ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು: ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದ ಹೆಚ್​​ಡಿಡಿ – Kannada News

ಹೆಚ್​​.ಡಿ. ದೇವೇಗೌಡ ಮತ್ತು ನರೇಂದ್ರ ಮೋದಿImage Credit source: HD Deve Gowda X Account and PTI

ಬೆಂಗಳೂರು, ಜೂನ್​​ 10: ಮಾಜಿ ಪ್ರಧಾನಿ ದೇವೇಗೌಡರಿಗೆ ಎನ್​​ಡಿಎಯಿಂದ ರಾಜ್ಯಸಭಾ ಟಿಕೆಟ್​​ ನೀಡದಿರೋದು ಭಾರಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಈ ನಡುವೆ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್​​ಡಿಡಿ, ವಿರೋಧಿಗಳಿಗೆ ಖಡಕ್​​ ಸಂದೇಶ ರವಾನಿಸಿದ್ದಾರೆ. ನಾನು ಸುಮ್ಮನೆ ಕೂರಲ್ಲ, ನನ್ನ ಶಕ್ತಿ ಮೀರಿ‌ ಕೆಲಸ‌ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರವನ್ನ ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದವರು ತಿಳಿಸಿದ್ದಾರೆ. ನನ್ನ ಹಾಗೂ ಮೋದಿ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಭಾವಿಸಬೇಡಿ ಎಂದಿಯೂ ಅವರು ತಿವಿದಿದ್ದಾರೆ.

ಮುಖ್ಯಾಂಶಗಳು

  • ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ದೇವೇಗೌಡರ ಮಾತು
  • ‘ನನ್ನ-ಮೋದಿ ಸಂಬಂಧ ರಾಜ್ಯಸಭಾ ಸ್ಥಾನಕ್ಕೆ ಸೀಮಿತವಲ್ಲ’
  • ವಿರೋಧಿಗಳಿಗೆ ಕೌಂಟರ್​​ ಮೇಲೆ ಕೌಂಟರ್​​ ಕೊಟ್ಟ ಹೆಚ್​​ಡಿಡಿ

‘ನಮ್ಮದು ವೈಯಕ್ತಿಕ ಸಂಬಂಧ’

ನಾನು ರಾಜಕೀಯಕ್ಕೆ ಬಂದು 7 ದಶಕಗಳು ಕಳೆದಿವೆ. ಜನ ಪರ ಸೇವೆ ಸಲ್ಲಿಸಿದ್ದೇನೆ. ರಾಜ್ಯಸಭಾ ಸದಸ್ಯ ಆಗಬೇಕು ಎಂಬ ವ್ಯಾಮೋಹ ಇದ್ದಿದ್ರೆ ಕೇಂದ್ರದ ಮುಖಂಡರನ್ನ ಭೇಟಿ ಮಾಡ್ತಿದ್ದೆ. ಈ ನಡುವೆ ಕುಮಾರಸ್ವಾಮಿ ನಾವು ರಾಜ್ಯಸಭೆಗೆ ಅಪೇಕ್ಷೆ ಮಾಡಲ್ಲ ಎಂದಿದ್ದು, ಬಿಜೆಪಿಗೆ ಒಂದು ಸೀಟ್ ಸಿಗುತ್ತೆ. ನಾವ್ಯಾಕೆ 18 ಜನ ಇದ್ದು ಸೀಟ್ ಕೇಳಬೇಕು ಎಂದಿದ್ದರು. ಮೋದಿ ಮತ್ತು ನನ್ನ ನಡುವಿನ ಸಂಬಂಧ ಒಂದು ರಾಜ್ಯಸಭಾ ಸೀಟಿಂದ ಅಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮದು ವೈಯಕ್ತಿಕ ಸಂಬಂಧ. ಮೋದಿಯವರ ಬಗ್ಗೆ, ಆಡಳಿತದ ಬಗ್ಗೆ ನನ್ನ ಭಾವನೆಯನ್ನ ನಿರ್ಭಯವಾಗಿ ಹೇಳಿದ್ದೇನೆ. ಮೋದಿ ನಾಯಕತ್ವ ಸಮರ್ಥನೆ ಮಾಡಿದ್ದೇನೆ. ನನ್ನ ಮೋದಿಯವರ ಸಂಬಂಧ ಹೀಗೆ ಮುಂದುವರೆಯುತ್ತದೆ. ರಾಜ್ಯ ಸಭಾ ಸದಸ್ಯ ಸ್ಥಾನ ಇಲ್ಲ ಅಂದರೂ ಮೋದಿಯವರ ಜೊತೆ ನನ್ನ ಪತ್ರ ವ್ಯವಹಾರ ಇರುತ್ತದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ; ಜಗತ್ತಿನಾದ್ಯಂತ ಹರಿದುಬಂದ ಅಭಿನಂದನೆಗಳ ಮಹಾಪೂರ, ವಿಶ್ವ ನಾಯಕರು ಹೇಳಿದ್ದೇನು?

ಜೆಡಿಎಸ್​​ ಪಕ್ಷದ ಬೆಳವಣಿಗೆಗೂ ಶಕ್ತಿ ಮೀರಿ ಕೆಲಸ ಮಾಡ್ತೇನೆ. ಎನ್​ಡಿಎಯಲ್ಲಿ ಇದ್ದೇವೆ, ಆದ್ರೂ ಪಕ್ಷ ಸಂಘಟನೆ ಮಾಡಬೇಕು. ಜಿಬಿಎ ಚುನಾವಣೆಗೆ ಕಮಿಟಿ ಮಾಡಲಾಗಿದೆ. ಜಿಲ್ಲಾ ಪಂಚಾಯತ್​​ ಮತ್ತು ತಾಲೂಕು ಪಂಚಾಯತ್​​ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡ್ತೇವೆ. ರಾಜ್ಯಸಭೆ ಆಯ್ಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಿದ್ದಾರೆ. ಸ್ನೇಹಿತರು ದೇವೇಗೌಡರಿಗೆ ಟಿಕೆಟ್ ಕೊಡಬೇಕು ಅಂದಿದ್ದರು. ಆದರೆ ನಾನು ಅವರಿಗೆ ಸಮಾಧಾನ ಮಾಡಿದ್ದೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಚ್ಛೇದನ ವದಂತಿ ಬಗ್ಗೆ ಪೋಸ್ಟ್ ಹಾಕಿದ ನಟಿ ಶುಭಾ ಪೂಂಜಾ – Kannada News

ಕನ್ನಡದ ನಟಿ ಶುಭಾ ಪೂಂಜಾ ಅವರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅವರೇ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿತ್ತು. ಈ ಎಲ್ಲಾ ಚರ್ಚೆಗಳ ನಡುವೆ ನಟಿ ಶುಭಾ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಧ್ಯಮ ಮಿತ್ರರಲ್ಲಿ ಮತ್ತು ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿದ್ದಾರೆ.

ಶುಭಾ ಪೂಂಜಾ ಅವರು 2022ರಲ್ಲಿ ಬಾಯ್‌ಫ್ರೆಂಡ್ ಸುಮಂತ್ ಬಿಲ್ಲವ್ ಅವರನ್ನು ಮದುವೆಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು.ಇದೇ ಸಮಯದಲ್ಲಿ ಅವರು ಪತಿ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ವಿಚ್ಛೇದನ ಪಡೆಯುತ್ತಿರುವುದನ್ನು ನೇರವಾಗಿ ಹೌದು ಅಥವಾ ಅಲ್ಲ ಎಂದು ಹೇಳದ ಶುಭಾ ಪೂಂಜಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿತನ ಗೌರವಿಸುವಂತೆ ಕೋರಿದ್ದಾರೆ.

‘ನನ್ನ ಆತ್ಮೀಯ ಮಾಧ್ಯಮ ಮಿತ್ರರೇ, ನನ್ನ ಇಡೀ ಚಿತ್ರಜೀವನದ ಪಯಣದಲ್ಲಿ ನೀವು ನನಗೆ ಅಪಾರವಾದ ಬೆಂಬಲ, ಪ್ರೋತ್ಸಾಹ ಮತ್ತು ಪ್ರೀತಿಯನ್ನು ನೀಡಿದ್ದೀರಿ. ಅದಕ್ಕಾಗಿ ನಾನು ನಿಮಗೆ ಯಾವಾಗಲೂ ಆಭಾರಿಯಾಗಿರುತ್ತೇನೆ. ಇಂದು ನನ್ನದೊಂದು ಸಣ್ಣ ವಿನಂತಿ ಇದೆ. ದಯವಿಟ್ಟು ನನಗೆ, ಸುಮಂತ್‌ಗೆ ಹಾಗೂ ನಮ್ಮ ಕುಟುಂಬದವರಿಗೆ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೊಂಚ ಪ್ರೈವೆಸಿ ನೀಡಿ ಎಂದು ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಗೌರವ ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದ್ದಾರೆ.

‘ಸರಿಯಾದ ಸಮಯ ಬಂದಾಗ, ನಾನೇ ವೈಯಕ್ತಿಕವಾಗಿ ನಿಮ್ಮೆಲ್ಲರೊಂದಿಗೆ ಯಾವುದೇ ಅಪ್‌ಡೇಟ್ ಇದ್ದರೂ ಹಂಚಿಕೊಳ್ಳುತ್ತೇನೆ. ನಿಮ್ಮ ನಿರಂತರ ಪ್ರೀತಿ, ಬೆಂಬಲ ಮತ್ತು ದಯೆಗೆ ಮತ್ತೊಮ್ಮೆ ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶುಭಾ ಪೂಂಜಾ ಸಂಸಾರದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಅರ್ಜಿ

ಈಗ ಶುಭಾ ಅವರು ಮಾಡಿರುವ ಈ ಪೋಸ್ಟ್, ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿರುವುದನ್ನು ಪರೋಕ್ಷವಾಗಿ ಖಚಿತಪಡಿಸಿದಂತಿದೆ. ಆದರೂ, ಸ್ವತಃ ನಟಿಯೇ ಮುಂದಿನ ದಿನಗಳಲ್ಲಿ ಸ್ಪಷ್ಟನೆ ನೀಡುವುದಾಗಿ ಹೇಳಿರುವುದರಿಂದ ಊಹಾಪೋಹಗಳಿಗೆ ಸದ್ಯ ವಿರಾಮ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:11 pm, Wed, 10 June 26

Source link

ಭಾರತಿರಾಜ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ತಪ್ಪಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಲೆಜೆಂಡರಿ ಸಿನಿಮಾ ನಿರ್ದೇಶಕ ಭಾರತಿರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿರಾಜ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮಿಳು ಚಿತ್ರರಂಗದ ಹಾದಿಯನ್ನು ಬದಲಿಸಿದ ನಿರ್ದೇಶಕ ಎಂದು ಭಾರತಿರಾಜ ಅವರನ್ನು ಕರೆಯಲಾಗುತ್ತದೆ. ಭಾರತಿರಾಜ ಅವರ ಮೊದಲ ಸಿನಿಮಾ ‘16 ವಯದಿನಿಲೆ’ 1977 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಭಾರತಿರಾಜ ಅವರ ಮೊದಲ ಸಿನಿಮಾ ಕನ್ನಡದ್ದಾಗಬೇಕಿತ್ತು, ಆದರೆ ಅದು ಕೈತಪ್ಪಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರಿಂದ!

ಎಸ್​​ಪಿ ಬಾಲಸುಬ್ರಹ್ಮಣ್ಯಂ ಹಾಗೂ ಭಾರತಿರಾಜ ಇಬ್ಬರೂ ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ಆಪ್ತ ಗೆಳೆಯರು. 1970-80ರ ದಶಕದಲ್ಲಿ ಹಲವು ಪರ ಭಾಷೆ ಸಿನಿಮಾ ನಿರ್ದೇಶಕರುಗಳು ಕನ್ನಡದಲ್ಲಿ ಸಿನಿಮಾ ಮಾಡಲು ಗುಂಪು-ಗುಂಪಾಗಿ ಬರುತ್ತಿದ್ದರು. ಅದಕ್ಕೆ ಮುಖ್ಯ ಕಾರಣ, ಕರ್ನಾಟಕ ಸರ್ಕಾರ ನೀಡುತ್ತಿದ್ದ ಸಬ್ಸಿಡಿ. ಮಣಿರತ್ನಂ ಸಹ ತಮ್ಮ ಮೊದಲ ಸಿನಿಮಾ ಕನ್ನಡದಲ್ಲಿ ನಿರ್ದೇಶಿಸಿದ್ದು ಇದೇ ಕಾರಣಕ್ಕೆ. ಈ ಸಬ್ಸಿಡಿಗಾಗಿಯೇ ಭಾರತಿರಾಜ ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಉದ್ದೇಶಿಸಿದ್ದರು. ಆ ಐಡಿಯಾ ಕೊಟ್ಟಿದ್ದು ಎಸ್​​ಪಿ ಬಾಲಸುಬ್ರಹ್ಮಣ್ಯಂ.

ಇದನ್ನೂ ಓದಿ:ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

ಬೆಂಗಳೂರಿನಲ್ಲಿ ಎಸ್​​ಪಿಬಿ ಅವರ ಸಂಬಂಧಿಯೊಬ್ಬರ ಮನೆಯನ್ನೇ ಸಿನಿಮಾ ಆಫೀಸ್ ಎಂದು ತೋರಿಸಲಾಗಿತ್ತು. ಅಲ್ಲಿಯೇ ಭಾರತಿರಾಜ ಅವರು ತಮ್ಮ ಹೊಸ ಸಿನಿಮಾದ ಚಿತ್ರಕತೆಯನ್ನು ಬರೆದು ಅಲ್ಲಿಯೇ ಇರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿರ್ಮಾಪಕರು ಸಿಗಲಿಲ್ಲ. ಆದರೆ ಕೆಲ ತಿಂಗಳುಗಾದ ಬಳಿಕ ನಿರ್ಮಾಪಕ ಸಿಕ್ಕು, ಚಿತ್ರಕತೆ ಕೊಡುವಂತೆ ಕೇಳಿದರೆ, ಎಸ್​​ಪಿಬಿ ಅವರ ಸಂಬಂಧಿ ಆ ಚಿತ್ರಕತೆ ಹೊಂದಿದ್ದ ಪುಸ್ತಕವನ್ನು ಕಳೆದುಬಿಟ್ಟಿದ್ದರಂತೆ.

ಎಸ್​​ಪಿಬಿ ಹೇಳಿರುವಂತೆ ಅದಾಗಲೇ ಅವರ ಸಂಬಂಧಿ ಮೂರು ಬಾರಿ ಮನೆ ಚೇಂಜ್ ಮಾಡಿದ್ದನಂತೆ. ಅದರಿಂದಾಗಿ ಚಿತ್ರಕತೆ ಎಲ್ಲೋ ಮಿಸ್ ಆಗಿ ಹೋಗಿತ್ತಂತೆ. ಆ ವಿಷಯ ತಿಳಿದು, ಭಾರತಿರಾಜ, ತೀರ ಕೆಟ್ಟ-ಕೆಟ್ಟದಾಗಿ ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಬೈದಿದ್ದರಂತೆ. ಆದರೆ ಆದದ್ದೆಲ್ಲ ಒಳ್ಳೆಯದಕ್ಕೆ ಎಂದಿರುವ ಎಸ್​​ಪಿಬಿ, ಅದರಿಂದಾಗಿ ‘16 ವಯದಿನಿಲೆ’ ಸಿನಿಮಾ ನಿರ್ಮಾಣ ಆಯ್ತು’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Flight Safety Secret: ವಿಮಾನಗಳಲ್ಲಿ ಧೂಮಪಾನ ನಿಷಿದ್ಧವಾಗಿದ್ದರೂ, ಟಾಯ್ಲೆಟ್‌ನಲ್ಲಿ ಆ್ಯಶ್ ಟ್ರೇ ಇಡುವುದೇಕೆ ಗೊತ್ತಾ? – Kannada News

ವಿಮಾನಗಳಲ್ಲಿ ಸ್ಮೋಕಿಂಗ್ ಬ್ಯಾನ್Image Credit source: popsci.com

ನೀವು ಎಂದಾದರೂ ವಿಮಾನದಲ್ಲಿ ಪ್ರಯಾಣಿಸುವಾಗ ಶೌಚಾಲಯಕ್ಕೆಹೋಗಿದ್ದರೆ, ಅಲ್ಲಿನ ಬಾಗಿಲು ಅಥವಾ ಸಿಂಕ್ ಬಳಿ ಸಣ್ಣದೊಂದು ಬೂದಿಯನ್ನು ಉದುರಿಸುವ ತಟ್ಟೆ (Ashtray) ಇರುವುದನ್ನು ಖಂಡಿತ ಗಮನಿಸಿರುತ್ತೀರಿ. ಇದನ್ನು ನೋಡಿದಾಗ “ವಿಮಾನದೊಳಗೆ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆಯಲ್ಲ, ಹಾಗಿದ್ದರೂ ಇಲ್ಲಿ ಏಕೆ ಇಟ್ಟಿದ್ದಾರೆ?” ಎಂಬ ಪ್ರಶ್ನೆ ಮತ್ತು ಆಶ್ಚರ್ಯ ಎಲ್ಲರ ಮನಸ್ಸಿನಲ್ಲೂ ಮೂಡುವುದು ಸಹಜ.

ಮೇಲ್ನೋಟಕ್ಕೆ ಇದು ವಿಮಾನಯಾನ ಸಂಸ್ಥೆಗಳ ಮೂರ್ಖತನದಂತೆ ಕಂಡರೂ, ಇದರ ಹಿಂದೆ ಪ್ರಯಾಣಿಕರ ಪ್ರಾಣ ಉಳಿಸುವ ಅತ್ಯಂತ ಗಂಭೀರವಾದ ಮತ್ತು ರೋಮಾಂಚಕವಾದ ಸುರಕ್ಷತಾ ಕಾರಣವಿದೆ! ಆ ಸತ್ಯ ಏನೆಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ವಿಮಾನಗಳಲ್ಲಿ ಧೂಮಪಾನ ನಿಷೇಧದ ಇತಿಹಾಸ:

1970 ಮತ್ತು 80ರ ದಶಕದಲ್ಲಿ ವಿಮಾನದೊಳಗೆ ಕುಳಿತು ಆರಾಮವಾಗಿ ಧೂಮಪಾನ ಮಾಡಲು ಮುಕ್ತ ಅವಕಾಶವಿತ್ತು. ಆದರೆ ಪ್ರಯಾಣಿಕರ ಆರೋಗ್ಯ, ಸಹ-ಪ್ರಯಾಣಿಕರ ನೆಮ್ಮದಿ ಮತ್ತು ಸುರಕ್ಷತೆಯ ದೃಷ್ಟಿಯಿಂದ 1990ರ ದಶಕದ ವೇಳೆಗೆ ವಿಮಾನಗಳ ಒಳಗೆ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.

ಇಂದು ಯಾವುದೇ ವಿಮಾನದೊಳಗೆ ಸಿಗರೇಟ್ ಅಥವಾ ಇ-ಸಿಗರೇಟ್ ಸೇದುವುದು ಕಾನೂನುಬಾಹಿರ ಮತ್ತು ದೊಡ್ಡ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ, ಇಂದಿಗೂ ತಯಾರಾಗುವ ಬೋಯಿಂಗ್ ಅಥವಾ ಏರ್‌ಬಸ್‌ನಂತಹ ಅತ್ಯಾಧುನಿಕ ವಿಮಾನಗಳ ಶೌಚಾಲಯಗಳಲ್ಲೂ ಈ ಅಷ್ಟ್ರೇಗಳನ್ನು ಅಳವಡಿಸುವುದನ್ನು ನಿಲ್ಲಿಸಿಲ್ಲ.

ನಿಯಮ ಮುರಿಯುವವರಿಗಾಗಿ ಮಾಡಲಾದ “ಬ್ಯಾಕಪ್” ವ್ಯವಸ್ಥೆ:

ವಿಮಾನಯಾನ ನಿಯಂತ್ರಣ ಮಂಡಳಿಗಳು ಮತ್ತು ವಿಮಾನ ತಯಾರಕ ಕಂಪನಿಗಳು ಮನುಷ್ಯನ ಸಹಜ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ. ನಿಯಮಗಳ ಪ್ರಕಾರ ವಿಮಾನದಲ್ಲಿ ಧೂಮಪಾನ ನಿಷೇಧವಾಗಿದ್ದರೂ ಮತ್ತು ಸಿಕ್ಕಿಬಿದ್ದರೆ ಭಾರಿ ದಂಡ ಹಾಗೂ ಜೈಲು ಶಿಕ್ಷೆಯಾಗುತ್ತದೆಯಾದರೂ, ಕೆಲವರು ಕಾನೂನು ಮುರಿದು ಶೌಚಾಲಯದೊಳಗೆ ಕದ್ದುಮುಚ್ಚಿ ಸಿಗರೇಟ್ ಸೇದುವ ಸಾಹಸ ಮಾಡಿಯೇ ಮಾಡುತ್ತಾರೆ ಎಂಬುದು ಅವರಿಗೆ ತಿಳಿದಿದೆ.

ಇದನ್ನೂ ಓದಿ: ಕಾರ್ಪೊರೇಟ್ ಕೆಲಸಕ್ಕೆ ಬೇಸತ್ತು ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಯುವಕರು! ಒಂದು ಜಾಹೀರಾತು, 700ಕ್ಕೂ ಹೆಚ್ಚು ಅರ್ಜಿ!

ಒಂದು ವೇಳೆ ಯಾರಾದರೂ ಅಂತಹ ತಪ್ಪು ಕೆಲಸ ಮಾಡಿದರೆ, ಅವರು ಧೂಮಪಾನ ಮುಗಿಸಿದ ನಂತರ ಉರಿಯುತ್ತಿರುವ ಸಿಗರೇಟ್ ತುಂಡನ್ನು (Cigarette Butt) ಎಲ್ಲಿ ಹಾಕಬೇಕು? ಶೌಚಾಲಯದಲ್ಲಿ ಅಷ್ಟ್ರೇ ಇಲ್ಲದಿದ್ದರೆ, ಅವರು ಗಾಬರಿಯಲ್ಲಿ ಅಥವಾ ಸಾಕ್ಷ್ಯ ನಾಶಪಡಿಸಲು ಆ ಉರಿಯುತ್ತಿರುವ ಸಿಗರೇಟ್ ಅನ್ನು ಕಸದ ಬುಟ್ಟಿಗೆ (Trash Can) ಎಸೆಯುವ ಸಾಧ್ಯತೆ ಇರುತ್ತದೆ.

ಕಸದ ಬುಟ್ಟಿಯಲ್ಲಿ ಸಾಮಾನ್ಯವಾಗಿ ಬಳಸಿದ ಟಿಶ್ಯೂ ಪೇಪರ್‌ಗಳು ಇರುವುದರಿಂದ, ಉರಿಯುತ್ತಿರುವ ಸಿಗರೇಟ್‌ನಿಂದಾಗಿ ಕ್ಷಣಾರ್ಧದಲ್ಲಿ ಭೀಕರ ಬೆಂಕಿ ಹೊತ್ತಿಕೊಳ್ಳಬಹುದು. ಆಕಾಶದಲ್ಲಿ ಹಾರುತ್ತಿರುವ ವಿಮಾನಕ್ಕೆ ಬೆಂಕಿ ಬಿದ್ದರೆ ನೂರಾರು ಜನರ ಪ್ರಾಣಕ್ಕೆ ಅಪಾಯ ಗ್ಯಾರಂಟಿ. ಹಾಗಾಗಿ, ಯಾರಾದರೂ ನಿಯಮ ಮೀರಿ ಧೂಮಪಾನ ಮಾಡಿದರೂ ಸಹ, ಅವರು ವಿಮಾನಕ್ಕೆ ಬೆಂಕಿ ಹಚ್ಚದಂತೆ ಸಿಗರೇಟ್ ಅನ್ನು ಸುರಕ್ಷಿತವಾಗಿ ಆರಿಸಲು ಈ ಅಷ್ಟ್ರೇಗಳನ್ನು ಇಡಲಾಗಿರುತ್ತದೆ.

1973ರ ಕರಾಳ ವಿಮಾನ ದುರಂತ:

ವಿಮಾನದ ಟಾಯ್ಲೆಟ್‌ಗಳಲ್ಲಿ ಅಷ್ಟ್ರೇ ಇಡುವುದನ್ನು ಕಡ್ಡಾಯಗೊಳಿಸಲು ಒಂದು ಕರಾಳ ಇತಿಹಾಸವಿದೆ. 1973ರಲ್ಲಿ ‘ವಾರಿಗ್ ಫ್ಲೈಟ್ 820’ (Varig Flight 820) ಎಂಬ ವಿಮಾನವು ಬ್ರೆಜಿಲ್‌ನಿಂದ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದಾಗ, ಪ್ರಯಾಣಿಕನೊಬ್ಬ ಸಿಗರೇಟ್ ತುಂಡನ್ನು ಶೌಚಾಲಯದ ಕಸದ ಬುಟ್ಟಿಗೆ ಎಸೆದಿದ್ದನು. ಇದರಿಂದ ವಿಮಾನದ ಹಿಂಭಾಗದ ಶೌಚಾಲಯದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡು, ಇಡೀ ಕ್ಯಾಬಿನ್ ಒಳಗೆ ದಟ್ಟವಾದ ವಿಷಕಾರಿ ಹೊಗೆ ಆವರಿಸಿತು. ಹೊಗೆಯ ತೀವ್ರತೆಗೆ ವಿಮಾನದಲ್ಲಿದ್ದ ಪ್ರಯಾಣಿಕರು ಪ್ರಜ್ಞೆ ಕಳೆದುಕೊಂಡರು. ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಆ ಅಪಘಾತದಲ್ಲಿ 123 ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪಿದರು. ಈ ಘೋರ ದುರಂತದ ನಂತರವೇ ವಿಮಾನದ ಶೌಚಾಲಯಗಳಲ್ಲಿ ಕಡ್ಡಾಯವಾಗಿ ಅಷ್ಟ್ರೇ ಇರಲೇಬೇಕು ಎಂಬ ಅಂತರರಾಷ್ಟ್ರೀಯ ನಿಯಮವನ್ನು ತರಲಾಯಿತು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತಿರಾಜಾ ಮತ್ತು ರಜನಿಕಾಂತ್ ಮಧ್ಯೆ ಇದ್ದ ವಿವಾದವೇನು?

ಲೆಜೆಂಡರಿ ನಿರ್ದೇಶಕ ಭಾರತೀರಾಜಾ (Bharathiraja) ಅವರು ಇಂದು (ಜೂನ್ 10) ಮುಂಜಾನೆ ನಿಧನ ಹೊಂದಿದ್ದಾರೆ. ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಭಾರತಿರಾಜಾ ಅವರ ನಿಧನವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಆವೇದನೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಗಣ್ಯರು, ಭಾರತಿರಾಜಾ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ. ಭಾರತಿರಾಜ ಅದ್ಭುತ ನಿರ್ದೇಶಕ ಮತ್ತು ನಟ ಆಗಿದ್ದ ಜೊತೆಗೆ ಸಿನಿಮಾ, ರಾಜಕೀಯ ವಿಮರ್ಶಕರೂ ಆಗಿದ್ದರು. ನಿರ್ದೇಶಕ ಭಾರತಿರಾಜಾ ಅವರಿಗೆ ಚಿತ್ರರಂಗದ ಎಲ್ಲರೊಟ್ಟಿಗೆ ಆಪ್ತ ಬಂಧವಿತ್ತು, ಆದರೆ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ಮುನಿಸು ಸಹ ಇತ್ತು.

ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ಹಲವು ವರ್ಷ ಮುನಿಸು ಇರಿಸಿಕೊಂಡಿದ್ದರು ನಿರ್ದೇಶಕ. ಭಾರತಿರಾಜಾ ನಿರ್ದೇಶಿಸಿದ ಮೊಟ್ಟ ಮೊದಲ ಸಿನಿಮಾ ‘16 ವಯದಿನಿಲೆ’ ನಲ್ಲಿ ರಜನೀಕಾಂತ್ ವಿಲನ್, ಕಮಲ್ ಹಾಸನ್ ನಾಯಕ. ಅದಾದ ಬಳಿಕ ‘ಕೋಡಿ ಪರಕುಟ್ಟು’ ಎಂಬ ಸಿನಿಮಾನಲ್ಲಿಯೂ ರಜನೀಕಾಂತ್ ನಟಿಸಿದ್ದರು. ಆದಾಗ್ಯೂ ಭಾರತೀರಾಜಾ ಬಹಿರಂಗವಾಗಿಯೇ ಹಲವಾರು ಬಾರಿ ರಜನಿ ವಿರುದ್ಧ ತೀವ್ರ ವಿಮರ್ಶೆ ಮಾಡಿದ್ದರು. ರಜನಿ ತಮಿಳಿಗರಲ್ಲ, ಅವರು ಕರ್ನಾಟಕದ ವ್ಯಕ್ತಿ ಎಂದು ಹಲವು ಸಂದರ್ಭಗಳಲ್ಲಿ ಈ ಲೆಜೆಂಡರಿ ನಿರ್ದೇಶಕರು ಕಾಂಟ್ರವರ್ಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

ತಮಿಳುನಾಡು – ಕರ್ನಾಟಕ ಕಾವೇರಿ ಜಲವಿವಾದದ ಸಮಯದಲ್ಲಿ ತಮಿಳು ನಟರು ಪ್ರತಿಭಟನೆ ಮಾಡಿದ್ದರು. ಆದರೆ ಈ ಆಂದೋಲನಗಳು ತೀವ್ರ ರೂಪಕ್ಕೆ ತಿರುಗಿ ಪೊಲೀಸರ ಮೇಲೆಯೇ ದಾಳಿ ನಡೆಯುವ ಹಂತಕ್ಕೆ ತಲುಪಿದ್ದವು. ಆದರೆ ಪೊಲೀಸರ ಮೇಲಿನ ದಾಳಿಯನ್ನು ರಜನಿಕಾಂತ್ ಖಂಡಿಸಿದ್ದರು. ಇದರಿಂದ ಭಾರತೀರಾಜಾ ಅವರು ರಜನಿ ಅವರನ್ನು ತೀವ್ರವಾಗಿ ವಿಮರ್ಶಿಸಿದ್ದರು. ‘ರಜನಿ ಕರ್ನಾಟಕದವರು. ಅದಕ್ಕಾಗಿಯೇ ತಮಿಳುನಾಡಿನ ನೀರಿಗಾಗಿ ಹೋರಾಡುತ್ತಿಲ್ಲ. ತಮಿಳರ ಮೇಲೆ ದಾಳಿ ನಡೆದಾಗ ಏಕೆ ಮೌನವಾಗಿದ್ದಿರಿ?’ ಎಂದು ಬಹಿರಂಗವಾಗಿಯೇ ಸೂಪರ್‌ಸ್ಟಾರ್ ವಿರುದ್ಧ ಕಾಮೆಂಟ್ ಮಾಡಿದ್ದರು. ಇನ್ನು ಕೆಲವು ವರ್ಷಗಳ ಹಿಂದೆ ತಾವು ರಾಜಕೀಯಕ್ಕೆ ಬರುವುದಾಗಿ ರಜನಿಕಾಂತ್ ಘೋಷಿಸಿದ ತಕ್ಷಣ ಭಾರತೀರಾಜಾ ಮತ್ತೆ ಆಕ್ರೋಶ ಹೊರಹಾಕಿದ್ದರು. ‘ರಜನಿ ಪಕ್ಷ ಸ್ಥಾಪಿಸಬಹುದು, ಆದರೆ ಅವರು ಗೆದ್ದರೆ ಮುಖ್ಯಮಂತ್ರಿ ಆಗಬಾರದು. ತಮಿಳು ರಾಜ್ಯವನ್ನು ತಮಿಳರೇ ಆಳಬೇಕು’ ಎಂದು ಸೂಪರ್‌ಸ್ಟಾರ್ ಅವರನ್ನು ಈ ಲೆಜೆಂಡರಿ ನಿರ್ದೇಶಕರು ವಿರೋಧಿಸಿದ್ದರು.

ಇದನ್ನೂ ಓದಿ:ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ?

ಭಾರತೀರಾಜಾ ಅವರಿಗೆ ತಮಿಳು ಸಂಸ್ಕೃತಿ ಮತ್ತು ತಮಿಳರ ಗುರುತಿನ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಲೇ ಇದ್ದರು. ಇದೇ ಹಾದಿಯಲ್ಲಿ ತಮಿಳರ ಬೆಂಬಲವಾಗಿ ಅವರು ಮಾಡಿದ ಕೆಲವು ಕಾಮೆಂಟ್‌ಗಳು ತೀವ್ರ ವಿವಾದಗಳಿಗೆ ಕಾರಣವಾಗಿದ್ದವು. ಅದರ ಭಾಗವಾಗಿಯೇ ಅವರು ರಜನಿ ಅವರನ್ನು ವಿಮರ್ಶಿಸಿದ್ದರೇ ಹೊರತು, ವೈಯಕ್ತಿಕವಾಗಿ ಇವರ ಮಧ್ಯೆ ಯಾವುದೇ ದ್ವೇಷ ಅಥವಾ ಜಗಳಗಳಿರಲಿಲ್ಲ.

ಹಲವು ರೀತಿಯ ಕತೆಗಳನ್ನು ಸಿನಿಮಾ ಮಾಡಿದ್ದ ಭಾರತಿರಾಜಾ, ಪ್ರೇಮಕಥೆ, ಸಾಮಾಜಿಕ ಕತೆಗಳು, ಸಂದೇಶ ಹೊಂದಿದ ಸಿನಿಮಾಗಳು, ನವ್ಯ ಮಾದರಿಯ ಸಿನಿಮಾಗಳನ್ನು ಮಾಡುತ್ತಲೇ, ಮತ್ತೊಂದು ಕಡೆ ‘ಎರ್ರ ಗುಲಾಬೀಲು’, ‘ಟಿಕ್ ಟಿಕ್ ಟಿಕ್’ ನಂತಹ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ತೆರೆಗೆ ತಂದಿದ್ದರು. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಎಷ್ಟೋ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಭಾರತೀರಾಜಾ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ರಜನೀಕಾಂತ್ ಅವರು ಮುನಿಸುಗಳನ್ನು ಬಿದಿಗಿಟ್ಟು, ಭಾರತಿರಾಜಾ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತನಿಗೆ ಸಿಗರೇಟ್ ಕಲಿಸಿ, ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಬಂಗಾರ ದೋಚಿದ ಖದೀಮರ ಬಂಧನ! – Kannada News

ಕೊಪ್ಪಳ, ಜೂನ್ 10: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದುವ ದುಶ್ಚಟ ಹಿಡಿಸಿ ಬರೋಬ್ಬರಿ 120 ಗ್ರಾಂ ಬಂಗಾರ ದೋಚಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ. ಈ ಹಿನ್ನೆಲೆ ಬಸವರಾಜ್ ಅಂಗಡಿ ಮತ್ತು ನವೀನ್ ಎಂಬುವವರನ್ನು ಬಂಧಿಸಲಾಗಿದ್ದು, ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಮೊದಲು ಬಾಲಕನಿಗೆ ಸಿಗರೇಟ್ ಅಭ್ಯಾಸ ಮಾಡಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ನಂತರ, ಈ ವೀಡಿಯೊವನ್ನು ನಿನ್ನ ತಂದೆಗೆ ತೋರಿಸುತ್ತೇವೆ ಎಂದು ಬೆದರಿಸಿ ಹಣಕ್ಕಾಗಿ ಪೀಡಿಸಿದ್ದರು. ಬ್ಲಾಕ್‌ಮೇಲ್‌ಗೆ ಹೆದರಿದ ಬಾಲಕ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ತಂದು ಇವರಿಗೆ ನೀಡಿದ್ದನು. ಮನೆಯಲ್ಲಿ ಚಿನ್ನ ನಾಪತ್ತೆಯಾಗಿರುವುದನ್ನು ಗಮನಿಸಿದ ಪೋಷಕರು ಕುಷ್ಟಗಿ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರಿಂದ 120 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ – Kannada News

ಝೆಪ್ಟೋ ಸಹ-ಸ್ಥಾಪಕ ಆದಿತ್ ಪಲಿಚಾImage Credit source: Moneycontrol

ನವದೆಹಲಿ, ಜೂನ್ 10: ಕ್ವಿಕ್ ಕಾಮರ್ಸ್ ಕ್ಷೇತ್ರದ ದೈತ್ಯನೆನಿರುವ ಝೆಪ್ಟೋ (Zepto) ಸಂಸ್ಥೆಯ ಸಹ-ಸ್ಥಾಪಕ ಆದಿತ್ ಪಲಿಚಾ (Aadit Palicha) ಅವರು ಷೇರುಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿರುವ (Publicly Listed) ಕಂಪನಿಯ ಅತಿ ಕಿರಿಯ ಎಂಡಿ (MD) ಮತ್ತು ಸಿಇಒ (CEO) ಎನಿಸಲಿದ್ದಾರೆ. 23 ವರ್ಷದ ಆದಿತ್ ಪಲಿಚಾ ಅವರು ಪ್ರಸಕ್ತ ಝೆಪ್ಟೋದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಈ ಸಂಸ್ಥೆ ಐಪಿಒಗೆ ಮುಂದಾಗಿದ್ದು, ಅದು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಲಿಸ್ಟ್ ಆದಲ್ಲಿ ಆದಿತ್ ಪಲಿಚಾ ಅವರು ಲಿಸ್ಟೆಡ್ ಕಂಪನಿಯೊಂದರ ಅತ್ಯಂತ ಕಿರಿಯ ಸಿಇಒ ಮತ್ತು ಎಂಡಿ ಎನ್ನುವ ದಾಖಲೆಗೆ ಬಾಜನರಾಗಲಿದ್ದಾರೆ.

ಕೇವಲ ಐದು ವರ್ಷಗಳ ಹಿಂದೆ ಅಮೆರಿಕದ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ದಿನಸಿ ಸಾಮಾನುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ರೂಪಿಸುವ ಒಂದು ಐಡಿಯಾದ ಪ್ರಯೋಗದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಕಾಲೇಜು ತೊರೆದು ಕಿರಾನಾಕಾರ್ಟ್ ಎನ್ನುವ ಕಂಪನಿ ಆರಂಭಿಸಿದರು. 2021ರಲ್ಲಿ ಝೆಪ್ಟೋ ಶುರುವಾಯಿತು. 10 ನಿಮಿಷದಲ್ಲಿ ಜನರ ಮನೆಗಳಿಗೆ ದಿನಸಿ ತಲುಪಿಸುವ ಇವರ ಬ್ಯುಸಿನೆಸ್ ಐಡಿಯಾ ಆಗ ಬಹಳ ಜನರಿಗೆ ಅಚ್ಚರಿ ತಂದಿತ್ತು. ಆದರೆ, ಸಾವಿರಾರು ಕೋಟಿ ರೂ ಬ್ಯುಸಿನೆಸ್ ಇರುವ ಕ್ವಿಕ್ ಕಾಮರ್ಸ್ ಕ್ಷೇತ್ರದ ಹುಟ್ಟು ಮತ್ತು ಬೆಳವಣಿಗೆಗೆ ಆದಿತ್ ಪಲಚಾ ಹಾಗೂ ಅವರ ಬಾಲ್ಯಮಿತ್ರ ಮತ್ತು ಸಿಟಿಒ ಆಗಿರುವ ಕೈವಲ್ಯ ವೋಹ್ರಾ ನಾಂದಿ ಹಾಡಿದ್ದರು.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ತೊರೆದಿದ್ದ ಆದಿತ್ ಪಲಿಚಾ ಮತ್ತು ಅವರ ಬಾಲ್ಯದ ಸ್ನೇಹಿತ ಕೈವಲ್ಯ ವೋಹ್ರಾ ಅವರು, ಕೇವಲ 5 ವರ್ಷಗಳ ಅಂತರದಲ್ಲಿ ತಮ್ಮ ಸ್ಟಾರ್ಟ್‌ಅಪ್ ಅನ್ನು ದಲಾಲ್ ಸ್ಟ್ರೀಟ್‌ಗೆ (ಷೇರು ಮಾರುಕಟ್ಟೆ) ಕೊಂಡೊಯ್ಯುವ ಹಂತಕ್ಕೆ ತಲುಪಿಸಿದ್ದಾರೆ.

ಆದಿತ್ ಪಲಿಚಾ ಅವರದ್ದು ವಿಶ್ವದಾಖಲೆಯಾ?

ಕೆನಡಾದ ಎಂಬಾರ್ಕ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದಾಗ ಅದರ ಸಿಇಒ ಹಾಗೂ ಸಂಸ್ಥಾಪಕ ಅಲೆಕ್ಸ್ ರೋಡ್ರಿಗೆಸ್ ಅವರ ವಯಸ್ಸು 26 ಮಾತ್ರ. 19ನೇ ವಯಸ್ಸಿನಲ್ಲಿ ಫೇಸ್​ಬುಕ್ ಸ್ಥಾಪಿಸಿದ ಮಾರ್ಕ್ ಜುಕರ್​ಬರ್ಗ್ ಅವರು 28ನೇ ವಯಸ್ಸಿನಲ್ಲಿದ್ದಾಗ ಅವರ ಕಂಪನಿಯು ಪಬ್ಲಿಕ್ ಲಿಸ್ಟೆಡ್ ಕಂಪನಿ ಎನಿಸಿತು. ಆದರೆ, ಝೆಪ್ಟೋ ಸಿಇಒ ಆದಿತ್ ಪಲಿಚಾ ಅವರು ಅವರೆಲ್ಲರನ್ನೂ ಮೀರಿಸುವ ಕಿರಿಯ ಎನಿಸಿದ್ದಾರೆ.

ಝೆಪ್ಟೋ ಐಪಿಒ (IPO) ವಿವರಗಳು

ಝೆಪ್ಟೋ ತನ್ನ ಐಪಿಒಗಾಗಿ ಸೆಬಿಗೆ (SEBI) ಕರಡು ಪತ್ರಗಳನ್ನು ಸಲ್ಲಿಸಿದೆ. ಈ ಐಪಿಒ ಗಾತ್ರವು ಸುಮಾರು 9,000 ಕೋಟಿ ರೂ. ನಿಂದ 10,000 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ 8,010 ಕೋಟಿ ರೂ.ಗಳ ಹೊಸ ಷೇರುಗಳ ವಿತರಣೆ ಸೇರಿದೆ.

ಝೆಪ್ಟೋ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವ ಮೂಲಕ ಆರಂಭವಾಗಿ, ಇಂದು ಭಾರತದ ಅತಿದೊಡ್ಡ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಬೆಳೆದಿದೆ. ಪ್ರಸ್ತುತ ಕಂಪನಿಯು 66 ನಗರಗಳಲ್ಲಿ 1,139 ಡಾರ್ಕ್ ಸ್ಟೋರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

FY26 ರಲ್ಲಿ ಕಂಪನಿಯು 22,624 ಕೋಟಿ ರೂಪಾಯಿಗಳ ಕಾರ್ಯಾಚರಣೆಯ ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಂಪನಿಯು ಇನ್ನೂ ನಷ್ಟದಲ್ಲಿದ್ದು, FY26 ರಲ್ಲಿ 5,905 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ.

ಐಪಿಒ ಪ್ರಕ್ರಿಯೆಯಲ್ಲಿ ಆದಿತ್ ಪಲಿಚಾ ಅಥವಾ ಕೈವಲ್ಯ ವೋಹ್ರಾ ತಮ್ಮ ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ. ಈ ಐಪಿಒ ಸಂಪೂರ್ಣವಾಗಿ ಹೂಡಿಕೆದಾರರ ಒಡೆತನದ ಷೇರುಗಳ ಮಾರಾಟವನ್ನು ಒಳಗೊಂಡಿದೆ.

ಈ ಸಾಧನೆಯು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ ಮತ್ತು ಅತಿ ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವ ಮೊದಲ ನಿದರ್ಶನಗಳಲ್ಲಿ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

9 ಸ್ಟಾರ್ ಆಟಗಾರರು ಔಟ್: ಏಷ್ಯನ್ ಗೇಮ್ಸ್​ಗೆ ಪಾಕಿಸ್ತಾನ್ ತಂಡ ಪ್ರಕಟ – Kannada News

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದ ನಾಯಕನಾಗಿ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ. ಹಾಗೆಯೇ ಯುವ ಬ್ಯಾಟರ್ ಅಬ್ದುಲ್ ಸಮದ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಪಾಕಿಸ್ತಾನ್ ತಂಡದ ನಾಯಕನಾಗಿ ಸಲ್ಮಾನ್ ಅಲಿ ಅಘಾ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅದರಂತೆ ಏಷ್ಯಾಡ್ ಟೂರ್ನಿಯಲ್ಲಿ ಸಾಹಿಬ್​ಝಾದ ಫರ್ಹಾನ್ ಮುಂದಾಳತ್ವದಲ್ಲಿ ಪಾಕ್ ಪಡೆ ಕಣಕ್ಕಿಳಿಯಲಿವೆ.

ಸ್ಟಾರ್ ಆಟಗಾರರಿಗೆ ಗೇಟ್ ಪಾಸ್:

ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಪಿಸಿಬಿ ಆಯ್ಕೆ ಸಮಿತಿಯು ಈ ಬಾರಿ ಸಂಪೂರ್ಣ ಯುವ ಆಟಗಾರರಿಂದ ಕೂಡಿದ ಹೊಸ ಪ್ರಯೋಗಕ್ಕೆ ಕೈಹಾಕಿದೆ. ಪರಿಣಾಮ ಅನುಭವಿ ಹಾಗೂ ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನ್ ಟಿ20 ತಂಡದಿಂದ ಹೊರಬಿದ್ದಿರುವ ಪ್ರಮುಖ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಸಲ್ಮಾನ್ ಅಲಿ ಅಘಾ
  • ಬಾಬರ್ ಆಝಂ
  • ಶಾಹೀನ್ ಅಫ್ರಿದಿ
  • ಮೊಹಮ್ಮದ್ ರಿಝ್ವಾನ್
  • ಶಾದಾಬ್ ಖಾನ್
  • ನಸೀಮ್ ಶಾ
  • ಹ್ಯಾರಿಸ್ ರೌಫ್
  • ಇಫ್ತಿಕಾರ್ ಅಹ್ಮದ್
  • ಫಖರ್ ಜಮಾನ್

ಹೊಸ ಮುಖಗಳಿಗೆ ಮಣೆ:

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈ ಬಾರಿ ನಾಲ್ಕು ಹೊಸ ಆಟಗಾರರಿಗೆ ಅವಕಾಶ ನೀಡಿದೆ. ಅದರಂತೆ ಆಕಿಫ್ ಜಾವೇದ್, ಅಲಿ ರಾಝ, ಮಾಝ್ ಸದಾಕತ್ ಮತ್ತು ಸಾದ್ ಮಸೂದ್ ಅವರು ಏಷ್ಯನ್ ಗೇಮ್ಸ್ ವೇದಿಕೆಯಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಇನ್ನು ಕಳೆದ ಟಿ20 ವಿಶ್ವಕಪ್‌ನಲ್ಲಿ ಮಿಂಚಿದ್ದ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಮತ್ತು ಆರಂಭಿಕ ಆಟಗಾರ ಸೈಮ್ ಅಯೂಬ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಅದರಂತೆ ಪಾಕಿಸ್ತಾನ್ ಟಿ20 ತಂಡ ಈ ಕೆಳಗಿನಂತಿದೆ…

ಪಾಕಿಸ್ತಾನ್ ಟಿ20 ತಂಡ:  ಸಾಹಿಬ್‌ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ, ಮೊಹಮ್ಮದ್ ಸಲ್ಮಾನ್ ಮಿರ್ಝ.

ಇದನ್ನೂ ಓದಿ: ಬ್ಯಾಟ್ ಲಾಕ್ ಮಾಡಿದ ಕೀಪರ್: ಟೀಮ್ ಇಂಡಿಯಾ ಆಟಗಾರ ರನೌಟ್!

ಟೀಮ್ ಇಂಡಿಯಾ ರೆಡಿ:

ಏಷ್ಯನ್ ಗೇಮ್ಸ್ ಟಿ20 ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಕೂಡ ಘೋಷಿಸಲಾಗಿದೆ. 15 ಸದಸ್ಯರುಗಳ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದು, ಉಪನಾಯಕನಾಗಿ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಅದರಂತೆ ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ…

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

Source link

ನಾಯಿ ಮರಿಯನ್ನು ಎತ್ತಿಕೊಂಡು ಮರದ ಮೇಲೆ ಹೋಗಿ ಕುಳಿತ ಕೋತಿ – Kannada News

ಮಂಡಿ, ಜೂನ್ 10: ಪ್ರಕೃತಿಯ ಮಡಿಲಲ್ಲಿ ಪ್ರಾಣಿ(Animal)ಗಳ ಜಗತ್ತು ಕೆಲವು ಬಾರಿ ಮನುಷ್ಯರೇ ಬೆರಗಾಗುವಂತಹ ಅದ್ಭುತ ಪ್ರೀತಿ ಮತ್ತು ಕಾರುಣ್ಯದ ಕಥೆಗಳನ್ನು ನಮಗೆ ಉಣಬಡಿಸುತ್ತದೆ. ಅಂತಹದೇ ಒಂದು ಹೃದಯಸ್ಪರ್ಶಿ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೆವಾಲ್ಸರ್ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕೋತಿಯೊಂದು ತನ್ನ ಮರಿಯೇ ಎಂಬಂತೆ ನಾಯಿ ಮರಿಯನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಕುಳಿತಿರುವ ಘಟನೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದಿದೆ. ಮಂಡಿಯ ರೆವಾಲ್ಸರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಥಳೀಯರ ಪ್ರಕಾರ, ಕೋತಿ ರಸ್ತೆಬದಿಯಿಂದ ನಾಯಿಮರಿಯನ್ನು ಎತ್ತಿಕೊಂಡು ಸುಮಾರು 20 ಅಡಿ ಎತ್ತರದ ಮರವನ್ನು ಹತ್ತಿತು. ಅವರಲ್ಲಿ ಹಲವರು ಮರದ ಕೆಳಗೆ ಜಮಾಯಿಸಿ ಪ್ರಾಣಿಯು ನಾಯಿಮರಿಯನ್ನು ಎತ್ತರದಿಂದ ಬೀಳಿಸಬಹುದೆಂಬ ಭಯದಿಂದ ಇದ್ದರು.

ಆದರೆ ಕೋತಿ ನಾಯಿಯನ್ನು ಕೆಳಗೆ ಬೀಳಲು ಬಿಡಲಿಲ್ಲ, ಪ್ರತ್ಯಕ್ಷದರ್ಶಿಗಳು ಹೇಳುವಂತೆ ಕೋತಿ ನಾಯಿ ಮರಿಯನ್ನು ಹಿಡಿದುಕೊಂಡು ಸುಮಾರು 10 ರಿಂದ 15 ನಿಮಿಷಗಳ ಕಾಲ ಮರದಲ್ಲಿ ಕುಳಿತಿತ್ತು. ಮರದ ಮೇಲೆ ಸ್ವಲ್ಪ ಸಮಯ ಕಳೆದ ನಂತರ, ಕೋತಿ ಕೊನೆಗೆ ಕೆಳಗೆ ಇಳಿದು ನಾಯಿಮರಿಯನ್ನು ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟಿತು. ನಾಯಿಮರಿಗೆ ಯಾವುದೇ ಹಾನಿಯಾಗಲಿಲ್ಲ.

ವಿಡಿಯೋ

ತನ್ನ ಮರಿಯಾಗಿರದಿದ್ದರೂ ಅಷ್ಟು ವಾತ್ಸಲ್ಯ ತೋರಿದ ಕೋತಿ ಬಗ್ಗೆ ನೆಟ್ಟಿಗರು ಹೊಗಳುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಒಂದೊಮ್ಮೆ ನಾಯಿ ಮರ ಬದಲು ಮಗುವನ್ನು ಎತ್ತಿಕೊಂಡು ಹೋಗಿದ್ದರೆ ಕಥೆ ಏನಾಗಿರುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ನರೇಂದ್ರ ಸೈನಿ ಜನರು ಭಯಭೀತರಾಗಬೇಡಿ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಪ್ರಕೃತಿಯಲ್ಲಿ ಪ್ರೀತಿಗಿಂತ ದೊಡ್ಡದಾದ ಶಕ್ತಿ ಮತ್ತೊಂದಿಲ್ಲ ಮತ್ತು ಮೂಕ ಪ್ರಾಣಿಗಳೂ ಸಹ ಪ್ರೀತಿಯ ಭಾಷೆಯನ್ನು ಎಷ್ಟು ಸುಂದರವಾಗಿ ಆಡಬಲ್ಲವು ಎಂಬುದಕ್ಕೆ ಮಂಡಿ ಜಿಲ್ಲೆಯ ಈ ಕೋತಿ-ನಾಯಿಮರಿಯ ಸ್ನೇಹದ ಕಥೆ ಒಂದು ಅದ್ಭುತ ಉದಾಹರಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊನ್ನಾವರ: ಅಝಾನ್ ಮೊಳಗಿಸುತ್ತಿದ್ದ ಪವಿತ್ರ ಕ್ಷಣದಲ್ಲೇ ಇಹಲೋಕ ತ್ಯಜಿಸಿದ ಮೌಲ್ವಿ – Kannada News

ಕಾಸರಕೋಡ ಟೊಂಕಾದ ಎಮ್.ಜೆ.ಎಮ್ ಮಸೀದಿ ಹಾಗೂ ಮೌಲ್ವಿ ಅಬ್ದುಲ್ ಲತೀಫ್ ಮದನಿImage Credit source: tv9

ಹೊನ್ನಾವರ, ಜೂನ್ 10: ಮಸೀದಿಯಲ್ಲಿ ಅತ್ಯಂತ ಭಕ್ತಿಭಾವದಿಂದ ಅಸರ್ ನಮಾಜ್‌ಗಾಗಿ ಅಝಾನ್ (ಪ್ರಾರ್ಥನೆಯ ಕರೆ) ಮೊಳಗಿಸುತ್ತಿದ್ದ (Azan) ಪವಿತ್ರ ಕ್ಷಣದಲ್ಲೇ ಮೌಲ್ವಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಕರುಣಾಜನಕ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಎಮ್.ಜೆ.ಎಮ್ (MJM) ಮಸೀದಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದೆ.

ಮುಖ್ಯಾಂಶಗಳು

  • ಅಝಾನ್ ಕೂಗುತ್ತಿದ್ದಾಗಲೇ ಮೌಲ್ವಿ ಸಾವು.
  • ನಮಾಜ್ ವೇಳೆ ತೀವ್ರ ಹೃದಯಾಘಾತ.
  • ಸಾವಿನ ಕೊನೆಕ್ಷಣ ಸಿಸಿಟಿವಿಯಲ್ಲಿ ಸೆರೆ.

ಮಕ್ಕಳಿಗೆ ಶಿಕ್ಷಣ ನೀಡಲು ಬಂದಿದ್ದ ಲತೀಫ್ ಮದನಿ

ಮೃತರನ್ನು ಮಂಗಳೂರು ಮೂಲದ ಕುಕ್ಕಾಜೆಯ ಅಬ್ದುಲ್ ಲತೀಫ್ ಮದನಿ ಎಂದು ಗುರುತಿಸಲಾಗಿದೆ. ಇವರು ಇಸ್ಲಾಮಿಕ್ ಧಾರ್ಮಿಕ ಹಾಗೂ ಮದರಸಾ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸಲುವಾಗಿ ಆರು ತಿಂಗಳ ಹಿಂದೆಯಷ್ಟೇ ಮಂಗಳೂರಿನಿಂದ ಹೊನ್ನಾವರದ ಕಾಸರಕೋಡ ಟೊಂಕಾ ಮಸೀದಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ವಾಡಿಕೆಯಂತೆ ಮಸೀದಿಯಲ್ಲಿ ಅಸರ್ ನಮಾಜ್ ಪ್ರಾರ್ಥನೆಗೆ ಮುನ್ನ ಮೌಲ್ವಿ ಅಬ್ದುಲ್ ಲತೀಫ್ ಅವರು ಮೈಕ್ ಹಿಡಿದು ಅಝಾನ್ ಕೂಗುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಮೈಕ್ ಹಿಡಿದುಕೊಂಡೇ ಕುಸಿದು ಬಿದ್ದಿದ್ದಾರೆ.

ಆಸ್ಪತ್ರೆಗೆ ತಲುಪುವ ಮುನ್ನವೇ ಹಾರಿಹೋದ ಪ್ರಾಣ

ಮೌಲ್ವಿ ಹಠಾತ್ ಕುಸಿದು ಬೀಳುತ್ತಿರುವುದನ್ನು ಗಮನಿಸಿದ ಮಸೀದಿಯಲ್ಲಿದ್ದ ಇತರರು ತಕ್ಷಣವೇ ಅವರನ್ನು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮುನ್ನವೇ ಮೌಲ್ವಿ ಅಬ್ದುಲ್ ಲತೀಫ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಢಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ 439 ಪ್ರದೇಶಗಳಲ್ಲಿ ಗುಡ್ಡ ಕುಸಿತದ ಭೀತಿ: 100 ಕೋಟಿ ರೂ. ಬಿಡುಗಡೆಯಾದ್ರೂ ಕಾಮಗಾರಿ ನಡೆಸಲಾಗದೆ ಸಂಕಷ್ಟ!

ಅತ್ಯಂತ ಪವಿತ್ರವಾದ ಪ್ರಾರ್ಥನೆಯ ಸಮಯದಲ್ಲಿ, ಅಲ್ಲಾಹನ ನಾಮಸ್ಮರಣೆ ಮಾಡುತ್ತಿರುವಾಗಲೇ ಮೌಲ್ವಿ ಪ್ರಾಣ ಬಿಟ್ಟಿರುವುದು ಅತ್ಯಂತ ಪುಣ್ಯದ ಸಾವು ಎಂದು ಸ್ಥಳೀಯರು ಹೇಳಿದ್ದು, ಕಂಬನಿ ಮಿಡಿದಿದ್ದಾರೆ. ಮೌಲ್ವಿಯ ಕೊನೆಯ ಕ್ಷಣದ ಭೀಕರ ದೃಶ್ಯಗಳು ಮಸೀದಿಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಸರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version