ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆ ಎಂದ ಬಿಜೆಪಿ; ಕಮಿಷನರ್​​ಗೆ ದೂರು – Kannada News | BJP Complains to Bengaluru Commissioner After Egg Attack on MLA Harish Near KPCC Office

ಶಾಸಕ ಹರೀಶ್​ ಮೇಲೆ ಮೊಟ್ಟೆ ಎಸೆತImage Credit source: tv9 kannada

ಬೆಂಗಳೂರು, ಜುಲೈ 22: ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ರಾಜ್ಯ ಕಚೇರಿಗೆ ಮುತ್ತಿಗೆ ಯತ್ನ ವೇಳೆ ಬಿಜೆಪಿ ಶಾಸಕ ಹರೀಶ್​ (BJP MLA BP Harish) ಮೇಲೆ ಮೊಟ್ಟೆ ಎಸೆದಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ ಬಿಜೆಪಿ ದೂರು ನೀಡಿದೆ. ಅಷ್ಟೇ ಅಲ್ಲದೆ ಶಾಸಕ ಬಿ.ಪಿ.ಹರೀಶ್ ಮೇಲೆ ಕಾಂಗ್ರೆಸ್ಸಿಗರು (Congress) ಮೊಟ್ಟೆ ಎಸೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ದೂರಿನಲ್ಲೇನಿದೆ?

‘ಇಂದು ಬಿಜೆಪಿ ಕರ್ನಾಟಕ ಬೆಂಗಳೂರಿನ ಕಾಂಗ್ರೆಸ್​​ ಪಕ್ಷದ ಕಚೇರಿ ಮುತ್ತಿಗೆ ಕರೆನೀಡಿತ್ತು. ಈ ಸಂದರ್ಭದಲ್ಲಿ
ಶಾಸಕ ಬಿ.ಪಿ.ಹರೀಶ್​​ ಮೇಲೆ ಕಾಂಗ್ರೆಸ್ಸಿಗರು ಮೊಟ್ಟೆ ಎಸೆದಿದ್ದಾರೆ. ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ ಮೇಲೂ ಮೊಟ್ಟೆ ಎಸೆದಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರಶಾಂತ್​ ಮತ್ತು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ನಮ್ಮನ್ನು ವಶಕ್ಕೆ ಪಡೆದು ಕರೆದೊಯ್ತಿದ್ದ ಬಸ್ ಮೇಲೂ ದಾಳಿ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಕಾಂಗ್ರೆಸ್​​​ ಕಾರ್ಯಕರ್ತರ ಆಕ್ರೋಶ

‘ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್​ ಸೇರಿದಂತೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಮುಖಂಡರ ಮೇಲೆ ಹಲ್ಲೆ ಆಗಿದೆ. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ’ ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ಶಾಸಕ ಬಿಪಿ ಹರೀಶ್​​ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಶಾಸಕ ಬಿಪಿ ಹರೀಶ್​​ ಮಾತನಾಡಿದ್ದು, ‘ಇಂದು ಆರ್ ಆಶೋಕ್ ಅವರ ಜೊತೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮೇಲೆ ನಾಲ್ಕರಿಂದ ಐದು ಮೊಟ್ಟೆ ಹೊಡೆದಿದ್ದಾರೆ. ಅಲ್ಲಿ ಪಾರ್ಟಿ ಕಚೇರಿ ಮುಂದೆ ಕಾರು ನಿಲ್ಲಿಸಿ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ನಂತರ ನನ್ನನ್ನು ಹೈಗ್ರೌಂಡ್ಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ನನ್ನನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು’ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಮುಂದೆ ಬಸ್ ನಿಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಕೊಡಬೇಕು: ಆರ್​. ಅಶೋಕ್

ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್​. ಅಶೋಕ್ ಪ್ರತಿಕ್ರಿಯಿಸಿದ್ದು, ‘ಕರ್ನಾಟಕ ರಾಜ್ಯದಲ್ಲಿ ಇಂದು ಕರಾಳ ದಿನ. ಇಂದು ಕೊತ್ವಾಲ್ ಆಡಳಿತವನ್ನು ನಾವು ನೋಡಿದ್ದೇವೆ. ದೇಶ ವಿರೋಧಗಳಿಗೆ ಬೆಂಬಲ ತಪ್ಪು ಎಂಬುದು ನಮ್ಮ ಹೋರಾಟ. ನಾವು ಶಾಂತಿಯುವಾಗಿ ಪ್ರತಿಭಟನೆ ಮಾಡಿದ್ದೇವೆ. ಅರೆಸ್ಟ್ ಮಾಡಿದ ಮೇಲೆ ನಾವು ಪೊಲೀಸ್ ಕಸ್ಟಡಿಯಲ್ಲಿರುತ್ತೇವೆ. ಚಾಲಕನಿಗೆ ಕೆಪಿಸಿಸಿ ಕಚೇರಿ ದಾರಿಯಲ್ಲಿ ಹೋಗಬೇಡ ಎಂದಿದ್ದೆ. ಕಾಂಗ್ರೆಸ್ ಕಚೇರಿ ಮುಂದೆ ಹೋಗಲು ಬುದ್ಧಿ ಇರುವವರು ಬಿಡ್ತಾರಾ? ಸಿಎಂ ಡಿಕೆ ಶಿವಕುಮಾರ್​ ಆದೇಶದ ಮೇಲೆ ಕಾಂಗ್ರೆಸ್ ಕಚೇರಿ ಮುಂದೆ ಹೋಗಿದ್ದಾರೆ. ಇದ್ದಕ್ಕಿದ್ದಂತೆ ಬಸ್ ಕೆಪಿಸಿಸಿ ಕಚೇರಿ ಮುಂದೆ ಬಸ್​ ನಿಂತು ಹೋಗಿತ್ತು. ಇದ್ದಕ್ಕಿದ್ದಂತೆ ಮೊಟ್ಟೆ, ಲಾಂಗ್, ದೊಣ್ಣೆ ಕಚೇರಿಯಿಂದ ಹೇಗೆ ಬಂತು. ಪೊಲೀಸರಿಗೆ ದೆಹಲಿಯಿಂದಲೇ ಸಿಎಂ ಫೋನ್ ಮಾಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ಬಸ್ ನಿಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಕೊಡಬೇಕು’ ಎಂದು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:56 pm, Wed, 22 July 26

Source link

ನಿಧಾನಗತಿಯ ಬ್ಯಾಟಿಂಗ್‌ ಬಗ್ಗೆ ಮೌನ ಮುರಿದ ತಿಲಕ್ ವರ್ಮಾ – Kannada News | Tilak Varma Explains Slow T20 Batting Criticism Ahead of Zimbabwe Series

ಐರ್ಲೆಂಡ್ ಮತ್ತು ಇಂಗ್ಲೆಂಡ್ ಟಿ20 ಸರಣಿಯಲ್ಲಿ ಉಪನಾಯಕ ತಿಲಕ್ ವರ್ಮಾ (Tilak Varma) ಅವರ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಅದರಲ್ಲೂ ಅವರ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ತಂಡ ಸೋಲಿಗೆ ಕೊರಳೊಡ್ಡಬೇಕಾಯಿತು. ಟಿ20 ಕ್ರಿಕೆಟ್​ನಲ್ಲಿ ಅದರಲ್ಲೂ ನಿರ್ಣಾಯಕ ಹಂತದಲ್ಲಿ ದೊಡ್ಡ ಹೊಡೆತಗಳಿಗೆ ಕೈ ಹಾಕದ ತಿಲಕ್ ಅವರ ಸ್ಟ್ರೈಕ್ ರೇಟ್ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಇದೀಗ, ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ತಿಲಕ್ ವರ್ಮಾ ತಮ್ಮ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ತಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಲಕ್ ವರ್ಮಾ ವಿವರಿಸಿದ್ದಾರೆ. ಆಟ ಮತ್ತು ಪರಿಸ್ಥಿತಿಗಳನ್ನು ಅವಲಂಬಿಸಿ ನನ್ನ ಬ್ಯಾಟಿಂಗ್ ಶೈಲಿ ಬದಲಾಗುತ್ತದೆ. ಇಂಗ್ಲೆಂಡ್ ಟಿ20 ಸರಣಿಯಲ್ಲಿ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ವಿಕೆಟ್ ಕಳೆದುಕೊಂಡರು. ಇದರಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಬ್ಯಾಟಿಂಗ್ ಮಾಡಲು ಬರಬೇಕಾಯಿತು.

ಅದು ಸುಲಭವಲ್ಲ- ತಿಲಕ್ ವರ್ಮಾ

ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಿಲಕ್ ವರ್ಮಾ, ‘ಈ ಪಂದ್ಯದಲ್ಲಿ, ನೀವು ವಿಭಿನ್ನ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ವಿಶೇಷವಾಗಿ ಅಂತಹ ಪರಿಸ್ಥಿತಿಗಳಲ್ಲಿ, ಅದು ಸುಲಭವಲ್ಲ. ನಾನು ಯಾವಾಗಲೂ ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡುತ್ತೇನೆ ಎಂದು ಹೇಳುತ್ತೇನೆ. ನಾನು ತಂಡದ ಇನ್ನಿಂಗ್ಸ್ ನಿಭಾಯಿಸುವ ಪರಿಸ್ಥಿತಿ ಇದ್ದರೆ, ನಾನು ಅದಕ್ಕೆ ತಕ್ಕಂತೆ ಆಡುತ್ತೇನೆ. ನಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬೇಕಾದರೆ, ಅದಕ್ಕೆ ಅನುಗುಣವಾಗಿ ಆಡುತ್ತೇನೆ. ಐರ್ಲೆಂಡ್‌ನಿಂದ ಇಂಗ್ಲೆಂಡ್‌ವರೆಗಿನ ಪರಿಸ್ಥಿತಿಗಳನ್ನು ನೀವು ನೋಡಿದರೆ, ಪವರ್‌ಪ್ಲೇನಲ್ಲಿ ಯಾವಾಗಲೂ ನಾಲ್ಕು ಅಥವಾ ಐದು ವಿಕೆಟ್‌ಗಳು ಬೀಳುತ್ತಿದ್ದವು. ಹೀಗಾಗಿ ಆ ಸಂದರ್ಭದಲ್ಲಿ ಹೋಗಿ ದೊಡ್ಡ ಹೊಡೆತಗಳನ್ನು ತಕ್ಷಣ ಆಡಲು ಪ್ರಯತ್ನಿಸುವುದು ಸರಿಯಲ್ಲ ಮತ್ತು ಆ ಯತ್ನದಲ್ಲಿ ಔಟ್ ಆಗುವುದು ಸರಿಯಲ್ಲ.

IND vs SA: ಮೊದಲ ಟಿ20ಯಲ್ಲಿ ಟೆಸ್ಟ್ ಆಡಿಯೂ ವಿಶಿಷ್ಟ ಮೈಲಿಗಲ್ಲು ದಾಟಿದ ತಿಲಕ್ ವರ್ಮಾ

ಆದಾಗ್ಯೂ ನಾನು ಮೊದಲ ಎಸೆತದಿಂದಲೇ ದಾಳಿ ಮಾಡಲು ಬಯಸುತ್ತೇನೆ. ಆದರೆ ಕೆಲವೊಮ್ಮೆ ಸಮಯಕ್ಕನುಗುಣವಾಗಿ ಆಡುವುದು ಮುಖ್ಯ. ಏಕೆಂದರೆ ನಾನು ದೇಶಕ್ಕಾಗಿ ಆಡುತ್ತಿರುತ್ತೇನೆ, ಆದ್ದರಿಂದ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ನಿಮ್ಮ ಹೆಸರಿನೊಂದಿಗೆ ಉಪನಾಯಕನ ಸ್ಥಾನ ಲಗತ್ತಿಸಿದಾಗ, ಮ್ಯಾನೇಜ್‌ಮೆಂಟ್ ಸಾಕಷ್ಟು ಚರ್ಚೆಯ ನಂತರ ನಿಮಗೆ ಈ ಜವಾಬ್ದಾರಿಯನ್ನು ನೀಡಿರುತ್ತದೆ. ಆದ್ದರಿಂದ, ನನಗೆ ನೀಡಲಾದ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಪೂರೈಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸುವಂತಾಗಬೇಕು; ಅಲಹಾಬಾದ್ ಹೈಕೋರ್ಟ್ ಟೀಕೆ – Kannada News | Allahabad High Court condemns corruption and calls for amending law to include death penalty

ಅಲಹಾಬಾದ್, ಜುಲೈ 22: ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ (Ram Mandir Donation Theft) ಮತ್ತು ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್ ದೇಶದಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿಬಿಟ್ಟಿದೆ, ರಾಮ ಮಂದಿರಕ್ಕೆ ನೀಡಿದ ದೇಣಿಗೆಯ ಕಳ್ಳತನ ಕೂಡ ಜನರನ್ನು ನಾಚಿಕೆಪಡಿಸುತ್ತಿಲ್ಲ ಎಂದು ಟೀಕಿಸಿದೆ. ಇದು ಅತ್ಯಂತ ಕೆಳಮಟ್ಟದ ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರ ನಿಜವಾಗಿಯೂ ಭ್ರಷ್ಟಾಚಾರವನ್ನು ನಿಗ್ರಹಿಸಲು ಬಯಸಿದರೆ, ಕಾನೂನನ್ನು ತಿದ್ದುಪಡಿ ಮಾಡುವ ಮತ್ತು ಇಂತಹ ಭ್ರಷ್ಟಾಚಾರದ ಗಂಭೀರ ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸುವ ಬಗ್ಗೆ ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬುಲ್ಡೋಜರ್ ಕ್ರಮಕ್ಕೆ ತಡೆ ಕೋರಿ ಹಮೀರ್‌ಪುರ ನಿವಾಸಿ ಕೈಫುದ್ದೀನ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಅತುಲ್ ಶ್ರೀಧರನ್ ತಮ್ಮ ತೀರ್ಪಿನಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿ ಸಿದ್ಧಾರ್ಥಾನಂದ್ ಕೂಡ ಇದ್ದರು. ಅವರು ಕೆಲವು ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ

ಪುರಸಭೆಯ ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಶಾಮೀಲಿನಿಂದ ಅಕ್ರಮ ನಿರ್ಮಾಣಗಳು ಉದ್ಭವಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ. ಅಧಿಕಾರಿಗಳು ಲಂಚ ಸ್ವೀಕರಿಸಿ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ ಮತ್ತು ಕ್ರಮ ಕೈಗೊಂಡಾಗ, ಸಾಮಾನ್ಯ ಖರೀದಿದಾರರು ಪರಿಣಾಮಗಳನ್ನು ಅನುಭವಿಸುತ್ತಾರೆ. ಅಕ್ರಮ ನಿರ್ಮಾಣಗಳನ್ನು ನಡೆಸುವ ಬಿಲ್ಡರ್‌ಗಳು ಮಾತ್ರವಲ್ಲದೆ ಅವರನ್ನು ರಕ್ಷಿಸುವ ಭ್ರಷ್ಟ ಅಧಿಕಾರಿಗಳನ್ನು ಸಹ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಭ್ರಷ್ಟಾಚಾರದಿಂದ ಅಸಮಾನತೆ ಹೆಚ್ಚಳ:

ಭ್ರಷ್ಟಾಚಾರದಿಂದ ಹೆಚ್ಚುತ್ತಿರುವ ಅಸಮಾನತೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಭ್ರಷ್ಟಾಚಾರವು ಕೆಲವರ ಕೈಯಲ್ಲಿ ಅಕ್ರಮವಾಗಿ ಸಂಪತ್ತು ಸಂಗ್ರಹವಾಗಲು ಕಾರಣವಾಗುತ್ತಿದೆ. ಇದರಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ ಎಂದು ಹೇಳಿದೆ. ಇದನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ನಿಗ್ರಹಿಸದಿದ್ದರೆ, ಅದು ಭವಿಷ್ಯದಲ್ಲಿ ಸಾಮಾಜಿಕ ಅಶಾಂತಿ ಮತ್ತು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್

ರಾಮ ಮಂದಿರದ ಕಾಣಿಕೆಗಳ ಕಳ್ಳತನದ ಉಲ್ಲೇಖ:

ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ತಮ್ಮ 51 ಪುಟಗಳ ತೀರ್ಪಿನಲ್ಲಿ, ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದ ವಿವಾದದ ಬಗ್ಗೆಯೂ ಪ್ರಸ್ಥಾಪಿಸಿದ್ದಾರೆ. ಇಂತಹ ಸೂಕ್ಷ್ಮ ಧಾರ್ಮಿಕ ಸ್ಥಳದಲ್ಲಿ ದೇಣಿಗೆ ಕಳ್ಳತನದಿಂದ ಸಮಾಜವು ವಿಚಲಿತರಾಗದಿದ್ದರೆ, ಅದು ಸಮಗ್ರತೆಯ ಗುಣಮಟ್ಟ ಕುಸಿಯುತ್ತಿರುವುದರ ಗಂಭೀರ ಸೂಚನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ರಾಮ ಮಂದಿರದಲ್ಲಿ ಕಾಣಿಕೆಗಳ ಕಳ್ಳತನಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದವು ತಾಳ್ಮೆಯ ಪರೀಕ್ಷೆಯಾಗಿದೆ ಎಂದು ನ್ಯಾಯಮೂರ್ತಿ ಶ್ರೀಧರನ್ ಹೇಳಿದರು. ಭ್ರಷ್ಟಾಚಾರವು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಸರ್ಕಾರವು 1988ರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತಂದು, ಅಂತಹ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಮರಣದಂಡನೆ ವಿಧಿಸುವ ಬಗ್ಗೆ ಪರಿಗಣಿಸಬೇಕು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಜ್ಯದಲ್ಲಿ ಬರದ ನಡುವೆ ಕಾಂಗ್ರೆಸ್ ನಾಯಕರ ಜಾಲಿ ಟ್ರಿಪ್​​’: ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು – Kannada News | ‘Jolly Trip Amid Severe Drought’: BJP and JDS Slam Congress Government, Demand Immediate Drought Declaration and Loan Waiver

ಆರ್​​. ಅಶೋಕ್​​ ಕಿಡಿImage Credit source: PTI

ಬೆಂಗಳೂರು, ಜುಲೈ 22: ಮುಂಗಾರು ಮಳೆಯ ಅಭಾವದಿಂದ ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ಕಾಂಗ್ರೆಸ್ ನಾಯಕರು, ಶಾಸಕರು ಜಾಲಿ ಟ್ರಿಪ್ ಮಾಡ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಹಣೆಬರಹ. ಬರಗಾಲ ಬಂದಾಗ ಸರ್ಕಾರ ಯಾವುದೇ ಕ್ರಮಕೈಗೊಳ್ಳಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮುಂಜಾಗ್ರತಾ ಕ್ರಮ ಕೈಗೊಂಡಿದ್ವಿ. ಬಿಜೆಪಿಯ ಕೆಲಸವನ್ನು ನೋಡಿ ಕಾಂಗ್ರೆಸ್ ಕಲಿಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​ ಹೇಳಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್​​​ ಅವರು ಬೆಳೆ ಬೆಳೆಯಬೇಡಿ ಅಂತಾರೆ. ರೈತರು ಬೆಳೆ ಬೆಳೆಯದೆ ಏನು ಮಾಡಬೇಕು? ಹಾಗಾದ್ರೆ ರೈತರಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಬಿಡಿ. ಕಾವೇರಿ ನದಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. ಬರ ಪೀಡಿತವೆಂದು ಘೋಷಣೆ ಮಾಡಿದರೆ ಕೇಂದ್ರ ಸರ್ಕಾರ ನಿಯೋಗ ಕಳಿಸಿ ವರದಿ ಪಡೆದು ಹಣ ಕೊಡುತ್ತೆ. ಬರ ಅಂತಾ ಘೋಷಣೆ ಮಾಡದಿದ್ದರೆ ಈ ಅನುದಾನ ಸಿಗುವುದಿಲ್ಲ. ಕಾಂಗ್ರೆಸ್​ಗೆ ಕಾಳಜಿ ಇದ್ದರೆ ಕೂಡಲೇ ಬರ ಅಂತಾ ಘೋಷಿಸಲಿ. SDRF ಹಣವನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಬರ ಘೋಷಣೆ ಮಾಡೋ ಬದಲು ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ರೈತರ ಸಾಲಮನ್ನಾ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ; ಕಾರಣ ಕೊಟ್ಟ ಸಿಎಂ ಡಿಕೆ ಶಿವಕುಮಾರ್

ಎಕ್ಸ್ ಪೋಸ್ಟ್​​ ಮೂಲಕ ಜೆಡಿಎಸ್ ವಾಗ್ದಾಳಿ

ರಾಜ್ಯದಲ್ಲಿನ 36,202 ಕೆರೆಗಳ ಪೈಕಿ ಕೇವಲ 584 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ತಲುಪಿವೆ.ಗ್ರಾಮೀಣ ಭಾಗದ ಜೀವನಾಡಿಯಾಗಿದ್ದ ಕೆರೆಗಳು ಬರಿದಾಗಿರುವುದು ರೈತರ ಪಾಲಿಗೆ ಮರಣಶಾಸನವಾಗುತ್ತಿದೆ. 5,862 ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, 734 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಸರೆಯಾಗಿದೆ. ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್​​ ಸರ್ಕಾರ ತಕ್ಷಣವೇ ಬರ ಪೀಡಿತ ಪ್ರದೇಶಗಳನ್ನು ಘೋಷಿಸಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಪರಿಹಾರ ನೀಡಬೇಕು ಎಂದು ಎಕ್ಸ್​​ ಪೋಸ್ಟ್​​ ಮೂಲಕ ಜೆಡಿಎಸ್​​ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:37 pm, Wed, 22 July 26

Source link

‘ನಾನು ಡಿಸಿಎಂ ಹುದ್ದೆ ಕೇಳಿಲ್ಲ: ಪಕ್ಷ ಏನು ತಿರ್ಮಾನ ತೆಗೆದುಕೊಳ್ಳುತ್ತೋ ನೋಡೋಣ’; ಸಚಿವ ಸತೀಶ್ ಜಾರಕಿಹೊಳಿ – Kannada News | I Haven’t Asked for the DCM Post; Let’s See What Decision the Party Takes: Minister Satish Jarkiholi

ದೆಹಲಿ, ಜುಲೈ 22: ‘ಎರಡು ಡಿಸಿಎಂ ಹುದ್ದೆಗಳ ಸೃಷ್ಟಿ ಹೈಕಮಾಂಡ್ ತೀರ್ಮಾನ. ನಾನು ಡಿಸಿಎಂ ಹುದ್ದೆಯನ್ನು ಕೇಳಿಲ್ಲ. ಆದರೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ಇದೆ. ಪಕ್ಷ ಏನು ತಿರ್ಮಾನ ತೆಗೆದುಕೊಳ್ಳುತ್ತೋ ನೋಡೋಣ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಡಿಸಿಎಂ ಹುದ್ದೆಗಳ ಸೃಷ್ಟಿ ಅದು ಪಕ್ಷದ ತೀರ್ಮಾನ, ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ’ ಎಂದರು. ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ‘ಹೈಕಮಾಂಡ್ ನಾಯಕರು ನೀಟ್​ ವಿರುದ್ಧದ ಪ್ರತಿಭಟನೆಯಲ್ಲಿದ್ದಾರೆ. ಆ ಪ್ರತಿಭಟನೆ ಕೂಡ ದೇಶಕ್ಕೆ ಮುಖ್ಯವಾಗಿತ್ತು. ಹಾಗಾಗಿ ನಿನ್ನೆ ಸಂಪುಟ ವಿಸ್ತರಣೆ ಬಗ್ಗೆ ಸಭೆ ನಡೆಸಲು ಸಾಧ್ಯವಾಗಿಲ್ಲ. ಶನಿವಾರ ಅಥವಾ ಭಾನುವಾರ ನಾಯಕರನ್ನು ಮತ್ತೆ ಕರೆಯಬಹುದು’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

NHAI Local Pass: ಟೋಲ್ ಪ್ಲಾಜಾದಿಂದ 20 ಕಿ.ಮೀ ಒಳಗೆ ವಾಸವಿದ್ದೀರಾ, ಇನ್ಮುಂದೆ ಮೊಬೈಲ್​ನಲ್ಲೇ ಲೋಕಲ್ ಟೋಲ್ ಪಾಸ್ ಪಡೀಬಹುದು – Kannada News | Rajmargyatra: NHAI Digital Local Pass, Get Toll Pass on Mobile within 20km Radius

ನವದೆಹಲಿ, ಜುಲೈ 22: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಸ್ಥಳೀಯ ನಿವಾಸಿಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿಹಿ ಸುದ್ದಿ ನೀಡಿದೆ. ಟೋಲ್ ಪ್ಲಾಜಾಗಳಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರು ಇನ್ಮುಂದೆ ಟೋಲ್ ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಲೋಕಲ್ ಪಾಸ್ ಪಡೆಯುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎನ್​ಎಚ್​ಎಐನ ಅಧಿಕೃತ ‘ರಾಜಮಾರ್ಗಯಾತ್ರ’ (Rajmargyatra) ಮೊಬೈಲ್ ಆ್ಯಪ್ ಮೂಲಕವೇ ನಿಮಿಷಗಳಲ್ಲಿ ಈ ಪಾಸ್ ಅನ್ನು ಖರೀದಿಸಿ, ತಿಂಗಳಿಡೀ ಆಯಾ ಟೋಲ್ ಪ್ಲಾಜಾದಲ್ಲಿ ಅನಿಯಮಿತ ಪ್ರಯಾಣ ಮಾಡಬಹುದಾಗಿದೆ.

ಡಿಜಿಟಲ್ ‘ಲೋಕಲ್ ಪಾಸ್’ ಪಡೆಯುವುದು ಹೇಗೆ?

ಹಿಂದೆ ಸ್ಥಳೀಯ ಪಾಸ್ ಪಡೆಯಲು ಸಾರ್ವಜನಿಕರು ಆಧಾರ ಕಾರ್ಡ್, ಆರ್‌ಸಿ ಬುಕ್ ಹಿಡಿದುಕೊಂಡು ಟೋಲ್ ಪ್ಲಾಜಾ ಕಚೇರಿಗೆ ನೇರವಾಗಿ ಹೋಗಬೇಕಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಏನೇನಿದೆ ನೋಡೋಣ.

ಆಟೋಮ್ಯಾಟಿಕ್ ಪರಿಶೀಲನೆ: ಆ್ಯಪ್ ನಿಮ್ಮ ಡಿಜಿಲಾಕರ್ ಮತ್ತು ವಾಹನ್ (VAHAN) ಪೋರ್ಟಲ್ ಜೊತೆ ಲಿಂಕ್ ಆಗಿರುವುದರಿಂದ, ನಿಮ್ಮ ವಿಳಾಸ ಮತ್ತು ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ.

ಜಿಐಎಸ್ (GIS) ತಂತ್ರಜ್ಞಾನ: ನಿಮ್ಮ ಮನೆ ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ಜಿಪಿಎಸ್ ಅಥವಾ ಜಿಐಎಸ್ ತಂತ್ರಜ್ಞಾನದ ಮೂಲಕ ಆ್ಯಪ್ ತಕ್ಷಣವೇ ದೃಢಪಡಿಸುತ್ತದೆ.

ಮೊದಲ ಚಾಲನೆ: ಈ ಡಿಜಿಟಲ್ ಪಾಸ್ ಸೌಲಭ್ಯವನ್ನು ದೆಹಲಿಯ ಅರ್ಬನ್ ಎಕ್ಸ್‌ಟೆನ್ಶನ್ ರಸ್ತೆ-II (UER-II) ನಲ್ಲಿರುವ ‘ಮುಂಡ್ಕಾ – ಬಕ್ಕರ್‌ವಾಲಾ’ ಟೋಲ್ ಪ್ಲಾಜಾದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲಾಗುವುದು.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

22 ಭಾಷೆಗಳಲ್ಲಿ ನೆರವು ನೀಡುವ ಡಿಜಿಟಲ್ ಸಹಾಯಕ

ಸ್ಥಳೀಯ ಪಾಸ್ ಜೊತೆಗೆ ಎನ್​ಎಚ್​ಎಐ ‘ರಾಜಮಾರ್ಗಯಾತ್ರ’ ಆ್ಯಪ್‌ನಲ್ಲಿ ‘ಮಾರ್ಗ್‌ಮಿತ್ರ’ ಎಂಬ ಹೊಸ ಎಐ (AI) ಆಧಾರಿತ ಸಹಾಯ ಕೇಂದ್ರವನ್ನು ಪರಿಚಯಿಸಿದೆ. ಪ್ರಯಾಣಿಕರು ತಮ್ಮ ಸಂಶಯಗಳು ಅಥವಾ ದೂರುಗಳನ್ನು ಕನ್ನಡ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಟೈಪ್ ಮಾಡಿ ಅಥವಾ ಧ್ವನಿ ಮೂಲಕ ಕೇಳಬಹುದು. ಫಾಸ್ಟ್‌ಟ್ಯಾಗ್ ರೀಚಾರ್ಜ್, ಕೆವೈಸಿ ಸ್ಥಿತಿ, ಹಣ ಮರುಪಾವತಿ ಮತ್ತು ಹೆದ್ದಾರಿಯಲ್ಲಿ ವಾಹನ ಕೆಟ್ಟುನಿಂತರೆ ತಕ್ಷಣದ ನೆರವು ಪಡೆಯಲು ಮಾರ್ಗ್‌ಮಿತ್ರ ನೆರವಾಗುತ್ತದೆ.

ಲೈವ್ ದೂರು ನಿರ್ವಹಣೆ: ಹೆದ್ದಾರಿ ಸಮಸ್ಯೆಗಳ ಕುರಿತು ದೂರು ನೀಡಿದರೆ, ಸಂಬಂಧಪಟ್ಟ ಇಲಾಖೆಗೆ ತಕ್ಷಣವೇ ರವಾನೆಯಾಗುತ್ತದೆ. ಆ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಆ್ಯಪ್ ಮೂಲಕ ತಕ್ಷಣವೇ 1033 (NHAI ತುರ್ತು ಸಂಖ್ಯೆ) ಗೆ ಸಂಪರ್ಕಿಸಿ ಆಂಬ್ಯುಲೆನ್ಸ್ ಅಥವಾ ಕ್ರೇನ್ ಸಹಾಯ ಪಡೆಯಬಹುದು. ನಿಮ್ಮ ಮಾರ್ಗದಲ್ಲಿ ಬರುವ ಪೆಟ್ರೋಲ್ ಬಂಕ್‌ಗಳು, ಸುಸಜ್ಜಿತ ಶೌಚಾಲಯಗಳು, ಢಾಬಾ, ಹೋಟೆಲ್‌ಗಳು ಮತ್ತು ಆಸ್ಪತ್ರೆಗಳ ನಿಖರ ಜಾಗವನ್ನು ಆ್ಯಪ್ ತೋರಿಸುತ್ತದೆ.

ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ ಅಥವಾ ಕಸ,ಆಕ್ರಮಣಗಳಿದ್ದರೆ ಫೋಟೋ ತೆಗೆದು ಆ್ಯಪ್ ಮೂಲಕವೇ ಆಡಳಿತ ಮಂಡಳಿಗೆ ನೇರ ದೂರು ನೀಡಬಹುದು. ಈಗಾಗಲೇ ಈ ಆ್ಯಪ್ ಮೂಲಕ 80 ಲಕ್ಷಕ್ಕೂ ಹೆಚ್ಚು ಹೆದ್ದಾರಿ ‘ವಾರ್ಷಿಕ ಪಾಸ್’ಗಳು ಮಾರಾಟವಾಗಿವೆ ಎಂದು ಎನ್​ಎಚ್​ಎಐ ತಿಳಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ (iOS) ಬಳಕೆದಾರರು ಪ್ಲೇಸ್ಟೋರ್‌ನಿಂದ ‘ರಾಜಮಾರ್ಗ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ – Kannada News | Director Duniya Suri Walks Out of Dhruva Sarja Next Movie Here is Why

ನಿರ್ದೇಶಕ ‘ದುನಿಯಾ’ ಸೂರಿ ಸಿನಿಮಾಗಳಲ್ಲಿ ರಾನೆಸ್ ಜೋರಾಗಿಯೇ ಇರುತ್ತವೆ. ಅವರ ನಿರ್ದೇಶನ, ಡೈಲಾಗ್ ಹೀಗೆ ಎಲ್ಲವೂ ಇಷ್ಟ ಆಗುತ್ತವೆ. ಅವರು ಧ್ರುವ ಸರ್ಜಾ (Dhruva Sarja) ಜೊತೆ ಸಿನಿಮಾ ಮಾಡುತ್ತಾರೆ ಎಂದಾಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ, ಈಗ ಅಭಿಮಾನಿಗಳಿಗೆ ನಿರಾಸೆ ಆಗೋ ಸುದ್ದಿ ಸಿಕ್ಕಿದೆ. ಈ ಚಿತ್ರದಿಂದ ಸೂರಿ ಅವರು ಸದ್ಯಕ್ಕೆ ಹೊರ ಬಂದಿದ್ದಾರೆ. ಅವರು ಈ ದೃಢನಿರ್ಧಾರ ಮಾಡಲು ಕಾರಣ ವಿವರಿಸಿದ್ದಾರೆ.

ಸೂರಿ ಅವರ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರ ನಿರ್ದೇಶನದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅವರು ಇಷ್ಟುದಿನ ಧ್ರುವ ಸರ್ಜಾ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಎಲ್ಲವೂ ರೆಡಿ ಆಗಿತ್ತು. ಈ ಚಿತ್ರವನ್ನು ‘ಕ್ರಿಮಿನಲ್’ ಸಿನಿಮಾಗೆ ಬಂಡವಾಳ ಹೂಡಿರೋ ‘ಗೋಲ್ಡ್​​ಮೈನ್ಸ್​ ಟೆಲಿಫಿಲ್ಮ್ಸ್’ ಅವರೇ ಹಣ ಹಾಕಬೇಕಿತ್ತು. ಶೀಘ್ರದಲ್ಲೇ ತಂಡ ಶೂಟಿಂಗ್ ಮಾಡಲು ಕೂಡ ಪ್ಲ್ಯಾನ್ ಮಾಡಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಎಗ್ಸಿಟ್ ಆಗಿದ್ದಾರೆ.

ಈ ಬಗ್ಗೆ ಸೂರಿ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಸತ್ಯ ಹೆಗಡೆ ಅವರು ನನಗೆ ಧ್ರುವ ಅವರನ್ನು ಭೇಟಿ ಮಾಡಿಸಿದರು. ಆ ಬಳಿಕ ನಾವು ಸ್ಕ್ರಿಪ್ಟ್ ಕೆಲಸ ಆರಂಭಿಸಿದೆವು. ಸ್ಕ್ರಿಪ್ಟ್ ರೆಡಿ ಆಗಿತ್ತು, ಸ್ಕೆಚ್ಚಸ್ ರೆಡಿ ಮಾಡಿಕೊಂಡಿದ್ದೆವು. ಯಾವಾಗ ಶೂಟ್ ಮಾಡಬೇಕು, ಬಜೆಟ್ ಎಷ್ಟು ಎಂಬುದೆಲ್ಲ ಲೆಕ್ಕ ಹಾಕಿದ್ದೆವು. ಆದರೆ, ನಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ’ ಎಂದು ಸೂರಿ ಬೇಸರ ಹೊರಹಾಕಿದ್ದಾರೆ.

‘ಕೆಡಿ ಬಳಿಕ ಧ್ರುವ ಕ್ರಿಮಿನಲ್ ಸಿನಿಮಾದಲ್ಲಿ ಬ್ಯುಸಿ ಆದರು. ಇದು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ಕೇಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಕ್ಕೆ ಹೋಗೋಕೆ ಆಗುತ್ತಿಲ್ಲ. ಹಣ, ಸಮಯ ಎಲ್ಲವೂ ಇಲ್ಲಿ ಹೂಡಿಕೆ ಆಗಿದೆ. ನನ್ನ ತಂಡವನ್ನು ನಾನು ನೋಡಿಕೊಳ್ಳಬೇಕು. ಪ್ರತಿ ಬಾರಿ ಕಾರಣ ನೀಡೋಕೆ ಆಗಲ್ಲ. ಹೀಗಾಗಿ, ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು’ ಎಂದು ಸೂರಿ ಹೇಳಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

‘ಇದು ಧ್ರುವ ಸರ್ಜಾಗಾಗಿಯೇ ಮಾಡಿದ ಕಥೆ. ಅವರ ಜೊತೆ ಈ ಸಿನಿಮಾ ಮಾಡುವ ಆಸೆ ಈಗಲೂ ಇದೆ. ಅವರಿಗೆ ನನ್ನ ಜೊತೆ ಕೆಲಸ ಮಾಡೋ ಹಂಬಲ ಇದೆ. ನಮ್ಮ ಸಿನಿಮಾಗೆ ಮಾತ್ರ ಸಂಪೂರ್ಣ ಸಮಯ ಮೀಸಲಿಡೋ ಅವಕಾಶ ಸಿಕ್ಕರೆ ನಾವು ಈ ಸಿನಿಮಾ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀದರ್​: ಕಾರಂಜಾ ಕಾಲುವೆ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಂಪುಟ ಅಸ್ತು; ಈಗಲಾದ್ರೂ ಸಿಗುತ್ತಾ ರೈತರಿಗೆ ನೀರು? – Kannada News | Bidar Karanga Canal Project Gets 181 Crore Boost, Reviving Farmers’ Irrigation Hopes After Decades

ಕಾರಂಜಾ ಬಲದಂಡೆ ಕಾಲುವೆImage Credit source: tv9 kannada

ಬೀದರ್, ಜುಲೈ 22: ಜಿಲ್ಲೆಯ ಸಾವಿರಾರು ರೈತರ (Farmers) ನೀರಾವರಿ ಕನಸಿಗೆ ಆಸರೆಯಾಗಬೇಕಿದ್ದ ಕಾರಂಜಾ ಬಲದಂಡೆ ಕಾಲುವೆ (Karanga Canal), ಇದೀಗ ರೈತರ ಪಾಲಿಗೆ ಕೇಲವ ಭರವಸೆಯಾಗಿ ಉಳಿದಿದೆ. ಕಾಲುವೆ ನಿರ್ಮಾಣವಾಗಿ ಎರಡು ದಶಕಗಳು ಕಳೆದರೂ ಕೊನೆಯ ಭಾಗದವರೆಗೆ ನೀರು ತಲುಪದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಕಾಲುವೆ ದುರಸ್ತಿಗೆ ಲಕ್ಷಾಂತರ ರೂ ವೆಚ್ಚ ಮಾಡಿದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇದೀಗ ಕಾರಂಜಾ ಬಲದಂಡೆ ಕಾಲುವೆ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ರೈತರ ಖುಷಿ ಹೆಚ್ಚಿಸಿದೆ.

ಪ್ರತಿ ವರ್ಷ ನೀರಿಗೆ ರೈತರು ಪರದಾಟ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ ಕೆ. ಗ್ರಾಮದ ಬಳಿಯಿರುವ ಕಾರಂಜಾ ಜಲಾಶಯದ ನೀರು ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಬೇಕಿತ್ತು. ಆದರೆ ವಾಸ್ತವದಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ಮಾತ್ರ ಇನ್ನೂ ನೀರು ಸಿಗುತ್ತಿಲ್ಲ. ಪ್ರತಿ ವರ್ಷ ಮಳೆಗಾಲ ಅಥವಾ ನೀರು ಬಿಡುವ ಮುನ್ನ ಕಾಲುವೆ ಸ್ವಚ್ಛತೆ, ದುರಸ್ತಿ ಮತ್ತು ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಲಾಗುತ್ತದೆ. ಆದರೆ ನೀರು ಮಾತ್ರ ಮಧ್ಯದಲ್ಲೇ ನಿಂತುಹೋಗುತ್ತದೆ. ಪರಿಣಾಮ ಕಾಲುವೆಯ ಕೊನೆಯ ಭಾಗದ ನೂರಾರು ಗ್ರಾಮಗಳ ರೈತರು ಪ್ರತಿ ವರ್ಷ ನೀರು ಸಿಗದೇ ಪರದಾಡುವಂತಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಕೃಷಿಗಾಗಿ ಕಾಲುವೆಯನ್ನೇ ನಂಬಿಕೊಂಡಿರುವ ರೈತರು ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇಂದು ನೀರು ಬರುತ್ತದೆ, ನಾಳೆ ನೀರು ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ನೀರು ಮಾತ್ರ ಕೊನೆಯ ಭಾಗದವರೆಗೆ ತಲುಪುವುದಿಲ್ಲ. ಹೀಗಾಗಿ ಕಾಲುವೆಯತ್ತ ರೈತರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಮೂಲ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ

ಕಾಲುವೆ ನಿರ್ಮಾಣವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಈ ಅವಧಿಯಲ್ಲಿ ಹಲವು ಬಾರಿ ದುರಸ್ತಿ ಕಾಮಗಾರಿ ನಡೆದಿದ್ದರೂ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೆಲವೆಡೆ ಕಾಲುವೆ ಒಡೆದು ಹೋಗಿರುವುದು ಮತ್ತೆ ಕೆಲವೆಡೆ ಹೂಳು ತುಂಬಿರುವುದು, ಇನ್ನೂ ಕೆಲವೆಡೆ ನೀರು ಸೋರುತ್ತಿದೆ. ಹೀಗಾಗಿ ಕೊನೆಯ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿಲ್ಲ. ಮಳೆ ಕೈಕೊಟ್ಟರೆ ಕಾರಂಜಾ ನೀರೇ ಆಧಾರ ಎಂದು ಭಾವಿಸಿದ್ದ ರೈತರು ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೋರ್‌ವೆಲ್‌ಗಳಲ್ಲೂ ನೀರಿನ ಮಟ್ಟ ಕುಸಿದಿರುವ ಕಾರಣ ಕಾಲುವೆಯ ನೀರಿನ ಮೇಲಿನ ಅವಲಂಬನೆ ಹೆಚ್ಚಾಗಿದೆ. ಆದರೆ ನೀರೇ ತಲುಪದ ಕಾರಣ ಬೆಳೆ ಬೆಳೆಯುವುದು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಜುಲೈ 19ರಂದು ನಡೆದ ರಾಜ್ಯ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಕಾರಂಜಾ ಬಲದಂಡೆ ಕಾಲುವೆಯ ಸಮಗ್ರ ದುರಸ್ತಿಗೆ 181 ಕೋಟಿ ರೂ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕಾಲುವೆಯ ಸಂಪೂರ್ಣ ದುರಸ್ತಿ, ಕಾಂಕ್ರೀಟೀಕರಣ, ಸೋರಿಕೆ ತಡೆ ಹಾಗೂ ನೀರಿನ ಹರಿವಿಗೆ ಇರುವ ಅಡ್ಡಿಗಳನ್ನು ನಿವಾರಿಸಿದರೆ ಮಾತ್ರ ಕೊನೆಯ ಭಾಗದ ರೈತರಿಗೂ ನೀರು ತಲುಪಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಈ ಬಾರಿ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ರೈತ ಪ್ರವೀಣ ಹೇಳಿದ್ದಾರೆ.

ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಆಗ್ರಹ

ಕಾರಂಜಾ ಬಲದಂಡೆ ಕಾಲುವೆ ಸಮರ್ಪಕವಾಗಿ ದುರಸ್ತಿಯಾದರೆ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ರೈತರ ಬದುಕಿಗೆ ಹೊಸ ಚೈತನ್ಯ ಸಿಗಲಿದೆ. ಸರ್ಕಾರ ಘೋಷಿಸಿರುವ 181 ಕೋಟಿ ರೂ ಅನುದಾನ ಫಲಪ್ರದವಾಗಿ ಬಳಕೆಯಾಗಿ, ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಯಲಿ ಎಂಬುದು ಜಿಲ್ಲೆಯ ರೈತರ ಒಕ್ಕೊರಲಿನ ಆಗ್ರಹವಾಗಿದೆ.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಒಟ್ಟಾರೆ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿರುವ ಕಾರಂಜಾ ಬಲದಂಡೆ ಕಾಲುವೆಯ ರೈತರಿಗೆ 181 ಕೋಟಿ ರೂ ದುರಸ್ತಿ ಯೋಜನೆ ಹೊಸ ಭರವಸೆ ಮೂಡಿಸಿದೆ. ಆದರೆ ಈ ಭರವಸೆ ಮತ್ತೊಮ್ಮೆ ಭರವಸೆಯಾಗಿಯೇ ಉಳಿಯುತ್ತದೆಯೇ ಅಥವಾ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಕದಿನ ವಿಶ್ವಕಪ್​ಗೆ ಅಚ್ಚರಿಯ ಹೆಸರುಗಳಿರುವ ತಂಡ ಪ್ರಕಟಿಸಿದ ಮಾಜಿ ಕೋಚ್ ರವಿಶಾಸ್ತ್ರಿ – Kannada News | Ravi Shastri Predicts India’s ODI World Cup Squad 2027: Kohli, Rohit, Pant Inclusions!

ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ  ಏಕದಿನ ವಿಶ್ವಕಪ್​ಗೆ (ODI World Cup 2027) ಟೀಂ ಇಂಡಿಯಾದಲ್ಲಿ (Team India) ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಇದುವರೆಗೂ ಖಚಿತವಾಗಿಲ್ಲ. ಅದರಲ್ಲೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ ಸಿಗುತ್ತದೆಯೇ? ಇಶಾನ್ ಕಿಶನ್ ವಿಕೆಟ್ ಕೀಪರ್ ಆಗುತ್ತಾರೆಯೇ ಅಥವಾ ರಿಷಭ್ ಪಂತ್ ಏಕದಿನ ತಂಡಕ್ಕೆ ಮರಳುತ್ತಾರೆಯೇ? ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) 2027 ರ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಯಾರ್ಯಾರು?

ರವಿಶಾಸ್ತ್ರಿ ಅವರ ಏಕದಿನ ವಿಶ್ವಕಪ್ ತಂಡದಲ್ಲಿ ಶುಭ್​ಮನ್ ಗಿಲ್ ಆರಂಭಿಕನಾಗಿ ಆಯ್ಕೆಯಾಗಿದ್ದರೆ, ಇನ್ನೊಂದು ಆರಂಭಿಕ ಸ್ಥಾನಕ್ಕೆ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ. ಶಾಸ್ತ್ರಿ ಪ್ರಕಾರ, ರೋಹಿತ್ ಖಂಡಿತವಾಗಿಯೂ ಏಕದಿನ ವಿಶ್ವಕಪ್‌ನಲ್ಲಿ ಆಡಬೇಕು, ಆದರೆ ಜೈಸ್ವಾಲ್ ಬ್ಯಾಕಪ್ ಓಪನರ್ ಆಗಿರಬೇಕು. ಇವರಲ್ಲದೆ, ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಹೆಸರುಗಳಿವೆ. ಕುತೂಹಲಕಾರಿಯಾಗಿ, ಶಾಸ್ತ್ರಿ ಅವರು ಇಶಾನ್ ಕಿಶನ್ ಬದಲಿಗೆ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಮೂವರು ಆಲ್‌ರೌಂಡರ್‌ಗಳ ಆಯ್ಕೆ

ಆಲ್‌ರೌಂಡರ್ ವಿಭಾಗದಲ್ಲಿ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಅವರನ್ನು ಮೊದಲ ಆಯ್ಕೆಯ ಆಲ್‌ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ. ಹಾಗೆಯೇ ಸ್ಪಿನ್ ಆಲ್‌ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ರವಿಶಾಸ್ತ್ರಿ, ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಏಕದಿನ ವಿಶ್ವಕಪ್‌ನಲ್ಲಿ ಆಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಇಲ್ಲಿ ರವಿಶಾಸ್ತ್ರಿ ಅವರ ಇನ್ನೊಂದು ಅಚ್ಚರಿಯ ಆಯ್ಕೆ ಎಂದರೆ ಭುವನೇಶ್ವರ್ ಕುಮಾರ್. ಬುಮ್ರಾ ಗಾಯಗೊಂಡರೆ, ಅವರ ಅನುಪಸ್ಥಿತಿಯಲ್ಲಿಯೂ ಭಾರತ ತಂಡ ಬಲಿಷ್ಠವಾಗಿ ಕಾಣಿಸಿಕೊಳ್ಳಲು ವಿಶ್ವಕಪ್‌ನಲ್ಲಿ ಅನುಭವಿ ವೇಗದ ಬೌಲಿಂಗ್ ದಾಳಿಯನ್ನು ಬಳಸಬೇಕೆಂದು ಶಾಸ್ತ್ರಿ ನಂಬುತ್ತಾರೆ. ರವಿಶಾಸ್ತ್ರಿ ಅವರು ಕುಲ್ದೀಪ್ ಯಾದವ್ ಅವರನ್ನು ವಿಶೇಷ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದಾರೆ.

ಟೀಂ ಇಂಡಿಯಾದ ಈ ಮೂವರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಜಾಗವಿಲ್ಲ

ರವಿಶಾಸ್ತ್ರಿ ತಂಡದಲ್ಲಿ ಇವರಿಲ್ಲ

ಭಾರತದ ಪ್ರಸ್ತುತ ಏಕದಿನ ತಂಡದಿಂದ ಹಲವಾರು ಆಟಗಾರರನ್ನು ರವಿಶಾಸ್ತ್ರಿ ಹೊರಗಿಟ್ಟಿದ್ದಾರೆ. ಅವರುಗಳಲ್ಲಿ ಇಶಾನ್ ಕಿಶನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ಹರ್ಷಿತ್ ರಾಣಾ ಸೇರಿದ್ದಾರೆ.

ಏಕದಿನ ವಿಶ್ವಕಪ್‌ಗೆ ರವಿಶಾಸ್ತ್ರಿ ಅವರ ತಂಡ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mahakaleshwar Temple: ಮಹಾಕಾಳೇಶ್ವರದಲ್ಲಿ ಹೈಟೆಕ್ ಸ್ಪರ್ಶ; ಕೇವಲ 30 ಸೆಕೆಂಡುಗಳಲ್ಲಿ ಚಿನ್ನ-ಬೆಳ್ಳಿ ಆಭರಣಗಳ ಶುದ್ಧತೆ ಪರೀಕ್ಷೆ! – Kannada News | Mahakaleshwar Temple Adopts Karatometer for Transparent Gold and Silver Donations

ಶ್ರೀ ಮಹಾಕಾಳೇಶ್ವರ ದೇವಸ್ಥಾನImage Credit source: Getty Images

ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ದಾನ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಅತ್ಯಂತ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಭಕ್ತರು ಶ್ರೀ ಮಹಾಕಾಳೇಶ್ವರನಿಗೆ ದೇವೋತ್ತರ ರೂಪದಲ್ಲಿ ಅರ್ಪಿಸುವ ಚಿನ್ನ ಮತ್ತು ಬೆಳ್ಳಿ ಆಭರಣಗಳ ಶುದ್ಧತೆಯನ್ನು ಕೇವಲ 30 ಸೆಕೆಂಡುಗಳಲ್ಲಿ ನಿಖರವಾಗಿ ನಿರ್ಧರಿಸಬಹುದಾಗಿದೆ. ಈ ನೂತನ ತಾಂತ್ರಿಕ ಸೌಲಭ್ಯಕ್ಕಾಗಿ ಶ್ರೀ ಮಹಾಕಾಳೇಶ್ವರ ದೇವಸ್ಥಾನ ನಿರ್ವಹಣಾ ಸಮಿತಿಯು ಸುಮಾರು 1.5 ಮಿಲಿಯನ್ ರೂಪಾಯಿ (15 ಲಕ್ಷ ರೂ.) ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾರಟೋಮೀಟರ್ ಯಂತ್ರವನ್ನು (Karatometer Machine) ಸ್ಥಾಪಿಸಿದೆ.

ದಾನ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಸ್ಪರ್ಶ:

ಇಲ್ಲಿಯವರೆಗೆ ದೇವಾಲಯ ಆಡಳಿತ ಮಂಡಳಿಯು ದೇಣಿಗೆಗಳ ಸುರಕ್ಷತೆ ಮತ್ತು ರಕ್ಷಣೆಗಾಗಿ ಸಿಸಿಟಿವಿ ಕಣ್ಗಾವಲು ಹಾಗೂ ಡಿಜಿಟಲ್ ಪಾವತಿಗಳಿಗಾಗಿ ಕ್ಯೂಆರ್ ಕೋಡ್ (QR Code) ಸೌಲಭ್ಯಗಳನ್ನು ಅಳವಡಿಸಿಕೊಂಡಿತ್ತು. ಆದರೆ, ಈಗ ಈ ಹೊಸ ಕ್ಯಾರಟೋಮೀಟರ್ ಯಂತ್ರದ ಸ್ಥಾಪನೆಯೊಂದಿಗೆ ಭಕ್ತರು ನೀಡುವ ಲೋಹದ ಕಾಣಿಕೆಗಳನ್ನು ತಾಂತ್ರಿಕವಾಗಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಯಂತ್ರವು ದಾನವಾಗಿ ಬಂದ ಚಿನ್ನ ಅಥವಾ ಬೆಳ್ಳಿಯಲ್ಲಿರುವ ಶುದ್ಧತೆಯ ಶೇಕಡಾವಾರು ಪ್ರಮಾಣ ಮತ್ತು ಅದರಲ್ಲಿರುವ ಕಲಬೆರಕೆಯನ್ನು ತಕ್ಷಣವೇ ಪತ್ತೆ ಹಚ್ಚಿ ಬಹಿರಂಗಪಡಿಸುತ್ತದೆ.

ಎಕ್ಸ್-ರೇ ಫ್ಲೋರೊಸೆನ್ಸ್ (XRF) ತಂತ್ರಜ್ಞಾನದ ಬಳಕೆ:

ಈ ಪರೀಕ್ಷಾ ವಿಧಾನದ ಕುರಿತು ಮಾಹಿತಿ ಹಂಚಿಕೊಂಡ ಶ್ರೀ ಮಹಾಕಾಳೇಶ್ವರ ದೇವಾಲಯದ ಸಹಾಯಕ ಆಡಳಿತಾಧಿಕಾರಿ ಸಿಮ್ಮಿ ಯಾದವ್ ಅವರು, ದಾನ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಈ ಯಂತ್ರವನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕ್ಯಾರಟೋಮೀಟರ್ ‘ಎಕ್ಸ್-ರೇ ಫ್ಲೋರೊಸೆನ್ಸ್’ (XRF) ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಆಭರಣವನ್ನು ಯಂತ್ರದಲ್ಲಿರಿಸಿದ ತಕ್ಷಣ, ಅದು ವಿಶೇಷ ಶಕ್ತಿಯ ತರಂಗಗಳ ಮೂಲಕ ಲೋಹದ ಸಂಯೋಜನೆಯನ್ನು ವಿಶ್ಲೇಷಿಸಿ, ಕೇವಲ 30 ಸೆಕೆಂಡುಗಳಲ್ಲಿ ಶುದ್ಧತೆಯ ವರದಿಯನ್ನು ನೀಡುತ್ತದೆ. ಈ ಪರೀಕ್ಷೆಯ ಆಧಾರದ ಮೇಲೆಯೇ ದೇವಸ್ಥಾನದ ಸಮಿತಿಯು ಭಕ್ತರಿಗೆ ಅಧಿಕೃತ ದೇಣಿಗೆ ರಶೀದಿಯನ್ನು ನೀಡಲಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸಮಿತಿಯ ಅನುಭವ ಮತ್ತು ಹೊಸ ಯಂತ್ರದ ನಿಖರತೆ:

ಈ ನೂತನ ತಂತ್ರಜ್ಞಾನ ಬರುವ ಮೊದಲು, ದೇವಾಲಯಕ್ಕೆ ಬರುವ ಆಭರಣಗಳನ್ನು ಪರಿಶೀಲಿಸಲು ಮೂವರು ಅನುಭವಿ ಸದಸ್ಯರ ಸಮಿತಿಯೊಂದಿತ್ತು. ಈ ಸದಸ್ಯರು ಉಚಿತವಾಗಿ ಸೇವೆ ಸಲ್ಲಿಸುತ್ತಾ ತಮ್ಮ ಸುದೀರ್ಘ ಅನುಭವದ ಆಧಾರದ ಮೇಲೆ ಆಭರಣಗಳ ಶುದ್ದತೆಯನ್ನು ಅಂದಾಜಿಸುತ್ತಿದ್ದರು ಎಂದು ಸಮಿತಿ ಸದಸ್ಯ ರವೀಂದ್ರ ಸೋನಿ ವಿವರಿಸಿದ್ದಾರೆ. ಇದೀಗ ಕ್ಯಾರಟೋಮೀಟರ್ ಬಂದಿರುವುದರಿಂದ ಪರೀಕ್ಷಾ ಪ್ರಕ್ರಿಯೆಯು ಮೊದಲಿಗಿಂತಲೂ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ನಡೆಯಲಿದೆ. ತಂತ್ರಜ್ಞಾನ ಬಂದಿದ್ದರೂ ಸಹ, ಈ ಸಮಿತಿಯು ಮೊದಲಿನಂತೆಯೇ ತನ್ನ ಜವಾಬ್ದಾರಿಯನ್ನು ಮುಂದುವರಿಸಲಿದ್ದು, ಅಗತ್ಯಬಿದ್ದಾಗ ತಾಂತ್ರಿಕ ತನಿಖೆಗಳಿಗೆ ಸಹಕಾರ ನೀಡಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:16 pm, Wed, 22 July 26

Source link

Exit mobile version