ಬಿಗ್ ಬಾಸ್ ಖ್ಯಾತಿಯ ಸೂರಜ್ ‘ಪವಿತ್ರ ಬಂಧನ’ ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ – Kannada News | Big Boss Fame Suraj Starrer Pavitra Bandhana Serial Gets New Time Slot On Colors Kannada!  

ಕುಟುಂಬದ ಬಾಂಧವ್ಯ, ಪ್ರೀತಿ ಹಾಗೂ ತ್ಯಾಗದ ಭಾವನಾತ್ಮಕ ಕಥಾಹಂದರ ಹೊಂದಿರುವ ಕಲರ್ಸ್ ಕನ್ನಡ ವಾಹಿನಿಯ ‘ಪವಿತ್ರ ಬಂಧನ’ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಿಗ್ ಬಾಸ್ ಸ್ಪರ್ಧಿ ಸೂರಜ್ ನಾಯಕನಾಗಿ ನಟಿಸುತ್ತಿರುವ ಈ ಜನಪ್ರಿಯ ಧಾರಾವಾಹಿ ಇನ್ಮುಂದೆ ಹೊಸ ಸಮಯದಲ್ಲಿ ಪ್ರಸಾರ ಕಾಣಲಿದೆ. ಬರುವ ಸೋಮವಾರದಿಂದ ‘ಪವಿತ್ರ ಬಂಧನ’ ಧಾರಾವಾಹಿಯು ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ ಎಂದು ವಾಹಿನಿ ಬಳಗ ಅಧಿಕೃತವಾಗಿ ತಿಳಿಸಿದೆ.

ಬಂಧದಲ್ಲಿ ಹೊಸ ತಿರುವು:

ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಪ್ರೀತಿಯ ಸುಂದರ ಕನಸು ಕಾಣುತ್ತಿದ್ದ ಆಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ದೇವದತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಅನಿವಾರ್ಯತೆ ಎದುರಾಗುತ್ತದೆ. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮುನ್ನವೇ ಮದುವೆಯಾಗುವ ಈ ಜೋಡಿಯ ಜೀವನ ಮುಂದಕ್ಕೆ ಯಾವ ತಿರುವು ಪಡೆಯಲಿದೆ ಎನ್ನುವುದೇ ಧಾರಾವಾಹಿಯ ಮುಖ್ಯ ಕಥಾವಸ್ತು.

ಈ ಅನಿರೀಕ್ಷಿತ ಪವಿತ್ರ ಬಂಧನ ಪ್ರೀತಿಯಾಗಿ ಬದಲಾಗುತ್ತದೆಯೇ ಅಥವಾ ಹಳೆಯ ಗೊಂದಲಗಳು ಇವರ ನಡುವೆ ಮತ್ತೆ ಬಿರುಕು ಮೂಡಿಸುತ್ತವೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಸೂರಜ್ ನಟನೆಯ ಈ ಧಾರಾವಾಹಿ ಹೊಸ ಸಮಯಕ್ಕೆ ಕಾಲಿಡುತ್ತಿದ್ದು, ಕಿರುತೆರೆ ವೀಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: ‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 

ಕಥಾ ನಾಯಕ ಹಾಗೂ ನಾಯಕಿ ನಡುವಿನ ಪ್ರೀತಿ, ಪ್ರೇಮ ಹಾಗೂ ರೊಮ್ಯಾನ್ಸ್ ಧಾರಾವಾಹಿಯ ಹೈಲೈಟ್ ಆಗಿದೆ. ‘ಬಿಗ್ ಬಾಸ್​’ನಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸೂರಜ್ ಅವರು ಸಾಕಷ್ಟು ಹವಾ ಸೃಷ್ಟಿ ಮಾಡಿದರು. ಅವರ ಖ್ಯಾತಿ ನೋಡಿ ಈ ರೊಮ್ಯಾಂಟಿಕ್ ಧಾರಾವಾಹಿಯ ನಾಯಕನ ಪಟ್ಟವನ್ನು ಅವರಿಗೆ ನೀಡಲಾಯಿತು. ಬಿಗ್ ಬಾಸ್ ಆಗಮನದ ಹಿನ್ನೆಲೆಯಲ್ಲಿ ಈಗ ಹೊಸ ಸಮಯದೊಂದಿಗೆ ಧಾರಾವಾಹಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾನಿ ಕೃಷ್ಣ ಬೈಕ್ ಟ್ಯಾಕ್ಸಿ ಅಪಘಾತ: ಯುವತಿಯ ವೈದ್ಯಕೀಯ ವೆಚ್ಚ ಭರಿಸಲು ಮುಂದಾದ ರ‍್ಯಾಪಿಡೋ! – Kannada News | Bengaluru Rapido Accident: Company Agrees to Pay Full Medical Expenses of Rs 20 Lakh to Bedridden Customer

ಬೆಂಗಳೂರು, ಆಗಸ್ಟ್ 14: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದಾಗಿ ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರ ಹೋರಾಟಕ್ಕೆ ಕೊನೆಗೂ ಭಾಗಶಃ ಯಶಸ್ಸು ಸಿಕ್ಕಿದೆ. ಖಾಸಗಿ ಸಾರಿಗೆ ಆಪ್ ರ‍್ಯಾಪಿಡೋ (Rapido), ಸಾನಿ ಅವರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ತನ್ನ ವಿಮಾ ಪಾಲುದಾರರ ಮೂಲಕ ಪಾವತಿಸಲು ಒಪ್ಪಿಕೊಂಡಿದೆ.

ನಡೆದಿದ್ದೇನು?

ಜೂನ್ 17 ರಂದು ಸಾನಿ ಕೃಷ್ಣ ಅವರು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮೂಲಕ ಬೈರಸಂದ್ರದಿಂದ ಡೊಮ್ಲೂರ್‌ನಲ್ಲಿರುವ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ವೇಳೆ ಅವರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಮುಖದ ಮೂಳೆಗಳು ಮುರಿದು, ಹಲ್ಲುಗಳು ಉದುರಿದ್ದವು ಮತ್ತು 7 ಪಕ್ಕೆಲುಬುಗಳಿಗೆ ತೀವ್ರ ಪೆಟ್ಟಾಗಿತ್ತು. ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದ ಸಾನಿ ಅವರ ಚಿಕಿತ್ಸಾ ವೆಚ್ಚ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿತ್ತು.

ಸಾಮಾನ್ಯವಾಗಿ ರ‍್ಯಾಪಿಡೋ ಕಂಪನಿಯ ಗ್ರಾಹಕರ ವಿಮಾ ಪಾಲಿಸಿಯ ಗರಿಷ್ಠ ಮಿತಿ ಕೇವಲ 1 ಲಕ್ಷ ರೂಪಾಯಿ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ಕಂಪನಿಯು ಸಂಪೂರ್ಣ ವೆಚ್ಚ ಭರಿಸಲು ನಿರಾಕರಿಸಿತ್ತು. ಆದರೆ, ಆಗಸ್ಟ್ 6 ರಂದು ಸಾನಿ ಅವರ ಪರ ವಕೀಲರು ರ‍್ಯಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿ, ಬೇಷರತ್ ಕ್ಷಮೆಯಾಚನೆ ಹಾಗೂ ಸಂಪೂರ್ಣ ಪರಿಹಾರಕ್ಕೆ ಒತ್ತಾಯಿಸಿದ್ದರು.

ವೈದ್ಯಕೀಯ ವೆಚ್ಚ ಭರಿಸಲು ಒಪ್ಪಿದ ರ‍್ಯಾಪಿಡೋ

ಪ್ರಕರಣದ ತೀವ್ರತೆಯನ್ನು ಅರಿತ ರ‍್ಯಾಪಿಡೋ, ಇದೊಂದು ಅಸಾಮಾನ್ಯ ಮತ್ತು ಅತಿ ಕಠಿಣ ಪರಿಸ್ಥಿತಿಯಾದ್ದರಿಂದ ತನ್ನ ನಿಯಮಿತ ವಿಮಾ ಮಿತಿಯನ್ನು (ಕ್ಯಾಪ್) ಬದಿಗಿಟ್ಟು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಸಾನಿ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಈ ನಿರ್ಧಾರದಿಂದ ಸಾನಿ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಕ್ಕಂತಾಗಿದೆ. ಆದಾಗ್ಯೂ, “ರ‍್ಯಾಪಿಡೋ ಸಂಸ್ಥೆಯು ಅಧಿಕೃತವಾಗಿ ಈ ನಿರ್ಧಾರವನ್ನು ನನಗೆ ಇನ್ನು ಲಿಖಿತ ರೂಪದಲ್ಲಿ ತಿಳಿಸಿಲ್ಲ ಹಾಗೂ ಅಪಘಾತದ ಜವಾಬ್ದಾರಿ ಹೊತ್ತು ಈವರೆಗೆ ಕ್ಷಮೆಯಾಚಿಸಿಲ್ಲ. ಅಲ್ಲಿಯವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ” ಎಂದು ಸಾನಿ ಕೃಷ್ಣ ಹೇಳಿದ್ದಾರೆ. ಸದ್ಯ ಬೈಕ್ ಚಾಲಕನ ಪರವಾನಗಿ ಮತ್ತು ಆತನ ನಡವಳಿಕೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ರ‍್ಯಾಪಿಡೋ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಷಾ ಕೃಷ್ಣನ್ ಮದುವೆ ಮುರಿದುಬಿದ್ದಿದ್ದೇಕೆ? ವರುಣ್ ಮಣಿಯನ್ ಜೊತೆಗಿನ ಸಂಬಂಧಕ್ಕೆ ಏನಾಯಿತು? – Kannada News | Why Did Trisha Krishnan Call Off Her Engagement With Varun Manian?

ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಕೃಷ್ಣನ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ಪ್ರಸ್ತುತ ಅವರು ದಳಪತಿ ವಿಜಯ್ ಜೊತೆ ಸುದ್ದಿಯಲ್ಲಿದ್ದಾರೆ. ಆದರೆ ವರ್ಷಗಳ ಹಿಂದೆ ಅವರ ಮದುವೆ ನಿಶ್ಚಿತಾರ್ಥದ ಹಂತಕ್ಕೆ ತಲುಪಿ ನಿಂತುಹೋಗಿತ್ತು. ಪ್ರಸಿದ್ದ ಉದ್ಯಮಿ ವರುಣ್ ಮಣಿಯನ್ ಜೊತೆಗಿನ ಅವರ ಸಂಬಂಧ ಮುರಿದುಬಿದ್ದ ಘಟನೆ ಅಭಿಮಾನಿಗಳಲ್ಲಿ ಇಂದಿಗೂ ಕುತೂಹಲ ಮೂಡಿಸಿದೆ.

ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಮತ್ತು ತ್ರಿಷಾ ನಡುವೆ ಪ್ರೀತಿ ಚಿಗುರಿತ್ತು. ರಿಯಲ್ ಎಸ್ಟೇಟ್ ಹಾಗೂ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ವರುಣ್ ಸಕ್ರಿಯರಾಗಿದ್ದರು. ಇಬ್ಬರ ಗೆಳೆತನ ಶೀಘ್ರದಲ್ಲೇ ಪ್ರೇಮಕ್ಕೆ ತಿರುಗಿತ್ತು. 2014 ರ ಕೊನೆಯಲ್ಲಿ ಈ ವಿಷಯ ಮಾಧ್ಯಮಗಳಲ್ಲಿ ಸದ್ದು ಮಾಡತೊಡಗಿತು.

ಜನವರಿ 9, 2015 ರಂದು ತ್ರಿಷಾ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಸ್ವತಃ ಪ್ರಕಟಿಸಿದರು. ಜನವರಿ 23 ರಂದು ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನಡೆಯಿತು. ಮದುವೆಯ ನಂತರವೂ ನಟನೆ ಮುಂದುವರಿಸುವುದಾಗಿ ತ್ರಿಷಾ ಸ್ಪಷ್ಟಪಡಿಸಿದ್ದರು. ಹೊಸ ಸಿನಿಮಾಗಳಿಗೆ ಸಹಿ ಹಾಕಲು ಅವರು ಉತ್ಸುಕರಾಗಿದ್ದರು.

ಆದರೆ ಈ ಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನಿಶ್ಚಿತಾರ್ಥವಾದ ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು. ಮದುವೆ ರದ್ದಾಗುವ ಬಗ್ಗೆ ಅನೇಕ ವದಂತಿಗಳು ಹರಡಿದವು.

ಇದನ್ನೂ ಓದಿ: ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್

ಮೇ 2015 ರಲ್ಲಿ ತ್ರಿಷಾ ತಮ್ಮ ಬ್ರೇಕಪ್ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದರು. ಸೋಶಿಯಲ್ ಮೀಡಿಯಾದಲ್ಲಿ ತಾವು ಸಿಂಗಲ್ ಆಗಿ ಸಂತೋಷವಾಗಿದ್ದೇನೆ ಎಂದು ಬರೆದುಕೊಂಡರು. ಈ ಮೂಲಕ ವರುಣ್ ಜೊತೆಗಿನ ಸಂಬಂಧಕ್ಕೆ ಸಂಪೂರ್ಣ ತೆರೆಬಿದ್ದಿತು. ಈಗ ಅವರು ವಿಜಯ್ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:02 am, Fri, 14 August 26

Source link

ರಾಕಿಂಗ್ ಸ್ಟಾರ್ ಯಶ್ ‘ಆಪ್​ ಕಿ ಅದಾಲತ್’ ಪ್ರೋಮೋ ರಿಲೀಸ್; ಶಾರುಖ್ ಬಗ್ಗೆ ನೇರ ಮಾತು – Kannada News | Yash On Aap Ki Adalat: KGF vs Shah Rukh Khan Zero Clash, Fans Selfies, and Toxic Movie Updates

ರಾಕಿಂಗ್ ಸ್ಟಾರ್ ಯಶ್ (Yash) ‘ಆಪ್​ ಕಿ ಅದಾಲತ್ ಶೋನಲ್ಲಿ ಭಾಗಿ ಆಗಿದ್ದಾರೆ. ರಜತ್ ಶರ್ಮ ಅವರು ನಡೆಸಿಕೊಡೋ ಈ ಶೋಗೆ ಭಾರೀ ಬೇಡಿಕೆ ಇದೆ. ಈ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದವರೇ ಆಗಮಿಸಿದರೂ ಕೆಲವೊಮ್ಮೆ ಸಿನಿಮಾ ರಂಗದವರು ಕೂಡ ಆಗಮಿಸಿದ್ದು ಇದೆ. ಈಗ ಯಶ್ ಅವರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ ವೇದಿಕೆ ಏರಿದ ಮೊದಲಿಗರು ಯಶ್. ಹಲವು ವಿಷಯಗಳನ್ನು ಅವರು ಈ ವೇದಿಕೆ ಮೇಲೆ ಚರ್ಚಿಸಿದ್ದಾರೆ. ಇದರ ಪ್ರೋಮೋ ಗಮನ ಸೆಳೆದಿದೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆಗಸ್ಟ್ 26ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಯಶ್ ಅವರು ಆಪ್​ ಕಿ ಅದಾಲತ್ ಶೋಗೆ ತೆರಳಿದ್ದಾರೆ. ಅಲ್ಲಿ ಅವರು ಶಾರುಖ್ ಖಾನ್ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. 2018ರಲ್ಲಿ ಯಶ್ ನಟನೆಯ ‘ಕೆಜಿಎಫ್’ ಹಾಗೂ ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದ್ದವು. ‘ನಾನು ಅಂದು ಶಾರುಖ್ ಖಾನ್ ಅವರಿಗೆ ಅಭಿಮಾನಿಯಾಗಿದ್ದೆ, ಈಗಲೂ ಅಭಿಮಾನಿ. ಅಂದು ಎರಡು ಸಿನಿಮಾಗಳು ಒಟ್ಟಿಗೆ ಬಂದವು. ಅವರದ್ದು ದೊಡ್ಡ ಸಿನಿಮಾ ಆಗಿತ್ತು, ನಮ್ಮದು ಚಿಕ್ಕ ಸಿನಿಮಾ ಆಗಿತ್ತು’ ಎಂದ ಯಶ್ ಹೇಳಿದ್ದಾರೆ. ಆಗ ರಜತ್ ಶರ್ಮ ಅವರು ‘ಕೆಜಿಎಫ್’ ಸಿನಿಮಾ ಹೆಚ್ಚಿನ ಗಳಿಕೆ ಮಾಡಿತ್ತು ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ‘ನನ್ನ ಸೀನಿಯರ್​ಗಿಂತ ನಾನು ಯಾವಾಗ ದೊಡ್ಡವನು ಎನಿಸುತ್ತದೆಯೋ ಅಂದು ನನ್ನ ಅಂಗಡಿ ಬಂದ್’ ಎಂದಿದ್ದಾರೆ.

ಅಭಿಮಾನಿಗಳಿಗೆ ಸೆಲ್ಫಿ ಕೊಡೋ ವಿಷಯದ ಬಗ್ಗೆ ಮಾತನಾಡಿದ್ದ ಯಶ್, ‘ಸೆಲ್ಫಿ ತೆಗೆದುಕೊಂಡರೆ ಅಥವಾ ಫೋಟೋ ತೆಗೆದುಕೊಂಡರೆ ಅದು ಅಭಿಮಾನಿಗಳಿಗೆ ಜೀವನಪೂರ್ತಿ ಇರುವ ನೆನಪಾಗುತ್ತದೆ. ಹೀಗಾಗಿ, ನನಗೆ ಸಮಯ ಇದ್ದರೆ ನಾನು ಸೆಲ್ಫಿ ಕೊಟ್ಟೇ ಕೊಡುತ್ತೇನೆ’ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ಮದುವೆಗೆ ಬರುವಂತೆ ಯಶ್-ರಾಧಿಕಾ ದಂಪತಿಗೆ ಆಹ್ವಾನ ನೀಡಿದ ಚಿಕ್ಕಣ್ಣ

‘ಆಪ್​ ಕಿ ಅದಾಲತ್’ ಶೋ ಇಂಡಿಯಾ ಟಿವಿನಲ್ಲಿ ಶನಿವಾರ ರಾತ್ರಿ 10 ಗಂಟೆಗೆ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಯಶ್ ಅವರು ಆಡಿದ ಮಾತುಗಳು ಗಮನ ಸೆಳೆದಿವೆ. ಅವರು ಮುಂಬರುವ ರಾಮಾಯಣ ಸಿನಿಮಾ ಬಗ್ಗೆಯೂ ಮಾತನಾಡುವ ಸಾಧ್ಯತೆ ಇದೆ. ಸದ್ಯ ಅವರ ಗಮನ ಸಂಪೂರ್ಣವಾಗಿ ‘ಟಾಕ್ಸಿಕ್’ ಚಿತ್ರದ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:43 am, Fri, 14 August 26

Source link

Vastu Tips: ಮನೆಯಲ್ಲಿ ತಪ್ಪಿಯೂ ಈ ಎರಡು ಜಾಗಗಳಲ್ಲಿ ಕೀಲಿಗಳನ್ನು ಇಡಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Vastu for Keys: How Key Placement Attracts Negative Energy and Disrupts Home Peace

ಮನೆಯಲ್ಲಿ ಸಣ್ಣಪುಟ್ಟ ವಿಷಯಗಳು ಕೂಡ ದೊಡ್ಡ ಮಟ್ಟದ ವಾಸ್ತು ದೋಷಗಳಿಗೆ ಕಾರಣವಾಗಬಹುದು. ನಮಗೆ ಅರಿವಿಲ್ಲದೆಯೇ ನಾವು ಮಾಡುವ ಕೆಲವು ತಪ್ಪುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಅಂತಹ ವಸ್ತುಗಳಲ್ಲಿ ಮನೆಯ ಕೀಲಿಗಳು (Key bundle) ಕೂಡ ಒಂದು! ಹೌದು, ಕೀಲಿಗಳನ್ನು ಸರಿಯಾದ ಜಾಗದಲ್ಲಿ ಇಡದಿದ್ದರೆ ಅಥವಾ ಅನಗತ್ಯ ಕೀಲಿಗಳನ್ನು ಮನೆಯಲ್ಲಿಟ್ಟುಕೊಂಡರೆ ಅದು ಕುಟುಂಬದ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಬಹುದು. ಮನೆಯಲ್ಲಿ ವಾಸ್ತು ಸಮತೋಲನವನ್ನು ಕಾಯ್ದುಕೊಳ್ಳಲು ಕೀಲಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಳೆಯ ಮತ್ತು ತುಕ್ಕು ಹಿಡಿದ ಕೀಲಿ:

ಬಳಕೆಯಲ್ಲಿಲ್ಲದ, ಕಳೆದುಹೋದ ಬೀಗಗಳ ಕೀಲಿಗಳು ಅಥವಾ ಹಳೆಯ ಕೀಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಸರಿಯಲ್ಲ. ಇಂತಹ ಕೀಲಿಗಳು ಮನೆಯಲ್ಲಿ ಭಾರವಾದ ವಾತಾವರಣವನ್ನು ಸೃಷ್ಟಿಸುತ್ತವೆ ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ನಿಮ್ಮ ಯಾವುದೇ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತಿಲ್ಲ ಎಂದಾದರೆ, ಒಮ್ಮೆ ನಿಮ್ಮ ಮನೆಯಲ್ಲಿರುವ ಅನಗತ್ಯ ಕೀಲಿಗಳನ್ನು ಪರಿಶೀಲಿಸಿ ಹೊರಹಾಕಿ.

ತುಕ್ಕು ಹಿಡಿದ ಕೀಲಿಗಳಿಂದ ಶನಿ ದೋಷದ ಭೀತಿ:

ತುಕ್ಕು ಹಿಡಿದ ಕೀಲಿಗಳನ್ನು ಮನೆಯಲ್ಲಿ ಇಡುವುದರಿಂದ ಶನಿ ಗ್ರಹದ ದುಷ್ಪರಿಣಾಮ ಎದುರಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಕ್ಷೀಣಿಸುವಂತೆ ಮಾಡುವುದಲ್ಲದೆ, ಮಾನಸಿಕ ನೆಮ್ಮದಿಯನ್ನು ಭಂಗಗೊಳಿಸಬಹುದು. ತುಕ್ಕು ಹಿಡಿದ ಕೀಲಿಯನ್ನು ಸ್ವಚ್ಛಗೊಳಿಸಿ ಮತ್ತೆ ಬಳಸಲು ಪ್ರಯತ್ನಿಸುವುದಕ್ಕಿಂತ, ಅದನ್ನು ಸಂಪೂರ್ಣವಾಗಿ ವಿಲೇವಾರಿ ಮಾಡುವುದೇ ಶ್ರೇಯಸ್ಕರ.

ಅನುಪಯುಕ್ತ ವಾಹನ ಮತ್ತು ಬೀಗಗಳ ಕೀಲಿಗಳ ಅಪಾಯ:

ಸಾಮಾನ್ಯವಾಗಿ ಬಳಕೆಯಲ್ಲಿಲ್ಲದ ಮೋಟಾರ್ ಸೈಕಲ್, ಕಾರು ಅಥವಾ ಹಳೆಯ ಬೀಗಗಳ ಕೀಲಿಗಳನ್ನು ‘ಮುಂದೆಂದಾದರೂ ಬೇಕಾಗಬಹುದು’ ಎಂದು ಮನೆಗಳಲ್ಲಿ ಎತ್ತಿಡಲಾಗುತ್ತದೆ. ಆದರೆ, ಈ ಕೀಲಿಗಳು ಅಸ್ಥಿರ ಶಕ್ತಿಯನ್ನು (Unstable Energy) ಉತ್ಪಾದಿಸುತ್ತವೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉದ್ಯೋಗ-ವ್ಯವಹಾರಗಳಲ್ಲಿ ಪ್ರಗತಿ ಕಾಣಲು ಇವುಗಳನ್ನು ತಕ್ಷಣವೇ ವಿಲೇವಾರಿ ಮಾಡಿ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕೀಲಿಗಳನ್ನು ಇಡಲು ಪಶ್ಚಿಮ ದಿಕ್ಕು ಅತ್ಯಂತ ಮಂಗಳಕರ:

ಕೀಲಿಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯುವುದು ಶಕ್ತಿಯ ಹರಿವಿಗೆ ಅಡಚಣೆ ಉಂಟುಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕೀಲಿಗಳನ್ನು ಇಡಲು ಪಶ್ಚಿಮ ದಿಕ್ಕು ಅತ್ಯಂತ ಮಂಗಳಕರವಾಗಿದೆ. ಕೀಲಿಗಳನ್ನು ಸರಿಯಾದ ದಿಕ್ಕಿನಲ್ಲಿ ಸೂಕ್ತವಾದ ಕೀ-ಸ್ಟ್ಯಾಂಡ್‌ನಲ್ಲಿ ಇಡುವುದರಿಂದ ಮನೆಯಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ನೆಲೆಸುತ್ತದೆ.

ಪೂಜಾ ಕೊಠಡಿ ಮತ್ತು ಅಡುಗೆಮನೆಯಲ್ಲಿ ಕೀಲಿ ಇಡಲೇಬೇಡಿ:

ಪೂಜಾ ಕೊಠಡಿಯು ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಅಲ್ಲಿ ಕೀಲಿಗಳಂತಹ ವಸ್ತುಗಳನ್ನು ಇಡಬಾರದು. ಅದೇ ರೀತಿ, ಅಡುಗೆಮನೆಯಲ್ಲಿ ಕೀಲಿಗಳನ್ನು ಇಡುವುದರಿಂದ ಅಲ್ಲಿನ ಅಗ್ನಿ ತತ್ವದ ಮೇಲೆ ಪ್ರಭಾವ ಉಂಟಾಗುತ್ತದೆ. ಇದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಹಾಗೂ ಮನೆಯಲ್ಲಿ ತಯಾರಿಸುವ ಆಹಾರದ ಶುದ್ಧತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ, ಈ ಎರಡೂ ಪ್ರದೇಶಗಳಿಂದ ಕೀಲಿಗಳನ್ನು ದೂರವಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶೈಕ್ಷಣಿಕ ವರ್ಷ ಆರಂಭವಾಗಿ 2.5 ತಿಂಗಳು ಕಳೆದರೂ ಸಿಗದ ಶೂ-ಸಾಕ್ಸ್: ಬರಿಗಾಲಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು – Kannada News | Shoe Socks Scheme Fails Karnataka Students: Yadgir Children Attend School Barefoot

ಶೂ-ಸಾಕ್ಸ್ ಯೋಜನೆ ವಿಳಂಬImage Credit source: Tv9 kannada

ಯಾದಗಿರಿ, ಆ.14: ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಲ್ಲಿ ಯಾವುದೇ ರೀತಿಯ ಭೇದಭಾವ ಮೂಡಬಾರದು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಉದಾತ್ತ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಶೂ-ಸಾಕ್ಸ್ ಯೋಜನೆ’ ಈ ಬಾರಿ ವಿಳಂಬದ ನೀತಿಯಿಂದಾಗಿ ಹಳಿ ತಪ್ಪಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಬರೋಬ್ಬರಿ ಎರಡುವರೆ ತಿಂಗಳು ಕಳೆಯುತ್ತಾ ಬಂದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿಲ್ಲ.

ಇದರಿಂದಾಗಿ ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳ ಶಾಲೆಗಳಿಗೆ ಆಗಮಿಸುವ ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬರಿಗಾಲಿನಲ್ಲೇ ಶಾಲೆಗಳಿಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಬಡ ಕುಟುಂಬಗಳ ಪೋಷಕರಿಗೆ ಮಕ್ಕಳಿಗೆ ಪ್ರತ್ಯೇಕವಾಗಿ ಚಪ್ಪಲಿ ಅಥವಾ ಶೂ ಖರೀದಿಸಿಕೊಡುವ ಆರ್ಥಿಕ ಶಕ್ತಿಯಿಲ್ಲ. ಸರ್ಕಾರವೇ ಉಚಿತವಾಗಿ ಶೂ-ಸಾಕ್ಸ್ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಈಗ ತೀವ್ರ ನಿರಾಶೆಯಾಗಿದೆ.

ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳಿಗೆ ಚಪ್ಪಲಿ ಕೊಡಿಸಿದ್ದಾರೆ. ಆದರೆ ಬಡತನದಲ್ಲಿರುವ ಕುಟುಂಬಗಳ ಮಕ್ಕಳು ಬರಿಗಾಲಿನಲ್ಲೇ ನಡೆದುಕೊಂಡು ಶಾಲೆಗೆ ತಲುಪುತ್ತಿದ್ದಾರೆ. ಈ ವರ್ಷ ಸರ್ಕಾರದ ಯೋಜನೆ ಕೇವಲ ಅಧಿಕೃತ ಆದೇಶ ಹಾಗೂ ಸುತ್ತೋಲೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಶಾಲಾ ಅಂಗಳಕ್ಕೆ ತಲುಪಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಈ ಹಿಂದೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಮೂಲಕ ಶಾಲಾ ಮಟ್ಟದಲ್ಲೇ ಸ್ಥಳೀಯವಾಗಿ ಶೂ ಹಾಗೂ ಸಾಕ್ಸ್ ಖರೀದಿಸಲು ಶಿಕ್ಷಣ ಇಲಾಖೆ ಅನುದಾನ ನೀಡಿ ಅವಕಾಶ ಕಲ್ಪಿಸಿತ್ತು. ಇದರಿಂದ ಶಾಲೆ ಆರಂಭವಾದ ದಿನಗಳಲ್ಲೇ ಮಕ್ಕಳಿಗೆ ಶೂ ಸಿಗುತ್ತಿತ್ತು. ಈ ಬಾರಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದೇ ರಾಜ್ಯಮಟ್ಟದ ಕೇಂದ್ರೀಕೃತ ಟೆಂಡರ್ ಕರೆದಿದೆ. ಈ ಬೃಹತ್ ಟೆಂಡರ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಳಂಬವೇ ಪ್ರಸ್ತುತ ಮಕ್ಕಳಿಗೆ ಶೂ-ಸಾಕ್ಸ್ ಸಿಗದಿರಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಉತ್ತರಾಖಂಡದ ಚಮೋಲಿ ಸುರಂಗಕ್ಕೆ ದಿಢೀರ್ ನೀರು-ತ್ಯಾಜ್ಯ ಪ್ರವಾಹ: 7ಕಾರ್ಮಿಕರ ದಾರುಣ ಸಾವು, 14 ಗಾಯಾಳುಗಳು

ಪ್ರಸ್ತುತ ಮೊದಲ ಸೆಮೆಸ್ಟರ್ (ಅರ್ಧವಾರ್ಷಿಕ) ಪರೀಕ್ಷೆಗಳು ಹತ್ತಿರವಾಗುತ್ತಿದ್ದರೂ ಶೂ-ಸಾಕ್ಸ್ ಸುಳಿವೇ ಇಲ್ಲ. “ಕೊಡುತ್ತೇವೆ ಎಂದು ಹೇಳಿದ್ದಾರೆ, ಆದರೆ ಇನ್ನು ಕೊಟ್ಟಿಲ್ಲ” ಎಂದು ಶಾಲಾ ವಿದ್ಯಾರ್ಥಿನಿ ಸಾವಿತ್ರಿ ಹಾಗೂ ಸಹಪಾಠಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಾನತೆ ತರಲು ರೂಪಿಸಿದ ಒಳ್ಳೆಯ ಯೋಜನೆಯೊಂದು, ಶಿಕ್ಷಣ ಇಲಾಖೆಯ ಸಮಯಪ್ರಜ್ಞೆಯಿಲ್ಲದ ಆಡಳಿತ ವೈಖರಿಯಿಂದಾಗಿ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿ ಪರಿಣಮಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳ್ಳಂ ಬೆಳಿಗ್ಗೆ ವಾಕಿಂಗ್ ಹೋಗುವ ಮಹಿಳೆಯರೇ ಹುಷಾರ್! ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಚೈನ್ ಸ್ನಾಚಿಂಗ್ – Kannada News | Chain Snatchers Brutally Attack Woman in Peenya; CCTV Video Goes Viral

ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ನಡೆಸಿ ಚೈನ್ ಸ್ನಾಚಿಂಗ್

ಬೆಂಗಳೂರು, ಆಗಸ್ಟ್ 14: ನಗರದಲ್ಲಿ (Bengaluru) ಒಂಟಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಚೈನ್ ಸ್ನಾಚರ್‌ಗಳ ಹಾವಳಿ ಮಿತಿಮೀರಿದೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗುವ ಹಾಗೂ ಕೆಲಸಕ್ಕೆ ಹೊರಡುವ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಮೃಗಗಳಂತೆ ಮುಗಿಬೀಳುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಇತ್ತೀಚೆಗೆ ನಗರದ ನೆಲಗದರನಹಳ್ಳಿಯಲ್ಲಿ ನಡೆದಿರುವ ಚೈನ್ ಸ್ನಾಚಿಂಗ್ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಎದೆ ಝಲ್ ಎನ್ನಿಸುವಂತಿವೆ.

ಒಂಟಿ ಮಹಿಳೆ ಮೇಲೆ ಅಟ್ಯಾಕ್

ನೆಲಗದರನಹಳ್ಳಿಯಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿರುವ ರವಿಕುಮಾರ್ ಹಾಗೂ ಅವರ ಪತ್ನಿ ವಿಜಯಮ್ಮ ಎಂದಿನಂತೆ ಮುಂಜಾನೆ 4 ಗಂಟೆಗೆ ವ್ಯಾಪಾರಕ್ಕೆ ತೆರಳಿದ್ದರು. ಬೆಳಿಗ್ಗೆ ಸುಮಾರು 5:15ರ ವೇಳೆಗೆ ವಿಜಯಮ್ಮ ಅವರು ಒಬ್ಬರೇ ಮನೆಗೆ ವಾಪಸ್ ಆಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಕಿರಾತಕರು ಆಕೆಯನ್ನು ಹಿಂಬಾಲಿಸಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿ, ಮುಖವಾಡ ಧರಿಸಿದ್ದ ಆರೋಪಿಯೊಬ್ಬ ಏಕಾಏಕಿ ವಿಜಯಮ್ಮ ಅವರ ಮೇಲೆ ಮೃಗದಂತೆ ಎರಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.

ಕ್ಷಣಾರ್ಧದಲ್ಲಿ ಬೈಕ್ ಹತ್ತಿ ಎಸ್ಕೇಪ್

ಮತ್ತೋರ್ವ ಆರೋಪಿ ಬೈಕ್ ಮೇಲಿಂದಲೇ ಆಕೆಗೆ ಕಾಲಿನಿಂದ ಒದ್ದು ಮೃಗೀಯವಾಗಿ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ವಿಜಯಮ್ಮ ಅವರು ಪ್ರಾಣಭಯದಿಂದ ಜೋರಾಗಿ ಚೀರಾಡಿದ್ದಾರೆ. ಈ ಆಕ್ರಂದನ ಕೇಳಿ ಸ್ಥಳೀಯ ರಸ್ತೆಯಲ್ಲಿದ್ದ ಬೀದಿ ನಾಯಿಯೊಂದು ಮಹಿಳೆಯ ಸಹಾಯಕ್ಕೆ ಓಡಿಬಂದು, ಆರೋಪಿಗೆ ಕಚ್ಚಲು ಮುಂದಾಗಿದೆ. ಆದರೂ ಬಿಡದ ದುಷ್ಕರ್ಮಿಗಳು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾರೆ.

ಆರೋಪಿಗಳು ಪೊಲೀಸರ ಕಣ್ಣು ತಪ್ಪಿಸಲು ಬೈಕ್‌ನ ನಂಬರ್ ಪ್ಲೇಟ್ ಅನ್ನು ಮೊದಲೇ ತೆಗೆದುಹಾಕಿ ಈ ಕೃತ್ಯ ಎಸಗಿದ್ದಾರೆ. ನಡುರಸ್ತೆಯಲ್ಲೇ ಹೆಣ್ಣುಮಗಳ ಮೇಲೆ ನಡೆದಿರುವ ಈ ದೌರ್ಜನ್ಯ ಸದ್ಯ ಇಡೀ ನಗರದ ಮಹಿಳೆಯರಲ್ಲಿ ಭಯ ಹುಟ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಸದ್ಯ ಚಾಣಾಕ್ಷ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರದಲ್ಲಿ ಒಂದಲ್ಲ, ಎರಡಲ್ಲ ಹತ್ತು ಹಾಡುಗಳು; ಅಚ್ಚರಿಯ ವಿಷಯ ರಿವೀಲ್ – Kannada News | Yash Toxic Movie Songs: 10 Tracks, 40 Minute Music, and Runtime Details Revealed

ಯಾವುದೇ ಸಿನಿಮಾ ಹಿಟ್ ಆಗಬೇಕು ಎಂದರೆ ಹಾಡುಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಾಂಗ್ ಹಿಟ್ ಆದರೆ ಸಿನಿಮಾ ಕೂಡ ಅರ್ಧ ಹಿಟ್ ಆದಂತೆ. ಇತ್ತೀಚೆಗೆ ರಿಲೀಸ್ ಆದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಯಶಸ್ಸು ಕಾಣಲು ಸಿನಿಮಾದ ಹಾಡುಗಳು ಕೂಡ ಪ್ರಮುಖ ಕಾರಣ ಆಗಿದ್ದವು. ಈಗ ‘ಟಾಕ್ಸಿಕ್’ ಸಿನಿಮಾದ (Toxic Movie) ಎರಡು ಹಾಡು ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿದೆ. ಹೀಗಿರುವಾಗಲೇ ಈ ಚಿತ್ರದಲ್ಲಿರುವ ಹಾಡುಗಳ ಸಂಖ್ಯೆ ಗಮನ ಸೆಳೆದಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಬರೋಬ್ಬರಿ 10 ಹಾಡುಗಳು ಇರಲಿವೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋ ಗಮನ ಸೆಳೆದಿದೆ.ಫ್ಯಾನ್ಸ್ ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಮತ್ತಷ್ಟು ಹಾಡುಗಳನ್ನು ತಂಡ ಬಿಡುಗಡೆ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಸಿನಿಮಾದ ಅವಧಿ ಮೂರು ಗಂಟೆ ಹದಿನಾಲ್ಕು ನಿಮಿಷ ಇದೆ ಎನ್ನಲಾಗಿದೆ. ಇದರಲ್ಲಿ ಸುಮಾರು 40 ನಿಮಿಷಗಳ ಹಾಡು ಇರಲಿದೆ ಎಂದು ಹೇಳಲಾಗುತ್ತಾ ಇದೆ. ಕೆಲವು ಹಾಡುಗಳು ಬ್ಯಾಕ್​ಗ್ರೌಂಡ್​ನಲ್ಲಿ ಬರುವ ನಿರೀಕ್ಷೆಯೂ ಇದೆ. ಸಿನಿಮಾ ನೋಡಿದ ಬಳಿಕ ಇದು ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ಟಾಕ್ಸಿಕ್ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ

‘ಕೆಜಿಎಫ್ 2’ ಯಶಸ್ಸಿನ ನಂತರ ಯಶ್ ಅವರ 19ನೇ ಸಿನಿಮಾವಾಗಿ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಮೂಡಿಬರುತ್ತಿದೆ. ಈ ಚಿತ್ರವನ್ನು ಗೀತು ಮೋಹನ್‌ದಾಸ್ ಅವರು ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಡಾರ್ಕ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ವಿಶಾಲ್ ಮಿಶ್ರಾ ಮೊದಲಾದವರು ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಯಶ್ ಅವರ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಈ ಚಿತ್ರ ಆಗಸ್ಟ್ 26ರಂದು ತೆರೆಗೆ ಬರಲಿದೆ.

ಪ್ರಶ್ನೆ: ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರೇನು?
ಉತ್ತರ: ರಾಯ ಹಾಗೂ ಟಿಕೆಟ್

ಪ್ರಶ್ನೆ: ಟಾಕ್ಸಿಕ್ ರಿಲೀಸ್ ದಿನಾಂಕ ಏನು?
ಉತ್ತರ: 
ಆಗಸ್ಟ್ 26

ಪ್ರಶ್ನೆ: ಟಾಕ್ಸಿಕ್ ಚಿತ್ರದ ನಿರ್ದೇಶಕರು ಯಾರು?
ಉತ್ತರ: 
ಗೀತು ಮೋಹನ್​ ದಾಸ್

Source link

ಉತ್ತರಾಖಂಡದ ಚಮೋಲಿ ಸುರಂಗಕ್ಕೆ ದಿಢೀರ್ ನೀರು-ತ್ಯಾಜ್ಯ ಪ್ರವಾಹ: 7ಕಾರ್ಮಿಕರ ದಾರುಣ ಸಾವು, 14 ಗಾಯಾಳುಗಳು – Kannada News | Uttarakhand hydropower project tunnel accident dead 14 injured in chamoli debris ingress

ಡೆಹ್ರಾಡೂನ್, ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್‌ಕೋಟಿ ಬಳಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು ಹಾಗೂ ಕಸ-ಬಂಡೆಗಳ ತ್ಯಾಜ್ಯ (debris) ನುಗ್ಗಿದ ಪರಿಣಾಮ 7 ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸೇರಿದ ‘ವಿಷ್ಣುಗಡ-ಪೀಪಲ್‌ಕೋಟಿ’ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಅಗ್ರಸ್ಥಾನದ ಕಾಮಗಾರಿ ನಡೆಯುತ್ತಿದ್ದಾಗ, ಗುರುವಾರ ಸಂಜೆ ಭಾರಿ ಪ್ರಮಾಣದ ನೀರು ಮತ್ತು ಮಣ್ಣು-ಕಲ್ಲುಗಳ ಮಿಶ್ರಣ ಒಳನುಗ್ಗಿದೆ.

ಘಟನೆ ಸಂಭವಿಸಿದಾಗ ಸ್ಥಳದಲ್ಲಿ ಒಟ್ಟು 22 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ನೀರಿನ ರಭಸಕ್ಕೆ ಹಲವರು ಸುರಂಗದ ಹೊರಭಾಗಕ್ಕೆ ತಳ್ಳಲ್ಪಟ್ಟಿದ್ದರೆ, ಹಲವರು ಒಳಭಾಗದಲ್ಲೇ ಸಿಲುಕಿಕೊಂಡಿದ್ದರು. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಐಟಿಬಿಪಿ (ITBP), ಸೇನೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಜನರನ್ನು ಹೊರತೆಗೆದಿದ್ದಾರೆ. 14 ಗಾಯಾಳುಗಳನ್ನು ಗೋಪೇಶ್ವರ ಮತ್ತು ಪೀಪಲ್‌ಕೋಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್‌ನ ವಿಪತ್ತು ನಿರ್ವಹಣಾ ಕೇಂದ್ರದಿಂದ ನೇರ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಕ್ಕೆ ವೇಗ ನೀಡುವಂತೆ ಆದೇಶಿಸಿದ್ದಾರೆ. ದುರಂತದಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಮೂಲದ ಕಾರ್ಮಿಕರೂ ಗಾಯಗೊಂಡಿರುವುದರಿಂದ, ಸಿಎಂ ಧಾಮಿ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಛತ್ತೀಸ್‌ಗಢ ಸಿಎಂ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಮತ್ತು ಸಹಾಯದ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು

ಕಳೆದ ಕೆಲವು ದಿನಗಳಿಂದ ಚಮೋಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇತ್ತೀಚೆಗೆ ನೀತಿ ಕಣಿವೆ ಪ್ರದೇಶದಲ್ಲಿ ನದಿಯ ರಭಸಕ್ಕೆ ಸೇತುವೆಯೊಂದು ಕೊಚ್ಚಿಹೋಗಿದ್ದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಇಂದು ಕರಾವಳಿ, ಒಳನಾಡಿನಲ್ಲಿ ಮಳೆಯ ಸಾಧ್ಯತೆ – Kannada News | Karnataka Weather Update August 14: Heavy Rain and High Wind Alert in Coastal, Interior Districts

ಇಂದು ಕರಾವಳಿ, ಒಳನಾಡಿನಲ್ಲಿ ಮಳೆಯ ಸಾಧ್ಯತೆ

ಬೆಂಗಳೂರು, ಆಗಸ್ಟ್ 14: ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಆಗಸ್ಟ್ 14ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Monsoon) ಮುನ್ಸೂಚನೆ ನೀಡಲಾಗಿದೆ. ಮಳೆಯ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 50 ಕಿಲೋಮೀಟರ್ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆಯೂ ಇದೆ. ಹೀಗಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿ ಕರ್ನಾಟಕ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕಿದೆ.

ಉತ್ತರ ಒಳನಾಡು ಕರ್ನಾಟಕ

ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ವೇಳೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಕರ್ನಾಟಕ

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಮಳೆಯ ಸಂದರ್ಭದಲ್ಲಿ ಅನಗತ್ಯವಾಗಿ ಪ್ರಯಾಣಿಸುವುದನ್ನು ತಪ್ಪಿಸುವುದು ಹಾಗೂ ಗಾಳಿ-ಮಳೆಯ ವೇಳೆ ಮರಗಳು ಮತ್ತು ವಿದ್ಯುತ್ ಕಂಬಗಳ ಸಮೀಪ ನಿಲ್ಲದಿರುವುದು ಸೂಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version