ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್! – Kannada News | Just One Goal: Spain Inflicts Maximum Pain

ಒಂದೇ ಒಂದು ಗೋಲು… ಫಿಫಾ ವಿಶ್ವಕಪ್​ ಅನ್ನು ಹೀಗೂ ಗೆಲ್ಲಬಹುದಾ? ಅದು ಕೂಡ ಒಂದು ಗೋಲು ಬಾರಿಸಿ, ಒಂದು ಗೋಲು ಹೊಡೆಸಿಕೊಂಡು… ಅಚ್ಚರಿ ಎನಿಸಿದರೂ ಇದುವೇ ಸತ್ಯ. ಫುಟ್‌ಬಾಲ್ ಇತಿಹಾಸದ ಸಕಲ ದಾಖಲೆಗಳನ್ನು ಧೂಳೀಪಟ ಮಾಡಿ ಸ್ಪೇನ್ ಪಡೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಅದು ಸಹ ಎದುರಾಳಿಗಳ ಆಕ್ರಮಣಕ್ಕೆ ಬಂಡೆಯಂತೆ ಎದುರಾಗಿ ನಿಂತು ಎಂಬುದು ವಿಶೇಷ.

ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸ್ಪೇನ್ ನೆಟ್ ಒಳಗೆ ನುಗ್ಗಿದ್ದು ಕೇವಲ ಒಂದೇ ಒಂದು ಗೋಲು ಎಂದರೆ ನೀವು ನಂಬಲೇಬೇಕು. ಅಂದರೆ, ಮೈದಾನದಲ್ಲಿ ಟಿಕಿ-ಟಾಕಾ ಜಾದೂ ಪ್ರದರ್ಶಿಸಿದ ‘ಲಾ ರೋಜಾ’ ಪಡೆ, ರಕ್ಷಣಾ ವಿಭಾಗದಲ್ಲಿಇಡೀ ಜಗತ್ತೇ ಬೆರಗಾಗುವಂತಹ ಪಾರುಪತ್ಯ ಮೆರೆಯಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅಪ್ರತಿಮ ರಕ್ಷಣಾತ್ಮಕ ಶೈಲಿಯಲ್ಲಿ ವಿಶ್ವ ಕಿರಿಟ ಮುಡಿಗೇರಿಸಿಕೊಂಡ ತಂಡವೆಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.

ಟಿಕಿ-ಟಾಕಾ ಫೈನಲ್:

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಹೆಚ್ಚುವರಿ ಸಮಯದಲ್ಲಿ 1-0 ಗೋಲಿನಿಂದ ಮಣಿಸಿದ ಸ್ಪೇನ್, 2026ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ ನೇತೃತ್ವದ ‘ಲಾ ರೋಜಾ’ (ಸ್ಪೇನ್), ಆಧುನಿಕ ಟ್ಯಾಕ್ಟಿಕಲ್ ಶೈಲಿ ಮತ್ತು ಅಪ್ರತಿಮ ಪಾಸಿಂಗ್ ಆಟದ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಈ ಮೂಲಕ ಲಿಯೋನೆಲ್ ಮೆಸ್ಸಿಯವರ ವಿಶ್ವಕಪ್ ವಿದಾಯದ ಪಂದ್ಯಕ್ಕೆ ಸ್ಪೇನ್ ಶಾಕ್ ನೀಡಿತು.

ಸ್ಪೇನ್ ತಂಡದ ಈ ಗೆಲುವು ಕೇವಲ ಅದೃಷ್ಟದ್ದಲ್ಲ, ಅದು ಅವರ ಅತ್ಯುತ್ತಮ ಆಟದ ತಂತ್ರಕ್ಕೆ ಸಿಕ್ಕ ಪ್ರತಿಫಲವಾಗಿತ್ತು. ಏಕೆಂದರೆ  ಫೈನಲ್​ ಪಂದ್ಯದಲ್ಲಿ ಸ್ಪೇನ್ ಬರೋಬ್ಬರಿ 853 ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಅರ್ಜೆಂಟೀನಾ ಆಟಗಾರರಿಗಿಂತ 400ಕ್ಕೂ ಹೆಚ್ಚು ಬಾರಿ ಸ್ಪೇನ್ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಎದುರಾಳಿಗಳಿಗೆ ಆಕ್ರಮಣ ಮಾಡಲು ಅವಕಾಶವನ್ನೇ ನೀಡಲಿಲ್ಲ.

ಬಲಿಷ್ಠ ರಕ್ಷಣಾ ಕೋಟೆ:

2026ರ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಸ್ಪೇನ್ ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಒಂದೇ ಒಂದು ಗೋಲು. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ರಕ್ಷಣಾತ್ಮಕ ಆಟ ಆಡಿದ ಐತಿಹಾಸಿಕ ದಾಖಲೆಯನ್ನು ಸ್ಪೇನ್ ತನ್ನದಾಗಿಸಿಕೊಂಡಿದೆ.

ಇಡೀ ಟೂರ್ನಿಯಲ್ಲಿ ಸ್ಪೇನ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಿದ್ದು ಬೆಲ್ಜಿಯಂ ತಂಡಕ್ಕೆ ಮಾತ್ರ (ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ). ಅದನ್ನು ಬಿಟ್ಟರೆ ಉಳಿದ ಯಾವುದೇ ತಂಡಕ್ಕೂ ಸ್ಪೇನ್ ವಿರುದ್ಧ ಗೋಲು ಹೊಡೆಯಲು ಸಾಧ್ಯವಾಗಲಿಲ್ಲಎಂಬುದೇ ಅಚ್ಚರಿ.

ಉನೈ ಸಿಮನ್ ವಿಶ್ವ ದಾಖಲೆ:

ಸ್ಪೇನ್ ತಂಡದ ಗೋಲ್‌ಕೀಪರ್ ಉನೈ ಸಿಮನ್ ಸತತ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡದೆ ವಿಶ್ವಕಪ್ ಇತಿಹಾಸದಲ್ಲೇ ಸುದೀರ್ಘ ಸಮಯ ಕ್ಲೀನ್ ಶೀಟ್ ಸಾಧಿಸಿದ ಹೊಸ ದಾಖಲೆ ಬರೆದಿದ್ದಾರೆ. ಅಂದರೆ ವಿಶ್ವಕಪ್ ಇತಿಹಾಸದಲ್ಲೇ ಯಾವುದೇ ಗೋಲ್ ಕೀಪರ್ ಇಷ್ಟೊತ್ತು ನಿಂತು ಕೇವಲ ಒಂದು ಗೋಲು ಬಿಟ್ಟು ಕೊಟ್ಟಿರುವುದು ಇದೇ ಮೊದಲು.

ಸ್ಪೇನ್ ಆಡಿದ ಒಟ್ಟು 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಎದುರಾಳಿಗಳಿಗೆ ಒಂದು ಗೋಲನ್ನೂ ಬಿಟ್ಟುಕೊಡದೆ ಟೂರ್ನಿ ಮುಗಿಸಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ಮತ್ತು ಫೈನಲ್‌ನಲ್ಲಿ ಅರ್ಜೆಂಟೀನಾದಂತಹ ತಂಡಗಳನ್ನೂ ಸ್ಪೇನ್ ಶೂನ್ಯಕ್ಕೆ ಕಟ್ಟಿಹಾಕಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ.

ಐತಿಹಾಸಿಕ ಸಾಧನೆ:

ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಗೋಲು ಹೊಡೆಸಿಕೊಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವ ದಾಖಲೆ ಸ್ಪೇನ್ ತಂಡದ ಹೆಸರಿನಲ್ಲಿತ್ತು. ಇದೀಗ ತನ್ನದೇ ದಾಖಲೆಯನ್ನು ಮುರಿದು ‘ಲಾ ರೋಜಾ’ ಪಡೆ ಹೊಸ ಇತಿಹಾಸ ನಿರ್ಮಿಸಿದೆ.

  • 2010ರ ವಿಶ್ವಕಪ್​ನಲ್ಲಿ ಸ್ಪೇನ್ ತಂಡವು ಕೇವಲ 2 ಗೋಲು ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
  • 2026 ರಲ್ಲಿ ಕೇವಲ ಒಂದು ಗೋಲು ಮಾತ್ರ ಹೊಡೆಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸ್ಪೇನ್ ಪಡೆ ತನ್ನದೇ ವಿಶ್ವ ದಾಖಲೆಯನ್ನು ಮುರಿದಿದೆ.

ಅತೀ ಕಡಿಮೆ ಹೊಡೆಸಿಕೊಂಡು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ:

  • ಸ್ಪೇನ್ (2026): 1 ಗೋಲು
  • ಸ್ಪೇನ್ (2010): 2 ಗೋಲುಗಳು
  • ಇಟಲಿ (2006): 2 ಗೋಲುಗಳು
  • ಫ್ರಾನ್ಸ್ (1998): 2 ಗೋಲುಗಳು

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್ ಸ್ಪೇನ್ ತಂಡದ ಅದ್ಭುತ ರಕ್ಷಣಾತ್ಮಕ ಶಿಸ್ತು ಮತ್ತು ಟ್ಯಾಕ್ಟಿಕಲ್ ಪ್ರಾಬಲ್ಯಕ್ಕೆ ಸಿಕ್ಕ ಐತಿಹಾಸಿಕ ಜಯ ಎನ್ನಬಹುದು. ಏಕೆಂದರೆ ತಂಡಗಳ ಸಂಖ್ಯೆ ಹೆಚ್ಚಾದಾಗ, ಪಂದ್ಯಗಳ ಸಂಖ್ಯೆ ಬೆಳೆದಾಗ ಆಟಗಾರರ ದಣಿವು ಮತ್ತು ರಕ್ಷಣಾ ವಿಭಾಗದ ತಪ್ಪುಗಳು ಹೆಚ್ಚಾಗುವುದು ಸಹಜ. ಆದರೆ ಸ್ಪೇನ್ ಪಡೆ ಮಾತ್ರ ರಣರಂಗದಲ್ಲಿ ಶಿಸ್ತಿನ ಸಿಪಾಯಿಗಳಂತೆ ಹೋರಾಡಿತು.

ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ

48 ತಂಡಗಳ ಈ ಸುದೀರ್ಘ ಹಾಗೂ ಕಠಿಣ ವಿಶ್ವಕಪ್ ಮಹಾಸಮರದಲ್ಲಿ, ಎದುರಾಳಿಗಳು ಎಷ್ಟೇ ತಂತ್ರ ಹೂಡಿದರೂ ಸ್ಪೇನ್‌ನ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಗೋಲು ಒಪ್ಪಿಕೊಂಡು ವಿಶ್ವಕಿರಿಟ ಧರಿಸಿದ ಈ ‘ಲಾ ರೋಜಾ’ ಪಡೆಯ ಅಪರೂಪದ ದಾಖಲೆ, ಮುಂಬರುವ ತಲೆಮಾರುಗಳ ಫುಟ್‌ಬಾಲ್ ಪ್ರೇಮಿಗಳು ಸದಾ ಕಾಲ ನೆನಪಿಸಿಕೊಳ್ಳುವಂತಹ ಅದ್ಭುತ ಮೈಲಿಗಲ್ಲಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ.

Source link

TV9 Kannada News Live: ಮೈಸೂರಿನಲ್ಲಿ SIR ಸಿಬ್ಬಂದಿಗೆ ಬೆದರಿಕೆ, ರಾಯಚೂರಿನಲ್ಲಿ ಬೀದಿನಾಯಿ ದಾಳಿ; ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada Live News 21 July 2026 | Karnataka Politics, Parliament Monsoon Session, Weather and Rain Updates

Breaking News Today Live Updates in Kannada:

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದೇ ಹೊತ್ತಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಕಾರ್ಯಕರ್ತರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ. ಮತ್ತೊಂದೆಡೆ, ಸಚಿವಾಕಾಂಕ್ಷಿ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಲಾಬಿ ನಡೆಸುತ್ತಿದ್ದಾರೆ. ಇವುಗಳು ಸೇರಿದಂತೆ ಇಂದಿನ ಪ್ರಮುಖ ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ, ಕ್ರೀಡೆ ಹಾಗೂ ಮನರಂಜನೆಗೆ ಸಂಬಂಧಿಸಿದ ಬೆಳವಣಿಗೆಗಳ ತಾಜಾ ಮಾಹಿತಿ ಪಡೆಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

Graha Maitri: ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ; ಜಾತಕ ಹೊಂದಾಣಿಕೆ ಏಕೆ ಮುಖ್ಯ? – Kannada News | Graha Maitri for Marriage: Astrological Importance and Impact on Relationships

ದಾಂಪತ್ಯ ಜೀವನದಲ್ಲಿ ‘ಗ್ರಹ ಮೈತ್ರಿ’ಯ ಪ್ರಾಮುಖ್ಯತೆ

ಮದುವೆ ಎನ್ನುವುದು ಜೀವನಪರ್ಯಂತದ ಪವಿತ್ರ ಬಂಧ. ಹೀಗಾಗಿ, ವಿವಾಹದ ಸಿದ್ಧತೆಯಲ್ಲಿ ಎರಡು ಕುಟುಂಬಗಳ ಒಕ್ಕೂಟ ಮತ್ತು ಪರಸ್ಪರ ಸಾಮರಸ್ಯ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಜಾತಕ ಹೊಂದಾಣಿಕೆಗೂ ನೀಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖಿ ದಾಂಪತ್ಯಕ್ಕೆ ಜಾತಕ ಹೊಂದಾಣಿಕೆ (ಅಷ್ಟ ಕೂಟ ಮಿಲನ) ಅತ್ಯಂತ ಮುಖ್ಯ. ಆದರೆ, ಇದರಲ್ಲಿ ‘ಗ್ರಹ ಮೈತ್ರಿ’ ವಹಿಸುವ ಪಾತ್ರವೇನು? ಇದು ದಾಂಪತ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

36 ಗುಣಗಳು ಮತ್ತು ಗ್ರಹ ಮೈತ್ರಿಯ ಮಹತ್ವ:

ಜಾತಕ ಹೊಂದಾಣಿಕೆಯಲ್ಲಿ ಒಟ್ಟು 36 ಗುಣಗಳನ್ನು ಪರಿಶೀಲಿಸಲಾಗುತ್ತದೆ. ಅದರಲ್ಲಿ ನಾಡಿ, ಭಕೂಟ ಮತ್ತು ಗ್ರಹ ಮೈತ್ರಿ ಮುಂತಾದ ಹಲವು ಪ್ರಮುಖ ಅಂಶಗಳಿವೆ. ಇವುಗಳಲ್ಲಿ ಗ್ರಹ ಮೈತ್ರಿಗೆ 5 ಅಂಕಗಳನ್ನು ನೀಡಲಾಗುತ್ತದೆ.

ಗ್ರಹ ಮೈತ್ರಿ ಎಂದರೆ ಏನು?

ಗ್ರಹ ಮೈತ್ರಿ ಎಂದರೆ ವಧು-ವರರ ಚಂದ್ರ ರಾಶಿಯ ಅಧಿಪತಿಗಳ (ಆಳುವ ಗ್ರಹಗಳ) ನಡುವಿನ ಸ್ನೇಹ. ಚಂದ್ರನು ಮನುಷ್ಯನ ಮನಸ್ಸು ಮತ್ತು ಭಾವನೆಗಳನ್ನು ಪ್ರತಿನಿಧಿಸುವುದರಿಂದ, ಈ ಗ್ರಹಗಳ ನಡುವಿನ ಹೊಂದಾಣಿಕೆಯು ದಂಪತಿಗಳ ಮಾನಸಿಕ ಸಂಪರ್ಕವನ್ನು ಬಹಿರಂಗಪಡಿಸುತ್ತದೆ.

ಗ್ರಹ ಮೈತ್ರಿ ವೈವಾಹಿಕ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಗ್ರಹಗಳು ಪರಸ್ಪರ ಮಿತ್ರರಾಗಿದ್ದಾರೆಯೇ ಅಥವಾ ಶತ್ರುಗಳಾಗಿದ್ದಾರೆಯೇ ಎಂಬುದರ ಮೇಲೆ ಸಂಬಂಧದ ಸ್ವರೂಪ ನಿರ್ಧಾರವಾಗುತ್ತದೆ. ಉತ್ತಮ ಗ್ರಹ ಮೈತ್ರಿ ಇದ್ದರೆ ದಂಪತಿಗಳ ನಡುವೆ ಸ್ವಾಭಾವಿಕ ತಿಳುವಳಿಕೆ, ಉತ್ತಮ ಸಂವಹನ ಮತ್ತು ಆಲೋಚನೆಗಳಲ್ಲಿ ಸಾಮರಸ್ಯವಿರುತ್ತದೆ. ಗ್ರಹ ಮೈತ್ರಿ ದುರ್ಬಲವಾಗಿದ್ದರೆ ಸಣ್ಣಪುಟ್ಟ ವಿಷಯಗಳಿಗೂ ಆಲೋಚನಾ ಶೈಲಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಹೆಚ್ಚಿನ ಶ್ರಮ ಮತ್ತು ತಾಳ್ಮೆ ಅಗತ್ಯವಾಗುತ್ತದೆ.

ಗ್ರಹ ಮೈತ್ರಿ ದೋಷ ಎಂದರೆ ಏನು?

ಚಂದ್ರ ರಾಶಿಯ ಅಧಿಪತಿಗಳು ಪರಸ್ಪರ ಶತ್ರು ಗ್ರಹಗಳಾಗಿದ್ದಾಗ ಜಾತಕದಲ್ಲಿ ‘ಗ್ರಹ ಮೈತ್ರಿ ದೋಷ’ ಉಂಟಾಗುತ್ತದೆ. ಜ್ಯೋತಿಷ್ಯವು ಕೇವಲ ಜೀವನದ ಪ್ರಮುಖ ಘಟನೆಗಳನ್ನು ಮಾತ್ರವಲ್ಲ, ದಿನನಿತ್ಯದ ಅನುಭವಗಳ ಮೇಲೆಯೂ ಪ್ರಭಾವ ಬೀರುತ್ತದೆ. ಹಾಗಾಗಿ, ಗ್ರಹ ಮೈತ್ರಿ ದೋಷವಿದ್ದಾಗ ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಘರ್ಷಣೆಗಳು ಅಥವಾ ಆಲೋಚನೆಗಳಲ್ಲಿ ವೈರುಧ್ಯಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಗ್ರಹ ಮೈತ್ರಿ ದೋಷವಿದ್ದರೆ ಮದುವೆ ಯಶಸ್ವಿಯಾಗುವುದಿಲ್ಲವೇ?

ಖಂಡಿತವಾಗಿಯೂ ಇಲ್ಲ. ಗ್ರಹ ಮೈತ್ರಿ ದೋಷವಿದ್ದ ತಕ್ಷಣ ಮದುವೆ ವಿಫಲವಾಗುತ್ತದೆ ಎಂದರ್ಥವಲ್ಲ. ಜ್ಯೋತಿಷ್ಯವು ಒಂದು ಮಾರ್ಗದರ್ಶಕ ಅಷ್ಟೇ. ದಾಂಪತ್ಯದ ಅಡಿಪಾಯ ನಿಂತಿರುವುದು ಇಬ್ಬರ ಭಾವನಾತ್ಮಕ ಬೆಂಬಲದ ಮೇಲೆ. ಜಾತಕದಲ್ಲಿ ಗ್ರಹ ಮೈತ್ರಿ ಕಡಿಮೆಯಿದ್ದರೂ ಸಹ, ಈ ಕೆಳಗಿನ ಗುಣಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ:

  • ಪರಸ್ಪರ ಪ್ರೀತಿ ಮತ್ತು ಗೌರವ
  • ಮುಕ್ತ ಸಂವಹನ ಹಾಗೂ ತಿಳುವಳಿಕೆ
  • ಪರಸ್ಪರ ಭಾವನೆಗಳಿಗೆ ನೀಡುವ ಬೆಲೆ

ನೀವು ಜಾತಕ ಹೊಂದಾಣಿಕೆಯಲ್ಲಿ ನಂಬಿಕೆ ಇಡುವವರಾಗಿದ್ದರೆ, ಗ್ರಹ ಮೈತ್ರಿಯ ಮಹತ್ವವನ್ನು ನಿರ್ಲಕ್ಷಿಸಬೇಡಿ. ಆದರೆ ನೆನಪಿಡಿ—ಗ್ರಹಗಳ ಅನುಕೂಲತೆಗಿಂತ ದಂಪತಿಗಳು ಪರಸ್ಪರ ನೀಡುವ ಗೌರವ ಮತ್ತು ಪ್ರೀತಿಯೇ ಯಾವುದೇ ದೋಷವನ್ನು ಮೆಟ್ಟಿ ನಿಲ್ಲುವ ನಿಜವಾದ ಶಕ್ತಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ! – Kannada News | Namma Metro Green Line Disrupted: Trains Suspended Between Yeshwanthpur and Madavara

ಬೆಂಗಳೂರು, ಜುಲೈ 21: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line) ಇಂದು ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಎದುರಾದ ಈ ವಿದ್ಯುತ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ 8.45ಕ್ಕೆ ಸಂಚಾರ ಆರಂಭವಾಗಿದೆ.

ಶಾರ್ಟ್-ಲೂಪ್‌ನಲ್ಲಿ ಮಾತ್ರವೇ ರೈಲು ಸಂಚಾರ

ವಿದ್ಯುತ್‌ ಸಮಸ್ಯೆಯ ಕಾರಣದಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಶಾರ್ಟ್-ಲೂಪ್ (Short-loop) ಸೇವೆಯಲ್ಲಿ ಸಂಚರಿಸುತ್ತಿವೆ. ಆದರೆ, ಯಶವಂತಪುರ ಮತ್ತು ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ ಒಟ್ಟು 10 ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬಿಎಂಆರ್‌ಸಿಎಲ್ ವಿಷಾದ

ಸಂಚಾರ ವ್ಯತ್ಯಯದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ತಾಂತ್ರಿಕ ದೋಷವನ್ನು ಸರಿಪಡಿಸಿ ಸಾಮಾನ್ಯ ಮೆಟ್ರೋ ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತು ಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೇವೆಯಲ್ಲಿ ಉಂಟಾದ ಹಠಾತ್ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ವಿಷಾದಿಸುತ್ತೇವೆ. ಸಮಸ್ಯೆ ಬಗೆಹರಿದು ಸೇವೆ ಪುನರಾರಂಭಗೊಂಡ ತಕ್ಷಣವೇ ಮುಂದಿನ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.

ಪ್ರಯಾಣಿಕರ ಪರದಾಟ

ಒಟ್ಟು 33.46 ಕಿ.ಮೀ. ಉದ್ದ ಹಾಗೂ 32 ನಿಲ್ದಾಣಗಳನ್ನು ಹೊಂದಿರುವ ಹಸಿರು ಮಾರ್ಗವು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಬೆಳಗಿನ ಪೀಕ್ ಅವರ್‌ನಲ್ಲೇ (Peak Hours) ಈ ತಾಂತ್ರಿಕ ದೋಷ ಎದುರಾಗಿದ್ದರಿಂದ ಕಚೇರಿಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಹಾಗೂ ಇತರ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಪ್ರದೇಶ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಸಭೆ, ಮುಂಬರುವ ಅಸೆಂಬ್ಲಿ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರ ಶುರು – Kannada News | UP Assembly Elections: Rahul Akhilesh Meet for Alliance Seat Sharing Strategy

ನವದೆಹಲಿ, ಜುಲೈ 21: ಸಂಸತ್ ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳ ಅಂಗಳದಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಲೋಕಸಭೆ(Lok Sabha)ಯ ವಿರೋಧ ಪಕ್ಷದ ನಾಯಕಿಯ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದು, ಉತ್ತರ ಪ್ರದೇಶದ (UP) ಮುಂಬರುವ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಝಲಕ್ ಕಾಣಿಸಿಕೊಂಡಿದೆ.

ಅಧಿವೇಶನದಲ್ಲಿ ‘ನೀಟ್ ಪೇಪರ್ ಸೋರಿಕೆ’ ಮತ್ತು ‘ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ’ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಕಲಾಪ ಮುಂದೂಡಲ್ಪಟ್ಟ ತಕ್ಷಣ ಈ ಉನ್ನತ ಮಟ್ಟದ ಭೇಟಿ ನಡೆಯಿತು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಸದನ ಮುಂದೂಡಲ್ಪಟ್ಟಾಗ ನಾಯಕರು ಪರಸ್ಪರ ಭೇಟಿಯಾಗುವುದು ಸ್ವಾಭಾವಿಕ ಎಂದು ಸರಳವಾಗಿ ಹೇಳಿದರೂ, ಯುಪಿ ವಿಧಾನಸಭಾ ಚುನಾವಣೆಗೆ ಬಲವಾದ ‘ಇಂಡಿ’ (INDIA) ಒಕ್ಕೂಟದ ತಂತ್ರ ರೂಪಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು.

ಸೀಟು ಹಂಚಿಕೆಯ ‘ಲೆಕ್ಕಾಚಾರ’, ಕಾಂಗ್ರೆಸ್ ಬೇಡಿಕೆ ಹಾಗೂ ಎಸ್‌ಪಿ ನಿಲುವು
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾಡುವುದು ಎರಡೂ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ. ಯುಪಿ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಅವರು ಸಮಾಜವಾದಿ ಪಕ್ಷದೊಂದಿಗೆ ಸಮಾನವಾಗಿ ಸೀಟು ಹಂಚಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪ್ರಾಯೋಗಿಕವಾಗಿ ಕಾಂಗ್ರೆಸ್ ಸುಮಾರು 100 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

2017 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 105 ಸ್ಥಾನಗಳನ್ನು ನೀಡಲಾಗಿತ್ತು. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ 80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಲು ಎಸ್‌ಪಿ ಸಿದ್ಧವಿಲ್ಲ. ಬರೀ ಸ್ಥಾನಗಳ ಸಂಖ್ಯೆ ಮುಖ್ಯವಲ್ಲ, ಬೂತ್ ಮಟ್ಟದಲ್ಲಿ ಹೋರಾಡಿ ಗೆಲ್ಲುವ ಸಾಮರ್ಥ್ಯವಿರುವ ಬಲವಾದ ಅಭ್ಯರ್ಥಿಗಳು ಮತ್ತು ತಳಮಟ್ಟದ ಕಾರ್ಯಕರ್ತರು ಇದ್ದರೆ ಮಾತ್ರ ಸೀಟು ಬಿಟ್ಟುಕೊಡಲಾಗುವುದು ಎಂಬುದು ಅಖಿಲೇಶ್ ಯಾದವ್ ಅವರ ದೃಢ ನಿಲುವಾಗಿದೆ.

ಮತ್ತಷ್ಟು ಓದಿ: ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ

ದಲಿತ-ಮುಸ್ಲಿಂ ಮತಗಳ ಧ್ರುವೀಕರಣ
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ 43 ಸ್ಥಾನಗಳನ್ನು ಗೆದ್ದುಕೊಂಡು ಭಾರಿ ಯಶಸ್ಸು ಗಳಿಸಿತ್ತು. ಈ ಯಶಸ್ಸಿನಲ್ಲಿ ದಲಿತ ಮತದಾರರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಕಾಂಗ್ರೆಸ್ ದಲಿತ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ಯುಪಿ ಉಸ್ತುವಾರಿಯನ್ನಾಗಿ ಮಾಡಿ ಎಸ್‌ಪಿ ಮೇಲಿನ ಸೀಟುಗಳ ಒತ್ತಡವನ್ನು ಹೆಚ್ಚಿಸುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ತಡೆ ಒಡ್ಡಬೇಕಾದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪರಸ್ಪರ ಹೊಂದಾಣಿಕೆಯಿಂದ ಸಾಗುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ರಾಜ್​​ಕುಮಾರ್ ಆಸೆ

‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ ಕಂದಮ್ಮ..’ ಹಾಡು ರಿಲೀಸ್ ಆಗಿದೆ. ಈ ಹಾಡು ಗಮನ ಸೆಳೆಯುತ್ತಿದೆ. ಸಂಜಿತ್ ಹೆಗಡೆ ಧ್ವನಿ ಹಾಡಿನ ಹೈಲೈಟ್. ಈಗ ವಿನಯ್ ರಾಜ್​​ಕುಮಾರ್ ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೆ ಸಂಜಿತ್ ಹೆಗಡೆ ಯಾವಾಗ ಹಾಡ್ತಾರೆ ಅಂತ ಕಾಯ್ತಾ ಇದ್ದೆ. ಕೊನೆಗೂ ಅವರು ನನ್ನ ಸಿನಿಮಾಗೆ ಹಾಡಿದ್ದಾರೆ’ ಎಂದು ಖುಷಿ ಹೊರಹಾಕಿದ್ದಾರೆ. ‘ಸಿಟಿ ಲೈಟ್ಸ್’ ಚಿತ್ರಕ್ಕೆ ದುನಿಯಾ ವಿಜಯ್ ಅವರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ಅವರ ಮಗಳು ಮೋನಿಷಾ ನಟಿಸಿದ್ದಾರೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಅವರು ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್ – Kannada News | Thalapathy Vijay Jan Nayagan Remake: H. Vinoth Reveals 50 Percent New Story

ದಳಪತಿ ವಿಜಯ್ ನಟನೆಯ ‘‘ಜನ ನಾಯಗನ್’ ಸಿನಿಮಾ (Jana Nayagan) ಈ ವಾರವೇ ಥಿಯೇಟರ್‌ಗೆ ಬರ್ತಿದೆ. ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಹೆಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ಅವರು ಒರಿಜಿನಲ್ ಸಿನಿಮಾದಿಂದ ಎಷ್ಟು ಭಾಗವನ್ನು ಕಾಪಿ ಮಾಡಲಾಗಿದೆ ಅಂತ ಬಿಚ್ಚಿಟ್ಟಿದ್ದಾರೆ.

‘ಜನ ನಾಯಕನ್’ ಸಿನಿಮಾದಲ್ಲಿ ಒರಿಜಿನಲ್ ಕಥೆಯ ಶೇಕಡಾ 50 ರಷ್ಟು ಭಾಗ ಮಾತ್ರ ಇರಲಿದೆ ಎಂದು ಹೆಚ್. ವಿನೋದ್ ಹೇಳಿದ್ದಾರೆ. ಚಿತ್ರದ ಫಸ್ಟ್ ಹಾಫ್‌ನಲ್ಲಿ ಶೇ. 60 ರಷ್ಟು ಮತ್ತು ಸೆಕೆಂಡ್ ಹಾಫ್‌ನಲ್ಲಿ ಕೇವಲ ಶೇ. 20 ರಷ್ಟು ಮಾತ್ರ ಒರಿಜಿನಲ್ ಕಥೆ ಇರಲಿದೆ. ತಾವು ವಿಜಯ್ ಅವರಿಗೆ ರಿಮೇಕ್ ಯಾಕೆ ಮಾಡಬೇಕು ಎಂದು ಕೇಳಿದ್ದಾಗಿ ವಿನೋದ್ ಹೇಳಿದ್ದಾರೆ. ಅದಕ್ಕೆ ವಿಜಯ್ ಅವರು ಒರಿಜಿನಲ್ ಸಿನಿಮಾದ ಪ್ರತಿಯೊಂದು ಸೀನ್ ವಿವರಿಸಿ ತಮಗೆ ಯಾಕೆ ಇಷ್ಟ ಆಯ್ತು ಅಂತ ಹೇಳಿದ್ರಂತೆ. ವಿಜಯ್ ಅವರಿಗೆ ಮಹಿಳಾ ಸಬಲೀಕರಣದ ಕಥೆಗಳೆಂದರೆ ತುಂಬಾ ಇಷ್ಟ. ಈ ಹಿಂದೆ ಅಜಿತ್ ಕುಮಾರ್ ಜೊತೆ ‘ಪಿಂಕ್’ ರಿಮೇಕ್ ಮಾಡುವಾಗಲೂ ಇದೇ ರೀತಿ ಆಗಿತ್ತು ಎಂದು ವಿನೋದ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಮೊದಲಿಗೆ ತಾವು ವಿಜಯ್ ಅವರ ಕೊನೆಯ ಸಿನಿಮಾಗೆ ಬೇರೆ ಕಥೆ ರೆಡಿ ಮಾಡಿದ್ದಾಗಿ ಡೈರೆಕ್ಟರ್ ಹೇಳಿದ್ದಾರೆ. ಅದು ಇಬ್ಬರು ಬುದ್ಧಿವಂತರ ನಡುವೆ ನಡೆಯುವ ಜಿದ್ದಾಜಿದ್ದಿನ ಕಥೆಯಾಗಿತ್ತು. ಆದರೆ ಆ ಕಥೆ ತುಂಬಾ ಹೆವಿಯಾಗಿದೆ ಎಂದು ವಿಜಯ್ ರಿಜೆಕ್ಟ್ ಮಾಡಿದ್ದರು. ಅದರ ಬದಲು ‘ಭಗವಂತ್ ಕೇಸರಿ’ ಸಿನಿಮಾ ರಿಮೇಕ್ ಮಾಡಲು ಸಜೆಸ್ಟ್ ಮಾಡಿದ್ದರು. ಬಾಲಕೃಷ್ಣ ಅವರ ಸಿನಿಮಾಗಳ ಸ್ಟೈಲೇ ಬೇರೆ ಇರುತ್ತದೆ. ಆದರೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಈ ದೊಡ್ಡ ಅವಕಾಶವನ್ನು ಕೈಬಿಡಲು ತಮಗೆ ಇಷ್ಟವಿರಲಿಲ್ಲ ಎಂದು ಹೆಚ್. ವಿನೋದ್ ಮಾಹಿತಿ ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಜುಲೈ 23ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಓವರ್ ಇಲ್ಲ, ಸೂಪರ್ ಫೈವ್, 2 ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ – Kannada News | The Hundred Men’s Competition 2026: Competition Rules

ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಮೆಂಟ್ ‘ದಿ ಹಂಡ್ರೆಡ್‘ ಇಂದಿನಿಂದ (ಜುಲೈ 21) ಶುರುವಾಗಲಿದೆ. 8 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ (IPL) ಫ್ರಾಂಚೈಸಿಗಳು ಹೂಡಿಕೆ ಮಾಡಿದ್ದು, ಇದರಿಂದ ತಂಡಗಳ ಹೆಸರು ಮತ್ತು ಜೆರ್ಸಿಗಳು ಸಂಪೂರ್ಣ ಬದಲಾಗಿವೆ.

ಇನ್ನು ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್ ಸಾಂಪ್ರದಾಯಿಕ ಟಿ20 ಕ್ರಿಕೆಟ್‌ಗಿಂತ ಸಂಪೂರ್ಣ ಭಿನ್ನವಾಗಿದ್ದು, ಪಂದ್ಯವನ್ನು ಕೇವಲ 2.5 ಗಂಟೆಗಳಲ್ಲಿ ಮುಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೀಗ್‌ನ ಪ್ರಮುಖ ನಿಯಮಗಳು ಇಲ್ಲಿವೆ.

ಓವರ್‌ಗಳ ಬದಲು ಎಸೆತಗಳ ಲೆಕ್ಕಾಚಾರ:

  • ಇಡೀ ಪಂದ್ಯದಲ್ಲಿ ಒಂದು ಇನ್ನಿಂಗ್ಸ್‌ಗೆ ಕೇವಲ 100 ಎಸೆತಗಳು ಮಾತ್ರ ಇರುತ್ತವೆ.
  • ಕ್ರಿಕೆಟ್‌ನ ಸಾಂಪ್ರದಾಯಿಕ ‘ಓವರ್’ (6 ಎಸೆತಗಳು) ನಿಯಮ ಇಲ್ಲಿಲ್ಲ. ಅದರ ಬದಲಿಗೆ ‘ಫೈವ್ಸ್’ ಇರುತ್ತದೆ. ಅಂದರೆ ಓವರ್​ಗೆ 5 ಎಸೆತಗಳು ಮಾತ್ರ.
  •  ಅಂಪೈರ್ ಪ್ರತಿ 5 ಎಸೆತಗಳಿಗೊಮ್ಮೆ ಬಿಳಿ ಬಣ್ಣದ ಕಾರ್ಡ್ ತೋರಿಸಿ ಸಿಗ್ನಲ್ ನೀಡುತ್ತಾರೆ.

ಬೌಲಿಂಗ್ ನಿಯಮಗಳು:

  • ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಒಟ್ಟಿಗೆ ಬೌಲ್ ಮಾಡಬಹುದು. ಇದನ್ನು ನಾಯಕ ಪರಿಸ್ಥಿತಿಗೆ ತಕ್ಕಂತೆ ನಿರ್ಧರಿಸುತ್ತಾನೆ.
  •  ಒಬ್ಬ ಬೌಲರ್ ಇಡೀ ಪಂದ್ಯದಲ್ಲಿ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಬಹುದು.
  • ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಮಾಡುವ ದಿಕ್ಕನ್ನು ಬದಲಾಯಿಸಲಾಗುತ್ತದೆ. ಅಂದರೆ ಕ್ರೀಸ್​ನ ಇನ್ನೊಂದು ತುದಿಯಿಂದ ಬೌಲಿಂಗ್ ಆರಂಭವಾಗುತ್ತದೆ.

ಪವರ್‌ಪ್ಲೇ ಮತ್ತು ಫೀಲ್ಡಿಂಗ್ ನಿಯಮಗಳು:

  • ಇನ್ನಿಂಗ್ಸ್‌ನ ಮೊದಲ 25 ಎಸೆತಗಳು ಪವರ್‌ಪ್ಲೇ ಆಗಿರುತ್ತವೆ.
  • ಪವರ್‌ಪ್ಲೇ ಸಮಯದಲ್ಲಿ 30-ಯಾರ್ಡ್ ವೃತ್ತದ ಹೊರಗೆ ಕೇವಲ ಇಬ್ಬರು ಫೀಲ್ಡರ್‌ಗಳನ್ನು ಮಾತ್ರ ನಿಲ್ಲಿಸಬಹುದು.
  • ಪವರ್‌ಪ್ಲೇ ಮುಗಿದ ನಂತರ ಗರಿಷ್ಠ 4 ಫೀಲ್ಡರ್‌ಗಳನ್ನು ವೃತ್ತದ ಹೊರಗೆ ನಿಲ್ಲಿಸಲು ಅವಕಾಶವಿರುತ್ತದೆ.

ಟೈಮ್‌ಔಟ್ ಮತ್ತು ಪೆನಾಲ್ಟಿ ನಿಯಮಗಳು:

  •  ಪ್ರತಿ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ 2 ನಿಮಿಷಗಳ ಸ್ಟ್ರಾಟಜಿಕ್ ಟೈಮ್‌ಔಟ್ ತೆಗೆದುಕೊಳ್ಳುವ ಹಕ್ಕಿರುತ್ತದೆ.
  • ಬೌಲಿಂಗ್ ತಂಡವು ನಿಗದಿತ ಸಮಯದೊಳಗೆ 100 ಎಸೆತಗಳನ್ನು ಪೂರ್ಣಗೊಳಿಸದಿದ್ದರೆ ಪೆನಾಲ್ಟಿ ವಿಧಿಸಲಾಗುತ್ತದೆ.
  • ಪಂದ್ಯದ ಕೊನೆಯಲ್ಲಿ ಸಮಯ ಮೀರಿದ ಎಸೆತಗಳಿಗೆ 30-ಯಾರ್ಡ್ ವೃತ್ತದ ಹೊರಗಿರುವ ಒಬ್ಬ ಫೀಲ್ಡರ್‌ನನ್ನು ಒಳಗೆ
  • ತರಬೇಕಾಗುತ್ತದೆ. ಅಂದರೆ ಕೇವಲ 3 ಫೀಲ್ಡರ್‌ಗಳು ಹೊರಗಿರುತ್ತಾರೆ.

ಬ್ಯಾಟಿಂಗ್ ಮತ್ತು ರನ್ ನಿಯಮಗಳು:

  • ಬ್ಯಾಟರ್ ಕ್ಯಾಚ್ ನೀಡಿ ಔಟ್ ಆಗುವಾಗ ಕ್ರಾಸ್ ಆಗಿದ್ದರೂ ಸಹ, ಹೊಸ ಬ್ಯಾಟರ್ ಕ್ರೀಸ್‌ನ ಸ್ಟ್ರೈಕಿಂಗ್ ಎಂಡ್‌ಗೇ ಬರಬೇಕು.
  • ಪಂದ್ಯ ‘ಟೈ’ ಆದಾಗ ಲೀಗ್ ಹಂತದಲ್ಲಿ ತಲಾ 1 ಅಂಕವನ್ನು ಹಂಚಲಾಗುತ್ತದೆ. ಆದರೆ ನಾಕೌಟ್ ಪಂದ್ಯಗಳಲ್ಲಿ (ಎಲಿಮಿನೇಟರ್ ಮತ್ತು ಫೈನಲ್) ಟೈ ಆದಾಗ ವಿಜೇತರನ್ನು ನಿರ್ಧರಿಸಲು ‘ಸೂಪರ್ ಫೈವ್’ (5 ಎಸೆತಗಳ ಓವರ್) ಆಡಿಸಲಾಗುತ್ತದೆ.

ನೋ-ಬಾಲ್ ಮತ್ತು ಫ್ರೀ-ಹಿಟ್ ನಿಯಮ:

  • ಬೌಲರ್ ಯಾವುದೇ ರೀತಿಯ ನೋ-ಬಾಲ್ (ಗೆರೆ ದಾಟುವುದು ಅಥವಾ ಹೈಟ್ ನೋ-ಬಾಲ್) ಎಸೆದರೆ ಬ್ಯಾಟಿಂಗ್ ತಂಡಕ್ಕೆ 2 ರನ್ ಬೋನಸ್ ಸಿಗುತ್ತದೆ.
  • ನೋ-ಬಾಲ್ ಎಸೆತಗಳ ಮುಂದಿನ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ.

ಕೌಂಟ್‌ಡೌನ್ ಕ್ಲಾಕ್:

  • ಮೈದಾನದಲ್ಲಿ ದೊಡ್ಡದಾದ ಕೌಂಟ್‌ಡೌನ್ ಗಡಿಯಾರ ಇರುತ್ತದೆ. ಬೌಲರ್ ಒಂದು ಎಸೆತ ಮುಗಿಸಿ, ಮುಂದಿನ ಎಸೆತವನ್ನು ಹಾಕಲು ನಿಗದಿತ ಸೆಕೆಂಡ್‌ಗಳ ಒಳಗೆ ಸಿದ್ಧರಾಗಬೇಕು.
  • ಬ್ಯಾಟರ್ ಕೂಡ ತಡ ಮಾಡುವಂತಿಲ್ಲ. ಇದು ಆಟದ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರೈನ್ ರೂಲ್ಸ್​:

  • ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಸಾಂಪ್ರದಾಯಿಕ ಕ್ರಿಕೆಟ್‌ನಂತೆ DLS ನಿಯಮದ ಆಧಾರದ ಮೇಲೆ ರನ್ ಲೆಕ್ಕ ಹಾಕಲ್ಲ. ಬದಲಿಗೆ ‘ಇಷ್ಟು ಎಸೆತಗಳಲ್ಲಿ ಇಷ್ಟು ರನ್ ಹೊಡೆಯಬೇಕು’ ಎಂಬ ಹೊಸ ಮಾದರಿಯ ನಿಯಮವನ್ನು ಬಳಸಲಾಗುತ್ತದೆ.

ಬದಲಿ ಆಟಗಾರನಿಗೆ ಅವಕಾಶ:

  • ಪಂದ್ಯದ ವೇಳೆ ಯಾವುದೇ ಆಟಗಾರನಿಗೆ ತೀವ್ರ ಗಾಯವಾದರೆ, ಅವರ ಬದಲಿಗೆ ಸಂಪೂರ್ಣವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಲ್ಲ ಮತ್ತೊಬ್ಬ ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿದೆ.
  • ಬದಲಿಯಾಗಿ ಬರುವ ಆಟಗಾರನು ಲೈಕ್ ಫರ್ ಲೈಕ್ ರಿಪ್ಲೇಸ್​ಮೆಂಟ್​ ಆಗಿರಬೇಕು. ಅಂದರೆ ಬೌಲರ್​ಗೆ ಬೌಲರ್​. ಬ್ಯಾಟರ್​ಗೆ ಬ್ಯಾಟರ್ ಅಥವಾ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಕಣಕ್ಕಿಳಿಸಬಹುದು.

ಇದನ್ನೂ ಓದಿ: ಮೂವರು ಹೊಸಬರ ಎಂಟ್ರಿ: ಹೀಗಿದೆ ಟೀಮ್ ಇಂಡಿಯಾ

ಟೂರ್ನಿಯಲ್ಲಿ ಕಣಕ್ಕಿಳಿಯುವ 8 ತಂಡಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್​)
  • ಲಂಡನ್ ಸ್ಪಿರಿಟ್
  • ಸನ್‌ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಟ್ರೆಂಟ್ ರಾಕೆಟ್ಸ್
  • ಬರ್ಮಿಂಗ್‌ಹ್ಯಾಮ್ ಫೀನಿಕ್ಸ್
  • ವೆಲ್ಷ್ ಫೈರ್
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​).

Published On – 8:22 am, Tue, 21 July 26

Source link

ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ – Kannada News | Sikkim Tunnel Collapse: Methane Gas Leak Kills 7 Workers, Rescue Efforts Underway

ನಾಮ್ಚಿ, ಜುಲೈ 21: ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ(Landslide) ಸಂಭವಿಸಿದೆ. ಇದರ ಬೆನ್ನಲ್ಲೇ ಸುರಂಗದೊಳಗೆ ಅಪಾಯಕಾರಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಕ್ಕಿಂನ ಸಮರ್ದುಂಗ್‌ನಲ್ಲಿ ಸೋಮವಾರ ಮಧ್ಯಾಹ್ನ 3.09 ರ ಸುಮಾರಿಗೆ ‘ತೀಸ್ತಾ ಹಂತ VI ಜಲವಿದ್ಯುತ್ ಯೋಜನೆ’ಯ ಸುರಂಗ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯು ಈ ಯೋಜನೆಯ ನಿರ್ಮಾಣ ಹೊಣೆ ಹೊತ್ತುಕೊಂಡಿದೆ.

ಸುರಂಗದೊಳಗೆ ಸ್ಫೋಟದ ಶಬ್ದ: ಮೀಥೇನ್ ಅನಿಲ ಸೋರಿಕೆ
ಸುರಂಗದೊಳಗಿಂದ ತಕ್ಷಣವೇ ಓಡಿಬಂದು ಬಚಾವಾದ ಕಾರ್ಮಿಕರ ಪ್ರಕಾರ, ಕತ್ತಲೆಯಲ್ಲಿದ್ದ ಸುರಂಗದೊಳಗೆ ಇದ್ದಕ್ಕಿದ್ದಂತೆ ಭಾರಿ ಸ್ಫೋಟದಂತಹ ಸದ್ದು ಕೇಳಿಸಿತು. ತಕ್ಷಣವೇ ಬಂಡೆಗಳು ಕುಸಿದು ಬಿದ್ದು ಹೊರಹೋಗುವ ದಾರಿ ಬಂದ್ ಆಯಿತು.

ವಿಷಕಾರಿ ಮೀಥೇನ್ ಭೀತಿ: ಭೂಕುಸಿತದ ಬೆನ್ನಲ್ಲೇ ಸುರಂಗದೊಳಗೆ ಅತ್ಯಂತ ಅಪಾಯಕಾರಿ ‘ಮೀಥೇನ್ ಅನಿಲ’ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಸಾಧನಗಳಿಲ್ಲದೆ ಸುರಂಗದೊಳಗೆ ಹೋಗಲು ಎರಡು ಬಾರಿ ಯತ್ನಿಸಿದರೂ, ಅನಿಲದ ತೀವ್ರತೆಯಿಂದಾಗಿ ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ ಅನುಭವಿಸಿ ಹಿಂತಿರುಗಬೇಕಾಯಿತು.

ಮತ್ತಷ್ಟು ಓದಿ: ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!

ಎನ್‌ಡಿಆರ್‌ಎಫ್, ಸುಸಜ್ಜಿತ ರಕ್ಷಣಾ ಕಾರ್ಯಾಚರಣೆ
ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ಪಡೆ (SDRF), ಸಿಕ್ಕಿಂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಆಮ್ಲಜನಕ ಸಿಲಿಂಡರ್ ಹಾಗೂ ವಿಶೇಷ ಆಕ್ಸಿಜನ್ ಮಾಸ್ಕ್‌ಗಳನ್ನು ಧರಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಸುಮಾರು 19 ಕಾರ್ಮಿಕರು ಒಳಗೆ ಸಿಲುಕಿದ್ದರು. ನಂತರ ರಕ್ಷಣೆಗೆ ಹೋದ ಪಟೇಲ್ ಎಂಜಿನಿಯರಿಂಗ್ ಹಾಗೂ ಎನ್​ಎಚ್​ಪಿಸಿ ಸಂಸ್ಥೆಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 20 ರಿಂದ 27 ಜನರು ಒಳಗೆ ಸಿಲುಕಿರುವ ಶಂಕೆ ಇದೆ.

ವಿಡಿಯೋ

ಎನ್‌ಡಿಆರ್‌ಎಫ್ ಪಡೆಗಳು ಸುರಂಗದ ಕೊನೆಯ ಹಂತವನ್ನು ತಲುಪಿದ ನಂತರವೇ ನೈಜ ಪರಿಸ್ಥಿತಿ ಸ್ಪಷ್ಟವಾಗಲಿದೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬ ಅಮಾಯಕರನ್ನು ಸುರಕ್ಷಿತವಾಗಿ ಹೊರತರುವುದೇ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡದ ಮೊದಲ ಆದ್ಯತೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಯಚೂರು, ಚಿತ್ರದುರ್ಗದಲ್ಲಿ ಮತ್ತೆ ಬೀದಿನಾಯಿಗಳ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ, ನಾಲ್ವರು ಮಕ್ಕಳಿಗೆ ಗಾಯ – Kannada News | Stray Dog Attacks Spark Panic in Karnataka: 4 Year Old Critical in Raichur, Four Children Injured in Chitradurga

ಬೀದಿ ನಾಯಿಗಳು ಹಾಗೂ ಬಲಚಿತ್ರದಲ್ಲಿ ಗಾಯಾಳು ಬಾಲಕ ಗೋಪಾಲ್Image Credit source: tv9

ರಾಯಚೂರು, ಚಿತ್ರದುರ್ಗ, ಜುಲೈ 21: ರಾಯಚೂರು (Raichur) ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ. ಕೆಲ ದಿನ ಹಿಂದಷ್ಟೇ ಬೀದಿನಾಯಿಗಳ ದಾಳಿಯಿಂದ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿದ್ದ ಬೆನ್ನಲ್ಲೇ, ಇದೀಗ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆದಿದೆ. ರಾಯಚೂರು ಹೊರವಲಯದ ಮಲಿಯಾಬಾರ್ ಪ್ರದೇಶದಲ್ಲಿ ಸೋಮವಾರ ಮನೆ ಸಮೀಪ ಆಟವಾಡುತ್ತಿದ್ದ ಗೋಪಾಲ್ ಎಂಬ ಬಾಲಕನ ಮೇಲೆ ಬೀದಿನಾಯಿಗಳು ಏಕಾಏಕಿ ಎರಗಿವೆ. ದಾಳಿಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆಯ ಚರ್ಮಕ್ಕೆ ತೀವ್ರ ಹಾನಿಯಾಗಿದೆ.

ಬೀದಿ ನಾಯಿ ದಾಳಿಗೆ ಬಾಲಕನ ಸ್ಥಿತಿ ಗಂಭೀರ

ಗಾಯಾಳು ಬಾಲಕನಿಗೆ ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳನ್ನು ತಕ್ಷಣ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ

ಇತ್ತ ಚಿತ್ರದುರ್ಗ ನಗರದಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ದಿನ ನಾಲ್ವರು ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಚೇಳಗುಡ್ಡ ಹಾಗೂ ನೆಹರುನಗರ ಬಡಾವಣೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐದರಿಂದ ಆರು ವರ್ಷದೊಳಗಿನ ಮಕ್ಕಳು ಗಾಯಗೊಂಡಿದ್ದಾರೆ. ಆಲೀನಾ, ಆದಿಲ್, ಮನ್ವಿತ್ ಸೇರಿದಂತೆ ನಾಲ್ವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿದ ಬೀದಿ ನಾಯಿಗಳು

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ನಗರಸಭೆ ಮತ್ತು ಜಿಲ್ಲಾಡಳಿತ ಬೀದಿನಾಯಿ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಅಗತ್ಯ ಇಂಜೆಕ್ಷನ್ ಲಭ್ಯವಿರಲಿಲ್ಲ. ಹೊರಗಿನಿಂದ ಖರೀದಿಸಿ ತರಬೇಕಾಯಿತು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಯಿ ಕಡಿತ ನಿರ್ಲಕ್ಷಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಖಡಕ್ ಆದೇಶ

ರಾಯಚೂರು ಮತ್ತು ಚಿತ್ರದುರ್ಗದ ಈ ಎರಡು ಘಟನೆಗಳು ರಾಜ್ಯದಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮಕ್ಕಳ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಹಾಗೂ ಬಸವರಾಜ ಮುದನೂರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version