‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್ – Kannada News

ನಟ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾ ಅವರ ವೃತ್ತಿಜೀವನದ ಅತಿ ದೊಡ್ಡ ಪ್ರಾಜೆಕ್ಟ್. ಆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆ.ಎಂ. ಚೈತನ್ಯ ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ‘ನನ್ನ ಸಿನಿಮಾಗಳ ಗ್ರಾಫ್ ನೋಡಿದರೆ ಮಾದೇವ ಚಿತ್ರದ ಬಳಿಕ ತುಂಬ ಬದಲಾವಣೆ ಆಗಿದೆ. ನನ್ನ ವೃತ್ತಿಜೀವನದಲ್ಲಿ ಇದು ದೊಡ್ಡ ಸಿನಿಮಾ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಪ್ರಚಾರಕ್ಕಾಗಿ ನಾವು ಸಾಕಷ್ಟು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ನಿರ್ದೇಶಕರ ಜೊತೆ ಪ್ರಚಾರ ಮಾಡುತ್ತಿದ್ದೇನೆ. ಅವರ ಜ್ಞಾನ ತುಂಬ ದೊಡ್ಡದು. ಅವರ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಈ ಸಿನಿಮಾದ ನಂತರವೂ ಅವರ ಜೊತೆ ಕೆಲಸ ಮಾಡಲು ನಾನು ಸಿದ್ಧವಾಗಿರುತ್ತೇನೆ’ ಎಂದು ವಿನೋದ್ ಪ್ರಭಾಕರ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫ್ರೀ ಬಸ್ ಪಾಸ್ ಬೆನ್ನಲ್ಲೇ ರಿಯಾಯಿತಿಯಲ್ಲಿ ಮೆಟ್ರೋ ಪಾಸ್ ನೀಡುವಂತೆ ಬೆಂಗಳೂರು ವಿದ್ಯಾರ್ಥಿಗಳ ಮನವಿ – Kannada News

ಬೆಂಗಳೂರು, (ಜೂನ್ 09): ಕಳೆದ ವಾರ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ ಮೇಲೆ, ಮೊದಲಿಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿಲಿಕಾನ್ ‌ಸಿಟಿಯ ವಿದ್ಯಾರ್ಥಿಗಳು ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡಲು ಸ್ಟೂಡೆಂಟ್ ಪಾಸ್ ನೀಡಿ, ಫ್ರೀಯಾಗಿ ಬೇಡ ಡಿಸ್ಕ್ಯೌಂಟ್ ನಲ್ಲಿ ನೀಡಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಮೆಟ್ರೋ ಪ್ರಯಾಣದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತೆ ಅಂತ IISC ವರದಿ ಕೊಟ್ಟಿದೆ. ಅಲ್ಲದೇ ರಿಯಾಯಿತಿ ನೀಡಿದರೆ ವಿದ್ಯಾರ್ಥಿಗಳು ಮೆಟ್ರೋ ಪ್ರಯಾಣ ಮಾಡಲಿದ್ದು,ಇದರಿಂದ ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಲು ಸ್ಟೂಡೆಂಟ್ ಪಾಸ್ ಗಾಗಿ ಮನವಿ ಮಾಡುತ್ತಿರುವ ವಿದ್ಯಾರ್ಥಿಗಳು ನಮಗೆ ಉಚಿತ ಪಾಸ್ ಬೇಡ.ಕನಿಷ್ಠ ರಿಯಾಯತಿ ದರದಲ್ಲಿ ಪಾಸ್ ವ್ಯವಸ್ಥೆ ಕಲ್ಪಿಸಿ. ಮೆಟ್ರೋ ಪ್ರಯಾಣದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತೆ ಅಂತ IISC ವರದಿ ಕೊಟ್ಟಿದೆ. ಹಾಗಾಗಿ, ವಿದ್ಯಾರ್ಥಿಗಳು ಮೆಟ್ರೋ ಪ್ರಯಾಣ ಮಾಡುವುದರಿಂದ ಪೊಲ್ಯೂಷನ್ ನಿಂದ ಮುಕ್ತರಾಗಬಹುದು. ಖಾಸಗಿ ವಾಹನಗಳನ್ನ ಬಳಸುವುದರಿಂದ ದೂರವಿಡಬಹುದು. ಬೈಕ್ ಗಳಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತೆ. ಮೆಟ್ರೋ ಪಾಸ್ ವಿತರಿಸಿದ್ರೆ ಖಾಸಗಿ ವಾಹನದಿಂದ ದೂರ ಆಗಬಹುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸ್ ನೀಡಬೇಕೆಂದು ಎಂದಿದ್ದಾರೆ.

ಇದನ್ನೂ ಓದಿ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ

ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನ ಸಚಿವ ಸಂಪುಟ ಸಭೆ ಮಾಡಿ, ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ನೀಡೋದಾಗಿ ಘೋಷಣೆ ಮಾಡಿದ್ದರು. ಸದ್ಯ ಪಾಸ್ ವಿತರಣೆಯ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಇದೀಗ ಬೆಂಗಳೂರಿನ ವಿದ್ಯಾರ್ಥಿಗಳು ಸಹ ಮೆಟ್ರೋ ಪಾಸ್ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದ್ದು, ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಏನು ತೀರ್ಮಾನಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್ ದೊರೆ ಜೊತೆ ಪ್ರಧಾನಿ ಮೋದಿ ಮಾತುಕತೆ; ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆ – Kannada News

ನವದೆಹಲಿ, ಜೂನ್ 9: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು (ಜೂನ್ 9) ಕುವೈತ್ ರಾಜ್ಯದ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದಲ್ಲಿ ಬೆಳೆಯುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಜೂನ್ 3ರಂದು ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನಿನ ಡ್ರೋನ್ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ಇಬ್ಬರು ನಾಯಕರ ನಡುವಿನ ಮಾತುಕತೆ ನಡೆದಿದೆ.

ಕುವೈತ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಯ ಮೇಲಿನ ದಾಳಿಗಳನ್ನು ಪ್ರಧಾನಿ ಮೋದಿ ಅವರು ಭಾರತದ ಪರವಾಗಿ ತೀವ್ರವಾಗಿ ಖಂಡಿಸಿದರು. ಇತ್ತೀಚೆಗೆ ಕುವೈತ್‌ನ ವಾಯುಪ್ರದೇಶ ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮೋದಿ ಪ್ರತಿಪಾದಿಸಿದರು. ಈ ಕಷ್ಟದ ಸಮಯದಲ್ಲಿ ಭಾರತವು ಕುವೈತ್‌ನ ಭದ್ರತೆ ಮತ್ತು ಸ್ಥಿರತೆಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು

ಕುವೈತ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡೂ ಕಡೆಯಿಂದ ಶಾಂತಿ ಮಾತುಕತೆಯ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಶಾಂತಿ ಮತ್ತು ಸ್ಥಿರತೆಯನ್ನು ಆದಷ್ಟು ಬೇಗ ಮರುಸ್ಥಾಪಿಸಲು “ಮಾತುಕತೆ ಮತ್ತು ರಾಜತಾಂತ್ರಿಕತೆ” ಏಕೈಕ ಮಾರ್ಗವಾಗಿದೆ ಎಂದು ಭಾರತದ ನಿಲುವನ್ನು ಪುನರುಚ್ಚರಿಸಿದರು.

ಕುವೈತ್‌ನಲ್ಲಿ ಇತ್ತೀಚೆಗೆ ನಡೆದ ವಾಯುದಾಳಿಗಳಲ್ಲಿ (ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿ ಸೇರಿದಂತೆ) ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಅಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯು ಭಾರತ ಸರ್ಕಾರಕ್ಕೆ ಪ್ರಮುಖ ಕಾಳಜಿಯಾಗಿದೆ. ಕುವೈತ್‌ನಲ್ಲಿರುವ ಬೃಹತ್ ಭಾರತೀಯ ಸಮುದಾಯದ ಯೋಗಕ್ಷೇಮ ಮತ್ತು ಸುರಕ್ಷತೆಗೆ ವೈಯಕ್ತಿಕವಾಗಿ ಗಮನ ಹರಿಸುತ್ತಿರುವುದಕ್ಕಾಗಿ ಕುವೈತ್ ಅಮೀರ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ಅರ್ಪಿಸಿದರು.

ಇದನ್ನೂ ಓದಿ: ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ಗಲ್ಫ್ ಪ್ರದೇಶದ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರಮುಖ ಜಲ ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ಇರಾನ್ ಪಡೆಗಳಿಂದ ದಾಳಿಗಳು ನಡೆದಿದ್ದವು. ಈ ದಾಳಿಗಳಲ್ಲಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನಾಗರಿಕರು ಕೂಡ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಭಾರತವು ಕುವೈತ್‌ನೊಂದಿಗೆ ರಾಜತಾಂತ್ರಿಕ ಸಂಪರ್ಕವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರೇನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ

ಬ್ರೇನ್ ಟ್ಯೂಮರ್ (Brain Tumors) ಎಂಬ ಪದವೇ ಭಯ ಮತ್ತು ಆತಂಕ ಹುಟ್ಟಿಸುತ್ತದೆ. ಇದರ ಬಗ್ಗೆ ಹೇಳುವುದೇ ಬೇಡ ಏಕೆಂದರೆ ಇದೊಂದು ಗಂಭೀರ ಕಾಯಿಲೆ ಎಂಬುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ತಿಳಿದಿರುತ್ತದೆ. ಆದರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಇರುವ ವಿಷಯಕ್ಕಿಂತ ಇಲ್ಲದಿರುವ ಸುಳ್ಳು ಸುದ್ದಿಗಳೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಜನ ಯಾವುದನ್ನೂ ನಂಬಬೇಕು ಮತ್ತು ಯಾವುದು ಸುಳ್ಳು ಎಂಬುದರ ನಡುವೆ ಗೊಂದಲದಲ್ಲಿ ಇರುತ್ತಾರೆ. ಅಂತವುಗಳಲ್ಲಿ ಬ್ರೇನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೇ ಮದ್ದು ಎಂಬ ಮಾತು ಕೂಡ ಒಂದು. ಹಾಗಾದರೆ ಬ್ರೇನ್ ಟ್ಯೂಮರ್‌ ಎಂಬ ಗಂಭೀರ ಕಾಯಿಲೆಯಿಂದ ಮುಕ್ತಿ ಪಡೆಯಲು ಚಿಕಿತ್ಸೆ ಮಾತ್ರ ಪರಿಹಾರವೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂದು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಜ್ಞರು ಹೇಳುವುದೇನು?

ನ್ಯೂರೋ ಸರ್ಜನ್ ಡಾ. ಪ್ರವೀಣ್ ಗುಪ್ತಾ ಅವರು ಹೇಳುವ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆ ಒಂದೇ ರೀತಿಯಲ್ಲಿರದು. ಕೆಲವು ಸಣ್ಣ ಹಾಗೂ ನಿಧಾನವಾಗಿ ಬೆಳೆಯುವ ಟ್ಯೂಮರ್‌ಗಳು ವರ್ಷಗಳ ಕಾಲ ಯಾವುದೇ ದೊಡ್ಡ ಸಮಸ್ಯೆ ಉಂಟುಮಾಡದೇ ಸ್ಥಿರವಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನಿಯಮಿತ ಎಂ ಆರ್ ಐ (MRI) ಸ್ಕ್ಯಾನ್ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಸಾಕಾಗಬಹುದು. ಜೊತೆಗೆ ಪ್ರತಿಯೊಂದು ಬ್ರೇನ್ ಟ್ಯೂಮರ್‌ಗೂ ಆಪರೇಷನ್ ಅಗತ್ಯವಿಲ್ಲ. ಟ್ಯೂಮರ್‌ನ ಗಾತ್ರ, ಅದು ಇರುವ ಸ್ಥಳ, ಅದರ ಸ್ವಭಾವ ಹಾಗೂ ರೋಗಿಯ ಆರೋಗ್ಯ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವು ಬಿನೈನ್ (ಕ್ಯಾನ್ಸರ್ ಅಲ್ಲದ) ಟ್ಯೂಮರ್‌ಗಳು ಮೆದುಳಿನ ಸಂವೇದನಾಶೀಲ ಭಾಗಗಳಿಂದ ದೂರವಿದ್ದರೆ ಮತ್ತು ಯಾವುದೇ ಲಕ್ಷಣಗಳನ್ನು ಉಂಟುಮಾಡದಿದ್ದರೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ.

ಇದನ್ನೂ ಓದಿ: ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ನಿರಂತರ ತಲೆನೋವು, ಸೆಳೆತ (ಸೀಜರ್ಸ್), ದೃಷ್ಟಿ ಸಮಸ್ಯೆ, ಮಾತನಾಡಲು ಕಷ್ಟವಾಗುವುದು, ದೇಹದ ಭಾಗದಲ್ಲಿ ದುರ್ಬಲತೆ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಇತ್ತೀಚಿನ ತಂತ್ರಜ್ಞಾನಗಳಾದ ಹೈ-ರಿಸೊಲ್ಯೂಶನ್ MRI, ನ್ಯೂರೋ ನ್ಯಾವಿಗೇಶನ್, ಫಂಕ್ಷನಲ್ ಬ್ರೇನ್ ಮ್ಯಾಪಿಂಗ್ ಮತ್ತು ಅವೇಕ್ ಕ್ರೇನಿಯೋಟಮಿ ಮುಂತಾದವು ಬ್ರೇನ್ ಟ್ಯೂಮರ್ ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಮಾಡಿವೆ.

ಇಂಟರ್ನೆಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅಪೂರ್ಣ ಮಾಹಿತಿಯನ್ನು ನಂಬಿ ಚಿಕಿತ್ಸೆ ಮಾಡಿಸುವ ಬಗ್ಗೆ ತೀರ್ಮಾನ ಮಾಡಬಾರದು. ಬ್ರೇನ್ ಟ್ಯೂಮರ್ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರಲ್ಲೂ ಅದರ ಸ್ಥಿತಿ ವಿಭಿನ್ನವಾಗಿರುತ್ತದೆ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ತಜ್ಞ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ. ಹಲವು ರೋಗಿಗಳು ಶಸ್ತ್ರಚಿಕಿತ್ಸೆಯಿಲ್ಲದೆ ಸಹ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಭಯಪಡದೇ ಜಾಗೃತಿಯಿಂದ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು; ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ನಾಳೆ ಉಪವಾಸ ಸತ್ಯಾಗ್ರಹ – Kannada News

ನವದೆಹಲಿ, ಜೂನ್ 9: ಮಧ್ಯಪ್ರದೇಶದಿಂದ ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದ್ದರಿಂದ, ಕಾಂಗ್ರೆಸ್‌ಗೆ ಈಗ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಆ ಸ್ಥಾನವನ್ನು ಕಳೆದುಕೊಂಡಿದೆ. ಇದರಿಂದಾಗಿ ಬಿಜೆಪಿಯ ಮೂರನೇ ಅಭ್ಯರ್ಥಿ ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ ಚುನಾವಣಾ ಆಯೋಗದ ಕಚೇರಿಯೆದುರು ಪ್ರತಿಭಟನೆ ನಡೆಸಿದೆ. ನಾಳೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಘೋಷಿಸಿದೆ.

ಮೀನಾಕ್ಷಿ ನಟರಾಜನ್ (ಆರೋಪಿ ಸಂಖ್ಯೆ 4) ವಿರುದ್ಧ ಹೈದರಾಬಾದ್‌ನ ‘ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್’ ನ್ಯಾಯಾಲಯದಲ್ಲಿ 2025 ರ ಆಗಸ್ಟ್‌ನಿಂದ ಕ್ರಿಮಿನಲ್ ಪ್ರಕರಣವೊಂದು ಬಾಕಿ ಇದೆ. ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅವರಿಗೆ ನೋಟಿಸ್ ಕೂಡ ಜಾರಿ ಮಾಡಿತ್ತು. ನಾಮಪತ್ರ ಸಲ್ಲಿಕೆಯ ವೇಳೆ ಈ ಕ್ರಿಮಿನಲ್ ಪ್ರಕರಣದ ವಿವರಗಳನ್ನು ಅಫಿಡವಿಟ್‌ನಲ್ಲಿ ನಮೂದಿಸದ ಕಾರಣದಿಂದ ಬಿಜೆಪಿಯ ಮಹೇಶ್ ಕೇವತ್ ನೀಡಿದ ದೂರಿನ ಆಧಾರದ ಮೇಲೆ ಚುನಾವಣಾಧಿಕಾರಿಗಳು ನಾಮಪತ್ರವನ್ನು ವಜಾಗೊಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೀಟು ಕಳ್ಳತನ ಮಾಡಿದೆ; ರಾಜ್ಯಸಭೆ ನಾಮಪತ್ರ ರದ್ದಾಗಿದ್ದಕ್ಕೆ ಮೀನಾಕ್ಷಿ ನಟರಾಜನ್ ಆಕ್ರೋಶ

ರಾಜ್ಯಸಭಾ ಚುನಾವಣೆಯಲ್ಲಿ ತೃತೀಯ ಪಕ್ಷದ ಪ್ರಭಾವ ಹಾಗೂ ರೆಸಾರ್ಟ್ ರಾಜಕೀಯದ ಆತಂಕದಿಂದಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಭೋಪಾಲ್‌ನಿಂದ ಬೆಂಗಳೂರಿಗೆ ಕರೆದೊಯ್ಯಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು. ಕಾಂಗ್ರೆಸ್ ಶಾಸಕರು ವಿಮಾನವೇರಿ, ಅದು ರನ್‌ವೇನಲ್ಲಿ ಚಲಿಸಲು ಆರಂಭಿಸಿದಾಗಲೇ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಸುದ್ದಿ ಬಂದಿದೆ. ತಕ್ಷಣವೇ ಹಿರಿಯ ನಾಯಕರ ಆದೇಶದ ಮೇರೆಗೆ ವಿಮಾನವನ್ನು ರನ್‌ವೇನಿಂದಲೇ ವಾಪಸ್ ಕರೆಯಿಸಿ, ಶಾಸಕರನ್ನು ರಕ್ಷಿಸುವ ತಂತ್ರಕ್ಕೆ ಬ್ರೇಕ್ ಹಾಕಲಾಯಿತು.

ನಾಮಪತ್ರ ರದ್ದತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಚಿನ್ ಪೈಲಟ್ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿತು. ಸಂಜೆ 6 ಗಂಟೆಯ ನಂತರ ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಇಲ್ಲದ ಕಾರಣ ಅವರಿಗೆ ಒಳಗೆ ಹೋಗಲು ಬಿಡದಿದ್ದಾಗ, ಕಾಂಗ್ರೆಸ್ ನಾಯಕರು ಗೇಟ್ ಮುಂಭಾಗದಲ್ಲೇ ಧರಣಿ ಕುಳಿತು ಆಕ್ರೋಶ ಹೊರಹಾಕಿದರು. ನಂತರ ಆಯೋಗವು ಕಾಂಗ್ರೆಸ್‌ನ ಜ್ಞಾಪನಾ ಪತ್ರವನ್ನು ಸ್ವೀಕರಿಸಿದೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

“ಇದು ಪ್ರಜಾಪ್ರಭುತ್ವದ ಹಗಲು ದರೋಡೆ. ನಮ್ಮ ಶಾಸಕರನ್ನು ಸೆಳೆಯುವ ಬಿಜೆಪಿಯ ಕೀಳು ತಂತ್ರಗಳು ವಿಫಲವಾದಾಗ ಅವರು ಈ ಮಾರ್ಗ ಹಿಡಿದಿದ್ದಾರೆ. ನಾಮಪತ್ರದಲ್ಲಿ ತಪ್ಪು ಮುಚ್ಚಿಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ನಾವು ಇದನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಬೀದಿಗಿಳಿದು ಹೋರಾಡಲಿದ್ದೇವೆ.” ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

“ನಮ್ಮ ಅಭ್ಯರ್ಥಿಯ ವಿರುದ್ಧ ಯಾವುದೇ ಎಫ್‌ಐಆರ್ (FIR) ಅಥವಾ ಚಾರ್ಜ್‌ಶೀಟ್ ಇಲ್ಲ. ಕೇವಲ ಕೋರ್ಟ್‌ನಿಂದ ಬಂದ ನೋಟಿಸ್ ಅನ್ನು ನೆಪವಾಗಿಟ್ಟುಕೊಂಡು ರಾಜ್ಯಸಭಾ ಅಭ್ಯರ್ಥಿಯೊಬ್ಬರ ನಾಮಪತ್ರ ರದ್ದು ಮಾಡಿರುವುದು ಇತಿಹಾಸದಲ್ಲೇ ಮೊದಲು.” ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:13 pm, Tue, 9 June 26

Source link

ಪಾದಚಾರಿ ಅಲ್ಲ,ಸಾವಿನ ಮಾರ್ಗ: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ ಪಾದಚಾರಿಗಳ ಸಾವಿನ ಸಂಖ್ಯೆ – Kannada News

ಬೆಂಗಳೂರು, (ಜೂನ್ 09): ಜನಸಂದಣಿ ಹೆಚ್ಚಿರುವ ಬೆಂಗಳೂರಿನ (Bengaluru)  ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್‌ಪಾತ್‌ (footpaths) ಅತಿಕ್ರಮಿಸಿವೆ. ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲೂ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ಇದೇ ರೀತಿ ನಗರದ ಇತರೆ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಹೋಟೆಲ್‌ಗಳ ಟೇಬಲ್‌, ಅಂಗಡಿಗಳ ಸಾಮಗ್ರಿಗಳು, ನಾಮಫಲಕ, ಕಟ್ಟಡ ಕಾಮಗಾರಿ ವಸ್ತುಗಳು, ಹಣ್ಣು, ತರಕಾರಿ, ಬೋಂಡಾ-ಬಜ್ಜಿ ಕೈಗಾಡಿಗಳು ಸೇರಿದಂತೆ ಫಾಸ್ಟ್‌ಫುಡ್‌ ಅಂಗಡಿಗಳ ವ್ಯಾಪಾರಕ್ಕೆ ಫುಟ್‌ಪಾತ್‌ಗಳು ಬಳಕೆಯಾಗುತ್ತಿವೆ. ಇದರಿಂದ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೌದು….ಪಾದಚಾರಿಗಳ ಸಾವಿನ ಸಂಖ್ಯೆ ನೋಡೋದಾದರೆ, 2023ರಲ್ಲಿ-232 ಸಾವು, 2024- 246, 2025-260, 2026(ಏಪ್ರಿಲ್ ತಿಂಗಳವರೆಗೆ) 90 ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ
  • ವ್ಯಾಪಾರಿಗಳ ಅಡ್ಡವಾದ ಪಾದಚಾರಿಗಳಿಗೆ ನಿರ್ಮಿಸಿದ ಬೆಂಗಳೂರಿನ ಅಂಡರ್‌ಪಾಸ್‌ಗಳು
  • ರಸ್ತೆ ದಾಟಲು ಪ್ರಾಣ ಕೈನಲ್ಲಿಟ್ಟುಕೊಂಡು ಓಡಾಡುತಿರೋ ಪಾದಚಾರಿಗಳು
  • ಎರಡು ವರ್ಷಾವಾದ್ರೂ ಜನರು ಓಡಾಡುವ ಸ್ಕೈವಾಕ್ ಗಿಲ್ಲ ಮುಕ್ತಿ

ಈ ಸಾವುಗಳನ್ನು ತಡೆಯಲು ನಿರ್ಮಿಸಲಾದ ಅಂಡರ್ ಪಾಸ್, ಸ್ಕೈವಾಕ್ ಗಳು ಮಾತ್ರ ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ನಗರದ ಬಹುತೇಕ ಪಾದಚಾರಿ ಮಾರ್ಗಗಳು ವಿವಿಧ ಕಾರಣಗಳಿಂದ ಒತ್ತುವರಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಓಡಾಡಲು ಅನಿವಾರ್ಯವಾಗಿ ರಸ್ತೆಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪಾದಚಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ವ್ಯಾಪಾರಿಗಳ ಅಡ್ಡವಾದ ಅಂಡರ್ ಪಾಸ್, ಸ್ಕೈವಾಕ್

ಬೆಂಗಳೂರಿನ ಹೃದಯ ಭಾಗದಲ್ಲಿರೋ ಮೆಜೆಸ್ಟಿಕ್ ಅಂಡರ್‌ಪಾಸ್ ಒಳಗೆ ಕಾಲಿಟ್ಟರೆ ಇದು ಪಾದಚಾರಿಗಳ ಮಾರ್ಗವೋ ಅಥವಾ ಸಂತೆ ಮಾರುಕಟ್ಟೆಯೋ ಎನ್ನುವ ಆಗಿದೆ. ಪಾದರಕ್ಷೆಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವೂ ಇಲ್ಲಿ ಸಿಗುತ್ತದೆ. ವ್ಯಾಪಾರಿಗಳು ಇಡೀ ಅಂಡರ್‌ಪಾಸ್ ಅನ್ನು ಅತಿಕ್ರಮಣ ಮಾಡಿದ್ದಾರೆ. ಇನ್ನು ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಎಲ್ಲಾ ಭಾಗದಲ್ಲೂ ಅಂಡರ್‌ಪಾಸ್‌ನಲ್ಲಿ ವ್ಯಾಪಾರಿಗದೇ ಹಾವಳಿ.

ಮುಗಿಯದ ಓಕಳೀಪುರ ಸ್ಕೈವಾಕ್

ಮತ್ತೊಂದು ಕಡೆ ಓಕಳೀಪುರ ಮುಖ್ಯ ರಸ್ತೆ ದಾಟಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಕೋಟಿಗಟಲ್ಲೇ ಖರ್ಚು ಮಾಡಿ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಅದ್ರೆ ವಯಸ್ಸದವರು ಓಡಾಡಲು ಸರಿಯಾದ ಲಿಫ್ಟ್ ವ್ಯವಸ್ಥೆಯೇ ಇಲ್ಲ. ನಿರ್ಮಾಣವಾಗಿ ಎರಡು ವರ್ಷವಾದ್ರೂ ಸ್ಕೈವಾಕ್ ಕೆಲಸ ಮುಗಿಯುವ ಲಕ್ಷಣಗಲೇ ಕಾಣುತಿಲ್ಲ.. ಇದರಿಂದಾಗಿ ಜನರು ಮುಖ್ಯ ರಸ್ತೆಗಳಲ್ಲೇ ವಾಹನಗಳ ಮಧ್ಯೆ ನುಸುಳಿಕೊಂಡು ಪ್ರಾಣವನ್ನು ಕೈನಲ್ಲಿ ಇಟ್ಟುಕೊಂಡು ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ ನಿರ್ವಹಣೆಗೆ ಸಾಕ್ಷಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಎಸ್ಕಲೇಟರ್‌ಗಳನ್ನೇನೋ ಹಾಕಲಾಗಿದೆ. ಆದರೆ ಅವು ಸದ್ಯ ಕೈಕೊಟ್ಟಿವೆ. ಇದರಿಂದ ಹಿರಿಯ ನಾಗರಿಕರು ರಸ್ತೆಯ ಮೇಲೆಯೇ ಪ್ರಾಣದ ಹಂಗು ತೊರೆದು ಓಡಾಡುತ್ತಿದ್ದಾರೆ.

ಒಟ್ಟಿನಲ್ಲಿ ಕೋಟಿ ಕೋಟಿ ವೆಚ್ಚದ ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ಇವೆಯೇ ಹೊರತು ಪಾದಚಾರಿಗಳ ಜೀವ ಉಳಿಸುವ ಕೆಲಸ ಮಾತ್ರ ಆಗುತ್ತಿಲ್ಲ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು? – Kannada News

ಜ್ಯೋತಿಷ್ಯದ ಪ್ರಕಾರ ಶನಿಯು ಮೀನ ರಾಶಿಯಲ್ಲಿದ್ದು ಚಂದ್ರನ ದ್ರೇಕ್ಕಾಣ, ರವಿಯ ಹೋರೆ ಹಾಗೂ ಗುರುವಿನ ತ್ರಿಂಶಾಂಶ ಮತ್ತು ದ್ವಾದಶಾಂಶಗಳಲ್ಲಿ ಸ್ಥಿತನಾಗಿರುವುದು ಅತ್ಯಂತ ವಿಶಿಷ್ಟ ಸಂಯೋಜನೆಯಾಗಿದೆ. ಈ ತಿಂಗಳಲ್ಲಿ ಶನಿಯ ಸಂಚಾರ ಏನೆಲ್ಲ ಆಗಲಿದೆ.

​ಮೇಷ ರಾಶಿ

​ಶನಿಯು ಈ ರಾಶಿಯಲ್ಲಿ ಇರುವ ಕಾರಣ ಆರ್ಥಿಕ ವ್ಯಯ ಹೆಚ್ಚಾಗಲಿದೆ. ಆದರೆ ಗುರುವಿನ ದ್ವಾದಶಾಂಶವು ವಿದೇಶ ಪ್ರಯಾಣ ಅಥವಾ ಆಧ್ಯಾತ್ಮಿಕ ಸಾಧನೆಗೆ ದಾರಿ ಮಾಡಿಕೊಡುತ್ತದೆ. ರವಿಯ ಹೋರೆಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು. ಚಂದ್ರನ ದ್ರೇಕ್ಕಾಣವು ಮನಸ್ಸಿನಲ್ಲಿ ಅಸ್ಥಿರತೆ ತರಲಿದ್ದು, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಸಿಗಲಿದೆ.

​ವೃಷಭ ರಾಶಿ

​ಏಕಾದಶದ ಶನಿಯು ಅಪಾರ ಲಾಭ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ನೀಡುತ್ತದೆ. ಗುರುವಿನ ತ್ರಿಂಶಾಂಶದಿಂದಾಗಿ ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ಚಂದ್ರನ ದ್ರೇಕ್ಕಾಣವು ಮಿತ್ರರಿಂದ ಮತ್ತು ಒಡಹುಟ್ಟಿದವರಿಂದ ಪ್ರೀತಿ, ಸಹಕಾರವನ್ನು ತಂದುಕೊಡುತ್ತದೆ. ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು.

ಮಿಥುನ ರಾಶಿ

​ದಶಮದ ಶನಿಯು ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮವನ್ನು ಬೇಡುತ್ತಾನೆ. ರವಿಯ ಹೋರೆಯು ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ತರಬಹುದು. ಆದರೆ ಗುರುವಿನ ಅಂಶಗಳು ವ್ಯಾಪಾರದಲ್ಲಿ ಸ್ಥಿರತೆ ಮತ್ತು ಗೌರವವನ್ನು ನೀಡುತ್ತವೆ. ಚಂದ್ರನ ದ್ರೇಕ್ಕಾಣದಿಂದಾಗಿ ಕೆಲಸದ ನಡುವೆ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಮಾನಸಿಕ ಸಮತೋಲನ ಅಗತ್ಯವಾಗಿದೆ.

ಕರ್ಕಾ​ಟಕ ರಾಶಿ

ನವಮದ ಶನಿಯು ಭಾಗ್ಯೋದಯವನ್ನು ತರಲಿದ್ದಾನೆ. ರವಿಯ ಹೋರೆಯು ತಂದೆಯ ಆರೋಗ್ಯದ ಕಡೆ ಗಮನಹರಿಸಲು ಸೂಚಿಸುತ್ತದೆ. ಗುರುವಿನ ದ್ವಾದಶಾಂಶ ಮತ್ತು ತ್ರಿಂಶಾಂಶವು ಉನ್ನತ ಶಿಕ್ಷಣ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಉತ್ತಮ ಅವಕಾಶ ನೀಡಲಿದೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಲೋಚನೆಗಳಲ್ಲಿ ಸಕಾರಾತ್ಮಕತೆ ತುಂಬಲಿದ್ದು, ದೈವಬಲದಿಂದ ಎಲ್ಲಾ ಕಷ್ಟಗಳು ದೂರಾಗಲಿವೆ.

ಸಿಂಹ ರಾಶಿ

​ಈ ರಾಶಿಗೆ ಶನಿಯು ಅಷ್ಟಮ ಶನಿಯ ಪ್ರಭಾವ ನೀಡಲಿದ್ದು, ಆರೋಗ್ಯದ ಬಗ್ಗೆ ಎಚ್ಚರವಿರಲಿ. ರವಿಯ ಹೋರೆಯು ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ವಿವಾದ ತರಬಹುದು. ಆದರೆ ಗುರುವಿನ ತ್ರಿಂಶಾಂಶವು ವಿಮೆ ಅಥವಾ ಹಠಾತ್ ಧನಲಾಭವನ್ನು ನೀಡುತ್ತದೆ. ಚಂದ್ರನ ದ್ರೇಕ್ಕಾಣವು ಮಾನಸಿಕ ಆತಂಕ ತರಲಿದ್ದು, ನಿಯಮಿತ ಪ್ರಾಣಾಯಾಮ ಮತ್ತು ಧ್ಯಾನದಿಂದ ನೆಮ್ಮದಿ ಸಿಗಲಿದೆ.

ಕನ್ಯಾ ರಾಶಿ

ಸಪ್ತಮದಲ್ಲಿ ಶನಿಯು ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ರವಿಯ ಹೋರೆಯಿಂದಾಗಿ ಸಂಗಾತಿಯೊಂದಿಗೆ ಸೌಮ್ಯವಾಗಿ ವರ್ತಿಸುವುದು ಒಳಿತು. ಗುರುವಿನ ಅಂಶಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸಲಿವೆ. ಚಂದ್ರನ ದ್ರೇಕ್ಕಾಣವು ಹೊಸ ವ್ಯಾಪಾರ ಒಪ್ಪಂದಗಳಿಗೆ ಪ್ರೇರಣೆ ನೀಡಲಿದ್ದು, ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.

ತುಲಾ ರಾಶಿ

​ಷ ಶನಿಯು ಶತ್ರುನಾಶ ಮತ್ತು ಕೋರ್ಟ್ ಕಲಾಪಗಳಲ್ಲಿ ಜಯ ತರಲಿದ್ದಾನೆ. ರವಿಯ ಹೋರೆಯು ಉದ್ಯೋಗದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಲು ಶಕ್ತಿ ನೀಡುತ್ತದೆ. ಗುರುವಿನ ತ್ರಿಂಶಾಂಶವು ಸಾಲಬಾಧೆಯಿಂದ ಮುಕ್ತಿ ನೀಡಲಿದ್ದು, ಆರೋಗ್ಯ ಸುಧಾರಿಸಲಿದೆ. ಚಂದ್ರನ ದ್ರೇಕ್ಕಾಣವು ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ತುಂಬಲಿದ್ದು, ಸಣ್ಣ ಪ್ರವಾಸಗಳು ಲಾಭದಾಯಕವಾಗಲಿವೆ.

​ವೃಶ್ಚಿಕ ರಾಶಿ

​ಪಂಚಮ ಶನಿಯು ಸಂತಾನ ಮತ್ತು ಪ್ರೇಮವಿಷಯಗಳಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ನಿಮ್ಮಲ್ಲಿ ನಾಯಕತ್ವದ ಗುಣವನ್ನು ಹೆಚ್ಚಿಸುತ್ತದೆ. ಗುರುವಿನ ದ್ವಾದಶಾಂಶವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಅಪಾರ ಯಶಸ್ಸನ್ನು ನೀಡಲಿದೆ. ಚಂದ್ರನ ದ್ರೇಕ್ಕಾಣವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತದೆ.

ಧನು ರಾಶಿ

ಚತುರ್ಥ ರಾಶಿಯಲ್ಲಿ ಶನಿಯು ಅರ್ಧಾಷ್ಟಮ ಸ್ಥಿತಿಯಲ್ಲಿದ್ದು, ತಾಯಿಯ ಆರೋಗ್ಯ ಮತ್ತು ಆಸ್ತಿ ಖರೀದಿ ವಿಷಯದಲ್ಲಿ ವಿಳಂಬ ತರಬಹುದು. ರವಿಯ ಹೋರೆಯು ಉದ್ಯೋಗದಲ್ಲಿ ವರ್ಗಾವಣೆಯನ್ನು ಸೂಚಿಸುತ್ತದೆ. ಗುರುವಿನ ತ್ರಿಂಶಾಂಶವು ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲಿದೆ. ಚಂದ್ರನ ದ್ರೇಕ್ಕಾಣವು ಆಂತರಿಕ ಶಾಂತಿ ಮತ್ತು ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಡುತ್ತದೆ.

ಮಕರ ರಾಶಿ

ಮೂರನೇ ಶನಿಯು ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ದ್ವಿಗುಣಗೊಳಿಸುತ್ತಾನೆ. ರವಿಯ ಹೋರೆಯು ಸರ್ಕಾರದಿಂದ ಅಥವಾ ಉನ್ನತಾಧಿಕಾರಿಗಳಿಂದ ಪ್ರಶಂಸೆಯನ್ನು ತರಲಿದೆ. ಗುರುವಿನ ದ್ವಾದಶಾಂಶವು ಕಿರಿಯ ಸಹೋದರರೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಚಂದ್ರನ ದ್ರೇಕ್ಕಾಣವು ಸಣ್ಣ ಪ್ರಯಾಣಗಳ ಮೂಲಕ ಆರ್ಥಿಕ ಲಾಭ ಮತ್ತು ಹೊಸ ಸಂಪರ್ಕಗಳನ್ನು ತಂದುಕೊಡಲಿದೆ.

ಕುಂಭ ರಾಶಿ

​ದ್ವಿತೀಯ ರಾಶಿಯಲ್ಲಿ ಶನಿಯು ಸಾಡೇಸಾಥ್ ಶನಿಯ ಕೊನೆಯ ಹಂತದಲ್ಲಿದ್ದು, ಹಣಕಾಸಿನ ಶಿಸ್ತನ್ನು ಬೇಡುತ್ತಾನೆ. ರವಿಯ ಹೋರೆಯು ಮಾತಿನಲ್ಲಿ ಕಠಿಣತೆ ತರಬಹುದು, ಎಚ್ಚರವಿರಲಿ. ಆದರೆ ಗುರುವಿನ ಅಂಶಗಳು ಕುಟುಂಬದಲ್ಲಿ ಶಾಂತಿ ಮತ್ತು ಹಠಾತ್ ಧನಲಾಭವನ್ನು ನೀಡಲಿವೆ. ಚಂದ್ರನ ದ್ರೇಕ್ಕಾಣವು ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಲು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಚಿಸುತ್ತದೆ.

ಇದನ್ನೂ ಓದಿ: ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ

​ಮೀನ ರಾಶಿ

ಈ ರಾಶಿಯಲ್ಲಿ ಶನಿ ಇರುವುದರಿಂದ ಜನ್ಮ ಶನಿಯ ಪ್ರಭಾವವಿದ್ದು, ದೈಹಿಕ ಆಯಾಸ ಹೆಚ್ಚಾಗಬಹುದು. ರವಿಯ ಹೋರೆಯು ನಿಮಗೆ ಸಮಾಜದಲ್ಲಿ ದೊಡ್ಡ ಜವಾಬ್ದಾರಿಗಳನ್ನು ತರಲಿದೆ. ಗುರುವಿನ ಸ್ವಕ್ಷೇತ್ರದ ಅಂಶಗಳು ನಿಮ್ಮ ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿವೆ. ಚಂದ್ರನ ದ್ರೇಕ್ಕಾಣವು ಮಾನಸಿಕವಾಗಿ ನಿಮ್ಮನ್ನು ಹೆಚ್ಚು ಪರಿಪಕ್ವ ಹಾಗೂ ಶಾಂತಚಿತ್ತರನ್ನಾಗಿ ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕ ಖರ್ಗೆ ಅವರೇ ಇದು ಸರಿಯಲ್ಲ: ‘ನಾನು ಬಂದಿರೋದು ಮಂತ್ರಾಲಯಕ್ಕೆ, ನೀವ್ಯಾಕೆ ತಡೀತಿದ್ದೀರಿ?’: ಪುನೀತ್ ಕೆರೆಹಳ್ಳಿ ಗರಂ – Kannada News

ರಾಯಚೂರು, ಜೂ.9: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಇಂದು ಆಯೋಜಿಸಲಾಗಿರುವ ‘ಹಿಂದೂ ಮಹೋತ್ಸವ’ ಸಮಾರಂಭಕ್ಕೆ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆಗಮಿಸಬೇಕಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರಿಗೆ ರಾಯಚೂರು ಜಿಲ್ಲಾ ಪೊಲೀಸರು ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ. ಅಷ್ಟೇ ಅಲ್ಲದೆ, ಮಂತ್ರಾಲಯಕ್ಕೂ ಬಂದಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಅಲ್ಲೇ ತಡೆದು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಸಂಘಟನೆಯ ನೇತೃತ್ವದಲ್ಲಿ ಇಂದು ಬೃಹತ್ ಹಿಂದೂ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುನೀತ್ ಕೆರೆಹಳ್ಳಿ ಅವರು ಆಗಮಿಸುತ್ತಿದ್ದರು. ಆದರೆ, ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯು ಅವರಿಗೆ ರಾಯಚೂರು ಜಿಲ್ಲೆಗೆ ಆಗಮಿಸದಂತೆ ಖಡಕ್ ನಿರ್ಬಂಧ ವಿಧಿಸಿದೆ. ಮಂತ್ರಾಲಯದಲ್ಲಿ ತಮಗೆ ಪೊಲೀಸರು ತಡೆ ಒಡ್ಡಿ ನೋಟಿಸ್ ನೀಡಿದ ತಕ್ಷಣ ರಾಯಚೂರು ಪೊಲೀಸರ ನಡೆಗೆ ಪುನೀತ್ ಕೆರೆಹಳ್ಳಿ ತೀವ್ರವಾಗಿ ಗರಂ ಆಗಿದ್ದಾರೆ. “ನಾನು ಮಂತ್ರಾಲಯಕ್ಕೆ ದರ್ಶನಕ್ಕಾಗಿ ಬಂದಿದ್ದೇನೆ. ಇಲ್ಲಿಗೆ ಬಂದು ನನ್ನನ್ನು ತಡೆದು, ಕಾರ್ಯಕ್ರಮಕ್ಕೆ ಬರದಂತೆ ಕಾನೂನುಬಾಹಿರವಾಗಿ ನಿರ್ಬಂಧ ವಿಧಿಸುತ್ತಿದ್ದೀರಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಗೃಹ ಸಚಿವ ಪ್ರಿಯಾಂಕ ಖರ್ಗೆಗೂ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಸೀಟು ಕಳ್ಳತನ ಮಾಡಿದೆ; ರಾಜ್ಯಸಭೆ ನಾಮಪತ್ರ ರದ್ದಾಗಿದ್ದಕ್ಕೆ ಮೀನಾಕ್ಷಿ ನಟರಾಜನ್ ಆಕ್ರೋಶ – Kannada News

ಭೋಪಾಲ್, ಜೂನ್ 9: ಮಧ್ಯಪ್ರದೇಶದ 3 ರಾಜ್ಯಸಭಾ ಸ್ಥಾನಗಳ ಪೈಕಿ ಒಂದಕ್ಕೆ ಸಲ್ಲಿಕೆಯಾಗಿದ್ದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ತಮ್ಮ ಅಫಿಡವಿಟ್‌ನಲ್ಲಿ ಕಾನೂನು ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ವಜಾಗೊಳಿಸಲಾಗಿದೆ. ಈ ಕಾರಣದಿಂದಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮಪತ್ರ ತಿರಸ್ಕಾರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನಾಕ್ಷಿ ನಟರಾಜನ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಆಡಳಿತಾರೂಢ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ಅವರ ಸಂಚು ನಮಗೆ ಅರ್ಥವಾಗಿತ್ತು. ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಹತ್ತಿಕ್ಕುವ ರಾಜಕಾರಣ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಏಕಪಕ್ಷೀಯ ವ್ಯವಸ್ಥೆ ಮತ್ತು ಸರ್ವಾಧಿಕಾರವನ್ನು ಹೇರುವ ಪ್ರಯತ್ನವಾಗಿದೆ. ಇದು ಪ್ರಜಾಪ್ರಭುತ್ವದ ಹಗಲು ದರೋಡೆಯಾಗಿದೆ” ಎಂದು ಟೀಕಿಸಿದ್ದಾರೆ.

“ಇದು ಒಗ್ಗಟ್ಟಿನಿಂದ ಕೂಡಿದ ಮನೆ ಎಂದು ಅವರಿಗೆ ತಿಳಿದಾಗ, ಕಾನೂನುಬದ್ಧವಾಗಿ ಪರಿಗಣನೆಗೆ ಬಾರದ ನ್ಯಾಯಾಲಯದ ನೋಟಿಸ್ ಅನ್ನು ನೆಪವಾಗಿಟ್ಟುಕೊಂಡು ನಮ್ಮ ನಾಮಪತ್ರವನ್ನು ರದ್ದು ಮಾಡಿದರು. ನಮ್ಮ ಇಬ್ಬರೂ ವಕೀಲರು ಮಂಡಿಸಿದ ವಾದಗಳನ್ನು ಆಲಿಸದೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಚುನಾವಣಾ ದರೋಡೆಯನ್ನು ನಾವು ಕಾನೂನಾತ್ಮಕವಾಗಿ ಪ್ರಶ್ನಿಸುತ್ತೇವೆ.” ಎಂದು ಮೀನಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ – Kannada News

ಬೆಂಗಳೂರು, (ಜೂನ್ 09): ರಾಜಧಾನಿ ಬೆಂಗಳೂರಿನಲ್ಲಿ ಕಸದ (bengaluru garbage) ಸಮಸ್ಯೆ ಮತ್ತೆ ತಲೆದೂರಿದೆ. ನಗರದ ಹಲವೆಡೆ ರಸ್ತೆಯುದ್ಧಕ್ಕೂ ಕಸದ ರಾಶಿಯೇ ಕಾಣಿಸುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ವಿಲೇವಾರಿಯಾಗದ ಕಸ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳುಗಳಿಂದ ಕಸ ಸಾಗಿಸದ ಕಾರಣ, ತ್ಯಾಜ್ಯ ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು
  • ಎರಡು ತಿಂಗಳು ಕಳೆದ್ರು ಕಸ ತಗೆಯದೆ ನಿರ್ಲಕ್ಷತೋರುತಿರೋ GBA
  • 5,445ಕ್ಕೆ ಏರಿಕೆಯಾದ ಕಸದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ಇನ್ನು ಅಚ್ಚರಿಯ ವಿಷಯ ಅಂದ್ರೆ, ಸ್ವಚ್ಛತೆ ಕಾಪಾಡುವುದಕ್ಕಾಗಿ GBA ಕಡೆಯಿಂದ ಮಾರ್ಷಲ್ ಗಳನ್ನು ನಿರ್ಮಿಸದ್ದಾರೆ. ಅದ್ರೆ ಮಾರ್ಷಲ್ ಗಳು ಇದರ ಬಗ್ಗೆ ಗಮನವನ್ನು ಅರಿಸುತ್ತಿಲ್ಲ.ಇಡೀ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ರಸ್ತೆಯಲ್ಲೇ ಬೇಕಾಬಿಟ್ಟಿ ಕಸವನ್ನು ಎಸೆದು ಹೋಗುತ್ತಿದ್ದಾರೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ

ಇನ್ನು ಕಳೆದ ಎರಡು ತಿಂಗಳಿನಿಂದ ಟಿಪ್ಪರ್‌ಗಳು ಸರಿಯಾಗಿ ಬರ್ತಿಲ್ಲ. ಮನೆಯಲ್ಲೇ ಕಸದ ರಾಶಿ ಬೀಳ್ತಿದೆ. ಹಸಿ ಕಸದ ವಾಸನೆಯಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಅಧಿಕಾರಿಗಳು ಇದನ್ನ ಅರ್ಥ ಮಾಡ್ಕೋಬೇಕು ಸರಿಯಾಗಿ ಕಸದ ಆಟೋಗಳು ಮನೆ ಬಳಿ ಬರ್ತಿಲ್ಲ. ಇದರಿಂದ ಜನರು ರಸ್ತೆಯಲ್ಲೇ ಕಸವನ್ನು ಎಸೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

‘ಕಸಾ ಪೋರ್ಟಲ್’ ನೀಡಿರುವ ಅಂಕಿಅಂಶಗಳ ಪ್ರಕಾರ, ಒಂದು ತಿಂಗಳ ಹಿಂದೆ 3,200 ರಷ್ಟಿದ್ದ ಸಕ್ರಿಯ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಈಗ ಬರೋಬ್ಬರಿ 5,445 ಕ್ಕೆ ಏರಿಕೆಯಾಗಿದೆ. ಇದರಿಂದ ಉದ್ಯಾನ ನಗರಿ ಈಗ ಕಸದ ನಗರಿಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ.

ಕಸದ ಸಮಸ್ಯೆಗೆ ಪ್ರಮುಖ ಕಾರಣಗಳೇನು?

ಕಳೆದ 13 ವರ್ಷಗಳಿಂದ ಕಸ ಸಂಗ್ರಹಣೆ ಟೆಂಡರ್‌ಗಳನ್ನು ಅಂತಿಮಗೊಳಿಸದಿರುವುದು, ಟಿಪ್ಪರ್‌ ಮತ್ತು ಸಿಬ್ಬಂದಿಯ ಕೊರತೆ, ಸಿಬ್ಬಂದಿಯ ಅನಿಯಮಿತ ಲಭ್ಯತೆ, ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ಕಸ ರವಾನಿಸುವ ವಾಹನಗಳ ರಿಪೇರಿಯಿಂದಾಗಿ ನಗರದಲ್ಲಿ ಕಸ ಸಂಗ್ರಹಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version