ಗೌತಮ್ ಗಂಭೀರ್​ಗೆ ಬಿಸಿ ಮುಟ್ಟಿಸಲು ಮುಂದಾದ ಬಿಸಿಸಿಐ – Kannada News | BCCI Ready to Pull Up Gautam Gambhir After UK Tour Debacle

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾದ ಇತ್ತೀಚಿನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮಹತ್ವದ ಪರಾಮರ್ಶನಾ ಸಭೆಯನ್ನು ಕರೆಯಲು ನಿರ್ಧರಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡ ಅನುಭವಿಸಿದ ಹೀನಾಯ ಸೋಲುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಸಿಬ್ಬಂದಿಗಳ ಒಪ್ಪಂದ ವಿಸ್ತರಣೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಗಂಭೀರ್​ಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ ಬಿಸಿಸಿಐ:

ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ರೂಪಿತವಾಗಿರುವ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಹೀನಾಯ ಸರಣಿ ಸೋಲು ಭಾರತದ ಕೋಚಿಂಗ್ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೀಗಾಗಿಯೇ ಇದೀಗ ಬಿಸಿಸಿಐ ಪರಾಮರ್ಶನಾ ಸಭೆಯನ್ನು ಕರೆದಿದ್ದು, ಈ ಸಭೆಯಲ್ಲಿ ಕೋಚಿಂಗ್ ಸ್ಟಾಫ್​​ಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇತ್ತ ಪ್ರಮುಖ ಸಹಾಯಕ ಸಿಬ್ಬಂದಿಗಳ ಎರಡು ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡಿದ್ದು, ಇದಾಗ್ಯೂ ಗಂಭೀರ್ ಕೋರಿಕೆಯ ಮೇರೆಗೆ ಅವರನ್ನು ಮುಂದುವರೆಸಲಾಗುತ್ತಿದೆ. ಈ ಸಿಬ್ಬಂದಿಗಳ ಭವಿಷ್ಯ ಈಗ ಬಿಸಿಸಿಐ ಸಭೆಯ ಮೇಲೆ ಅವಲಂಬಿತವಾಗಿದೆ.

  • ರಯಾನ್ ಟೆನ್ ಡೋಸ್ಚೇಟ್ (ಸಹಾಯಕ ತರಬೇತುದಾರ): ಇವರ ಒಪ್ಪಂದದ ಅವಧಿ ಮುಗಿದಿದ್ದು, ರಾಷ್ಟ್ರೀಯ ತಂಡದ ಜವಾಬ್ದಾರಿಯಿಂದ ಮುಕ್ತಿ ನೀಡುವಂತೆ ಅವರೇ ಮಂಡಳಿಗೆ ವಿನಂತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.
  • ಟಿ. ದಿಲೀಪ್ (ಫೀಲ್ಡಿಂಗ್ ತರಬೇತುದಾರ): ರಾಹುಲ್ ದ್ರಾವಿಡ್ ಅವರ ಅವಧಿಯಿಂದ ಮುಂದುವರಿದಿದ್ದ ಏಕೈಕ ಸಿಬ್ಬಂದಿ ಇವರಾಗಿದ್ದಾರೆ. ಯುಕೆ ಪ್ರವಾಸದಲ್ಲಿ ಭಾರತ ತಂಡದ ಫೀಲ್ಡಿಂಗ್ ಮಟ್ಟ ತೀರಾ ಕಳಪೆಯಾಗಿದ್ದರಿಂದ ಇವರ ಒಪ್ಪಂದ ನವೀಕರಣಗೊಳ್ಳುವುದು ಅನುಮಾನ ಎನ್ನಲಾಗಿದೆ.
  • ಮೊರ್ನೆ ಮೊರ್ಕೆಲ್ (ಬೌಲಿಂಗ್ ತರಬೇತುದಾರ): ಬೌಲಿಂಗ್ ವಿಭಾಗದ ವೈಫಲ್ಯದ ಬಗ್ಗೆಯೂ ಚರ್ಚೆ ನಡೆಯಲಿದ್ದರೂ, ಮುಂಬರುವ ಪ್ರಮುಖ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರನ್ನು ಉಳಿಸಿಕೊಳ್ಳುತ್ತಾರಾ ಎಂಬುದೇ ಸದ್ಯದ ಪ್ರಶ್ನೆ.

ರಿವ್ಯೂ ಮೀಟಿಂಗ್‌ಗೆ ಕಾರಣವಾದ ಸೋಲುಗಳು:

ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ನೇತೃತ್ವದಲ್ಲಿ ಭಾರತ ತಂಡ ಎದುರಿಸಿದ ಸರಣಿ ಸೋಲುಗಳು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.

  • ಐರ್ಲೆಂಡ್ ಪ್ರವಾಸ: ಟಿ20 ಸರಣಿಯಲ್ಲಿ 0-2 ಅಂತರದ ಐತಿಹಾಸಿಕ ಸೋಲು.
  • ಇಂಗ್ಲೆಂಡ್ ಪ್ರವಾಸ: ಟಿ20 ಸರಣಿಯಲ್ಲಿ 0-4 ಮತ್ತು ಏಕದಿನ ಸರಣಿಯಲ್ಲಿ 1-2 ಅಂತರದ ಹೀನಾಯ ಪರಾಜಯ.

ಗೌತಮ್ ಗಂಭೀರ್ ಸ್ಥಾನ ಭದ್ರವೇ?

ಈ ಸರಣಿ ಸೋಲುಗಳಿಂದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಮೇಲೆಯೂ ತೀವ್ರ ಒತ್ತಡ ಸೃಷ್ಟಿಯಾಗಿದೆ. ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆಯಾದರೂ, ಬಿಸಿಸಿಐ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಗಂಭೀರ್ ಅವರ ಒಪ್ಪಂದವು ಡಿಸೆಂಬರ್ 2027 ರವರೆಗೆ ಇದ್ದು, ಅವರ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಆದರೆ ಅವರು ನೇಮಕ ಮಾಡಿದ್ದ ಕೆಲ ಸಿಬ್ಬಂದಿಗಳನ್ನು ಕೈ ಬಿಟ್ಟು, ಅವರಿಗೆ ಬಿಸಿ ಮುಟ್ಡಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ‘ಮೈ ಬ್ಯಾಡ್’… ಹೀಗೂ ರನೌಟ್ ಮಿಸ್ ಮಾಡಿಕೊಳ್ತಾರಾ!

ರಿವ್ಯೂ ಮೀಟಿಂಗ್‌ ಯಾವಾಗ?

ಆಗಸ್ಟ್‌ನಲ್ಲಿ ನಡೆಯಲಿರುವ ಈ ವರ್ಚುವಲ್ ಸಭೆಯಲ್ಲಿ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶ್ರೇಯಸ್ ಅಯ್ಯರ್ ಮತ್ತು ಶುಭ್‌ಮನ್ ಗಿಲ್ ಭಾಗವಹಿಸಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ. ಇದೇ ವೇಳೆ ಗೌತಮ್ ಗಂಭೀರ್ ಅವರ ಬಲಗೈ ಬಂಟರ (ಸಿಬ್ಬಂದಿ ವರ್ಗಗಳ) ಭವಿಷ್ಯ ಕೂಡ ನಿರ್ಧಾರವಾಗಲಿದೆ.

Source link

3ನೇ ದಿನ ಚೇತರಿಸಿಕೊಂಡ ‘ಜನ ನಾಯಗನ್’ ಕಲೆಕ್ಷನ್: 100 ಕೋಟಿ ರೂ. ಕ್ಲಬ್‌ನತ್ತ ವಿಜಯ್ ಸಿನಿಮಾ – Kannada News | Thalapathy Vijay Jana Nayagan movie Box Office Collection Day 3 Rs 100 crore

ಕಾನೂನು ಸಂಘರ್ಷಗಳು, ಆನ್‌ಲೈನ್ ಲೀಕ್ ಹಾಗೂ ಸಿಬಿಎಫ್‌ಸಿ ಜೊತೆಗಿನ ಸುದೀರ್ಘ ತಿಕ್ಕಾಟದ ನಂತರ ದಳಪತಿ ವಿಜಯ್ (Thalapathy Vijay) ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಜುಲೈ 23ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಯಿತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಜಯ್ ಅವರ ಭರ್ಜರಿ ಫೈಟ್ಸ್, ಭಾವನಾತ್ಮಕ ದೃಶ್ಯಗಳು ಮತ್ತು ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕಥೆಯ ನಿಧಾನಗತಿಯ ಓಟ, ಸುದೀರ್ಘ ಅವಧಿ ಮತ್ತು ಬಾಬಿ ಡಿಯೋಲ್ ಅಭಿನಯದ ವಿಲನ್ ಪಾತ್ರದ ನಿರೂಪಣೆಗೆ ಕೆಲವು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರಕ್ಕೆ ಸಿಕ್ಕಿದ ಮಿಶ್ರ ಪ್ರತಿಕ್ರಿಯೆಯು ಇದರ ಬಾಕ್ಸ್ ಆಫೀಸ್ ಗಳಿಕೆಯ ಮೇಲೆಯೂ ಪರಿಣಾಮ ಬೀರಿದೆ. ‘ಜನ ನಾಯಗನ್’ ಮೊದಲ ದಿನ ಭಾರತದಲ್ಲಿ 42.70 ಕೋಟಿ ರೂಪಾಯಿ ನೆಟ್ ಹಾಗೂ ವಿಶ್ವಾದ್ಯಂತ 78 ಕೋಟಿ ರೂಪಾಯಿ ಗ್ರಾಸ್ ಗಳಿಕೆಯೊಂದಿಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಆದರೆ, ಎರಡನೇ ದಿನವಾದ ಶುಕ್ರವಾರ ಗಳಿಕೆಯಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚಿನ ಕುಸಿತ ಕಂಡುಬಂದಿದ್ದು, ಭಾರತದಲ್ಲಿ ಕೇವಲ 21.15 ಕೋಟಿ ರೂಪಾಯಿ ನೆಟ್ ಸಂಗ್ರಹಿಸಿತ್ತು. ಇದರಿಂದಾಗಿ ಮೊದಲ ಎರಡು ದಿನಗಳಲ್ಲಿ ದೇಶೀಯವಾಗಿ ಒಟ್ಟು 63.85 ಕೋಟಿ ರೂಪಾಯಿ ನೆಟ್ ಗಳಿಕೆಯಾಗಿತ್ತು.

ಮೂರನೇ ದಿನಕ್ಕೆ ‘ಜನ ನಾಗಯನ್’ ಕಲೆಕ್ಷನ್ ಎಷ್ಟು?

ಆದರೆ, ಮೂರನೇ ದಿನವಾದ ಶನಿವಾರದಂದು ಸಿನಿಮಾ ಮತ್ತೆ ಚೇತರಿಕೆಯ ಹಾದಿಗೆ ಮರಳಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಶನಿವಾರ ಭಾರತದಲ್ಲಿ ಅಂದಾಜು 28.50 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿದೆ. ಇದರೊಂದಿಗೆ ಮೂರು ದಿನಗಳಲ್ಲಿ ಭಾರತದ ಒಟ್ಟು ನೆಟ್ ಗಳಿಕೆ 92 ಕೋಟಿ ರೂಪಾಯಿ ದಾಟಿದ್ದು, ಮೊದಲ ವಾರಾಂತ್ಯಕ್ಕೆ ಭಾರತೀಯ ನೆಟ್ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಳಿಕೆಯ ಗಡಿಯನ್ನು ದಾಟುವತ್ತ ‘ಜನ ನಾಯಗನ್’ ದಾಪುಗಾಲು ಹಾಕುತ್ತಿದೆ.

‘ಜನ ನಾಯಗನ್’ ಸಿನಿಮಾದ ಪಾತ್ರವರ್ಗ:

ಈ ಬಹುನಿರೀಕ್ಷಿತ ಚಿತ್ರದಲ್ಲಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ನರೇನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಈ ಬೃಹತ್ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದು, ವಿಜಯ್ ಅವರ ನಟನಾ ವೃತ್ತಿಜೀವನದ ಅಂತಿಮ ಚಿತ್ರವಾಗಿ ಇದನ್ನು ಅದ್ಧೂರಿಯಾಗಿ ತೆರೆಗೆ ತರಲಾಗಿದೆ.

ಇದನ್ನೂ ಓದಿ: ಕದ್ದುಮುಚ್ಚಿ ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ವಿಜಯ್ ಪತ್ನಿ ಸಂಗೀತಾ?

ದಳಪತಿ ವಿಜಯ್ ಕೊನೆಯ ಸಿನಿಮಾ:
ಮೂರು ದಶಕಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಗಿಲ್ಲಿ, ಲಿಯೋ, ದ ಗ್ರೇಟೆಸ್ಟ್ ಆಫ್ ಆಲ್ ಟೈಮ್, ಮೆರ್ಸಲ್ ಮತ್ತು ಬಿಗಿಲ್‌ನಂತಹ ಸಾಲು ಸಾಲು ಹಿಟ್‌ಗಳನ್ನು ನೀಡಿದ್ದ ವಿಜಯ್‌ಗೆ ಇದು ಕೊನೆಯ ಸಿನಿಮಾವಾಗಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ವಿಜಯ್ ಅವರು ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಚಿತ್ರರಂಗದಿಂದ ದೂರ ಸರಿದಿದ್ದಾರೆ. ಅಂದಹಾಗೆ, ‘ಜನ ನಾಯಗನ್’ ಚಿತ್ರವು 2023ರಲ್ಲಿ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯಿಸಿ, ಅನಿಲ್ ರವಿಪುಡಿ ನಿರ್ದೇಶಿಸಿದ್ದ ‘ಭಗವಂತ್ ಕೇಸರಿ’ ಚಿತ್ರದ ಅಧಿಕೃತ ರಿಮೇಕ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ವಿಭಾಗದ 37 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ: ಬಿತ್ತನೆ ಪ್ರಮಾಣವೂ ಕುಸಿತ – Kannada News | Drought Threat: 37 Taluks in Bengaluru Division Face Severe Rain Deficit; Sowing Activities Plummet

ಬೆಂಗಳೂರು, ಜುಲೈ 26: ಬೆಂಗಳೂರು ವಿಭಾಗದ 37 ತಾಲೂಕುಗಳು ತೀವ್ರ ಮಳೆ ಕೊರತೆಯಿಂದ ಗಂಭೀರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಒಟ್ಟು 57 ತಾಲೂಕುಗಳ ಪೈಕಿ 43 ತೀವ್ರ ಮಳೆ ಕೊರತೆ ವಿಭಾಗಕ್ಕೆ ಸೇರಿವೆ. ಅವುಗಳಲ್ಲಿ 37 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಅತೀ ಕಡಿಮೆ ಮಳೆ ಅಥವಾ ತೀವ್ರ ಒಣಹವೆಯ ಪರಿಸ್ಥಿತಿ ಮುಂದುವರಿದಿದೆ. ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಇಂತಹ ತಾಲೂಕುಗಳ ಸಂಖ್ಯೆ 100ಕ್ಕೆ ಏರಬಹುದಾದ ಆತಂಕವೂ ಎದುರಾಗಿದೆ.

57 ತಾಲ್ಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆ

ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ), ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳು ಸೇರಿವೆ.  57 ತಾಲೂಕುಗಳಲ್ಲಿ ಬಿತ್ತನೆ ಪ್ರಮಾಣವು ಶೇ.75ಕ್ಕಿಂತ ಕಡಿಮೆಯಿದೆ. 52 ತಾಲೂಕುಗಳಲ್ಲಿ ಮಣ್ಣಿನ ತೇವಾಂಶ ಗಣನೀಯವಾಗಿ ಕುಸಿದಿದ್ದು, ಅವುಗಳಲ್ಲಿ 28  ತೀವ್ರ ತೇವಾಂಶ ಕೊರತೆಯನ್ನು ಎದುರಿಸುತ್ತಿವೆ.

ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರ; ಕರಾವಳಿ, ಮಲೆನಾಡಿಗೆ ಬಿರುಗಾಳಿ ಸಹಿತ ಮಳೆಯ ಅಲರ್ಟ್!

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ ಶೇ.48ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಶೇ.30, ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಶೇ.54 ಹಾಗೂ ಕೃಷ್ಣಾ ಕಣಿವೆಯ ಜಲಾಶಯಗಳಲ್ಲಿ ಶೇ.59 ನೀರಿನ ದಾಸ್ತಾನಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ ಮುಂದಿನ 15 ದಿನಗಳಲ್ಲಿ ಸಾಧಾರಣ ಮಳೆಯಾದರೆ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಸಾಧ್ಯ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಇಳಿಕೆ ಕಂಡ ಮಳೆ ಪ್ರಮಾಣ

ಕಳೆದ 24 ಗಂಟೆಗಳಲ್ಲಿ ರಾಜ್ಯದ ಕೇವಲ ಶೇ.22ರಷ್ಟು ಪ್ರದೇಶಗಳಲ್ಲಿ ಮಾತ್ರ 2.5 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಮಡಮಕ್ಕಿ ಗ್ರಾಮದಲ್ಲಿ ಅತ್ಯಧಿಕ 99.5 ಮಿ.ಮೀ. ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದಲ್ಲಿ 94.5 ಮಿ.ಮೀ. ಮಳೆ ದಾಖಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ರಾಜ್ಯದ ಹಲವು ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:24 am, Sun, 26 July 26

Source link

ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು – Kannada News | Childhood Cardiac Arrest: Bengaluru Doctors Advise Awareness Over Panic

ಬೆಂಗಳೂರು, ಜುಲೈ 26: ಇತ್ತೀಚೆಗೆ ನಗರದ ಶಾಲಾ ಆವರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಹೃದಯಾಘಾತದಿಂದ (Cardiac Arrest) ಕುಸಿದು ಬಿದ್ದ ಘಟನೆಗಳು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಜಯದೇವ, ನಾರಾಯಣ ಹೆಲ್ತ್ ಹಾಗೂ ಸ್ಪರ್ಶ್ ಆಸ್ಪತ್ರೆಯ ಪ್ರಮುಖ ಹೃದ್ರೋಗ ತಜ್ಞರು, “ಮಕ್ಕಳಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅತ್ಯಂತ ಅಪರೂಪ ಹಾಗೂ ಲಕ್ಷದಲ್ಲಿ ಒಂದೆರಡು ಪ್ರಕರಣಗಳು. ಹೀಗಾಗಿ ಪೋಷಕರು ಅನಗತ್ಯವಾಗಿ ಭೀತಿಗೆ ಒಳಗಾಗುವ ಅಗತ್ಯವಿಲ್ಲ, ಬದಲಿಗೆ ಜಾಗೃತಿ ಮತ್ತು ತುರ್ತು ಸಿದ್ಧತೆ ಹೆಚ್ಚಿಸಿಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

ಹಿರಿಯರಿಗೂ ಮಕ್ಕಳ ಹೃದಯಾಘಾತಕ್ಕೂ ಏನು ವ್ಯತ್ಯಾಸ?

ವೈದ್ಯರ ಪ್ರಕಾರ, ವಯಸ್ಕರಲ್ಲಿ ರಕ್ತನಾಳಗಳ ತಡೆಯಿಂದ (Blocked Arteries) ಹೃದಯಾಘಾತ ಸಂಭವಿಸಿದರೆ, ಮಕ್ಕಳಲ್ಲಿ ಜನ್ಮಜಾತ ಹೃದಯ ನ್ಯೂನತೆಗಳು (Congenital Heart Defects) ಅಥವಾ ಹೃದಯದ ವಿದ್ಯುತ್ ತರಂಗಗಳಲ್ಲಿ ಉಂಟಾಗುವ ಏರುಪೇರು (Arrhythmias) ಪ್ರಮುಖ ಕಾರಣವಾಗಿರುತ್ತದೆ. ಕ್ರೀಡೆ ಹಾಗೂ ಕಠಿಣ ದೈಹಿಕ ಶ್ರಮದ ಸಂದರ್ಭದಲ್ಲಿ ಇವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಅನೇಕ ಮಕ್ಕಳಲ್ಲಿ ಇದು ಮುಂಚಿತವಾಗಿ ಯಾವುದೇ ರೋಗಲಕ್ಷಣ ತೋರಿಸದಿರುವುದು ದೊಡ್ಡ ಸವಾಲಾಗಿದೆ.

ಶಾಲೆಗಳು ಮತ್ತು ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳು

ಪ್ರತಿ ಶಾಲೆಯಲ್ಲೂ ‘ಕಾರ್ಡಿಯಾಕ್ ಎಮರ್ಜೆನ್ಸಿ ಪ್ಲಾನ್’ ಇರಬೇಕು. ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಿಗೆ ಸಿಪಿಆರ್ (CPR) ಮತ್ತು ಎಇಡಿ (AED – ಡಿಫಿಬ್ರಿಲೇಟರ್) ಸಾಧನ ಬಳಸುವ ತರಬೇತಿ ನೀಡಬೇಕು. ಘಟನೆ ನಡೆದ 3 ನಿಮಿಷದೊಳಗೆ ಸಿಪಿಆರ್ ನೀಡಿದರೆ ಮಗುವಿನ ಪ್ರಾಣ ಉಳಿಯುವ ಸಾಧ್ಯತೆ ಶೇ 70ಕ್ಕಿಂತ ಹೆಚ್ಚಿರುತ್ತದೆ.

ಆಟವಾಡುವಾಗ ಅಥವಾ ವ್ಯಾಯಾಮದ ವೇಳೆ ಎದೆನೋವು, ಅತಿಯಾದ ಆಯಾಸ, ತಲೆಸುತ್ತು ಅಥವಾ ಪ್ರಜ್ಞೆ ತಪ್ಪಿ ಬೀಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೊಳಪಡಿಸಬೇಕು. ಕುಟುಂಬದಲ್ಲಿ ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಹೃದಯಾಘಾತಕ್ಕೆ ಒಳಗಾಗಿದ್ದ ಇತಿಹಾಸವಿದ್ದರೆ, ಮಕ್ಕಳಿಗೂ ಇಸಿಜಿ (ECG) ಸೇರಿದಂತೆ ಮೂಲಭೂತ ತಪಾಸಣೆ ಮಾಡಿಸುವುದು ಒಳಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್​ 30ರಂದು ಪಿಜಿ ನೀಟ್ ಪರೀಕ್ಷೆ: ನೂತನ ಸಚಿವ ಪ್ರಲ್ಹಾದ್ ಜೋಶಿ ಮುಂದಿರುವ ಹೊಸ ಸವಾಲುಗಳು – Kannada News | Pralhad Joshi’s PG NEET Challenge: Ensuring Fair Exams and Implementing Reforms by August 30

ನವದೆಹಲಿ, ಜುಲೈ 26: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿವಾದದ ಕಾರಣದಿಂದ ರಾಜೀನಾಮೆ ನೀಡಿ ಧರ್ಮೇಂದ್ರ ಪ್ರಧಾನ್(Dharmendra Pradhan) ನರೇಂದ್ರ ಮೋದಿ ಸಂಪುಟದಿಂದ ಹೊರನಡೆದಿದ್ದಾರೆ. ಈಗ ಕೋಟ್ಯಂತರ ಅಭ್ಯರ್ಥಿಗಳ ನಿರೀಕ್ಷೆಯ ಹೊರೆಯನ್ನು ಕನ್ನಡಿಗ ಪ್ರಲ್ಹಾದ್ ಜೋಶಿ ಹೊರಬೇಕಿದೆ. ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿ ಹಲವು ಸುಧಾರಣಾ ಕ್ರಮಗಳು ವಿದ್ಯಾರ್ಥಿ ವಲಯದಿಂದಲೂ ಕೇಳಿಬಂದಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಸುಧಾರಣೆಯ ಕ್ರಾಂತಿಕಾರಕ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.ಇವೆಲ್ಲಾ ನಿರೀಕ್ಷೆಯನ್ನು ಪ್ರಲ್ಹಾದ್​ ಜೋಶಿ ನಿಭಾಯಿಸಬೇಕಿದೆ.

ಪ್ರಸಕ್ತ ಮುಂಗಾರು ಅಧಿವೇಶನದಲ್ಲೇ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಇದಕ್ಕೆ ಪೂರಕವಾಗಿ, ಭವಿಷ್ಯದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಜವಾಬ್ದಾರಿಯು ಪ್ರಲ್ಹಾದ್ ಜೋಶಿ ಮೇಲಿದೆ. ತುರ್ತಾಗಿ ಇದೇ ಆಗಸ್ಟ್ 30ರಂದು ನಡೆಯುವ ಪಿಜಿ ನೀಟ್ ಪರೀಕ್ಷೆಗೆ ದೊಡ್ಡ ತಯಾರಿ ನಡೆಸಬೇಕಿದೆ.

ಯುಜಿ ನೀಟ್​ನಲ್ಲಿ ಆದ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಒಂದೇ ತಿಂಗಳಲ್ಲಿ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿ ಪ್ರಕ್ರಿಯೆಯೊಂದನ್ನು ಸಾಧಿಸಿ ತೋರಿಸಬೇಕಿದೆ. ಯುಜಿ ನೀಟ್ ಮರು ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ನಿರ್ಗಮಿತ ಸಚಿವರು ಜವಾಬ್ದಾರಿ ನಿಭಾಯಿಸಿದ್ದರು.

ಮತ್ತಷ್ಟು ಓದಿ: ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ

ಆದರೆ ಈಗ ಶೈಕ್ಷಣಿಕ ವಲಯದಿಂದ ಬಂದಿರುವ ಸುಧಾರಣಾ ಕ್ರಮಗಳನ್ನು ಅನುಷ್ಠಾನ ಮಾಡಿಕೊಳ್ಳಲು ಸಕಾರವಾಗಿದೆ. ಯುಜಿ ನೀಟ್​ನಲ್ಲಿ 22 ಲಕ್ಷ ವಿದ್ಯಾರ್ಥಿಗಳಿದ್ದರೆ ಪಿಜಿ ನೀಟ್​​ನಲ್ಲಿ ಕೇವಲ ಎರಡೂವರೆ ಲಕ್ಷ ವಿದ್ಯಾರ್ಥಿಗಳಿರುತ್ತಾರೆ ಹೀಗಾಗಿ ಸಣ್ಣ ಅಭ್ಯರ್ಥಿಗಳ ಸಮೂಹದಲ್ಲಿ ಸಕಾರಾತ್ಮಕ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಳ್ಳಲು ಜೋಶಿಗೆ ಸಕಾಲವಾಗಿದೆ.

ಈಗಾಗಲೇ ನರೇಂದ್ರ ಮೋದಿ ಸಂಪುಟದಲ್ಲಿ ಕಳೆದ ಏಳು ವರ್ಷಗಳಿಂದ ಪ್ರಭಾವಿ ಸಚಿವರಾಗಿ ಪ್ರಲ್ಹಾದ್ ಜೋಶಿ ಕೆಲಸ ಮಾಡಿದ್ದಾರೆ. ತಮ್ಮ ವಿಶಿಷ್ಟ ಕಾರ್ಯ ವೈಖರಿಯಿಂದ ನರೇಂದ್ರ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನುವುದು ಕೂಡ ವಿಶೇಷ. ಅವರು ಆರಂಭದಲ್ಲಿ ನಿಭಾಯಿಸಿದ ಕಲ್ಲಿದ್ದಲು ಮತ್ತು ಗಣಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿರುವುದು ಸಾರ್ವಜನಿಕವಾಗಿ ಪ್ರಶಂಸೆಗೆ ಕಾರಣವಾಗಿತ್ತು.

ಇದಾದ ಬಳಿಕ ಕಾನೂನು ಮತ್ತು ಸಂಸದೀಯ, ಮರುಬಳಕೆ ಇಂಧನ ಹಾಗೂ ನಾಗರಿಕ ಆಹಾರ ಸರಬರಾಜು ಇಲಾಖೆಯನ್ನು ಕಳೆದ ಎರಡು ವರ್ಷಗಳಿಂದ ನಿಭಾಯಿಸುತ್ತೊದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಇಲಾಖಾ ವಾರು ಪರಿಶೀಲನೆಯಲ್ಲಿ ಪ್ರಲ್ಹಾದ್ ಜೋಶಿಯ ಸಚಿವಾಲಯವು ಅಗ್ರಸ್ಥಾನದಲ್ಲಿವೆ ಎನ್ನುವ ವರದಿಗಳು ಬಂದಿದ್ದವು.

ಇದೇ ಕಾರಣಕ್ಕೆ ರಾಜಕೀಯ ವಲಯದಲ್ಲಿ ಪ್ರಲ್ಹಾದ್ ಜೋಶಿಯವರನ್ನು ಮೋದಿಯ ಬ್ಲೂ ಐಡ್ ಬಾಯ್ ಎಂದು ಉಲ್ಲೇಖಿಸಲಾಗುತ್ತದೆ. ಈ ಉದ್ದೇಶದಿಂದಲೇ ಸೂಕ್ಷ್ಮ ಹಾಗೂ ಕಠಿಣ ಸಂದರ್ಭದಲ್ಲಿ ವಿವಾದದಲ್ಲಿರುವ ಇಲಾಖೆಯ ಜವಾಬ್ದಾರಿಯನ್ನು ಪ್ರಲ್ಹಾದ್ ಜೋಶಿ ಹೆಗಲಿಗೆ ಪ್ರಧಾನಿ ಮೋದಿ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vasthu Tips: ನಿವೇಶನ ಖರೀದಿಗೂ ಮುನ್ನ ತಿಳಿದಿರಬೇಕಾದ ಪ್ರಮುಖ ವಾಸ್ತು ನಿಯಮಗಳಿವು – Kannada News | Vastu Tips for Plot Selection: Ensure Prosperity and Positive Energy in Your Home

ಸ್ವಂತ ಮನೆ ನಿರ್ಮಿಸುವುದು ಅಥವಾ ವ್ಯವಹಾರಕ್ಕಾಗಿ ಸ್ವಂತ ಕಚೇರಿ ಪ್ರಾರಂಭಿಸುವುದು ಪ್ರತಿಯೊಬ್ಬರ ಜೀವನದ ಮುಖ್ಯ ಕನಸಾಗಿರುತ್ತದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಮುನ್ನ ಸೂಕ್ತ ಸ್ಥಳ ಆಯ್ಕೆ ಮಾಡುವುದು ಅತ್ಯಂತ ಅಗತ್ಯ. ವಾಸ್ತು ತತ್ವಗಳ ಪ್ರಕಾರ ಸೂಕ್ತ ಗುಣಲಕ್ಷಣಗಳಿರುವ ಜಾಗದಲ್ಲಿ ನಿರ್ಮಾಣ ಕೈಗೊಂಡರೆ, ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿ ಸಮೃದ್ಧಿ ಮತ್ತು ಅಭಿವೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.

ದಿಕ್ಕುಗಳ ಕುರಿತಾದ ಸತ್ಯಾಸತ್ಯತೆ:

ಪ್ರಖ್ಯಾತ ಜ್ಯೋತಿಷಿ ಡಾ. ಅಜಯ್ ಭಂಬಿ ಅವರ ಪ್ರಕಾರ, ಯಾವುದೇ ದಿಕ್ಕನ್ನು ಸಂಪೂರ್ಣವಾಗಿ ಶುಭ ಅಥವಾ ಅಶುಭವೆಂದು ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ದಿಕ್ಕಿಗೂ ತನ್ನದೇ ಆದ ಮಹತ್ವವಿದೆ. ಆದಾಗ್ಯೂ, ವಾಸ್ತುವಿನಲ್ಲಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ಮುಖ ಮಾಡಿರುವ ಸ್ಥಳಗಳನ್ನು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಅತ್ಯಂತ ಮಂಗಳಕರ ಜಾಗಗಳೆಂದು ಪರಿಗಣಿಸಲಾಗುತ್ತದೆ.

ನಿವೇಶನದ ಆಕಾರ ಮತ್ತು ಪ್ರಭಾವ:

ಪ್ಲಾಟ್ ಅಥವಾ ಜಾಗದ ಆಕಾರವು ಕುಟುಂಬ ಅಥವಾ ವ್ಯವಹಾರದ ಪ್ರಗತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಚೌಕ ಅಥವಾ ಆಯತಾಕಾರದ ಪ್ಲಾಟ್‌ಗಳು ಕುಟುಂಬಕ್ಕೆ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತವೆ. ಮುಂಭಾಗ ಕಿರಿದಾಗಿದ್ದು ಹಿಂಭಾಗ ಅಗಲವಾಗಿರುವ ‘ಗೋಮುಖಿ’ ಪ್ಲಾಟ್ ಮನೆ ನಿರ್ಮಾಣಕ್ಕೆ ಶುಭ. ಅದೇ ರೀತಿ, ಮುಂಭಾಗ ಅಗಲವಾಗಿರುವ ‘ಶೇರ್ಮುಖಿ’ ಪ್ಲಾಟ್ ಕಚೇರಿ ಅಥವಾ ವ್ಯಾಪಾರಕ್ಕೆ ಲಾಭದಾಯಕ. ತ್ರಿಕೋನ, ದುಂಡಗಿನ ಅಥವಾ ಕತ್ತರಿಸಿದ (ಮುರಿದ) ಮೂಲೆಗಳನ್ನು ಹೊಂದಿರುವ ಸ್ಥಳಗಳನ್ನು ಆಯ್ಕೆ ಮಾಡಬಾರದು.

ರಸ್ತೆ ವಿನ್ಯಾಸ ಮತ್ತು ಬೀದಿ ಪ್ರವಾಹ (Street Focus):

ಸ್ಥಳದ ಎದುರಿಗಿರುವ ರಸ್ತೆಗಳು ವಾಸ್ತುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿವೇಶನಕ್ಕೆ ನೇರವಾಗಿ ಬಂದು ಮುಟ್ಟುವ ರಸ್ತೆಗಳಿದ್ದಾಗ (T-Junction) ಎಚ್ಚರಿಕೆ ಅಗತ್ಯ. ಈಶಾನ್ಯ ದಿಕ್ಕಿನಿಂದ ಬರುವ ರಸ್ತೆ ಪ್ರವಾಹವು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ನೈಋತ್ಯ ಅಥವಾ ವಾಯುವ್ಯ ದಿಕ್ಕಿನಿಂದ ನೇರವಾಗಿ ಬರುವ ರಸ್ತೆಗಳು ಆರ್ಥಿಕ ಅಸ್ಥಿರತೆ ಮತ್ತು ತೊಂದರೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ಭೂಮಿಯ ಇಳಿಜಾರು ಮತ್ತು ಎತ್ತರ:

ವಾಸ್ತುವಿನಲ್ಲಿ ಜಾಗದ ಇಳಿಜಾರಿಗೆ ವಿಶೇಷ ಮಹತ್ವವಿದೆ. ಭೂಮಿಯ ಇಳಿಜಾರು ಯಾವಾಗಲೂ ಉತ್ತರ ಅಥವಾ ಪೂರ್ವದ ಕಡೆಗೆ ಇರಬೇಕು. ಒಂದು ವೇಳೆ ಜಾಗವು ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ಇಳಿಜಾರಾಗಿದ್ದರೆ, ಆರ್ಥಿಕ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸುತ್ತಮುತ್ತಲಿನ ಪರಿಸರ ಮತ್ತು ನೆರಳು:

ನಿವೇಶನದ ಸುತ್ತಮುತ್ತಲಿನ ವಾತಾವರಣವು ಮನೆಯ ಧನಾತ್ಮಕ ಶಕ್ತಿಯನ್ನು ನಿರ್ಧರಿಸುತ್ತದೆ. ಜಾಗದ ಸಮೀಪದಲ್ಲಿ ಸ್ಮಶಾನಗಳು, ಆಸ್ಪತ್ರೆಗಳು ಅಥವಾ ಕಸದ ತೊಟ್ಟಿಗಳು ಇರಬಾರದು. ಸ್ಥಳದ ಮೇಲೆ ದೊಡ್ಡ ಎತ್ತರದ ಮರಗಳು, ವಿದ್ಯುತ್ ಕಂಬಗಳು ಅಥವಾ ದೇವಾಲಯದ ಗೋಪುರಗಳ ನೆರಳು ನೇರವಾಗಿ ಬೀಳದಂತೆ ಖಚಿತಪಡಿಸಿಕೊಳ್ಳಿ.

ಜಾಗವನ್ನು ಅಂತಿಮಗೊಳಿಸುವ ಮುನ್ನ ಅನುಭವಿ ವಾಸ್ತು ತಜ್ಞರ ಸಲಹೆ ಪಡೆಯುವುದು ಹಾಗೂ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುವುದು ನಿಮ್ಮ ಹೂಡಿಕೆಯನ್ನು ಸುರಕ್ಷಿತವಾಗಿರಿಸುತ್ತದೆ. ಸರಿಯಾದ ಸ್ಥಳ ಆಯ್ಕೆಯಿಂದ ಮನೆಗೆ ಸದಾ ಸಂತೋಷ ಮತ್ತು ಐಶ್ವರ್ಯ ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೈರಸಂದ್ರದಲ್ಲಿ ಗಂಗ-ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ‘ಹುಲಿಬೇಟೆ ವೀರಗಲ್ಲು’ ಪತ್ತೆ – Kannada News | Historical Discovery: 9th Century ‘Tiger Hunt Hero Stone’ From Ganga Rashtrakuta Era Unearthed Near Nelamangala

ಪತ್ತೆಯಾಗಿರುವ ‘ಹುಲಿಬೇಟೆ ವೀರಗಲ್ಲು
Image Credit source: The New Indian Express

ಬೆಂಗಳೂರು, ಜುಲೈ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಅಪರೂಪದ ‘ಹುಲಿಬೇಟೆ ವೀರಗಲ್ಲು’ ಪತ್ತೆಯಾಗಿದೆ. ಸುಮಾರು ಕ್ರಿ.ಶ. 850ರ ಅವಧಿಗೆ ಸೇರಿದ ಈ ವೀರಗಲ್ಲು ಕನ್ನಡದ ಇತಿಹಾಸದಲ್ಲಿ ಮಹತ್ವದ ಆವಿಷ್ಕಾರವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 8 ಅಡಿ ಉದ್ದ ಮತ್ತು 2.5 ಅಡಿ ಅಗಲ ಹೊಂದಿರುವ ಈ ವೀರಗಲ್ಲು, ರೈತ ರಂಗಸ್ವಾಮಯ್ಯ ತಮ್ಮ ಜಮೀನಿನಲ್ಲಿದ್ದ ಯೂಕಲಿಪ್ಟಸ್ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ವೇಳೆ ಪತ್ತೆಯಾಗಿದೆ.

ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ

ಈ ವೀರಗಲ್ಲಿನ ಮೇಲಿರುವ ಶಾಸನವು ಹಳೆಗನ್ನಡ ಲಿಪಿಯಲ್ಲಿದ್ದು, ಅದರಲ್ಲಿ ಕಾಲಾವಧಿಯ ಸ್ಪಷ್ಟ ಉಲ್ಲೇಖ ಇಲ್ಲ. ಆದರೆ ಲಿಪಿಯ ಶೈಲಿಯನ್ನು ಆಧರಿಸಿ ಇದು ಸುಮಾರು ಕ್ರಿ.ಶ. 850ರ ಗಂಗ-ರಾಷ್ಟ್ರಕೂಟರ ಕಾಲಕ್ಕೆ ಸೇರಿದೆ ಎಂದು ತಜ್ಞರು ನಿರ್ಧರಿಸಿದ್ದಾರೆ. ಶಿಲ್ಪದಲ್ಲಿ ವೀರನು ಹುಲಿಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಯುದ್ಧದಲ್ಲಿ ವೀರಮರಣ ಹೊಂದಿದ ಬಳಿಕ ಅಪ್ಸರೆಯರು ಆತನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣವೂ ಇದೆ. ವೀರನು ಬಲಗೈಯಲ್ಲಿ ಕತ್ತಿ ಹಿಡಿದು, ಎಡಗೈಯಿಂದ ಹುಲಿಯ ಮುಂಗಾಲನ್ನು ಹಿಡಿದು ಹೋರಾಡುತ್ತಿರುವುದನ್ನು ಶಿಲ್ಪದಲ್ಲಿ ಕಾಣಬಹುದು.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ; 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ

ಶಾಸನದ ಪ್ರಕಾರ, ಈ ವೀರನ ಹೆಸರು ಶಿವಮಾರೆನಾಡಿ. ಆತ ತಣ್ಣಿಯರಟ್ಟಮ್ಮರೊಡೆಯ ಅವರ ಪುತ್ರನಾಗಿದ್ದು, ಮಾರಮ್ಮ ಎಂಬ ಮನ್ನೆನಾಡಿನ ನಾಡಗೌಡನ ಸೇವಕನಾಗಿದ್ದನು. ಕೃಷಿ ಮತ್ತು ಪಶುಸಂಗೋಪನೆ ಪ್ರಮುಖ ಜೀವನೋಪಾಯವಾಗಿದ್ದ ಆ ಕಾಲದಲ್ಲಿ ಬೆಳೆ ಮತ್ತು ಜಾನುವಾರುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಸಂದರ್ಭದಲ್ಲಿ ಈ ವೀರನು ಪ್ರಾಣತ್ಯಾಗ ಮಾಡಿದ್ದಾನೆ ಎಂದು ಶಾಸನ ತಿಳಿಸುತ್ತದೆ.ಇತಿಹಾಸಕಾರರ ಪ್ರಕಾರ, ಇಂದಿನ ನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ ತಾಲ್ಲೂಕುಗಳು ಹಾಗೂ ಹೆಸರಘಟ್ಟ ಹೋಬಳಿಯ ಕೆಲವು ಭಾಗಗಳನ್ನು ಒಳಗೊಂಡ ಪ್ರದೇಶವನ್ನು ಮನ್ನೆ ನಾಡು ಎಂದು ಕರೆಯಲಾಗುತ್ತಿತ್ತು. ಗಂಗರ ಆಡಳಿತದ ರಾಜಧಾನಿಯೂ ಮನ್ನೆ ಆಗಿತ್ತು.

ಪತ್ತೆಯಾದ ಈ ವೀರಗಲ್ಲನ್ನು ಸಮೀಪದ ದೇವಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂದಿನ ಸಂರಕ್ಷಣಾ ಕ್ರಮಗಳಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ಜಿ. ರಾವ್ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿದ್ಯಾರ್ಥಿಗಳ ಹೋರಾಟಕ್ಕೆ ನಟಿ ಜ್ಯೋತಿಕಾ ಬೆಂಬಲ: ಟ್ರೋಲ್‌ ಮಾಡಿದವರಿಗೆ ತಿರುಗೇಟು – Kannada News | Actor Jyotika Supports Student Protest and Slams Troll comments

ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು (Student Protest) ಬೆಂಬಲಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಧ್ವನಿ ಎತ್ತಿದ್ದ ನಟಿ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದವರಿಗೆ ಜ್ಯೋತಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಶನಿವಾರ (ಜುಲೈ 24) ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದ ಜ್ಯೋತಿಕಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಬಂದಿರುವ ಕಮೆಂಟ್​ಗಳಿಗೆ ಜ್ಯೋತಿಕಾ ಉತ್ತರ ನೀಡಿದ್ದಾರೆ.

‘ಧರ್ಮೇಂದ್ರ ಪ್ರಧಾನ್ ಅವರೇ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ. ನಾನು ವಿದ್ಯಾರ್ಥಿಗಳು ಮತ್ತು ಈ ದೇಶದ ಭವಿಷ್ಯದ ಪರವಾಗಿ ನಿಲ್ಲುತ್ತೇನೆ. ಜವಾಬ್ದಾರಿಯುತ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಧ್ವನಿ ಎತ್ತುತ್ತೇನೆ’ ಎಂದು ಜ್ಯೋತಿಕಾ ಪೋಸ್ಟ್ ಮಾಡಿದ್ದರು. ಇದಲ್ಲದೇ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್, ಅಭಿಜಿತ್ ದೀಪ್ಕೆ ಹಾಗೂ ಸೌರವ್ ದಾಸ್ ಅವರನ್ನು ಉಲ್ಲೇಖಿಸಿ, ‘ಒಬ್ಬ ತಾಯಿಯಾಗಿ ನಮ್ಮ ಮಕ್ಕಳನ್ನು ನಿಮ್ಮಂತೆ ಧೈರ್ಯವಂತರಾಗಿ ಬೆಳೆಸಲು ಬಯಸುತ್ತೇವೆ. ಜೆನ್ ಜೀ ಯುವಪಡೆಗೆ ನನ್ನ ಧನ್ಯವಾದಗಳು. ನೀವೆಲ್ಲರೂ ಸೇರಿ ನಾವು ಎಂದರೆ ಭಾರತ ಎಂದು ನಿರೂಪಿಸಿದ್ದೀರಿ’ ಎಂದು ಶ್ಲಾಘಿಸಿದ್ದರು.

ಟ್ರೋಲಿಗರಿಗೆ ನಟಿಯ ಖಡಕ್ ಉತ್ತರ

ಜ್ಯೋತಿಕಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕೆಲ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಯತ್ನಿಸಿದರು. ‘ಟೂಲ್‌ಕಿಟ್ ಸಕ್ರಿಯಗೊಂಡಿದೆ, ಪ್ರಮುಖ ವಿಷಯ ಬಿಟ್ಟು ರಾಜಕೀಯ ಬೆಂಬಲಕ್ಕೆ ಸೆಲೆಬ್ರಿಟಿಗಳು ಬಂದಿದ್ದಾರೆ’ ಎಂಬ ಕಾಮೆಂಟ್‌ಗೆ ಉತ್ತರಿಸಿದ ನಟಿ, ‘ಓಹೋ! ಟೂಲ್‌ಕಿಟ್.. ಫ್ಯಾನ್ಸಿ ಶಬ್ದ. ನಾನು ವಿದ್ಯಾರ್ಥಿಗಳನ್ನು ಬೆಂಬಲಿಸಿ ಬರೆದಿದ್ದೇನೆ ಎಂದುಕೊಂಡಿದ್ದೆ, ಒಮ್ಮೆ ಚೆಕ್ ಮಾಡುತ್ತೇನೆ’ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಬಾಲಿವುಡ್​​ ಸೆಲೆಬ್ರಿಟಿಗಳಿವರು

ಇನ್ನೊಬ್ಬ ನೆಟ್ಟಿಗ ‘ನಿಮಗೆ ಯಾವುದೇ ಹಿಟ್ ಸಿನಿಮಾಗಳಿಲ್ಲ’ ಎಂದು ಕಾಮೆಂಟ್ ಮಾಡಿದಾಗ, ತಮ್ಮ ಇತ್ತೀಚಿನ ಚಿತ್ರಗಳನ್ನು ಉಲ್ಲೇಖಿಸಿ, ‘ದಯವಿಟ್ಟು ಅಮೆಜಾನ್‌ನಲ್ಲಿ ಸಿಸ್ಟಮ್, ಬ್ಲಾಕ್‌ಬಸ್ಟರ್ ಶೈತಾನ್, ಡಬ್ಬಾ ಕಾರ್ಟೆಲ್, ಮಲಯಾಳಂನ ಕಾತಲ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಶ್ರೀಕಾಂತ್ ಸಿನಿಮಾಗಳನ್ನು ನೋಡಿ. ಟೈಮ್ ಪಾಸ್ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಒಂದೂ ಫ್ಲಾಪ್ ಇಲ್ಲ’ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಲಾಠಿಚಾರ್ಜ್‌ ಕುರಿತು ನಟಿ ಪ್ರಶ್ನೆ:

‘ಪ್ರತಿಭಟನೆಯ ಹೆಸರಿನಲ್ಲಿ ಸರ್ಕಾರಿ ಆಸ್ತಿ ಹಾನಿ ಮಾಡಬಾರದು’ ಎಂದು ಬುದ್ಧಿವಾದ ಹೇಳಿದ ನೆಟ್ಟಿಗರೊಬ್ಬರಿಗೆ ಉತ್ತರಿಸಿದ ಜ್ಯೋತಿಕಾ, ‘ಹಾಗಾದರೆ ಸರ್ಕಾರ ವಿದ್ಯಾರ್ಥಿಗಳ ತಲೆ ಮತ್ತು ದೇಹಕ್ಕೆ ಹಾನಿ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?’ ಎಂದು ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ಅನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ನಟಿ ಮತ್ತು ಅವರ ಕುಟುಂಬದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ‘ದೇವರು ಯಾವಾಗಲೂ ನನ್ನೊಂದಿಗಿದ್ದಾನೆ. ನಿಮ್ಮ ಕಾಳಜಿಗೆ ಧನ್ಯವಾದಗಳು’ ಎಂದು ಜ್ಯೋತಿಕಾ ವಿನಮ್ರವಾಗಿ ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲ್ವೆ ಜಾಗದಲ್ಲಿ ಕಸ ಎಸೆದರೆ ಬೀಳುತ್ತೆ ದಂಡ: ನೈರುತ್ಯ ರೈಲ್ವೆಯಿಂದ ಕಠಿಣ ಕ್ರಮದ ಎಚ್ಚರಿಕೆ! – Kannada News | Don’t Dump Waste on Railway Land: South Western Railway Warns Violators

ಬೆಂಗಳೂರು, ಜುಲೈ 26: ರೈಲ್ವೆ ಹಳಿಗಳ ಪಕ್ಕದಲ್ಲಿ ಮತ್ತು ರೈಲ್ವೆಗೆ ಸೇರಿದ ಜಾಗದಲ್ಲಿ ಕಸ ಹಾಗೂ ಕಟ್ಟಡದ ತ್ಯಾಜ್ಯ (ಡೆಬ್ರಿಸ್) ಚೆಲ್ಲುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೈರುತ್ಯ ರೈಲ್ವೆ (SWR)ಎಚ್ಚರಿಕೆ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ನಗರದ ಐದು ಪಾಲಿಕೆಗಳ ಸಹಯೋಗದೊಂದಿಗೆ ಮುಂದಿನ ಎರಡು ತಿಂಗಳಲ್ಲಿ ರೈಲ್ವೆ ಹಳಿಗಳ ಸುತ್ತಲಿನ ಕಸ ತೆರವುಗೊಳಿಸಲು ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಕಾನೂನು ಕ್ರಮ ಮತ್ತು ದಂಡ ಪ್ರಯೋಗ!

ಶನಿವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ರೈಲ್ವೆ ಜಾಗದಲ್ಲಿ ಅನಧಿಕೃತವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರೈಲ್ವೆ ಆಸ್ತಿಯನ್ನು ರಕ್ಷಿಸುವುದು ಮತ್ತು ಇರುವ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಭವಿಷ್ಯದಲ್ಲಿ ಮತ್ತೆ ಕಸ ಎಸೆಯದಂತೆ ತಡೆಯಲು ಕಠಿಣ ಕಣ್ಗಾವಲು ವಹಿಸಲಾಗುತ್ತದೆ.

ಸಿಗ್ನಲಿಂಗ್ ವೈಯರ್ ನಾಶ!

ರೈಲ್ವೆ ಅಧಿಕಾರಿಗಳ ಪ್ರಕಾರ, ಹಳಿಗಳ ಪಕ್ಕದಲ್ಲಿ ಬೇಕಾಬಿಟ್ಟಿ ಕಸ ಎಸೆಯುವುದು ರೈಲುಗಳ ಸುರಕ್ಷಿತ ಸಂಚಾರಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಕಸದ ರಾಶಿಗೆ ಬೆಂಕಿ ಬಿದ್ದ ಪರಿಣಾಮ ಹಲವು ಬಾರಿ ಸಿಗ್ನಲಿಂಗ್ ಮತ್ತು ವಿದ್ಯುತ್ ಕೇಬಲ್ಗಳು ಸುಟ್ಟುಹೋಗಿ, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೊಸೂರು ಮಾರ್ಗಗಳಲ್ಲಿ ತ್ಯಾಜ್ಯ ಪದೇ ಪದೇ ಶೇಖರಣೆಯಾಗುವುದರಿಂದ ರೈಲ್ವೆ ಗಡಿ ರೇಖೆಗಳು ಮರೆಯಾಗಿ, ಜಾಗ ಒತ್ತುವರಿಯಾಗುವ ಭೀತಿಯೂ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:33 am, Sun, 26 July 26

Source link

ನಿನ್ನೆ ಪಂದ್ಯ ಗೆದ್ದ ಟೀಮ್ ಇಂಡಿಯಾಗೆ ಇವತ್ತು ಮತ್ತೆ ಮ್ಯಾಚ್! – Kannada News | Back to Back Clash: India Aim to Whitewash Zimbabwe

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸರಣಿ ಸೋತು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ, ಇದೀಗ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಕಮಬ್ಯಾಕ್ ಮಾಡಿದೆ. ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ ಪಡೆ, ಇಂದು (ಜುಲೈ 26, 2026) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯರನ್ನು ‘ಕ್ಲೀನ್ ಸ್ವೀಪ್’ ಮಾಡುವ ಇರಾದೆಯಲ್ಲಿದೆ.

ಅಂದರೆ ಶನಿವಾರ ಪಂದ್ಯವಾಡಿರುವ ಟೀಮ್ ಇಂಡಿಯಾ ಇದೀಗ ಭಾನುವಾರ ಮತ್ತೆ ಕಣಕ್ಕಿಳಿಯಲಿದೆ. ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿರುವುದರಿಂದ ಹೆಚ್ಚು ಜನ ಪಂದ್ಯ ವೀಕ್ಷಿಸುತ್ತಾರೆ ಎಂಬ ಕಾರಣಕ್ಕೆ ಝಿಂಬಾಬ್ವೆ ಕ್ರಿಕೆಟ್ ಬೋರ್ಡ್ ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಿದ್ದಾರೆ. ಹೀಗಾಗಿಯೇ ನಿನ್ನೆ ಪಂದ್ಯವಾಡಿದ್ದ ಟೀಮ್ ಇಂಡಿಯಾ ಇವತ್ತು ಕೊನೆಯ ಮ್ಯಾಚ್ ಆಡಲಿದ್ದಾರೆ.

ಟೀಮ್ ಇಂಡಿಯಾ ಆರ್ಭಟ: ಝಿಂಬಾಬ್ವೆ ಧೂಳೀಪಟ:

ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಆಕರ್ಷಕ 81 ರನ್ (44 ಎಸೆತ) ಬಾರಿಸಿದರೆ, ತಿಲಕ್ ವರ್ಮಾ  ಸ್ಫೋಟಕ ಅಜೇಯ 60 ರನ್​ಗಳಿಸಿದರು. ಈ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 219 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಬೃಹತ್ ಗುರಿ ಬೆನ್ನಟ್ಟಿದ ಸಿಕಂದರ್ ರಾಝ ನೇತೃತ್ವದ ಝಿಂಬಾಬ್ವೆ ತಂಡ, ಭಾರತೀಯ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ 129 ರನ್‌ಗಳಿಗೆ ಆಲೌಟ್ ಆಯಿತು. ಪಾರ್ಟ್-ಟೈಮ್ ಸ್ಪಿನ್ನರ್ ಅಭಿಷೇಕ್ ಶರ್ಮಾ 17 ರನ್ ನೀಡಿ 3 ವಿಕೆಟ್ ಪಡೆದರೆ, ಯುವ ವೇಗಿ ಪ್ರಿನ್ಸ್ ಯಾದವ್ ಮತ್ತು ಚೊಚ್ಚಲ ಪಂದ್ಯವಾಡಿದ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದು ಭಾರತದ ಜಯವನ್ನು ಸರಳಗೊಳಿಸಿದರು. ಈ ಮೂಲಕ ಟೀಮ್ ಇಂಡಿಯಾ 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇಂದು ಕ್ಲೀನ್ ಸ್ವೀಪ್ ಗುರಿ:

ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಇದು ಮೊದಲ ಸರಣಿ ಗೆಲುವಾಗಿದ್ದು, ಕೊನೆಯ ಪಂದ್ಯದಲ್ಲೂ ಜಯಗಳಿಸಿ ಸರಣಿಯನ್ನು 3-0 ಇಂದ ಮುಗಿಸಲು ಅವರು ತಂತ್ರ ರೂಪಿಸುತ್ತಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಲೈನಪ್ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರಿಂದ ಅಬ್ಬರವನ್ನು ನಿರೀಕ್ಷಿಸಬಹುದು.

ಮತ್ತೊಂದೆಡೆ, ಝಿಂಬಾಬ್ವೆ ತಂಡ ತನ್ನ ತವರು ಮೈದಾನದಲ್ಲೇ ವೈಟ್‌ವಾಶ್ ಮುಖಭಂಗದಿಂದ ಬಲಿಷ್ಠ ಭಾರತವನ್ನು ತಡೆಯಬೇಕಾದ ಒತ್ತಡದಲ್ಲಿದೆ. ನಾಯಕ ಸಿಕಂದರ್ ರಾಝ, ಬ್ರಯಾನ್ ಬೆನೆಟ್ ಮತ್ತು ಬೌಲಿಂಗ್‌ನಲ್ಲಿ ಬ್ಲೆಸ್ಸಿಂಗ್ ಮುಝರಬಾನಿ ಅವರ ಮೇಲೆ ಝಿಂಬಾಬ್ವೆ ತಂಡ ಅತಿಯಾಗಿ ಅವಲಂಬಿತವಾಗಿದೆ.

ಇದನ್ನೂ ಓದಿ: ‘ಮೈ ಬ್ಯಾಡ್’… ಹೀಗೂ ರನೌಟ್ ಮಿಸ್ ಮಾಡಿಕೊಳ್ತಾರಾ!

ಇದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ಝಿಂಬಾಬ್ವೆ ತಂಡ ಹೀನಾಯವಾಗಿ ಸೋತಿರುವ ಕಾರಣ ಟೀಮ್ ಇಂಡಿಯಾ ಮೂರನೇ ಮ್ಯಾಚ್​ನಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಅದರಂತೆ ಭಾರತ ತಂಡವು ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

Exit mobile version