ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ – Kannada News | Mirzapur Fatal Accident: Truck Tire Burst Kills Three Family Members in House Crash

ಮಿರ್ಜಾಪುರ, ಜುಲೈ 16: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಿಮೆಂಟ್ ತುಂಬಿದ ಲಾರಿಯೊಂದು ಚಲಿಸುತ್ತಿರುವಾಗಲೇ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ್ದರಿಂದ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಸಿಮೆಂಟ್ ಚೀಲಗಳನ್ನು ಹೊತ್ತ ಟ್ರಕ್ ವಾರಾಣಸಿಯಿಂದ ಸೋನಭದ್ರಕ್ಕೆ ವೇಗವಾಗಿ ಪ್ರಯಾಣಿಸುತ್ತಿತ್ತು. ಮಿರ್ಜಾಪುರ ಜಿಲ್ಲೆಯ ಹೆದ್ದಾರಿ ಬಳಿ ತಲುಪುತ್ತಿದ್ದಂತೆ ಲಾರಿಯ ಒಂದು ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ದೈತ್ಯ ಟ್ರಕ್, ನೇರವಾಗಿ ರಸ್ತೆ ಪಕ್ಕದಲ್ಲಿದ್ದ ಮನೆಯೊಳಗೆ ನುಗ್ಗಿದೆ.

ಗಾಢ ನಿದ್ರೆಯಲ್ಲಿದ್ದಾಗಲೇ ನಜ್ಜುಗುಜ್ಜಾದ ಜೀವಗಳು
ಅಪಘಾತ ಸಂಭವಿಸಿದಾಗ ಮುಂಜಾನೆ ಸಮಯವಾಗಿದ್ದರಿಂದ ಮನೆಯ ಸದಸ್ಯರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ಮನೆಗೆ ಡಿಕ್ಕಿ ಹೊಡೆದ ರಭಸಕ್ಕೆ ಗೋಡೆಗಳು ಕುಸಿದು ಬಿದ್ದಿದ್ದು, ಮಲಗಿದ್ದವರ ಮೇಲೆಯೇ ಲಾರಿ ಹರಿದಿದೆ.

ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಮತ್ತು ಚಂದತಾರಾ (45) ಎಂಬುವವರು ಲಾರಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು

ಇಬ್ಬರಿಗೆ ಗಂಭೀರ ಗಾಯ: ಅಪಘಾತದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಸೆಂಟರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಡಿಯೋ

ಕ್ರೇನ್ ಮೂಲಕ ಟ್ರಕ್ ಹೊರಕ್ಕೆ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಲಾರಿ ಸಂಪೂರ್ಣವಾಗಿ ಮನೆಯೊಳಗೆ ಸಿಲುಕಿಕೊಂಡಿತ್ತು. ನಂತರ ಪೊಲೀಸರು ಭಾರಿ ಗಾತ್ರದ ಕ್ರೇನ್ ಯಂತ್ರವನ್ನು ಸ್ಥಳಕ್ಕೆ ತರಿಸಿ, ಹಾನಿಗೊಳಗಾದ ಮನೆಯ ಅವಶೇಷಗಳ ಮಧ್ಯದಿಂದ ಟ್ರಕ್ ಅನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿತನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ನಿದ್ರೆಯಲ್ಲಿದ್ದಾಗಲೇ ಮೂವರನ್ನು ಬಲಿಪಡೆದ ಈ ದುರಂತ ಸ್ಥಳೀಯರಲ್ಲಿ ಭಾರಿ ಶೋಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ! – Kannada News | ICC T20 World Cup 2028 format explained in Kannada

2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಟಿ20 ವಿಶ್ವಕಪ್​ಗೂ ಐಪಿಎಲ್ ಮಾದರಿಯ ಎಲಿಮಿನೇಟರ್ ರೌಂಡ್ ಅನ್ನು ಪರಿಚಯಿಸಲಾಗಿದೆ. ಹಾಗೆಯೇ ಈ ಹಿಂದೆ ಇದ್ದ ಸಾಂಪ್ರದಾಯಿಕ ‘ಸೂಪರ್ 8’ ಹಂತಕ್ಕೆ ಬ್ರೇಕ್ ಹಾಕಿರುವ ಐಸಿಸಿ, ಅದರ ಜಾಗದಲ್ಲಿ ಮತ್ತಷ್ಟು ರೋಮಾಂಚನಕಾರಿ ಹಾಗೂ ಕಠಿಣ ಸವಾಲಿನ ‘ಸೂಪರ್ 10’ ಹಂತವನ್ನು ಪರಿಚಯಿಸಿದೆ.

ಹೊಸ ಸಹವರ್ತಿ ರಾಷ್ಟ್ರಗಳಿಗೆ ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾಶ ಕಲ್ಪಿಸುವ ಮತ್ತು ಟೂರ್ನಿಯ ಉತ್ತರಾರ್ಧದ ಪಂದ್ಯಗಳನ್ನು ಮತ್ತಷ್ಟು ರೋಚಕಗೊಳಿಸುವ ಉದ್ದೇಶದಿಂದ ಐಸಿಸಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಟ್ಟು ಪಂದ್ಯಗಳ ಸಂಖ್ಯೆ 55 ರಷ್ಟೇ ಉಳಿದಿದ್ದರೂ, ಲೀಗ್ ಹಂತ ಮತ್ತು ನಾಕೌಟ್ ಹಂತಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಬದಲಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಂತ 1: ಗ್ರೂಪ್ ಸ್ಟೇಜ್:

  • ತಂಡಗಳ ಸಂಖ್ಯೆ:  2028ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕಳೆದ ಬಾರಿಯಂತೆ ಒಟ್ಟು 20 ತಂಡಗಳು ಭಾಗವಹಿಸಲಿವೆ.
  • ಬದಲಾವಣೆ: ಈ ಹಿಂದೆ ಇದ್ದ 5 ತಂಡಗಳ 4 ಗುಂಪುಗಳ ಬದಲಾಗಿ, ಇನ್ನು ಮುಂದೆ ತಲಾ 4 ತಂಡಗಳ 5 ಗುಂಪುಗಳನ್ನು  ಮಾಡಲಾಗುತ್ತದೆ.
  • ಪಂದ್ಯಗಳು: ಈ ಹಂತದಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ (ಹಿಂದೆ 40 ಪಂದ್ಯಗಳಿದ್ದವು).
  • ಅರ್ಹತೆ: ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 10 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡಲಿವೆ.

ಹಂತ 2:  ‘ಸೂಪರ್ 10’:

  • 2 ಗ್ರೂಪ್: ಮೊದಲ ಸುತ್ತಿನಿಂದ ಅರ್ಹತೆ ಪಡೆದ 10 ತಂಡಗಳನ್ನು ತಲಾ 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
  • ಪಂದ್ಯಗಳು: ರೌಂಡ್-ರಾಬಿನ್ ಮಾದರಿಯಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ.
  • ನೇರ ಸೆಮಿಫೈನಲ್: ಸೂಪರ್ 10 ಹಂತದ ಎರಡು ಗುಂಪುಗಳ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಹಂತ 3: ಎಲಿಮಿನೇಟರ್ ರೌಂಡ್:

  • ಎಲಿಮಿನೇಟರ್ ಪಂದ್ಯಗಳು: ಈ ಸುತ್ತಿನಲ್ಲಿ ಸೂಪರ್ 10ರ ಗ್ರೂಪ್-1 ರಲ್ಲಿ 2ನೇ ಸ್ಥಾನ ಪಡೆದ ತಂಡವು ಗ್ರೂಪ್-2ರ 3ನೇ ಸ್ಥಾನಿ ತಂಡದೊಂದಿಗೆ ಸೆಣಸಾಡಲಿದೆ. ಅದೇ ರೀತಿ ಗ್ರೂಪ್-2ರ 2ನೇ ಸ್ಥಾನಿ ತಂಡವು ಗ್ರೂಪ್-1ರ 3ನೇ ಸ್ಥಾನಿ ತಂಡದ ವಿರುದ್ಧ ಆಡಲಿದೆ.
  • ಸೆಮಿಫೈನಲ್: ಎಲಿಮಿನೇಟರ್ ಪಂದ್ಯಗಳಲ್ಲಿ ಗೆದ್ದ 2 ತಂಡಗಳು, ಈಗಾಗಲೇ ನೇರ ಅರ್ಹತೆ ಪಡೆದಿರುವ 2 ತಂಡಗಳೊಂದಿಗೆ ಸೆಮಿಫೈನಲ್‌ನಲ್ಲಿ ಕಾದಾಡಲಿವೆ.
  • ಫೈನಲ್ ಪಂದ್ಯ: ಸೆಮಿಫೈನಲ್​ನಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ.

ಅಂದರೆ ಈ ಬಾರಿ ಸೂಪರ್ 10 ಹಂತದಿಂದ ಒಟ್ಟು 6 ತಂಡಗಳು ಸೆಮಿಫೈನಲ್​ ರೇಸ್‌ನಲ್ಲಿ ಉಳಿಯಲಿವೆ. ಮೊದಲಿಗೆ ಎರಡು ಗ್ರೂಪ್‌ಗಳ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟರೆ, ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳ ಮೂಲಕ ಸೆಮಿಫೈನಲ್‌ನ ಉಳಿದ 2 ಸ್ಥಾನಗಳಿಗಾಗಿ ಹೋರಾಡಲಿವೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್​ನ ನಾಕೌಟ್ ಹಂತವು ಮತ್ತಷ್ಟು ರೋಚಕವಾಗಿರಲಿದೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿ ತಂದಿರುವ ಈ ಹೊಚ್ಚ ಹೊಸ ‘ಸೂಪರ್ 10’ ಮತ್ತು ‘ಎಲಿಮಿನೇಟರ್’ ಸ್ವರೂಪವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಐಪಿಎಲ್ ಮಾದರಿಯ ಈ ನಾಕೌಟ್ ನಿಯಮದಿಂದಾಗಿ ಪ್ರತಿ ಪಂದ್ಯವೂ ಅಂತಿಮ ಓವರ್‌ನವರೆಗೂ ಕುತೂಹಲ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

Source link

TV9 Kannada News Live: ಫ್ಲ್ಯಾಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ, ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು; ಇಂದಿನ ಪ್ರಮುಖ ಸುದ್ದಿಗಳು – Kannada News | V9 Kannada Live Breaking News 16 July 2026 CM DK Shivakumar, Karnataka Politics, Dharwad News Cinema Latest Updates Online

Breaking News Today Live Updates in Kannada: ರಾಜಧಾನಿಯಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಂಭೀರ ಆರೋಪದ ಮೇಲೆ ತಾಯಿ ಹಾಗೂ ಮಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಇಂದು ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಅವರು ಹೈಕಮಾಂಡ್​​​ನ್ನು ಭೇಟಿಯಾಗಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ರಕ್ತಸಿಕ್ತ ಕ್ರಾಂತಿಗೆ ಕಾರಣವಾಗಿದೆ. ಕೇವಲ 24 ಗಂಟೆಗಳಲ್ಲಿ ಇರಾನ್ ಮೇಲೆ 3ನೇ ಬಾರಿಗೆ ಭೀಕರ ವಾಯುದಾಳಿ ನಡೆಸಿರುವ ಅಮೆರಿಕ ಪಡೆಗಳು, ಇರಾನ್ ಬಂದರುಗಳಿಗೆ ಕಠಿಣ ನೌಕಾ ದಿಗ್ಬಂಧನ ವಿಧಿಸಿವೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ ನೋಡಿ

Source link

ಚಿಕ್ಕಮಗಳೂರು: ಹಣಕ್ಕಾಗಿ‌ 20 ವರ್ಷದ ಮಗಳನ್ನೇ ಪಶ್ಚಿಮ ಆಫ್ರಿಕಾದಲ್ಲಿ ಮಾರಾಟ ಮಾಡಿದ ಪೋಷಕರು! – Kannada News | Chikkamagaluru Girl Allegedly Sold in Senegal: Hakki Pikki Tribal Association Files Complaint with SP

ಮಗಳನ್ನೇ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ತಾಯಿ ಕ್ರಾಂತಿ (ಎಡ ಚಿತ್ರ) ಹಾಗೂ ಹಕ್ಕಿಪಿಕ್ಕಿ ಬುಡಕಟ್ಟು ಸಂಘದ ಪತ್ರದ ಪ್ರತಿImage Credit source: tv9

ಚಿಕ್ಕಮಗಳೂರು, ಜುಲೈ 16: ಚಿಕ್ಕಮಗಳೂರು (Chikmagalur) ಜಿಲ್ಲೆಯ ಹಕ್ಕಿಪಿಕ್ಕಿ ಕಾಲೋನಿಯ ಯುವತಿಯೊಬ್ಬಳನ್ನು ಹಣಕ್ಕಾಗಿ ಪೋಷಕರೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ಅವರ ಪುತ್ರಿ ನಂದಿತಾ (20) ನಾಲ್ಕು ತಿಂಗಳ ಹಿಂದೆ ಕುಟುಂಬದೊಂದಿಗೆ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿದ್ದರು.

7 ಲಕ್ಷ ರೂ.ಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ!

ಸುಮಾರು 10 ದಿನಗಳ ಹಿಂದೆ ನಂದಿತಾಳನ್ನು 7 ಲಕ್ಷ ರೂಪಾಯಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ನಂದಿತಾ ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿ, ತನ್ನನ್ನು ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಳು ಎನ್ನಲಾಗಿದೆ. ನಡೆದಿರುವ ಅನ್ಯಾಯವನ್ನು ವಿವರಿಸಿ ವಿಡಿಯೋ ಸಂದೇಶವನ್ನೂ ರವಾನಿಸಿದ್ದಳು ಎಂದು ಮೂಲಗಳು ತಿಳಿಸಿವೆ.

ರಾಯಭಾರ ಕಚೇರಿ ನೆರವಿನಿಂದ ಯುವತಿಯ ರಕ್ಷಣೆ

ಈ ಮಾಹಿತಿ ಭಾರತೀಯ ರಾಯಭಾರ ಕಚೇರಿ (Indian Embassy) ಗಮನಕ್ಕೆ ಬಂದ ಬಳಿಕ, ಸ್ಥಳೀಯರ ಸಹಕಾರ ಮತ್ತು ಸೆನೆಗಲ್ ಪೊಲೀಸರ ನೆರವಿನಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ, ಮಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಿ ಪೋಷಕರು ಸಂಬಂಧಿಕರಿಗೆ ಬೇರೆ ಕಥೆ ಹೇಳಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಯುವತಿಯ ರಕ್ಷಣೆಯಾದ ವಿಷಯ ತಿಳಿದ ಬಳಿಕ ಪೋಷಕರು ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ.

ಹಕ್ಕಿಪಿಕ್ಕಿ ಬುಡಕಟ್ಟು ಸಂಘದದಿಂದ ಎಸ್​ಪಿಗೆ ಪತ್ರ

ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜುಲೈ 15ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಗಿಡಮೂಲಿಕೆ ವ್ಯಾಪಾರದ ಹೆಸರಿನಲ್ಲಿ ಕ್ರಾಂತಿ ಹಾಗೂ ರಾಜಶೇಖರ್ ತಮ್ಮ ಮಗಳನ್ನು ಆಫ್ರಿಕಾದ ಸೆನೆಗಲ್ ದೇಶದಲ್ಲಿ ಮಾರಾಟ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದ್ದು, ಈ ಘಟನೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಕಪ್ಪು ಚುಕ್ಕೆ. ಸಮಾಜದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಸಂಘ ಹೇಳಿದೆ. ಇಂತಹ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ

ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಹೊರತಂದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಘವು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೊಡ್ಡ ಹಾಲಿವುಡ್​​ ಸಿನಿಮಾ ಅವಕಾಶ ಕಳೆದುಕೊಂಡ ಫಹಾದ್ ಫಾಸಿಲ್ – Kannada News | Fahad Fazil got chance to act with Tom Cruise in Digger movie

ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ (Hollywood) ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಹಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆಯ ದೊಡ್ಡ ಸಿನಿಮಾಗಳಲ್ಲಿ ನಟಿಸಿರುವುದು ಬೆರಳೆಣಿಕೆಯ ನಟರಷ್ಟೆ. ಇರ್ಫಾನ್ ಖಾನ್, ನಸಿರುದ್ದೀನ್ ಶಾ, ದೀಪಿಕಾ ಪಡುಕೋಣೆ ಇನ್ನೂ ಕೆಲವರಷ್ಟೆ ಹಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆಗಳು, ಹೆಸರಾಂತ ನಟರುಗಳು ಹಾಗೂ ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ್ದಾರೆ. ಇಂಥಹದ್ದೇ ಒಂದು ದೊಡ್ಡ ಹಾಲಿವುಡ್ ಸಿನಿಮಾನಲ್ಲಿ ನಟಿಸುವ ಅವಕಾಶ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಅವರಿಗೆ ದೊರಕಿತ್ತು, ಆದರೆ ಅವರೇ ಖುದ್ದು ಅದನ್ನು ಕೈಚೆಲ್ಲಿದ್ದಾರೆ.

ಟಾಮ್ ಕ್ರೂಸ್, ವಿಶ್ವ ಚಿತ್ರರಂಗದ ಟಾಪ್ ಸೂಪರ್ ಸ್ಟಾರ್. ಅವರ ಹೊಸ ಸಿನಿಮಾನಲ್ಲಿ ನಟಿಸುವ ಅವಕಾಶ ಫಹಾದ್ ಫಾಸಿಲ್ ಅವರಿಗಿತ್ತು. ವಿಶ್ವ ಶ್ರೇಷ್ಟ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರಾದ ಅಲೆಕ್ಸಾಂಡ್ರೊ ಗೊಂಜಾಲೆಸ್ ಇನ್ಯಾರಿತೊ ನಿರ್ದೇಶನ ಮಾಡಿರುವ ‘ಡಿಗ್ಗರ್’ ಸಿನಿಮಾದ ಪ್ರಮುಖವಾದ ಪಾತ್ರವೊಂದಕ್ಕೆ ಫಹಾದ್ ಫಾಸಿಲ್ ಅವರನ್ನು ಕೇಳಲಾಗಿತ್ತಂತೆ. ಖುದ್ದು ಆಸ್ಕರ್ ವಿಜೇತ ನಿರ್ದೇಶಕ ಅಲೆಕ್ಸಾಂಡ್ರೊ ಗೊಂಜಾಲೆಸ್ ಇನ್ಯಾರಿತೊ ಅವರೊಟ್ಟಿಗೆ ಫೋನಿನಲ್ಲಿ ಫಹಾದ್ ಮಾತನಾಡಿದರಂತೆ. ವಿಡಿಯೋ ಕಾಲ್ ಮೂಲಕ ಆಡಿಷನ್ ಸಹ ನೀಡಿದರಂತೆ.

ಫಹಾದ್ ಅವರ ನಟನೆ ಇಷ್ಟವಾಯ್ತಾದರೂ ಅವರ ಧ್ವನಿ, ಡೈಲಾಗ್ ಹೇಳುವ ರೀತಿ, ಆಕ್ಸೆಂಟ್ ಅಲೆಕ್ಸಾಂಡ್ರೊಗೆ ಇಷ್ಟವಾಗಲಿಲ್ಲವಂತೆ. ಅಮೆರಿಕಕ್ಕೆ ಬಂದು ಇಲ್ಲಿ ತರಬೇತಿ ತೆಗೆದುಕೊಳ್ಳುವಂತೆ ಫಹಾದ್ ಅವರಿಗೆ ಹೇಳಲಾಯ್ತಂತೆ. ಫಹಾದ್ ಸಹ ಸರಿ ಎಂದುಕೊಂಡರಂತೆ. ಆದರೆ ಆ ತರಬೇತಿ ಸೆಷನ್​​ನ ಸಂಪೂರ್ಣ ಖರ್ಚು ಫಹಾದ್ ಅವರೇ ನೋಡಿಕೊಳ್ಳಬೇಕಿತ್ತಂತೆ. ಅಲ್ಲದೆ, ನಾಲ್ಕು ತಿಂಗಳು ಭಾರತದಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳನ್ನು ಬಿಟ್ಟು ಅಮೆರಿಕಕ್ಕೆ ಹೋಗಿ ತರಬೇತಿ ಪಡೆಯುವುದು ಆ ನಂತರ ಹಲವು ತಿಂಗಳ ಕಾಲ ಅಮೆರಿಕದಲ್ಲಿದ್ದು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವುದು ಫಹಾದ್ ಅವರಿಗೆ ಬೇಡ ಎನಿಸಿತಂತೆ. ಒಪ್ಪಿಕೊಂಡಿರುವ ಸಿನಿಮಾಗಳು ಸಹ ಸಾಕಷ್ಟಿದ್ದವಂತೆ ಹಾಗಾಗಿ ಫಹಾದ್ ಅವರು ‘ಡಿಗ್ಗರ್’ ಸಿನಿಮಾ ಅವಕಾಶ ಕೈಬಿಟ್ಟಿರಂತೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

ಅಂದಹಾಗೆ ಫಹಾದ್ ಅವರು ಕೈಬಿಟ್ಟ ಪಾತ್ರ ರಿಜ್ ಅಹ್ಮದ್ ಕೈ ಸೇರಿದೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ಗಣೇಶ್. ಅಪ್ಪಟ ಭಾರತೀಯನ ಪಾತ್ರ ಅದು. ನಾಯಕ ಟಾಮ್ ಕ್ರೂಸ್ ಅವರ ಜೊತೆಗೇ ಇರುವ ಪಾತ್ರ ಅದಾಗಿದೆ. ಸಿನಿಮಾದ ಕತೆ ಒಬ್ಬ ಅತಿ ಶ್ರೀಮಂತ ಆಯಿಲ್ ಮೈನಿಂಗ್ ಮಾಲೀಕನ ಕುರಿತದ್ದಾಗಿದೆ. ಆತನ ಖಾಸಗಿ ಅಸ್ಟಿಂಟ್ ಪಾತ್ರದಲ್ಲಿ ನಟಿಸುವ ಅವಕಾಶ ಫಹಾದ್ ಅವರದ್ದಾಗಿತ್ತು. ಈಗ ಆ ಪಾತ್ರದಲ್ಲಿ ನಟಿಸಿರುವ ರಿಜ್ ಅಹ್ಮದ್, ಪಾಕಿಸ್ತಾನ ಮೂಲಕ ಬ್ರಿಟೀಷ್ ನಟ. ನಟನೆಗೆ ಆಸ್ಕರ್ ಮತ್ತು ಎಮ್ಮಿ ಸಹ ಗಳಿಸಿಕೊಂಡಿದ್ದಾರೆ. ಅಂದಹಾಗೆ ಫಹಾದ್ ಕೈಬಿಟ್ಟ ‘ಡಿಗ್ಗರ್’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫೇಸ್​ಬುಕ್​ನಲ್ಲಿ ಸಿಕ್ಕ ಪ್ರೀತಿಗಾಗಿ ವೀಸಾ ಇಲ್ಲದೆ ಪಾಕ್​ಗೆ ಹಾರಿದ್ದ ಯುಪಿ ಯುವಕ, ಹೋದ್ಮೇಲೆ ನೀನ್ಯಾರು ಅಂದ್ಲು, ಆತ ಜೈಲು ಪಾಲು – Kannada News | UP Man Jailed in Pak for Facebook Love: Illegal Border Crossing Nightmare

ಅಲಿಗಢ,ಜುಲೈ 16: ಪ್ರೀತಿ(Love) ಕುರುಡು  ಅಂತಾರೆ, ಆದರೆ ಆ ಪ್ರೀತಿಯ ಹುಚ್ಚು ದೇಶದ ಗಡಿಗಳನ್ನೂ ಮೀರಿ ಜೈಲಿನ ಕತ್ತಲ ಕೋಣೆಗೆ ತಳ್ಳಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಅಲಿಗಢದ ವ್ಯಕ್ತಿಯೊಬ್ಬರ ಕಥೆಯೇ ಸಾಕ್ಷಿ. ಫೇಸ್​ಬುಕ್​ನಲ್ಲಿ ಪರಿಚಯವಾದ ಪಾಕಿಸ್ತಾನಿ ಪ್ರೇಯಸಿಯನ್ನು ಹುಡುಕಿಕೊಂಡು ವೀಸಾ ಇಲ್ಲದೆಯೇ ಅಕ್ರಮವಾಗಿ ಗಡಿ ದಾಟಿದ್ದ ಭಾರತೀಯ ಟೈಲರ್ ಬಾದಲ್ ಬಾಬು, ಸದ್ಯ ಲಾಹೋರ್​ನ ಕೋಟ್​ ಲಖ್​ಪತ್ ಜೈಲಿನಲ್ಲಿದ್ದಾರೆ.

ವಿಶೇಷವೆಂದರೆ, ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯ ಅವಧಿ ಈಗಾಗಲೇ ಪೂರ್ಣಗೊಂಡಿದ್ದರೂ ಸಹ, ಉಭಯ ದೇಶಗಳ ನಡುವಿನ ಅಧಿಕೃತ ‘ಸ್ವದೇಶ ವಾಪಸಾತಿ’ ಪ್ರಕ್ರಿಯೆಯ ವಿಳಂಬದಿಂದಾಗಿ ಅವರು ಇಂದಿಗೂ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ.

ಫೇಸ್‌ಬುಕ್ ಸ್ನೇಹ ಪ್ರೇಮವಾಗಿ ಬದಲಾದ ಕಥೆ
ದೆಹಲಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಬಾದಲ್ ಬಾಬು ಅವರಿಗೆ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಸನಾ ಎಂಬ ಮಹಿಳೆಯ ಪರಿಚಯವಾಗಿತ್ತು. ಆನ್‌ಲೈನ್ ಸ್ನೇಹ ಕ್ರಮೇಣ ಗಾಢ ಪ್ರೇಮಕ್ಕೆ ತಿರುಗಿತ್ತು. ಪ್ರೇಯಸಿಯನ್ನು ನೋಡಲೇಬೇಕೆಂಬ ಹಠಕ್ಕೆ ಬಿದ್ದ ಬಾದಲ್, 2024 ರ ಆಗಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ಹೋಗಲು ಮೊದಲ ಬಾರಿಗೆ ಯತ್ನಿಸಿ ವಿಫಲರಾಗಿದ್ದರು.

ಆದರೆ ಪಟ್ಟುಬಿಡದೆ, ಅಕ್ಟೋಬರ್ 15, 2024 ರಂದು ಮನೆಯಲ್ಲಿದ್ದ ತನ್ನ ಎಲ್ಲಾ ಅಧಿಕೃತ ದಾಖಲೆಗಳನ್ನು ಇಲ್ಲೇ ಬಿಟ್ಟು, ಯಾವುದೇ ವೀಸಾ ಇಲ್ಲದೆ ರಹಸ್ಯವಾಗಿ ಭಾರತ-ಪಾಕಿಸ್ತಾನ ಗಡಿ ದಾಟಿ ಪಾಕಿಸ್ತಾನ ತಲುಪುವಲ್ಲಿ ಯಶಸ್ವಿಯಾಗಿದ್ದರು.

ಪ್ರೇಯಸಿ ಕೈಕೊಟ್ಟಳು, ಮೇಕೆ ಮೇಯಿಸುವಾಗ ಸಿಕ್ಕಿಬಿದ್ದ ಪ್ರೇಮಿ
ಪಾಕಿಸ್ತಾನ ತಲುಪಿದ ಬಾದಲ್‌ಗೆ ಅಲ್ಲಿ ಕಹಿ ಸತ್ಯ ಎದುರಾಯಿತು. ಸನಾ ಆತನನ್ನು ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಭಗ್ನಪ್ರೇಮಿಯಾದ ಬಾದಲ್ ಮರಳಿ ಭಾರತಕ್ಕೆ ಬಾರದೆ, ಪಾಕಿಸ್ತಾನದಲ್ಲೇ ಉಳಿದುಕೊಂಡು ಸ್ಥಳೀಯ ಉದ್ಯೋಗದಾತರೊಬ್ಬರ ಬಳಿ ಮೇಕೆ ಮೇಯಿಸುವ ಕೆಲಸಕ್ಕೆ ಸೇರಿಕೊಂಡರು.

ಮತ್ತಷ್ಟು ಓದಿ: ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್‌ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು ಸಿಗಲಿದ್ದಾರೆ ಲೈಫ್ ಪಾರ್ಟ್ನರ್

ಈ ಘಟನೆ ನಡೆದಿದ್ದು ಹೇಗೆ?: 2024ರ ಡಿಸೆಂಬರ್ 27 ರಂದು ಮೇಕೆ ಮೇಯಿಸುತ್ತಿದ್ದಾಗ ಬಾದಲ್ ಮಾತನಾಡುತ್ತಿದ್ದ ಹಿಂದೆ ಅಲ್ಲದ ಭಾರತೀಯ ಉಪಭಾಷೆಯನ್ನು ಕೇಳಿ ಸ್ಥಳೀಯರಿಗೆ ಅನುಮಾನ ಬಂದಿತು. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಕ್ರಮ ನುಸುಳುವಿಕೆಯ ಆರೋಪದ ಮೇಲೆ ಪಾಕ್ ಪೊಲೀಸರು ಬಾದಲ್‌ನನ್ನು ಬಂಧಿಸಿ ಜೈಲಿಗಟ್ಟಿದರು.

ಮಗನ ತಾಯ್ನಾಡಿಗೆ ಕರೆತರಲು ಕುಟುಂಬದ ಕಣ್ಣೀರು
ಸುಮಾರು 20 ತಿಂಗಳುಗಳಿಂದ ಮಗ ಜೈಲಿನಲ್ಲಿರುವುದನ್ನು ಕಂಡು ಅಲಿಗಢದಲ್ಲಿರುವ ಬಾದಲ್ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸುತ್ತಿದ್ದಾರೆ.

ರಾಜತಾಂತ್ರಿಕ ಪ್ರಯತ್ನ: ಅಲಿಗಢದ ಸ್ಥಳೀಯ ಆಡಳಿತವು ಬಾದಲ್‌ನ ಪೌರತ್ವದ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಿ ಸಚಿವಾಲಯಕ್ಕೆ ಕಳುಹಿಸಿದೆ. ಸ್ಥಳೀಯ ಸಂಸದ ಸತೀಶ್ ಗೌತಮ್ ಅವರು ಕೂಡ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಶೀಘ್ರ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ನೆರವು: ಲಂಡನ್‌ನಲ್ಲಿರುವ ಭಾರತೀಯ ಮೂಲದ ಮಹಿಳಾ ವಕೀಲರೊಬ್ಬರು ಮಾನವೀಯತೆಯ ಆಧಾರದ ಮೇಲೆ ಪಾಕಿಸ್ತಾನದಲ್ಲಿರುವ ಬಾದಲ್‌ನ ಕಾನೂನು ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ, ಆತನ ಬಿಡುಗಡೆಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಪ್ರೇಮ ಮತ್ತು ಗಡಿ ದಾಟುವ ಕ್ರೇಜ್
ಇತ್ತೀಚಿನ ವರ್ಷಗಳಲ್ಲಿ ಫೇಸ್‌ಬುಕ್, ಪಬ್‌ಜಿ (PUBG) ಅಥವಾ ಇನ್‌ಸ್ಟಾಗ್ರಾಮ್ ಪ್ರೇಮಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ವೀಸಾ ಇಲ್ಲದೆ ಗಡಿ ದಾಟುವ ಪ್ರಕರಣಗಳು ಭಾರಿ ಹೆಚ್ಚಾಗುತ್ತಿವೆ.

ಸೀಮಾ ಹೈದರ್ ಮತ್ತು ಅಂಜು ಪ್ರಕರಣ: ಪಾಕಿಸ್ತಾನದ ಸೀಮಾ ಹೈದರ್ ತನ್ನ ನಾಲಕ್ಕು ಮಕ್ಕಳೊಂದಿಗೆ ಭಾರತದ ಸಚಿನ್‌ನನ್ನು ಹುಡುಕಿಕೊಂಡು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದರೆ, ಭಾರತದ ಅಂಜು ಎಂಬಾಕೆ ತನ್ನ ಫೇಸ್‌ಬುಕ್ ಪ್ರೇಮಿ ನಸ್ರುಲ್ಲಾನನ್ನು ಮದುವೆಯಾಗಲು ಅಧಿಕೃತ ವೀಸಾ ಮೂಲಕ ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.

ಇಂತಹ ಪ್ರೇಮ ಕಥೆಗಳು ಕೇಳಲು ರೋಮಾಂಚನಕಾರಿಯಾಗಿದ್ದರೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕಡುವೈರತ್ವ ಹಾಗೂ ರಾಷ್ಟ್ರೀಯ ಭದ್ರತೆಯ ಕಾರಣಗಳಿಂದಾಗಿ ವೀಸಾ ರಹಿತ ನುಸುಳುವಿಕೆಯನ್ನು ಉಭಯ ದೇಶಗಳ ಭದ್ರತಾ ಸಂಸ್ಥೆಗಳು ಬೇಹುಗಾರಿಕೆ ಎಂದೇ ಪರಿಗಣಿಸುತ್ತವೆ. ಹೀಗಾಗಿ ಅತಿರೇಕದ ಪ್ರೇಮದ ಭರದಲ್ಲಿ ಯುವಕರು ಇಂತಹ ಸಾಹಸಕ್ಕೆ ಕೈಹಾಕಿ ತಮ್ಮ ಇಡೀ ಜೀವನವನ್ನು ಜೈಲಿನ ಕತ್ತಲೆಯಲ್ಲಿ ಕಳೆಯುವಂತಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:05 am, Thu, 16 July 26

Source link

ಅಲ್ಲಿಂದ ನನ್ನ ಕೆಟ್ಟ ಟೈಮ್ ಶುರುವಾಗಿತ್ತು; ದ್ವಾರಕೀಶ್ ಹೇಳಿದ್ದ ಬೇಸರದ ಮಾತಿದು

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಹಿರಿಯ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರು, ಸಿನಿಮಾ ಮೇಲಿನ ಅತಿಯಾದ ಹುಚ್ಚು ಮತ್ತು ಕೆಲವು ಆತುರದ ತಪ್ಪು ನಿರ್ಧಾರಗಳಿಂದ ತಮಗಾದ ಆರ್ಥಿಕ ಕುಸಿತದ ಬಗ್ಗೆ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದರು. 1988ರವರೆಗೆ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದ ತಮಗೆ, ಇಂಗ್ಲಿಷ್ ಸಿನಿಮಾಗಳ ಪ್ರಭಾವದಿಂದಾಗಿ ಮೂಡಿದ ಹೊಸ ಸಾಹಸದ ಆಸೆಯೇ ಮುಂದೆ ದೊಡ್ಡ ಹಿನ್ನಡೆಗೆ ಕಾರಣವಾಯಿತು ಎಂದು ಅವರು ಒಪ್ಪಿಕೊಂಡಿದ್ದರು. ಈ ಬಗ್ಗೆ ಬಿ. ಗಣಪತಿ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು.

ತಮಗೆ ಆಫ್ರಿಕಾದ ಹಿನ್ನೆಲೆಯಲ್ಲಿ ಸಿನಿಮಾ ಮಾಡಬೇಕೆಂಬ ಹುಚ್ಚು ಆಸೆ ಚಿಗುರೊಡೆಯಲು ಇಂಗ್ಲಿಷ್‌ನ ‘ಫಾರೆಸ್ಟ್’ ಎಂಬ ಚಿತ್ರವೇ ಪ್ರೇರಣೆಯಾಗಿತ್ತು ಎಂದು ದ್ವಾರಕೀಶ್ ನೆನಪಿಸಿಕೊಂಡಿದ್ದರು. ತಮಗೆ ಇಂಗ್ಲಿಷ್ ಸಿನಿಮಾಗಳನ್ನು ನೋಡುವ ಹವ್ಯಾಸವಿದ್ದು, ಆ ಪ್ರಭಾವದಿಂದಾಗಿ ಕೀನ್ಯಾ ಸೇರಿದಂತೆ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಅದ್ಧೂರಿ ಸಿನಿಮಾ ನಿರ್ಮಿಸುವ ಯೋಜನೆ ಹಾಕಿಕೊಂಡರು. ಆದರೆ, ಸೂಕ್ತ ಲೆಕ್ಕಾಚಾರವಿಲ್ಲದೆ ಕೇವಲ ಆಸೆಯ ಬೆನ್ನತ್ತಿ ಹೋದದ್ದು ತಮಗೆ ತಾವೇ ಮಾಡಿಕೊಂಡ ಅನ್ಯಾಯವಾಗಿ ಪರಿಣಮಿಸಿತು ಎಂದು ಅವರು ವಿಷಾದಿಸಿದ್ದರು.

ಆ ಸಮಯದಲ್ಲಿ ಹಣಕಾಸಿನ ನೆರವು ನೀಡಲು ವಿಜಯ ಬ್ಯಾಂಕ್ ಚೇರ್ಮನ್ ಸದಾನಂದ ಶೆಟ್ಟಿ ಅವರಂತಹ ದೊಡ್ಡ ದಾತರಿದ್ದರು. ಆದರೆ, ‘ಹನಿ ಹನಿ ಸೇರಿದರೆ ಹಳ್ಳ’ ಎನ್ನುವಂತೆ ಸ್ವಲ್ಪ ಸ್ವಲ್ಪವೇ ಪಡೆದ ಸಾಲ ಕೊನೆಗೆ 58 ಲಕ್ಷ ರೂಪಾಯಿಗಳ ಬೃಹತ್ ಮೊತ್ತವಾಗಿ ಬೆಳೆದು ನಿಂತಿತು. ಈ ಸಾಲವನ್ನು ತೀರಿಸಲು ದ್ವಾರಕೀಶ್ ಅವರು ತಮಿಳುನಾಡಿನ ಮದ್ರಾಸ್‌ನಲ್ಲಿದ್ದ ತಮ್ಮ ಸ್ವಂತ ಮನೆಯನ್ನೇ ಮಾರಬೇಕಾಯಿತು. ಜೊತೆಗೆ, ಇತರ ಸಿನಿಮಾಗಳಿಗೆ ಯೋಚಿಸದೆ ಫೈನಾನ್ಸ್ ಮಾಡಿ ಕೈಸುಟ್ಟುಕೊಂಡಿದ್ದರಿಂದ ಅವರ ಒಳ್ಳೆಯ ಸಮಯ ಮುಗಿದು, ಚಿತ್ರರಂಗದಲ್ಲಿ ತೆವಳಿಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಯಿಗಿತ್ತು.

ಇದನ್ನೂ ಓದಿ: ದ್ವಾರಕೀಶ್ ನಿರ್ಮಾಣದ ಸಿನಿಮಾದಲ್ಲಿ ನಟಿಸಬೇಕಿತ್ತು ವಿಷ್ಣು-ಶ್ರೀದೇವಿ; ಸಿನಿಮಾ ನಿಂತಿದ್ದೇಕೆ?

ಅಂತಿಮವಾಗಿ ಸಾಕಷ್ಟು ವೀಸಾ ಅಡೆತಡೆಗಳ ನಡುವೆ ಕೀನ್ಯಾ ಮತ್ತಿತರ ದೇಶಗಳಲ್ಲಿ ‘ಆಫ್ರಿಕಾದಲ್ಲಿ ಶೀಲಾ’ ಎಂಬ ಬಿಗ್ ಬಜೆಟ್ ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ನಿರ್ಮಿಸಿದರು. ಲಂಡನ್‌ನಲ್ಲಿ ಬಪ್ಪಿ ಲಹರಿ ಅವರ ಸಂಗೀತ ನಿರ್ದೇಶನದಲ್ಲಿ ಅದ್ಧೂರಿಯಾಗಿ ಹಾಡುಗಳ ರೆಕಾರ್ಡಿಂಗ್ ಕೂಡ ಮಾಡಿಸಲಾಗಿತ್ತು. ಆದರೆ, ನಾಯಕಿ ಸಹಿಲಾ ಚಡ್ಡಾ ತಮಗೆ ನಟನೆ ಬರುತ್ತದೆ ಎಂದು ಸುಳ್ಳು ಹೇಳಿದ್ದರಿಂದ ಮತ್ತು ಅವರ ಕಳಪೆ ನಟನೆಯಿಂದಾಗಿ ಕೋಟಿ ಕೋಟಿ ಸುರಿದು ಮಾಡಿದ ಆ ಸಾಹಸದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಸೋತುಹೋಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿರಾಟ್ ಕೊಹ್ಲಿಯೊಂದಿಗೆ ಗೌತಮ್ ‘ಗಂಭೀರ’ – Kannada News | Virat Kohli and Gambhir ‘Cold War’ Rumours Spark Amid India vs England Series

ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲವೇ? ಅದರಲ್ಲೂ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಮೂಡಿದೆಯೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಬರ್ಮಿಂಗ್​ಹ್ಯಾಮ್​ನಲ್ಲಿ ಕಂಡುಬಂದ ದೃಶ್ಯಗಳೇ ಮುಖ್ಯ ಕಾರಣ.

ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ತರಬೇತಿ ಶಿಬಿರದ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಪರಸ್ಪರ ಮಾತನಾಡದೆ ದೂರ ಉಳಿದಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹುಟ್ಟಿಕೊಂಡಿವೆ.

ನೆಟ್ಸ್‌ನಲ್ಲಿ ನಡೆದಿದ್ದೇನು?

ವರದಿಗಳ ಪ್ರಕಾರ, ಇಡೀ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಯಾವುದೇ ನೇರ ಸಂಭಾಷಣೆ ನಡೆದಿಲ್ಲ. ಕೋಚ್ ಗಂಭೀರ್ ಅವರು ನಾಯಕ ಶುಭ್​ಮನ್ ಗಿಲ್, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರೊಂದಿಗೆ ಸುದೀರ್ಘವಾಗಿ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುತ್ತಿದ್ದರು.

ಆದರೆ, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರೊಂದಿಗೆ ಮಾತ್ರ ಸುದೀರ್ಘವಾಗಿ ಮಾತನಾಡುತ್ತಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಅಲ್ಲದೆ ಬ್ಯಾಟಿಂಗ್ ಕೋಚ್ ಕೊಟಕ್ ಅವರೇ ಇಬ್ಬರ (ಕೊಹ್ಲಿ-ಗಂಭೀರ್) ನಡುವೆ ಸಂದೇಶ ರವಾನಿಸುವ ಕೊಂಡಿಯಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿವಾದದ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿ:

ಐಪಿಎಲ್ ಪಂದ್ಯಗಳ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ನಡೆದಿದ್ದ ಮೈದಾನದ ಜಗಳಗಳು ಎಲ್ಲರಿಗೂ ತಿಳಿದಿವೆ. ಇತ್ತೀಚೆಗೆ ಗಂಭೀರ್ ಕೋಚ್ ಆಗಿ ನೇಮಕಗೊಂಡಾಗ ಇಬ್ಬರೂ ಭಿನ್ನಾಭಿಪ್ರಾಯ ಮರೆತಿದ್ದಾರೆ ಎನ್ನಲಾಗಿತ್ತಾದರೂ, ಪ್ರಸ್ತುತ ಘಟನೆ ಹಳೆಯ ಕಹಿ ಘಟನೆಯನ್ನು ಮತ್ತೆ ನೆನಪಿಸಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಸತತ ಸೋಲು ಕಂಡಿರುವ ಕಾರಣ ಗಂಭೀರ್ ಸದ್ಯ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಹೀಗಾಗಿ ಏಕದಿನ ಸರಣಿ ಅವರ ಕೋಚಿಂಗ್ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾಗಿದೆ. ಇದರ ನಡುವೆ ಕೊಹ್ಲಿಯೊಂದಿಗಿನ ಮುನಿಸಿನ ವದಂತಿ ಮಹತ್ವ ಪಡೆದುಕೊಂಡಿದೆ.

ಏನೇ ವದಂತಿಗಳಿದ್ದರೂ, ನಾಯಕ ಶುಭ್​ಮನ್ ಗಿಲ್ ಅವರು 2027ರ ಏಕದಿನ ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ತಂಡದ ಪ್ರಮುಖ ಭಾಗವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಬಿಸಿಸಿಐ ಮೌನ:

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಲ್‌ಚಲ್ ಸೃಷ್ಟಿಯಾಗಿದ್ದರೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಲಿ ಅಥವಾ ಕೊಹ್ಲಿ-ಗಂಭೀರ್ ಜೋಡಿಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದೀಗ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯವಾಡಲು ಸಜ್ಜಾಗಿ ನಿಂತಿದ್ದು, ಈ ಪಂದ್ಯ ವೇಳೆಯಾದರೂ ಇಬ್ಬರು ಮುನಿಸು ಮರೆತು ಪರಸ್ಪರ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On – 8:42 am, Thu, 16 July 26

Source link

ಪಾವಗಡ – ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು – Kannada News | COVID Checkpost at Pavagada Andhra Border: Karnataka Steps Up Screening as Cases Rise in Andhra Pradesh

ತುಮಕೂರು, ಜುಲೈ 16: ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿಭಾಗದಲ್ಲಿ ಕೋವಿಡ್ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಆಂಧ್ರದಲ್ಲಿ ಈಗಾಗಲೇ ಇಬ್ಬರು ಶಂಕಿತ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಒಂಬತ್ತಕ್ಕೂ ಹೆಚ್ಚು ಜನರಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಬೆಳವಣಿಗೆ ಕರ್ನಾಟಕಕ್ಕೂ ಸೋಂಕು ಹರಡುವ ಆತಂಕವನ್ನು ಸೃಷ್ಟಿಸಿದೆ. ತುಮಕೂರು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ, ಆರೋಗ್ಯ ಅಧಿಕಾರಿಗಳು ಪಾವಗಡ ಗಡಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆಂಧ್ರದಿಂದ ಪಾವಗಡದ ಕಡೆಗೆ ಬರುವ ವಾಹನಗಳನ್ನು ತಡೆದು, ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ವಿಶೇಷವಾಗಿ ಜ್ವರದಂತಹ ಲಕ್ಷಣಗಳಿಗಾಗಿ ಪರಿಶೀಲನೆ ಮಾಡಲಾಗುತ್ತಿದೆ. ರಾಜವಂತಿಗೆ ಪ್ರವೇಶ ಮಾರ್ಗದಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈ ಸ್ಥಳವಲ್ಲದೆ ಇನ್ನೂ ಐದು ಪ್ರಮುಖ ಸ್ಥಳಗಳಲ್ಲಿಯೂ ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರಯಾಣಿಕರ ದೇಹದ ಉಷ್ಣಾಂಶವನ್ನು ಪರಿಶೀಲಿಸಿ, ಅವರ ಆರೋಗ್ಯ ಸ್ಥಿತಿ ಮತ್ತು ಪ್ರಯಾಣದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜ್ವರ ಕಂಡುಬಂದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಗತ್ಯವಿದ್ದಲ್ಲಿ ಪಾವಗಡದ ಜನರಲ್ ಆಸ್ಪತ್ರೆಗೆ ರೆಫರ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ತಪಾಸಣೆ ಪ್ರಕ್ರಿಯೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಆರೋಗ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಯಮ ಹೇಳೋರು ಎಲ್ಲೋದ್ರು?: ಜಯನಗರದಲ್ಲಿ ಪೊಲೀಸರು ಸೀಜ್ ಮಾಡಿದ ವಾಹನಗಳಿಂದಲೇ ಅರ್ಧ ರಸ್ತೆ ಬ್ಲಾಕ್ – Kannada News | Jayanagar Traffic Woes: Seized Vehicles by Bengaluru Police Occupy Roads for Years

ಬೆಂಗಳೂರು, ಜು.16: ರಾಜಧಾನಿಯ ಜನರಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಮತ್ತು ರಸ್ತೆ ಬದಿ ವಾಹನ ನಿಲ್ಲಿಸದಂತೆ ದಿನವಿಡೀ ಪಾಠ ಹೇಳುವ ಟ್ರಾಫಿಕ್ ಪೊಲೀಸರೇ ಈಗ ನಿಯಮ ಉಲ್ಲಂಘಿಸುತ್ತಿದ್ದಾರಾ? ಇಂತಹದ್ದೊಂದು ಗಂಭೀರ ಪ್ರಶ್ನೆ ಈಗ ಸಿಲಿಕಾನ್ ಸಿಟಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಜಯನಗರದ ಪ್ರಮುಖ ರಸ್ತೆಯೊಂದರ ಬದಿಯಲ್ಲೇ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಸೀಜ್ ಮಾಡಿರುವ ವಾಹನಗಳು ವರ್ಷಗಳಿಂದ ಧೂಳು ಹಿಡಿದು ನಿಂತಿದ್ದು, ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ದೃಶ್ಯ ಜಯನಗರದ ಪ್ರಮುಖ ರಸ್ತೆಯಲ್ಲಿ ಕಂಡು ಬಂದಿದೆ. ಇಲ್ಲಿ ಸಾಲು ಸಾಲಾಗಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸಾಮಾನ್ಯ ಸವಾರರ ವಾಹನಗಳಲ್ಲ. ಬದಲಾಗಿ ಪೊಲೀಸರು ವಿವಿಧ ಅಪರಾಧ ಹಾಗೂ ಅಪಘಾತ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ (ಸೀಜ್) ವಾಹನಗಳು. ಈ ವಾಹನಗಳು ಕಳೆದ ಕೆಲವು ತಿಂಗಳುಗಳಲ್ಲ, ಬರೋಬ್ಬರಿ ವರ್ಷಗಳಿಂದ ಇದೇ ರಸ್ತೆ ಬದಿಯಲ್ಲಿ ಧೂಳು ಹಿಡಿದು, ತುಕ್ಕು ಹಿಡಿದು ನಿಂತಿವೆ.

ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ಈ ವಾಹನಗಳಿಂದಾಗಿ ಅರ್ಧ ರಸ್ತೆಯೇ ಮುಚ್ಚಿ ಹೋಗಿದೆ. ಇದರ ಪರಿಣಾಮವಾಗಿ ಈ ಭಾಗದಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬೆಂಗಳೂರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ಅನಾಥವಾಗಿ ಅಥವಾ ದೀರ್ಘಕಾಲ ನಿಂತಿರುವ ಸಾರ್ವಜನಿಕರ ವಾಹನಗಳನ್ನು ಗುರುತಿಸಿ, ನೋಟಿಸ್ ಸ್ಟಿಕ್ಕರ್ ಅಂಟಿಸಿ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಜಯನಗರದ ಈ ರಸ್ತೆಯಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿ ಸೀಜ್ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. “ಸಾಮಾನ್ಯ ನಾಗರಿಕರು ಗಾಡಿ ನಿಲ್ಲಿಸಿದರೆ ದಂಡ ಹಾಕುವ ಪೊಲೀಸರು, ತಾವೇ ರಸ್ತೆ ಆಕ್ರಮಿಸಿಕೊಂಡಾಗ ಮೌನ ವಹಿಸುವುದು ಎಷ್ಟು ಸರಿ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು,” ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

“ರಸ್ತೆ ನಿಯಮ ಪಾಲನೆ ಬಗ್ಗೆ ಜನರಿಗೆ ಪಾಠ ಹೇಳುವ ಇಲಾಖೆಗಳು ಮೊದಲು ತಮ್ಮ ಆವರಣ ಹಾಗೂ ತಮ್ಮ ವಶದಲ್ಲಿರುವ ವಾಹನಗಳ ಸೂಕ್ತ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಇಲಾಖೆಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯ ಎನ್ನುವ ತಾರತಮ್ಯ ನಿಲ್ಲಬೇಕು.” ಎಂದು ಸ್ಥಳೀಯ ನಿವಾಸಿ ಜಯಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಅತ್ಯುತ್ತಮ ವಾಯು ಗುಣಮಟ್ಟ: ಬೆಂಗಳೂರಿನ ಹಲವೆಡೆ ‘ಗ್ರೀನ್ ಜೋನ್’

ಒಟ್ಟಿನಲ್ಲಿ, ಜನರ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿರುವ ಈ ಸೀಜ್ ವಾಹನಗಳನ್ನು ಪೊಲೀಸ್ ಇಲಾಖೆಯು ತಕ್ಷಣವೇ ತೆರವುಗೊಳಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಮುಕ್ತಗೊಳಿಸುತ್ತಾ? ಅಥವಾ ತನ್ನದೇ ಇಲಾಖೆಯ ಉಲ್ಲಂಘನೆಯನ್ನು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version