ಕಾರವಾರ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ – Kannada News | Uttar Kannada: Hattikeri PHC Ruins a Haven for Crime; Residents Demand Demolition Now

ಕಾರವಾರ, ಜು.18: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಸುತ್ತಮುತ್ತಲಿನ ಜಾಗದಲ್ಲಿರುವ ಆರೋಗ್ಯ ಇಲಾಖೆಯ ಸರ್ಕಾರಿ ವಸತಿಗೃಹಗಳು ಸಂಪೂರ್ಣ ಪಾಳುಬಿದ್ದಿದ್ದು, ಸದ್ಯ ಸಮಾಜಘಾತುಕ ಹಾಗೂ ಅನೈತಿಕ ಚಟುವಟಿಕೆಗಳ ಪ್ರಮುಖ ತಾಣವಾಗಿ ಮಾರ್ಪಟ್ಟಿವೆ. ಹಗಲೊತ್ತಿನಲ್ಲೇ ಈ ಭಾಗದಲ್ಲಿ ಒಂಟಿಯಾಗಿ ಓಡಾಡಲು ಮಹಿಳೆಯರು ಮತ್ತು ಸಾರ್ವಜನಿಕರು ತೀವ್ರ ಭಯ ಪಡುವಂತಹ ಭೀಕರ ವಾತಾವರಣ ಸೃಷ್ಟಿಯಾಗಿದ್ದು, ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ಅವರು ತಕ್ಷಣವೇ ಈ ಕಡೆ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹಟ್ಟಿಕೇರಿಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸುಮಾರು 15 ಎಕರೆಗೂ ಅಧಿಕ ವಿಸ್ತಾರವಾದ ಭೂಮಿ ಇದೆ. ಈ ಹಿಂದೆ ಇಲ್ಲಿ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಂಗಲು ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಾಲಕ್ರಮೇಣ ನಿರ್ವಹಣೆ ಇಲ್ಲದೇ ಯಾರು ವಾಸವಿರದ ಕಾರಣ ಈ ವಸತಿಗೃಹಗಳು ಸಂಪೂರ್ಣ ಪಾಳುಬಿದ್ದಿವೆ.

ಸದ್ಯ ಈ ಕಟ್ಟಡಗಳು ಮೇಲ್ಚಾವಣಿ ಇಲ್ಲದೆ ಕೇವಲ ಗೋಡೆಗಳಷ್ಟೇ ಉಳಿದುಕೊಂಡಿದ್ದು, ಸುತ್ತಲೂ ದಟ್ಟವಾದ ಗಿಡಗಂಟಿಗಳು ಹಾಗೂ ಪೊದೆಗಳು ಆವರಿಸಿಕೊಂಡಿವೆ. ಈ ಪಾಳುಬಿದ್ದ ಕೊಠಡಿಗಳ ಒಳಗೆ ರಾಶಿ ರಾಶಿ ಮದ್ಯದ ಖಾಲಿ ಬಾಟಲಿಗಳು ಬಿದ್ದಿದ್ದು, ಹಗಲು-ರಾತ್ರಿ ಎನ್ನದೆ ಇಲ್ಲಿ ಅನಾಚಾರ ಮತ್ತು ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಹೊರ ಊರುಗಳಿಂದ ಕಾರುಗಳಲ್ಲಿ ಹುಡುಗ-ಹುಡುಗಿಯರನ್ನು ತಂದು ಇಲ್ಲಿ ಬಿಟ್ಟು ಹೋಗುವ ಜಾಲ ಸಕ್ರಿಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಜಾಗದ ಪಕ್ಕದಲ್ಲೇ ಶಾಲಾ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ತಾಯಂದಿರು ತಮ್ಮ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವಾಗ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಟಿವಿ9 ವಾಹಿನಿಯೊಂದಿಗೆ ಮಾತನಾಡಿರುವ ಸ್ಥಳೀಯ ನಿವಾಸಿ ಮೋಹಿನಿ ಅವರು ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

“ಈ ಹಳೇ ಕಟ್ಟಡಗಳಲ್ಲಿ ದಿನನಿತ್ಯ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಹೊರ ಊರುಗಳಿಂದ ಹುಡುಗ-ಹುಡುಗಿಯರು ಇಲ್ಲಿಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಇನ್ನೊಂದು ಬಿಲ್ಡಿಂಗ್‌ನಲ್ಲಿ ಕುಡುಕರು ಕುಡಿಯಲು ಕೂರುತ್ತಾರೆ. ಈಗಾಗಲೇ ಈ ಭಾಗದಲ್ಲಿ ಕೊಲೆಯತ್ನ ಪ್ರಕರಣಗಳೂ ದಾಖಲಾಗಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆ ಇಲ್ಲಿ ಯಾರನ್ನಾದರೂ ಕೊಲೆ ಮಾಡಿ ಹೋದರೂ ಕೇಳುವವರಿಲ್ಲದಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ಈ ವಿಷಯ ತಂದಿದ್ದೇವೆ. ಕೂಡಲೇ ಈ ಕಟ್ಟಡಗಳನ್ನು ತೆರವುಗೊಳಿಸಬೇಕು.” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆಟೋ ಡ್ರೈವರ್ ಅಕೌಂಟ್‌ನಲ್ಲಿ 29 ಲಕ್ಷ, ಪೌರಕಾರ್ಮಿಕನ ಖಾತೆಯಲ್ಲಿ 34 ಲಕ್ಷ! ಅಮಾಯಕರ ಬ್ಯಾಂಕ್ ಖಾತೆ ಬಳಸಿ ಕೋಟ್ಯಂತರ ರೂ. ವಂಚನೆ

ಆರೋಗ್ಯ ಇಲಾಖೆಗೆ ಸೇರಿದ ಈ ಇಷ್ಟೊಂದು ದೊಡ್ಡ ಪ್ರಮಾಣದ ಅಮೂಲ್ಯವಾದ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವ ಬದಲು, ಇಲ್ಲೇ ಆಸ್ಪತ್ರೆ ಸಿಬ್ಬಂದಿಗಳಿಗೆ ಹೊಸ ವಸತಿಗೃಹಗಳನ್ನು ನಿರ್ಮಿಸಿಕೊಡಬೇಕು ಅಥವಾ ನೂತನ ಜಿಲ್ಲಾಸ್ಪತ್ರೆಯನ್ನು (District Hospital) ಇದೇ ಜಾಗದಲ್ಲಿ ನಿರ್ಮಿಸಿದರೆ ಇಡೀ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಅಪಾಯಕಾರಿ ಹಾಗೂ ಪಾಳುಬಿದ್ದ ಕಟ್ಟಡಗಳನ್ನು ಇಲಾಖೆಯು ಶೀಘ್ರವಾಗಿ ತೆರವುಗೊಳಿಸಬೇಕು. ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಜಾಗವನ್ನು ಸ್ವಚ್ಛಗೊಳಿಸಿ ಕಟ್ಟಡ ಕೆಡವದಿದ್ದರೆ, ಇಡೀ ಗ್ರಾಮಸ್ಥರೇ ಒಟ್ಟು ಸೇರಿ ಸ್ವತಃ ಆ ಕಟ್ಟಡಗಳನ್ನು ಕೆಡವಿ ಧ್ವಂಸ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:12 am, Sat, 18 July 26

Source link

ಮೈಸೂರಿನಲ್ಲಿ ಗುತ್ತಿಗೆದಾರನ ಅಪಹರಣ: 16 ಲಕ್ಷ ರೂ. ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ – Kannada News | Mysuru Contractor Kidnapped, Gang Robs Rs 16 Lakh Cash and Gold Worth Rs 3.5 Lakh; Three Police Teams Formed

ಗುತ್ತಿಗೆದಾರನ ಕಿಡ್ನಾಪ್ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಂದ ಪರಿಶೀಲನೆImage Credit source: tv9

ಮೈಸೂರು, ಜುಲೈ 18: ಮೈಸೂರು (Mysuru) ನಗರದ ಹೊರವಲಯದಲ್ಲಿ ಗುತ್ತಿಗೆದಾರನೊಬ್ಬನನ್ನು ಅಪಹರಿಸಿ 16 ಲಕ್ಷ ರೂ. ನಗದು ಹಾಗೂ ಸುಮಾರು 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಸಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ತಾಲೂಕಿನ ಮುದ್ದೇಗೌಡನ ದೊಡ್ಡಿ ಗ್ರಾಮದ ನಿವಾಸಿ ರಾಮು ಅಪಹರಣಕ್ಕೊಳಗಾದ ಗುತ್ತಿಗೆದಾರ. ಜುಲೈ 15ರಂದು ತೋಟದಿಂದ ಮನೆಗೆ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ರಾಮುವನ್ನು ಅಪಹರಿಸಿದ್ದಾರೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ವಿವಿಧೆಡೆ ಸುತ್ತಾಡಿಸಿದ ಆರೋಪಿಗಳು, ಅವರ ಮೊಬೈಲ್‌ನಿಂದ ಪತ್ನಿಗೆ ಕರೆ ಮಾಡಿಸಿ ‘‘ಇಂದು ಮನೆಗೆ ಬರುವುದಿಲ್ಲ’’ ಎಂದು ಬಲವಂತವಾಗಿ ಹೇಳಿಸಿದ್ದಾರೆ.

ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆಂದು ಯಾಮಾರಿಸಿದ ಗ್ಯಾಂಗ್

ಬಳಿಕ, ‘ನಿನ್ನನ್ನು ಕೊಲೆ ಮಾಡಲು 9 ಲಕ್ಷ ರೂ. ಸುಪಾರಿ ನೀಡಲಾಗಿದೆ. ಪ್ರಾಣ ಉಳಿಸಿಕೊಳ್ಳಬೇಕಾದರೆ 40 ಲಕ್ಷ ರೂ. ಕೊಡಬೇಕು’ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಮು ತನ್ನ ಬಳಿ 40 ಲಕ್ಷ ರೂ. ಇಲ್ಲ, 16 ಲಕ್ಷ ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರನ ಪತ್ನಿಗೆ ಕರೆ ಮಾಡಿಸಿ ಹಣ ತರಿಸಿಕೊಂಡ ಆರೋಪಿಗಳು

ಆ ಬಳಿಕ ಆರೋಪಿಗಳು ರಾಮುವಿನ ಪತ್ನಿಗೆ ಕರೆ ಮಾಡಿಸಿ, ಅವರ ಸಂಬಂಧಿ ಸುರೇಶ್ ಮೂಲಕ 16 ಲಕ್ಷ ರೂ. ಹಣವನ್ನು ನಂದಗುಂದ ಸೇತುವೆ ಬಳಿ ತಲುಪಿಸುವಂತೆ ಸೂಚಿಸಿದ್ದಾರೆ. ಗ್ಯಾಂಗ್ ಸೂಚಿಸಿದಂತೆ, ಸುರೇಶ್ ಅವರು ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಗೆ ಹಣ ನೀಡಿದ ನಂತರವೂ ಆರೋಪಿಗಳು ಸುಮಾರು ಒಂದು ಗಂಟೆ ಕಾಲ ರಾಮುವನ್ನು ಕಾರಿನಲ್ಲಿ ಸುತ್ತಾಡಿಸಿ, ಬಳಿಕ ಅಜ್ಞಾತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ರಾಮುವಿನ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ, ಎರಡು 10 ಗ್ರಾಂ ಚಿನ್ನದ ಉಂಗುರಗಳು ಹಾಗೂ ಜೇಬಿನಲ್ಲಿದ್ದ 50 ಸಾವಿರ ರೂ. ನಗದನ್ನೂ ಕಸಿದುಕೊಂಡಿದ್ದಾರೆ. ಒಟ್ಟಾರೆ ಸುಮಾರು 3.5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಲಾಗಿದೆ.

ಇದನ್ನೂ ಓದಿ: ಡಿಕೆಶಿ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದ ಪತ್ನಿ; ಮೈಸೂರು ಚಾಮುಂಡೇಶ್ವರಿಗೆ ಸೀರೆ ಹರಕೆ ತೀರಿಸಿದ ಉಷಾ ಶಿವಕುಮಾರ್!

ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಹರಣಕಾರರ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ನೀಡಿ: ಹಂಸಲೇಖ ಪರ ನಟ ಪ್ರೇಮ್ ಅಭಿಯಾನ – Kannada News | Nenapirali Prem started campaign demanding Padma award to Hamsalekha

ಅಭಿಮಾನಿಗಳಿಂದ ನಾದಬ್ರಹ್ಮ ಎಂದು ಕರೆಸಿಕೊಳ್ಳುವ ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ (Hamsalekha) ಅವರು ಕನ್ನಡ ಚಿತ್ರರಂಗದಲ್ಲಿ ಅರ್ಧ ಶತಮಾನದಿಂದಲೂ ಸಂಗೀತ ಕೃಷಿಯಲ್ಲಿದ್ದಾರೆ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ದೊಡ್ಡ ಮಟ್ಟದ ಅಭಿಮಾನಿಗಳ ಪ್ರೀತಿ, ಗೌರವ, ವಿಶ್ವಾಸಗಳನ್ನು ಗಳಿಸಿರುವ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಧಕ್ಕಿಲ್ಲ. ಅವರ ಸಮಕಾಲೀನ ಮತ್ತು ಅವರಿಗಿಂತಲೂ ಕಿರಿಯರಾದ ಕೆಲವು ಸಂಗೀತ ನಿರ್ದೇಶಕರಿಗೆ, ಗೀತ ಸಾಹಿತಿಗಳಿಗೆ ಈಗಾಗಲೇ ಪದ್ಮ ಪ್ರಶಸ್ತಿಗಳು ದೊರೆತಿವೆ. ಇದೀಗ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ಅಭಿಯಾನ ಆರಂಭಿಸಲಾಗಿದ್ದು, ಈ ಅಭಿಯಾನ ಆರಂಭಿಸಿರುವುದು ಕನ್ನಡದ ನಟ ಪ್ರೇಮ್.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ನೆನಪಿರಲಿ ಪ್ರೇಮ್, ‘ನಾದಬ್ರಹ್ಮ ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬುದರ ಕುರಿತು ಅಭಿಯಾನ ಶುರು ಮಾಡಿದ್ದೇನೆ. ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತ್ಯಗಳು, ಕನ್ನಡ ಚಿತ್ರಪ್ರೇಮಿಗಳು, ಮಾಧ್ಯಮದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರ್ಕಾರಕ್ಕೆ ಮನವಿ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇಬೇಕಾದ ಗೌರವ.
ಈ ಅಭಿಯಾನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಪ್ರೇಮ್ ಮನವಿ ಮಾಡಿದ್ದಾರೆ.

ಕನ್ನಡದಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. ಅದಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಹಂಸಲೇಖ ನೀಡಿದ್ದಾರೆ. 80ರ ದಶಕದಲ್ಲಿ ಕನ್ನಡ ಸಿನಿಮಾ ಸಾಹಿತ್ಯ ಮತ್ತು ಸಂಗೀತಕ್ಕೆ ಬೇರೆಯದ್ದೇ ಮಾದರಿ ಹಾಕಿಕೊಟ್ಟು, ಕ್ರಾಂತಿ ಮೂಡಿಸಿದ ಸಂಗೀತ ನಿರ್ದೇಶಕ ಮತ್ತು ಸಾಹಿತಿ ಹಂಸಲೇಖ. ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಹ ಹಂಸಲೇಖ ಅವರು ಸಂಗೀತ ಒದಗಿಸಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲೇ ಎಸ್. ಜಾನಕಿ ಸ್ಮಾರಕ ಆಗಲಿ: ಕಣ್ಣೀರು ಹಾಕುತ್ತಾ ಹಂಸಲೇಖ ವಿನಂತಿ

ಕನ್ನಡ ಸಿನಿಮಾ ಕ್​ಷೇತ್ರದ ಅದ್ಭುತ ಸಾಧಕರಾಗಿರುವ ಹಂಸಲೇಖ ಅವರಿಗೆ 1995 ರಲ್ಲಿ ‘ಪಂಚಾಕ್ಷರಿ ಗವಾಯಿ’ ಸಿನಿಮಾದ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಹಾಲುಂಡ ತವರು’, ‘ನೆನಪಿರಲಿ’ ‘ಪಂಚಾಕ್ಷರಿ ಗವಾಯಿ’ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳು ದೊರಕಿದೆ. ಹಲವು ಬಾರಿ ಫಿಲಂ ಫೇರ್ ದೊರಕಿದೆ. ಇವು ಹಂಸಲೇಖ ಅವರು ಪ್ರತಿಭೆಯಿಂದ ಗೆದ್ದಿರುವ ಪ್ರಶಸ್ತಿಗಳು. ಇವುಗಳ ಹೊರತಾಗಿ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್​​ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಎಸ್ ಜಾನಕಿ ಪ್ರಶಸ್ತಿಗಳು ದೊರಕಿವೆ. ಆದರೆ ಕೇಂದ್ರದಿಂದ ನಾಗರೀಕ ಪ್ರಶಸ್ತಿಗಳು ಈ ವರೆಗೆ ಅವರಿಗೆ ದೊರಕಿಲ್ಲ. ಕೇಂದ್ರ ಸರ್ಕಾರವು ಹಂಸಲೇಖ ಅವರ ಸಾಧನೆಯನ್ನು ಈ ವರೆಗೆ ಗುರುತಿಸಿಲ್ಲ.

ಇದೇ ಕಾರಣಕ್ಕೆ ಇದೀಗ ಹಂಸಲೇಖ ಅವರಿಗೆ ನಾಗರೀಕ ಪ್ರಶಸ್ತಿಗಳಿಗೆ ಅಥವಾ ಸಾಹಿತಿಗಳಿಗೆ ನೀಡಲಾಗುವ ಜ್ಞಾನಪೀಠ ಪ್ರಶಸ್ತಿಯನ್ನು ನೀಡಬೇಕು ಎಂಬ ಅಭಿಯಾನ ಆರಂಭಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಚಿತ್ರರಂಗದ ಜನಪ್ರಿಯ ನಟರಾಗಿರುವ ನೆನಪಿರಲಿ ಪ್ರೇಮ್ ಅವರು ಈ ಅಭಿಯಾನ ಆರಂಭಿಸಿರುವುದು ವಿಶೇಷ. ಈ ಹಿಂದೆ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ಅಭಿಯಾನ ಮಾಡಲಾಗಿತ್ತು. ಅದರಂತೆ ಅನಂತ್ ಅವರಿಗೆ ಪದ್ಮ ಪ್ರಶಸ್ತಿ ದೊರಕಿತು. ಈಗ ಹಂಸಲೇಖ ಅವರಿಗೂ ದೊರಕಲಿದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

EA ಸ್ಪೋರ್ಟ್ಸ್ ಭವಿಷ್ಯವಾಣಿ: ಈ ಬಾರಿ ಕಪ್ ಯಾರಿಗೆ ಗೊತ್ತಾ? – Kannada News | EA Sports FC predicted Spain to win the 2026 FIFA World Cup

2026ರ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ? ಈ ಪ್ರಶ್ನೆಗೆ EA ಸ್ಪೋರ್ಟ್ಸ್ ಭವಿಷ್ಯವಾಣಿ ಇದೀಗ ಉತ್ತರವಾಗಿ ಸಿಗುತ್ತಿದೆ. ಕಳೆದ ನಾಲ್ಕು ವಿಶ್ವಕಪ್ ಆವೃತ್ತಿಗಳಲ್ಲಿ ಯಾರೂ ಊಹಿಸದ ನಿಖರ ಫಲಿತಾಂಶ ನೀಡಿ ಕ್ರೀಡಾಲೋಕವನ್ನು ಬೆರಗುಗೊಳಿಸಿದ್ದ ಇಎ ಸ್ಪೋರ್ಟ್ಸ್ (EA Sports) ಸೂಪರ್ ಕಂಪ್ಯೂಟರ್, ಇದೀಗ ಮತ್ತೊಮ್ಮೆ ತನ್ನ ಅಂತಿಮ ಭವಿಷ್ಯವನ್ನು ಹೊರಹಾಕಿದೆ. ಈ ಭವಿಷ್ಯವಾಣಿಯಂತೆ ಈ ಬಾರಿ ಸ್ಪೇನ್ ಚಾಂಪಿಯನ್ ಪಟ್ಟಕ್ಕೇರಲಿದೆ.

ಸತತ 4 ಬಾರಿ ನಿಖರ ಭವಿಷ್ಯ!

EA ಸ್ಪೋರ್ಟ್ಸ್‌ನ ಈ ಭವಿಷ್ಯವಾಣಿಯನ್ನು ಕ್ರೀಡಾ ಲೋಕ ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಕಳೆದ ನಾಲ್ಕೂ ವಿಶ್ವಕಪ್‌ಗಳ ವಿಜೇತರನ್ನು ಈ ಸಂಸ್ಥೆ ನಿಖರವಾಗಿ ಮುನ್ಸೂಚಿಸಿತ್ತು.

  •  2010: ಸ್ಪೇನ್ (ನಿಖರ ಭವಿಷ್ಯ)
  • 2014: ಜರ್ಮನಿ (ನಿಖರ ಭವಿಷ್ಯ)
  •  2018: ಫ್ರಾನ್ಸ್ (ನಿಖರ ಭವಿಷ್ಯ)
  •  2022: ಅರ್ಜೆಂಟೀನಾ (ನಿಖರ ಭವಿಷ್ಯ)
  • 2026: ಸ್ಪೇನ್ (ಭವಿಷ್ಯವಾಣಿ)

ಈ ನಿಖರ ಭವಿಷ್ಯದ ಇತಿಹಾಸದ ಹಿನ್ನೆಲೆಯಲ್ಲಿ, ಈಗ 2026ರ ಟೂರ್ನಿಗೂ ಸ್ಪೇನ್ ಗೆಲ್ಲಲಿದೆ ಎಂದು ಹೇಳಿರುವುದು ಫುಟ್‌ಬಾಲ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈ ಭವಿಷ್ಯವಾಣಿ ಹೇಗೆ ಕೆಲಸ ಮಾಡುತ್ತದೆ?

EA ಸ್ಪೋರ್ಟ್ಸ್ ತನ್ನ EA Sports FC 26 ಗೇಮ್‌ನ ಸುಧಾರಿತ ತಂತ್ರಜ್ಞಾನವನ್ನು ಇದಕ್ಕೆ ಬಳಸಿದೆ. ಆಟಗಾರರ ನೈಜ ಸಾಮರ್ಥ್ಯ, ವೇಗ, ತಂಡಗಳ ಪ್ರಸ್ತುತ ಫಾರ್ಮ್ ಮತ್ತು ಐತಿಹಾಸಿಕ ಡೇಟಾಗಳನ್ನು ಕಂಪ್ಯೂಟರ್‌ಗೆ ನೀಡಿ, ಒಟ್ಟು 104 ಪಂದ್ಯಗಳನ್ನು ಕೃತಕವಾಗಿ ಆಡಿಸಿ ಈ ಅಂತಿಮ ಫಲಿತಾಂಶವನ್ನು ಹೊರಹಾಕಲಾಗಿದೆ.

ಫಲಿತಾಂಶ ಹೊರಹಾಕಿದ್ದು ಯಾವಾಗ?

ಇಎ ಸ್ಪೋರ್ಟ್ಸ್ ತನ್ನ ಅಧಿಕೃತ ಭವಿಷ್ಯವಾಣಿಯ ಫಲಿತಾಂಶವನ್ನು 2026ರ ಜೂನ್ 11 ರಂದು, ಅಂದರೆ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಆರಂಭವಾಗುವ ದಿನದಂದು ಹೊರಹಾಕಿತು.

ಗೇಮಿಂಗ್ ಸಂಸ್ಥೆಯು ಮೇ ತಿಂಗಳ ಕೊನೆಯಲ್ಲಿ ತಂದ ತನ್ನ ‘ದಿ ವರ್ಲ್ಡ್ಸ್ ಗೇಮ್’ ಅಪ್ಡೇಟ್ ಬಳಿಕ, ಜೂನ್ ಆರಂಭದಲ್ಲಿ ಗೇಮ್‌ನ ಸಿಮ್ಯುಲೇಶನ್ ಇಂಜಿನ್ ಮೂಲಕ ಎಲ್ಲಾ 104 ಪಂದ್ಯಗಳನ್ನು ರನ್ ಮಾಡಿ, ಜೂನ್ 11 ರಂದು ಈ ಅಂತಿಮ ವರದಿಯನ್ನು ಜಗತ್ತಿನ ಮುಂದೆ ಇಟ್ಟಿತ್ತು.

ಇದನ್ನೂ ಓದಿ: ರೋಹಿತ್-ವಿರಾಟ್ ಇಲ್ಲದೆ ಭಾರತ 2027ರ ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ!

ಫೈನಲ್​ನಲ್ಲಿ ಸ್ಪೇನ್:

ಒಂದು ತಿಂಗಳ ಮುಂಚಿತವಾಗಿ ನುಡಿದ ಭವಿಷ್ಯದಂತೆ ಇದೀಗ ಸ್ಪೇನ್ ತಂಡವು 2026ರ ಫಿಫಾ ವಿಶ್ವಕಪ್‌ನ ಫೈನಲ್ ತಲುಪಿದ್ದು, ಮತ್ತೊಂದು ಐತಿಹಾಸಿಕ ವಿಶ್ವವಿಜಯದ ಹೊಸ್ತಿಲಲ್ಲಿ ಬಂದು ನಿಂತಿದೆ. ಹೀಗಾಗಿಯೇ ಈ ಬಾರಿ ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆಯಾ ಕಾದು ನೋಡಬೇಕಿದೆ.

Published On – 10:27 am, Sat, 18 July 26

Source link

Planetary Transit: ಇಂದಿನಿಂದ ಈ 5 ರಾಶಿಯಲ್ಲಿ ಮಹತ್ತರ ಬದಲಾವಣೆ; ಧನಲಾಭ, ವೃತ್ತಿಜೀವನದಲ್ಲಿ ಅನಿರೀಕ್ಷಿತ ಯಶಸ್ಸು! – Kannada News | July 18 Astrology: 5 Zodiac Signs to Gain Wealth and Career Success from Planetary Transit

ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನದಿಂದ ಜುಲೈ 18 ಅತ್ಯಂತ ವಿಶೇಷ ಹಾಗೂ ಮಹತ್ವದ ದಿನವಾಗಿದೆ. ಧಾರ್ಮಿಕ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ದಿನ ಸಂಭವಿಸಲಿರುವ ಗ್ರಹಗಳ ವಿಶೇಷ ಜಂಟಿ ಸಂಚಾರ ಹಾಗೂ ಸ್ಥಾನ ಪಲ್ಲಟಗಳು 5 ರಾಶಿಗಳ ಜನರ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರಲಿವೆ. ಇಂದಿನಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಭಾರಿ ಧನಲಾಭ, ಬಾಕಿ ಇರುವ ಕೆಲಸಗಳ ಪೂರ್ಣಾವತಿ ಮತ್ತು ವೃತ್ತಿ ಬದುಕಿನಲ್ಲಿ ಅನಿರೀಕ್ಷಿತ ಯಶಸ್ಸು ಸಿಗುವ ಬಲವಾದ ಯೋಗವಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬ ವಿವರ ಇಲ್ಲಿದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ದಿನ ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶ ಸಿಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳು ವೇಗ ಪಡೆದುಕೊಂಡು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದ್ದು, ವ್ಯವಹಾರದಲ್ಲಿ ಲಾಭ ಹೆಚ್ಚಾಗುವುದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಖರ್ಚುಗಳು ನಿಯಂತ್ರಣದಲ್ಲಿರಲಿವೆ. ಆಸ್ತಿ ಅಥವಾ ಹೊಸ ವಾಹನ ಖರೀದಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿದ್ದು, ಸ್ನೇಹಿತರ ಸಂಪೂರ್ಣ ಬೆಂಬಲ ನಿಮಗಿರುತ್ತದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಎದುರಾಗಿದ್ದ ತೊಂದರೆಗಳು ನಿವಾರಣೆಯಾಗಲಿವೆ. ಸೂರ್ಯ ಮತ್ತು ಗುರುವಿನ ಶುಭ ಪ್ರಭಾವದಿಂದಾಗಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಹೊಸ ಮತ್ತು ಆಶಾದಾಯಕ ಆರಂಭದ ಲಕ್ಷಣಗಳಿವೆ. ಉದ್ಯೋಗದ ಸಂದರ್ಶನಗಳು ನಿಮ್ಮ ಪರವಾಗಿ ಮುಕ್ತಾಯಗೊಳ್ಳಲಿವೆ. ವ್ಯಾಪಾರದಲ್ಲಿ ಹೊಸ ಗ್ರಾಹಕರು (Clients) ಸಿಗಲಿದ್ದು, ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದ್ದು, ಭವಿಷ್ಯದ ಯೋಜನೆಗಳಿಗೆ ಇದು ಸೂಕ್ತ ದಿನ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಜುಲೈ 18 ಅತ್ಯಂತ ಅದೃಷ್ಟದ ದಿನವಾಗಿರಲಿದೆ. ನಿಮ್ಮದೇ ರಾಶಿಗೆ ಚಂದ್ರನ ಪ್ರವೇಶವಾಗುತ್ತಿರುವುದರಿಂದ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆ ಹಾಗೂ ಅಭಿಪ್ರಾಯಗಳಿಗೆ ವಿಶೇಷ ಗೌರವ ಸಿಗಲಿದ್ದು, ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಬಡ್ತಿ (Promotion) ಅಥವಾ ಹೊಸ ಉದ್ಯೋಗದ ಮಾತುಕತೆಗಳು ಯಶಸ್ವಿಯಾಗಲಿವೆ. ಹಳೆಯ ಬಾಕಿ ಹಣ ಕೈಸೇರಲಿದ್ದು, ಪ್ರೇಮ ಜೀವನದಲ್ಲಿನ ತಪ್ಪು ತಿಳುವಳಿಕೆಗಳು ದೂರವಾಗಲಿವೆ. ಗ್ರಹಬಲಗಳು ಪೂರಕವಾಗಿರುವ ಈ ದಿನದ ಸಕಾರಾತ್ಮಕ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಸಿಂಹ ರಾಶಿಯವರು ಗಮನಾರ್ಹ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ತುಲಾ ರಾಶಿ:

ತುಲಾ ರಾಶಿಯವರ ಮೇಲೆ ಈ ಅವಧಿಯಲ್ಲಿ ಶುಕ್ರನ ಪ್ರಭಾವ ಅತ್ಯಂತ ಶುಭದಾಯಕವಾಗಿರಲಿದೆ. ನಿಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ಮಾತುಗಳಿಂದ ಇತರರು ಪ್ರಭಾವಿತರಾಗುತ್ತಾರೆ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಪಾಲುದಾರಿಕೆ (Partnership) ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಭಾರಿ ಲಾಭದ ಲಕ್ಷಣಗಳಿವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದ್ದು, ವೈವಾಹಿಕ ಜೀವನದಲ್ಲಿ ಸಾಮರಸ್ಯ ಮೂಡಲಿದೆ. ಸಣ್ಣ ಪ್ರಯಾಣದ ಯೋಗವಿದ್ದು, ಮನಸ್ಸು ಪ್ರಫುಲ್ಲವಾಗಿರುತ್ತದೆ.

ಮೀನ ರಾಶಿ:

ಮೀನ ರಾಶಿಯವರಿಗೆ ಈ ದಿನ ವಿಧಿಯ (ಅದೃಷ್ಟದ) ಸಂಪೂರ್ಣ ಬೆಂಬಲ ಸಿಗಲಿದೆ. ನಿಂತುಹೋಗಿದ್ದ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ. ವ್ಯವಹಾರದಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕವಾಗಿ ನೀವು ಸಬಲರಾಗುತ್ತೀರಿ. ಹಿರಿಯ ಹಾಗೂ ಅನುಭವಿ ವ್ಯಕ್ತಿಗಳ ಮಾರ್ಗದರ್ಶನದಿಂದಾಗಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಲಿದ್ದೀರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ಸುಧಾರಿಸಲಿದೆ.

ಒಟ್ಟಾರೆಯಾಗಿ ಜುಲೈ 18ರಿಂದ ಆರಂಭವಾಗುವ ಈ ಗ್ರಹಗಳ ಸಂಚಾರವು ಈ ಐದು ರಾಶಿಗಳ ಪಾಲಿಗೆ ಹೊಸ ಭರವಸೆ ಹಾಗೂ ಯಶಸ್ಸಿನ ಬಾಗಿಲನ್ನು ತೆರೆಯಲಿದೆ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಜಾಣತನ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶಾದ್ಯಂತ ಸರಣಿ ಬಾಂಬ್ ಸ್ಫೋಟಕ್ಕೆ ಉಗ್ರರ ಸ್ಕೆಚ್, ಜೈಶ್ ನೆಟ್​ವರ್ಕ್​ ಧ್ವಂಸಗೊಳಿಸಿದ ಎಟಿಎಸ್, ಐವರ ಬಂಧನ – Kannada News | Gujarat ATS Busts Jaish Terror Plot: 13 Arrested for Pan India Bomb Blasts

ಅಹಮದಾಬಾದ್, ಜುಲೈ 18: ದೇಶಾದ್ಯಂತ ಭಾರಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿದ್ದ ಉಗ್ರ(Terrorist)ರ ಬೃಹತ್ ಜಾಲವನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಯಶಸ್ವಿಯಾಗಿ ಭೇದಿಸಿದೆ. ಗುಜರಾತ್​ನ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿರುವ ಅಧಿಕಾರಿಗಳು, ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಈ ಜಾಗತಿಕ ಭಯೋತ್ಪಾದಕ ಜಾಲದಕ್ಕೆ ಸಂಬಂಧಿಸಿ ಬಂಧಿತರಾದವರ ಒಟ್ಟು ಸಂಖ್ಯೆ 13ಕ್ಕೇರಿದೆ.

ಈಗಾಗಲೇ ಕಸ್ಟಡಿಯಲ್ಲಿದ್ದ ಎಂಟು ಜನ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಭ್ಯವಾದ ರಹಸ್ಯ ಮಾಹಿತಿಯ ಆಧಾರದ ಮೇಲೆ ಎಟಿಎಸ್ ಈ ಹೊಸ ದಾಳಿಗಳನ್ನು ಸಂಘಟಿಸಿತ್ತು. ತನಿಖೆಯ ವೇಳೆ ಬಯಲಾದ ಆಘಾತಕಾರಿ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆನ್‌ಲೈನ್ ಮೂಲಕ ಬಾಂಬ್ ತಯಾರಿಕೆ: ಈ ಉಗ್ರರು ಟೈಮರ್ ಬಾಂಬ್‌ಗಳನ್ನು ಹೇಗೆ ತಯಾರಿಸಬೇಕು ಮತ್ತು ಅವುಗಳನ್ನು ದೂರದಿಂದಲೇ ಹೇಗೆ ಸ್ಫೋಟಿಸಬೇಕು ಎಂಬುದರ ಕುರಿತು ವಿಶೇಷ ತರಬೇತಿ ಪಡೆಯುತ್ತಿದ್ದರು. ಬಾಂಬ್ ಮಾಡಲು ಬೇಕಾದ ರಾಸಾಯನಿಕಗಳನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಆನ್‌ಲೈನ್ ಮೂಲಕ ರಹಸ್ಯವಾಗಿ ಖರೀದಿಸಿದ್ದರು.

8 ಕಡೆಗಳಲ್ಲಿ ಪರೀಕ್ಷಾರ್ಥ ಸ್ಫೋಟ: ಕಳೆದ ಮೂರು ವರ್ಷಗಳಲ್ಲಿ ಈ ಜಾಲವು ಗುಜರಾತ್‌ನ ಎಂಟು ವಿಭಿನ್ನ ರಹಸ್ಯ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟ ನಡೆಸಿ ಯಶಸ್ವಿಯಾಗಿದ್ದವು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಎಕೆ-47 ತರಬೇತಿ: ಬಂಧಿತರ ಪೈಕಿ ಇಬ್ಬರು ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿ ಭೀಕರ ಎಕೆ-47 ರೈಫಲ್ ಚಲಾಯಿಸುವ ತರಬೇತಿ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಜನನಿಬಿಡ ಪ್ರದೇಶಗಳಲ್ಲಿ ಸಾವು-ನೋವು ಹೆಚ್ಚಿಸಲು ‘ಕಾರ್ಬನ್ ಮೊನಾಕ್ಸೈಡ್’ ನಂತಹ ವಿಷಕಾರಿ ಅನಿಲ ತಯಾರಿಸುವ ತಂತ್ರವನ್ನೂ ಇವರು ಕರಗತ ಮಾಡಿಕೊಂಡಿದ್ದರು ಎನ್ನಲಾಗಿದೆ.

ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ

ಆರೋಪಿಗಳ ಡಿಜಿಟಲ್ ಸಾಧನಗಳನ್ನು ತಪಾಸಣೆ ನಡೆಸಿದಾಗ, ಇವರು ಯುವಕರ ತಲೆಕೆಡಿಸಲು ಜಿಹಾದ್ ಸಿದ್ಧಾಂತಕ್ಕೆ ಸಂಬಂಧಿಸಿದ ಬರೋಬ್ಬರಿ 43 ನಿಷೇಧಿತ ಇ-ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಗುಜರಾತ್‌ನ ‘ಖಾದಿಯಾಸನ್ ಮದರಸಾ’ ಮತ್ತು ‘ನಂದಸನ್’ ಪ್ರದೇಶಗಳಲ್ಲಿ ಈ ಶಂಕಿತರ ಓಡಾಟ ತೀವ್ರವಾಗಿದ್ದರಿಂದ ಎಟಿಎಸ್ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಇವರ ಮೇಲೆ ತೀವ್ರ ಕಣ್ಗಾವಲು ಇಟ್ಟಿದ್ದರು. ಇವರಲ್ಲಿ ಒಬ್ಬ ಆರೋಪಿ ವಡೋದರಾದ ಶಂಕಿತ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದದ್ದು ಪತ್ತೆಯಾಗಿದೆ.

ಕಮಾಂಡೋ ಕಾವಲಿನಲ್ಲಿ ನ್ಯಾಯಾಲಯ
ಭಾರೀ ಕಮಾಂಡೋ ಭದ್ರತೆ: ಹೊಸದಾಗಿ ಬಂಧಿಸಲಾದ ಐದು ಜನ ಆರೋಪಿಗಳಿಗೆ ನ್ಯಾಯಾಲಯವು 7 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ. ಉಗ್ರರ ಮೇಲೆ ಅವರದೇ ಸಹಚರರು ದಾಳಿ ನಡೆಸಿ ಬಿಡಿಸಿಕೊಳ್ಳುವ ಆತಂಕವಿದ್ದ ಹಿನ್ನೆಲೆಯಲ್ಲಿ, ‘ಕಾಡಿ ನ್ಯಾಯಾಲಯ’ದ ಸುತ್ತಮುತ್ತ ನೂರಾರು ಅತ್ಯಾಧುನಿಕ ಶಸ್ತ್ರಸಜ್ಜಿತ ಕಮಾಂಡೋಗಳು ಮತ್ತು ಪೊಲೀಸರನ್ನು ಕೋಟೆಯಂತೆ ನಿಯೋಜಿಸಲಾಗಿತ್ತು.

ಈ ಉಗ್ರರಿಗೆ ಪಾಕಿಸ್ತಾನ ಮತ್ತು ದುಬೈ ಮೂಲದ ಹ್ಯಾಂಡ್ಲರ್‌ಗಳಿಂದ ಹವಾಲಾ ಹಣ ಸಂದಾಯವಾಗುತ್ತಿತ್ತೇ? ಸ್ಥಳೀಯವಾಗಿ ಇವರಿಗೆ ಆಶ್ರಯ ನೀಡಿದವರು ಯಾರು? ಎಂಬಿತ್ಯಾದಿ ಆಯಾಮಗಳಲ್ಲಿ ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಜಂಟಿಯಾಗಿ ಜಾಲವನ್ನು ವಿಸ್ತರಿಸಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಹಲವರ ಬಂಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Dam Water Level: ಕಬಿನಿ, ಹೇಮಾವತಿ ಜಲಾಶಯಗಳು ಕಳೆದ ವರ್ಷಕ್ಕಿಂತ ಖಾಲಿ ಖಾಲಿ! – Kannada News | Karnataka Dam Water Level Today: Kabini and KRS Levels Drop Compared to Last Year

ಬೆಂಗಳೂರು, ಜುಲೈ 18: ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆ ಎದುರಾಗಿದ್ದು, ಕಬಿನಿ, ಹೇಮಾವತಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷದಷ್ಟು ಏರಿಕೆ ಕಾಣುತ್ತಿಲ್ಲ. ಬೆಂಗಳೂರಿಗೆ ನೀರು ಪೂರೈಸುವ ಪ್ರಮುಖ ಡ್ಯಾಂ ಕೆಆರ್​​ಎಸ್​ಗೂ ಸಹ ಒಳಹರಿವು ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

1. ಕಬಿನಿ ಜಲಾಶಯ (ಮೈಸೂರು)

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದ ಕಾವಲು ಪ್ರದೇಶದಲ್ಲಿ 10 ಮಿ.ಮೀ. ಮಳೆ ದಾಖಲಾಗಿದೆ.

  • ಇಂದಿನ ನೀರಿನ ಮಟ್ಟ: 71.16 ಅಡಿ (ಕಳೆದ ವರ್ಷ ಇದೇ ದಿನ: 81.51 ಅಡಿ)
  • ಇಂದಿನ ನೀರಿನ ಸಂಗ್ರಹ: 12.25 ಟಿಎಂಸಿ (ಕಳೆದ ವರ್ಷ: 18.55 ಟಿಎಂಸಿ)
  • ಒಳಹರಿವು: 1,354 ಕ್ಯೂಸೆಕ್ (ಕಳೆದ ವರ್ಷ: 24,180 ಕ್ಯೂಸೆಕ್)
  • ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ: 17,292 ಕ್ಯೂಸೆಕ್)

2. ಹೇಮಾವತಿ ಜಲಾಶಯ (ಹಾಸನ)

ಹಾಸನ ತಾಲ್ಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರಿದೆ.

  • ಗರಿಷ್ಠ ಮಟ್ಟ: 2922 ಅಡಿ (ಸಾಮರ್ಥ್ಯ: 37 ಟಿಎಂಸಿ)
  • ಇಂದಿನ ನೀರಿನ ಮಟ್ಟ: 2904.04 ಅಡಿ
  • ಇಂದಿನ ನೀರಿನ ಸಂಗ್ರಹ: 22.402 ಟಿಎಂಸಿ (ಕಳೆದ ವರ್ಷ ಇದೇ ದಿನ: 2920.97 ಅಡಿ, 36.108 ಟಿಎಂಸಿ)
  • ಒಳಹರಿವು: 1,387 ಕ್ಯೂಸೆಕ್ (ಕಳೆದ ವರ್ಷ: 9,491 ಕ್ಯೂಸೆಕ್)
  • ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 6,200 ಕ್ಯೂಸೆಕ್)

3. ಕೆ.ಆರ್.ಎಸ್ ಜಲಾಶಯ (ಮಂಡ್ಯ)

ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜಸಾಗರ (KRS) ಜಲಾಶಯದ ಇಂದಿನ ಮಟ್ಟ ಹೀಗಿದೆ:

  • ಗರಿಷ್ಠ ಮಟ್ಟ: 124.80 ಅಡಿ (ಸಾಮರ್ಥ್ಯ: 49.452 ಟಿಎಂಸಿ)
  • ಇಂದಿನ ನೀರಿನ ಮಟ್ಟ: 92.88 ಅಡಿ
  • ಇಂದಿನ ನೀರಿನ ಸಂಗ್ರಹ: 17.727 ಟಿಎಂಸಿ
  • ಒಳಹರಿವು: 1,144 ಕ್ಯೂಸೆಕ್
  • ಹೊರಹರಿವು: 1,344 ಕ್ಯೂಸೆಕ್

4. ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಒಳಹರಿವು ಸಾಧಾರಣವಾಗಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.42 ಮೀಟರ್
  • ಒಳಹರಿವು: 6,091 ಕ್ಯೂಸೆಕ್
  • ಹೊರಹರಿವು: 3,012 ಕ್ಯೂಸೆಕ್

5. ತುಂಗಭದ್ರಾ ಜಲಾಶಯ (ಹೊಸಪೇಟೆ)

ಹೊಸಪೇಟೆಯ ತುಂಗಭದ್ರಾ ಜಲಾಶಯದ ಇಂದಿನ ನಿಖರ ಮಾಹಿತಿ ಇಲ್ಲಿದೆ:

  • ಗರಿಷ್ಠ ಮಟ್ಟ (F.R.L): 1633.00 ಅಡಿ (ಸಾಮರ್ಥ್ಯ: 105.788 ಟಿಎಂಸಿ)
  • ಇಂದಿನ ನೀರಿನ ಮಟ್ಟ: 1603.37 ಅಡಿ
  • ಇಂದಿನ ನೀರಿನ ಸಂಗ್ರಹ: 26.199 ಟಿಎಂಸಿ
  • ಲೈವ್ ಒಳಹರಿವು: 2,850 ಕ್ಯೂಸೆಕ್ (ಕಳೆದ 24 ಗಂಟೆಗಳ ಸರಾಸರಿ ಒಳಹರಿವು: 3,212 ಕ್ಯೂಸೆಕ್)
  • ಹೊರಹರಿವು: ಕಾಲುವೆಗಳಿಗೆ 2,166 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ನದಿಗೆ ಸದ್ಯ ಶೂನ್ಯ (0) ಹೊರಹರಿವು ಇದೆ.

ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಹೇಮಾವತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ತೀವ್ರವಾಗಿ ಕುಸಿದಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ಚುರುಕುಗೊಂಡರೆ ಮಾತ್ರ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರಲಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು – Kannada News | Sonam Wangchuk Hospitalised After 20 Day Hunger Strike, Delhi Police Shift Him from Jantar Mantar

ಸೋನಮ್ ವಾಂಗ್ಚುಕ್ ರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರುImage Credit source: PTI

ನವದೆಹಲಿ, ಜುಲೈ 19: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರನ್ನು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಶನಿವಾರ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಸದ್ಯ ಅವರು ಪ್ರಜ್ಞೆಯಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹೈಕೋರ್ಟ್ ನಿರ್ದೇಶನ ಹಾಗೂ ವೈದ್ಯಕೀಯ ತಜ್ಞರ ಸಲಹೆಯಂತೆ ವಾಂಗ್ಚುಕ್ ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಾಗಿದ್ದರಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೆಲ ಪ್ರತಿಭಟನಾಕಾರರು ಪೊಲೀಸರ ಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಆದರೆ, ಸಂಪೂರ್ಣ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಬಲಪ್ರಯೋಗದ ಆರೋಪ

ಇನ್ನೊಂದೆಡೆ, ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆಯ ಮುಖಂಡರು ಪೊಲೀಸರ ಕ್ರಮವನ್ನು ಟೀಕಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಲಾಗಿದೆ. ಲಾಠಿ ಚಾರ್ಜ್ ಮಾಡಲಾಗಿದೆ ಮತ್ತು ವಾಂಗ್ಚುಕ್ ಅವರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಲಾಠಿ ಚಾರ್ಜ್ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದೇಕೆ?

ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಜೂನ್ 20ರಿಂದ ಪ್ರತಿಭಟನೆ ನಡೆಯುತ್ತಿದೆ. ಸೋನಮ್ ವಾಂಗ್ಚುಕ್ ಜೂನ್ 28 ರಿಂದ ಈ ಹೋರಾಟದಲ್ಲಿ ತೊಡಗಿಕೊಂಡಿದ್ದು, ಅಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.

ಹೋರಾಟಗಾರರ ಬೇಡಿಕೆ ಏನು?

ಪರೀಕ್ಷಾ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಇದನ್ನೂ ಓದಿ: ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?

ಉಪವಾಸದ 20ನೇ ದಿನ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ವಾಂಗ್ಚುಕ್, ತಮ್ಮ ದೇಹದ ತೂಕ ಮತ್ತು ಶಕ್ತಿ ಗಣನೀಯವಾಗಿ ಕುಸಿದಿರುವುದಾಗಿ ಹೇಳಿದ್ದರು. ಇದೇ ವೇಳೆ ಜುಲೈ 20ರಂದು ಸಂಸತ್‌ ಚಲೋ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದರು. ಜನರ ಬೆಂಬಲವೇ ಈ ಹೋರಾಟದ ನಿಜವಾದ ಶಕ್ತಿ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 am, Sat, 18 July 26

Source link

ರೋಹಿತ್-ವಿರಾಟ್ ಇಲ್ಲದೆ ಭಾರತ 2027ರ ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ! – Kannada News | Munaf Patel Backs Rohit Kohli Experience for 2027 World Cup

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಮುನ್ನಡೆಯಬೇಕಾದರೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅನುಭವ ಅತ್ಯಗತ್ಯ ಎಂದು ಟೀಮ್ ಇಂಡಿಯಾದ ಮಾಜಿ ವೇಗಿ ಮುನಾಫ್ ಪಟೇಲ್ ಬಲವಾಗಿ ಪ್ರತಿಪಾದಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇವರಿಬ್ಬರನ್ನು ಹೊರಗಿಟ್ಟು ಭಾರತ ತಂಡ ಏಕದಿನ ವಿಶ್ವಕಪ್​ ಗೆಲ್ಲುವ ಕನಸು ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.

ಮುನಾಫ್ ಪಟೇಲ್ ಪ್ರಕಾರ, ರೋಹಿತ್ ಮತ್ತು ವಿರಾಟ್ ಇಂದಿಗೂ ಜಾಗತಿಕ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳು. ಇವರಿಬ್ಬರು ಕ್ರೀಸ್‌ನಲ್ಲಿದ್ದರೆ ಎದುರಾಳಿ ತಂಡದ ಬೌಲರ್‌ಗಳು ಈಗಲೂ ಭಯಪಡುತ್ತಾರೆ. ಕಳೆದ ದಶಕದಲ್ಲಿ ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾಗಿ 55 ಕ್ಕೂ ಹೆಚ್ಚು ಶತಕಗಳನ್ನು ಸಿಡಿಸಿರುವ ಅಪರೂಪದ ದಾಖಲೆ ಹೊಂದಿದೆ.

ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳನ್ನು ಕೇವಲ ಯುವ ಆಟಗಾರರನ್ನು ಬಳಸಿ ಗೆಲ್ಲಲು ಸಾಧ್ಯವಿಲ್ಲ. ಅಲ್ಲಿ ಒತ್ತಡ ನಿಭಾಯಿಸುವ ಕಲೆ ಮುಖ್ಯವಾಗುತ್ತದೆ. ರೋಹಿತ್-ವಿರಾಟ್ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು. ಅವರಿಬ್ಬರ ಆಟ ಮುಗಿದಿದೆ ಎಂಬುದು ಕೇವಲ ಭ್ರಮೆ. ಪ್ರತಿಭೆ ಎಂಬುದು ಎಂದಿಗೂ ಮುಗಿಯದ ನಿರಂತರ ಶಕ್ತಿ ಎಂದು ಮುನಾಫ್ ಪಟೇಲ್ ಹೇಳಿದ್ದಾರೆ.

ಯುವ ಆಟಗಾರರು ಇನ್ನೂ ಸಿದ್ಧರಾಗಿಲ್ಲ!

ಸದ್ಯ ಭಾರತ ತಂಡ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಹೊಸ ಬದಲಾವಣೆಗಳನ್ನು ಕಾಣುತ್ತಿದೆ. ಆದರೆ, ಸೌತ್ ಆಫ್ರಿಕಾದ ಕಠಿಣ ಪಿಚ್‌ಗಳಲ್ಲಿ ಪೂರ್ಣ 50 ಓವರ್‌ಗಳ ಕಾಲ ಕ್ರೀಸ್ ಕಾಯ್ದು ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವಿರುವ ಯುವ ಆಟಗಾರರು ಇನ್ನೂ ಸಂಪೂರ್ಣವಾಗಿ ಸಿದ್ಧರಾಗಿಲ್ಲ. ಹೀಗಾಗಿ 2027ರ ವಿಶ್ವಕಪ್ ಗೆಲ್ಲಬೇಕಿದ್ದರೆ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅತ್ಯಗತ್ಯ. ಇವರಿಬ್ಬರನ್ನು ಬಿಟ್ಟು ಭಾರತ 2027ರ ವಿಶ್ವಕಪ್ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಮುನಾಫ್ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!

ಒಟ್ಟಾರೆಯಾಗಿ ಹೇಳುವುದಾದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೇವಲ ಆಟಗಾರರಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಭದ್ರ ಬುನಾದಿ. ಯುವ ಆಟಗಾರರ ಸರಣಿ ಯಶಸ್ಸಿನ ನಡುವೆಯೂ, ವಿಶ್ವಕಪ್‌ನಂತಹ ಜಾಗತಿಕ ವೇದಿಕೆಯ ಅತ್ಯುನ್ನತ ಒತ್ತಡವನ್ನು ನಿಭಾಯಿಸಲು ಈ ಇಬ್ಬರು ದಿಗ್ಗಜರ ಅನುಭವ ಮತ್ತು ಚಾಣಾಕ್ಷತನ ಭಾರತ ತಂಡಕ್ಕೆ ಅನಿವಾರ್ಯ ಎಂದು ಮುನಾಫ್ ಪಟೇಲ್ ಒತ್ತಿ ಹೇಳಿದ್ದಾರೆ.

Source link

ಖಾಸಗಿಯಾಗಿ ಅಭಿವೃದ್ಧಿಗೊಂಡ ಭಾರತದ ಮೊದಲ ರಾಕೆಟ್ ‘ವಿಕ್ರಮ್-1’ ಇಂದು ಉಡಾವಣೆ: ಬಾಹ್ಯಾಕಾಶಕ್ಕೆ ಹಾರಲಿವೆ ಪ್ರಧಾನಿ ಮೋದಿ ಪೋಸ್ಟ್‌ಕಾರ್ಡ್‌ – Kannada News | Skyroot Aerospace’s Vikram 1 Lifts Off from Sriharikota, Propelling India’s Space Dream

ಸ್ಕೈರೂಟ್ ಏರೋಸ್ಪೇಸ್ ಮತ್ತು ಪ್ರಧಾನಿ ಮೋದಿ

ಶ್ರೀಹರಿಕೋಟ, ಜು.18: ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲು ಸಕಲ ಸಿದ್ಧತೆಗಳು ನಡೆದಿವೆ. ದೇಶದ ಪ್ರಮುಖ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿರುವ ‘ವಿಕ್ರಮ್-1’ (Vikram-1) ರಾಕೆಟ್ ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಏನಿದು ‘ಮಿಷನ್ ಆಗಮನ್’ ಯೋಜನೆ?

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ ಸಾರಾಭಾಯ್ ಅವರ ನೆನಪಿಗಾಗಿ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ. ಭಾರತೀಯ ನೆಲದಿಂದ ಬಾಹ್ಯಾಕಾಶ ಕಕ್ಷೆಯನ್ನು ತಲುಪಲಿರುವ, ಸಂಪೂರ್ಣವಾಗಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ರಾಕೆಟ್ ಎಂಬ ಹೆಗ್ಗಳಿಕೆಗೆ ಈ ವಿಕ್ರಮ್-1 ಪಾತ್ರವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯರ ಅದ್ಭುತ ಸಾಧನೆಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸ್ಕೈರೂಟ್ ಸಂಸ್ಥೆಯು ಈ ವಿಕ್ರಮ್-1 ರಾಕೆಟ್ ಅನ್ನು ಅತ್ಯಾಧುನಿಕವಾಗಿ ತಯಾರಿಸಿದೆ. ಈ ಉಡಾವಣೆಯನ್ನು ‘ಮಿಷನ್ ಆಗಮನ್’ ಯೋಜನೆಯಡಿ ಕೈಗೊಳ್ಳಲಾಗುತ್ತಿದ್ದು, ಇದು ಪ್ರಮುಖವಾಗಿ ತಂತ್ರಜ್ಞಾನ ಪ್ರದರ್ಶನದ ಪೇಲೋಡ್‌ಗಳನ್ನು ಬಾಹ್ಯಾಕಾಶ ಕಕ್ಷೆಗೆ ಹೊತ್ತೊಯ್ಯಲಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಪ್ರಧಾನಿ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳ ಕೈಬರಹದ ಪೋಸ್ಟ್‌ಕಾರ್ಡ್:

ಈ ಬಾರಿಯ ವಿಕ್ರಮ್-1 ಉಡಾವಣೆ ಕೇವಲ ತಾಂತ್ರಿಕ ದೃಷ್ಟಿಯಿಂದಷ್ಟೇ ಅಲ್ಲದೆ, ಭಾವನಾತ್ಮಕವಾಗಿಯೂ ವಿಶೇಷತೆಗಳನ್ನು ಒಳಗೊಂಡಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುವ ವಿಶೇಷ ಉದ್ದೇಶವನ್ನು ಈ ಮಿಷನ್ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಬರಹದಲ್ಲಿ ಬರೆದ ಹಾಗೂ ‘ವಂದೇ ಮಾತರಂ’ ಎಂಬ ದೇಶಭಕ್ತಿಯ ಪದಗಳನ್ನು ಒಳಗೊಂಡಿರುವ ವಿಶೇಷ ಪೋಸ್ಟ್‌ಕಾರ್ಡ್ ಅನ್ನು ಈ ಬಾಹ್ಯಾಕಾಶ ನೌಕೆಯು ಕೊಂಡೊಯ್ಯುತ್ತಿದೆ.

ಪ್ರಧಾನಿ ಮೋದಿಯವರ ಪೋಸ್ಟ್‌ಕಾರ್ಡ್ ಜೊತೆಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಾಲಿ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಹಾಗೂ ಭಾರತದ ಹೆಮ್ಮೆಯ ಗಗನಯಾತ್ರಿಗಳು ತಮ್ಮ ಕೈಬರಹದಲ್ಲಿ ಬರೆದಿರುವ ರಹಸ್ಯ ಪೋಸ್ಟ್‌ಕಾರ್ಡ್‌ಗಳನ್ನು ಸಹ ಈ ರಾಕೆಟ್ ತನ್ನೊಂದಿಗೆ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಬಲವನ್ನು ಜಗತ್ತಿಗೆ ಸಾಬೀತುಪಡಿಸಲು ವಿಕ್ರಮ್-1 ಸಜ್ಜಾಗಿದ್ದು, ಇಡೀ ದೇಶವೇ ಇಂದಿನ ಉಡಾವಣೆಯನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದೆ.

ಇದನ್ನೂ ಓದಿ: ಇಸ್ರೋದಲ್ಲಿ ಪ್ರತಿಭಾ ಪಲಾಯನ: ಗಗನಯಾನದ ಹೊತ್ತಲ್ಲೇ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ

“ಇದು ಭಾರತದ ಬಾಹ್ಯಾಕಾಶ ಪಯಣದ ಹೊಸ ಮೈಲಿಗಲ್ಲು”: ಪ್ರಧಾನಿ ಮೋದಿ ಟ್ವೀಟ್

ಪ್ರಧಾನಿ ಮೋದಿ ಅವರು ಈ ಬಗ್ಗೆ ಎಕ್ಸ್​​​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತದ ಯುವಶಕ್ತಿ ಮತ್ತು ಬಾಹ್ಯಾಕಾಶ ಸುಧಾರಣೆಗಳನ್ನು ಶ್ಲಾಘಿಸಿದ್ದಾರೆ. “ಇದು ಭಾರತದ ಬಾಹ್ಯಾಕಾಶ ಪಯಣದ ಐತಿಹಾಸಿಕ ಹೊಸ ಗಡಿ! ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯು ಭಾರತದ ಮೊದಲ ಖಾಸಗಿ ಉಡಾವಣಾ ನೌಕೆ ವಿಕ್ರಮ್-1 ರ ಚೊಚ್ಚಲ ಆರ್ಬಿಟಲ್ ಉಡಾವಣೆಯನ್ನು ಕೈಗೊಳ್ಳುತ್ತಿದೆ. ಈ ನಾಲ್ಕು ಹಂತದ ರಾಕೆಟ್ ಅತ್ಯಂತ ವೇಗದ ಮತ್ತು ಬೇಡಿಕೆಗೆ ತಕ್ಕ ಬಾಹ್ಯಾಕಾಶ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.” “ಈ ಮಿಷನ್ ನಮ್ಮ ಯುವಕರ ಪ್ರತಿಭೆ, ದೃಢಸಂಕಲ್ಪ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ. ನಮ್ಮ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಆವಿಷ್ಕಾರ ಮತ್ತು ಉದ್ಯಮಗಳಿಗೆ ಹೇಗೆ ಹೊಸ ಅವಕಾಶಗಳನ್ನು ಮುಕ್ತಗೊಳಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಮೋದಿ ಬರೆದಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version