ಟೀಕೆಗಳ ಬೆನ್ನಲ್ಲೇ ಟೀಮ್ ಇಂಡಿಯಾಗೆ ನಬಿ ಎಂಟ್ರಿ..! – Kannada News

ದೇಶಿಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆಯಾಗದ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವೇಗಿ ಆಖಿಬ್ ನಬಿ ಅವರಿಗೆ ಕೊನೆಗೂ ಟೀಮ್ ಇಂಡಿಯಾದಿಂದ ಬುಲಾವ್ ಬಂದಿದೆ. ಆದರೆ ಆಟಗಾರನಾಗಿ ಅಲ್ಲ. ಬದಲಾಗಿ ಟೀಮ್ ಇಂಡಿಯಾದ ನೆಟ್​ ಬೌಲರ್ ಆಗಿ ಎಂಬುದು ವಿಶೇಷ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಸಿದ್ಧತೆಗಾಗಿ ಬಿಸಿಸಿಐ ಆಖಿಬ್ ನಬಿ ಅವರನ್ನು ಅಧಿಕೃತ ನೆಟ್ ಬೌಲರ್ ಹಾಗೂ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಿದೆ. ಅದರಂತೆ ಇದೀಗ ಅವರು ಮುಲ್ಲನ್‌ಪುರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಬೌಲಿಂಗ್ ಅಭ್ಯಾಸ ನಡೆಸಿಕೊಡುತ್ತಿದ್ದಾರೆ.

‘ಬಾರಾಮುಲ್ಲಾ ಎಕ್ಸ್‌ಪ್ರೆಸ್’ ಸಾಧನೆ:

ಬಾರಾಮುಲ್ಲಾ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿರುವ ಆಖಿಬ್ ನಬಿ, ಕಳೆದ ಎರಡು ರಣಜಿ ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

  •  2025-26ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್ ಪಟ್ಟಕ್ಕೇರಲು ಅಖಿಬ್ ಪ್ರಮುಖ ಪಾತ್ರವಹಿಸಿದ್ದರು.
  • ಆ ಸೀಸನ್‌ನಲ್ಲಿ ಆಖಿಬ್ ನಬಿ ಪಡೆದ ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 60
  • 2024-25 ಹಾಗೂ 2025-26ರ ರಣಜಿ ಸೀಸನ್​ಗಳ ಮೂಲ ಆಖಿಬ್ ನಬಿ ಒಟ್ಟು  104 ವಿಕೆಟ್‌ಗಳನ್ನು ಕಬಳಿಸಿದ್ದರು.

ಇದಾಗ್ಯೂ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಖಿಬ್ ನಬಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟರುಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಅದರಲ್ಲೂ ದಿಲೀಪ್ ವೆಂಗ್​ಸರ್ಕಾರ್ ಆಯ್ಕೆ ಸಮಿತಿಯ ನಡೆಯನ್ನು ವ್ಯಂಗ್ಯವಾಡಿ, ರಣಜಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡುವಂತೆ ಸೂಚಿಸಿದ್ದರು. ಮತ್ತೊಂದೆಡೆ ಸಂಜಯ್ ಮಂಜ್ರೇಕರ್ ಕೂಡ ಇದು ಅನ್ಯಾಯದ ನಡೆ ಎಂದು ಟೀಕಿಸಿದ್ದರು.

ಹೀಗೆ ಎಲ್ಲಾ ಕಡೆಯಿಂದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಇದೀಗ ಆಖಿಬ್ ನಬಿ ಅವರನ್ನು ಟೀಮ್ ಇಂಡಿಯಾಗೆ ಹೆಚ್ಚುವರಿ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.

ಸದ್ಯಕ್ಕೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರುವ ಆಖಿಬ್ ನಬಿಗೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲು ಅವಕಾಶ ಸಿಗುವುದಿಲ್ಲ. ಏಕೆಂದರೆ ಅವರನ್ನು 15 ಸದಸ್ಯರ ತಂಡದಲ್ಲಿ ಪರಿಗಣಿಸಲಾಗಿಲ್ಲ. ಬದಲಾಗಿ ಸ್ಟ್ಯಾಂಡ್ ಬೈ ಪ್ಲೇಯರ್​ಗಳ ಪಟ್ಟಿಯಲ್ಲಿರಿಸಲಾಗಿದೆ.

ಒಂದು ವೇಳೆ ಯಾವುದಾದರೂ ಬೌಲರ್​ ಗಾಯಗೊಂಡರೆ ಆಖಿಬ್ ನಬಿ ಅವರನ್ನು 15 ಸದಸ್ಯರುಗಳ ಬಳಗಕ್ಕೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನಬಿ ಟೀಮ್ ಇಂಡಿಯಾದ ನೆಟ್ ಬೌಲರ್​ ಆಗಿ ಮುಂದುವರೆಯಲಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್, ಹರ್ಷ್ ದುಬೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ಟೀಮ್ ಇಂಡಿಯಾ ನೆಟ್ ಬೌಲರ್‌ಗಳ ಪಟ್ಟಿ:

  • ವೇಗದ ಬೌಲರ್‌ಗಳು: ಆಖಿಬ್ ನಬಿ, ಪ್ರಿನ್ಸ್ ಯಾದವ್, ಗುರ್ಜಪ್ನೀತ್ ಸಿಂಗ್.
  • ಸ್ಪಿನ್ನರ್‌ಗಳು: ಸಾರಂಶ್ ಜೈನ್ (ಆಫ್-ಸ್ಪಿನ್), ಜೀಶನ್ ಅನ್ಸಾರಿ (ಲೆಗ್-ಸ್ಪಿನ್), ಶಿವಾಂಗ್ ಕುಮಾರ್ (ಚೈನಾಮನ್).

Published On – 9:04 am, Wed, 3 June 26

Source link

Garuda Purana: ಅಂತ್ಯಸಂಸ್ಕಾರದ ನಂತರ ಹಿಂತಿರುಗಿ ನೋಡಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News

ಅಂತ್ಯಸಂಸ್ಕಾರದ ನಂತರ ಹಿಂತಿರುಗಿ ನೋಡಬಾರದು ಯಾಕೆ?Image Credit source: Pinterest

ಹಿಂದೂ ಧರ್ಮದಲ್ಲಿ ಮನುಷ್ಯನ ಜನನದಿಂದ ಮರಣದವರೆಗೆ ಒಟ್ಟು 16 ಸಂಸ್ಕಾರಗಳನ್ನು ಹೇಳಲಾಗಿದೆ. ಇವುಗಳಲ್ಲಿ 16ನೇ ಹಾಗೂ ಕೊನೆಯ ಸಂಸ್ಕಾರವೇ ‘ಅಂತ್ಯಸಂಸ್ಕಾರ’. ಗರುಡ ಪುರಾಣದ ಪ್ರಕಾರ “ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರ ಮುಗಿದ ನಂತರ, ಅವರ ಕುಟುಂಬದವರು ಅಥವಾ ಸಂಬಂಧಿಕರು ಸ್ಮಶಾನದಿಂದ ವಾಪಸ್ ಬರುವಾಗ ಎಂದಿಗೂ ಹಿಂತಿರುಗಿ (ತಿರುಗಿ) ನೋಡಬಾರದು.” ಇದರ ಹಿಂದೆ ಒಂದು ದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣವಿದೆ.

ಮರಣ ಎಂಬುದು ಶಾಶ್ವತ ಸತ್ಯ:

“ಈ ಜೀವನ ಎಂಬುದು ಒಂದು ಬಾಡಿಗೆ ಮನೆ, ಒಂದು ದಿನ ಇದನ್ನು ಖಾಲಿ ಮಾಡಲೇಬೇಕು” ಎಂಬ ಮಾತನ್ನು ನಾವು ಕೇಳುತ್ತಲೇ ಇರುತ್ತೇವೆ. ಅಂದರೆ ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ನಿಶ್ಚಿತ. ಆದರೂ ಮನುಷ್ಯ ಸಾವಿನ ಬಗ್ಗೆ ಮಾತನಾಡಲು ಹಿಂಜರಿಯುತ್ತಾನೆ, ಅದಕ್ಕೆ ಹೆದರುತ್ತಾನೆ. ನಮ್ಮ ದೇಹವು ಪಂಚಭೂತಗಳಿಂದ (ಪೃಥ್ವಿ, ಜಲ, ವಾಯು, ಅಗ್ನಿ, ಆಕಾಶ) ಮಾಡಲ್ಪಟ್ಟಿದೆ ಮತ್ತು ಒಂದು ದಿನ ಇದೇ ತತ್ವಗಳಲ್ಲಿ ಲೀನವಾಗುತ್ತದೆ. ಮನುಷ್ಯ ಎಷ್ಟೇ ಆಸ್ತಿ-ಅಂತಸ್ತು ಗಳಿಸಿದರೂ ಕೊನೆಗೆ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿರುವಂತೆ: ‘ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ’ — ಅಂದರೆ, ಹುಟ್ಟಿದವನಿಗೆ ಸಾವು ಖಚಿತ ಮತ್ತು ಸತ್ತವನಿಗೆ ಮರುಜನ್ಮವೂ ಖಚಿತ. ಇದು ಎಂದಿಗೂ ಮುಗಿಯದ ನಿರಂತರ ಚಕ್ರ.

ಅಂತ್ಯಸಂಸ್ಕಾರದ ನಂತರ ಹಿಂತಿರುಗಿ ಯಾಕೆ ನೋಡಬಾರದು?

ಗರುಡ ಪುರಾಣದ ಪ್ರಕಾರ, ಚಿತೆಗೆ ಅಗ್ನಿಸ್ಪರ್ಶ ಮಾಡಿದ ನಂತರ ದೇಹವು ಬೂದಿಯಾಗಬಹುದು, ಆದರೆ ಆತ್ಮಕ್ಕೆ ಅಳಿವಿಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು. ದೇಹ ನಶಿಸಿದರೂ, ಆತ್ಮಕ್ಕೆ ತನ್ನ ಕುಟುಂಬದವರ ಮೇಲಿನ ಮೋಹ (ಮಮಕಾರ) ತಕ್ಷಣವೇ ಕರಗುವುದಿಲ್ಲ. ಅದು ತನ್ನವರ ಸುತ್ತಮುತ್ತಲೇ ಸುಳಿದಾಡುತ್ತಿರುತ್ತದೆ. ಈ ಮೋಹದ ಬಂಧನದಿಂದಾಗಿ ಆತ್ಮಕ್ಕೆ ಮುಂದಿನ ಲೋಕದ ಪ್ರಯಾಣ ಬೆಳೆಸಲು ಅಥವಾ ಮುಕ್ತಿ ಪಡೆಯಲು ಕಷ್ಟವಾಗುತ್ತದೆ. ಈ ಮೋಹದ ಪಾಸವನ್ನು ಮುರಿಯಲು ‘ಹಿಂತಿರುಗಿ ನೋಡಬಾರದು’ ಎಂಬ ನಿಯಮವನ್ನು ಮಾಡಲಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಆತ್ಮದ ಮೋಹ ಹೆಚ್ಚಾಗುತ್ತದೆ:

ಸ್ಮಶಾನದಿಂದ ವಾಪಸ್ ಬರುವಾಗ ಯಾರಾದರೂ ತಿರುಗಿ ನೋಡಿದರೆ, “ನನ್ನವರು ಇನ್ನು ಕೂಡ ನನ್ನ ಮೇಲಿನ ಆಸೆಯನ್ನು ಬಿಟ್ಟಿಲ್ಲ, ನನ್ನನ್ನು ನೆನೆಯುತ್ತಿದ್ದಾರೆ” ಎಂದು ಆತ್ಮ ಭಾವಿಸುತ್ತದೆ. ಇದರಿಂದ ಅದರ ಮೋಹ ಮತ್ತಷ್ಟು ಹೆಚ್ಚಾಗಿ, ಅದು ಮುಂದಿನ ಲೋಕಕ್ಕೆ ಹೋಗದೆ ಇದೇ ಲೋಕದಲ್ಲಿ ಅಲೆಯತೊಡಗುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿಗಳ ಪ್ರಭಾವ:

ಇನ್ನೊಂದು ನಂಬಿಕೆಯ ಪ್ರಕಾರ, ಸ್ಮಶಾನದಲ್ಲಿ ತಿರುಗಿ ನೋಡುವುದರಿಂದ ಅಲ್ಲಿನ ನಕಾರಾತ್ಮಕ ಶಕ್ತಿಗಳು ಅಥವಾ ಚಡಪಡಿಸುತ್ತಿರುವ ಆತ್ಮಗಳು ಜೀವಂತ ವ್ಯಕ್ತಿಯ ಮೇಲೆ ಪ್ರಭಾವ ಬೀರಬಹುದು. ವಿಶೇಷವಾಗಿ ಮಕ್ಕಳು ಈ ಪ್ರಭಾವಕ್ಕೆ ಬೇಗ ಒಳಗಾಗುವುದರಿಂದ, ಅವರನ್ನು ಎಂದಿಗೂ ತಿರುಗಿ ನೋಡದಂತೆ ಎಚ್ಚರಿಸಿ ಮುಂದೆ ಕರೆದುಕೊಂಡು ಹೋಗಲಾಗುತ್ತದೆ.

ಅಂತ್ಯಸಂಸ್ಕಾರದ ನಂತರ ಹಿಂತಿರುಗಿ ನೋಡದಿರುವುದು ಕೇವಲ ಒಂದು ಆಚರಣೆಯಲ್ಲ; ಅದು ಬದುಕಿರುವವರಿಗೆ “ಹೋದವರನ್ನು ನೆನೆದು ಮೋಹಕ್ಕೆ ಒಳಗಾಗಬೇಡಿ, ಜೀವನದಲ್ಲಿ ಮುಂದೆ ಸಾಗಿ” ಎಂಬ ಸಂದೇಶ ನೀಡಿದರೆ, ಅಗಲಿದ ಆತ್ಮಕ್ಕೆ “ನಿಮ್ಮ ಲೌಕಿಕ ಬಂಧನಗಳು ಮುಗಿದಿವೆ, ಮುಕ್ತಿಯ ಕಡೆಗೆ ಸಾಗಿ” ಎಂದು ಹೇಳುವ ಅತ್ಯುನ್ನತ ಆಧ್ಯಾತ್ಮಿಕ ಸಂಕೇತವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DK Shivakumar Oath Taking Live: ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ – Kannada News

ಬೆಂಗಳೂರು, ಜೂನ್ 03: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಸಿದ್ದರಾಮಯ್ಯ ಮತ್ತು 10 ರಿಂದ 12 ಮಂದಿ ಶಾಸಕರೂ ಸಹ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ 10,000ಕ್ಕೂ ಹೆಚ್ಚು ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 1,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಧರ್ಮಗುರುಗಳೂ ಸಹ ಈ ಕಾರ್ಯಕ್ರಮದಲ್ಲಿದ್ದು, ಸಂಜೆ 4:05ಕ್ಕೆ ಸರಿಯಾಗಿ ಪದಗ್ರಹಣ ನೆರವೇರಲಿದೆ.

ಕರ್ನಾಟಕ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ಜಟಾಪಟಿ ನಡೆದಿತ್ತು. ಇತ್ತೀಚೆಗೆ ಸಿದ್ದರಾಮಯ್ಯನವರ ದೆಹಲಿ ಭೇಟಿ, ಹೈಕಮಾಂಡ್ ಜೊತೆಗಿನ ಚರ್ಚೆಯ ಬಳಿಕ ಈ ಜಟಾಪಟಿಗೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟು ರಾಜೀನಾಮೆ ಕೊಡುವುದರ ಜೊತೆಗೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆಂದು ಘೋಷಿಸಿದ್ದರು. ಅಂತೆಯೇ ಇಂದು ಸಿಎಂ ಆಗಿ ಡಿಕೆಶಿ ಕುರ್ಚಿ ಏರಲು ಸಿದ್ಧರಾಗಿದ್ದಾರೆ. ಡಿ ಕೆ ಶಿವಕುಮಾರ್ ಜೊತೆಗೆ 10-12 ಮಂದಿ ಶಾಸಕರ ಪ್ರಮಾಣವಚನದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಈ ರೀತಿ ಪ್ರೇಮ ನಿವೇದನೆ ಎಲ್ಲಾದ್ರೂ ನೋಡಿದ್ದೀರಾ, ಸೇನಾ ಹೆಲಿಕಾಪ್ಟರ್ ಎದುರು ತನ್ನ ಗೆಳತಿಯ ಬೆರಳಿಗೆ ಉಂಗುರ ತೊಡಿಸಿದ ಪೈಲಟ್ – Kannada News

ನಾಸಿಕ್, ಜೂನ್ 03: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯ (CAATS) ರನ್‌ವೇ ಇತ್ತೀಚೆಗೆ ಕೇವಲ ಮಿಲಿಟರಿ ಶಿಸ್ತಿಗಷ್ಟೇ ಅಲ್ಲ, ಹೃದಯಸ್ಪರ್ಶಿ ಪ್ರೇಮ ನಿವೇದನೆಯೊಂದಕ್ಕೂ ಸಾಕ್ಷಿಯಾಯಿತು. ದೀರ್ಘ ಹಾಗೂ ಕಠಿಣ ತರಬೇತಿಯನ್ನು ಮುಗಿಸಿ ಭಾರತೀಯ ಸೇನೆಯ ವಾಯುಯಾನ ವಿಭಾಗದ ಪೈಲಟ್(Pilot) ಆಗಿ ಹೊರಹೊಮ್ಮಿದ ಕ್ಯಾಪ್ಟನ್ ಭರತ್ ಭಾರದ್ವಾಜ್, ತಮ್ಮ ವೃತ್ತಿಜೀವನದ ಅತ್ಯುನ್ನತ ಯಶಸ್ಸಿನ ದಿನವನ್ನೇ ತಮ್ಮ ಜೀವನದ ಅತ್ಯಂತ ಸುಂದರ ಕ್ಷಣವನ್ನಾಗಿಯೂ ಬದಲಾಯಿಸಿಕೊಂಡರು.

ಪಾಸಿಂಗ್-ಔಟ್ ಪೆರೇಡ್ ಮತ್ತು ರೋಮಾಂಚಕ ವಾಯುಯಾನ ಪ್ರದರ್ಶನ ಮುಗಿದ ತಕ್ಷಣ, ಕ್ಯಾಪ್ಟನ್ ಭಾರದ್ವಾಜ್ ಎಲ್ಲರ ಸಮ್ಮುಖದಲ್ಲೇ ತಮ್ಮ ಗೆಳತಿ ಆರುಷಿಗೆ ವಿಶಿಷ್ಟವಾಗಿ ಪ್ರೊಪೋಸ್ ಮಾಡಿ ಇಡೀ ಆವರಣದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ರನ್‌ವೇ ಮೇಲೊಂದು ಸಿನಿಮೀಯ ಕ್ಷಣ
ತಮ್ಮ ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದ ಕ್ಯಾಪ್ಟನ್ ಭರತ್, ರನ್‌ವೇ ಮೇಲೆ ನಿಲ್ಲಿಸಲಾಗಿದ್ದ ಬೃಹತ್ ಸೇನಾ ಹೆಲಿಕಾಪ್ಟರ್‌ನ ಮುಂಭಾಗಕ್ಕೆ ಆರುಷಿಯನ್ನು ಕರೆತಂದರು. ಅಲ್ಲಿದ್ದ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಕುತೂಹಲದಿಂದ ನೋಡುತ್ತಿರುವಾಗಲೇ, ಆರುಷಿಯ ಎದುರು ಮೊಣಕಾಲೂರಿ ಕುಳಿತು ನಿಶ್ಚಿತಾರ್ಥದ ಉಂಗುರವನ್ನು ನೀಡಿ ಪ್ರೇಮ ನಿವೇದನೆ ಮಾಡಿದರು.

ಈ ಅನಿರೀಕ್ಷಿತ ಸರ್ಪ್ರೈಸ್‌ನಿಂದ ಆರುಷಿ ಭಾವುಕರಾದರು. ಅವರು ಸಂತಸದಿಂದ ಒಪ್ಪಿಗೆ ಸೂಚಿಸುತ್ತಿದ್ದಂತೆ, ಸುತ್ತಲೂ ಸೇರಿದ್ದ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಚಪ್ಪಾಳೆ ಹಾಗೂ ಹರ್ಷೋದ್ಗಾರಗಳ ಮೂಲಕ ಈ ಜೋಡಿಯನ್ನು ಹರಸಿದರು.

ಮತ್ತಷ್ಟು ಓದಿ: ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಐದು ವರ್ಷಗಳ ಪ್ರೀತಿ, ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ
ತಮ್ಮ ಜೀವನದ ಈ ಅಪೂರ್ವ ಕ್ಷಣದ ಕುರಿತು ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರು ಸುದ್ದಿ ಸಂಸ್ಥೆ ಎಎನ್​ಐಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾವು ಇಂದು ಕಠಿಣ ತರಬೇತಿ ಮುಗಿಸಿ ಪೈಲಟ್‌ಗಳಾಗಿದ್ದೇವೆ. ನಮ್ಮ ಕಠಿಣ ಪರಿಶ್ರಮಕ್ಕೆ ಇಂದು ದೊಡ್ಡ ಗೌರವ ಸಿಕ್ಕಿದೆ. ನಾನು ಮತ್ತು ಆರುಷಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ನನ್ನ ವೃತ್ತಿಜೀವನ ಹಾಗೂ ನನ್ನ ಕುಟುಂಬಕ್ಕೆ ಇದು ಎಷ್ಟು ಮಹತ್ವದ ದಿನವೋ, ಅಷ್ಟೇ ಮೌಲ್ಯಯುತವಾಗಿ ಈ ದಿನವನ್ನು ನನ್ನ ಪ್ರೇಯಸಿಗೂ ಜೀವಮಾನದ ನೆನಪಾಗಿಸಬೇಕು ಎಂಬುದು ನನ್ನ ಆಲೋಚನೆಯಾಗಿತ್ತು ಎಂದಿದ್ದಾರೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತು ಮೆಚ್ಚುಗೆ
ಈ ಅಪರೂಪದ ಪ್ರಸ್ತಾವನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ. ಬಹುತೇಕ ನೆಟ್ಟಿಗರು ಇದನ್ನು ನಿಜ ಜೀವನದ ಸಿನಿಮೀಯ ಕ್ಷಣ ಎಂದು ಶ್ಲಾಘಿಸಿದ್ದು, ದೇಶ ಕಾಯುವ ಸೈನಿಕನೊಬ್ಬ ತನ್ನ ಯಶಸ್ಸಿನ ಉತ್ತುಂಗದಲ್ಲಿ ಪ್ರೀತಿಪಾತ್ರರನ್ನು ಗೌರವಿಸಿದ ರೀತಿಗೆ ಮನಸೋತಿದ್ದಾರೆ.

ಇದೇ ವೇಳೆ, ಸೇನೆಯ ಕಟ್ಟುನಿಟ್ಟಾದ ಶಿಸ್ತಿನ ಚೌಕಟ್ಟಿನೊಳಗೆ ಇಂತಹ ವೈಯಕ್ತಿಕ ಆಚರಣೆಗಳು ಎಷ್ಟು ಸೂಕ್ತ ಎಂಬ ಬಗ್ಗೆ ಅಂತರ್ಜಾಲದಲ್ಲಿ ಸಣ್ಣ ಮಟ್ಟದ ಚರ್ಚೆಗಳೂ ನಡೆದಿವೆ. ಆದಾಗ್ಯೂ, ತರಬೇತಿ ಮುಗಿಸಿದ ಯುವ ಅಧಿಕಾರಿಗಳ ಸಂಭ್ರಮದ ನಡುವೆ ಮೂಡಿಬಂದ ಈ ಸುಂದರ ಮಾನವೀಯ ಸಂಬಂಧದ ಕಥೆ ಪ್ರಸ್ತುತ ಎಲ್ಲೆಡೆ ಭಾರಿ ಸೌಂಡ್ ಮಾಡುತ್ತಿದ್ದು, ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

DK Shivakumar Oath Taking Live: ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ – Kannada News

ಬೆಂಗಳೂರು, ಜೂನ್ 03: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಸಿದ್ದರಾಮಯ್ಯ ಮತ್ತು 10 ರಿಂದ 12 ಮಂದಿ ಶಾಸಕರೂ ಸಹ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ 10,000ಕ್ಕೂ ಹೆಚ್ಚು ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 1,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಧರ್ಮಗುರುಗಳೂ ಸಹ ಈ ಕಾರ್ಯಕ್ರಮದಲ್ಲಿದ್ದು, ಸಂಜೆ 4:05ಕ್ಕೆ ಸರಿಯಾಗಿ ಪದಗ್ರಹಣ ನೆರವೇರಲಿದೆ.

ಕರ್ನಾಟಕ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ಜಟಾಪಟಿ ನಡೆದಿತ್ತು. ಇತ್ತೀಚೆಗೆ ಸಿದ್ದರಾಮಯ್ಯನವರ ದೆಹಲಿ ಭೇಟಿ, ಹೈಕಮಾಂಡ್ ಜೊತೆಗಿನ ಚರ್ಚೆಯ ಬಳಿಕ ಈ ಜಟಾಪಟಿಗೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟು ರಾಜೀನಾಮೆ ಕೊಡುವುದರ ಜೊತೆಗೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆಂದು ಘೋಷಿಸಿದ್ದರು. ಅಂತೆಯೇ ಇಂದು ಸಿಎಂ ಆಗಿ ಡಿಕೆಶಿ ಕುರ್ಚಿ ಏರಲು ಸಿದ್ಧರಾಗಿದ್ದಾರೆ. ಡಿ ಕೆ ಶಿವಕುಮಾರ್ ಜೊತೆಗೆ 10-12 ಮಂದಿ ಶಾಸಕರ ಪ್ರಮಾಣವಚನದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಚಡ್ಡಿ-ಬನಿಯನ್​ನಲ್ಲಿ ದೇವಸ್ಥಾನಕ್ಕೆ ಬಂದ ವರುಣ್ ಧವನ್; ಭಾರಿ ಆಕ್ರೋಶ, ಟ್ರೋಲ್ – Kannada News

ಬಾಲಿವುಡ್ ನಟ ವರುಣ್ ಧವನ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೂನ್ 5ರಂದು ತೆರೆಗೆ ಬರುತ್ತಿದೆ. ಈ ನಡುವೆ ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನಕ್ಕೆ ಅವರು ಧರಿಸಿ ಬಂದಿದ್ದ ಉಡುಪಿನ ಶೈಲಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವರುಣ್ ಧವನ್ ಅವರು ಬನಿಯಾನ್ ಮತ್ತು ಹಾಫ್ ಶಾರ್ಟ್ಸ್ ಧರಿಸಿ ದೇವಸ್ಥಾನಕ್ಕೆ ದರ್ಶನ ಪಡೆಯಲು ಬಂದಿದ್ದರು. ಇದನ್ನು ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ‘ವರುಣ್ ಧವನ್ ಅವರಿಗೆ ದೇವಸ್ಥಾನ ಮತ್ತು ಜಿಮ್ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ? ವರ್ಕೌಟ್ ಮಾಡುವ ಬಟ್ಟೆ ಧರಿಸಿ ಪವಿತ್ರ ಸ್ಥಳಕ್ಕೆ ಬರುವುದು ಎಷ್ಟು ಸರಿ?’ ಎಂದು ಹಲವರು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:

ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಧಾರ್ಮಿಕ ಸ್ಥಳಗಳ ಘನತೆ ಮತ್ತು ವಸ್ತ್ರಸಂಹಿತೆಯ ಬಗ್ಗೆ ಪರ-ವಿರೋಧದ ಕಮೆಂಟ್‌ಗಳು ಬರುತ್ತಿವೆ. ‘ಯಾವುದಾದರೂ ಮುಸ್ಲಿಂ ನಟರು ಮಸೀದಿಗೆ ಹೋಗುವಾಗ ಇಂತಹ ಉಡುಪು ಧರಿಸಿ ಹೋಗುವುದನ್ನು ಯಾರಾದರೂ ನೋಡಿದ್ದೀರಾ? ಕೇವಲ ಹಿಂದೂ ದೇವಸ್ಥಾನಗಳಿಗೆ ಬರುವಾಗಲೇ ಇಂತಹ ಬೇಜವಾಬ್ದಾರಿತನ ಏಕೆ’ ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ. ಧಾರ್ಮಿಕ ಆಚರಣೆಗಳ ಜಾಗಕ್ಕೆ ಬರುವಾಗ ಕನಿಷ್ಠ ಗೌರವ ಇರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ವರುಣ್ ಧವನ್, ಮೃಣಾಲ್ ಜೊತೆಗಿನ ಶೂಟಿಂಗ್ ವಿಡಿಯೋ ಹಂಚಿಕೊಂಡ ಪೂಜಾ

ಸದ್ಯ ವರುಣ್ ಧವನ್ ಸಿನಿಮಾ ಪ್ರಚಾರದ ನಡುವೆ ಈ ವಿವಾದಕ್ಕೆ ಸಿಲುಕಿದ್ದು, ಈ ಟ್ರೋಲ್‌ಗಳ ಬಗ್ಗೆ ಅವರಾಗಲಿ ಅಥವಾ ಅವರ ತಂಡವಾಗಲಿ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆ ಅವರ ಸಿನಿಮಾ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:36 am, Wed, 3 June 26

Source link

ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ! – Kannada News

ವೈಭವ್ ಸೂರ್ಯವಂಶಿ… ವಯಸ್ಸು ಕೇವಲ 15, ಹರಾಜಿನಲ್ಲಿ ಸಿಕ್ಕಿದ್ದು 1.10 ಕೋಟಿ ರೂ, ಆದರೆ ಮೈದಾನದಲ್ಲಿ ಸೃಷ್ಟಿಸಿದ ಸಿಸಿಲಬ್ಬರದ ಮೌಲ್ಯ ಬರೋಬ್ಬರಿ 34.97 ಕೋಟಿ ರೂ.! ಹೌದು, ಇದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿರುವ ವೈಭವ್ ಸೂರ್ಯವಂಶಿಯ ಈ ಬಾರಿ ಐಪಿಎಲ್​ ಮೌಲ್ಯ.

2025 ರಲ್ಲಿ 14 ವರ್ಷ ವರ್ಷದ ಅನ್‌ಕ್ಯಾಪ್ಡ್ ಆಟಗಾರ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 1.1 ಕೋಟಿ ರೂ.ಗೆ ಖರೀದಿಸಿದಾಗ ಇದೊಂದು ಸಾಮಾನ್ಯ ಹೂಡಿಕೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಈ ಸೀಸನ್‌ನಲ್ಲಿ ವೈಭವ್ ಸೃಷ್ಟಿಸಿದ ಸುನಾಮಿ, ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹರಾಜು ಲಾಭವಾಗಿ ದಾಖಲಾಗಿದೆ.

ಅಂದರೆ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ಮತ್ತು ಬಾಲ್-ಬೈ-ಬಾಲ್ ಇಂಪ್ಯಾಕ್ಟ್ ಮಾಡೆಲ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವೈಭವ್ ಈ ಸೀಸನ್‌ನಲ್ಲಿ ನೀಡಿದ ಆನ್-ಫೀಲ್ಡ್ ಪ್ರದರ್ಶನದ ನಿಜವಾದ ಮೌಲ್ಯ ಬರೋಬ್ಬರಿ ₹34.97 ಕೋಟಿ ರೂ. ಅಂದರೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹೂಡಿದ ಹಣಕ್ಕಿಂತ ಶೇ. 3000ಕ್ಕೂ ಹೆಚ್ಚು ಲಾಭವನ್ನು ಈ ಯುವ ಆಟಗಾರ ತಂದುಕೊಟ್ಟಿದ್ದಾನೆ.

ಕೋಟಿಗೆ ಕೋಟಿಗಳ ಲಾಭ:

  • ಈ ಬಾರಿಯ ಐಪಿಎಲ್​ನಲ್ಲಿ 16 ಇನಿಂಗ್ಸ್ ಆಡಿರುವ ವೈಭವ್ ಸೂರ್ಯವಂಶಿ ಬರೀಬ್ಬರಿ 776 ರನ್ ಚಚ್ಚಿದ್ದರು.
  • ವೈಭವ್ ಸೂರ್ಯವಂಶಿ ಈ ಬಾರಿ ಆರ್ಭಟಿಸಿದ್ದು 237.30ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.
  • 237.30 ರ ಸ್ಟ್ರೈಕ್ ರೇಟ್​ನಲ್ಲಿ 700+ ರನ್ ಕಲೆಹಾಕಿದ ಆರೆಂಜ್ ಕ್ಯಾಪ್ ಗೆದ್ದ ಮೊದಲ ಆಟಗಾರ ವೈಭವ್.
  • ಕೇವಲ 16 ಇನಿಂಗ್ಸ್​ಗಳಲ್ಲಿ ವೈಭವ್ ಬ್ಯಾಟ್​ನಿಂದ ಸಿಡಿದ ಸಿಕ್ಸರ್​ ಸಂಖ್ಯೆ ಬರೋಬ್ಬರಿ 72

ಇವೆಲ್ಲಾ ರಾಜಸ್ಥಾನ್ ರಾಯಲ್ಸ್ ಪಾಲಿಗೆ ಕೋಟಿ ಲೆಕ್ಕದಲ್ಲಿ ಲಾಭ ತಂದು ಕೊಟ್ಟಿದೆ. ಅಂದರೆ ರಿಟರ್ನ್ ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ವೈಭವ್​ನಿಂದ ಆರ್​ಆರ್ ಫ್ರಾಂಚೈಸಿ ಬರೋಬ್ಬರಿ ಶೇ 3000 ದಷ್ಟು ಲಾಭ ಪಡೆದುಕೊಂಡಿದೆ.

ಏನಿದು ಇಂಪ್ಯಾಕ್ಟ್ ಮಾಡೆಲ್?

‘ರಿಟರ್ನ್ ಇಂಪ್ಯಾಕ್ಟ್ ಮಾಡೆಲ್’  ಅಥವಾ ‘ಪ್ಲೇಯರ್ ಇಂಪ್ಯಾಕ್ಟ್ ಮೆಟ್ರಿಕ್’ ಎನ್ನುವುದು ಐಪಿಎಲ್ ಮುಗಿದ ತಕ್ಷಣ ಆಟಗಾರರ ಪ್ರದರ್ಶನವನ್ನು ಮುಂದಿಟ್ಟು ಮಾಡುವ ಮೌಲ್ಯಧಾರಿತ ಲೆಕ್ಕಾಚಾರ. ಅಂದರೆ ಇಲ್ಲಿ ಆಟಗಾರ ಕಲೆಹಾಕಿದ ರನ್ ಅಥವಾ ಪಡೆದ ವಿಕೆಟ್‌ಗಳ ಆಧಾರದ ಮೇಲಲ್ಲದೆ, ಆತ ಮೈದಾನದಲ್ಲಿ ಆಡಿದ ಪ್ರತಿ ಚೆಂಡಿನ ಮೂಲಕ ಪಂದ್ಯದ ಮೇಲೆ ಬೀರಿದ ನೈಜ ಪ್ರಭಾವವನ್ನು ಹಣದ ಮೌಲ್ಯಕ್ಕೆ ಪರಿವರ್ತಿಸಿ ಲೆಕ್ಕಾಚಾರ ಮಾಡಲಾಗುತ್ತದೆ.

ಇದರೊಂದು ಸುಧಾರಿತ ಸ್ಪೋರ್ಟ್ಸ್ ಡೇಟಾ ಅನಾಲಿಟಿಕ್ಸ್ ವ್ಯವಸ್ಥೆಯಾಗಿದ್ದು, ಈ ಮೂಲಕ ಪ್ರತಿ ಸೀಸನ್​ನಲ್ಲಿ ಆಟಗಾರನಿಗೆ ನೀಡಲಾದ ಮೊತ್ತ ಹಾಗೂ ಆತನಿದಂದ ಫ್ರಾಂಚೈಸಿಗೆ ಆದ ಲಾಭವನ್ನು ಲೆಕ್ಕ ಮಾಡಲಾಗುತ್ತದೆ. ಬ್ಯಾಟರ್​ಗಳ ವಿಚಾರದಲ್ಲಿ ಇದನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ ಎಂದರೆ…

  • ಗೆಲುವಿನ ಸಂಭವನೀಯತೆ: ಒಬ್ಬ ಬ್ಯಾಟರ್ ಕ್ರೀಸ್‌ಗೆ ಬಂದಾಗ ತಂಡದ ಗೆಲುವಿನ ಶೇಕಡಾವಾರು ಎಷ್ಟಿತ್ತು? ಅವರು ಔಟಾಗಿ ಹೋಗುವಾಗ ಅಥವಾ ಪಂದ್ಯ ಮುಗಿಸುವಾಗ ಆ ಗೆಲುವಿನ ಅವಕಾಶ ಎಷ್ಟು ಹೆಚ್ಚಾಯಿತು? ಎಂಬುದನ್ನು ಪ್ರತಿ ಬಾಲ್‌ನಲ್ಲೂ ಲೆಕ್ಕ ಹಾಕಲಾಗುತ್ತದೆ.
  • ರನ್ ಗಳಿಸಿದ ವೇಗ: ಕಠಿಣ ಓವರ್‌ಗಳಲ್ಲಿ ಅಥವಾ ಪವರ್‌ಪ್ಲೇ ಅವಧಿಯಲ್ಲಿ ಎಷ್ಟು ವೇಗವಾಗಿ ರನ್ ಗಳಿಸಿದರು? ಎಂಬುದನ್ನು ಇಲ್ಲಿ ಪರಿಗಣಿಸಲಾಗುತ್ತದೆ.
  • ಪರಿಸ್ಥಿತಿಯ ಗಂಭೀರತೆ: ವಿಕೆಟ್‌ಗಳು ಬಿದ್ದಾಗ ಅಥವಾ ಒತ್ತಡದ ನಾಕೌಟ್ ಪಂದ್ಯಗಳಲ್ಲಿ ರನ್ ಬಂದಿವೆಯೇ? ಎಂಬುದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
  • ಬೌಂಡರಿಗಳ ಕೊಡುಗೆ: ಎಷ್ಟು ಎಸೆತರಗಳಲ್ಲಿ ಬೌಂಡರಿ ಬಾರಿಸಿದ್ದಾರೆ, ಎಷ್ಟು ಡಾಟ್ ಬಾಲ್‌ಗಳನ್ನು ಆಡಿದ್ದಾರೆ ಎಂಬುದು ಕೂಡ ಪರಿಗಣನೆ ಬರುತ್ತದೆ.

ವೈಭವ್​ ಸೂರ್ಯವಂಶಿಯಿಂದ ಸಿಕ್ಕ ಲಾಭವೇನು?

ವೈಭವ್ ಸೂರ್ಯವಂಶಿಗೆ ರಾಜಸ್ಥಾನ್ ರಾಯಲ್ಸ್ ಹೂಡಿಕೆ ಮಾಡಿರುವುದು 1.1 ಕೋಟಿ ರೂ. ಅಂದರೆ ಅವರಿಗೆ ಈ ಬಾರಿ ಆರ್​ಆರ್ ಫ್ರಾಂಚೈಸಿ ನೀಡಿರುವ ಸಂಭಾವನೆ ಎಷ್ಟು ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಈ ಸಂಭಾವನೆಯನ್ನು ವೈಭವ್ ಆಡಿದ 16 ಪಂದ್ಯಗಳಿಗೆ ಹಂಚಿದರೆ, ಪ್ರತಿ ಪಂದ್ಯಕ್ಕೆ ಅವರ ಮೇಲೆ ಫ್ರಾಂಚೈಸಿ ಮಾಡಿದ ಖರ್ಚು ₹6.88 ಲಕ್ಷ.ಗಳಿಸಿದ ಮೌಲ್ಯ. ಆದರೆ ಅದೇ ವೈಭವ್ ಆಡಿದ ಇನಿಂಗ್ಸ್​ಗಳ ಮೌಲ್ಯ ಫ್ರಾಂಚೈಸಿ ಮಾಡಿದ ಖರ್ಚಿಗಿಂತ ಹೆಚ್ಚಿತ್ತು.

ಉದಾಹರಣೆಗೆ, ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದ್ದರು. ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಲೇ ರಾಜಸ್ಥಾನ್ ರಾಯಲ್ಸ್ ತಂಡ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ಆ 29 ಎಸೆತಗಳ ಒಂದೇ ಇನಿಂಗ್ಸ್‌ನ ಮೌಲ್ಯ ಬರೋಬ್ಬರಿ ₹5.22 ಕೋಟಿ ಎಂದು ಅಂದಾಜಿಸಲಾಯಿತು!

ಅಂದರೆ ಆಟಗಾರನಿಗೆ ನೀಡುತ್ತಿರುವ ಸಂಭಾವನೆ ಹಾಗೂ ಆತ ಆಡುತ್ತಿರುವ ಆಟ, ಪಂದ್ಯದ ಮೇಲೆ ಬೀರುತ್ತಿರುವ ಪ್ರಭಾವ, ಗೆಲುವಿನ ಕೊಡುಗೆಗಳಲ್ಲೆವೂ ಇಂಪ್ಯಾಕ್ಟ್ ಮಾಡೆಲ್​ನಲ್ಲಿ ಅಳೆಯಲಾಗುತ್ತದೆ. ಹೀಗೆ ಪ್ರತಿಯೊಂದನ್ನು ಪರಿಗಣಿಸುವ ಮೂಲಕ ಆತನ ಒಟ್ಟು ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಅದರಂತೆ ವೈಭವ್ ಸೂರ್ಯವಂಶಿಯ ಇಂಪ್ಯಾಕ್ಟ್ ಮಾಡೆಲ್​ ಅನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗಿದೆ…

  • ವೈಭವ್ ಸೂರ್ಯವಂಶಿಗೆ ಹೂಡಿಕೆ ಮಾಡಲಾದ ಒಟ್ಟು ಮೊತ್ತ ₹1.1 ಕೋಟಿ  (ಹರಾಜು ಮೊತ್ತ).
  • ವೈಭವ್ ಸೂರ್ಯವಂಶಿ ಪ್ರದರ್ಶನದ ಮೌಲ್ಯ ₹34.97 ಕೋಟಿ
  • ಫ್ರಾಂಚೈಸಿಗೆ ಸಿಕ್ಕ ನಿವ್ವಳ ಲಾಭ: ₹34.80 ಕೋಟಿ – ₹1.10 ಕೋಟಿ = ₹33.87 ಕೋಟಿ

ಅಂದರೆ ವೈಭವ್ ಸೂರ್ಯವಂಶಿ ₹30 ಕೋಟಿಗೂ ಅಧಿಕ ಮೌಲ್ಯದ ಪ್ರದರ್ಶನ ನೀಡಿದ್ದಾರೆ. ಅಂದರೆ ₹30 ಕೋಟಿ ಸಂಭಾವನೆ ಪಡೆಯುವ ಆಟಗಾರನಿಂದ ಸಿಗುವ ಪ್ರದರ್ಶನವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಕೇವಲ ₹1.10 ಕೋಟಿಯ ಹೂಡಿಕೆಯಲ್ಲೇ ಪಡೆದು ಕೊಂಡಿದೆ.

ಇಂಪ್ಯಾಕ್ಟ್ ಮಾಡೆಲ್ ಪ್ರಕಾರ, ರಾಜಸ್ಥಾನ್ ರಾಯಲ್ಸ್ ವೈಭವ್​ ಮೇಲೆ ಹೂಡಿದ ಪ್ರತಿ 1 ರೂಪಾಯಿಗೆ ₹31.79 ರಷ್ಟು ಮೌಲ್ಯದ ಆಟ ಮರಳಿ ಸಿಕ್ಕಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ₹1.1 ಕೋಟಿ ಹೂಡಿಕೆಯಿಂದ ಬರೋಬ್ಬರಿ ₹33.87 ಕೋಟಿ ಮೌಲ್ಯಾಧಾರಿತ ಲಾಭ ಪಡೆದುಕೊಂಡಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನದ ಮೌಲ್ಯ 34.97 ಕೋಟಿ ರೂ.  ಇದನ್ನು ಬಿಡ್ಡಿಂಗ್ ಲೆಕ್ಕಾಚಾರದಲ್ಲಿ  ಪರಿಗಣಿಸಿದರೆ ವೈಭವ್ ಕನಿಷ್ಠ 30 ಕೋಟಿ ರೂ.ಗೆ ಹರಾಜಾಗಬಹುದಾದ ಆಟಗಾರ. ಹೀಗಾಗಿ ವೈಭವ್ ಸೂರ್ಯವಂಶಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರ ಖರೀದಿಗಾಗಿ ಕೋಟಿಗಳ ಸುರಿಮಳೆಯಾಗುವುದು ಖಚಿತ ಎಂದೇ ಹೇಳಬಹುದು.

Source link

Karnataka Weather Forecast: ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ವರುಣಾರ್ಭಟ! 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News

ಬೆಂಗಳೂರು, ಜೂನ್ 03: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗಲಿದ್ದು, ಪ್ರಮುಖ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (Weather) ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಮುಖ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ.

ಮುಖ್ಯಾಂಶಗಳು

  • ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
  • ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
  • ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಭಾರಿ ಮಳೆಯ ಮುನ್ಸೂಚನೆ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಸಿಡಿಲು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿರುವ ಬಲವಾದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಹಲವೆಡೆ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲೂ ಭಾರೀ ಮಳೆ

ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಕೊಡಗು, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಯೆಲ್ಲೋ ಅಲರ್ಟ್ ಘೋಷಿಸಲಾಗಿರುವ ಜಿಲ್ಲೆಗಳ ಸಾರ್ವಜನಿಕರು ಹಾಗೂ ರೈತರು ಗುಡುಗು-ಸಿಡಿಲಿನ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು ಮತ್ತು ಮರದ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜಗದ್ಧಾತ್ರಿ’ ಧಾರಾವಾಹಿಗೆ ಸ್ಟಾರ್ ಹೀರೋನ ಎಂಟ್ರಿ?

ಕನ್ನಡ ಕಿರುತೆರೆಯಲ್ಲಿ ಸದಾ ಹೊಸ ಬಗೆಯ ಕಥೆಗಳಿಗೆ ಭಾರಿ ಬೇಡಿಕೆ ಇರುತ್ತದೆ. ಇತ್ತೀಚೆಗಷ್ಟೇ ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ‘ಜಗದ್ಧಾತ್ರಿ’ ಎಂಬ ಹೊಸ ಸೀರಿಯಲ್ ಅನೌನ್ಸ್ ಆಗಿ ಕಿರುತೆರೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಈಗ ಈ ಬಹುನಿರೀಕ್ಷಿತ ಪ್ರೊಜೆಕ್ಟ್‌ನಿಂದ ಮತ್ತೊಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಈ ಧಾರಾವಾಹಿಗೆ ನಾಯಕನಾಗಿ ಹ್ಯಾಂಡ್ಸಮ್ ಸ್ಟಾರ್ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಮೆಗಾ ಹಿಟ್ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ಧಾರ್ಥ್ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ವಿಜಯ್ ಸೂರ್ಯ, ತಮ್ಮ ರೊಮ್ಯಾಂಟಿಕ್ ಲುಕ್ ಹಾಗೂ ನಟನೆಯಿಂದಲೇ ಅಪಾರ ಮಹಿಳಾ ಅಭಿಮಾನಿಗಳನ್ನು ಗಳಿಸಿಕೊಂಡವರು. ಇದೀಗ ಅವರು ‘ಜಗದ್ಧಾತ್ರಿ’ ತಂಡವನ್ನು ಸೇರಿಕೊಂಡಿರುವುದು ಸೀರಿಯಲ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಮೂಲಗಳ ಪ್ರಕಾರ, ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಫ್ರೆಶ್ ಕಾಂಬಿನೇಷನ್ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಕೌಟುಂಬಿಕ ಡ್ರಾಮಾದಲ್ಲಿ ಇಬ್ಬರ ಪಾತ್ರಗಳೂ ಸಖತ್ ಪವರ್‌ಫುಲ್ ಆಗಿರಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಈಗಾಗಲೇ ಸೀರಿಯಲ್‌ನ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ಅಧಿಕೃತ ಟೆಲಿಕಾಸ್ಟ್ ದಿನಾಂಕ ಹೊರಬೀಳಲಿದೆ. ‘ಅಗ್ನಿಸಾಕ್ಷಿ’ ಬಳಿಕ ವಿಜಯ್ ಸೂರ್ಯ ಹಾಗೂ ‘ಪಾರು’ ನಂತರ ಮೋಕ್ಷಿತಾ ಪೈ ಅವರನ್ನು ಮತ್ತೆ ವಿಭಿನ್ನ ಲುಕ್‌ನಲ್ಲಿ ನೋಡಲು ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರಿಗೆ ಈ ಸುದ್ದಿ ನಿಜಕ್ಕೂ ದೊಡ್ಡ ಹಬ್ಬದ ಸಂಭ್ರಮ ತಂದಿದೆ. ಇವರಿಬ್ಬರ ಕೆಮಿಸ್ಟ್ರಿ ಹಾಗೂ ಈ ‘ಜಗದ್ಧಾತ್ರಿ’ಯ ಹೊಸ ಜರ್ನಿ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ. ಈ ಧಾರಾವಾಹಿಯಲ್ಲಿ ಕವಿತಾ ಗೌಡ ಕೂಡ ಇದ್ದಾರೆ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ – Kannada News

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬಲ್ಲ ಅವರ ಕನಸಿನ ‘ಟನಲ್ ರೋಡ್’ (ಸುರಂಗ ರಸ್ತೆ) ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆಯೇ ಎಂಬ ಭಾರಿ ಕುತೂಹಲ ಮೂಡಿದೆ. ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಉಸ್ತುವಾರಿ ಸಚಿವರಾಗಿದ್ದಾಗಿನಿಂದಲೂ ಡಿಕೆ ಶಿವಕುಮಾರ್ ಅವರು ಈ ಬೃಹತ್ ಯೋಜನೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸಾರ್ವಜನಿಕ ವಲಯದ ತೀವ್ರ ವಿರೋಧ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಬ್ರೇಕ್ ಬಿದ್ದಿದ್ದ ಈ ಮಹತ್ವಾಕಾಂಕ್ಷಿ ಯೋಜನೆಗೆ, ಈಗ ಅವರೇ ಮುಖ್ಯಮಂತ್ರಿಯಾಗುತ್ತಿರುವುದರಿಂದ ಹೊಸ ವೇಗ ಸಿಗುವ ಭರವಸೆ ಮೂಡಿದೆ.

ಮುಖ್ಯಾಂಶಗಳು

  • ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸುಮಾರು 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆ.
  • ಸರ್ಕಾರದ ಅಂದಾಜು ವೆಚ್ಚಕ್ಕಿಂತ ₹4,569 ಕೋಟಿ ಹೆಚ್ಚುವರಿ ಮೊತ್ತಕ್ಕೆ ಬಿಡ್ ಮಾಡಿದ್ದ ಅದಾನಿ ಗ್ರೂಪ್.
  • ಈ ಎರಡು ಕಾರಣಕ್ಕೆ ನೆನೆಗುದಿಗೆ ಬಿದ್ದಿದ್ದ ಯೋಜನೆ.

ಅದಾನಿ ಗ್ರೂಪ್ ಬಿಡ್ ಮತ್ತು ಬಜೆಟ್ ಲೆಕ್ಕಾಚಾರ

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 16.75 ಕಿಲೋಮೀಟರ್ ಉದ್ದದ ಈ ಸುರಂಗ ರಸ್ತೆ ಯೋಜನೆಗೆ ಮೊದಲ ಬಾರಿ ಟೆಂಡರ್ ಕರೆದಾಗ ಕಠಿಣ ಷರತ್ತುಗಳ ಕಾರಣಕ್ಕೆ ಯಾವುದೇ ಕಂಪನಿಗಳು ಮುಂದೆ ಬಂದಿರಲಿಲ್ಲ. ತದನಂತರ ಷರತ್ತುಗಳನ್ನು ಸಡಿಲಗೊಳಿಸಿ ಎರಡನೇ ಬಾರಿ ಮರು ಟೆಂಡರ್ ಕರೆದಾಗ ಅದಾನಿ ಗ್ರೂಪ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಆದರೆ, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಅದಾನಿ ಗ್ರೂಪ್ ಸಲ್ಲಿಸಿದ ಬಿಡ್ ಮೊತ್ತ ಭಾರಿ ಹೆಚ್ಚಾಗಿತ್ತು.

  • ಯೋಜನೆಯ ಒಟ್ಟು ಉದ್ದ: 16.75 ಕಿಲೋಮೀಟರ್ (ಹೆಬ್ಬಾಳ ಟು ಸಿಲ್ಕ್ ಬೋರ್ಡ್)
  • ಸರ್ಕಾರದ ಅಂದಾಜು ವೆಚ್ಚ: 17,698 ಕೋಟಿ ರೂ.
  • ಅದಾನಿ ಗ್ರೂಪ್ ಸಲ್ಲಿಸಿದ ಬಿಡ್: 22,267 ಕೋಟಿ ರೂ.
  • ಹೆಚ್ಚುವರಿ ವೆಚ್ಚದ: 4,569 ಕೋಟಿ ರೂ.

ಸಚಿವ ಸಂಪುಟದ ಒಪ್ಪಿಗೆ ಸಿಗುತ್ತಾ? ಅಥವಾ ಮರು ಟೆಂಡರ್?

ಸರ್ಕಾರದ ನಿಗದಿಪಡಿಸಿದ್ದಕ್ಕಿಂತ ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತದ ಬಿಡ್ ಆಗಿದ್ದರಿಂದ, ಈ ಯೋಜನೆಗೆ ಕಳೆದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ಅನುಮತಿ ಸಿಕ್ಕಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇದುವರೆಗೆ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಇದರ ನಡುವೆ, ಕೆಲವು ನಾಗರಿಕ ಸಂಘಟನೆಗಳು ಹಾಗೂ ತಜ್ಞರು ಇಷ್ಟು ದೊಡ್ಡ ಮೊತ್ತವನ್ನು ಸುರಂಗ ರಸ್ತೆಗೆ ವ್ಯಯಿಸುವ ಬದಲು ಮೆಟ್ರೋ, ಸಬ್ ಅರ್ಬನ್ ರೈಲು ಮುಂತಾದ ಸಾರ್ವಜನಿಕ ಸಾರಿಗೆಗಳ ಅಭಿವೃದ್ಧಿಗೆ ಬಳಸುವಂತೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: ಲಾಲ್ ಬಾಗ್ ಮಾತ್ರವಲ್ಲ, ಸ್ಯಾಂಕಿ ಟ್ಯಾಂಕ್ ಕೆರೆಗೂ ಸುರಂಗ ರಸ್ತೆಯಿಂದ ಹಾನಿ ಎಂದ ತಜ್ಞರು

ಆದರೆ, ಈ ಸುರಂಗ ಮಾರ್ಗವೊಂದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಎಂಬುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿದೆ. ಈಗ ಅವರೇ ಮುಖ್ಯಮಂತ್ರಿಯಾಗಿ ಸಚಿವ ಸಂಪುಟದ ನೇತೃತ್ವ ವಹಿಸಲಿರುವುದರಿಂದ, ಈ ಯೋಜನೆಗೆ ನೇರ ಒಪ್ಪಿಗೆ ಸಿಗಲಿದೆಯೇ ಅಥವಾ ಸರ್ಕಾರ ಹೊಸದಾಗಿ ಮರು ಟೆಂಡರ್ ಪ್ರಕ್ರಿಯೆಗೆ ಮುಂದಾಗಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version