯಾತ ಮಾಧ್ಯಮವೊಂದರ ವರದಿ ಪ್ರಕಾರ, ಈ ಪ್ರಾಜೆಕ್ಟ್‌ನ ಹಿಂದೆ ಸಲ್ಮಾನ್ ಅವರ ಆಪ್ತ ಗೆಳೆಯ ರಫಿ ಕಾಜಿ ಮಧ್ಯಸ್ಥಿಕೆ ವಹಿಸಿದ್ದಾರೆ. ರಫಿ ಕಾಜಿ ಅವರು ಈ ಸಿನಿಮಾದ ಸಹ-ನಿರ್ಮಾಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದು, ಗೆಳೆಯನ ಮೇಲಿನ ಗೌರವ ಮತ್ತು ಸ್ನೇಹದ ಕಾರಣಕ್ಕಾಗಿಯೇ ಸಲ್ಮಾನ್ ಅವರು ತಮ್ಮ ಸಂಭಾವನೆಯಲ್ಲಿ ಭಾರಿ ರಿಯಾಯಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ: ಸಲ್ಲುಗೆ ಕಾಡುತ್ತಿದೆಯೇ ಅನಾರೋಗ್ಯ?

ಪೋಲಿಸ್ ಪಾತ್ರದಲ್ಲಿ ಸಲ್ಮಾನ್ ಖಾನ್?

ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಸಲ್ಮಾನ್ ಖಾನ್ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ವಿಶೇಷವಾದ ಬೋಳು ತಲೆಯ ಲುಕ್‌ನಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಿತ್ರದಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಲ್ಮಾನ್ ಖಾನ್ ಅವರ ಫಸ್ಟ್ ಲುಕ್ ಅನ್ನು ಶೀಘ್ರದಲ್ಲೇ ನಿರ್ಮಾಪಕರು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ – Kannada News | Rain Havoc in Karnataka: Heavy Flooding in Dakshina Kannada, Tree Fall in Shivamogga

ಬಂಟ್ವಾಳದ ಹಲವು ಗ್ರಾಮಗಳು ಜಲಾವೃತImage Credit source: Tv9 Kannada

ಮಂಗಳೂರು/ಶಿವಮೊಗ್ಗ ಆಗಸ್ಟ್​​ 02: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಜೊತೆಗೆ ಎಎಂಆರ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ಬಂಟ್ವಾಳ ತಾಲೂಕಿನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಜನ ಪರದಾಟ ನಡೆಸಿದ್ದಾರೆ.

ಪಾಣೆಮಂಗಳೂರು ಬಳಿಯ ಅಲಡ್ಕ, ಬೊಗೊಡಿ, ನಂದಾವರ, ಗುಡಿನಬಳಿ, ಕಂಚಿಕಾರಪೇಟೆ, ಬಸ್ತಪಡ್ಪು, ಅಕ್ಕರಂಗಡಿ, ಜಕ್ರಿಬೆಟ್ಟು, ಅಜಿಲಮೊಗರು ಗ್ರಾಮ ಮತ್ತು ನಾವೂರು ಗ್ರಾಮಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿ ಅಂಗಡಿಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ವರ್ತಕರು ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪರದಾಡಿದ್ದಾರೆ. ನಿನ್ನೆ ಸಂಜೆಯಿಂದ ನೇತ್ರಾವತಿ ನದಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿಪಾತ್ರದ ಜನವಸತಿ ಪ್ರದೇಶಗಳಿಗೂ ನೀರು ನುಗ್ಗುತ್ತಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.

ಇದನ್ನೂ ಓದಿ: ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ: ಕರಾವಳಿ-ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರ ವ್ಯತ್ಯಯ

ನೇತ್ರಾವತಿ ನದಿಯ ನೀರಿನ ಹರಿವು ದಾಖಲೆ ಮಟ್ಟಕ್ಕೆ ಏರಿಕೆ

ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದೆ. ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಕುರಿತು ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಪಶ್ಚಿಮಘಟ್ಟ ಮತ್ತು ಕರಾವಳಿ ಎರಡೂ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಹರಿವು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಚಲಿಸುತ್ತಿದ್ದ ಗೂಡ್ಸ್ ವಾಹನದ ಮೇಲೆ ಬಿದ್ದ ಮರ

ಮಳೆಯ ಜೊತೆಗಿನ ಬಿರುಗಾಳಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲೂ ಅವಾಂತರ ಸೃಷ್ಟಿಯಾಗಿದೆ. ಬರುವೆ ಗ್ರಾಮದ ಆಚಾರ್ ಕೇರಿ ಬಳಿ ಬೃಹತ್ ಮರವೊಂದು ಚಲಿಸುತ್ತಿದ್ದ ಗೂಡ್ಸ್ ವಾಹನದ (ಪಿಕಪ್ ವಾಹನ) ಮೇಲೆ ಉರುಳಿಬಿದ್ದಿದೆ. ತರಕಾರಿ ಮಾರಾಟ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ಚಾಲಕ ತೌಸಿಫ್ ಮರದಡಿಯಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ತೌಸಿಫ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಕ್ಷಣವೇ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಕಬಿನಿ ಜಲಾಶಯದಿಂದ 25,000 ಕ್ಯೂಸೆಕ್ ನೀರು ಬಿಡುಗಡೆ

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕಬಿನಿ ಜಲಾಶಯದಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 10,000 ರಿಂದ 12,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಒಟ್ಟು 25,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಬಿನಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಲಾಶಯದ ಒಳಹರಿವು ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವು ಯಾವಾಗ ಬೇಕಾದರೂ ಬನ್ನಿ, ನಿಮ್ಮ ಭದ್ರತೆಯ ಜವಾಬ್ದಾರಿ ನಮ್ಮದು, ತಸ್ಲೀಮಾ ನಸ್ರೀನ್​ಗೆ ಸಿಎಂ ಸುವೇಂದು ಭರವಸೆ – Kannada News | Taslima Nasreen Returns: CM Suvendu Adhikari Guarantees Full Security in Kolkata

ಕೋಲ್ಕತ್ತಾ, ಆಗಸ್ಟ್ 02: ಸುಮಾರು 19 ವರ್ಷಗಳ ಗಡಿಪಾರು ಬಳಿಕ ಕೋಲ್ಕತ್ತಾಗೆ ಮರಳಿರುವ ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen) ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೂರ್ಣ ಭದ್ರತೆಯ ಭರವಸೆ ನೀಡಿದ್ದಾರೆ. ಶನಿವಾರ ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಸ್ಲೀಮಾ ಅವರು ಇನ್ಮುಂದೆ ಬಯಸಿದಾಗಲೆಲ್ಲಾ ಬಂಗಾಳಕ್ಕೆ ಭೇಟಿ ನೀಡಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ಪೊಲೀಸ್ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಯಾಗಿ ನಿಮಗೆ ಸೂಕ್ತ ಭದ್ರತೆ ಒದಗಿಸುವುದು ನನ್ನ ಕರ್ತವ್ಯ. ಒಮ್ಮೆ ಮಾತ್ರವಲ್ಲ, ನೀವು ಎಷ್ಟು ಬಾರಿ ಬಯಸಿದರೂ ಪಶ್ಚಿಮ ಬಂಗಾಳಕ್ಕೆ ಬನ್ನಿ, ಸಂಪೂರ್ಣ ಭದ್ರತೆ ನೀಡಲಾಗುವುದು ಎಂದಿದ್ದಾರೆ. ಬಂಗಾಳವು ಈಗ ಬೆದರಿಕೆ ಹಾಗೂ ಜನರನ್ನು ಮೌನಗೊಳಿಸುವ ಕಾಲದಿಂದ ಹೊರಬಂದಿದೆ. ಇಲ್ಲಿ ಸಾಂವಿಧಾನಿಕ ಮೌಲ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ರಕ್ಷಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

2007 ರ ನಂತರ ಪ್ರಥಮ ಬಾರಿಗೆ ಕೋಲ್ಕತ್ತಾದ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ 63 ವರ್ಷದ ಲೇಖಕಿ ತಸ್ಲೀಮಾ ನಸ್ರೀನ್, ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡಲು ಬಂದಿಲ್ಲ. ಮಹಿಳಾ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ: ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್

ಅನ್ಯಾಯ ಎಷ್ಟು ಕಾಲ ಮುಂದುವರೆದರೂ ಶಾಶ್ವತವಲ್ಲ ಎಂಬುದಕ್ಕೆ ಇಂದು ತೆರೆದಿರುವ ಈ ಬಾಗಿಲುಗಳೇ ಸಾಕ್ಷಿ. ಇತಿಹಾಸವು ಬಾಗಿಲುಗಳನ್ನು ಯಾರು ಮುಚ್ಚಿದರು ಮತ್ತು ಯಾರು ತೆರೆದರು ಎಂಬುದನ್ನು ನೆನಪಿನಲ್ಲಿಡುತ್ತದೆ ಎಂದು ಭಾವುಕರಾಗಿ ನುಡಿದರು.

2007ರ ಹಿಂಸಾತ್ಮಕ ಪ್ರತಿಭಟನೆ ಹಾಗೂ ನಿಷೇಧ: ತಸ್ಲೀಮಾ ನಸ್ರೀನ್ ಅವರ ‘ದ್ವಿಖಂಡಿತೋ’ ಎಂಬ ಆತ್ಮಚರಿತ್ರೆ ಕೃತಿಯ ವಿರುದ್ಧ 2007 ರಲ್ಲಿ ಮೂಲಭೂತವಾದಿ ಸಂಘಟನೆಗಳು ಕೋಲ್ಕತ್ತಾದಲ್ಲಿ ಭಾರಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದವು. ಅಂದಿನ ಎಡರಂಗ ಸರ್ಕಾರವು ಪುಸ್ತಕವನ್ನು ನಿಷೇಧಿಸಿ, ಕಾನೂನು-ಸುವ್ಯವಸ್ಥೆಯ ನೆಪವೊಡ್ಡಿ ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸಿತ್ತು.

ಧಾರ್ಮಿಕ ಮೂಲಭೂತವಾದದ ವಿರುದ್ಧ ಕಠಿಣ ಬರಹಗಳನ್ನು ಬರೆದಿದ್ದಕ್ಕಾಗಿ ಇಸ್ಲಾಮಿಕ್ ಉಗ್ರ ಸಂಘಟನೆಗಳಿಂದ ಜೀವಬೆದರಿಕೆ ಎದುರಿಸಿದ ತಸ್ಲೀಮಾ, 1994 ರಲ್ಲೇ ಬಾಂಗ್ಲಾದೇಶದಿಂದ ಗಡಿಪಾರಾಗಿದ್ದರು. ಸುದೀರ್ಘ ಸಮಯದ ನಂತರ ಬಂಗಾಳದಲ್ಲಿ ಆಡಳಿತ ಬದಲಾವಣೆಯಾದ ಬೆನ್ನಲ್ಲೇ ಅವರಿಗೆ ಮತ್ತೆ ಅಧಿಕೃತ ಆಶ್ರಯ ಹಾಗೂ ವೇದಿಕೆ ಲಭಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ – Kannada News | Malnad Rain Havoc: 3 of a Family Died in Thirthahalli Landslide

ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ದುರಂತImage Credit source: Tv9 Kannada

ಶಿವಮೊಗ್ಗ, ಆಗಸ್ಟ್​​ 02: ಮಲೆನಾಡು ಭಾಗದಲ್ಲಿ ಮಳೆ ಅವಾಂತರಕ್ಕೆ ಸಾಲು ಸಾಲು ಅನಾಹುತಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ ಎನ್ನಲಾಗಿದ್ದು, ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪಕ್ಕದ ಶೆಡ್​​ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ.

ಶವಗಳನ್ನು ಹೊರ ತೆಗೆಯಲು ಹರಸಾಹಸ

ಮೃತರನ್ನು ಮಲ್ಲಿಕಾರ್ಜುನ (35), ನಾಗವೇಣಿ (28), ಸಂತೋಷ (3) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿ ಮೂವರೂ ಪ್ರಾಣ ಕಳೆದುಕೊಂಡಿದ್ದು, ಶವಗಳನ್ನು ಹೊರ ತೆಗೆಯಲು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ

ಕೊಡಗಿನ ಹಲವೆಡೆ ಸೇತುವೆ ಮುಳುಗಡೆ

ಕೊಡಗು ಜಿಲ್ಲೆಯಾದ್ಯಂತ ವರುಣ ಆರ್ಭಟಿಸುತ್ತಿದ್ದು, ಮಳೆ ಅಬ್ಬರಕ್ಕೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಭಾಗಮಂಡಲ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಸಂಪೂರ್ಣ ಮುಳುಗಿದೆ. ಭಾಗಮಂಡಲ-ತಲಕಾವೇರಿ ರಸ್ತೆಯೂ ಜಲಾವೃತವಾಗಿರುವ ಕಾರಣ ಫ್ಲೈ ಓವರ್ ಮೂಲಕ ಜನ ಓಡಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:04 am, Sun, 2 August 26

Source link

ದಕ್ಷಿಣ ವಲಯ ತಂಡ ಪ್ರಕಟ: ನಾಲ್ವರು ಕನ್ನಡಿಗರು ಆಯ್ಕೆ – Kannada News | South Zone full squad for Duleep Trophy 2026 27

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ದಕ್ಷಿಣ ವಲಯ (ಸೌತ್ ಝೋನ್) ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರುಗಳ ಈ ತಂಡವನ್ನು ತಿಲಕ್ ವರ್ಮಾ ಮುನ್ನಡೆಸಲಿದ್ದು, ಅನುಭವಿ ಆಟಗಾರ ರಿಕ್ಕಿ ಭುಯಿ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅವರೆಂದರೆ…

  • ಕರುಣ್ ನಾಯರ್
  • ಶ್ರೇಯಸ್ ಗೋಪಾಲ್
  • ಸ್ಮರಣ್ ರವಿಚಂದ್ರನ್
  • ವಿದ್ವತ್ ಕಾವೇರಪ್ಪ

ಬಲಿಷ್ಠ ಬ್ಯಾಟಿಂಗ್ ಲೈನಪ್:

ದಕ್ಷಿಣ ವಲಯದ 14 ಸದಸ್ಯರ ಬಲಿಷ್ಠ ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರ ಅತ್ಯುತ್ತಮ ಸಮತೋಲನವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವ ಹಿರಿಯ ಆಟಗಾರ ಕರುಣ್ ನಾಯರ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ವಿಕೆಟ್ ಕೀಪರ್ ಆಗಿ ಎನ್. ಜಗದೀಶನ್ ಸ್ಥಾನ ಪಡೆದಿದ್ದು, ಶೇಕ್ ರಶೀದ್, ಅಭಿನವ್ ತೇಜ್ರಾನಾ, ಕೆ. ಹಿಮತೇಜ ಮತ್ತು  ಸ್ಮರಣ್ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ.

ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗ:

ಖ್ಯಾತ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರೊಂದಿಗೆ ಟಿ. ತ್ಯಾಗರಾಜನ್ ಮತ್ತು ಕೆ. ಸಾಯಿ ತೇಜ ಆಲ್‌ರೌಂಡರ್ ರೂಪದಲ್ಲಿ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇನ್ನು ವೇಗದ ಬೌಲಿಂಗ್ ಜವಾಬ್ದಾರಿಯನ್ನು ಪ್ರಥಮ ದರ್ಜೆ ಕ್ರಿಕೆಟ್‌ನ ಯಶಸ್ವಿ ಬೌಲರ್ ವಿದ್ವತ್ ಕಾವೇರಪ್ಪ, ಟಿ. ವಿಜಯ್ ಮತ್ತು ಅಮನ್ ಖಾನ್ ಹೆಗಲಿಗೇರಿಸಿಕೊಂಡಿದ್ದಾರೆ.

ಸೌತ್ ಝೋನ್​ ಸೆಮಿಫೈನಲ್​ಗೆ!

ಕಳೆದ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿದ್ದ ಕಾರಣ, ದಕ್ಷಿಣ ವಲಯ ತಂಡವು ಈ ಬಾರಿ ನೇರವಾಗಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ. ಆಗಸ್ಟ್ 23 ರಿಂದ ಟೂರ್ನಿ ಆರಂಭವಾದರೂ, ದಕ್ಷಿಣ ವಲಯ ತಂಡವು ತನ್ನ ಮೊದಲ ಸೆಮಿಫೈನಲ್ ಪಂದ್ಯವನ್ನು ಆಗಸ್ಟ್ 30 ರಂದು ಆಡಲಿದೆ.

ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಬರುವ ಉತ್ತರ ವಲಯ (ನಾರ್ತ್ ಝೋನ್) ಅಥವಾ ಪಶ್ಚಿಮ ವಲಯ (ವೆಸ್ಟ್ ಝೋನ್) ತಂಡವನ್ನು ತಿಲಕ್ ವರ್ಮಾ ಪಡೆ ಎದುರಿಸಲಿದೆ.

ಇದನ್ನೂ ಓದಿ: CWG 2026: ಭಾರತೀಯ ಬಾಕ್ಸರ್​ಗಳ ಪಂಚ್​​ಗೆ 7 ಚಿನ್ನದ ಪದಕ!

ದಕ್ಷಿಣ ವಲಯ ತಂಡ: ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ (ಉಪನಾಯಕ), ಅಭಿನವ್ ತೇಜ್ರಾನಾ, ಶೇಕ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್ (ವಿಕೆಟ್ ಕೀಪರ್), ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಕೆ. ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.

Source link

Plane Crash: ಪೆರುವಿನ ನಾಜ್ಕಾ ಲೈನ್ಸ್ ಬಳಿ ಪ್ರವಾಸಿ ವಿಮಾನ ಪತನ: 11 ವಿದೇಶಿಯರು ಸೇರಿ ಎಲ್ಲಾ 13 ಮಂದಿ ದಾರುಣ ಸಾವು – Kannada News | Peru Nazca Lines Plane Crash: 13 Dead in Tragic Tourist Flight Accident

ಲಿಮಾ , ಆಗಸ್ಟ್​ 02: ದಕ್ಷಿಣ ಅಮೆರಿಕದ ಪೆರು ದೇಶದ ಜಗತ್ಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ‘ನಾಜ್ಕಾ ಲೈನ್ಸ್’ (Nazca Lines) ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನ(Plane Crash)ಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ 11 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸಿಬ್ಬಂದಿ ಸೇರಿ ಎಲ್ಲಾ 13 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೆರುವಿನ ಸಾರಿಗೆ ಮತ್ತು ಸಂವಹನ ಸಚಿವಾಲಯ ದೃಢಪಡಿಸಿದೆ.

ದುರಂತ ನಡೆದಿದ್ದು ಹೇಗೆ?

ಸೆಸ್ನಾ ಕ್ಯಾರವಾನ್ ವಿಮಾನ: ‘ಏರೋಡಿಯಾನಾ’ ವಿಮಾನಯಾನ ಸಂಸ್ಥೆಗೆ ಸೇರಿದ ‘ಸೆಸ್ನಾ ಕ್ಯಾರವಾನ್ C-208’ ಎಂಬ ಸಣ್ಣ ಪ್ರವಾಸಿ ವಿಮಾನವು ನಾಜ್ಕಾ ಏರ್‌ಡ್ರೋಮ್‌ನಿಂದ ಹಾರಿತ್ತು. ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಪ್ಯೂಬ್ಲೊ ನ್ಯೂಯೆವೊ ಜಿಲ್ಲೆಯ ಸೊಕೊಸ್ ಬಳಿ ಹಾರಾಟ ನಡೆಸುತ್ತಿದ್ದಾಗ, ವಿಮಾನದಲ್ಲಿದ್ದ ಸಿಬ್ಬಂದಿ ನಿಯಂತ್ರಣ ಕೊಠಡಿಗೆ ತುರ್ತು ಪರಿಸ್ಥಿತಿಯ ಸಂದೇಶ ರವಾನಿಸಿದ್ದರು. ಸಂದೇಶ ರವಾನೆಯಾದ ಕೆಲವೇ ಕ್ಷಣಗಳಲ್ಲಿ ವಿಮಾನದೊಂದಿಗಿನ ರೇಡಿಯೋ ಸಂಪರ್ಕ ಸಂಪೂರ್ಣವಾಗಿ ಕಡಿದುಬಿದ್ದು, ವಿಮಾನ ನೆಲಕ್ಕೆ ಅಪ್ಪಳಿಸಿತು.

ರಕ್ಷಣಾ ಕಾರ್ಯಪಡೆ ಮತ್ತು ತನಿಖೆ

ಯಾರೂ ಬದುಕುಳಿದಿಲ್ಲ: ಅಪಘಾತದ ಮಾಹಿತಿ ಸಿಗುತ್ತಿದ್ದಂತೆಯೇ ರಾಷ್ಟ್ರೀಯ ಪೊಲೀಸ್ ಪಡೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ, ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಕ್ಷಣಾ ಪಡೆಗಳು ಸ್ಪಷ್ಟಪಡಿಸಿವೆ. ವಾಯುಯಾನ ಅಪಘಾತ ತನಿಖಾ ಆಯೋಗವು ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದು, ವಿಮಾನ ಪತನಕ್ಕೆ ತಾಂತ್ರಿಕ ದೋಷವೇ ಅಥವಾ ಹವಾಮಾನ ವೈಪರೀತ್ಯವೇ ಕಾರಣವೇ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದೆ.

ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಏನಿದು ‘ನಾಜ್ಕಾ ಲೈನ್ಸ್’?: ಪೆರುವಿನ ದಕ್ಷಿಣ ಮರುಭೂಮಿ ಪ್ರದೇಶದಲ್ಲಿ ಕ್ರಿ.ಪೂ 500 ರಿಂದ ಕ್ರಿ.ಶ 500 ರ ಅವಧಿಯಲ್ಲಿ ಅಲ್ಲಿನ ಜನರು ನೆಲದ ಮೇಲೆ ಬಿಡಿಸಿರುವ ಬೃಹತ್ ರೇಖಾಚಿತ್ರಗಳಿವು (Geoglyphs). ಇವುಗಳಲ್ಲಿ ಪ್ರಾಣಿಗಳು, ಸಸ್ಯಗಳು, ಜ್ಯಾಮಿತೀಯ ಆಕಾರಗಳು ಮತ್ತು ಕಾಲ್ಪನಿಕ ಆಕೃತಿಗಳಿವೆ. ಈ ಬೃಹತ್ ಜಿಯೋಗ್ಲಿಫ್‌ಗಳು ನೆಲದ ಮೇಲಿದ್ದುಕೊಂಡು ನೋಡಿದರೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆಕಾಶಮಾರ್ಗದಲ್ಲಿ ಸಣ್ಣ ವಿಮಾನಗಳ ಮೂಲಕ ಹಾರಾಟ ನಡೆಸಿದಾಗ ಮಾತ್ರ ಇಡೀ ಚಿತ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಹೀಗಾಗಿ, ಪ್ರತಿದಿನ ನೂರಾರು ವಿದೇಶಿ ಪ್ರವಾಸಿಗರು ಇಂತಹ ಪ್ರವಾಸಿ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಈ ಹಿಂದೆ ಸಹ ಈ ಭಾಗದಲ್ಲಿ ಪ್ರವಾಸಿ ವಿಮಾನಗಳು ಪತನಗೊಂಡ ಉದಾಹರಣೆಗಳಿದ್ದು, ಪೆರು ಸರ್ಕಾರವು ಪ್ರವಾಸಿ ವಿಮಾನಗಳ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭತ್ತ ಬಿತ್ತನೆ ಕುಂಠಿತವಾಗಿರುವ ಬೆನ್ನಲ್ಲೇ ಅಕ್ಕಿ ದರ ಗಗನಕ್ಕೆ: ಶೇ.35ರಷ್ಟು ಬೆಲೆ ಹೆಚ್ಚಳ – Kannada News | Kitchen Budget Hits: Rice Prices Soar by 35% in Karnataka Amid Deficit Rainfall and Poor Paddy Sowing

ಬೆಂಗಳೂರು, ಆಗಸ್ಟ್​​ 02: ಕರ್ನಾಟಕದಲ್ಲಿ ಮಳೆಯ ಕೊರತೆಯ ಎಫೆಕ್ಟ್ ಇದೀಗ ಜನರ ಊಟದ ತಟ್ಟೆಯ ಮೇಲೂ ಬಿದ್ದಿದೆ. ಭತ್ತ ಬಿತ್ತನೆ ಕುಂಠಿತವಾಗಿರುವ ಬೆನ್ನಲ್ಲೇ ಅಕ್ಕಿ ದರ ಏಕಾಏಕಿ ಗಗನಕ್ಕೇರಿದ್ದು, ಕಳೆದ ಒಂದು ದಶಕದಲ್ಲೇ ಕಾಣದಷ್ಟು ಬೆಲೆಯಲ್ಲಿ ಹೆಚ್ಚಳವಾಗಿದೆ. ಸ್ಟೀಮ್, ಸೋನಾ ಮಸೂರಿ ಸೇರಿದಂತೆ ಬಹುತೇಕ ಎಲ್ಲಾ ವಿಧದ ಅಕ್ಕಿಗಳು ದುಬಾರಿಯಾಗಿದ್ದು, ಶೇ.35ರಷ್ಟು ದರ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರು ಮಾತ್ರವಲ್ಲ, ವ್ಯಾಪಾರಿಗಳೂ ಸಂಕಷ್ಟ ಎದುರಿಸುತ್ತಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಅಕ್ಕಿ ದರ ಎಷ್ಟು ಏರಿಕೆ

ಅಕ್ಕಿಯ ವಿಧ ಹಿಂದಿನ ದರ (ಕೆಜಿಗೆ) ಈಗಿನದ ದರ (ಕೆಜಿಗೆ)
ದಪ್ಪ ಅಕ್ಕಿ 37 42
ಬಾಯ್ಲ್ಡ್ ರೈಸ್​​ 30 34
ಸೋನಾ ಸ್ಟೀಮ್ ಅಕ್ಕಿ 46 64
ಸೋನಾ ಮಸೂರಿ ರಾ 54 70
ಕೋಲಂ ಅಕ್ಕಿ 75 84

ಭತ್ತ ಬೆಳೆಯಲು ಸಾಕಷ್ಟು ಮಳೆ ಮತ್ತು ನೀರಾವರಿ ಅತ್ಯಗತ್ಯ. ಆದರೆ ಈ ಬಾರಿ ರಾಜ್ಯದಲ್ಲಿ ಸುಮಾರು ಶೇ.50ರಷ್ಟು ಮಳೆ ಕೊರತೆಯಾಗಿರುವುದರಿಂದ ರೈತರು ಬಿತ್ತನೆ ಮುಂದೂಡುತ್ತಿದ್ದಾರೆ. ಹೀಗಾಗಿ ಉತ್ಪಾದನೆ ಕಡಿಮೆಯಾಗುವ ಆತಂಕದಿಂದಲೇ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಕಂಡಿದೆ ಎನ್ನಲಾಗಿದೆ. ಇನ್ನು ಯಶವಂತಪುರ ಎಪಿಎಂಸಿಗೆ ಪ್ರತಿದಿನ ಸುಮಾರು 50 ಲೋಡ್ ಅಕ್ಕಿ ಬರುತ್ತಿತ್ತು. ಆದರೆ ಈಗ ದರ ಏರಿಕೆ ಮತ್ತು ಪೂರೈಕೆ ಕುಸಿತದಿಂದ ಮಾರುಕಟ್ಟೆಗೆ ಬರುತ್ತಿರುವ ಲೋಡ್‌ಗಳ ಸಂಖ್ಯೆಯೂ ಇಳಿಕೆಯಾಗಿದೆ. ವ್ಯಾಪಾರವೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಕೆಎಂಎಫ್ ಪಶು ಆಹಾರ ಘಟಕದಲ್ಲಿ ಗೋಲ್ಮಾಲ್: ಕಳಪೆ ಆಹಾರದಿಂದ 1,600 ಹಸುಗಳ ಸಾವಿನ ಶಂಕೆ!

ಸದ್ಯ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಕೊರತೆಯಿಂದ ಅಕ್ಕಿ ಉತ್ಪಾದನೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಒಂದೊಮ್ಮೆ ಹಿಂಗಾರು ಮಳೆಯೂ ಕೈಕೊಟ್ಟರೆ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರ ಜೇಬಿಗೆ ಇನ್ನಷ್ಟು ಬಿಸಿ ತಟ್ಟುವ ಸಾಧ್ಯತೆ ಹೆಚ್ಚಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರು ಸೇರಿದಂತೆ ಮಂಗಳೂರು, ಮೈಸೂರಿನಲ್ಲೂ ಏರ್ ಕ್ವಾಲಿಟಿ ಉತ್ತಮ – Kannada News | Bengaluru Air Quality Index Today: Check Latest AQI Report of Karnataka Cities

ಬೆಂಗಳೂರು ಸೇರಿದಂತೆ ಮಂಗಳೂರು, ಮೈಸೂರಿನಲ್ಲೂ ಏರ್ ಕ್ವಾಲಿಟಿ ಉತ್ತಮ

ಬೆಂಗಳೂರು, ಆಗಸ್ಟ್ 2: ರಾಜ್ಯಾದ್ಯಂತ ಮುಂಗಾರು ಮಳೆ ಮುಂದುವರಿದಿರುವ ಬೆನ್ನಲ್ಲೇ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದ್ದು, ಗಾಳಿಯ ಗುಣಮಟ್ಟ (AQI) ಒಟ್ಟಾರೆಯಾಗಿ ‘ಉತ್ತಮ’ದಿಂದ ‘ಸಾಧಾರಣ’ ಹಂತದಲ್ಲಿದೆ. ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿರುವ ಧೂಳಿನ ಕಣಗಳು ಕಡಿಮೆಯಾಗಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್ 2) ಗಾಳಿಯ ಗುಣಮಟ್ಟ ಸೂಚ್ಯಂಕ 35 ರಿಂದ 60ರ ಆಸುಪಾಸಿನಲ್ಲಿದ್ದು, ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ವಿಭಾಗದಲ್ಲಿದೆ. ನಗರದಲ್ಲಿ PM2.5 ಪ್ರಮಾಣ ಸರಾಸರಿ 8 ರಿಂದ 19 µg/m³ ಇದ್ದು, PM10 ಕಣಗಳ ಪ್ರಮಾಣ 10 ರಿಂದ 45 µg/m³ ದಾಖಲಾಗಿದೆ.

ಜಯನಗರ, ಕೆಂಗೇರಿ, ಮಲ್ಲೇಶ್ವರಂ ಹಾಗೂ ಸಿಟಿ ಸೆಂಟ್ರಲ್ ಭಾಗಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ ಮಟ್ಟದಲ್ಲಿದ್ದರೆ, ವೈಟ್‌ಫೀಲ್ಡ್, ಸಿಲ್ಕ್ ಬೋರ್ಡ್ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ವಾಹನ ದಟ್ಟಣೆಯಿಂದಾಗಿ AQI 50-60 ರವರೆಗೆ ದಾಖಲಾಗಿದೆ.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

  • ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಅತ್ಯುತ್ತಮ ಗಾಳಿಯ ಗುಣಮಟ್ಟ ದಾಖಲಾಗಿದ್ದು, AQI 16ರಷ್ಟಿದೆ.
  • ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಬಿರುಗಾಳಿ ಮಳೆಯ ಕಾರಣ ಗಾಳಿ ಶುದ್ಧವಾಗಿದ್ದು, AQI 56ರಷ್ಟಿದೆ.
  • ಬೆಳಗಾವಿ ಮತ್ತು ಹುಬ್ಬಳ್ಳಿ: ಉತ್ತರ ಕರ್ನಾಟಕದ ಬೆಳಗಾವಿ (AQI ~55) ಹಾಗೂ ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’ ವಿಭಾಗದಲ್ಲಿದೆ.
  • ಬಾಗಲಕೋಟೆ ಹಾಗೂ ವಿಜಯಪುರ: ಈ ಭಾಗಗಳಲ್ಲಿ AQI 80ರಿಂದ 100ರ ವ್ಯಾಪ್ತಿಯಲ್ಲಿ ದಾಖಲಾಗಿದೆ.

ತಜ್ಞರ ಆರೋಗ್ಯ ಸಲಹೆ

ರಾಜ್ಯದಲ್ಲಿ ಪ್ರಸ್ತುತ ವಾಯು ಗುಣಮಟ್ಟ ಉತ್ತಮವಾಗಿದ್ದು, ಬೆಳಗಿನ ವಾಯುವಿಹಾರ ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಆದಾಗ್ಯೂ, ಮಳೆಯ ವಾತಾವರಣದಿಂದಾಗಿ ಧೂಳಿಗಿಂತ ಹೆಚ್ಚಾಗಿ ತೇವಾಂಶ ಮತ್ತು ಶೀತ ಸಂಬಂಧಿ ಅಲರ್ಜಿಗಳು ಕಂಡುಬರಬಹುದಾದ್ದರಿಂದ ಉಸಿರಾಟದ ತೊಂದರೆ ಇರುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಭಾರತೀಯ ಬಾಕ್ಸರ್​ಗಳ ಪಂಚ್​​ಗೆ 7 ಚಿನ್ನದ ಪದಕ! – Kannada News | 7 Gold Medals: Indian Boxers Dominate in Commonwealth Games

ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ (ಆಗಸ್ಟ್ 1) ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಒಂದೇ ದಿನ ಗೆದ್ದ ಪದಕಗಳ ಸಂಖ್ಯೆ ಬರೋಬ್ಬರಿ 16. ಈ ಹದಿನಾರು ಪದಕಗಳಲ್ಲಿ 8 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಮೆಡಲ್​ಗಳು ಇರುವುದು ವಿಶೇಷ.

ಚಿನ್ನಕ್ಕೆ ಬಾಕ್ಸರ್​ಗಳ ಪಂಚ್:

ಶನಿವಾರ ನಡೆದ ಬಾಕ್ಸಿಂಗ್ ಫೈನಲ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 7 ಚಿನ್ನದ ಪದಕ ಗೆದ್ದಿದ್ದಾರೆ. ಇದರಲ್ಲಿ ಐದು ಚಿನ್ನದ ಪದಕ ತಂದುಕೊಟ್ಟಿರುವುದು ಮಹಿಳಾ ಬಾಕ್ಸರ್​ಗಳು ಎಂಬುದು ಹೆಮ್ಮೆಯ ವಿಷಯ.

  • ಪ್ರೀತಿ ಪವಾರ್ (54 ಕೆಜಿ)
  • ಜೈಸ್ಮಿನ್ ಲ್ಯಾಂಬೋರಿಯಾ (60 ಕೆಜಿ)
  • ಸಾಕ್ಷಿ ಚೌಧರಿ (51 ಕೆಜಿ)
  • ಪ್ರಿಯಾ ಘಂಘಾಸ್ (60 ಕೆಜಿ)
  • ಅರುಂಧತಿ ಚೌಧರಿ (70 ಕೆಜಿ)

ಇನ್ನು ಪುರುಷರ ವಿಭಾಗದ ಬಾಕ್ಸಿಂಗ್​ನಲ್ಲೂ ಎರಡು ಪದಕಗಳು ದೊರೆತಿವೆ. ಈ ಪದಕಗಳನ್ನು ತಂದುಕೊಟ್ಟಿರುವುದು…

  • ಸಚಿನ್ ಸಿವಾಚ್  (ಪುರುಷರ 60 ಕೆಜಿ ವಿಭಾಗ)
  • ಅಂಕುಶ್ ಪಂಘಾಲ್  (ಪುರುಷರ 80 ಕೆಜಿ ವಿಭಾಗ)

ಮೂವರಿಗೆ ಬೆಳ್ಳಿ ಪದಕ:

ಬಾಕ್ಸಿಂಗ್ ರಿಂಗ್​ನಲ್ಲಿ ಏಳು ಮಂದಿ ಚಿನ್ನದ ಪದಕ ಗೆದ್ದರೆ, ಮೂವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

  • ಲವ್ಲಿನಾ ಬೊರ್ಗೊಹೈನ್ (ಮಹಿಳೆಯ 70 ಕೆ.ಜಿ)
  • ಜಾದುಮಣಿ ಸಿಂಗ್ (ಪುರುಷರ 55 ಕೆಜಿ)
  • ನರೇಂದರ್ ಬರ್ವಾಲ್ (ಪುರುಷರ 90 ಕೆಜಿ)

ಸೋಮನ್ ರಾಣಾಗೆ ಚಿನ್ನ:

ಬಾಕ್ಸಿಂಗ್ ಮಾತ್ರವಲ್ಲದೆ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲೂ ಭಾರತೀಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪುರುಷರ ಶಾಟ್‌ಪುಟ್ F57 (ಪ್ಯಾರಾ ಅಥ್ಲೆಟಿಕ್ಸ್) ಸ್ಪರ್ಧೆಯಲ್ಲಿ ಭಾರತದ ಸೋಮನ್ ರಾಣಾ ಚಿನ್ನದ ಪದಕ ಗೆದ್ದರೆ, ಸಹ ಆಟಗಾರ ಶುಭಂ ಜುಯಲ್ ಬೆಳ್ಳಿ ಪದಕ ಗೆದ್ದು ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಎರಡು ಭಾರತದ ಧ್ವಜಗಳು ಹಾರಾಡುವಂತೆ ಮಾಡಿದರು.

ಟ್ರಿಪಲ್ ಜಂಪ್‌ನಲ್ಲಿ ಎರಡು ಪದಕ:

ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ದಾಖಲೆ ಬರೆದ ಗುಲ್ವೀರ್ ಸಿಂಗ್:

ಪುರುಷರ 5000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದರು. ಇದರೊಂದಿಗೆ, ಗ್ಲಾಸ್ಗೋ 2026ರ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಗುಲ್ವೀರ್ 10,000 ಮೀಟರ್ ಓಟದ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ಜೂಡೋದಲ್ಲಿ ಪದಕ:

ಮಹಿಳೆಯರ 63 ಕೆಜಿ ಜೂಡೋ ವಿಭಾಗದಲ್ಲಿ ಉನ್ನತಿ ಶರ್ಮಾ ಕಂಚಿನ ಪದಕ ಗೆದ್ದು ಭಾರತದ ಪದಕದ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದರು. ಈ ಭರ್ಜರಿ ಪದಕದ ಬೇಟೆಯೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 39 ಕ್ಕೇರಿದೆ.

Published On – 7:33 am, Sun, 2 August 26

Source link

ಧ್ರುವ್ ವಿಕ್ರಮ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್ – Kannada News | Crazy Kalyanam Actress Anupama Parameswaran reacts to Breakup rumour with Dhruv Vikram

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿರುವ ತಮ್ಮ ಬ್ರೇಕಪ್ (Breakup) ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಕಳೆದ ಒಂದು ವರ್ಷ ತಮಗೆ ಭಾವನಾತ್ಮಕವಾಗಿ ಅತ್ಯಂತ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅನುಪಮಾ ಪರಮೇಶ್ವರನ್ ಅವರು ‘ಕ್ರೇಜಿ ಕಲ್ಯಾಣಂ’ (Crazy Kalyanam) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದರು.

‘ನನಗಾಗಿ ಜೀವಿಸಲು ನಿರ್ಧರಿಸಿದ್ದೇನೆ’

ತಮ್ಮ ವೈಯಕ್ತಿಕ ಜೀವನದ ಮೇಲಿನ ವದಂತಿಗಳನ್ನು ನೇರವಾಗಿ ಖಚಿತಪಡಿಸದ ಅಥವಾ ನಿರಾಕರಿಸದ ಅನುಪಮಾ, ‘ಕಳೆದ ಒಂದು ವರ್ಷ ಬಹಳ ಸವಾಲಿನಿಂದ ಕೂಡಿತ್ತು. ಈ ಹಂತದಲ್ಲಿ ನಾನು ನನ್ನನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೆ. ಇಷ್ಟು ದಿನ ಬೇರೆಯವರಿಗಾಗಿ ಬದುಕುತ್ತಿದ್ದ ನಾನು, ಈಗ ನನಗಾಗಿ ಜೀವಿಸಲು ಮತ್ತು ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಲು ಆರಂಭಿಸಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಸ್ತುತ ತಾವು ನೆಮ್ಮದಿಯ ಜೀವನ ನಡೆಸುತ್ತಿದ್ದು, ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುವ ಬದಲು ಭವಿಷ್ಯದತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ವಿಚಾರವನ್ನೂ ಸಾರ್ವಜನಿಕವಾಗಿ ವಿವರಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಅನುಪಮಾ ಅವರು ಈಗ ಖುಷಿಯಾಗಿದ್ದಾರೆ ಎಂಬ ವಿಷಯವು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

ಧ್ರುವ್ ವಿಕ್ರಮ್ ಜೊತೆಗಿನ ವದಂತಿ:

‘ಬೈಸನ್’ ಸಿನಿಮಾದಲ್ಲಿ ತಮಿಳು ನಟ ಧ್ರುವ್ ವಿಕ್ರಮ್ ಅವರೊಂದಿಗೆ ಅನುಪಮಾ ನಟಿಸಿದ ನಂತರ ಇಬ್ಬರ ನಡುವೆ ಪ್ರೇಮಸಂಬಂಧವಿದೆ ಎಂಬ ವದಂತಿಗಳು ಬಲವಾಗಿದ್ದವು. ಇತ್ತೀಚೆಗೆ ಅನುಪಮಾ ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ್ ಅವರನ್ನು ಅನ್‌ಫಾಲೋ ಮಾಡಿದ್ದು ಹಾಗೂ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು. ಆದರೆ, ಈ ಜೋಡಿ ಈವರೆಗೆ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

ಸಿನಿಮಾ ರಂಗದಲ್ಲೂ ಸವಾಲು:

ಅನುಪಮಾ ಕಳೆದ ವರ್ಷ ತೆಲುಗಿನಲ್ಲಿ ನಟಿಸಿದ್ದ ‘ಪರದಾ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತ್ತು. ಪ್ರಸ್ತುತ ಅವರು ‘ಕ್ರೇಜಿ ಕಲ್ಯಾಣಂ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ತರುಣ್ ಭಾಸ್ಕರ್, ನರೇಶ್, ಅಖಿಲ್ ರಾಜ್, ಕಿರೀಟಿ ಮುಂತಾದವರು ಅಭಿನಯಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version