ತಮ್ಮಂತೆಯೇ ಬಟ್ಟೆ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪುರುಷರ ವೇಷ ಕಳಚಿದ ಮಂಗಳಮುಖಿಯರು – Kannada News

ಛಿಂದ್ವಾರಾ, ಜೂನ್ 09: ಮದುವೆ ಸಮಾರಂಭಗಳಲ್ಲಿ ನವ ಜೋಡಿ ಹರಸಿ ಅವರು ಕೊಟ್ಟಷ್ಟು ಹಣವನ್ನು ಪಡೆದು ಹೋಗುವ ಮಂಗಳಮುಖಿ(Transgenders)ಯರು ಒಂದು ಕಡೆಯಾದರೆ, ಇತ್ತ ಪುರುಷರು ಮಂಗಳಮುಖಿಯರಂತೆ ವೇಷ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗುಂಪು ಇನ್ನೊಂದು ಕಡೆ. ಈ ಗುಂಪನ್ನು ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮದುವೆ ಹಾಗೂ ಇತರ ಮಂಗಳಕರ ಸಮಾರಂಭಗಳ ಸಂದರ್ಭದಲ್ಲಿ ಹಣದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಕಲಿ ಗ್ಯಾಂಗ್ ಒಂದನ್ನು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ನಾಗರಿಕರು ಅತ್ಯಂತ ಜಾಣಾಕ್ಷತನದಿಂದ ಪತ್ತೆಹಚ್ಚಿದ್ದಾರೆ. ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮಂಗಳಮುಖಿಯರಂತೆ ವೇಷ ಧರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಯುವಕರ ಅಸಲಿ ಮುಖವಾಡವನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ.

ಈ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಇಂತಹ ವಂಚಕರ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಅನುಮಾನ ಮೂಡಿಸಿದ ಅತಿಯಾದ ಬೇಡಿಕೆ, ಬಯಲಾಯ್ತು ವಂಚನೆ
ದರ್ಬಾಯ್ ಗ್ರಾಮದಲ್ಲಿ ವೈಭವದ ಮದುವೆ ಸಮಾರಂಭ ನಡೆಯುತ್ತಿದ್ದಾಗ, ಮಂಗಳಮುಖಿಯರಂತೆ ಉಡುಪು, ಮೇಕಪ್ ಮಾಡಿಕೊಂಡ ಪುರುಷರು ವಧು-ವರರ ಕುಟುಂಬಸ್ಥರ ಬಳಿ ದೊಡ್ಡ ಮೊತ್ತದ ಹಣವನ್ನು ನೀಡುವಂತೆ ಪಟ್ಟು ಹಿಡಿದರು. ಆದರೆ, ಅವರ ವರ್ತನೆ ಮತ್ತು ಅತಿಯಾದ ಒತ್ತಾಯವು ಅಲ್ಲಿದ್ದ ಗ್ರಾಮಸ್ಥರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು.

ಮತ್ತಷ್ಟು ಓದಿ: ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ

ಗ್ರಾಮಸ್ಥರು ತಕ್ಷಣವೇ ಸ್ಥಳೀಯ ಮಂಗಳಮುಖಿಯರ ಸಮುದಾಯದ ಮುಖಂಡರಿಗೆ ಫೋನ್ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ತೃತೀಯ ಲಿಂಗಿ ಸಮುದಾಯದ ಸದಸ್ಯರು ಈ ಅಪರಿಚಿತರ ಗುರುತನ್ನು ಪರಿಶೀಲಿಸಿದಾಗ, ಅವರು ಮಂಗಳಮುಖಿಯರಲ್ಲ ಬದಲಿಗೆ ಹಣದ ಆಸೆಗೆ ಸೀರೆ ಉಟ್ಟು ವೇಷ ಧರಿಸಿದ್ದ ಯುವಕರು ಎಂಬ ಆಘಾತಕಾರಿ ಸತ್ಯ ಬಹಿರಂಗವಾಯಿತು.

ವಿಡಿಯೋ

ಸ್ಥಳದಲ್ಲೇ ತರಾಟೆಗೆ ತಗೆದುಕೊಂಡ ಮಹಿಳೆಯರು
ವಂಚನೆ ಸಂಪೂರ್ಣವಾಗಿ ಜಗಜ್ಜಾಹೀರಾಗುತ್ತಿದ್ದಂತೆ ಮದುವೆ ಮನೆಯಲ್ಲಿದ್ದ ಮಹಿಳೆಯರು ಮತ್ತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮಹಿಳೆಯರು ಆ ನಕಲಿ ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ, ಅವರ ಮುಖವಾಡ ಮತ್ತು ವೇಷಭೂಷಣಗಳನ್ನು ಕಳಚಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿದ್ದವರು ಇಡೀ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸಮಾಜಕ್ಕೆ ವಂಚಿಸುವ ಇಂತಹ ಗ್ಯಾಂಗ್‌ಗಳ ವಿರುದ್ಧ ಜಾಗರೂಕರಾಗಿರಲು ಈ ವಿಡಿಯೋ ನೆರವಾಗುತ್ತಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಈ ನಕಲಿ ಗ್ಯಾಂಗ್ ಈ ಹಿಂದೆಯೂ ಜಿಲ್ಲೆಯ ಹಲವಾರು ಮದುವೆಗಳು, ಮಗುವಿನ ಜನನ ಹಾಗೂ ಗೃಹಪ್ರವೇಶದಂತಹ ಆಚರಣೆಗಳಿಗೆ ಮಂಗಳಮುಖಿಯರಂತೆ ನಟಿಸುತ್ತಾ ನುಗ್ಗಿ, ಅಮಾಯಕ ಕುಟುಂಬಗಳಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೈಟ್ ಕ್ಲಬ್​ನಲ್ಲಿ ಗಲಾಟೆ: ಇಂಗ್ಲೆಂಡ್ ಆಟಗಾರರಿಬ್ಬರ ವಿರುದ್ಧ ತನಿಖೆ ಶುರು! – Kannada News

ಲಾರ್ಡ್ಸ್ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ 115 ರನ್‌ಗಳ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್‌ ಒಂದರಲ್ಲಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಇವರಿಬ್ಬರ ವಿರುದ್ಧ ಶಿಸ್ತು ಕ್ರಮದ ತನಿಖೆ ಆರಂಭಿಸಿದೆ.

 ಏನಿದು ಘಟನೆ?

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಮುಗಿದ ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಚೆಲ್ಸಿಯಾದಲ್ಲಿರುವ ಪ್ರಸಿದ್ಧ ‘ರೆಕ್ಸ್ ರೂಮ್ಸ್’ ನೈಟ್‌ಕ್ಲಬ್​ಗೆ ತೆರಳಿದ್ದರು. ಈ ವೇಳೆ ಸರಸೆನ್ಸ್ ರಗ್ಬಿ ಅಕಾಡೆಮಿಯ ಆಟಗಾರರು ಕೂಡ ಅಲ್ಲಿದ್ದರು.

ಈ ಪಾರ್ಟಿಯ ನಡುವೆ ಬೆನ್ ಸ್ಟೋಕ್ಸ್ ಹಾಗೂ ಗಸ್ ಅಟ್ಕಿನ್ಸನ್ ಸರಸೆನ್ಸ್ ರಗ್ಬಿ ಅಕಾಡೆಮಿಯ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ಮಾತಿನ ಚಕಮಕಿಯಿಂದಾಗಿ ಗಲಾಟೆ ಕೂಡ ನಡೆದಿದೆ.

ಇತ್ತ ಗಲಾಟೆಯ ನಡುವೆ ಗಸ್ ಅಟ್ಕಿನ್ಸನ್ ಅವರತ್ತ ತೂರಿ ಬಂದ ಹೊಡೆತವನ್ನು ತಡೆಯಲು ಹೋದ ಇಸಿಬಿ ಭದ್ರತಾ ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಬೆನ್ ಸ್ಟೋಕ್ಸ್ ಅಥವಾ ಗಸ್ ಅಟ್ಕಿನ್ಸನ್ ಈ ಗಲಾಟೆಯನ್ನು ಶುರು ಮಾಡಿಲ್ಲ ಮತ್ತು ಇಬ್ಬರಿಗೂ ಯಾವುದೇ ದೈಹಿಕ ಗಾಯಗಳಾಗಿಲ್ಲ. ಆದರೆ, ತಂಡದ ನಿಯಮಗಳನ್ನು ಮೀರಿ ತಡರಾತ್ರಿ ಹೊರಗುಳಿದಿದ್ದೇ ಇವರ ಪಾಲಿಗೆ ಮುಳ್ಳಾಗಿದೆ.

ಕಟ್ಟುನಿಟ್ಟಿನ ‘ನಿಯಮ’ ಮೀರಿದ ಆಟಗಾರರು:

ಇತ್ತೀಚೆಗಷ್ಟೇ ನ್ಯೂಝಿಲೆಂಡ್‌ನಲ್ಲಿ ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕ ಹ್ಯಾರಿ ಬ್ರೂಕ್ ಮೇಲೆ ಬೌನ್ಸರ್ ಒಬ್ಬರು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಕಾರಣದಿಂದಾಗಿ ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಆಟಗಾರರಿಗೆ ಮಧ್ಯರಾತ್ರಿ 12 ಗಂಟೆಯ ಕರ್ಫ್ಯೂ ನಿಯಮವನ್ನು ಕಡ್ಡಾಯಗೊಳಿಸಿತ್ತು. ಅಂದರೆ ತಡರಾತ್ರಿ ಪಾರ್ಟಿಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿತ್ತು.

ಇದಾಗ್ಯೂ ಬೆನ್ ಸ್ಟೋಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಈ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಮುಂಜಾನೆವರೆಗೂ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ನಡೆದ ಜಗಳವೇ ಇದೀಗ ಇಬ್ಬರು ಆಟಗಾರರ ಪಾಲಿಗೆ ಮುಳುವಾಗಿದೆ.

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಇಸಿಬಿ, ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಾದ ಕ್ರಿಕೆಟ್ ರೆಗ್ಯುಲೇಟರ್‌ಗೆ ಒಪ್ಪಿಸಿದೆ. ಆಟಗಾರರ ವರ್ತನೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆ ಆರಂಭವಾಗಿದೆ.

ಸಂಕಷ್ಟಕ್ಕೆ ಸಿಲುಕಿದ ಇಸಿಬಿ:

ಈ ವಿವಾದದಿಂದಾಗಿ ಜೂನ್ 17 ರಿಂದ ‘ದಿ ಓವಲ್’ ಮೈದಾನದಲ್ಲಿ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಸಿದ್ಧತೆ ಸಂಪೂರ್ಣ ಹಳಿ ತಪ್ಪಿದೆ. ಅಲ್ಲದೆ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಇನ್ನೂ ಕೂಡ ತಂಡವನ್ನು ಪ್ರಕಟಿಸಿಲ್ಲ.

  • ತಂಡದ ಪ್ರಕಟಣೆ ವಿಳಂಬ: ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಬೇಕಾಗಿದ್ದ ಇಸಿಬಿ, ಈ ವಿವಾದದ ಹಿನ್ನೆಲೆಯಲ್ಲಿ ಸದ್ಯಕ್ಕೆ ತಂಡದ ಪ್ರಕಟಣೆಯನ್ನು ಮುಂದೂಡಿದೆ.
  • ನಾಯಕತ್ವಕ್ಕೆ ಕುತ್ತು: ಬೆನ್ ಸ್ಟೋಕ್ಸ್ ಈ ಹಿಂದೆ ಕೂಡ ಇಂತಹದೇ ವಿವಾದಗಳಲ್ಲಿ ಸಿಲುಕಿದ್ದರು. ಈಗ ತಂಡದ ನಾಯಕನಾಗಿಯೇ ನಿಯಮ ಮುರಿದಿರುವುದರಿಂದ ಅವರ ನಾಯಕತ್ವದ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.
  •  ಪ್ರಮುಖ ಬೌಲರ್ ಅಲಭ್ಯತೆ ಭೀತಿ: ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಇಂಗ್ಲೆಂಡ್ ಗೆಲುವಿನ ರೂವಾರಿಯಾಗಿದ್ದ ಗಸ್ ಅಟ್ಕಿನ್ಸನ್, ಶಿಸ್ತು ಕ್ರಮದ ಭಾಗವಾಗಿ ತಂಡದಿಂದ ಅಮಾನತಾಗುವ ಭೀತಿಯಲ್ಲಿದ್ದಾರೆ.

ಇದನ್ನೂ ಓದಿ: 9 ವಿಕೆಟ್ ಪತನದೊಂದಿಗೆ ಭಾರತ vs ಅಫ್ಘಾನ್ ಟೆಸ್ಟ್ ಕೊನೆಗೊಂಡಿದ್ದೇಕೆ?

ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಮೈದಾನದ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್‌ಗೆ, ಈ ನೈಟ್‌ಕ್ಲಬ್ ವಿವಾದ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ನಿಯಮ ಮತ್ತು ಶಿಸ್ತಿಗೆ ಹೆಸರಾದ ಕ್ರಿಕೆಟ್ ಲೋಕದಲ್ಲಿ, ತಂಡದ ನಾಯಕನೇ ಕರ್ಫ್ಯೂ ಉಲ್ಲಂಘಿಸಿ ತನಿಖೆ ಎದುರಿಸುತ್ತಿರುವುದು ಇಂಗ್ಲೆಂಡ್‌ ತಂಡದ ವರ್ಚಸ್ಸಿಗೆ ಭಾರಿ ಧಕ್ಕೆ ತಂದಿದೆ. ಹೀಗಾಗಿ ಬೆನ್​ ಸ್ಟೋಕ್ಸ್​ ಹಾಗೂ ಗಸ್ ಅಟ್ಕಿನ್ಸನ್ ವಿರುದ್ಧ ಇಸಿಬಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

Source link

Karnataka Weather Forecast: ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ! ರಾಜ್ಯಾದ್ಯಂತ ಮುಂದಿನ 3 ದಿನ ಭಾರಿ ಮಳೆ – Kannada News

ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು, ಜೂನ್ 09: ನೈಋತ್ಯ ಮುಂಗಾರು ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವರುಣನ (Weather) ಅಬ್ಬರ ಜೋರಾಗಿದ್ದು, ಹವಾಮಾನ ಇಲಾಖೆಯು ಚಿಕ್ಕಮಗಳೂರು ಸೇರಿದಂತೆ 5 ಜಿಲ್ಲೆಗಳಿಗೆ ಅತ್ಯಂತ ಭಾರಿ ಮಳೆಯ ಹಿನ್ನೆಲೆ ರೆಡ್ ಅಲರ್ಟ್ (Red Alert) ಘೋಷಿಸಿದೆ. ಇಂದೂ ಸೇರಿದಂತೆ ಮೂರು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪದ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮುಖ್ಯಾಂಶಗಳು

  • ಚಿಕ್ಕಮಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.
  • ನದಿ ತೀರ, ತಗ್ಗು ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
  • ತುರ್ತು ಪರಿಸ್ಥಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಲ್ಪ್‌ಲೈನ್ ಆರಂಭಿಸಲಾಗಿದೆ.

5 ಜಿಲ್ಲೆಗಳಿಗೆ ರೆಡ್ ಅಲರ್ಟ್: ಎಲ್ಲೆಲ್ಲಿ ಭಾರಿ ಮಳೆ?

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಸೂಚಿಸಲಾಗಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಇಲ್ಲೂ ಭಾರಿ ಮಳೆಯಾಗಲಿದೆ. ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ.

ಚಿಕ್ಕಮಗಳೂರಿನಲ್ಲಿ ಕಟ್ಟೆಚ್ಚರ: 24 ಗಂಟೆ ಸಹಾಯವಾಣಿ ಆರಂಭ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಹೈ ಅಲರ್ಟ್ ಘೋಷಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ತೀರ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತಾಲೂಕು ಮಟ್ಟದಲ್ಲಿ ಪರಿಸ್ಥಿತಿ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲಾ ತುರ್ತು ಸೇವಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಇರುವಂತೆ ಡಿಸಿ ಆದೇಶಿಸಿದ್ದಾರೆ. ಡಿಸಿ ಕಚೇರಿ ಮತ್ತು ಎಸ್​ಪಿ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್​ಲೈನ್ ಆರಂಭಿಸಲಾಗಿದೆ. ತುರ್ತು ಸಂದರ್ಭದಲ್ಲಿ 08262-238950 ಅಥವಾ 9480805100 ನಂಬರ್​ಗಳಿಗೆ ಕರೆ ಮಾಡುವಂತೆ ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

9 ವಿಕೆಟ್ ಪತನದೊಂದಿಗೆ ಭಾರತ vs ಅಫ್ಘಾನ್ ಟೆಸ್ಟ್ ಕೊನೆಗೊಂಡಿದ್ದೇಕೆ? – Kannada News

ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯವು ಭರ್ಜರಿ ದಾಖಲೆಯೊಂದಿಗೆ ಮುಕ್ತಾಯ ಕಂಡಿದೆ. ಅದು ಸಹ ಕೊನೆಯ ಇನಿಂಗ್ಸ್​ನಲ್ಲಿ 9 ವಿಕೆಟ್​ಗಳ ಪತನದೊಂದಿಗೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯ ಮುಗಿಯಲು ಎದುರಾಳಿ ತಂಡದ 10 ವಿಕೆಟ್‌ಗಳನ್ನು ಉರುಳಿಸಬೇಕು. ಆದರೆ, ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ 9ನೇ ವಿಕೆಟ್ ಪತನವಾಗುತ್ತಿದ್ದಂತೆ ಅಂಪೈರ್‌ಗಳು ಪಂದ್ಯ ಮುಕ್ತಾಯ ಎಂದು ಘೋಷಿಸಿದರು. ಇದಕ್ಕೆ ಮುಖ್ಯ ಕಾರಣ ಅಫ್ಘಾನ್​ ಆಟಗಾರನ ಗಾಯ.

9 ವಿಕೆಟ್‌ಗೆ ಪಂದ್ಯ ಮುಗಿಯಲು ಕಾರಣವೇನು?

ಈ ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ಅಫ್ಘಾನಿಸ್ತಾನದ ಆಲ್‌ರೌಂಡರ್ ಶರಾಫುದ್ದೀನ್ ಅಶ್ರಫ್ ಅವರು ತೀವ್ರ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿದ್ದರು. ತೀವ್ರ ನೋವಿನಿಂದಾಗಿ ಅವರು ಮೊದಲ ಇನ್ನಿಂಗ್ಸ್‌ನಲ್ಲೇ ಬ್ಯಾಟಿಂಗ್ ಮಾಡಲು ಪರದಾಡಿದ್ದರು ಮತ್ತು ಓಡಲು ಸಾಧ್ಯವಾಗದೆ ಮೈದಾನದಿಂದ ಹೊರನಡೆದಿದ್ದರು.

ಎರಡನೇ ಇನ್ನಿಂಗ್ಸ್ ವೇಳೆಗೆ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು. ಇದರಿಂದಾಗಿ ಅವರು ಬ್ಯಾಟಿಂಗ್ ಮಾಡಲು ಸಂಪೂರ್ಣ ಅಸಮರ್ಥರಾಗಿದ್ದಾರೆ ಎಂದು ಅಫ್ಘಾನ್ ಮ್ಯಾನೇಜ್‌ಮೆಂಟ್ ಘೋಷಿಸಿದರು.

ಕನ್ಕಶನ್ ಆಯ್ಕೆ ಇಲ್ಲ!

ಐಸಿಸಿ ನಿಯಮದ ಪ್ರಕಾರ,  ಪಂದ್ಯದ ವೇಳೆ ಬ್ಯಾಟರ್‌ನ ತಲೆಗೆ ಅಥವಾ ಕುತ್ತಿಗೆಗೆ ಚೆಂಡು ಬಡಿದು ಗಂಭೀರ ಪೆಟ್ಟಾದರೆ, ಆಗ ಅವರ ಬದಲಿಗೆ ಮತ್ತೊಬ್ಬ ಆಟಗಾರನಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಇದನ್ನು ‘ಕನ್ಕಶನ್ ಸಬ್‌ಸ್ಟಿಟ್ಯೂಟ್’ ಎನ್ನಲಾಗುತ್ತದೆ.

ಅಫ್ಘಾನ್ ಆಟಗಾರ ಶರಾಫುದ್ದೀನ್ ಅಶ್ರಫ್ ಅವರಿಗೆ ತಲೆಗೆ ಪೆಟ್ಟಾಗಿರಲಿಲ್ಲ, ಬದಲಿಗೆ ಕಾಲಿನ ಸ್ನಾಯು ಸೆಳೆತ ಉಂಟಾಗಿತ್ತು. ಹೀಗಾಗಿ ಈ ನಿಯಮದಡಿಯೂ ಅವರಿಗೆ ಬದಲಿ ಬ್ಯಾಟರ್ ಪಡೆಯಲು ಸಾಧ್ಯವಾಗಲಿಲ್ಲ.

ಅದರಂತೆ 9 ಬ್ಯಾಟರ್​ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆಡಲಿದ್ದೇವೆ ಎಂಬುದನ್ನು ಅಫ್ಘಾನ್ ಮ್ಯಾನೇಜ್ಮೆಂಟ್ ಅಂಪೈರ್​ಗಳಿಗೆ ತಿಳಿಸಿದ್ದರು. ಹೀಗಾಗಿ ಅಫ್ಘಾನಿಸ್ತಾನ್ ತಂಡದ ಇನಿಂಗ್ಸ್ 9 ವಿಕೆಟ್ ಪತನದೊಂದಿಗೆ ಅಂತ್ಯವಾಗಿದೆ.

ಭಾರತಕ್ಕೆ ಐತಿಹಾಸಿಕ ದಾಖಲೆ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಿತು.

  • ಮೊದಲ ಇನಿಂಗ್ಸ್ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 564 ರನ್​ಗಳಿಸಿ ಡಿಕ್ಲೇರ್ ಘೋಷಿಸಿದ್ದರು.
  • ಅಫ್ಘಾನಿಸ್ತಾನ್ ತಂಡವು ಮೊದಲ ಇನಿಂ ಗ್ಸ್​ನಲ್ಲಿ 152 ರನ್​ಗಳಿಗೆ ಆಲೌಟ್ ಆಗಿದ್ದರು.
  • 412 ರನ್​ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಫಾಲೋಆನ್ ಹೇರಿತು.
  • ದ್ವಿತೀಯ ಇನಿಂಗ್ಸ್​​ ಆರಂಭಿಸಿದ ಅಫ್ಘಾನಿಸ್ತಾನ್ ತಂಡವು ಕೇವಲ 112 ರನ್​ಗಳಿಗೆ ಆಲೌಟ್ ಆಗಿದ್ದಾರೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಎಂಟ್ರಿ: ಟೀಮ್ ಇಂಡಿಯಾದ 3 ತಂಡಗಳು ಪ್ರಕಟ

ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ ಮತ್ತು ರನ್‌ಗಳ ಆಧಾರದಲ್ಲಿ ದಾಖಲಾದ ಅತಿ ದೊಡ್ಡ ಗೆಲುವು ಎಂಬುದು ವಿಶೇಷ.

Source link

‘ಕ್ರಿಶ್ 4’ ನಿರ್ದೇಶಕ ಹೃತಿಕ್-ನಿರ್ಮಾಣ ಸಂಸ್ಥೆ ಮಧ್ಯೆ ಭಿನ್ನಾಭಿಪ್ರಾಯ? ಸಿಕ್ತು ಸ್ಪಷ್ಟನೆ – Kannada News

ಬಾಲಿವುಡ್‌ನ ಅತ್ಯಂತ ಯಶಸ್ವಿ ಸೂಪರ್ ಹೀರೋ ಫ್ರಾಂಚೈಸಿ ‘ಕ್ರಿಶ್’ (Krrish) ಸರಣಿಯ ಮುಂದಿನ ಭಾಗ ‘ಕ್ರಿಶ್ 4’ ಬಗ್ಗೆ ಸದ್ಯ ಬಿ-ಟೌನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರದ ಮೂಲಕ ನಟ ಹೃತಿಕ್ ರೋಷನ್ ನಿರ್ದೇಶಕರಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದು, ಸಿನಿಮಾ ಬಜೆಟ್ ವಿಷಯವಾಗಿ ದೊಡ್ಡ ವದಂತಿಗಳು ಹರಿದಾಡುತ್ತಿದ್ದವು. ಚಿತ್ರದ ಅದ್ದೂರಿ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಸಲುವಾಗಿ ಹೃತಿಕ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗೆ ಈಗ ಅವರ ತಂದೆ, ಹಿರಿಯ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವದಂತಿಗಳ ಬಗ್ಗೆ ಆಕ್ರೋಶ ಹೊರಹಾಕಿರುವ ರಾಕೇಶ್ ರೋಷನ್, ಇವೆಲ್ಲವೂ ಕೇವಲ ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ. ‘ಹೃತಿಕ್ ವರ್ಲ್ಡ್ ಕ್ಲಾಸ್ ಆ್ಯಕ್ಷನ್ ಹಾಗೂ ವಿಎಫ್‌ಎಕ್ಸ್​ಗಾಗಿ 500 ಕೋಟಿ ರೂ. ಬಜೆಟ್ ಕೇಳಿದ್ದಾನೆ. ಆದರೆ ಚಿತ್ರದ ಸಹ-ನಿರ್ಮಾಪಕರಾದ ಯಶ್ ರಾಜ್ ಫಿಲ್ಮ್ಸ್ ಬಜೆಟ್ ಅನ್ನು 350 ಕೋಟಿ ರೂಪಾಯಿಗೆ ಸೀಮಿತಗೊಳಿಸಲು ಬಯಸಿದೆ ಎಂಬುದೆಲ್ಲಾ ಶುದ್ಧ ಸುಳ್ಳು’ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

‘ಇಂತಹ ದೊಡ್ಡ ಮಟ್ಟದ ಮತ್ತು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾವನ್ನು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ನಾನು ಕೂಡ ‘ಕ್ರಿಶ್’ ಸರಣಿಯ ಹಿಂದಿನ ಸಿನಿಮಾಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಂಡಿದ್ದೆ’ ಎಂದು ರಾಕೇಶ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಕ್ರಿಶ್ 4’ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ?

ಸಿನಿಮಾ ಸೆಟ್ಟೇರುವುದು ತಡವಾಗುತ್ತಿರುವ ಬಗ್ಗೆ ಮಾತನಾಡಿದ ರಾಕೇಶ್, ‘ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಪ್ರಸ್ತುತ ಹೃತಿಕ್ ತನ್ನದೇ ಆದ ಸ್ವಂತ ಪ್ರೊಡಕ್ಷನ್ ಹೌಸ್‌ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾನೆ. ಕ್ರಿಶ್ (ಹೃತಿಕ್) ಈಗ ಬೇರೆಯದೇ ಲೋಕದಲ್ಲಿದ್ದಾನೆ. ನಾವೆಲ್ಲರೂ ಆತನ ಡೇಟ್ಸ್‌ಗಾಗಿ ಕಾಯುತ್ತಿದ್ದೇವೆ’ ಎಂದು ನಗುತ್ತಾ ಉತ್ತರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಚಿತ್ರಕಥೆ ಅಂತಿಮ ಹಂತದಲ್ಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.

ಮಗನಿಗೆ ನಿರ್ದೇಶನದ ಜವಾಬ್ದಾರಿ ವಹಿಸಿದ ತಂದೆ:

ಈ ಬಾರಿ ರಾಕೇಶ್ ರೋಷನ್ ತಮ್ಮ ಹೆಮ್ಮೆಯ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಗ ಹೃತಿಕ್ ರೋಷನ್‌ಗೆ ಹಸ್ತಾಂತರಿಸಿದ್ದಾರೆ. ‘ಕ್ರಿಶ್ ಚಿತ್ರದ ಪ್ರತಿ ಹಂತವನ್ನೂ ಹೃತಿಕ್ ನನ್ನ ಜೊತೆಯಲ್ಲೇ ಉಸಿರಾಡಿದ್ದಾನೆ ಮತ್ತು ಕನಸು ಕಂಡಿದ್ದಾನೆ. ಮುಂದಿನ ದಶಕದ ಪ್ರೇಕ್ಷಕರಿಗೆ ಕ್ರಿಶ್ ಜರ್ನಿಯನ್ನು ಹೇಗೆ ಕೊಂಡೊಯ್ಯಬೇಕೆಂಬ ಬಗ್ಗೆ ಆತನಿಗೆ ಸ್ಪಷ್ಟ ಹಾಗೂ ಮಹತ್ವಾಕಾಂಕ್ಷೆಯ ವಿಷನ್ ಇದೆ. ನಮ್ಮ ಇಡೀ ಕುಟುಂಬಕ್ಕೆ ಅತ್ಯಂತ ಆಪ್ತವಾದ ಈ ಸಿನಿಮಾಗೆ ಆತ ನಿರ್ದೇಶನ ಮಾಡುತ್ತಿರುವುದನ್ನು ಕಂಡು ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ರಾಕೇಶ್ ರೋಷನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

H1B Visa: ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತೀಯ ಐಟಿ ವೃತ್ತಿಪರರಿಗೆ ಗುಡ್​ ನ್ಯೂಸ್, ಡೊನಾಲ್ಡ್​ ಟ್ರಂಪ್ ವಿಧಿಸಿದ್ದ ಎಚ್​1ಬಿ ವೀಸಾ ಹೆಚ್ಚುವರಿ ಶುಲ್ಕ ರದ್ದು – Kannada News

ಬೋಸ್ಟನ್, ಜೂನ್ 09: ಅಮೆರಿಕ(America)ದಲ್ಲಿ  ಕೆಲಸ ಮಾಡುವ ಕನಸು ಕಾಣುತ್ತಿರುವ ಭಾರತೀಯ ಐಟಿ ವೃತ್ತಿಪರರು ಹಾಗೂ ಅಲ್ಲಿನ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಯುಎಸ್ ಫೆಡರಲ್ ನ್ಯಾಯಾಲಯ ದೊಡ್ಡ ಪರಿಹಾರ ನೀಡಿದೆ. ಹೊಸ ಎಚ್​-1ಬಿ ವೀಸಾ ಅರ್ಜಿಗಳ ಮೇಲೆ ವಾರ್ಷಿಕ ಬರೋಬ್ಬರಿ $1,00,000 ಅಂದರೆ ಸುಮಾರು 96 ಲಕ್ಷ ರೂ. ಹೆಚ್ಚುವರಿ ಶುಲ್ಕ ವಿಧಿಸುವ ಡೊನಾಲ್ಡ್​ ಟ್ರಂಪ್ ಆಡಳಿತ ವಿವಾದಾತ್ಮಕ ನಿರ್ಧಾರವನ್ನು ಬೋಸ್ಟನ್ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಈ ಭಾರಿ ಶುಲ್ಕದ ನೀತಿ ಸಂಪೂರ್ಣವಾಗಿ ಕಾನೂನು ಬಾಹಿರ ಎಂದು ಹೇಳಿರುವ ನ್ಯಾಯಾಲಯ ತಕ್ಷಣದಿಂದಲೇ ಜಾರಿಗೆ ಬಾರದಂತೆ ರದ್ದುಗೊಳಿಸಿದೆ.

ನ್ಯಾಯಾಲಯದ ಈ ಐತಿಹಾಸಿಕ ತೀರ್ಪು ಸಿಲಿಕಾನ್ ವ್ಯಾಲಿ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ಪ್ರತಿವರ್ಷ ಅಮೆರಿಕಕ್ಕೆ ವಲಸೆ ಹೋಗುವ ಸಾವಿರಾರು ವಿದೇಶಿ ತಜ್ಞರಿಗೆ, ವಿಶೇಷವಾಗಿ ಭಾರತೀಯರಿಗೆ ಅತ್ಯಂತ ದೊಡ್ಡ ಜಯ ತಂದುಕೊಟ್ಟಿದೆ.

ತೆರಿಗೆ ವಿಧಿಸುವ ಅಧಿಕಾರ ಅಧ್ಯಕ್ಷರಿಗಿಲ್ಲ: ನ್ಯಾಯಾಧೀಶ ಲಿಯೋ ಸೊರೊಕಿನ್ ತೀರ್ಪು
ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೌಶಲ್ಯವಿರುವ ವಿದೇಶಿ ಕೆಲಸಗಾರರ ವೀಸಾಗೆ ಕಠಿಣ ಮಿತಿ ಹೇರಲು ಹಾಗೂ ಪ್ರಸ್ತುತ ಇದ್ದ ದರವನ್ನು 25 ರಿಂದ 50 ಪಟ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದರು. ಇದನ್ನು ವಿರೋಧಿಸಿ 20 ಡೆಮಾಕ್ರೆಟಿಕ್ ರಾಜ್ಯಗಳ ಅಟಾರ್ನಿ ಜನರಲ್‌ಗಳು (ಕ್ಯಾಲಿಫೋರ್ನಿಯಾ ನೇತೃತ್ವದಲ್ಲಿ) ನ್ಯಾಯಾಲಯದ ಮೊಕದ್ದಮೆ ಹೂಡಿದ್ದರು. ಈ ಜಂಟಿ ಅರ್ಜಿಯ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಧೀಶ ಲಿಯೋ ಸೊರೊಕಿನ್ (Leo Sorokin) ಅವರು ಸೋಮವಾರ (ಜೂನ್ 8) 42 ಪುಟಗಳ ಸುದೀರ್ಘ ತೀರ್ಪನ್ನು ಪ್ರಕಟಿಸಿದ್ದಾರೆ:

ಟ್ರಂಪ್ ಆಡಳಿತವು ಇದನ್ನು ಕೇವಲ ಆಡಳಿತಾತ್ಮಕ ಶುಲ್ಕ ಅಥವಾ ದಂಡ ಎಂದು ಕರೆಯುತ್ತಿದ್ದರೂ, ಇದರ ಅನ್ವಯ ಹಾಗೂ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗಿ ಒಂದು ಹೊಸ ‘ತೆರಿಗೆ’ಯಾಗಿದೆ. ಅಮೆರಿಕದ ಸಂವಿಧಾನದ ಪ್ರಕಾರ ದೇಶದ ನಾಗರಿಕರು ಅಥವಾ ಸಂಸ್ಥೆಗಳ ಮೇಲೆ ಹೊಸ ತೆರಿಗೆ ವಿಧಿಸುವ ಸಂಪೂರ್ಣ ಮತ್ತು ಅನನ್ಯ ಅಧಿಕಾರ ಇರುವುದು ಕೇವಲ ಅಮೆರಿಕದ ಸಂಸತ್ತಿಗೆ ಮಾತ್ರವೇ ಹೊರತು ದೇಶದ ಅಧ್ಯಕ್ಷರಿಗಲ್ಲ. ಆದ್ದರಿಂದ ಸಂಸತ್ತಿನ ಅನುಮೋದನೆ ಇಲ್ಲದೆ ಜಾರಿಗೆ ತರಲಾದ ಈ $1,00,000 ವೀಸಾ ನಿಯಮವು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಕಾನೂನುಬಾಹಿರ.

ಮತ್ತಷ್ಟು ಓದಿ: ಎಚ್1ಬಿ ವೀಸಾ ವ್ಯವಸ್ಥೆಯೇ ಒಂದು ‘ಮೋಸ’; ಹೊಸ ವರಾತ ತೆಗೆದ ಅಮೆರಿಕ; ಭಾರತೀಯರಿಗೆ ಹೊಸ ತಲೆನೋವು

ಹಳೇ ದರದಲ್ಲೇ ವೀಸಾ ಸಲ್ಲಿಕೆ; ತಾಂತ್ರಿಕ ವಲಯಕ್ಕೆ ಬಿಡುಗಡೆ
ಟ್ರಂಪ್ ಆಡಳಿತವು ತಂದಿದ್ದ ಈ ಕಠಿಣ ನೀತಿಯಿಂದಾಗಿ ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿತ್ತು. ಅಮೆರಿಕದ ವಲಸೆ ಇಲಾಖೆಯ (USCIS) ಇತ್ತೀಚಿನ ವರದಿಯ ಪ್ರಕಾರ, ಈ ಭಾರಿ ಶುಲ್ಕದ ಭೀತಿಯಿಂದಾಗಿ ಇಡೀ ದೇಶದಲ್ಲಿ ಕೇವಲ 85 ಕಂಪನಿಗಳು ಮಾತ್ರ ಹೊಸ ವೀಸಾ ಶುಲ್ಕ ಪಾವತಿಸಲು ಮುಂದೆ ಬಂದಿದ್ದವು.

ಭಾರತೀಯರಿಗೆ ಅತಿ ದೊಡ್ಡ ಲಾಭ: ಅಮೆರಿಕವು ಪ್ರತಿವರ್ಷ ಲಾಟರಿ ವ್ಯವಸ್ಥೆಯ ಮೂಲಕ ನೀಡುವ 65,000 ಸಾಮಾನ್ಯ ವೀಸಾ ಹಾಗೂ ಉನ್ನತ ಶಿಕ್ಷಣ ಪಡೆದವರಿಗಾಗಿ ನೀಡುವ 20,000 ಹೆಚ್ಚುವರಿ ವೀಸಾಗಳ ಪೈಕಿ ಸರಿಸುಮಾರು ಶೇಕಡಾ 70 ಕ್ಕಿಂತಲೂ ಹೆಚ್ಚಿನ ಪಾಲನ್ನು ಭಾರತೀಯ ಐಟಿ ತಜ್ಞರೇ ಪಡೆದುಕೊಳ್ಳುತ್ತಾರೆ. ಈ ಶುಲ್ಕ ರದ್ದತಿಯಿಂದಾಗಿ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಆರೋಗ್ಯ ಕ್ಷೇತ್ರದ ಸಿಬ್ಬಂದಿಮತ್ತು ಸಂಶೋಧಕರ ಅಮೆರಿಕದ ಕನಸು ಸುಲಭವಾಗಿ ಮುಂದುವರೆಯಲಿದೆ.

ಅಪೀಲು ಹೋಗಲು ಟ್ರಂಪ್ ಆಡಳಿತದ ಸಿದ್ಧತೆ
ನ್ಯಾಯಾಲಯದ ಈ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕದ ಗೃಹ ಭದ್ರತಾ ಇಲಾಖೆ  ಮತ್ತು ವೈಟ್ ಹೌಸ್ ವಕ್ತಾರರು, ಇದು ನ್ಯಾಯಾಂಗದ ಅತಿಯಾದ ಹಸ್ತಕ್ಷೇಪವಾಗಿದೆ. ಅಮೆರಿಕದ ಸ್ಥಳೀಯ ಕಾರ್ಮಿಕರ ಹಿತರಕ್ಷಣೆ ಮತ್ತು ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವ ಉದ್ದೇಶದಿಂದ ಈ ಸುಧಾರಣೆ ತರಲಾಗಿತ್ತು. ನಾವು ಖಂಡಿತವಾಗಿಯೂ ಈ ತೀರ್ಪಿನ ವಿರುದ್ಧ ಮೇಲ್ಮನವಿ  ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಆದಾಗ್ಯೂ, ಇತ್ತೀಚೆಗಷ್ಟೇ ಅಮೆರಿಕದ ಸುಪ್ರೀಂ ಕೋರ್ಟ್ ಕೂಡ ಟ್ರಂಪ್ ಆಡಳಿತದ ತುರ್ತು ಸುಂಕದ ನೀತಿಗಳನ್ನು ಸಂಸತ್ತಿನ ಅನುಮೋದನೆ ಇಲ್ಲದ ಕಾರಣಕ್ಕೆ ರದ್ದುಗೊಳಿಸಿತ್ತು. ಅದೇ ತಾರ್ಕಿಕ ಆಧಾರದ ಮೇಲೆ ಈ ತೀರ್ಪು ಬಂದಿರುವುದರಿಂದ, ಸದ್ಯಕ್ಕಂತೂ ವೀಸಾ ನಿಯಮಗಳು ಹಳೆಯ ಸರಳ ಸ್ಥಿತಿಗೆ ಮರಳಿದ್ದು ಭಾರತೀಯ ಐಟಿ ವಲಯದಲ್ಲಿ ಹರ್ಷದ ವಾತಾವರಣ ಮೂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ – Kannada News

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 09, ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸದಲ್ಲಿ ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇಂದು ಸುಬ್ರಹ್ಮಣ್ಯ ಮತ್ತು ನಾಗಗಳ ಆರಾಧನೆಗೆ ಪ್ರಾಶಸ್ತ್ಯವಿದೆ. ಜೂನ್ 9 ರಂದು ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭವಾಗಲಿ ಎಂದು ಗುರೂಜಿ ಹಾರೈಸಿದ್ದಾರೆ.

 

 

 

Source link

ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು – Kannada News

ಕಾರವಾರ, ಜೂನ್ 9: ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಐತಿಹಾಸಿಕ ಮಹಾಬಲೇಶ್ವರ ದೇಗುಲದಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ದೇಗುಲದ ಗರ್ಭಗುಡಿಯಲ್ಲಿರುವ ಮಹಾಬಲೇಶ್ವರನ ಆತ್ಮಲಿಂಗ ಕೂಡ ಸಂಪೂರ್ಣವಾಗಿ ಕೊಳಚೆ ನೀರಿನಲ್ಲಿ ಮುಳುಗಿದೆ. ಇದು ಭಕ್ತರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ದೇಗುಲದ ಅಕ್ಕಪಕ್ಕದ ಶೌಚಾಲಯಗಳು ಮತ್ತು ಇತರೆ ಭಾಗಗಳಿಂದ ಕೊಳಚೆ ನೀರು ಗರ್ಭಗುಡಿಗೆ ನುಗ್ಗಿದೆ. ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ಕೊಳಚೆ ನೀರು ನುಗ್ಗುತ್ತಿರುವುದು ಇದೇನು ಮೊದಲ ಸಲವಲ್ಲ. ಈ ಹಿಂದೆ ಕೂಡ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.

ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳ ಒತ್ತುವರಿ ಮತ್ತು ಶೌಚಾಲಯದ ನೀರನ್ನು ನೇರವಾಗಿ ಸಮುದ್ರಕ್ಕೆ ಹರಿಸುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಪರಿಸ್ಥಿತಿಗೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಲಕ್ಷ್ಯವನ್ನು ಕೂಡಲೇ ಸರಿಪಡಿಸಿ ದೇಗುಲದ ಪಾವಿತ್ರ್ಯವನ್ನು ಕಾಪಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು? – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು? ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಿಮ್ಮ ಅದೃಷ್ಟ ಮತ್ತು ವ್ಯಕ್ತಿತ್ವದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಜಗತ್ತು ಗ್ರಹಗಳ ಅಧೀನದಲ್ಲಿದ್ದು, ಗ್ರಹಗಳು ಸಂಖ್ಯೆಗಳ ಅಧೀನದಲ್ಲಿವೆ. ಈ ಅಂಕೆಗಳು ನಮ್ಮ ಬದುಕಿನ ಅನೇಕ ನಿರ್ಣಾಯಕ ಅಂಶಗಳನ್ನು ಪ್ರಭಾವಿಸುತ್ತವೆ.

ನಿರ್ದಿಷ್ಟ ಸಂಖ್ಯೆಗಳ ಸಂಯೋಜನೆಗಳು ವಿಭಿನ್ನ ಫಲಿತಾಂಶಗಳನ್ನು ನೀಡುತ್ತವೆ. ಉದಾಹರಣೆಗೆ, ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು 4 ಮತ್ತು 8 ಆಗಿದ್ದರೆ ಕೋಪತಾಪಗಳು ಮತ್ತು ಆವೇಶ ಹೆಚ್ಚಾಗಬಹುದು. ಆದರೆ, 3 ಮತ್ತು 7 ಸಂಯೋಜನೆಗಳು ಎಲ್ಲಾ ರಾಶಿಗಳಿಗೂ ಸಂತೋಷ ಮತ್ತು ತೃಪ್ತಿಯನ್ನು ತರಬಲ್ಲವು. 5 ಮತ್ತು 6 ಅಥವಾ 6 ಮತ್ತು 5 ಸಂಯೋಜನೆಗಳು ಅದೃಷ್ಟ, ಕೀರ್ತಿ, ಪ್ರತಿಷ್ಠೆ ಮತ್ತು ವ್ಯಾಪಾರದಲ್ಲಿ ಶುಭವನ್ನು ಸೂಚಿಸುತ್ತವೆ ಎಂದು ಗುರೂಜಿ ಹೇಳಿದ್ದಾರೆ.

Source link

ನೆಗೆಟಿವ್ ವಿಮರ್ಶೆಗಳೇ ‘ಪೆದ್ದಿ’ ಚಿತ್ರದ ಗೆಲುವಿಗೆ ಕಾರಣ; ಚಿತ್ರತಂಡದ ಅಚ್ಚರಿಯ ಹೇಳಿಕೆ – Kannada News

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಪೆದ್ದಿ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಇದೆ. ನೆಗೆಟಿವ್ ವಿಮರ್ಶೆಗಳು ಸಿಕ್ಕ ಹೊರತಾಗಿಯೂ ರಾಮ್ ಚರಣ್ ಅವರ ಸ್ಟಾರ್​ ಡಂ ಕಾರಣಕ್ಕೆ ಸಿನಿಮಾ ಗೆಲ್ಲುತ್ತಿದೆ. ಚಿತ್ರದ ಮೇಲಿನ ನೆಗೆಟಿವ್ ವಿಮರ್ಶೆಗಳೇ ಸಿನಿಮಾ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಪರೋಕ್ಷವಾಗಿ ನೆರವಾದವು ಎಂದು ಹಿರಿಯ ನಟ ಜಗಪತಿ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಸಿನಿಮಾಗೆ ಸಿಕ್ಕ ನೆಗೆಟಿವ್ ವಿಮರ್ಶೆ ಬ್ಗಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪೆದ್ದಿ ಸಿನಿಮಾ ರಿಲೀಸ್ ಆಯಿತು, ಹೋರಾಡಿತು ಮತ್ತು ಗೆದ್ದಿತು. ಆದರೆ ಬಿಡುಗಡೆಯಾದ ಮೇಲೂ ಚಿತ್ರತಂಡ ವಿಮರ್ಶೆಗಳ ವಿರುದ್ಧ ಮತ್ತೊಮ್ಮೆ ಹೋರಾಡಿ, ಎರಡನೇ ಬಾರಿಗೆ ಗೆಲ್ಲಬೇಕಾಗಿ ಬಂತು. ಬಹುಶಃ ಇತಿಹಾಸದಲ್ಲಿ ಎರಡು ಬಾರಿ ಗೆದ್ದ ಸಿನಿಮಾ ಇದೊಂದೇ ಇರಬಹುದು’ ಎಂದರು.
‘ನಾಯಕ ರಾಮ್ ಚರಣ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಅವರು ಈ ಸಿನಿಮಾದಲ್ಲಿ ಕೇವಲ ನಟನಾಗಿ ಉಳಿದಿಲ್ಲ, ಬದಲಿಗೆ ಸೂಪರ್‌ಮ್ಯಾನ್ ಮತ್ತು ಹೀ-ಮ್ಯಾನ್ ತರಹ ಅಬ್ಬರಿಸಿದ್ದಾರೆ’ ಎಂದು ಕೊಂಡಾಡಿದರು.

‘ಸಿನಿಮಾ 300 ಕೋಟಿ ಅಥವಾ 400 ಕೋಟಿ ಗಳಿಸುವುದು ಮುಖ್ಯವಲ್ಲ. ಥಿಯೇಟರ್‌ನಲ್ಲಿ 300 ರೂಪಾಯಿ ಟಿಕೆಟ್ ಕೊಟ್ಟು ನೋಡುವ ಸಾಮಾನ್ಯ ಪ್ರೇಕ್ಷಕನೇ ಸಿನಿಮಾದ ಹಣೆಬರಹ ನಿರ್ಧರಿಸುತ್ತಾನೆ. ಇಂತಹ ವಿಭಿನ್ನ ಕಥೆಗೆ ನಿರ್ಮಾಪಕರನ್ನು ಹುಡುಕುವುದು ಮತ್ತು ರಾಮ್ ಚರಣ್ ಅವರಂತಹ ಸ್ಟಾರ್ ನಟನನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಸ್ವಲ್ಪ ತಪ್ಪಾಗಿದ್ದರೂ ಜನ ಚಿತ್ರವನ್ನು ತಿರಸ್ಕರಿಸುತ್ತಿದ್ದರು. ನಮಗೆ ಕೆಟ್ಟ ವಿಮರ್ಶೆ ಬರೆದವರಿಗೆ ನಾನು ವಿಶೇಷ ಧನ್ಯವಾದ ಹೇಳುತ್ತೇನೆ. ಏಕೆಂದರೆ ಅವರು ತಿಳಿಯದೆಯೇ ಚಿತ್ರದ ಪ್ರಚಾರಕ್ಕೆ ಮತ್ತು ಯಶಸ್ಸಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ’ ಎಂದು ವಿಮರ್ಶಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾ ಸ್ಪೋರ್ಟ್ಸ್ ಡ್ರಾಮಾ ಶೈಲಿಯಲ್ಲಿದೆ. ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಿಂಚುವ ನಾಯಕನ ಕಥೆಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಕ್ಕೆ ಪ್ರಶಂಸೆಗಳ ಜೊತೆಯಲ್ಲೇ ದೊಡ್ಡ ಮಟ್ಟದ ವಿವಾದವೂ ಸುತ್ತಿಕೊಂಡಿದೆ. ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರವನ್ನು ತೋರಿಸಿರುವ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾಯಕಿಯ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಲಾಗಿದೆ ಮತ್ತು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version