‘ಪಿಒಕೆ ಪ್ರತಿಭಟನಾಕಾರರು ಭಾರತದಂತೆಯೇ ನಮ್ಮ ಶತ್ರುಗಳು’; ಹತ್ಯೆಯನ್ನು ಸಮರ್ಥಿಸಿಕೊಂಡ ಪಾಕಿಸ್ತಾನದ ಸಚಿವ – Kannada News | Enemies Like India Pakistan Minister Khawaja Asif Justifies Killing Of Protesters In PoK

ಇಸ್ಲಮಾಬಾದ್, ಜುಲೈ 28: ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (PoK) ಪ್ರತಿಭಟನಾಕಾರರ ಮೇಲೆ ನಡೆಸಲಾದ ಗುಂಡಿನ ದಾಳಿ ಮತ್ತು ಹತ್ಯೆಗಳನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್, ತಮ್ಮದೇ ದೇಶದ ಪ್ರತಿಭಟನಾಕಾರರನ್ನು ಭಾರತದಂತೆಯೇ ಶತ್ರುಗಳು ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಹೊಸ ಗುಂಡಿನ ದಾಳಿಯ ನಂತರ, ಪಾಕಿಸ್ತಾನವು ನಾಗರಿಕರ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ಭಾರತ ಆರೋಪಿಸಿದ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ.

ಈ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯ ನಂತರ, ಪಾಕಿಸ್ತಾನವು ನಾಗರಿಕರ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ಭಾರತ ಆರೋಪಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. “ನಾನು ಆಜಾದ್ ಕಾಶ್ಮೀರದ ಪ್ರತಿಭಟನಾಕಾರರನ್ನು ಭಾರತದ ಸಾಲಿಗೇ ಸೇರಿಸುತ್ತೇನೆ. ಅವರನ್ನು ಕೂಡ ಭಾರತದಂತೆಯೇ ಶತ್ರುಗಳು ಎಂದು ಪರಿಗಣಿಸುತ್ತೇನೆ” ಎಂದು ಆಸಿಫ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸರಿಂದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್

ಹೆಚ್ಚಿದ ಹಿಂಸಾಚಾರ:

ವರದಿಗಳ ಪ್ರಕಾರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸೋಮವಾರ ಸುಮಾರು 25 ಜನರು ಮೃತಪಟ್ಟಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳ ತೀವ್ರ ತನಿಖೆ ಮತ್ತು ಹತೋಟಿಯ ನಡುವೆಯೂ ಜೂನ್ 5ರಿಂದ ಆರಂಭವಾದ ಪ್ರತಿಭಟನೆಗಳಲ್ಲಿ ಇದುವರೆಗೆ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇಂದು ಮೀರ್‌ಪುರದಲ್ಲೂ ಹೊಸ ಹಿಂಸಾಚಾರ ವರದಿಯಾಗಿದೆ. ವರದಿಗಳ ಪ್ರಕಾರ, ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ 12 ನಾಗರಿಕರು ಮೃತಪಟ್ಟಿದ್ದು, ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; 12 ಯೋಧರು ಸೇರಿ 15 ಜನ ಸಾವು

ಭಾರತದ ಪ್ರತಿಕ್ರಿಯೆ:

ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಭಾರತ ಇಂದು ತೀವ್ರವಾಗಿ ಖಂಡಿಸಿದೆ. ನಿರಪರಾಧಿ ನಾಗರಿಕರ ಮೇಲಿನ ಅಡಳಿತದ ದೌರ್ಜನ್ಯ ಮತ್ತು ಕ್ರೌರ್ಯವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀವ್ರವಾಗಿ ಟೀಕಿಸಿದೆ.

ರಾಜಕೀಯ ನಾಯಕರು ಚುನಾವಣೆಯ ಮೇಲೆ ಗಮನ ಹರಿಸಿರುವಾಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಾಕೋಟ್‌ನಲ್ಲಿ ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಆ ಪ್ರದೇಶದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 10:36 pm, Tue, 28 July 26

Source link

International Tiger Conservation Day 2026: ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳಿವು – Kannada News | International Tiger Conservation Day 2026: Know the purpose of International Tiger Conservation Day

ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳುImage Credit source: Getty Images

ಆನೆ, ಸಿಂಹಗಳಂತೆ ಹುಲಿಗಳು ಸಹ (tiger) ಅತ್ಯಂತ ಪ್ರಮುಖ ವನ್ಯಜೀವಿಯಾಗಿದ್ದು, ಇವು ಕಾಡಿನ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ನೈಸರ್ಗಿಕ ಆವಸಸ್ಥಾನಗಳ ನಾಶ, ಅಕ್ರಮ ಬೇಟೆ, ಹವಾಮಾನ ಬದಲಾವಣೆ, ಅರಣ್ಯನಾಶ ಇವೆಲ್ಲದರ ಕಾರಣದಿಂದಾಗಿ ಹುಲಿಗಳ ಸಂತತಿ ಅಳಿವಿನಂಚಿಗೆ ತಲುಪಿದೆ. ಅಳಿವಿನಂಚಿಗೆ ತಲುಪಿರುವ ಹುಲಿಯನ್ನು ನಮ್ಮ ಹಾಗೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅಗತ್ಯವಿದೆ. ಈ ಹುಲಿಗಳ ರಕ್ಷಣೆಗಾಗಿಯೇ ಕೆಲವೊಂದು ಅಭಯಾರಣ್ಯಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ನಮ್ಮ ಕರ್ನಾಟಕದಲ್ಲಿಯೂ ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಅವುಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸವೇನು?

ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ಜುಲೈ 28 ರಂದು ಅಂತಾರಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.  ದಿನದ ಆಚರಣೆ 2010 ರಲ್ಲಿ ಪ್ರಾರಂಭವಾಯಿತು. ರಷ್ಯಾದ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ಜುಲೈ 29 ರಂದು ವಿಶ್ವ ಹುಲಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಪ್ರಪಂಚದಾದ್ಯಂತದ ಸುಮಾರು 13 ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು.  ನಂತರ ಈ ದಿನವನ್ನು ಪ್ರತಿ ವರ್ಷವೂ ಆಚರಿಸುತ್ತಾ ಬರಲಾಗುತ್ತಿದೆ.

ಹುಲಿ ಸಂರಕ್ಷಿತ ಪ್ರದೇಶ ಎಂದರೇನು?

ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳು ಮತ್ತು ನೈಸರ್ಗಿಕ ಅವುಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಮೀಸಲಾಗಿರುವ ಸಂರಕ್ಷಿತ ಪ್ರದೇಶವಾಗಿದೆ. ಈ ಮೀಸಲು ಪ್ರದೇಶಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಮಾರ್ಗಸೂಚಿಗಳ ಪ್ರಕಾರ ನಿರ್ವಹಿಸಲಾಗುತ್ತದೆ.  ಹುಲಿ ಮೀಸಲು ಪ್ರದೇಶಗಳು ಹುಲಿಗಳನ್ನು ಮಾತ್ರವಲ್ಲದೆ ಚಿರತೆಗಳು, ಆನೆಗಳು, ಜಿಂಕೆಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಲೆಕ್ಕವಿಲ್ಲದಷ್ಟು ಸಸ್ಯ ಪ್ರಭೇದಗಳನ್ನು ಸಹ ರಕ್ಷಿಸುತ್ತವೆ.

ಇದನ್ನೂ ಓದಿ: ದೈನಂದಿನ ಜೀವನದಲ್ಲಿ ಸಣ್ಣ ಕಾರ್ಯಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು

ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳು ಯಾವುವು?

ಬಂಡೀಪುರ ರಾಷ್ಟ್ರೀಯ ಉದ್ಯಾನವನ:

870 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು  ದೇಶದ ಪ್ರಮುಖ ಹುಲಿ ರಕ್ಷಣಾ ಅಭಯಾರಣ್ಯಗಳಲ್ಲಿ ಒಂದಾಗಿದೆ.  ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಸ್ಥಾಪಿಸಲಾಯಿತು. ಈ ಪ್ರದೇಶವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು, ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ಮತ್ತು ನಂಜನಗೂಡು ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಇಲ್ಲಿ ವನ್ಯಜೀವಿಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಅರಣ್ಯ ಸಫಾರಿಯನ್ನು ಸಹ ಮಾಡಬಹುದು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ:

ಮಳೆಗಾಲದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಹುಲಿ ಸಂರಕ್ಷಿತ ಅಭಯಾರಣ್ಯಗಳಲ್ಲಿ ನಾಗರಹೊಳೆ ಕೂಡ ಒಂದು. ಇದು ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಸ್ಥಾಪಿಸಲಾದ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇದನ್ನು 1999 ರಲ್ಲಿ ಘೋಷಿಸಲಾಯಿತು. ರಾಜೀವ್‌ ಗಾಂದಿ ರಾಷ್ಟ್ರೀಯ ಉದ್ಯಾನವನ ಎಂದೂ  ಜನಪ್ರಿಯವಾಗಿರುವ  ಈ ಪ್ರದೇಶವು ಹಲವು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಇದನ್ನು 1988 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಲಾಯಿತು. ಬೆಂಗಾಲ್‌ ಟೈಗರ್‌ ಮತ್ತು ಚಿರತೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎರಡು ಪ್ರಮುಖ ಆಕರ್ಷಣೆಗಳಾಗಿವೆ. ಇಲ್ಲಿಯೂ ಕೂಡ ಸಫಾರಿ ಮಾಡುವ ಮೂಲಕ ವನ್ಯ ಜೀವಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಕಾಳಿ ಹುಲಿ ಸಂರಕ್ಷಿತ ಪ್ರದೇಶ:

ಕಾಳಿ ಅಭಯಾರಣ್ಯವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈ ಅಭಯಾರಣ್ಯ ಬೆಂಗಾಲ್‌ ಟೈಗರ್‌, ಕಪ್ಪು ಚಿರತೆ ಮತ್ತು ಆನೆಗಳ ತಾಣವಾಗಿದೆ. ಈ ಅಭಯಾರಣ್ಯವು 1300 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಹರಡಿದ್ದು, ಇದು ಹುಲಿಗಳ ಸಂರಕ್ಷಣೆಗಾಗಿ ಮೀಸಲಾಗಿರುವ ತಾಣವಾಗಿದೆ. ಈ ಉದ್ಯಾನವನವು ಬೆಳಿಗ್ಗೆ 6.00 ರಿಂದ ಸಂಜೆ 6.00 ರವರೆಗೆ ಪ್ರವಾಸಿಗರಿಗಾಗಿ ತೆರೆದಿರುತ್ತದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶ:

ಭದ್ರಾ ವನ್ಯಜೀವಿ ಅಭಯಾರಣ್ಯವು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುವ ಪ್ರಮುಖ ಹುಲಿ ಸಂರಕ್ಷಿತ ತಾಣವಾಗಿದ್ದು, ಇದು 492 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ.  ಇದನ್ನು 1998 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಭದ್ರಾ ಅಭಯಾರಣ್ಯ  ಜೀವವೈವಿಧ್ಯದ ತಾಣವಾಗಿದ್ದು,  ಗಣತಿಯೊಂದರ ಪ್ರಕಾರ  33 ಹುಲಿಗಳು ಮತ್ತು 22 ಚಿರತೆಗಳು ಈ ಅಭಯಾರಣ್ಯದಲ್ಲಿ ವಾಸಿಸುತ್ತಿವೆ. ಈ ಅಭಯಾರಣ್ಯ ಜೀಪ್‌ ಸಫಾರಿ, ಚಾರಣಕ್ಕೆ ಹೆಸರುವಾಸಿಯಾಗಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ: 

ಬಿಆರ್‌ಟಿ ಅಂದರೆ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಕೂಡ ಹುಲಿಗಳು ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನದ ರಕ್ಷಣೆಗಾಗಿ ಮೀಸಲಾಗಿರುವ ತಾಣವಾಗಿದೆ. ಈ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಈ ವನ್ಯಜೀವಿ ಅಭಯಾರಣ್ಯವು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶವಾಯಿತು ಮತ್ತು 2011 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ನೀವು ಹುಲಿಗಳು, ಚಿರತೆಗಳು ಮತ್ತು ಅಪರೂಪದ ಬ್ಲ್ಯಾಕ್‌  ಪ್ಯಾಂಥರ್‌ಗಳನ್ನು ಇಲ್ಲಿ ಕಾಣಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮೋದಿ ಕ್ಲಾಕ್ಡ್ ಇಟ್’; ಸಂಸತ್​​ನಲ್ಲಿ ಜೆನ್​ ಜಿ ಶೈಲಿಯಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ – Kannada News | PM Modi Clocked It BJP MP Bansuri Swaraj Uses Gen Z Term To defend Anti Paper Leak Law

ನವದೆಹಲಿ, ಜುಲೈ 28: ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕದ ಮೇಲಿನ ಲೋಕಸಭೆಯ ಚರ್ಚೆಯ ವೇಳೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಜೆನ್ ಜಿ (Gen Z) ಯುವಜನತೆಯ ಜನಪ್ರಿಯ ಶಬ್ದವನ್ನು ಬಳಸಿ ಗಮನ ಸೆಳೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನಿನ ಅಗತ್ಯವನ್ನು ಪ್ರಧಾನಿ ಮೋದಿ ಸಕಾಲದಲ್ಲಿ ಗ್ರಹಿಸಿದ್ದಾರೆ ಎಂದು ಬಣ್ಣಿಸಿದ ಬಾನ್ಸುರಿ ಸ್ವರಾಜ್, “ಯುಪಿಎ ಸರ್ಕಾರ ನೀತಿಶೂನ್ಯತೆಯನ್ನು ನಿರ್ಮಿಸಿತ್ತು. ಜೆನ್ ​ಝಡ್ ಭಾಷೆಯಲ್ಲಿ ಹೇಳುವುದಾದರೆ, ಮೋದಿ ಅವರು ಅದನ್ನು ಸರಿಯಾಗಿ ಗ್ರಹಿಸಿ, (Modi Ji Clocked It) ಸೂಕ್ತ ಪರಿಹಾರ ಒದಗಿಸಿದ್ದಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ಯುವಜನರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ತರಲಾಗಿದ್ದು, ಯುವ ನಾಯಕರನ್ನು ಮುನ್ನೆಲೆಗೆ ತರುವ ಎನ್‌ಡಿಎ ಪ್ರಯತ್ನದ ಭಾಗವಾಗಿ ಬಾನ್ಸುರಿ ಸ್ವರಾಜ್ ಅವರಿಗೆ ಚರ್ಚೆಯ ನೇತೃತ್ವ ನೀಡಲಾಗಿದೆ. ಪ್ರಸ್ತಾವಿತ ಕಾನೂನು ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಇತರೆ ಅಕ್ರಮಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ. ಇದು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 50 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ಹೆಚ್ಚುವರಿ ದಂಡದ ಜೊತೆಗೆ, ಇಂತಹ ಅಪರಾಧಗಳ ತನಿಖೆಗೆ ‘ವಿಶೇಷ ಕಾರ್ಯಪಡೆ’ ಮತ್ತು ತ್ವರಿತ ವಿಚಾರಣೆಗಾಗಿ ‘ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯ’ಗಳನ್ನು ರಚಿಸಲು ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ.

ಏನಿದು ‘ಕ್ಲಾಕ್ ಇಟ್’ ಪದ?:

‘ಕ್ಲಾಕ್ ಇಟ್’ ಎಂಬುದು ಇಂದಿನ ಯುವ ಪೀಳಿಗೆ (Gen Z) ಬಳಸುವ ಶಬ್ದವಾಗಿದ್ದು, “ಒಂದು ವಿಷಯವನ್ನು ನಿಖರವಾಗಿ ಅಥವಾ ಸರಿಯಾಗಿ ಗ್ರಹಿಸುವುದು” ಅಥವಾ “ಸರಿಯಾದ ನಿರ್ಧಾರ ಕೈಗೊಳ್ಳುವುದು” ಎಂಬ ಅರ್ಥವನ್ನು ನೀಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಲಿವರ್‌ಗೆ ಅಪಾಯಕಾರಿಯೇ ತಿಳಿದುಕೊಳ್ಳಿ – Kannada News | How to Reverse Fatty Liver Naturally: Expert Backed Lifestyle Tips

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಫ್ಯಾಟಿ ಲಿವರ್ (Fatty Liver Disease) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ ಇದು ಲಿವರ್ ಉರಿಯೂತ (NASH), ಫೈಬ್ರೋಸಿಸ್, ಲಿವರ್ ಸಿರೋಸಿಸ್ ಹಾಗೂ ಕೆಲವರಲ್ಲಿ ಲಿವರ್ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ ಮೂಡುತ್ತದೆ. “ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ” ಎಂಬುದು. ಈ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ.

ರಾತ್ರಿ ಊಟ ಬಿಟ್ಟರೆ ಫ್ಯಾಟಿ ಲಿವರ್ ನಿಂದ ಮುಕ್ತಿ ಪಡೆಯಬಹುದೇ?

ಲಿವರ್ ತಜ್ಞರ ಪ್ರಕಾರ, ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಡುವುದರಿಂದ ಫ್ಯಾಟಿ ಲಿವರ್ ಗುಣವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಬದಲಾಗಿ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು, ರಾತ್ರಿ ತಡವಾಗಿ ಊಟ ಮಾಡುವುದನ್ನು ತಪ್ಪಿಸುವುದು, ದಿನದ ಒಟ್ಟು ಕ್ಯಾಲೊರಿಗಳನ್ನು ನಿಯಂತ್ರಿಸುವುದರಿಂದ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.

ರಾತ್ರಿ ತಡವಾಗಿ ಊಟ ಮಾಡುವುದು ಏಕೆ ಅಪಾಯಕಾರಿ?

  • ಹೆಚ್ಚು ಹಸಿವು ಉಂಟಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚುತ್ತದೆ.
  • ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಸಂಗ್ರಹವಾಗುತ್ತವೆ.
  • ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಹೆಚ್ಚಾಗುತ್ತದೆ.
  • ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ.
  • ದೇಹದ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
  • ರಾತ್ರಿ ಊಟವನ್ನು ಮಲಗುವ ಸಮಯಕ್ಕೆ ಕನಿಷ್ಠ 2–3 ಗಂಟೆಗಳ ಮೊದಲು ಮುಗಿಸುವುದು ಉತ್ತಮ.

ಫ್ಯಾಟಿ ಲಿವರ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಪ್ರಮುಖ ಸಲಹೆಗಳು

ದೇಹದ ತೂಕವನ್ನು ನಿಯಂತ್ರಿಸಿ: ಅಧಿಕ ತೂಕ ಇರುವವರು ತಮ್ಮ ದೇಹದ ತೂಕವನ್ನು 7 ರಿಂದ 10 ಶೇಕಡಾ ಕಡಿಮೆ ಮಾಡಿದರೆ ಲಿವರ್‌ನಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಲು ಸಹಾಯವಾಗಬಹುದು.

ನಿಯಮಿತ ವ್ಯಾಯಾಮ ಮಾಡಿ: ವಾರಕ್ಕೆ ಕನಿಷ್ಠ 150 ರಿಂದ 300 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಿ. ಅಥವಾ ವೇಗದ ನಡಿಗೆ, ಸೈಕ್ಲಿಂಗ್, ಈಜು, ಯೋಗ
ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಬಹುದು.

ಇದನ್ನೂ ಓದಿ: ಹೆಪಟೈಟಿಸ್‌ನಿಂದ ಲಿವರ್ ರಕ್ಷಿಸಿಕೊಳ್ಳಲು ಡಾ. ಸಂಹಿತಾ ಉಲ್ಲೋಡ್ ನೀಡಿರುವ ಟಿಪ್ಸ್!

ಸಕ್ಕರೆ ಹೆಚ್ಚಿರುವ ಆಹಾರ: ತಂಪು ಪಾನೀಯಗಳು, ಪ್ಯಾಕೆಟ್ ಜ್ಯೂಸ್, ಕೇಕ್, ಬಿಸ್ಕೆಟ್, ಸಿಹಿ ಪದಾರ್ಥಗಳು, ಹೆಚ್ಚು ಫ್ರಕ್ಟೋಸ್ ಹೊಂದಿರುವ ಆಹಾರದ ಸೇವನೆಯನ್ನು ಕಡಿಮೆ ಮಾಡಿ.

ಪ್ರೋಟೀನ್ ಹೆಚ್ಚಿರುವ ಆಹಾರ: ಪ್ರತಿದಿನ ಆಹಾರದಲ್ಲಿ ಬೇಳೆಕಾಳುಗಳು, ಹಾಲು ಮತ್ತು ಮೊಸರು, ಪನೀರ್, ಮೊಟ್ಟೆ, ಮೀನು, ಸೋಯಾ, ಮೊಳಕೆ ಕಾಳುಗಳು ಇವು ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.

ಮದ್ಯಪಾನದಿಂದ ದೂರವಿರಿ: ಮದ್ಯಪಾನವು ಲಿವರ್‌ಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಫ್ಯಾಟಿ ಲಿವರ್ ಇರುವವರು ಸಾಧ್ಯವಾದಷ್ಟು ಮದ್ಯಪಾನವನ್ನು ತ್ಯಜಿಸುವುದು ಉತ್ತಮ.

ಫ್ಯಾಟಿ ಲಿವರ್‌ನ ಸಾಮಾನ್ಯ ಲಕ್ಷಣಗಳು

  • ನಿರಂತರ ಆಯಾಸ
  • ಹೊಟ್ಟೆಯ ಬಲಭಾಗದಲ್ಲಿ ಅಸ್ವಸ್ಥತೆ
  • ದೇಹದ ಭಾರ ಹೆಚ್ಚಾಗುವುದು
  • ಜೀರ್ಣಕ್ರಿಯೆ ಸಮಸ್ಯೆಗಳು
  • ಹಸಿವು ಕಡಿಮೆಯಾಗುವುದು

ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಫ್ಯಾಟಿ ಲಿವರ್‌ಗೆ ಯಾವುದೇ ಒಂದು ಆಹಾರ ಅಥವಾ ರಾತ್ರಿ ಊಟ ಬಿಡುವುದು ಮಾತ್ರ ಪರಿಹಾರವಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದೇ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸ್ಪೈಡರ್ ಮ್ಯಾನ್’ ಹೊಸ ಚಿತ್ರಕ್ಕೆ ಸೆನ್ಸಾರ್ ಕತ್ತರಿ: 8 ಸೆಕೆಂಡ್‌ಗಳ ಚುಂಬನದ ದೃಶ್ಯ ಕಟ್ – Kannada News | Spider Man Brand New Day Indian Censor Board cuts Kissing Scenes Netizens react

ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ವಿದೇಶಗಳಲ್ಲಿ ತೆರೆಕಾಣುತ್ತಿರುವ ಅದೇ ಆವೃತ್ತಿಯನ್ನು ಭಾರತೀಯ ಪ್ರೇಕ್ಷಕರು ವೀಕ್ಷಿಸಲು ಸಾಧ್ಯವಿಲ್ಲ. ‘ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ’ (CBFC) ಈ ಚಿತ್ರದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿದೆ. ಸಿನಿಮಾವನ್ನು ಪರಿಶೀಲಿಸಿದ ಸೆನ್ಸಾರ್ ಮಂಡಳಿಯು ‘UA 13+’ ಪ್ರಮಾಣಪತ್ರವನ್ನು ನೀಡಿದ್ದು, 13 ವರ್ಷ ಮೇಲ್ಪಟ್ಟ ಮಕ್ಕಳು ಪೋಷಕರ ಮಾರ್ಗದರ್ಶನದೊಂದಿಗೆ ಚಿತ್ರ ವೀಕ್ಷಿಸಬಹುದು. ಆದರೆ, ಸರ್ಟಿಫಿಕೇಟ್ ನೀಡುವ ಮುನ್ನ ಚಿತ್ರದಲ್ಲಿದ್ದ 8 ಸೆಕೆಂಡ್‌ಗಳ ಚುಂಬನದ ದೃಶ್ಯವನ್ನು ತೆಗೆದುಹಾಕುವಂತೆ ಸೂಚಿಸಿದೆ.

ಆಕ್ಷೇಪಾರ್ಹ ಪದಗಳಿಗೂ ಕಟ್:

ಕೇವಲ ಚುಂಬನದ ದೃಶ್ಯ ಮಾತ್ರವಲ್ಲದೆ, ಸಿನಿಮಾದ ಆಡಿಯೋ ಮತ್ತು ಸಬ್‌ಟೈಟಲ್‌ಗಳಲ್ಲಿ ಬಳಕೆಯಾಗಿದ್ದ ಕೆಲವು ಆಕ್ಷೇಪಾರ್ಹ ಪದಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಮಪಕರಿಗೆ ಮಂಡಳಿ ನಿರ್ದೇಶನ ನೀಡಿತ್ತು. ನಿರ್ಮಾಪಕರು ಈ ತಿದ್ದುಪಡಿಗಳನ್ನು ಮಾಡಿದ ನಂತರವೇ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ಸಿಕ್ಕಿದೆ. ಈ ಎಲ್ಲಾ ಬದಲಾವಣೆಗಳ ನಂತರ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾದ ಒಟ್ಟು ಅವಧಿ 2 ಗಂಟೆ 24 ನಿಮಿಷಗಳು ಎಂದು ಖಚಿತಪಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ:

ಸೆನ್ಸಾರ್ ಮಂಡಳಿಯ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಸಿನಿಮಾ ಪ್ರಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಯಸ್ಸಿನ ಆಧಾರದ ಮೇಲೆ ಪ್ರಮಾಣಪತ್ರ ನೀಡಿದ ಮೇಲೆಯೂ ರೊಮ್ಯಾಂಟಿಕ್ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ಕತ್ತರಿಸುವ ಅಗತ್ಯವೇನಿತ್ತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿಯ ಇಂಥ ನಿಲುವಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸೆನ್ಸಾರ್ ಮಂಡಳಿಯ ದ್ವಿಮುಖ ನೀತಿಗೆ ಟೀಕೆ:

‘ರೆಡ್ಡಿಟ್’ ಬಳಕೆದಾರರೊಬ್ಬರು ಕಾಮೆಂಟ್ ಮಾಡುತ್ತಾ, ‘ಬಾಲಿವುಡ್ ಸಿನಿಮಾಗಳಲ್ಲಿ ಕೆಟ್ಟ ನೃತ್ಯ, ಹಾಡು ಹಾಗೂ ಕಾಮಪ್ರಚೋದಕ ದೃಶ್ಯಗಳಿದ್ದರೂ ಸುಲಭವಾಗಿ ಬಿಡುಗಡೆ ಮಾಡಲು ಬಿಡುತ್ತಾರೆ. ಆದರೆ ಹಾಲಿವುಡ್ ಸಿನಿಮಾಗಳು ಬಂದರೆ ಮಾತ್ರ ಸೆನ್ಸಾರ್ ಮಂಡಳಿಗೆ ನಿಯಮಗಳು ನೆನಪಾಗುತ್ತವೆ. ಇದು ಸಂಪೂರ್ಣವಾಗಿ ದ್ವಿಮುಖ ನೀತಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ

ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, ‘ನನಗೇನೂ ಆಶ್ಚರ್ಯವಾಗಿಲ್ಲ. ಕಳೆದ ವರ್ಷ ಸೂಪರ್‌ಮ್ಯಾನ್ ಚಿತ್ರದಲ್ಲೂ ಚುಂಬನದ ದೃಶ್ಯ ಕಟ್ ಮಾಡಿದ್ದ ಇದೇ ಸಿಬಿಎಫ್‌ಸಿ ಸದಸ್ಯರು, ತಮ್ಮ ಸಿದ್ಧಾಂತಕ್ಕೆ ಪೂರಕವಾದ ಹಾಗೂ ಸರ್ಕಾರದ ಪರವಾದ ಸಿನಿಮಾಗಳಿಗೆ ಯಾವುದೇ ಕಟ್ ಇಲ್ಲದೆ ಸುಲಭವಾಗಿ ಒಪ್ಪಿಗೆ ನೀಡುತ್ತಾರೆ’ ಎಂದು ಟೀಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ್ರಿಯಾಂಕಾ ಗಾಂಧಿ ಆಕ್ರೋಶ – Kannada News | Are they terrorists? Congress MP Priyanka Gandhi questions pellet gun use on student Protesters

ನವದೆಹಲಿ, ಜುಲೈ 28: ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆ ತಿದ್ದುಪಡಿ ವಿಧೇಯಕದ ಕುರಿತ ಲೋಕಸಭೆಯ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ. ಇದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಅವರೇನು ಭಯೋತ್ಪಾದಕರಾ? ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಜುಲೈ 20ರಂದು ನಡೆದ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, ವಿದ್ಯಾರ್ಥಿಗಳ ವಿರುದ್ಧ ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳನ್ನು ಬಳಸುವ ಅಗತ್ಯವೇನಿತ್ತು? ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

“ದೇಶದ ಯುವಜನತೆಯ ಮೇಲೆ ಪೆಲೆಟ್ ಗನ್‌ಗಳು ಮತ್ತು ಎಕೆ-47 ಬಂದೂಕುಗಳನ್ನು ಪ್ರಯೋಗಿಸುವ ಅಗತ್ಯವೇನಿತ್ತು? ಅವರೇನು ಭಯೋತ್ಪಾದಕರಾ? ಪೆಲೆಟ್ ಗನ್ ಬಳಸಲು ಆದೇಶ ನೀಡಿದವರು ಯಾರು? ಪ್ರಧಾನಿ ಮೋದಿಯವರೋ? ಅಥವಾ ಗೃಹ ಸಚಿವರೋ? ಅವರು ಇದಕ್ಕೆ ಉತ್ತರಿಸಲೇಬೇಕು. ಇಡೀ ದೇಶವೇ ಈ ಪ್ರಶ್ನೆಯನ್ನು ಕೇಳುತ್ತಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರಶ್ನೆಯಲ್ಲ. ಇಡೀ ದೇಶವೇ ಇದಕ್ಕೆ ಉತ್ತರವನ್ನು ಬಯಸುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ – Kannada News | Supreme Court To Order SIT Probe of NEET Protest Violence

ನವದೆಹಲಿ, ಜುಲೈ 28: ಕಳೆದ ವಾರ ದೇಶಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿರುವ ಆರೋಪಗಳ ಕುರಿತು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಅಭಿಪ್ರಾಯಪಟ್ಟಿದೆ. ಈ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಸುಪ್ರೀಂ ಕೋರ್ಟ್ ಸುಳಿವು ನೀಡಿದ್ದು, ಈ ಕುರಿತು ಕೇಂದ್ರ ಸರ್ಕಾರ, ದೆಹಲಿ ಎನ್‌ಸಿಟಿ ಹಾಗೂ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಪ್ರತಿಕ್ರಿಯೆಯನ್ನು ಕೋರಿದೆ.

ಪ್ರತಿಭಟನಾಕಾರರ ವೈಯಕ್ತಿಕ ಮಾಹಿತಿ ಹಾಗೂ ಡಿಜಿಟಲ್ ಡೇಟಾವನ್ನು ಸುರಕ್ಷಿತವಾಗಿರಿಸಬೇಕು ಮತ್ತು ಸದ್ಯಕ್ಕೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಪ್ರತಿಭಟನಾಕಾರರ ವೈಯಕ್ತಿಕ ವಿವರಗಳನ್ನು ಪ್ರಕಟಿಸಬಾರದು ಎಂದೂ ಕಟ್ಟುನಿಟ್ಟಾಗಿ ಹೇಳಿದೆ. ಈಗಾಗಲೇ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ರಾಜ್ಯಗಳು ತನಿಖೆಯನ್ನು ಮುಂದುವರಿಸಬಹುದು. ಆದರೆ ಅಪರಾಧ ಹಿನ್ನೆಲೆಯಿಲ್ಲದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವ್ಯವಸ್ಥಿತ ಅಕ್ರಮಗಳ ವಿರುದ್ಧ ಜುಲೈ ೨೦ ರಿಂದ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ನಡೆಸಿತು. ಗಾಯಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನೂ ಕೋರ್ಟ್ ನಡೆಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಪಟೈಟಿಸ್‌ನಿಂದ ಲಿವರ್ ರಕ್ಷಿಸಿಕೊಳ್ಳಲು ಡಾ. ಸಂಹಿತಾ ಉಲ್ಲೋಡ್ ನೀಡಿರುವ ಟಿಪ್ಸ್! – Kannada News | Hepatitis Symptoms, Risk Factors and Liver Protection Tips

ಯಕೃತ್ತು (ಲಿವರ್) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆಹಾರದ ಜೀರ್ಣಕ್ರಿಯೆ, ವಿಷಕಾರಿ ಪದಾರ್ಥಗಳ ನಿವಾರಣೆ, ಶಕ್ತಿಯ ಸಂಗ್ರಹಣೆ ಹಾಗೂ ಅನೇಕ ಜೀವಸತ್ವಗಳ ಚಯಾಪಚಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ವ್ಯಾಧಿ ಎಂದರೆ ಅದು ಹೆಪಟೈಟಿಸ್; ಯಕೃತ್ತಿನ ಉರಿಯೂತ (inflammation of the Liver). ಇದು ಹೆಪಟೈಟಿಸ್ ವೈರಸ್(hepatitis A,B,CD and E) ಮೂಲಕ ಹರಡುತ್ತದೆ. ಜೊತೆಗೆಅತಿಯಾದ ಮಧ್ಯಪಾನ, ಕೆಲವು ಔಷಧಗಳ ದುಷ್ಪರಿಣಾಮ, ಯಕೃತ್ತಿನಲ್ಲಿ ಸೇರುವ ಕೊಬ್ಬು (fatty liver) ಅಥವಾ ಕಲುಷಿತ ಆಹಾರ/ನೀರಿನ ಕಾರಣಗಳಿಂದಲೂ ಬರಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್ ಡಿ ಎಂ ಆಯುರ್ವೇದ ಕಾಲೇಜಿನ ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡ್ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ಆರೋಗ್ಯ ಸಮಸ್ಯೆಯ ಲಕ್ಷಣ ಮತ್ತು ಇದನ್ನು ತಡೆಗಟ್ಟಲು ಅನುಸರಿಸಬೇಕಾದ ಕೆಲವು ಸಲಹೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಪಟೈಟಿಸ್ ಪ್ರಮುಖ ಲಕ್ಷಣಗಳು:

ಕಾಮಾಲೆ(ಚರ್ಮ ಮತ್ತು ಕಣ್ಣು ಹಳದಿಯಾಗುವುದು), ಜ್ವರ, ಅತಿಯಾದ ಆಯಾಸ, ವಾಂತಿ ಅಥವಾ ವಾಕರಿಕೆ, ಹೊಟ್ಟೆನೋವು ಮತ್ತು ಮಲ ಮೂತ್ರದ ಬಣ್ಣ ಗಾಢವಾಗುವುದು ಮುಂತಾದ ಲಕ್ಷಣಗಳು ಕಾಣಬಹುದು. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಯಕೃತ್ ಹಾನಿ, liver cirrhosis, ಯಕೃತ್ ಕ್ಯಾನ್ಸರ್ ನಂತಹ ದೀರ್ಘ ಉಪದ್ರವಗಳು ಕಾಡಬಹುದು. ಇದು ಒಬ್ಬ ವ್ಯಕ್ತಿಯ ದೈನಂದಿನ ಕ್ರಿಯೆ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು.

ಹೆಪಟೈಟಿಸ್ ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ:

ಆಹಾರ: ಈ ಕಾಯಿಲೆ ಬರದಂತೆ ತಡೆಗಟ್ಟಲು, ಯಕೃತ್ತಿನ ಆರೋಗ್ಯ ಕಾಪಾಡಲು ಜೀವನಶೈಲಿಯ ಬದಲಾವಣೆಗಳು ಬಹಳ ಸಹಾಯಕಾರಿ. ಅದರಲ್ಲಿಯೂ ಮೊದಲಿಗೆ ಯಕೃತ್ತಿನ ಕಾರ್ಯವನ್ನು ಉತ್ತೇಜಿಸಲು ಸಮತೋಲನದ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕಭರಿತ ನಿಯಮಿತ ಆಹಾರ ಸೇವನೆ, ತಾಜಾ ಹಣ್ಣು ತರಕಾರಿಗಳು, ಧಾನ್ಯಗಳ ಬಳಕೆ ಮಾಡಬಹುದು.

ಯಕೃತ್ ಸಂರಕ್ಷಕ ಆಹಾರ (Liver protective foods): ಅಂದರೆ ನೆಲ್ಲಿಕಾಯಿ, ನಿಂಬೆಹಣ್ಣು, ಬ್ರೋಕಲಿ, ಸಕ್ಕರೆ ಸೇರಿಸದ ಕಾಫಿ, ಬೆರ್ರಿ ಹಣ್ಣುಗಳು, ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಆಲಿವ್ ಎಣ್ಣೆ ಇತ್ಯಾದಿಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬಹುದು. ಇದರ ಜೊತೆಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾದ ಸಕ್ಕರೆ ಇರುವ ಆಹಾರ-ಪಾನೀಯಗಳು, ಸಂಸ್ಕರಿತ ಆಹಾರಗಳು, ಜಂಕ್ ಫುಡ್ ಹಾಗೂ ಮದ್ಯಪಾನವನ್ನು ಸಾಧ್ಯವಾದಷ್ಟು ದೂರವಿಡಬೇಕು. ಏಕೆಂದರೆ ಇವು ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಕೊಬ್ಬಿನ ಯಕೃತ್ತು, ಉರಿಯೂತ ಹಾಗೂ ಇತರ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ!

ಗಿಡಮೂಲಿಕೆ: ಯಕೃತ್ತಿನ ಆರೋಗ್ಯಕ್ಕೆ ಹಲವು ಗಿಡಮೂಲಿಕೆಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿ, ಅಮೃತಬಳ್ಳಿ, ನೆಲನಲ್ಲಿ, ಭೃಂಗರಾಜ, ಕಟುಕಿ, ಪುನರ್ನವ ಮುಂತಾದ ಔಷಧಗಳನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆಯೇ ಬಳಕೆ ಮಾಡಬಾರದು. ಅದರ ಬದಲು ಸೂಕ್ತ ಆಯುರ್ವೇದ ತಜ್ಞರ ಸಲಹೆಯ ಮೇರೆಗೆ ಈ ಔಷಧಿಗಳನ್ನು ಸೇವಿಸಬಹುದು.

ವಿಹಾರ: ದೇಹದ ತೂಕ ಸಮತೋಲನದಲ್ಲಿ ಇಡುವುದು ಬಹಳ ಮುಖ್ಯ. ಹಾಗಾಗಿ ನಿಯಮಿತ ವ್ಯಾಯಾಮ, ಯೋಗದಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು ಹಲವು ಯಕೃತ್ ಸಮಸ್ಯೆಗಳನ್ನು ದೂರವಿಡಬಹುದು.

ಲಸಿಕೆ: ಹೆಪಟೈಟಿಸ್ ಗೆ ಲಭ್ಯವಿರುವ ಲಸಿಕೆಗಳನ್ನು ಸರಿಯಾದ ವಯಸ್ಸಿನಲ್ಲಿ ತಪ್ಪದೆ ತೆಗೆದುಕೊಳ್ಳುವುದು.

ಕೆಲವು ಮುನ್ನೆಚ್ಚರಿಕೆಗಳು: ಶುದ್ಧ ಕುಡಿಯುವ ನೀರು, ಸ್ವಚ್ಛ ಆಹಾರ, ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸ, ಆಸ್ಪತ್ರೆಗಳಲ್ಲಿ ರಕ್ತ ಮತ್ತು ಸೂಜಿ ಬಳಸುವಾಗ ಸೂಕ್ತ ಮುನ್ನೆಚ್ಚರಿಕೆಯಿಂದ ಸೋಂಕು ಹರಡುವುದನ್ನು ತಡೆಯಬಹುದು.

ಯಾವುದೇ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಸರಿಯಾದ ಆಹಾರ ಪದ್ಧತಿ, ಶಿಸ್ತಿನ ಜೀವನಶೈಲಿ, ಸರಿಯಾದ ಲಸಿಕೆಯಿಂದ ಯಕೃತ್ತಿನ ಆರೋಗ್ಯ ಕಾಪಾಡಿ ರೋಗಗಳನ್ನು ತಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುರಕ್ಷಿತ ಬೆಂಗಳೂರಿಗೆ ಬಿಟಿಪಿ ಹೊಸ ಹೆಜ್ಜೆ: ಅನಾಥ ವಾಹನಗಳ ಬಗ್ಗೆ ದೂರು ನೀಡಲು ಈ ಆಪ್ ಬಳಸಿ – Kannada News | Help BTP Clear Bangalore Roads: Report Abandoned Vehicles via ASTraM App for Public Safety

ಬೆಂಗಳೂರು, ಜು.28: ಬೆಂಗಳೂರು ನಗರದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟುಮಾಡುತ್ತಿರುವ ಅನಾಥ ವಾಹನಗಳನ್ನು (Abandoned Vehicles) ತೆರವುಗೊಳಿಸುವ ವಿಶೇಷ ಅಭಿಯಾನವನ್ನು ಬೆಂಗಳೂರು ಸಂಚಾರ ಪೊಲೀಸ್ (BTP) ತೀವ್ರಗೊಳಿಸಿದೆ. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ (ನಗರಾಭಿವೃದ್ಧಿ) ಸಚಿವರು ಕೃಷ್ಣ ಬೈರೇಗೌಡ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮ ಅಭಿಯಾನದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದಾರೆ. ಸುರಕ್ಷಿತ ಹಾಗೂ ಉತ್ತಮ ನಗರಕ್ಕಾಗಿ ಈ ಕಾರ್ಯದಲ್ಲಿ ಭಾಗುವಹಿಸುವಂತೆ ಕೇಳಿಕೊಂಡಿದ್ದಾರೆ.

ನಗರದ ರಸ್ತೆಗಳು ಹಾಗೂ ಕಾಲುದಾರಿಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು BTP ASTraM ಮೊಬೈಲ್ ಆ್ಯಪ್ ಮೂಲಕ ಮಾಹಿತಿ ನೀಡಲು ಕೋರಲಾಗಿದೆ.

ಇದನ್ನೂ ಓದಿ:  ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ

ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿರುವ ಅಧಿಕೃತ ದತ್ತಾಂಶದ ಪ್ರಕಾರ, ಇದುವರೆಗೆ ನಗರದಾದ್ಯಂತ ಕೈಗೊಂಡ ಕ್ರಮಗಳ ವಿವರ ಹೀಗಿದೆ:

ನೋಟಿಸ್ ಅಂಟಿಸಲಾದ ಅನಾಥ ವಾಹನಗಳು: 1,286

ಟೋಯಿಂಗ್ (ತೆರವು) ಮಾಡಲಾದ ವಾಹನಗಳು: 172

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ವಲಯವಾರು ಕೈಗೊಂಡ ಕ್ರಮಗಳ ವಿವರ:

ವಲಯ (Zone) ನೋಟಿಸ್ ಅಂಟಿಸಿದ ವಾಹನಗಳು ಟೋಯಿಂಗ್ ಮಾಡಲಾದ ವಾಹನಗಳು  
ಸೆಂಟ್ರಲ್ (Central) 537 48  
ಪಶ್ಚಿಮ (West) 311 54  
ದಕ್ಷಿಣ (South) 247 34  
ಉತ್ತರ (North) 123 30  
ಪೂರ್ವ (East) 68 6  
ಒಟ್ಟು (Total) 1286 172  

ನಿಮ್ಮ ಬಡಾವಣೆ, ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಬಳಕೆಯಾಗದೆ ಧೂಳು ಹಿಡಿದು ಬಿದ್ದಿರುವ ಅನಾಥ ವಾಹನಗಳು ಕಂಡುಬಂದರೆ, ಸಾರ್ವಜನಿಕರು ತಕ್ಷಣವೇ ‘BTP ASTraM App’ ಡೌನ್‌ಲೋಡ್ ಮಾಡಿಕೊಂಡು, ವಾಹನದ ಫೋಟೋ ಹಾಗೂ ಸ್ಥಳದ ವಿವರದೊಂದಿಗೆ ದೂರು ನೀಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 pm, Tue, 28 July 26

Source link

ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ – Kannada News | India Emerges as World Second Largest Supplier of Seafarers

ನವದೆಹಲಿ, ಜುಲೈ 28: ಭಾರತವು ಜಾಗತಿಕ ಸಾಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2015ರಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದ್ದ ಭಾರತ, ಇದೀಗ 2026ರ ವೇಳೆಗೆ ವಿಶ್ವದ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದೆ. ‘ಬಿಮ್ಕೋ-ಐಸಿಎಸ್ ಸೆಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026’ (BIMCO-ICS Seafarer Workforce Report 2026) ವರದಿಯ ಪ್ರಕಾರ, ಜಾಗತಿಕ ಹಡಗು ರವಾನೆ ಉದ್ಯಮಕ್ಕೆ ಭಾರತವು ಬರೋಬ್ಬರಿ 3,11,936 ನಾವಿಕ ವೃತ್ತಿಪರರನ್ನು ನೀಡುವ ಮೂಲಕ, ಜಾಗತಿಕ ಸಾಗರ ಕಾರ್ಮಿಕ ಶಕ್ತಿಯಲ್ಲಿ ಶೇ. 12.16ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಫಿಲಿಪೈನ್ಸ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ದೇಶ ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

2015ರಲ್ಲಿ ಭಾರತದ ಪಾಲು ಕೇವಲ ಶೇ. 5.2ರಷ್ಟಿತ್ತು (5ನೇ ಸ್ಥಾನ). 2021ರಲ್ಲಿ ಇದು ಶೇ. 6ಕ್ಕೆ ಏರಿಕೆಯಾಗಿತ್ತು. ಆದರೆ ಕಳೆದ ದಶಕದಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದ್ದು, ಶೇ. 12.16ರಷ್ಟು ಏರಿಕೆ ಕಾಣುವ ಮೂಲಕ ಭಾರತ ನಿರ್ಣಾಯಕ ಸಾಧನೆ ಮಾಡಿದೆ.

ವಿಶ್ವದ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಅಧಿಕಾರಿಗಳ ಪೈಕಿ ಭಾರತೀಯರು ಶೇ. 13.41ರಷ್ಟು ಪಾಲನ್ನು ಹೊಂದಿದ್ದಾರೆ. ಹಾಗೂ ರೇಟಿಂಗ್ಸ್ ವಿಭಾಗದಲ್ಲಿ ಶೇ. 11.29ರಷ್ಟು ಪಾಲು ಹೊಂದಿದ್ದಾರೆ.

ಇದನ್ನೂ ಓದಿ: ರಷ್ಯಾದ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕ ಸಾವಿಗೆ ಭಾರತ ಖಂಡನೆ

ಪ್ರಸ್ತುತ ವಿಶ್ವದಲ್ಲೇ 25.7 ಲಕ್ಷ ನಾವಿಕರ ಪೂರೈಕೆಯಿದ್ದು, 25.5 ಲಕ್ಷ ನಾವಿಕರ ಬೇಡಿಕೆಯಿದೆ. ಜಾಗತಿಕವಾಗಿ ಅರ್ಹ ಅಧಿಕಾರಿಗಳ ಅಭಾವವಿರುವುದರಿಂದ ಭಾರತೀಯ ನಾವಿಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಅವರು 2021ರಿಂದ ಕೈಗೊಂಡ ಮೂಲಸೌಕರ್ಯ ಹಾಗೂ ಶಾಸಕಾಂಗ ಸುಧಾರಣೆಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ

ಈ ವರದಿಯನ್ನು ಸ್ವಾಗತಿಸಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಾರ್ವತ್ರಿಕ ನಾಯಕತ್ವದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ನಾವು ಈಗ ‘ಮಿಷನ್ ಶೇ. 20’ ಎಂಬ ಮುಂದಿನ ರಾಷ್ಟ್ರೀಯ ಗುರಿಯನ್ನು ಹೊಂದಿದ್ದೇವೆ. ಜಾಗತಿಕವಾಗಿ ಮರ್ಚೆಂಟ್ ಹಡಗುಗಳಲ್ಲಿ ಸೇವೆ ಸಲ್ಲಿಸುವ ಪ್ರತಿ 5 ನಾವಿಕರಲ್ಲಿ ಒಬ್ಬರು ಭಾರತೀಯರಾಗಿರಬೇಕು ಎಂಬುದು ನಮ್ಮ ಆಶಯವಾಗಿದೆ. ಸಾಗರ ಶಿಕ್ಷಣದ ಸಾಮರ್ಥ್ಯವನ್ನು ವಿಸ್ತರಿಸುವ ಮೂಲಕ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version