ಜನಪದಕ್ಕೆ ಬೆರೆತ ರ್ಯಾಪ್, ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಕೇಳಿದಿರಾ? – Kannada News | New song released from City Lights Kannada movie

ವಿಜಯ್ ಕುಮಾರ್ (ದುನಿಯಾ ವಿಜಯ್) (Duniya Viji) ನಿರ್ದೇಶಿಸಿ, ದೊಡ್ಮನೆ ಕುಡಿ ವಿನಯ್ ರಾಜ್​​ಕುಮಾರ್ (Vinay Rajkumar) ನಾಯಕನಾಗಿ ನಟಿಸುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಸಿನಿಮಾದ ಹಾಡುಗಳು ವಿಭಿನ್ನವಾಗಿರುತ್ತವೆ, ಈ ಹಿಂದೆ ಅವರು ನಿರ್ದೇಶಿಸಿದ್ದ ‘ಭೀಮ’ ಮತ್ತು ‘ಸಲಗ’ ಸಿನಿಮಾಗಳಲ್ಲಿ ಹಾಡುಗಳು ಸಖತ್ ಹಿಟ್ ಆಗಿದ್ದವು. ಇದೀಗ ಅವರ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಹಾಡು ಅವರ ಹಿಂದಿನ ಸಿನಿಮಾ ಹಾಡುಗಳಿಗಿಂತಲೂ ಬಹಳ ಭಿನ್ನವಾಗಿದ್ದು, ಜನಪದ ಹಾಡಿಗೆ ರ್ಯಾಪ್ ಟಚ್ ಅನ್ನು ನೀಡಲಾಗಿದೆ.

ಮಲೆ ಮಹದೇಶ್ವರ ಸ್ವಾಮಿಯ ‘ಕೆಂಡದೋಕುಳಿ’ ಜನಪದ ಹಾಡಿಗೆ ಹೊಸತನದ ಸ್ಪರ್ಷ ನೀಡಿ ಬಿಡುಗಡೆ ಮಾಡಲಾಗಿದೆ. ತಲೆ ತಲಮಾರುಗಳಿಂದ ಹಾಡಿಕೊಂಡು ಬಂದಿರುವ ಹಾಡಿಗೆ ಆಧುನಿಕ ಇಂಗ್ಲೀಷ್ ರ್ಯಾಪ್ ಅನ್ನು ಸಹ ಸೇರಿಸಲಾಗಿದೆ. ಜನಪದ ಹಾಡುಗಾರರಿಂದಲೇ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ‘ಕೆಂಡದೋಕುಳಿ’ ಹಾಡನ್ನು ಹಾಡಿಸಿರುವುದು ಮಾತ್ರವಲ್ಲದೆ, ಹಾಡಿಗೆ ಜನಪದ ವಾದ್ಯಗಳ ಜೊತೆಗೆ ಆಧುನಿಕ ವಾದ್ಯಗಳನ್ನು ಸಹ ಹಿನ್ನೆಲೆಯಲ್ಲಿ ಬಳಸಿದ್ದಾರೆ. ಈ ಹಾಡು ಮಾದೇಶ್ವರನ ಭಕ್ತರ ಜೊತೆಗೆ ಹೊಸ ತಲೆಮಾರಿನ ಜೆನ್​-ಜಿಗಳಿಗೂ ಹಿಡಿಸುವಂತಿದೆ.

ಈಗ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ, ‘ಸಿಟಿ ಲೈಟ್ಸ್’ ಸಿನಿಮಾದ ಮಾಸ್ ದೃಶ್ಯಗಳ ಚಿತ್ರೀಕರಣದ ತುಣುಕುಗಳನ್ನು ನೀಡಲಾಗಿದೆ. ನಿರ್ದೇಶಕ ದುನಿಯಾ ವಿಜಯ್ ಅವರು ಪ್ಯಾಷನೇಟ್ ಆಗಿ, ನಾಯಕ ವಿನಯ್ ಅವರಿಗೆ ನಟಿಸಿ ತೋರಿಸುತ್ತಿರು, ಆಕ್ಷನ್ ಮಾಡಿ ತೋರಿಸುತ್ತಿರುವ ದೃಶ್ಯಗಳು ಇವೆ. ಸಿನಿಮಾನಲ್ಲಿ ಆಕ್ಷನ್ ಯಾವ ರೀತಿ ಇರಲಿದೆ, ಮತ್ತು ವಿನಯ್ ಅವರು ವಿಧೇಯರಾಗಿ ನಿರ್ದೇಶಕರ ಆದೇಶ ಪಾಲಿಸುತ್ತಿರುವುದು ಕಾಣುತ್ತಿದೆ.

‘ಸಿಟಿ ಲೈಟ್ಸ್’ ಸಿನಿಮಾ ಆಕ್ಷನ್ ಭರಿತ ಪ್ರೇಮಕತೆ ಹೊಂದಿರುವ ಸಿನಿಮಾ ಆಗಿದ್ದು, ಬೆಂಗಳೂರಿನ ನಿಜ ಮುಖಗಳ ದರ್ಶನವನ್ನು ಸಿನಿಮಾ ಮಾಡಿಸಲಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ವಿನಯ್ ರಾಜ್​​ಕುಮಾರ್, ‘ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಮುಖ್ಯ ಕಥಾವಸ್ತು, ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ಇದನ್ನೂ ಓದಿ:‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕಿ ಈಗ ಸ್ಟಾರ್ ನಟಿ

ತಮ್ಮ ಚೊಚ್ಚಲ ಅಭಿನಯದ ಕುರಿತು ಹಂಚಿಕೊಂಡ ಮೊನಿಷಾ, “ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದರು. ಅಣ್ಣಾವ್ರ ಕುಟುಂಬದ ಕುಡಿಯನ್ನ ನಿರ್ದೇಶಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ವಿಜಯ್ ಕುಮಾರ್, ‘ನಾನು ಡಾ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿಗಾಗಿ ಅವಮಾನ ಎದುರಿಸಲು ಸಿದ್ಧ; ಕಾವೇರಿ, ಮೇಕೆದಾಟು ವಿಚಾರದಲ್ಲಿ ಉದಯನಿಧಿ ವಿರುದ್ಧ ಸಿಎಂ ವಿಜಯ್ ವಾಗ್ದಾಳಿ – Kannada News | Ready To Be Humiliated For Tamil Nadu People CM Vijay hits back to Udhayanidhi Stalin Over Mekedatu

ಚೆನ್ನೈ, ಆಗಸ್ಟ್ 7: ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಬಿಸಿ ಬಿಸಿಯಾಗಿ ನಡೆಯುತ್ತಿರುವಾಗಲೇ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಮುಖ್ಯಮಂತ್ರಿ ವಿಜಯ್ (CM Joseph Vijay) ನಡುವೆ ಕಾವೇರಿ ನದಿ ನೀರಿನ ಹಕ್ಕು(Cauvery Water Dispute), ಮೇಕೆದಾಟು ಅಣೆಕಟ್ಟು (Mekedatu Dam Row) ಸಮಸ್ಯೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಕಾವೇರಿ ನೀರು ಹಂಚಿಕೆ ಹಾಗೂ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಆಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ತೀವ್ರ ವಾಗ್ದಾಳಿ ನಡೆಯಿತು. ಮೇಕೆದಾಟು ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯುವುದು ಮತ್ತು ಕರ್ನಾಟಕ ಸರ್ಕಾರದೊಂದಿಗೆ ನಡೆಸಲು ಉದ್ದೇಶಿಸಿದ್ದ ಮಾತುಕತೆಗಳ ವಿಷಯವಾಗಿ ಉಭಯ ನಾಯಕರು ಪರಸ್ಪರ ಸವಾಲು ಹಾಕಿಕೊಂಡರು.

ಕರ್ನಾಟಕದಂತೆ ತಮಿಳುನಾಡಿನಲ್ಲೂ ಸಭೆ ನಡೆಸಿ:

ವಿಧಾನಸಭೆಯಲ್ಲಿ ಮೇಕೆದಾಟು ವಿಷಯದ ಕುರಿತು ವಿಶೇಷ ಗಮನಸೆಳೆಯುವ ಸೂಚನೆ ಮಂಡಿಸಿದ ಉದಯನಿಧಿ ಸ್ಟಾಲಿನ್, ರಾಜ್ಯ ಸರ್ಕಾರವು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು. “ಕರ್ನಾಟಕ ಸರ್ಕಾರ ತನ್ನ ಹಕ್ಕುಗಳನ್ನು ಕಾಯ್ದುಕೊಳ್ಳಲು ಸತತವಾಗಿ ಸರ್ವಪಕ್ಷ ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಅವರಂತೆ ನಮ್ಮ ರಾಜ್ಯದಲ್ಲೂ ಎಲ್ಲಾ ಪಕ್ಷಗಳು ಒಂದಾಗಿ ನಿಂತು ಮೇಕೆದಾಟು ಯೋಜನೆಯನ್ನು ವಿರೋಧಿಸಬೇಕಿದೆ. ಆದರೆ ನಮ್ಮ ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಏಕೆ ಹಿಂಜರಿಯುತ್ತಿದೆ?” ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

ಕಾವೇರಿ ನೀರಿನ ವಿಷಯದಲ್ಲಿ ಸಿಎಂ ಸ್ಪಷ್ಟನೆ:

ಕಾವೇರಿ ಮತ್ತು ಮೇಕೆದಾಟು ಕುರಿತು ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿಜಯ್, “ಕಾವೇರಿ ವಿಷಯವು ತಮಿಳುನಾಡಿನ ಜೀವಾಳ ಮತ್ತು ಸೂಕ್ಷ್ಮ ವಿಷಯವಾಗಿದೆ. ನಮ್ಮ ಸರ್ಕಾರಕ್ಕೆ ಇದರ ಬಗ್ಗೆ ರಾಜಕೀಯ ಮಾಡುವ ಉದ್ದೇಶ ಅಥವಾ ಅಗತ್ಯವಿಲ್ಲ. ಮೇಕೆದಾಟು ಅಣೆಕಟ್ಟು ವಿಷಯದ ಕುರಿತು ವಿಧಾನಸಭೆಯಲ್ಲಿ ನಾವೆಲ್ಲರೂ ಅಂಗೀಕರಿಸಿದ ನಿರ್ಣಯವನ್ನು ಪ್ರಧಾನಮಂತ್ರಿಯವರಿಗೆ ಕಳುಹಿಸಿದ್ದೇವೆ. ಇದಲ್ಲದೆ, ಕೇಂದ್ರ ಜಲಶಕ್ತಿ ಸಚಿವಾಲಯದ ಮಾಹಿತಿಯನ್ನು ಅನುಸರಿಸಿ, ಮೇಕೆದಾಟು ಯೋಜನೆಗೆ ಯಾವುದೇ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ನಾವು ಮತ್ತೆ ಪ್ರಧಾನಿಗೆ ನೇರ ಪತ್ರವನ್ನು ಕಳುಹಿಸಿದ್ದೇವೆ” ಎಂದು ಹೇಳಿದರು.

ಬೆಂಗಳೂರಿಗೆ ಹೋಗಲು ಯೋಜಿಸಿದ್ದೆ:

ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಪ್ರವಾಸ ಕೈಗೊಂಡಿದ್ದರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ಕರ್ನಾಟಕ ರಾಜ್ಯದೊಂದಿಗೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಆ ಪ್ರಯತ್ನ ಮಾಡಲಾಗಿತ್ತು. ಶತ್ರು ರಾಷ್ಟ್ರಗಳೇ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಯತ್ನಿಸುತ್ತಿರುವಾಗ ನಾವೇಕೆ ಪಕ್ಕದ ರಾಜ್ಯದೊಂದಿಗೆ ಮಾತುಕತೆ ನಡೆಸಬಾರದು? ಮಾತುಕತೆಯಿಂದ ತಮಿಳುನಾಡಿನ ಜನರಿಗೆ ಒಳ್ಳೆಯದಾಗುವುದಾದರೆ, ನಾನು ಎಷ್ಟೇ ವಿರೋಧ ಅಥವಾ ಅವಮಾನಗಳನ್ನು ಎದುರಿಸಬೇಕಾಗಿ ಬಂದರೂ, ತಮಿಳುನಾಡಿನ ಜನರಿಗಾಗಿ ಆ ಅವಮಾನವನ್ನು ಸಹಿಸಿಕೊಳ್ಳಲು ಸಿದ್ಧನಿದ್ದೇನೆ” ಎಂದು ವಿಜಯ್ ಹೇಳಿದರು.

ಇದನ್ನೂ ಓದಿ: ‘ಪ್ರಧಾನಿ ಸರ್ ನೀವು ತಕ್ಷಣವೇ ಹಸ್ತಕ್ಷೇಪ ಮಾಡಿ’: ಮೇಕೆದಾಟು ಯೋಜನೆ ವಿರೋಧಿಸಿ ವಿಜಯ್ ಮೋದಿಗೆ ಪತ್ರ

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಯೋಜನೆಯು ಕರ್ನಾಟಕ ಸರ್ಕಾರವು ಬೆಂಗಳೂರು ದಕ್ಷಿಣ ಜಿಲ್ಲೆಯ (ಹಳೆಯ ರಾಮನಗರ) ಕನಕಪುರ ತಾಲೂಕಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಕುಡಿಯುವ ನೀರು ಮತ್ತು ಜಲವಿದ್ಯುತ್ ಯೋಜನೆಯಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 9,000 ಕೋಟಿ ರೂ. ಆಗಿದ್ದು (2019ರ ದರಗಳ ಪ್ರಕಾರ), ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಪ್ರಮುಖವಾಗಿ ಕುಡಿಯುವ ನೀರಿನ ಅಗತ್ಯಕ್ಕಾಗಿ ನಿರ್ಮಿಸಲಾಗುತ್ತಿದೆಯೇ ಹೊರತು ನೀರಾವರಿಗಲ್ಲ. ಇದರಿಂದ ತಮಿಳುನಾಡಿಗೆ ನಿಗದಿಯಾಗಿರುವ ಕಾವೇರಿ ನೀರಿನ ಪ್ರಮಾಣದಲ್ಲಿ ಯಾವುದೇ ಕೊರತೆಯಾಗುವುದಿಲ್ಲ ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ.

ಮೇಲ್ಭಾಗದಲ್ಲಿ ಯಾವುದೇ ಹೊಸ ಅಣೆಕಟ್ಟು ಅಥವಾ ಜಲಾಶಯ ನಿರ್ಮಿಸಿದರೆ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದ ರೈತರಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ತಮಿಳುನಾಡಿನ ಆತಂಕ. ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ತೀರ್ಪು ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ತಮಿಳುನಾಡು ಈ ಯೋಜನೆಗೆ ಸತತ ವಿರೋಧ ವ್ಯಕ್ತಪಡಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ತನಿಖೆ ಮುಕ್ತಾಯಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ – Kannada News | How NTA Subject Experts Leaked NEET Paper CBI submits chargesheet

ನವದೆಹಲಿ, ಆಗಸ್ಟ್ 7: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ಮೂವರು ವಿಷಯ ತಜ್ಞರಾದ ಪಿ.ವಿ. ಕುಲಕರ್ಣಿ (ರಸಾಯನಶಾಸ್ತ್ರ), ಮನೀಷಾ ಸಂಜಯ್ ಹವಾಲ್ದಾರ್ (ಭೌತಶಾಸ್ತ್ರ) ಮತ್ತು ಮನೀಷಾ ಗುರುನಾಥ್ ಮಾಂಧರೆ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ (NEET Paper Leak) ಮುಖ್ಯ ಮೂಲಗಳಾಗಿದ್ದರು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಾರ್ವಜನಿಕ ಪರೀಕ್ಷೆಗಳಲ್ಲಿನ ಅಕ್ರಮ ಪ್ರಕರಣಗಳ ವಿಚಾರಣೆ ನಡೆಸುವ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆಯು ಇತ್ತೀಚೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.

ಚಾರ್ಜ್‌ಶೀಟ್ ಪ್ರಕಾರ, ಎನ್‌ಟಿಎ ನೇಮಿಸಿದ ಮೂವರು ವಿಷಯ ತಜ್ಞರಾದ ಸಸ್ಯಶಾಸ್ತ್ರದ ತಜ್ಞೆ ಮನೀಷಾ ಗುರುನಾಥ್ ಮಾಂಧರೆ (A-1), ರಸಾಯನಶಾಸ್ತ್ರದ ತಜ್ಞ ಪ್ರಹ್ಲಾದ್ ವಿಠಲರಾವ್ ಕುಲಕರ್ಣಿ (A-2) ಮತ್ತು ಭೌತಶಾಸ್ತ್ರದ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ (A-3) ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು, ಗೌಪ್ಯವಾದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆಗಳನ್ನು ಕಾನೂನುಬಾಹಿರವಾಗಿ ಪಡೆದು ಪರೀಕ್ಷೆಗೆ ಮುಂಚಿತವಾಗಿ ಈ ಹಗರಣದ ಇತರೆ ಆರೋಪಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಿಬಿಐ ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024ರ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿದೆ. ಸೋರಿಕೆಯಾದ ಪ್ರಶ್ನೆಪತ್ರಿಕೆಗಳು ತಜ್ಞರಿಂದ ಕೋಚಿಂಗ್ ಸೆಂಟರ್ ನಿರ್ವಾಹಕರು ಮತ್ತು ಏಜೆಂಟರ ಮೂಲಕ ಅಂತಿಮವಾಗಿ ಅಭ್ಯರ್ಥಿಗಳನ್ನು ತಲುಪಿದ ವ್ಯವಸ್ಥೆಯನ್ನು ತನಿಖೆ ಬಹಿರಂಗಪಡಿಸಿದೆ.

ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 10 ಕೋಟಿ ರೂ. ದಂಡ, 10 ವರ್ಷ ಜೈಲು

ಇತರೆ ಆರೋಪಿಗಳಾದ ತೇಜಸ್ ಶಾ (A-4), ಶಿವರಾಜ್ ಮೋಟೇಗಾಂವ್ಕರ್ (A-5), ಡಾ. ಮನೋಜ್ ಶಿರೂರೆ (A-6), ಮನೀಷಾ ಸಂಜಯ್ ವಾಘ್ಮಾರೆ (A-7), ಧನಂಜಯ್ ಲೋಖಂಡೆ (A-8), ಶುಭಂ ಖೈರ್ನಾರ್ (A-9), ಯಶ್ ಯಾದವ್ (A-10), ಮಾಂಗಿಲಾಲ್ ಬಿವಾಲ್ (A-11), ದಿನೇಶ್ ಬಿವಾಲ್ (A-12) ಮತ್ತು ವಿಕಾಸ್ ಬಿವಾಲ್ (A-13) ಸೋರಿಕೆಯಾದ ಪ್ರಶ್ನೆಗಳನ್ನು ವಿತರಿಸುವಲ್ಲಿ ಮತ್ತು ಹಣದ ವ್ಯವಹಾರದಲ್ಲಿ ವಿಭಿನ್ನ ಪಾತ್ರಗಳನ್ನು ವಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳ ಫಾರೆನ್ಸಿಕ್ ತಪಾಸಣೆಯಿಂದ ಸೋರಿಕೆಯಾದ ನೀಟ್ ಪ್ರಶ್ನೆಗಳ ಪಿಡಿಎಫ್ (PDF) ಮತ್ತು ಇಮೇಜ್ ಫೈಲ್‌ಗಳು ಪತ್ತೆಯಾಗಿವೆ. ಈ ಫೈಲ್‌ಗಳನ್ನು ಪರೀಕ್ಷೆಗೂ ಕೆಲವು ದಿನಗಳ ಮೊದಲು ಟೆಲಿಗ್ರಾಮ್, ವಾಟ್ಸಾಪ್ ಮತ್ತು ಇತರ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಹರಡಿದ್ದು ಹೇಗೆ?:

ಆರೋಪಿ ಮಾಂಗಿಲಾಲ್ ಬಿವಾಲ್ (A-11) ಟೆಲಿಗ್ರಾಮ್ ಮೂಲಕ ಯಶ್ ಯಾದವ್ (A-10)ನಿಂದ ಸೋರಿಕೆಯಾದ ಪ್ರಶ್ನೆಗಳನ್ನು ಪಡೆದುಕೊಂಡಿದ್ದನು. ನಂತರ ಬಿವಾಲ್ ತನ್ನ 10 ಮತ್ತು 12ನೇ ತರಗತಿಯ ಮೂಲ ಪ್ರಮಾಣಪತ್ರಗಳನ್ನು ಹಾಗೂ ಸಹಿ ಮಾಡಿದ ಖಾಲಿ ಚೆಕ್ ಅನ್ನು ಭದ್ರತೆಗಾಗಿ ಯಶ್ ಯಾದವ್‌ನ ಸಹಚರನಿಗೆ ನೀಡಿದ್ದನು. ತಪಾಸಣೆಯ ವೇಳೆ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಸಿಕ್ ಮೂಲದ ಆರೋಪಿ ಶುಭಂ ಮಧುಕರ್ ಖೈರ್ನಾರ್ (A-9)ನಿಂದ ಯಶ್ ಯಾದವ್ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದನು. ಯಶ್ ಯಾದವ್ ಅವರ ಮೊಬೈಲ್ ಫೋನ್ ಫಾರೆನ್ಸಿಕ್ ತಪಾಸಣೆಯಲ್ಲಿದ್ದಾಗ AP Broker ಎಂದು ಸೇವ್ ಮಾಡಲಾಗಿದ್ದ ಖೈರ್ನಾರ್ ಜೊತೆಗಿನ ಚಾಟ್‌ಗಳು ಪತ್ತೆಯಾಗಿವೆ.

ಇದನ್ನೂ ಓದಿ: ನೀಟ್​ ಕೇಸ್ ಬಳಿಕ ಎಚ್ಚೆತ್ತ ಕೇಂದ್ರ: ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ದಿಟ್ಟ ನಿರ್ಧಾರ ಕೈಗೊಂಡ ಮೋದಿ, ಏನದು?

ಖೈರ್ನಾರ್ ಈ ಪ್ರಶ್ನೆಗಳನ್ನು ಧನಂಜಯ್ ಲೋಖಂಡೆ (A-8)ಯಿಂದ 25 ಲಕ್ಷದ ಡೀಲ್ ಮೂಲಕ ಪಡೆದುಕೊಂಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಲೋಖಂಡೆಗೆ ಈ ಪ್ರಶ್ನೆಗಳು ಮನೀಷಾ ಸಂಜಯ್ ವಾಘ್ಮಾರೆ (A-7ಯಿಂದ ಸಿಕ್ಕಿದ್ದವು.

ಆರೋಪಿ ವಾಘ್ಮಾರೆ ಎನ್‌ಟಿಎ ರಸಾಯನಶಾಸ್ತ್ರ ತಜ್ಞ ಪ್ರಹ್ಲಾದ್ ಕುಲಕರ್ಣಿ (A-2) ಜೊತೆ ಸಂಪರ್ಕದಲ್ಲಿದ್ದರು. ವಾಘ್ಮಾರೆ ಎನ್‌ಟಿಎ ತಜ್ಞರಾದ ಮನೀಷಾ ಮಾಂಧರೆ (A-1) ಮತ್ತು ಕುಲಕರ್ಣಿ (A-2) ಅವರಿಂದ ಸೋರಿಕೆಯಾದ ಬಯಾಲಜಿ ಮತ್ತು ಕೆಮಿಸ್ಟ್ರಿ ಪ್ರಶ್ನೆಗಳನ್ನು ಪಡೆದುಕೊಂಡಿದ್ದರು.

ತನಿಖೆಯ ವೇಳೆ ವಿಚಾರಣೆಗೊಳಗಾದ ಅಭ್ಯರ್ಥಿಯೊಬ್ಬರು ಮತ್ತು ಅವರ ತಂದೆ ನೀಡಿದ ಹೇಳಿಕೆಯ ಪ್ರಕಾರ 4 ಲಕ್ಷಕ್ಕೆ ನೀಟ್-ಯುಜಿ 2026 ರ ಪ್ರಶ್ನೆಗಳನ್ನು ಒದಗಿಸುವುದಾಗಿ ಮತ್ತು ಎನ್‌ಟಿಎ ವಿಷಯ ತಜ್ಞರಿಂದಲೇ ಆಫ್‌ಲೈನ್ ರಿವಿಷನ್ ಕ್ಲಾಸ್‌ಗಳನ್ನು ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು. 2025ರ ಕೊನೆಯಲ್ಲಿ ಮತ್ತು 2026ರ ಆರಂಭದಲ್ಲಿ ಈ ಸಂಚು ನಡೆದಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಾವಿದರಿಗೆ ಎಚ್ಚರಿಕೆ ನೀಡಿದ ಕಿರುತೆರೆ ನಿರ್ಮಾಪಕ ಸಂಘ, ಹೇಳಿರುವುದೇನು? – Kannada News | Karnataka Television Producers association warned against artists

ಕಿರುತೆರೆ ನಿರ್ಮಾಪಕರ (Television Producers) ಸಂಘವು ಕಲಾವಿದರಿಗೆ ಎಚ್ಚರಿಕೆ ನೀಡಿದೆ, ನಿರ್ಮಾಪಕರ ಬಗ್ಗೆ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ, ಅಗೌರವದಿಂದ ಸಾರ್ವಜನಿಕ ಹೇಳಿಕೆ ನೀಡುವ ಕಲಾವಿದರ ವಿರುದ್ಧ ಸಂಘದ ನಿಯಮಾವಳಿಗಳ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ. ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ, ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.

ಸಂಭಾವನೆ ಬಾಕಿ ಉಳಿಸಿಕೊಂಡ ನಿರ್ಮಾಪಕರ ವಿರುದ್ಧ ನಟಿ ಹಂಸಾ ಅವರು ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಉಲ್ಲೇಖಿಸಿರುವ ನಿರ್ಮಾಪಕರ ಸಂಘ, ‘ನಿರ್ಮಾಪಕರೊಬ್ಬರ ವಿರುದ್ಧ ಟಿವಿ ಮಾಧ್ಯಮಗಳಲ್ಲಿ ಕಿರುತೆರೆ ನಟಿ ಹಂಸ ಬಳಸಿದ ಭಾಷೆ ಅಸಮಂಜಸವಾಗಿದೆ. ಯಾವುದೇ ವೈಯಕ್ತಿಕ ಅಥವಾ ವೃತ್ತಿಪರ ಸಮಸ್ಯೆಗಳಿದ್ದರೂ ಅದನ್ನು ಸಂಘದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕವಾಗಿ ನಿರ್ಮಾಪಕರನ್ನು ನಿಂದಿಸುವ ಅಗತ್ಯ ಇರಲಿಲ್ಲ ಎಂದಿದೆ ಸಂಘ. ನಟ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್ ನಿರ್ಮಾಪಕರ ಬಗ್ಗೆ ಬಳಸಿರುವ ಭಾಷೆಯ ಬಗ್ಗೆಯೂ ನಿರ್ಮಾಪಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಕೆಲ ನಿರ್ಮಾಪಕರು, ಹೊಸ ಕಲಾವಿದರನ್ನು ಬಳಸಿಕೊಂಡು ಕಳಪೆ ಧಾರಾವಾಹಿ ನಿರ್ಮಿಸುತ್ತಿದ್ದಾರೆ ಎಂದು ಬರಹಗಾರ ಸುಂದರ್ ನೀಡಿರುವ ಹೇಳಿಕೆಗೆ ಉತ್ತರಿಸಿರುವ ನಿರ್ಮಾಪಕರ ಸಂಘ, ‘ಹಿರಿಯ ಕಲಾವಿದರು ಸಹ ಒಂದೊಮ್ಮೆ ಹೊಸ ಕಲಾವಿದರೇ ಆಗಿದ್ದರು. ಅವರಿಗೂ ಆಗ ನಿರ್ಮಾಪಕರು ಅವಕಾಶ ನೀಡಿದ್ದರು. ಕಾಲ ಕಾಲಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡುವುದು ನಿರ್ಮಾಪಕರ ಜವಾಬ್ದಾರಿ ಅದನ್ನೇ ಮಾಡಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ಬಟ್ಟೆ ಬದಲಿಸುವಾಗ..’; ನಿರ್ಮಾಪಕನ ಹೆಸರೂ ಹೇಳಿ ತಮಗಾದ ಕಿರುಕುಳ ವಿವರಿಸಿದ ಕಿರುತೆರೆ ನಟಿ

ನಟ ದಿಲೀಪ್ ರಾಜ್ ಸಾವಿನ ಸಂದರ್ಭದಲ್ಲಿ ಕೇಳಿ ಬಂದ ಕೆಲ ಆರೋಪಗಳಿಗೂ ಸ್ಪಷ್ಟನೆ ನೀಡಿರುವ ನಿರ್ಮಾಪಕರ ಸಂಘ, ‘ದಿಲೀಪ್ ರಾಜ್ ಸಾವಿಗೆ ವಾಹಿನಿಗಳು ನೀಡಿರುವ ಒತ್ತಡ ಕಾರಣ ಎನ್ನಲಾಗಿತ್ತು, ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಘ, ‘ಆಧಾರರಹಿತವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ತಪ್ಪು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜುಲೈನಲ್ಲಿ ಇವಿ ಮಾರಾಟದಲ್ಲಿ ಹೊಸ ದಾಖಲೆ; ಒಂದೇ ತಿಂಗಳಲ್ಲಿ 3.28 ಲಕ್ಷ ಎಲೆಕ್ಟ್ರಿಕ್ ವಾಹನಗಳು ಸೇಲ್ – Kannada News | Electric Vehicles retail sales see 66pc rise in 2026 July, with over 3 lakh units sold in 1 month

ನವದೆಹಲಿ, ಆಗಸ್ಟ್ 7: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದ್ದು, ಜುಲೈ ತಿಂಗಳ ರಿಟೇಲ್ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಒಕ್ಕೂಟ (FADA) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜುಲೈನಲ್ಲಿ ಒಟ್ಟು 3,27,901 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ (ಜುಲೈ 2025) ಮಾರಾಟಕ್ಕೆ ಹೋಲಿಸಿದರೆ ಶೇ. 66 ಕ್ಕಿಂತ ಹೆಚ್ಚು ವೃದ್ಧಿ ಕಂಡಿದೆ. ಈ ಮೂಲಕ ದೇಶದಲ್ಲಿ ಮಾರಾಟವಾದ ಪ್ರತಿ 8 ವಾಹನಗಳಲ್ಲಿ 1 ಎಲೆಕ್ಟ್ರಿಕ್ ವಾಹನವಾಗಿದೆ. ಅಂದರೆ, ಒಟ್ಟಾರೆ ಕಾರು ಮಾರಾಟದಲ್ಲಿ ಇವಿ ಪಾಲು 12.7% ಆಗಿದೆ.

ಇವಿ ವಾಹನಗಳ ಮಾರಾಟ ವಿವರ:

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (Electric Two-Wheelers) ವಿಭಾಗವು ಒಟ್ಟಾರೆಯಾಗಿ ಮೊದಲ ಬಾರಿಗೆ 2 ಲಕ್ಷದ ಗಡಿಯನ್ನು ದಾಟಿದೆ. ಜುಲೈನಲ್ಲಿ 2,04,362 ಇ-ಸ್ಕೂಟರ್/ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಇವುಗಳ ಮಾರಾಟದಲ್ಲಿ ಶೇ. 88.3 ರಷ್ಟು ಏರಿಕೆ ಕಂಡಿದೆ.

  • ಟಿವಿಎಸ್ ಮೋಟಾರ್: 55,499 ಯುನಿಟ್‌ಗಳು
  • ಬಜಾಜ್ ಆಟೋ: 45,613 ಯುನಿಟ್‌ಗಳು
  • ಏಥರ್ ಎನರ್ಜಿ: 30,357 ಯುನಿಟ್‌ಗಳು
  • ಓಲಾ ಎಲೆಕ್ಟ್ರಿಕ್: 14,106 ಯುನಿಟ್‌ಗಳು.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ

ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳ ಮಾರಾಟ ವಿವರ

ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳ ಮಾರಾಟವು ಶೇಕಡಾ 83.1 ರಷ್ಟು ಹೆಚ್ಚಾಗಿದೆ. ಒಟ್ಟು 32,928 ಯುನಿಟ್‌ಗಳು ಮಾರಾಟವಾಗಿವೆ.

  • ಟಾಟಾ ಮೋಟಾರ್ಸ್: 13,678 ಕಾರುಗಳು
  • ಮಹೀಂದ್ರಾ: 7,742 ಕಾರುಗಳು
  • JSW ಎಂಜಿ ಮೋಟಾರ್: 5,689 ಯುನಿಟ್‌ಗಳು

ತ್ರಿಚಕ್ರ ವಾಹನಗಳ ಮಾರಾಟ ವಿವರ

ಇ-ರಿಕ್ಷಾ ಮತ್ತು ಇ-ಆಟೋ ವಿಭಾಗದಲ್ಲಿ ಮಾರಾಟ ಶೇ. 25.3 ರಷ್ಟು ಹೆಚ್ಚಾಗಿದ್ದು, ಒಟ್ಟು 87,055 ಯುನಿಟ್‌ಗಳು ಮಾರಾಟವಾಗಿವೆ. ಈ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇ. 65.1 ಕ್ಕೆ ತಲುಪಿದೆ.

ವಾಣಿಜ್ಯ ವಾಹನಗಳ ಮಾರಾಟ ವಿವರ

ಇ-ವಾಣಿಜ್ಯ ವಾಹನಗಳ (ಟ್ರಕ್/ಬಸ್ – Commercial Vehicles) ಮಾರಾಟವು ಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, 3,556 ಯುನಿಟ್‌ಗಳು ದಾಖಲಾಗಿವೆ. ಅಂದರೆ, ಇದರ ಮಾರಾಟದಲ್ಲಿ ಶೇ. 181 ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

ಇವಿಗಳ ಮಾರಾಟ ಹೆಚ್ಚಳಕ್ಕೆ ಮುಖ್ಯ ಕಾರಣಗಳು

ಇಂಧನ ಬೆಲೆ ಏರಿಕೆ, E20 ಪೆಟ್ರೋಲ್ ಬಗೆಗಿನ ಗೊಂದಲ ಮೊದಲಾದ ಅಂಶಗಳು ಗ್ರಾಹಕರ ಆದ್ಯತೆಯನ್ನು ಬದಲಿಸಿರಬಹುದು. ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯುತ್ ವಾಹನ ಪ್ರೋತ್ಸಾಹ ನೀತಿಗಳು (PM E-DRIVE) ಈ ದಾಖಲೆಯ ಮಾರಾಟಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು FADA ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ – Kannada News | Kabini Dam Inflow Increased: Water Released high Alert By Mysuru district administration

ಮೈಸೂರು, (ಆಗಸ್ಟ್ 07): ಮತ್ತೆ ಕಬಿನಿ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದ್ದು, ನೀರು ಬಿಡುಗಡೆ ಬಗ್ಗೆ ನದಿ ಪಾತ್ರದವರಿಗೆ ಅಲರ್ಟ್ ನೀಡಲಾಗಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಡ್ಯಾಂನಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ 7,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ 10,000-15,000 ಕ್ಯೂಸೆಕ್‌ವರೆಗೆ ನೀರು ಹೆಚ್ಚಳ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಿಗೆ ತೆರಳದಂತೆ, ಜಾನುವಾರುಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮೈಸೂರು, ನಂಜನಗೂಡು, ಟಿ.ನರಸೀಪುರ ಸೇರಿದಂತೆ ನದಿ ತೀರದ ಜನರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದಿಂದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲೋಕಾಯುಕ್ತ ಎಡಿಜಿಪಿ-ಕುಮಾರಸ್ವಾಮಿ ರಾಜಿ ಸಂಧಾನ ವಿಫಲ: ಮತ್ತೆ ವಿಚಾರಣೆ ನಿಗದಿಪಡಿಸಿದ ಕೋರ್ಟ್ – Kannada News | Karnataka High Court Fixed Hearing on August 20 after hd kumaraswamy and lokayukta adgp chandrashekhar compromised failed

ಎಂ.ಚಂದ್ರಶೇಖರ್, ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು, (ಆಗಸ್ಟ್ 07): ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ (M ChandraShekar) ಮತ್ತು ಕೇಂದ್ರ ಸಚಿವ ಹೆಚ್​​​​ಡಿ ಕುಮಾರಸ್ವಾಮಿ (HD Kumaraswamy) ನಡುವಿನ ರಾಜಿ ಯತ್ನ ಸಂಧಾನ ವಿಫಲವಾಗಿದೆ. ಚಂದ್ರಶೇಖರ್ ದಾಖಲಿಸಿರುವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ (Karnataka High Court) ಸೂಚಿಸಿದ್ದು, ಇಬ್ಬರನ್ನು ರಾಜಿ ಮಾಡಿಸಲು ಮಧ್ಯಸ್ಥಿಕರೊಬ್ಬರನ್ನು ಸಹ ನೇಮಿಸಿತ್ತು. ಆದ್ರೆ, ಇದೀಗ ರಾಜಿ ಸಂಧಾನ ಯತ್ನ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್, ಮತ್ತೆ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಇದರೊಂದಿಗೆ ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ನಡುವಿನ ಕಾನೂನು ಹೋರಾಟ ಮುಂದುವರಿದಿದೆ.

ಎಡಿಜಿಪಿ ಎಂ.ಚಂದ್ರಶೇಖರ್ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರಾಜಿ ಸಂಧಾನದ ಮೂಲಕ ಕೇಸ್ ಇತ್ಯರ್ಥಕ್ಕೆ ಸಲಹೆ ನೀಡಿತ್ತು.  ಅಲ್ಲದೇ ಇಬ್ಬರ ನಡುವಿನ ಜಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಮಾಡಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರನ್ನು ಹೈಕೋರ್ಟ್‌ ಆಯ್ಕೆ ಮಾಡಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸಬೇಕೆಂದು ಎಡಿಜಿಪಿ ಪರ ವಕೀಲರು ವಾದ ಮಂಡನೆ ಮಾಡಿದರು. ಇದಕ್ಕೆ ಹೆಚ್‌ಡಿಕೆ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

ಪ್ರಕರಣದ ಹಿನ್ನೆಲೆ

ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್‌ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಾದ ಬಳಿಕ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಸುರೇಶ್‌ ಬಾಬು ಮಾಧ್ಯಮಗಳಲ್ಲಿ ಚಂದ್ರಶೇಖರ್‌ ತಮ್ಮ ವಿರುದ್ಧ ಕೆಲವೊಂದು ಆರೋಪ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್‌ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್‌ ಬಾಬು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 223 ಮತ್ತು 224 ಅಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸುರೇಶ್‌ ಬಾಬು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ರದ್ದು ಕೋರಿ ಕುಮಾರಸ್ವಾಮಿ ಸೇರಿ ಇತರ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಕೊಯಿಕ್ಕೋಡ್​​ ನಡುವೆ ಆ.15ರಿಂದ KSRTC ಫ್ಲೈ ಬಸ್ ಸಂಚಾರ: ಸಮಯ, ಟಿಕೆಟ್​​ ದರದ ಮಾಹಿತಿ ಇಲ್ಲಿದೆ – Kannada News | KSRTC to Launch Bengaluru Airport Kozhikode ‘FlyBus’ Service From August 15: Check Ticket Fares and Route

ಬೆಂಗಳೂರು-ಕೊಯಿಕ್ಕೋಡ್​​ ನಡುವೆ ಆ.15ರಿಂದ ಫ್ಲೈ ಬಸ್ ಸಂಚಾರ

ಬೆಂಗಳೂರು, ಆಗಸ್ಟ್​​ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು- ಕೇರಳದ ಕೊಯಿಕ್ಕೋಡ್​​ ನಡುವೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆ ಆರಂಭವಾಗುತ್ತಿದೆ. ಆಗಸ್ಟ್ 15ರಿಂದ ಈ ನೂತನ ಮಾರ್ಗದಲ್ಲಿ ಬಸ್ ಸಂಚಾರ ಶುರುವಾಗಲಿದ್ದು, ಬಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯಲಹಂಕ, ಹೆಬ್ಬಾಳ ಹಾಗೂ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಮೂಲಕ ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟಾ, ಮಾನಂತವಾಡಿ, ಕಲ್ಪಟ್ಟಾ ಮಾರ್ಗದಲ್ಲಿ ಕೋಯಿಕ್ಕೋಡ್ ತಲುಪಲಿದೆ.

ಬಸ್​​ ಮಾರ್ಗ ಮತ್ತು ಸಮಯದ ಮಾಹಿತಿ

ಬೆಂಗಳೂರು- ಕೊಯಿಕ್ಕೋಡ್ ಕೊಯಿಕ್ಕೋಡ್- ಬೆಂಗಳೂರು
ಸ್ಥಳ ಸಮಯ ಸ್ಥಳ ಸಮಯ
ಬೆಂಗಳೂರು ಏರ್​ಪೋರ್ಟ್​​ 22:45:00 ಕೊಯಿಕ್ಕೋಡ್- ಬೆಂಗಳೂರು 19:30:00
ನಾಯಂಡಳ್ಳಿ ಮೆಟ್ರೋ ನಿಲ್ದಾಣ 23:55:00 ಕಲ್ಪಟ್ಟಾ 20:40:00
ಮೈಸೂರು 02:45:00 ಮಾನಂತವಾಡಿ 21:15:00
ಗೋಣೊಕೊಪ್ಪ 04:15:00 ಗೋಣೊಕೊಪ್ಪ 22:50:00
ಮಾನಂತವಾಡಿ 05:20:00 ಮೈಸೂರು 00:30:00
ಕಲ್ಪಟ್ಟಾ 06:00:00 ನಾಯಂಡಳ್ಳಿ ಮೆಟ್ರೋ ನಿಲ್ದಾಣ 03:15:00
ಕೊಯಿಕ್ಕೋಡ್ 07:15:00 ಬೆಂಗಳೂರು ಏರ್​ಪೋರ್ಟ್​​ 04:15:00

ಇದನ್ನೂ ಓದಿ: ಜೋಗ ಜಲಪಾತ ವೀಕ್ಷಣೆಗೆ KSRTCಯಿಂದ ವೀಕೆಂಡ್ ಪ್ಯಾಕೇಜ್

ಟಿಕೆಟ್​​ ದರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ 960 ರೂ., ಗೋಣಿಕೊಪ್ಪಕ್ಕೆ 1,200 ರೂ., ಮಾನಂತವಾಡಿಗೆ 1,350ರೂ, ಕಲ್ಪೆಟ್ಟಾಗೆ 1,400 ರೂ. ಮತ್ತು ಕೊಯಿಕ್ಕೋಡ್​​ಗೆ 1,500 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:21 pm, Fri, 7 August 26

Source link

ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ: ಶಸ್ತ್ರಚಿಕಿತ್ಸೆ ಯಶಸ್ವಿ – Kannada News | Actor Mithun Chakraborty Hospitalised for Surgery in Kolkata hospital Health Update

ಹಿರಿಯ ನಟ ಹಾಗೂ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ (Mithun Chakraborty) ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ಶುಕ್ರವಾರ (ಆಗಸ್ಟ್ 7) ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಮಿಥುನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಹಿಂದಿನ ಘಟನೆಯೊಂದರಲ್ಲಿ ಅಳವಡಿಸಲಾಗಿದ್ದ ಲೋಹದ ಪ್ಲೇಟ್ ಅನ್ನು ತೆಗೆದುಹಾಕಲು ಗುರುವಾರ ಮಿಥುನ್ ಚಕ್ರವರ್ತಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ (Surgery) ಯಶಸ್ವಿಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ಆಗಿದೆ.

ಮಿಥುನ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸುವೇಂದು ಅಧಿಕಾರಿ, ‘ಪ್ರಖ್ಯಾತ ಚಲನಚಿತ್ರ ನಟ ಹಾಗೂ ಬಿಜೆಪಿ ಕೇಂದ್ರ ಸಮಿತಿ ಸದಸ್ಯ ಮಿಥುನ್ ಚಕ್ರವರ್ತಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದೆ. ಅವರು ಶೀಘ್ರ ಗುಣಮುಖರಾಗಲೆಂದು ಸರ್ವಶಕ್ತ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

2ನೇ ಬಾರಿ ಸುವೇಂದು ಅಧಿಕಾರಿ ಭೇಟಿ:

ಮಿಥುನ್ ಆಸ್ಪತ್ರೆಗೆ ದಾಖಲಾದಾಗ ಸುವೇಂದು ಅಧಿಕಾರಿ ಅವರು ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ 2024ರಲ್ಲಿ ಮಿಥುನ್ ಅವರ ಕೈಗೆ ಮೂಳೆ ಶಸ್ತ್ರಚಿಕಿತ್ಸೆ ನಡೆದಾಗಲೂ ಸುವೇಂದು ಅವರು ಭೇಟಿ ನೀಡಿದ್ದರು. ಪಶ್ಚಿಮ ಬಂಗಾಳದ ಪ್ರಮುಖ ಬಿಜೆಪಿ ನಾಯಕರಾಗಿರುವ ಮಿಥುನ್ ಚಕ್ರವರ್ತಿ ಅವರು, 2026ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ರಾಜ್ಯದಲ್ಲಿ ಸರ್ಕಾರ ರಚಿಸಿತು.

ಮಿಥುನ್ ಚಕ್ರವರ್ತಿ ಸಿನಿಮಾ ಪಯಣ:

ಐದು ದಶಕಗಳಿಗಿಂತಲೂ ಸುದೀರ್ಘವಾದ ತಮ್ಮ ಸಿನಿಮಾ ಜರ್ನಿಯಲ್ಲಿ ಮಿಥುನ್ ಚಕ್ರವರ್ತಿ ಅವರು ಪ್ರಮುಖವಾಗಿ ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೃಣಾಲ್ ಸೇನ್ ನಿರ್ದೇಶನದ ‘ಮೃಗಯಾ’ (1976) ಚಿತ್ರದ ಮೂಲಕ ನಟನೆಯನ್ನು ಆರಂಭಿಸಿದ ಅವರು, ತಮ್ಮ ಚೊಚ್ಚಲ ಅಭಿನಯಕ್ಕೇ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 1978ರ ‘ನದಿ ಥೇಕೆ ಸಾಗರೆ’ ಚಿತ್ರದ ಮೂಲಕ ಗಮನ ಸೆಳೆದರಾದರೂ, 1982ರ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು.

ಇದನ್ನೂ ಓದಿ: ಮಿಥುನ್ ಚಕ್ರವರ್ತಿ ಜೊತೆ ಹುಚ್ಚು ಪ್ರೀತಿ, ರಹಸ್ಯ ಮದುವೆ; ಶ್ರೀದೇವಿ ಬಾಳಲ್ಲಿ ಬೀಸಿತ್ತು ಬಿರುಗಾಳಿ

ಇಂದಿಗೂ ಬೇಡಿಕೆ ಇದೆ:

ಸದ್ಯ ಮಿಥುನ್ ಚಕ್ರವರ್ತಿ ಅವರು ‘ಬಟ್ವಾರಾ 1947’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸನ್ನಿ ಡಿಯೋಲ್ ಹೀರೋ ಆಗಿದ್ದು, ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ. ಇದಲ್ಲದೇ, ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದಲ್ಲಿ ಕೂಡ ಮಿಥುನ್ ಚಕ್ರವರ್ತಿ ಅವರಿಗೆ ಒಂದು ಪಾತ್ರ ನೀಡಲಾಗಿದೆ. ಈ ರೀತಿಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಅವರು ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: ಭಾರತ- ಶ್ರೀಲಂಕಾ ಅಭ್ಯಾಸ ಪಂದ್ಯ; ಉಭಯ ತಂಡಗಳಿಗೆ ಮೊದಲ ದಿನದ ಗೌರವ – Kannada News | Ndia vs Sri Lanka Warm up: SL XI Dominates Day 1 with 363/8; Spinners Shine

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಇಂದಿನಿಂದ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಲೆವೆನ್ ತಂಡ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಮೊದಲ ದಿನದಾಟದಂತ್ಯಕ್ಕೆ ಆತಿಥೇಯ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 363 ರನ್ ಕಲೆಹಾಕಿದೆ. ಕೇಸರ ನುವಂತಾ 9 ರನ್‌ ಮತ್ತು ದಿಲುಮ್ ಸುದಿರಾ 1 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇತ್ತ ಭಾರತದ ಪರ ತ್ರಿವಳಿ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಮಾನವ್ ಸುತಾರ್ ತಲಾ 2 ವಿಕೆಟ್‌ಗಳನ್ನು ಪಡೆದರೆ, ವೇಗಿ ಗುರ್ನೂರ್ ಬ್ರಾರ್ 1 ವಿಕೆಟ್ ಪಡೆದರು.

ಮೂವರ ಅರ್ಧಶತಕ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡದ ಬ್ಯಾಟಿಂಗ್‌ ವಿಭಾಗದ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ತಂಡದ ಆರು ಬ್ಯಾಟರ್​ಗಳು ಉತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ಯಾರಿಗೂ ಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ತಂಡದ ಪರ ಮೂವರು ಬ್ಯಾಟರ್​ಗಳು ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಆರಂಭಿಕ ಆಟಗಾರ ನಿಶಾನ್ ಫೆರ್ನಾಂಡೊ 65 ಎಸೆತಗಳಲ್ಲಿ 66 ರನ್​ಗಳ ಚುರುಕಾದ ಇನ್ನಿಂಗ್ಸ್ ಆಡಿವುದರ ಜೊತೆಗೆ ಮತ್ತೊಬ್ಬ ಆರಂಭಿಕ ರವಿಂದು ರಸಂತ ಅವರೊಂದಿಗೆ 110 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ರಸಂತ 143 ಎಸೆತಗಳಲ್ಲಿ 71 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೋನಲ್ ದಿನುಷಾ 72 ಎಸೆತಗಳಲ್ಲಿ 52 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಹಾಗೆಯೇ ದಿನುಷಾ, ರಮೇಶ್ ಮೆಂಡಿಸ್ (32) ಅವರೊಂದಿಗೆ ಏಳನೇ ವಿಕೆಟ್‌ಗೆ 64 ರನ್ ಸೇರಿಸಿದರು.

ಸ್ಪಿನ್ನರ್​ಗಳ ಮೇಲುಗೈ

ಇತ್ತ ಭಾರತೀಯ ಬೌಲರ್‌ಗಳು ಆರಂಭದಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಹೋರಾಡಿದರು. ಆದರೆ ಸ್ಪಿನ್ನರ್‌ಗಳು ದಿನದ ಕೊನೆಯ ಸೆಷನ್​ನಲ್ಲಿ ಮೇಲುಗೈ ಸಾಧಿಸಿದರು. ಕುಲ್ದೀಪ್ ಯಾದವ್ 18 ಓವರ್‌ಗಳಲ್ಲಿ 76 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಪಡೆದರೆ, ಎಡಗೈ ಸ್ಪಿನ್ನರ್ ಮಾನವ್ ಸುತಾರ್ 13 ಓವರ್‌ಗಳಲ್ಲಿ 33 ರನ್‌ ನೀಡಿ 2 ವಿಕೆಟ್ ಪಡೆದರು. ಅನುಭವಿ ರವೀಂದ್ರ ಜಡೇಜಾ ಕೂಡ 15 ಓವರ್‌ಗಳಲ್ಲಿ 64 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.

ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರೆ ವೇಗದ ಬೌಲರ್​ಗಳು ಯಶಸ್ವಿಯಾಗಲಿಲ್ಲ. ಸುಮಾರು ಐದು ವಾರಗಳ ನಂತರ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಿರುವ ಭಾರತೀಯ ವೇಗದ ಬೌಲರ್‌ಗಳಿಗೆ ವಿಕೆಟ್ ಸಿಗಲಿಲ್ಲ. ಮೊಹಮ್ಮದ್ ಸಿರಾಜ್ 13 ಓವರ್‌ಗಳಲ್ಲಿ 44 ರನ್‌ಗಳನ್ನು ಬಿಟ್ಟುಕೊಟ್ಟರೆ, ಪ್ರಸಿದ್ಧ್ ಕೃಷ್ಣ ಎಂಟು ಓವರ್‌ಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಯಾರೂ ವಿಕೆಟ್ ಪಡೆಯಲಿಲ್ಲ. ಗೊರ್ನೂರ್ ಬ್ರಾರ್ 12 ಓವರ್‌ಗಳಲ್ಲಿ 49 ರನ್‌ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:11 pm, Fri, 7 August 26

Source link

Exit mobile version